ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷರು ಕೊಳ್ಳೆಹೊಡೆದ ಹಣವೆಷ್ಟು? ಯಾವ್ಯಾವ ರೀತಿಯಲ್ಲಿ ಮಾಡಿದ್ದರು ಲೂಟಿ?

|
Google Oneindia Kannada News

ಬ್ರಿಟಿಷರು ಭಾರತಕ್ಕೆ ಅಧಿಕಾರ ಮರಳಿಸಿ 75 ವರ್ಷಗಳಾಗಿವೆ. ಹೆಚ್ಚೂಕಡಿಮೆ ಇನ್ನೂರು ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರು ನಮ್ಮ ದೇಶದ ಹಣೆಬರಹ, ಭವಿಷ್ಯವನ್ನೇ ಬದಲಿ ಹೊರಟುಹೋದರು.

ಬ್ರಿಟಿಷರು ಮತ್ತವರ ಆಡಳಿತದ ಬಗ್ಗೆ ಬಹಳ ವೈರುದ್ಧ್ಯ ಅಭಿಪ್ರಾಯಗಳಿವೆ. ಬ್ರಿಟಿಷರ ಆಗಮನದಿಂದ ಭಾರತದ ನೆಲ ಪಾವನವಾಯಿತು ಎನ್ನುವವರು ಈಗಲೂ ಇದ್ದಾರೆ. ನಾಗರಿಕತೆಯೇ ಗಂಧವೇ ಇಲ್ಲದ ನಾಡಾಗಿದ್ದ ಭಾರತಕ್ಕೆ ಬ್ರಿಟಿಷರು ಆಧುನಿಕ ಮನೋಭಾವ ಬೆಳೆಸಿದರು, ನಾಗರಿಕತೆಯ ಪರಿಚಯ ಮಾಡಿದರು. ತೊಂಬತ್ತು ಪಾಲು ಬಡತನವೇ ಹೊದ್ದಿದ್ದ ದೇಶಕ್ಕೆ ಆರ್ಥಿಕ ಪುಷ್ಟಿ ನೀಡಿದರು ಎಂದು ಕೆಲವರು ವಾದಿಸುತ್ತಾರೆ.

ಸ್ವಾತಂತ್ರ್ಯ ಪಡೆದ ದಿನವೇ ನೆಟ್ಟಿದ್ದ ಅಶ್ವತ್ಥ ವೃಕ್ಷ : ವಿಶ್ರಾಂತಿ ತಾಣವಾಗಿದೆ ಹೆಮ್ಮರ!ಸ್ವಾತಂತ್ರ್ಯ ಪಡೆದ ದಿನವೇ ನೆಟ್ಟಿದ್ದ ಅಶ್ವತ್ಥ ವೃಕ್ಷ : ವಿಶ್ರಾಂತಿ ತಾಣವಾಗಿದೆ ಹೆಮ್ಮರ!

ಆದರೆ, ವಾಸ್ತವ ಏನು? ಬ್ರಿಟಿಷರು ಬರುವ ಮುನ್ನ ಭಾರತ ಹೇಗಿತ್ತು ಎಂಬುದಕ್ಕೂ ವಿಭಿನ್ನ ಅಭಿಪ್ರಾಯಗಳಿವೆ. ಆದರೆ, ಬ್ರಿಟಿಷರು ಹೇಳಿಕೊಂಡಷ್ಟರ ಮಟ್ಟದಲ್ಲಿ ಭಾರತದಲ್ಲಿ ಬಡತನ, ಅನಾಗರಿಕತೆ ಇತ್ತಾ ಎಂಬುದು ಪ್ರಶ್ನೆ.

ನಾಲ್ಕು ವರ್ಷಗಳ ಹಿಂದೆ ಭಾರತದ ಅರ್ಥಶಾಸ್ತ್ರಜ್ಞೆ ಉತ್ಸಾ ಪಟ್ಟನಾಯಕ್ ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌ನಲ್ಲಿ ಒಂದು ಸಂಶೋಧನಾ ಲೇಖನ ಬರೆದಿದ್ದರು. ಅದರಲ್ಲಿ ಅವರು ಬ್ರಿಟಿಷರು ಭಾರತದಲ್ಲಿ ಹೇಗೆಲ್ಲಾ ಕೊಳ್ಳೆಹೊಡೆದರು, ಎಷ್ಟೆಲ್ಲಾ ಲೂಟಿ ಮಾಡಿದರು ಎಂಬಿತ್ಯಾದಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಬ್ರಿಟಿಷರು ಹೇಳುವುದೇನು?

ಬ್ರಿಟಿಷರು ಹೇಳುವುದೇನು?

ಎರಡು ಶತಮಾನಗಳ ಕಾಲ ಭಾರತದಲ್ಲಿ ಆಳ್ವಿಕೆ ನಡೆಸಿದ ಬ್ರಿಟಿಷರು ತಾವು ಭಾರತವನ್ನು ಉದ್ಧಾರ ಮಾಡಲೆಂದೇ ಕೈಂಕರ್ಯ ತೊಟ್ಟವರೆಂದು ಈಗಲೂ ಭಾವಿಸಿದ್ದಾರೆ. ಭಾರತವನ್ನು ಉದ್ದಾರ ಮಾಡಲು ಹೋಗಿ ಬ್ರಿಟನ್ ಭಾರೀ ನಷ್ಟ ಮಾಡಿಕೊಂಡಿತು ಎಂದು ನಂಬಿಸುವ ಕೆಲಸ ಮಾಡುತ್ತಿದ್ದಾರೆ. 2014ರಲ್ಲಿ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಬ್ರಿಟನ್ ದೇಶದ ಅರ್ಧಕ್ಕೂ ಹೆಚ್ಚು ಜನರು ಇದೇ ಭಾವನೆ ಹೊಂದಿದ್ದಾರೆ.

ನಿಯಾಲ್ ಫರ್ಗೂಸನ್ ಬರೆದ "ವೈಟ್ ಮ್ಯಾನ್ಸ್ ಬರ್ಡನ್" ಎಂಬ ಪುಸ್ತಕದಲ್ಲಿ ಈ ವಿಚಾರಗಳಿವೆ. ಅನಾಗರಿಕ ಸಮಾಜಗಳಿಗೆ ನಾಗರಿಕತೆಯ ಪರಿಚಯ ಮಾಡಿಸಲು ಬ್ರಿಟಿಷರು ವಸಾಹತು ನಿರ್ಮಿಸಿದರು ಎನ್ನುವಂಥ ಸಂದೇಶವನ್ನು ಈ ಪುಸ್ತಕ ನೀಡುತ್ತದೆ. ಭಾರತದಲ್ಲಿ ವಸಾಹತು ನಿರ್ಮಿಸಿದ್ದು ಬ್ರಿಟನ್‌ಗೆ ತೀರಾ ದುಬಾರಿ ಆಯಿತು. ಭಾರತದಲ್ಲಿ ಬ್ರಿಟಿನ್ ಬಹಳ ದೊಡ್ಡಮಟ್ಟಕ್ಕೆ ಹೂಡಿಕೆ ಮಾಡಬೇಕಾಯಿತು ಎಂದು ಹೇಳಲಾಗುತ್ತದೆ. ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಮೊದಲಾದವರು ಕೂಡ ಈ ಅನಿಸಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆದರೆ, ಬ್ರಿಟಿಷರು ಹೇಳಿಕೊಳ್ಳುವಂತೆ ಭಾರತ 18ನೇ ಶತಮಾನಕ್ಕಿಂತ ಮುಂಚೆ ಅನಾಗರಿಕ ಸಮಾಜವಾಗಿತ್ತೇ? ಬಡದೇಶವಾಗಿತ್ತೇ? ಕೃಷ್ಣದೇವರಾಯನ ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಬೀದಿಯಲ್ಲಿ ಮಾರಾಟ ಮಾಡುತ್ತಿದ್ದ ವಿಚಾರ ಎಲ್ಲವೂ ಸುಳ್ಳೇ? ಭಾರತದಲ್ಲಿ ಅದ್ಭುತ ವಾಸ್ತುಶಿಲ್ಪ ತಂತ್ರಜ್ಞಾನ ಎನಿಸಿದ ಅನೇಕ ದೇವಸ್ಥಾನಗಳನ್ನು ಏಲಿಯನ್‌ಗಳು ನಿರ್ಮಿಸಿದ್ದೇ? ಬಹಳ ಗೊಂದಲವಾಗಬಹುದು. ವಾಸ್ತವದಲ್ಲಿ ಬ್ರಿಟಿಷರು ಚೆನ್ನಾಗಿ ಲೂಟಿ ಮಾಡಿಯೇ ಭಾರತವನ್ನು ಬಿಟ್ಟು ಹೋದರು ಎಂದೆನ್ನುತ್ತಾರೆ ಉತ್ಸಾ ಪಟ್ನಾಯಕ್.

ತ್ರಿವರ್ಣ ಧ್ವಜ ಹಾರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಜೈಲು ಶಿಕ್ಷೆ ಇದೆತ್ರಿವರ್ಣ ಧ್ವಜ ಹಾರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಜೈಲು ಶಿಕ್ಷೆ ಇದೆ

ಬ್ರಿಟಿಷರು ಲೂಟಿ ಮಾಡಿದ್ದೆಷ್ಟು?

ಬ್ರಿಟಿಷರು ಲೂಟಿ ಮಾಡಿದ್ದೆಷ್ಟು?

ಬ್ರಿಟಿಷರು 1765ರಿಂದ 1938ರವರೆಗಿನ ಅವಧಿಯಲ್ಲಿ ಕೊಳ್ಳೆ ಹೊಡೆದ ಹಣ ಸುಮಾರು 45 ಟ್ರಿಲಿಯನ್ ಡಾಲರ್, ಅಥವಾ ಸುಮಾರು 3500 ಲಕ್ಷ ಕೋಟಿ ರೂಪಾಯಿ. ಈ ಅವಧಿಯಲ್ಲಿ ಭಾರತದಲ್ಲಿ ದಾಖಲಾದ ವ್ಯಾಪಾರ ಮತ್ತು ತೆರಿಗೆಯ ಮಾಹಿತಿ ಆಧರಿಸಿ ಈ ಹಣವನ್ನು ಲೆಕ್ಕ ಹಾಕಿದ್ದಾರೆ ಉತ್ಸಾ ಪಟ್ನಾಯಕ್.

45 ಟ್ರಿಲಿಯನ್ ಡಾಲರ್ ಎಂದರೆ ಸಾಮಾನ್ಯವಲ್ಲ. ನಮ್ಮ ಈಗಿನ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳ ಜಿಡಿಪಿಯನ್ನು ಒಟ್ಟುಸೇರಿಸಿದರೂ 17 ಪಟ್ಟು ಹೆಚ್ಚು ಆಗುತ್ತದೆ.

ಕಾಂಗ್ರೆಸ್ ಮುಖಂಡ ಶಶಿ ತರೂರ್ ತಮ್ಮ "ಇನ್‌ಗ್ಲೋರಿಯಸ್ ಎಂಪೈರ್" ಪುಸ್ತಕದಲ್ಲಿ ಬ್ರಿಟಿಷರು ಹೇಗೆಲ್ಲಾ ಲೂಟಿ ಮಾಡಿದರೂ ಎಂಬುದನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅನ್ನು ಬಹಳ ದೊಡ್ಡ ಸ್ತರದಲ್ಲಿ ಕಾಣಲಾಗುತ್ತದೆ. ಆದರೆ, ಶಶಿ ತರೂರ್ ಚರ್ಚಿಲ್‌ರನ್ನು ಕಟುವಾಗಿ ಟೀಕಿಸಿದ್ದಾರೆ.

ಬ್ರಿಟಿಷರು ಲೂಟಿ ಮಾಡಿದ್ದೆನ್ನಲಾದ 45 ಟ್ರಿಲಿಯನ್ ಡಾಲರ್ ಎಂಬುದು ಕೇವಲ ತೆರಿಗೆ ಹಣದ ಲೆಕ್ಕಾಚಾರ. ಆದರೆ, ಬ್ರಿಟಿಷರಿಂದ ಆದ ಇತರ ದುರ್ಬಳಕೆ, ಕ್ರೌರ್ಯ, ಮಾನಸಿಕ ಯಾತನೆ ಇತ್ಯಾದಿ ಅಂಶಗಳು ಭಾರತದ ಮಾನಸಿಕತೆಯ ಮೇಲೆ ಉಂಟು ಮಾಡಿದ ಪರಿಣಾಮಗಳನ್ನು ಹೇಗೆ ಲೆಕ್ಕ ಹಾಕುವುದು?

ಬ್ರಿಟಿಷರ ಆರಂಭಿಕ ಕಾಲ

ಬ್ರಿಟಿಷರ ಆರಂಭಿಕ ಕಾಲ

ಬ್ರಿಟಿಷರು ನೇರವಾಗಿ ಭಾರತವನ್ನು ಆಕ್ರಮಣ ಮಾಡಿದ್ದಲ್ಲ. ವ್ಯಾಪಾರಿಗಳಾಗಿ ಬಂದು ಇಲ್ಲಿ ಪ್ರಭುತ್ವ ಸ್ಥಾಪಿಸಿದರು ಎಂಬುದು ಇತಿಹಾಸದ ವಿದ್ಯಾರ್ಥಿಗಳಿಗೆ ಗೊತ್ತಿರುವ ಸಂಗತಿ. 17ನೇ ಶತಮಾನದಲ್ಲಿ ಬ್ರಿಟನ್ ದೇಶದ ಈಸ್ಟ್ ಇಂಡಿಯಾ ಕಂಪನಿ ಎಂಬ ವ್ಯಾಪಾರಿ ಸಂಸ್ಥೆ ಭಾರತಕ್ಕೆ ಬಂದಿತು. 1608ರಲ್ಲಿ ಸೂರತ್‌ಗೆ ಈಸ್ಟ್ ಇಂಡಿಯಾ ಕಂಪನಿ ಆಗಮಿಸಿತು. ಸೂರತ್, ಬಾಂಬೆ, ಮದ್ರಾಸ್, ಮಚಲಿಪಟ್ಟಣಂ, ಕೋಲ್ಕತ್ತಾ ಮೊದಲಾದ ಕರಾವಳಿ ನಗರಗಳಲ್ಲಿ ಈಸ್ಟ್ ಇಂಡಿಯಾ ಕಂಪನಿ ಕಾರ್ಖಾನೆಗಳನ್ನು ಸ್ಥಾಪಿಸಿತು.

ಭಾರತದ ಉತ್ಪನ್ನಗಳನ್ನು ಖರೀದಿಸಿ ಅದನ್ನು ಐರೋಪ್ಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಕಾಯಕವನ್ನು ಈಸ್ಟ್ ಇಂಡಿಯಾ ಕಂಪನಿ ಮಾಡುತ್ತಿತ್ತು. ಆಗ ವಹಿವಾಟಿಗೆ ಬಳಕೆ ಮಾಡುತ್ತಿದ್ದುದು ಬೆಳ್ಳಿ ಮತ್ತು ಚಿನ್ನ. ಭಾರತೀಯರಿಂದ ಜವಳಿ ಮತ್ತು ಅಕ್ಕಿಯನ್ನು ಖರೀದಿಸುತ್ತಿದ್ದರು. ಬದಲಾಗಿ ಬೆಳ್ಳಿ ಮತ್ತು ಚಿನ್ನ ಕೊಡುತ್ತಿದ್ದರು. ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಕಾಲಿಟ್ಟ ಆರಂಭಿಕ ಹಂತದಲ್ಲಿ ನಡೆಯುತ್ತಿದ್ದ ವ್ಯವಹಾರ. ಇದರಿಂದ ಕಂಪನಿಗೂ ಅನುಕೂಲವಾಗಿತ್ತು, ಭಾರತೀಯರಿಗೂ ಅನುಕೂಲವಾಗಿತ್ತು.

ಲೂಟಿ ಆರಂಭ

ಲೂಟಿ ಆರಂಭ

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಆರಂಭದಲ್ಲಿ ಒಳ್ಳೆಯ ವ್ಯಾಪಾರ ಮಾಡಿಕೊಂಡಿದ್ದೇನೋ ಹೌದು. ಆದರೆ, ವಿವಿಧ ಪ್ರದೇಶಗಳಲ್ಲಿ ಅವರ ಹಿಡಿತ ಮತ್ತು ಪ್ರಾಬಲ್ಯ ಹೆಚ್ಚುತ್ತಾ ಹೋದಂತೆ ಅವರ ಬಣ್ಣ ಕಳಚತೊಡಗಿತು. ಹಂತ ಹಂತವಾಗಿ ವಿವಿಧ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿದರು. ಆಗ ತೆರಿಗೆ ಸಂಗ್ರಹವೆಲ್ಲಾ ಅವರ ನಿಯಂತ್ರಣಕ್ಕೆ ಬಂದಿತು.

ಭಾರತದಲ್ಲಿ ಸಂಗ್ರಹಿಸಿದ ತೆರಿಗೆ ಹಣವನ್ನು ಇಲ್ಲಿಯೇ ಹೂಡಿಕೆ ಮಾಡುವ ಗೋಜಿಗೆ ಬ್ರಿಟಿಷರು ಹೋಗಲಿಲ್ಲ. ಮೂರನೇ ಒಂದು ಭಾಗದಷ್ಟು ತೆರಿಗೆ ಹಣವನ್ನು ಭಾರತೀಯ ಉತ್ಪಾದಕರಿಂದ ಸರಕು ಕೊಂಡು ಅದನ್ನು ತಮ್ಮ ದೇಶಕ್ಕೆ ಕಳುಹಿಸುತ್ತಿದ್ದರು. ಇದು ಆಗ ಬ್ರಿಟಿಷರು ಕೈಗೊಂಡ ಮೊದಲ ದೊಡ್ಡ ದರೋಡೆ.

ಇನ್ನೂ ದಾರುಣವೆಂದರೆ, ಮೊದಮೊದಲು ಭಾರತೀಯರಿಂದ ಖರೀದಿಸಿದ ಉತ್ಪನ್ನಗಳಿಗೆ ಬದಲಾಗಿ ಚಿನ್ನ ಮತ್ತು ಬೆಳ್ಳಿಯನ್ನು ಕೊಡುತ್ತಿದ್ದ ಬ್ರಿಟಿಷರು ಹೋಗಹೋಗುತ್ತಾ ಅದನ್ನು ನಿಲ್ಲಿಸಿದರು. ಭಾರತೀಯ ಸಂಸ್ಥೆಗಳಿಂದ ಬರುತ್ತಿದ್ದ ಆದಾಯವನ್ನೇ ಬಳಸಿ ಭಾರತೀಯ ಉತ್ಪನ್ನಗಳನ್ನು ಖರೀದಿಸಲು ತೊಡಗಿದರು. ಇದರಿಂದ ಈಸ್ಟ್ ಇಂಡಿಯಾ ಕಂಪನಿಗೆ ಶೇಕಡ ನೂರರಷ್ಟು ಆದಾಯ ಬರತೊಡಗಿತು.

ಬ್ರಿಟನ್ ಕೈಗಾರಿಕಾ ಕ್ರಾಂತಿಗೆ ಭಾರತದ ಹಣ

ಬ್ರಿಟನ್ ಕೈಗಾರಿಕಾ ಕ್ರಾಂತಿಗೆ ಭಾರತದ ಹಣ

18 ಮತ್ತು 19ನೇ ಶತಮಾನ ಬ್ರಿಟನ್‌ನಲ್ಲಿ ಕೈಗಾರಿಕಾ ಕ್ರಾಂತಿ ನಡೆದ ಕಾಲ. ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ಭಾರೀ ಆದಾಯ ಗಳಿಸುತ್ತಿದ್ದುದು ಕೈಗಾರಿಕಾ ಕ್ರಾಂತಿಗೆ ಪುಷ್ಟಿ ಸಿಕ್ಕಂತಾಗಿತ್ತು. ಭಾರತದಲ್ಲಿ ಹೇರಳವಾಗಿದ್ದ ಕಬ್ಬಿಣ ಮತ್ತು ಮರ ಇತ್ತಾದಿ ಕಚ್ಛಾ ವಸ್ತುಗಳನ್ನು ಉಚಿತವಾಗಿ ಖರೀದಿಸಿ ಬ್ರಿಟನ್ ದೇಶಕ್ಕೆ ಕಳುಹಿಸಲಾಗುತ್ತಿತ್ತು. ಇದು ಅಲ್ಲಿನ ಕೈಗಾರಿಕಾ ಕ್ರಾಂತಿಗೆ ಬಹಳ ಅನುಕೂಲವಾಗಿ ಪರಿಣಮಿಸಿತು.

ರಾಣಿಯ ಆಳ್ವಿಕೆ

ರಾಣಿಯ ಆಳ್ವಿಕೆ

1857ರ ಸಿಪಾಯಿ ದಂಗೆ ಆಗುವವರೆಗೂ ಭಾರತವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಆದರೆ, ಈ ಕಂಪನಿಯ ನಿಯಂತ್ರಣ ಬ್ರಿಟನ್ ಅರಸರದ್ದಾಗಿತ್ತು. 1858ರಲ್ಲಿ ಬ್ರಿಟನ್ ದೊರೆಯೇ ನೇರವಾಗಿ ಭಾರತದ ಆಳ್ವಿಕೆ ಮಾಡತೊಡಗಿದರು.

ಆಗ ಒಂದು ಬದಲಾವಣೆ ಆಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಬದಲಾಗಿ ಭಾರತೀಯ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ನೇರವಾಗಿ ರಫ್ತು ಮಾಡಲು ಅವಕಾಶ ಮಾಡಿಕೊಡಲಾಯಿತು. ಮೇಲ್ನೋಟಕ್ಕೆ ಇದು ಭಾರತೀಯ ಉದ್ಯಮಕ್ಕೆ ಪುಷ್ಟಿ ಕೊಡುವ ರೀತಿ ಕಾಣಿಸಿದರೂ ಅದರ ಮರ್ಮ ಬೇರೆಯೇ ಇತ್ತು.

ಇಲ್ಲಿ ಭಾರತೀಯ ಉತ್ಪಾದಕರ ಜೊತೆ ವ್ಯವಹಾರ ಮಾಡುತ್ತಿದ್ದ ಬ್ರಿಟಿಷ್ ವ್ಯಾಪಾರಿಗಳು ಚಿನ್ನ ಮತ್ತು ಬೆಳ್ಳಿಯ ಬದಲಾಗಿ 'ಸ್ಪೆಷಲ್ ಕೌನ್ಸಿಲ್ ಬಿಲ್' ಮೂಲಕ ಪಾವತಿ ಮಾಡುತ್ತಿದ್ದರು. ಬ್ರಿಟಿಷ್ ವ್ಯಾಪಾರಿಗಳಿಗೆ ಮಾರಾಟ ಮಾಡಿದ ಬಳಿಕ ಸಿಗುತ್ತಿದ್ದ ಕೌನ್ಸಿಲ್ ಬಿಲ್‌ಗಳನ್ನು ಭಾರತದಲ್ಲಿದ್ದ ಬ್ರಿಟಿಷ್ ಕಚೇರಿಗಳಲ್ಲಿ ನೀಡಿ ಹಣ ಪಡೆಯಬಹುದಾಗಿತ್ತು. ಆದರೆ, ಈ ಹಣ ಭಾರತದ ತೆರಿಗೆ ಹಣವೇ ಆಗಿತ್ತು.

ಬ್ರಿಟನ್ ದೇಶಕ್ಕೆ ಭಾರತದಿಂದ ಉಚಿತವಾಗಿ ಸರಕುಗಳು ಸಿಕ್ಕಂತಾಗುತ್ತಿತ್ತು. ಹಾಗು ತಮ್ಮ ದೇಶದ ಚಿನ್ನ ಸೇರಿದಂತೆ ಯಾವ ವಸ್ತುವೂ ಹೊರಹೋಗದೇ ಉಳಿತಾಯವಾದಂತಾಗಿತ್ತು. ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಬ್ರಿಟಿಷರು ಹೊಡೆದಿದ್ದರು.

ಬಡವಾದ ಭಾರತ

ಬಡವಾದ ಭಾರತ

ಬ್ರಿಟಿಷರು ಆಗಮಿಸುವ ಮುನ್ನ ಭಾರತ ಸಮೃದ್ಧವಾಗಿತ್ತು. ವಿಶ್ವ ಜಿಡಿಪಿಯಲ್ಲಿ ಭಾರತದ ಪಾಲು ಶೇ. 25 ಇತ್ತು ಎನ್ನುತ್ತಾರೆ. ಭಾರತದ ಜವಳಿ ಉತ್ಪನ್ನಗಳು ಬಹಳ ಜನಪ್ರಿಯವಾಗಿದ್ದವು. ಕೈಮಗ್ಗದಿಂದ ತಯಾರಿಸಲಾದ ಉತ್ಪನ್ನಗಳಿಗೆ ಬೇಡಿಕೆ ವಿಪರೀತ ಇತ್ತು. ಆದರೆ, ಬ್ರಿಟನ್ ದೇಶದ ಕೈಗಾರಿಕಾ ಕ್ರಾಂತಿ ಆದ ಬಳಿಕ ಯಂತ್ರಗಳಿಂದ ಬಟ್ಟೆ ನೇಯ್ಗೆ ಆಗತೊಡಗಿತು. ಬಹಳ ಕಡಿಮೆ ದರದಲ್ಲಿ ಜವಳಿ ಉತ್ಪನ್ನಗಳು ತಯಾರಾಗತೊಡಗಿದವು. ಇದು ಭಾರತೀಯ ಸಾಂಪ್ರದಾಯಿಕ ಕೈಮಗ್ಗದ ಉತ್ಪನ್ನಗಳಿಗೆ ಹೊಡೆತ ಕೊಟ್ಟಂತಾಗಿತ್ತು.

ಗಾಯದ ಮೇಲೆ ಬರೆ ಎಳೆದಂತೆ ಬ್ರಿಟನ್ ಸರಕಾರ ಭಾರತೀಯ ಜವಳಿ ಉತ್ಪನ್ನಗಳ ಆಮದು ಮೇಲೆ ಹೆಚ್ಚು ತೆರಿಗೆ ಹೇರತೊಡಗಿತು. ಹೀಗಾಗಿ, ಬ್ರಿಟನ್‌ನಲ್ಲಿದ್ದ ವ್ಯಾಪಾರಿಗಳು ಭಾರತದಿಂದ ಆಮದು ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿರಲಿಲ್ಲ. ಇದು ಭಾರತದ ಉದ್ಯಮವನ್ನು ಹಳ್ಳಕ್ಕೆ ದೂಡಿದಂತಾಗಿತ್ತು.

ತೆವಲುಗಳಿಗೆಲ್ಲಾ ಭಾರತೀಯರ ಹಣ

ತೆವಲುಗಳಿಗೆಲ್ಲಾ ಭಾರತೀಯರ ಹಣ

ಭಾರತದಲ್ಲಿ ಆಳ್ವಿಕೆ ಮಾಡಲು ಆರಂಭಿಸಿದ ಬಳಿಕ ಬ್ರಿಟಿಷರು ನಡೆಸಿದ ಯಾವುದೇ ಯುದ್ದದ ಖರ್ಚಿಗೆ ಹಣವೆಲ್ಲಾ ಭಾರತದಿಂದಲೇ ಲೂಟಿ ಆಗಿದ್ದು. ಯೂರೋಪ್, ಕೆನಡಾ, ಆಸ್ಟ್ರೇಲಿಯಾ ಮೊದಲಾದ ಕಡೆ ಬ್ರಿಟಿಷರು ಮಾಡಿದ ವಿಸ್ತರಣಾ ಕಾರ್ಯಗಳಿಗೆ ಫಂಡಿಂಗ್ ಸಿಕ್ಕಿದ್ದು ಭಾರತದಿಂದಲೇ. ಬ್ರಿಟನ್ ದೇಶದಲ್ಲಿದ್ದ ಸೈನಿಕರ ಸಂಖ್ಯೆ ಬಹಳ ದೊಡ್ಡದು. ಬ್ರಿಟನ್‌ನ ಯುದ್ಧಗಳಲ್ಲಿ ಬಳಕೆಯಾಗಿದ್ದ ಭಾರತೀಯ ಸೈನಿಕರ ಪೈಕಿ 54 ಸಾವಿರ ಯೋಧರು ಬಲಿದಾನವಾಗಿದ್ದರು.

ಬ್ರಿಟಿಷರು ಆಳ್ವಿಕೆ ನಡೆಸಿದ್ದ 200 ವರ್ಷಗಳಲ್ಲಿ ಭಾರತದ ಆರ್ಥಿಕತೆ ನಿರಂತರವಾಗಿ ಕುಗ್ಗುತ್ತಾ ಹೋಗಿತ್ತು. 19ನೇ ಶತಮಾನದ ಅಂತ್ಯದ ವೇಳೆ ಭಾರತದ ರಾಷ್ಟ್ರೀಯ ಆದಾಯ ಅರ್ಧಕರ್ಧ ಕುಸಿದಿತ್ತು. 1870ರಿಂದ 1920ರವರೆಗೆ ಭಾರತೀಯರ ಸರಾಸರಿ ಜೀವಿತಾವಧಿ ಭಾರೀ ಕಡಿಮೆಗೊಂಡಿತ್ತು.

ಬ್ರಿಟಿಷರ ಇತರ ಅನೇಕ ನೀತಿಗಳ ಪರಿಣಾಮವಾಗಿ ಭಾರತದಲ್ಲಿ ಹಲವು ಬಾರಿ ಬರ, ಕ್ಷಾಮ ಪರಿಸ್ಥಿತಿ ತಲೆದೋರಿತ್ತು. 1943ರ ಬಂಗಾಳ ಕ್ಷಾಮಕ್ಕೆ ಹೆಚ್ಚೂಕಡಿಮೆ 30 ಲಕ್ಷ ಭಾರತೀಯರು ಅಸುನೀಗಿದ್ದರು.

ಇದೆಲ್ಲದರ ಜೊತೆಗೆ ಬ್ರಿಟಿಷರು ತಂದ ಶಿಕ್ಷಣ ವ್ಯವಸ್ಥೆ ಇತ್ಯಾದಿ ಕ್ರಮಗಳು ಭಾರತೀಯರಿಗೆ ಹೊಸ ರೀತಿಯ ಗುಲಾಮಗಿರಿ ಮಾನಸಿಕತೆಯನ್ನು ತಂದಿತು ಎಂದು ಕೆಲವರು ಆರೋಪಿಸುತ್ತಾರೆ.

ಅದೇನೇ ಇರಲಿ, ಒಂದು ವೇಳೆ ಉತ್ಸಾ ಪಟ್ನಾಯಕ್ ಹೇಳಿದಂತೆ ಬ್ರಿಟಿಷರು ಭಾರತೀಯರಿಂದ ಲೂಟಿ ಮಾಡಿದ ಹಣವೆಲ್ಲವೂ ಭಾರತದ ಅಭಿವೃದ್ಧಿಗೇ ವಿನಿಯೋಗವಾಗಿದ್ದರೆ ಇಷ್ಟರಲ್ಲಿ ಭಾರತ ಸಮೃದ್ಧ ಆರ್ಥಿಕತೆಯ ದೇಶವಾಗಿರುತ್ತಿತ್ತು ಎಂಬುದು ನಿಜ.

(ಒನ್ಇಂಡಿಯಾ ಸುದ್ದಿ)

English summary
Most of the People in Britain are believing their country suffered heavy loss colonizing India. But, in contrary they are said to have looted 45 trillion USD from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X