ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೊಂದು ಸಲಾಮ್!

By ಒನ್ ಇಂಡಿಯಾ ಡೆಸ್ಕ್‌
|
Google Oneindia Kannada News

ಇಂದು ದೇಶ ವಿದೇಶಗಳು ಬೆಂಗಳೂರನ್ನು ತಿರುಗಿ ನೋಡುವಂತಾಗಿದೆ ಎಂದರೆ ಇದಕ್ಕೆ ನಿರ್ಮಾತೃ ಕೆಂಪೇಗೌಡರು ಕಾರಣ. ಅವರ ಅವತ್ತಿನ ದೂರಾಲೋಚನೆಯೇ ಇವತ್ತು ಬೆಂಗಳೂರು ವಿಶಾಲವಾಗಿ ಬೆಳೆದು ಸಿಲಿಕಾನ್ ಸಿಟಿಯಾಗಿ ವಿಶ್ವದ ಗಮನಸೆಳೆಯಲು ಕಾರಣವಾಗಿದೆ.

ಕೆಂಪೇಗೌಡರಿಂದ ನಿರ್ಮಿತವಾದ ಬೆಂಗಳೂರು ದಿನದಿಂದ ಬೆಳೆಯುತ್ತಲೇ ಸಾಗುತ್ತಿದೆ. ಅದನ್ನು ಸುತ್ತಮುತ್ತಲ ಹಳ್ಳಿ ಪಟ್ಟಣಗಳನ್ನೆಲ್ಲ ವ್ಯಾಪಿಸಿಕೊಂಡು ಬೃಹತ್ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿದೆ. ಜಗತ್ತಿನ ಎಲ್ಲ ದೇಶಗಳು ಇತ್ತ ನೋಡುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಕೆಂಪೇಗೌಡರನ್ನು ನೆನಪಿಸಿಕೊಳ್ಳಲೇ ಬೇಕಾಗುತ್ತದೆ. ಸೋಮವಾರ ಕೆಂಪೇಗೌಡರ 513 ನೇ ಜನ್ಮ ದಿನವನ್ನು ನಾವು ಆಚರಿಸುತ್ತಿದ್ದೇವೆ.

 ಬೆಂಗಳೂರಿನಲ್ಲಿ ಕೆಂಪೇಗೌಡರು ಕಟ್ಟಿಸಿದ ಕರೆಕಟ್ಟೆ, ಕೋಟೆ ಕೊತ್ತಲ, ಊರು ಕೇರಿ, ಮಾರುಕಟ್ಟೆಗಳಿವು ಬೆಂಗಳೂರಿನಲ್ಲಿ ಕೆಂಪೇಗೌಡರು ಕಟ್ಟಿಸಿದ ಕರೆಕಟ್ಟೆ, ಕೋಟೆ ಕೊತ್ತಲ, ಊರು ಕೇರಿ, ಮಾರುಕಟ್ಟೆಗಳಿವು

ಕೆಂಪೇಗೌಡರನ್ನು ಮಾಮೂಲಿ ರಾಜನಾಗಿ ನೋಡಲಾಗುವುದಿಲ್ಲ. ಏಕೆಂದರೆ ಅವರ ಆಡಳಿತಾವಧಿಯನ್ನು ಗಮನಿಸಿದರೆ ಅವರೊಬ್ಬ ಕೃಷಿತಜ್ಞ, ಶಿಕ್ಷಣತಜ್ಞ, ಆಡಳಿತಜ್ಞ, ಇಂಜಿನಿಯರ್, ವಾಣಿಜ್ಯೋದ್ಯಮಿ, ಕೈಗಾರಿಕೋದ್ಯಮಿ, ವಿಚಾರವಾದಿ, ವೈದ್ಯ, ಮನೋವೈದ್ಯ, ಜ್ಞಾನಿ, ವಿಜ್ಞಾನಿ, ಕಾಲಜ್ಞಾನಿ, ತಂತ್ರಜ್ಞ, ದಾರ್ಶನಿಕ, ಸಂತ, ಪವಾಡಪುರುಷ, ಯೋಜನಾನಿಪುಣ, ತತ್ವಜ್ಞಾನಿ, ಸಾರ್ವಭೌಮ ಹೀಗೆ ಹತ್ತಾರು ರೀತಿಯ ಪ್ರತಿಭೆಯ ಮಹಾಪರ್ವತದಂತೆ ಗೊಚರಿಸುತ್ತಾರೆ. ಹಾಗೆ ಇದ್ದಿದ್ದರಿಂದಲೇ ಬೆಂಗಳೂರನ್ನು ಕಟ್ಟಲು ಸಾಧ್ಯವಾಯಿತು ಎನ್ನುವುದನ್ನು ಇಂದಿನ ಪೀಳಿಗೆಯ ಜನರು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಅವತ್ತಿನ ಮಟ್ಟಿಗೆ ಒಂದು ನಗರ ಹೇಗಿರಬೇಕು ಮತ್ತು ನಗರಕ್ಕೆ ಬಹುಮುಖ್ಯವಾಗಿ ನೀರು ಬೇಕು ಎಂಬುದನ್ನು ಮನಗಂಡು ಅವರು 25 ಕೆರೆಗಳನ್ನು ನಿರ್ಮಿಸಿದ್ದರು. ಅದರಾಚೆಗೆ ಸಾವಿರಾರು ಕೆರೆಗಳನ್ನು ನಿರ್ಮಿಸಿ ಕೃಷಿಗೆ ನೀರೊದಗಿಸಿದ್ದರು. ಇನ್ನು ಕೆಂಪೇಗೌಡರ ಬಗ್ಗೆ ಹೇಳಬೇಕಾದರೆ ಕರ್ನಾಟಕದ ಒಂದಿಷ್ಟು ಇತಿಹಾಸವನ್ನು ಮೆಲುಕು ಹಾಕಲೇ ಬೇಕಾಗುತ್ತದೆ.

ನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ ನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ

ಕೆಂಪೇಗೌಡರ ಜನನ, ಬಾಲ್ಯ, ಪಟ್ಟಾಭಿಷೇಕ

ಕೆಂಪೇಗೌಡರ ಜನನ, ಬಾಲ್ಯ, ಪಟ್ಟಾಭಿಷೇಕ

ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸರಲ್ಲೊಬ್ಬರಾದ ಇಮ್ಮಡಿ ಭೈರೇಗೌಡನ ನಂತರ ಆತನ ಪುತ್ರ ನಂಜಪ್ಪಗೌಡ ಪಟ್ಟಕ್ಕೆ ಬಂದ. ಅವನನ್ನು ಗಿಡ್ಡೇಗೌಡನೆಂದು ಕರೆಯಲಾಗಿದೆ. ನಂಜಪ್ಪಗೌಡನಿಗೆ ಬಹಳಕಾಲ ಮಕ್ಕಳಿರಲಿಲ್ಲ. ತಮ್ಮ ಕುಲದೇವತೆಯಾದ ಕುರುವಗೆರೆ ಕೆಂಪಮ್ಮನಿಗೆ ಹರಕೆ ಕಟ್ಟಿಕೊಂಡಿದ್ದರಿಂದ ದೇವಿಯ ಆಶೀರ್ವಾದದ ಫಲವಾಗಿ ಕೆಂಪನಂಜೇಗೌಡ ಜನಿಸಿದ. ಈತನನ್ನು ಕೆಂಪನಾಚೇಗೌಡ ಎನ್ನುವುದೂ ಉಂಟು. ಈತನೇ ನಾಡಪ್ರಭು ಕೆಂಪೇಗೌಡರ ತಂದೆ. ಕೆಂಪನಂಜೇಗೌಡ ಮತ್ತು ಲಿಂಗಮಾಂಬೆ ದಂಪತಿಗೆ ನಾಲ್ಕು ಮಂದಿ ಗಂಡು ಮಕ್ಕಳು. ಅವರಲ್ಲಿ ಹಿರಿಮಗನೇ ನಾಡಪ್ರಭುವಾದ ಕೆಂಪೇಗೌಡ. ಯಲಹಂಕದಲ್ಲಿ ಇವರು 1510ರಲ್ಲಿ ಜನಿಸುತ್ತಾರೆ. ಕೆಂಪೇಗೌಡರ ತಂದೆ ಕೆಂಪನಂಜೇಗೌಡ ವಿಜಯನಗರ ಸಾಮ್ರಾಜ್ಯಕ್ಕೆ ಅತ್ಯಂತ ನಿಷ್ಠನಾಗಿದ್ದುದರಿಂದ ಕೃಷ್ಣದೇವರಾಯ ಅವರ ಹಾಗೂ ಅವರ ಆಡಳಿತದ ಕಾರ್ಯ ಶೈಲಿಯನ್ನು ಬಹಳ ಮೆಚ್ಚಿಕೊಂಡಿದ್ದರು.

ಗುರು ಮಾಧವಭಟ್ಟರ ಅಣತಿಯಂತೆ ರಾಜ್ಯಾಡಳಿತ ರಥವೇರುವ ಮುನ್ನ ದೇಶನೋಡು ಕೋಶ ಓದು ಎಂಬಂತೆ ದೇಶ ಪರ್ಯಟನೆಗೆ ಹೊರಟ ಕೆಂಪೇಗೌಡ ಮೊದಲಿಗೆ ವಿಜಯನಗರಕ್ಕೆ ಭೇಟಿ ನೀಡುತ್ತಾರೆ. ಐದಾರು ವರ್ಷಗಳ ಬಾಲಕನಾಗಿದ್ದಾಗಲೇ 1515 ಆಸುಪಾಸಿನಲ್ಲಿ ಒಮ್ಮೆ ತಂದೆಯ ಹೆಗಲ ಮೇಲೆ ಕೂತು ರಾಜಧಾನಿ ಹಂಪಿಯಲ್ಲಿ ವಿಜಯನಗರದ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡ, ಈಗ ಮತ್ತಷ್ಟು ನಿಬ್ಬೆರಗುಗೊಂಡು ರೋಮಾಂಚಿತನಾಗುತ್ತಾರೆ. 1528ರಲ್ಲಿ ತಾಯಿಯ ಸೋದರನ ಮಗಳು ಅಂದರೆ ಸೋದರ ಮಾವನ ಪುತ್ರಿ ಚೆನ್ನಮಾಂಬೆಯೊಡನೆ ವಿವಾಹವಾಗಿ ಯುವರಾಜರಾಗಿ ಪಟ್ಟಾಭಿಷಕ್ತರಾಗುತ್ತಾರೆ. ಆ ನಂತರ 1531ರಲ್ಲಿ ಯಲಹಂಕ ಪ್ರಭುವಾಗಿ ಪಟ್ಟಾಭಿಷಕ್ತರಾಗಿ ರಾಜ್ಯಾಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಅಲ್ಲಿಂದ ಆರಂಭವಾಗುವುದೇ ಕೆಂಪೇಗೌಡರ ಸುವರ್ಣಯುಗ.

ಗಡಿ ಗುರುತಿಸಿದ್ದೇ ಒಂದು ವಿಶೇಷ

ಗಡಿ ಗುರುತಿಸಿದ್ದೇ ಒಂದು ವಿಶೇಷ

ಕೃಷ್ಣದೇವರಾಯರು 1529ರಲ್ಲಿ ನಿಧನರಾದಾಗ ಅವರ ಸಹೋದರ ಅಚ್ಚುತರಾಯ ಅಧಿಕಾರಕ್ಕೆ ಬರುತ್ತಾರೆ. ಕೆಂಪೇಗೌಡರ ಕನಸಿನ ಬೆಂಗಳೂರು ನಿರ್ಮಾಣಕ್ಕೆ 50 ಸಾವಿರ ಚಿನ್ನದ ವರಹಗಳನ್ನು ನೀಡುವುದರ ಜೊತೆಗೆ 30 ಸಾವಿರ ಪಗೋಡಗಳ ಉತ್ಪನ್ನ ಬರುವ ಹಳೆಬೆಂಗಳೂರು, ಬೇಗೂರು, ವರ್ತೂರು, ಹಲಸೂರು, ಜಿಗಣಿ, ತಲಘಟ್ಟಪುರ, ಕೆಂಗೇರಿ, ಕುಂಬಳಗೋಡು, ಹೆಸರಘಟ್ಟ, ಕಾವಳ್ಳಿ (ಈಗಿನ ಕನ್ನಲ್ಲಿ), ಚಿಕ್ಕಬಾಣವರ ಇತ್ಯಾದಿ 12 ಹೋಬಳಿಗಳನ್ನು ಕೆಂಪೇಗೌಡರಿಗೆ ದಾನವಾಗಿ ಬಿಟ್ಟುಕೊಡುತ್ತಾರೆ. ಅವತ್ತಿನ ಕಾಲದಲ್ಲೇ ವೈಜ್ಞಾನಿಕ ಪ್ರಜ್ಞೆಯ ಪ್ರಖರ ವಿಚಾರವಾದಿಯಾಗಿದ್ದ ಕೆಂಪೇಗೌಡರು ಯಾವುದೇ ಮೂಢನಂಬಿಕೆಗಳಿಗೆ ಒಳಗಾಗದೆ ಪುರೋಹಿತರ ಅಣತಿಯಂತೆ ಯಾವುದೇ ಶಾಸ್ತ್ರ, ಘಳಿಗೆ ನೋಡದೆ ರೈತರಿಂದ ನೇಗಿಲಿನಿಂದ ಗೆರೆ ಎಳೆಸುವ ಮೂಲಕ ತಮ್ಮ ಮಹಾತ್ವಕಾಂಕ್ಷೆಯ ಬೆಂಗಳೂರು ನಿರ್ಮಾಣವನ್ನು ಆರಂಭಿಸುತ್ತಾರೆ.

ದೊಮ್ಮಲೂರು ಮತ್ತು ಯಲಹಂಕದ ನಡುವಿನ ಕಾಡಿನ ಮಧ್ಯೆ ಆಯ್ದ ಒಂದು ಸ್ಥಳದಲ್ಲಿ ಭೂಮಿಪುತ್ರ ಕೆಂಪೇಗೌಡನಿಂದ ಭೂಮಿ ಪೂಜೆ ಪ್ರಾರಂಭವಾಗುತ್ತದೆ. ನಾಲ್ವರು ರೈತರೊಳಗೊಂಡಂತೆ ನೇಗಿಲು ಹೊತ್ತ ನಾಲ್ಕು ಜೋಡಿ ಅಚ್ಚ ಬಿಳುಪಿನ ಎತ್ತುಗಳು ನಾಲ್ಕು ದಿಕ್ಕುಗಳಲ್ಲೂ ಗೆರೆ ಎಳೆಯುತ್ತಾ ನಡೆಯುತ್ತವೆ. ಅವುಗಳ ನಡಿಗೆನಿಂತ ಸ್ಥಳಗಳೇ ನವ ಬೆಂಗಳೂರಿನ ಗಡಿಗಳೆಂದು ನಿರ್ಧರಿಸಲಾಗುತ್ತದೆ. ಅದರಂತೆ ನೇಗಿಲಿನಿಂದ ಗೆರೆ ಎಳೆಯುತ್ತಾ ನಡೆದ ಎತ್ತುಗಳು ಪೂರ್ವಕ್ಕೆ ಹಲಸೂರು, ಪಶ್ಚಿಮಕ್ಕೆ ಅರಳೇಪೇಟೆ, ಉತ್ತರಕ್ಕೆ ಯಲಹಂಕ, ದಕ್ಷಿಣಕ್ಕೆ ಆನೆಕಲ್ (ಸಿಟಿ ಮಾರುಕಟ್ಟೆ) ತನಕ ಬಂದು ನಿಲ್ಲುತ್ತವೆ. ಹೀಗೆ ಆ ಎತ್ತುಗಳು ಬಂದು ನಿಂತ ನೆಲವೇ ಕೆಂಪೇಗೌಡ ನಿರ್ಮಿಸಿದ ಬೆಂಗಳೂರಿಗೆ ಎಲ್ಲೆಯಾಯಿತು. ಅಲ್ಲೆಲ್ಲಾ ಗುರುತಿಗಾಗಿ ಕಲ್ಲುಗಳನ್ನು ನೆಟ್ಟು ಪೂರ್ವ - ಪಶ್ಚಿಮದ ಭಾಗವನ್ನು ಚಿಕ್ಕಪೇಟೆಯಾಗಿ, ಉತ್ತರ-ದಕ್ಷಿಣದ ಭಾಗವನ್ನು ದೊಡ್ಡಪೇಟೆಯಾಗಿ (ಈಗಿನ ಅವೆನ್ಯೂರಸ್ತೆ) ನಿರ್ಮಿಸಲಾಗಿತ್ತು.

ಕೋಟೆ ಬಾಗಿಲಿಗಾಗಿ ಕೆಂಪೇಗೌಡರ ಸೊಸೆ ಆತ್ಮಾರ್ಪಣೆ

ಕೋಟೆ ಬಾಗಿಲಿಗಾಗಿ ಕೆಂಪೇಗೌಡರ ಸೊಸೆ ಆತ್ಮಾರ್ಪಣೆ

1537ರಲ್ಲಿ ಅಡಿಗಲ್ಲು ಹಾಕಿ ನಗರದ ನಾಲ್ಕು ದಿಕ್ಕುಗಳಿಗೂ ನಾಲ್ಕು ದ್ವಾರಗಳನ್ನು ನಿರ್ಮಿಸಿ ಅವುಗಳನ್ನು ಹಲಸೂರು ಹೆಬ್ಬಾಗಿಲು, ಕೆಂಗೇರಿ ಹೆಬ್ಬಾಗಿಲು, ಯಶವಂತಪುರ ಹೆಬ್ಬಾಗಿಲು, ಯಲಹಂಕ ಹೆಬ್ಬಾಗಿಲುಗಳೆಂದು ಹೆಸರಿಸಿದ್ದರು. ಮುಖ್ಯಧ್ವಾರದ ಬಾಗಿಲು ನಿಲ್ಲದೇ ಬೀಳುತ್ತಿರಲು ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ನಾಡಪ್ರಭು ಕೆಂಪೇಗೌಡರ ಸೊಸೆ ನಾಡಿಗಾಗಿ ಬಲಿದಾನಗೈದ ಪರಿಣಾಮವಾಗಿ ಮುಖ್ಯಧ್ವಾರದ ಬಾಗಿಲು ಭದ್ರವಾಗಿ ನಿಲ್ಲುತ್ತದೆ. ಈ ಮುಖೇನ ಲಕ್ಷ್ಮೀದೇವಿ ಬೆಂಗಳೂರು ಚರಿತ್ರೆಯ ಸುವರ್ಣ ಪುಟಗಳಲ್ಲಿ ತಾನೇ ಒಂದು ವಿಶೇಷ ಪುಟವಾಗಿ ಸೇರಿಹೋಗುತ್ತಾಳೆ.

ನಾಡಪ್ರಭುವಿನ ಕಲ್ಪನೆಯಂತೆ 1538ರಲ್ಲಿ ಬೆಂಗಳೂರು ಕೋಟೆ ಮತ್ತು ಪೇಟೆಗಳು ಒಳಗೊಂಡಂತೆ ಸಂಪೂರ್ಣ ನಗರ ನಿರ್ಮಾಣ ಕಾರ್ಯ ಆರಂಭವಾಯಿತು. ಅದು ನಾಲ್ಕು ಮೈಲಿಯ ಸುತ್ತಳತೆಯ ನಾಲ್ಕು ಬೃಹತ್ ಗೋಪುರದ ಒಂಬತ್ತು ಬೃಹತ್ ದ್ವಾರಗಳ ಅಂಡಾಕಾರದ ಮಹಾ ಕೋಟೆ. ಕೋಟೆಗೆ ಸೇರಿದಂತೆ ಈಗಿನ ಚಿಕ್ಕಪೇಟೆಯಲ್ಲಿ ನಾಡಪ್ರಭುವಿನ ಅರಮನೆ ನಿರ್ಮಾಣಗೊಂಡಿತ್ತು. ಮುಂದೆ 1759ರಲ್ಲಿ ಟಿಪ್ಪು ಸುಲ್ತಾನನು ಈ ಕೋಟೆಯನ್ನು ಪುನರ್ ನಿರ್ಮಿಸಿದ ಇತಿಹಾಸವಿದೆ.

ಕೆಂಪೇಗೌಡರ ಐಕ್ಯ

ಕೆಂಪೇಗೌಡರ ಐಕ್ಯ

ನಾಡುಕಟ್ಟುವುದರಲ್ಲಿ ನಿಸ್ಸೀಮನಾಗಿದ್ದ ಕೆಂಪೇಗೌಡ ಮೈಸೂರಿನ ಪಿರಿಯಾಪಟ್ಟಣ, ಕಲ್ಲಹಳ್ಳಿ, ನಂಜರಾಯಪಟ್ಟಣ, ಕೊಡಗು ಮುಂತಾದ ಪ್ರಾಂತ್ಯಗಳು ಸೇರಿದಂತೆ ಉಮ್ಮತ್ತೂರಿನ ಆಡಳಿತಕ್ಕೆ ಒಳಪಟ್ಟಿದ್ದ ಶಿವನಸಮುದ್ರ ಸೀಮೆಯವರೆಗೂ ತನ್ನ ಆಳ್ವಿಕೆಯನ್ನು ವಿಸ್ತರಿಸಿದ್ದರು. ಇದರಿಂದ ಯಲಹಂಕ ನಾಡು ದಕ್ಷಿಣದ ಗಡಿ ಕಾವೇರಿ ತೀರದವರೆಗೂ ವಿಸ್ತಾರಗೊಂಡಿತ್ತು.

1531ರಲ್ಲಿ ಪಟ್ಟಾಭಿಷಕ್ತರಾಗಿ ಅಧಿಕಾರಕ್ಕೆ ಬಂದ ನಾಡಪ್ರಭು ಕೆಂಪೇಗೌಡರು. 1569ರವರೆಗೆ ಸುಮಾರು ೩೮ ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಮಾಗಡಿ ಬಳಿಯ ಕೆಂಪಾಪುರದಲ್ಲಿ 1569ರಲ್ಲಿ ಇಹಲೋಕ ತ್ಯಜಿಸಿದರು. ಮಾಗಡಿ ಬಳಿಯ ತಿಪ್ಪಸಂದ್ರ ಹ್ಯಾಂಡ್‌ಪೊಸ್ಟ್ ಮತ್ತು ಕೆಂಚನಹಳ್ಳಿ ನಡುವೆ ಇರುವ ಕೆಂಪಾಪುರ ಗ್ರಾಮದಲ್ಲಿ ಕೆಂಪೇಗೌಡರ ಸಮಾಧಿ ದೊರೆತಿದ್ದು, ಅದನ್ನು ಅಭಿವೃದ್ಧಿಗೊಳಿಸಿದ್ದೇ ಆದರೆ ಅದು ಐತಿಹಾಸಿಕ ತಾಣವಾಗುವುದರಲ್ಲಿ ಎರಡು ಮಾತಿಲ್ಲ.

English summary
June 27th founder of Bengaluru Kempegowda S 513th Birth Anniversary. Here Interesting Facts about Bengaluru creater: Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X