ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ ಖೈದಾ ಮುಖ್ಯಸ್ಥನ ಬಾಲ್ಕನಿಯಲ್ಲಿ ನಿಲ್ಲುವ ಚಟವೇ ಸಾವಿಗೆ ಕಾರಣವಾಯಿತು!

|
Google Oneindia Kannada News

2001ರ ಸೆಪ್ಟೆಂಬರ್ 11ರಂದು ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಅಲ್ ಖೈದಾ ವಿಮಾನ ದಾಳಿ ನಡೆಸಿ ಸಾವಿರಾರು ಮಂದಿ ಸಾವಿಗೆ ಕಾರಣವಾದ ಘಟನೆ ಮನುಕುಲದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ಘಟನೆಗಳಲ್ಲಿ ಒಂದು. ಈ ದಾಳಿಯ ಸೂತ್ರಧಾರ ಒಸಾಮ ಬಿಲ್ ಲಾಡೆನ್ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಲಾಡನ್ ಜೊತೆಗೆ ಇನ್ನೂ ಒಬ್ಬ ಸೂತ್ರಧಾರನಿದ್ದ. ಆತನೇ ಅಯಮಾನ್ ಅಲ್ ಜವಾಹಿರಿ.

ಅಮೆರಿಕ ಈಗ ಈತನನ್ನೂ ಹತ್ಯೆ ಮಾಡಿದೆ. ಕಾಬೂಲ್‌ನಲ್ಲಿ ಅಡಗಿದ್ದ ಅಲ್ ಜವಾಹಿರಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಯಾಗಿದ್ದಾನೆ. 71 ವರ್ಷದ ಅಲ್ ಜವಾಹಿರಿ ಅಲ್ ಖೈದಾದ ಮುಖ್ಯಸ್ಥನಾಗಿ ಅಮೆರಿಕಕ್ಕೆ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಎನಿಸಿದ್ದ.

ಅಮೆರಿಕದ ಡ್ರೋನ್ ದಾಳಿ; ಅಲ್-ಖೈದಾ ಮುಖ್ಯಸ್ಥ ಜವಾಹಿರಿ ಸಾವುಅಮೆರಿಕದ ಡ್ರೋನ್ ದಾಳಿ; ಅಲ್-ಖೈದಾ ಮುಖ್ಯಸ್ಥ ಜವಾಹಿರಿ ಸಾವು

2011ರಲ್ಲಿ ಒಸಾಮ ಬಿನ್ ಲಾಡೆನ್ ಪಾಕಿಸ್ತಾನದ ಅಬೊಟ್ಟಾಬಾದ್‌ನಲ್ಲಿ ಹತ್ಯೆಯಾದರೆ, ಹನ್ನೊಂದು ವರ್ಷಗಳ ಬಳಿಕ ಜವಾಹಿರಿ ಕೊಲೆಯಾಗಿದ್ದಾನೆ. ಇಬ್ಬರನ್ನೂ ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿ ಕೊನೆಗಾಣಿಸಲಾಗಿದೆ.

ವೈದ್ಯನಾಗಿದ್ದ ಈಜಿಪ್ಟ್ ದೇಶದ ಅಯ್ಮನ್ ಅಲ್ ಜವಾಹಿರಿ ಇಸ್ಲಾಂ ಮೂಲಭೂತವಾದ ಅಪ್ಪಿ ಅಲ್ ಖೈದಾ ಸೇರಿದ್ದು, ಈತ ನಡೆಸಿದ ವಿದ್ವಂಸಕ ಕೃತ್ಯಗಳೇನು ಇತ್ಯಾದಿ ಕೆಲ ವಿವರಗಳು ಇಲ್ಲಿವೆ. ಹಾಗೆಯೇ, ಅಲ್ ಜವಾಹಿರಿಯನ್ನು ಅಮೆರಿಕದ ಡ್ರೋನ್ ಹೇಗೆ ಕೊಂದಿತು? ಎಂಬ ರೋಚಕ ಬಣ್ಣನೆ ಇರುವ ವರದಿಗಳೂ ಇವೆ. ಅದರ ವಿವರವೂ ಇಲ್ಲಿದೆ.

ಅಲ್ ಜವಾಹಿರಿ ಯಾರು?

ಅಲ್ ಜವಾಹಿರಿ ಯಾರು?

ಈಜಿಪ್ಟ್ ದೇಶದ ಅಲ್ ಜವಾಹಿರಿ ಹುಟ್ಟಿದ್ದು 1951 ಜೂನ್ 19ರಂದು ಕೈರೋ ನಗರದಲ್ಲಿ. ಇವರದ್ದು ಸಿರಿವಂತರ ಕುಟುಂಬ. ಚಿಕ್ಕಂದಿನಿಂದಲೂ ಧರ್ಮದ ಕಡೆ ಒಲವು. ಆದರೆ, ಬೆಳೆಯುತ್ತಾ ಹೋದಂತೆ ಸುನ್ನಿ ಪಂಥದ ಉಗ್ರವಾದಕ್ಕೆ ಶರಣಾದರು. ವೈದ್ಯರಾಗಿದ್ದ ಅಲ್ ಜವಾಹಿರಿ ಈಜಿಪ್ಟ್ ಹಾಗೂ ಇತರ ಅರಬ್ ದೇಶಗಳಲ್ಲಿ ಕಟ್ಟರ್ ಇಸ್ಲಾಮಿಕ್ ಆಡಳಿತ ತರಬೇಕೆಂಬ ದೊಡ್ಡ ಹೋರಾಟದಲ್ಲಿ ಧುಮುಕಿದರು. ಮಧ್ಯ ಏಷ್ಯಾ, ಮಿಡಲ್ ಈಸ್ಟ್ ಇತ್ಯಾದಿ ಕಡೆ ಅಲೆದಾಡಿದರು. ಎಂಬತ್ತರ ದಶಕದಲ್ಲಿ ಸೋವಿತ್ ರಷ್ಯಾ ವಿರುದ್ಧ ಒಸಾಮ ಬಿನ್ ಲಾಡನ್ ಹಾಗು ಇತರ ಉಗ್ರರು ಹೋರಾಟ ನಡೆಸಿ ಹಿಮ್ಮೆಟ್ಟಿಸಿದ್ದನ್ನು ಅಲ್ ಜವಾಹಿರಿ ಕಣ್ಣಾರೆ ಕಂಡಿದ್ದರು.

ಅದಾಗಲೇ ಈಜಿಪ್ಟ್‌ನಲ್ಲಿ ತನ್ನದೇ ಉಗ್ರ ಸಂಘಟನೆ ಕಟ್ಟಿಕೊಂಡಿದ್ದ ಅಲ್ ಜವಾಹಿರಿ ಒಸಾಮ ಬಿನ್ ಲಾಡನ್ ನಾಯಕತ್ವದಿಂದ ಪ್ರಭಾವಿತನಾಗಿ ಅಲ್ ಖೈದಾವನ್ನು ಅಪ್ಪಿದ್ದರು. ಈಜಿಪ್ಟ್‌ನ ಗುಪ್ತಚರರ ಕಣ್ತಪ್ಪಿಸಿ ತನ್ನ ದೇಶದಲ್ಲಿ ಅಲ್ ಖೈದಾ ಪ್ರಬಲವಾಗಿ ಬೇರೂರುವಂತೆ ಮಾಡಿದರು.

ಅಮೆರಿಕ ಮೇಲೆ 9/11 ದಾಳಿ

ಅಮೆರಿಕ ಮೇಲೆ 9/11 ದಾಳಿ

2001, ಸೆಪ್ಟೆಂಬರ್ 9ರಂದು ಅಮೆರಿಕದ ಎರಡು ಕಟ್ಟಡಗಳು ವಿಮಾನ ದಾಳಿಯಿಂದ ಸಂಪೂರ್ಣ ನೆಲಸಮಗೊಂಡವು. ಆ ಘಟನೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು. ಇದು ಅಮೆರಿಕ ವಿರುದ್ಧ ಉಗ್ರಗಾಮಿಗಳು ನಡೆಸಿದ ಬಹಿರಂಗ ದಾಳಿ ಎಂದೇ ಬಿಂಬಿತವಾಯಿತು. ಯಾರು ಕೂಡ ಅಮೆರಿಕ ವಿರುದ್ಧ ನೇರ ದಾಳಿ ಮಾಡುವ ಸಾಹಸಕ್ಕೆ ಕೈಹಾಕಿರಲಿಲ್ಲ.

ಅಲ್ ಖೈದಾ ಸಂಘಟನೆ ಈ ದಾಳಿ ಸಂಯೋಜಿಸಿದ್ದು. ಒಸಾಮ ಬಿನ್ ಲಾಡನ್ ಜೊತೆ ಅಲ್ ಜವಾಹಿರಿ ಸೇರಿ ಈ ದಾಳಿಗೆ ವ್ಯವಸ್ಥೆ ಮಾಡಿದ್ದರು. ಆಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವೇ ಇದ್ದದ್ದು. ಅಲ್ ಖೈದಾ ನೆಲೆ ನಿಂತಿದ್ದು ಇದೇ ಅಫ್ಘಾನ್ ನಾಡಿನಲ್ಲಿ. ಈ ಘಟನೆ ಬಳಿಕ ಅಮೆರಿಕ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ತಾಲಿಬಾನ್ ಆಡಳಿತವನ್ನು ಕಿತ್ತೊಗೆಯಿತು. ತಾಲಿಬಾನ್ ಸೇರಿದಂತೆ ಯಾವ ಉಗ್ರ ಸಂಘಟನೆ ಹೆಚ್ಚು ತಲೆ ಎತ್ತದಂತೆ ಅಮೆರಿಕ ಸರ್ಪಗಾವಲು ಹಾಕಿತ್ತು.

ಅಫ್ಘಾನಿಸ್ತಾನ ಮತ್ತೆ ಉಗ್ರ ನೆಲೆ?

ಅಫ್ಘಾನಿಸ್ತಾನ ಮತ್ತೆ ಉಗ್ರ ನೆಲೆ?

20 ವರ್ಷಗಳವರೆಗೂ ಅಫ್ಘಾನಿಸ್ತಾನವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಅಮೆರಿಕ 2020ರಲ್ಲಿ ಕಾಲ್ತೆಗೆಯಿತು. ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಿದ್ದು ಮತ್ತೊಮ್ಮೆ ಅಲ್ಲಿ ಉಗ್ರ ನೆಲೆ ಸ್ಥಾಪನೆಯಾಗುತ್ತಿರುವ ಸಂದೇಹ ಇದೆ. ಅದಕ್ಕೆ ಪೂರಕವೆಂಬಂತೆ ಇದೀಗ ಅಲ್ ಜವಾಹಿರಿಯನ್ನು ಕಾಬೂಲ್‌ನಲ್ಲಿ ಅಮೆರಿಕ ಹೊಡೆದುರುಳಿಸಿದೆ.

ಅಲ್ ಜವಾಹಿರಿ 2001ರಿಂದಲೂ ಅಮೆರಿಕದ ಗುಪ್ತಚರರ ಕಣ್ತಪ್ಪಿಸಿಕೊಂಡು ತಿರುಗುತ್ತಿದ್ದರು. ಆದರೂ ಕೂಡ ಅಲ್ ಖೈದಾ ಸಂಘಟನೆಯನ್ನು ಬೆಳೆಸುವ ಕಾರ್ಯ ಮಾತ್ರ ನಿಲ್ಲಿಸಲಿಲ್ಲ. ಬಾಲಿ, ಮೊಂಬಾಸ, ರಿಯಾಧ್, ಜಕಾರ್ತ, ಇಸ್ತಾನ್ಬುಲ್, ಮ್ಯಾಡ್ರಿಡ್, ಲಂಡನ್ ಇತ್ಯಾದಿ ಕಡೆ ಉಗ್ರ ದಾಳಿಗಳನ್ನು ಸಂಘಟಿಸಿದ. 2005ರಲ್ಲಿ ಲಂಡನ್‌ನಲ್ಲಿ 52 ಜನರನ್ನು ಬಲಿತೆಗೆದುಕೊಂಡ ದಾಳಿ ನೆನಪಿರಬಹುದು.

2011ರಲ್ಲಿ ಲಾಡನ್ ಹತ್ಯೆ ಬಳಿಕ ಅಲ್ ಜವಾಹಿರಿ ಹಾಗು ಅಲ್ ಖೈದಾ ಬಹುತೇಕ ಮೌನಕ್ಕೆ ಸಿಲುಕಿತು. ಈಗ ತಾಲಿಬಾನ್ ಆಡಳಿತದಲ್ಲಿ ಅಲ್ ಖೈದಾ ಮತ್ತೆ ಚಿಗುರತೊಡಗಿತು ಎಂದು ಹೇಳಲಾಗುತ್ತಿದೆ.

ಬಾಲ್ಕನಿಯಲ್ಲಿ ನಿಲ್ಲುವ ಚಟ

ಬಾಲ್ಕನಿಯಲ್ಲಿ ನಿಲ್ಲುವ ಚಟ

ಅಲ್ ಜವಾಹಿರಿಯ ತಲೆಗೆ ಅಮೆರಿಕ 25 ಮಿಲಿಯನ್ ಡಾಲರ್ (ಸುಮಾರು 200 ಕೋಟಿ ರೂ) ಬಹುಮಾನ ಇಟ್ಟಿತ್ತು. ಅದರೆ ಎಲ್ಲಿಯೂ ಆತನ ಸುಳಿವು ಸಿಕ್ಕಲಿಲ್ಲ. ಹಲವು ತಿಂಗಳ ಹಿಂದೆ ಅಲ್ ಜವಾಹಿರಿ ತನ್ನ ಕುಟುಂಬದ ಜೊತೆ ಕಾಬೂಲ್‌ನಲ್ಲಿ ಇರುವ ಬಗ್ಗೆ ಅಮೆರಿಕಕ್ಕೆ ಮಾಹಿತಿ ಸಿಕ್ಕಿತು.

ಈತನ ಚಲನವಲನಗಳ ಬಗ್ಗೆ ನಿಗಾ ಇರಿಸಲಾಯಿತು. ಈ ವೇಳೆ ಒಂದು ಸೂಕ್ಷ್ಮ ವಿಚಾರ ಬೆಳಕಿಗೆ ಬಂತು. ಅದೆಂದರೆ ಅಲ್ ಜವಾಹಿರಿ ಬೆಳಗಿನ ಹೊತ್ತು ತಮ್ಮ ಬಾಲ್ಕನಿಗೆ ಬಂದು ನಿಂತುಕೊಳ್ಳುತ್ತಿದ್ದ ಸಂಗತಿಯನ್ನು ಗುಪ್ತಚರರು ಕಂಡುಕೊಂಡರು. ಜವಾಹಿರಿ ದಿನಾ ಅದೇ ಸ್ಥಳದಲ್ಲಿ ನಿಂತುಕೊಳ್ಳುತ್ತಿದ್ದ. ಇದನ್ನೇ ಆಧಾರವಾಗಿಟ್ಟುಕೊಂಡು ಅಮೆರಿಕನ್ನರು ಸ್ಕೆಚ್ ಹಾಕಿದರು.

ಅಲ್ ಜವಾಹಿರಿ ಇದ್ದ ಕಟ್ಟಡದ ರಚನೆಯನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿದರು. ಕಟ್ಟಡಕ್ಕೆ ಹಾನಿಯಾಗದ ರೀತಿಯಲ್ಲಿ ದಾಳಿ ಮಾಡಲು ಯೋಜಿಸಲಾಯಿತು. ಜೂನ್ ತಿಂಗಳಲ್ಲಿ ಸ್ಕೆಚ್ ರೂಪಿಸಲಾಯಿತು. ಜುಲೈ 1ರಂದು ಅಮೆರಿಕ ಅಧ್ಯಕ್ಷರಿಗೆ ಮಾಹಿತಿ ನೀಡಲಾಯಿತು. ಜುಲೈ 25ರಂದು ಅಧ್ಯಕ್ಷರು ಓಕೆ ಅಂದರು. ಅಲ್ಲಿಗೆ ಕಾರ್ಯಾಚರಣೆ ಶುರುವಾಯಿತು.

ಡ್ರೋನ್ ಕಾರ್ಯಾಚರಣೆ ವಿಶೇಷತೆ

ಡ್ರೋನ್ ಕಾರ್ಯಾಚರಣೆ ವಿಶೇಷತೆ

ಅಲ್ ಜವಾಹಿರಿಯನ್ನು ಕೊಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಅಫ್ಘಾನಿಸ್ತಾನದ ನೆಲದ ಮೇಲೆ ಸೈನಿಕರು ಕಾಲಿಡುವಂತಿಲ್ಲ. ತಾಲಿಬಾನ್ ಕಡೆಯಿಂದ ಯಾವ ಬೆಂಬಲವೂ ಸಿಗುವುದಿಲ್ಲ. ಡ್ರೋನ್ ಮೂಲಕ ದಾಳಿ ಮಾಡಲು ನಿರ್ಧರಿಸಲಾಯಿತು. ಎರಡು ಹೆಲ್‌ಫೈರ್ ಕ್ಷಿಪಣಿಗಳನ್ನು ಹೊತ್ತು ಹೋಗಬಲ್ಲ ಡ್ರೋನ್ ಅನ್ನು ಆಯ್ದುಕೊಳ್ಳಲಾಯಿತು.

ಭಾನುವಾರ (ಜುಲೈ 31) ಬೆಳಗ್ಗೆ 6:18ಕ್ಕೆ ಅಲ್ ಜವಾಹಿರಿ ಇದ್ದ ಮನೆ ಮೇಲೆ ಡ್ರೋನ್‌ ಮೂಲಕ ಕ್ಷಿಪಣಿ ದಾಳಿ ನಡೆಯಿತು. ಮಾಮೂಲಿಯ ಕ್ಷಿಪಣಿ ಆಗಿದ್ದರೆ ಇಡೀ ಕಟ್ಟಡವೇ ಧ್ವಂಸವಾಗುತ್ತಿತ್ತು. ಆದರೆ, ಅಮೆರಿಕದ ಈ ಕ್ಷಿಪಣಿ ಕೇವಲ ಅಲ್ ಜವಾಹಿರಿಯನ್ನು ಸಂಹರಿಸಿತ್ತು. ಕಟ್ಟಡದ ಕೆಲ ಕಿಟಕಿಗಳಿಗೆ ಹಾನಿಯಾಗಿದ್ದು ಬಿಟ್ಟರೆ ಉಳಿದಂತೆ ಕಟ್ಟಡ ಸುರಕ್ಷಿತವಾಗಿತ್ತು. ಕಟ್ಟಡದೊಳಗಿದ್ದ ಇತರ ಸದಸ್ಯರಿಗೆ ಏನೂ ಆಗಿಲ್ಲ. ಅಮೆರಿಕಕ್ಕೆ ಟಾರ್ಗೆಟ್ ಆಗಿದ್ದ ಅಲ್ ಜವಾಹಿರಿ ಮಾತ್ರವೇ ಸಂಹಾರಗೊಂಡಿದ್ದ.

ಅಮೆರಿಕ ಇತ್ತೀಚೆಗೆ ಇಂಥದ್ದೇ ಕ್ಷಿಪಣಿಗಳನ್ನು ಬಳಸಿ ಹಲವು ಉಗ್ರರನ್ನು ಬಹಳ ನಿಖರ ರೀತಿಯಲ್ಲಿ ಹತ್ಯೆಗೈದಿತ್ತು. ಆ ಯಾವುದೇ ದಾಳಿಯಲ್ಲೂ ಟಾರ್ಗೆಟ್ ಇದ್ದ ಉಗ್ರರ ಬಿಟ್ಟರೆ ಬೇರೆ ಯಾರಿಗೂ ಸಾವನ್ನಪ್ಪಿಲ್ಲ ಎಂಬುದು ವಿಶೇಷ.

ಅಮೆರಿಕಕ್ಕೆ ಮಾಹಿತಿ ನೀಡಿದವರಾರು?

ಅಮೆರಿಕಕ್ಕೆ ಮಾಹಿತಿ ನೀಡಿದವರಾರು?

ಅಲ್ ಜವಾಹಿರಿ ಅಫ್ಘಾನಿಸ್ತಾನದಲ್ಲಿ ಇದ್ದ ಎಂಬ ಮಾಹಿತಿ ಅಮೆರಿಕಕ್ಕೆ ಅದು ಹೇಗೋ ಸಿಕ್ಕಿತ್ತು. ಕುತೂಹಲವೆಂದರೆ ಅಲ್ ಜವಾಹಿರಿ ಇದ್ದ ಮನೆ ಹಿರಿಯ ತಾಲಿಬಾನ್ ನಾಯಕ ಸಿರಾಜುದ್ದೀನ್ ಹಖ್ಖಾನಿ ಎಂಬುವವರ ಆಪ್ತರಿಗೆ ಸೇರಿದ್ದು ಎನ್ನಲಾಗಿದೆ.

ಈ ಮನೆಗೆ ಅಲ್ ಜವಾಹಿರಿ ಮೊದಲು ತನ್ನ ಪತ್ನಿ ಮತ್ತು ಮಕ್ಕಳನ್ನು ಕಳುಹಿಸಿದ್ದ. ಇತ್ತೀಚೆಗೆ ಈತ ಅಲ್ಲಿಗೆ ಹೋಗಿ ನೆಲಸಿದ್ದನಂತೆ. ಈತ ಇದೇ ಮನೆಯಲ್ಲಿರುವ ಮಾಹಿತಿಯನ್ನು ತಾಲಿಬಾನ್‌ನಲ್ಲೇ ಇರುವ ನಾಯಕರೊಬ್ಬರು ಅಮೆರಿಕಕ್ಕೆ ನೀಡಿರುವ ಸಾಧ್ಯತೆ ಇದೆ ಎಂದು ಶಂಕಿಸುವ ಕೆಲ ವರದಿಗಳಿವೆ.

ಅಲ್ ಜವಾಹಿರಿ ಹತ್ಯೆ ನಂತರ ಮುಂದೇನು?

ಅಲ್ ಜವಾಹಿರಿ ಹತ್ಯೆ ನಂತರ ಮುಂದೇನು?

ಅಲ್ ಖೈದಾ ಸಂಘಟನೆಯ ಪರಮೋಚ್ಚ ನಾಯಕರಾಗಿದ್ದ ಅಲ್ ಜವಾಹಿರಿಯ ಹತ್ಯೆಯಿಂದಾಗಿ ನಾಯಕತ್ವ ಬಿಕ್ಕಟ್ಟು ಶುರುವಾಗಬಹುದು. ಅಮೆರಿಕವನ್ನು ಎದುರುಹಾಕಿಕೊಂಡ ಬಳಿಕ ಅಲ್ ಖೈದಾ ಶಕ್ತಿ ಬಹಳ ಕುಂದಿದೆ. ಸಣ್ಣ ಪುಟ್ಟ ಬಣಗಳಾಗಿ ಅದು ಛಿದ್ರಗೊಂಡಿದೆ.

ಅಲ್ ಖೈದಾ ವಿಚಾರದಲ್ಲಿ ತಜ್ಞರೆನಿಸಿರುವ ಅಲಿ ಸೂಫಾನ್ ಪ್ರಕಾರ ಈಜಿಟ್ಟ್ ದೇಶದ ಸೇಫ್ ಅಲ್ ಅದಲ್ ಎಂಬಾತ ಅಲ್ ಖೈದಾದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಆದರೆ, ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಹಲವು ಹೊಸ ಉಗ್ರ ಸಂಘಟನೆಗಳು ವಿವಿಧೆಡೆ ಬಲಗೊಂಡಿರುವ ಹಿನ್ನೆಲೆಯಲ್ಲಿ ಅಲ್ ಖೈದಾ ಎರಡು ದಶಕಗಳ ಹಿಂದಿನ ತನ್ನ ಶಕ್ತಿಯನ್ನು ಮರಳಿ ಪಡೆಯುವುದು ಕಷ್ಟಸಾಧ್ಯ ಎನ್ನುತ್ತಾರೆ ತಜ್ಞರು.

(ಒನ್ಇಂಡಿಯಾ ಸುದ್ದಿ)

English summary
Al-Qaida Chief Al-Jawahri was killed in US drone attack at Kabul. The plan was put in place months back. Al Jawahri used to pop out in the balcony everyday. This made easy to kill him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X