ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಕೆಂಪೇಗೌಡರು ಕಟ್ಟಿಸಿದ ಕರೆಕಟ್ಟೆ, ಕೋಟೆ ಕೊತ್ತಲ, ಊರು ಕೇರಿ, ಮಾರುಕಟ್ಟೆಗಳಿವು

|
Google Oneindia Kannada News

ಬೆಂಗಳೂರು, ಜೂನ್ 27: ನಾಡಪ್ರಭು ಕೆಂಪೇಗೌಡ ಕರ್ನಾಟಕದ ಅಗ್ರಗಣ್ಯ ಆಡಳಿತಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು ನಗರದ ನಿರ್ಮಾತೃವಾಗಿರುವ ಕೆಂಪೇಗೌಡರು 16ನೇ ಶತಮಾನದಲ್ಲಿ ಇದ್ದವರು.

ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಇದ್ದ ಪಾಳ್ಯಗಾರರಲ್ಲಿ ಕೆಂಪೇಗೌಡರು ಪ್ರಮುಖರು. ಬೆಂಗಳೂರು ನಗರಕ್ಕೆ ಕಾಯಕಲ್ಪ ಹಾಕಿದವರು. ಬಹಳ ದೂರಗಾಮಿ ಚಿಂತನೆ ಮತ್ತು ಕಾರ್ಯಾಚರಣೆ ಅವರ ಆಡಳಿತದಿಂದಾಗಿ ಇಂದು ಬೆಂಗಳೂರು ಅಗಾಧವಾಗಿ ಬೆಳೆಯಲು ಸಾಧ್ಯವಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಾಡಪ್ರಭು ಕೆಂಪೇಗೌಡ 513ನೇ ಜಯಂತಿ ಕಾರ್ಯಕ್ರಮವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಾಡಪ್ರಭು ಕೆಂಪೇಗೌಡ 513ನೇ ಜಯಂತಿ ಕಾರ್ಯಕ್ರಮ

1510, ಜೂನ್ 27ರಂದು ಯಲಹಂಕದಲ್ಲಿ ಜನಿಸಿದ ಕೆಂಪೇಗೌಡ ಸುಕ್ಷಿತರೂ ಹಾಗು ದೂರಗಾಮಿ ಚಿಂತನೆಯ ದಕ್ಷ ಆಡಳಿತಕ್ಕೆ ಹೆಸರಾದವರು. ಬೆಂಗಳೂರಿನಲ್ಲಿ ವಿವಿಧ ದಿಕ್ಕಿನಲ್ಲಿ ಮಹಾಧ್ವಾರಗಳನ್ನು ನಿರ್ಮಿಸಿದರು. ನಗರದ ಹಲವೆಡೆ ಕೆರೆ ಕಟ್ಟೆಗಳನ್ನು ಕಟ್ಟಿಸಿದರು. ಹಲವು ಪ್ರದೇಶಗಳಲ್ಲಿ ದೇವಸ್ಥಾನಗಳನ್ನು ಕಟ್ಟಿದರು. ವಿವಿಧ ಸಮುದಾಯಗಳ ಕಸುಬುಗಳ ಬೆಳವಣಿಗೆಗೆ ಪೂರಕವಾದ ವ್ಯವಹಾರದ ವಾತಾವರಣ ನಿರ್ಮಿಸಿದರು. ಅದಕ್ಕಾಗಿ ವಿವಿಧ ಪೇಟೆಗಳು ಮತ್ತು ಬೀದಿಗಳನ್ನು ಹುಟ್ಟುಹಾಕಿದರು.

ಈಗಲೂ ನಾವು ಬಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ, ನಗರ್ಥಪೇಟೆ, ಕಾಟನ್‌ಪೇಟೆ (ಅರಳೆಪೇಟೆ), ಗಾಣಿಗರ ಪೇಟೆ, ಕುಂಚಿಟಗರ ಪೇಟೆ, ಕುರುಬರ ಪೇಟೆ, ಅಂಚೆಪೇಟೆ, ಹೂವಾಡಿಗರ ಪೇಟೆ, ಮಡಿವಾಳ ಪೇಟೆ, ರಾಗಿಪೇಟೆ ಇತ್ಯಾದಿ ವ್ಯಾಪಾರ ಸ್ಥಳಗಳು ಸೃಷ್ಟಿಯಾದವು. ವಿಶಾಲ ರಸ್ತೆಗಳು ತಯಾರಾದವು. 1569ರವರೆಗೂ ಬದುಕಿದ್ದ ಕೆಂಪೇಗೌಡರು ಬೆಂಗಳೂರಿನಲ್ಲಿ ಸ್ಥಾಪಿಸಿದ ಕೆರೆ ಕಟ್ಟೆಗಳು, ದೇವಸ್ಥಾನಗಳು, ಧ್ವಾರಗಳು ಈಗಲೂ ಕಾಣಸಿಗುತ್ತವೆ. ಅಂಥ ಕೆಲ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

ನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆನಗರದ ವಿವಿಧೆಡೆ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಆಚರಣೆ

 ಬಸವನಗುಡಿ ದೇವಸ್ಥಾನ

ಬಸವನಗುಡಿ ದೇವಸ್ಥಾನ

ಬೆಂಗಳೂರಿನ ಜನಪ್ರಿಯ ದೇವಸ್ಥಾನಗಳಲ್ಲಿ ಬಸವನಗುಡಿಯೂ ಒಂದು. 1537ರಲ್ಲಿ ಕೆಂಪೇಗೌಡರು ಈ ನಂದಿ ಮಂದಿರವನ್ನು ಕಟ್ಟಿದರು. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ. ಇದರ ನಂದಿ ವಿಗ್ರಹ 15 ಅಡಿ ಎತ್ತರ ಹಾಗು 20 ಅಡಿ ಅಗಲವಿದೆ. ವಿಶ್ವದ ಅತ್ಯಂತ ಬೃಹತ್ ನಂದಿ ವಿಗ್ರಹ ಎಂದರೆ ಇದೇ.

ಬಸವನಗುಡಿಯಲ್ಲಿ ನಂದಿ ವಿಗ್ರಹದಂತೆ ಇಲ್ಲಿ ಪ್ರತೀ ವರ್ಷವೂ ನಡೆಯುವ ಕಡಲೆಕಾಯಿ ಪರಿಷೆಯೂ ಜನಪ್ರಿಯ. ಪ್ರತೀ ವರ್ಷದ ಕಾರ್ತೀಕ ಮಾಸದಲ್ಲಿ (ಡಿಸೆಂಬರ್ ಅಸುಪಾಸು) ಪರಿಷೆ ನಡೆಯುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು ತಾವು ಬೆಳೆದ ಕಡಲೆಕಾಯಿಯನ್ನು ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಹತ್ತು ದಿನಗಳವರೆಗೂ ಇಲ್ಲಿ ಪರಿಷೆ ನಡೆಯುತ್ತದೆ.

 ದೊಡ್ಡಗಣೇಶ ದೇವಸ್ಥಾನ:

ದೊಡ್ಡಗಣೇಶ ದೇವಸ್ಥಾನ:

ಬಸವನಗುಡಿಯಲ್ಲಿ ನಂದಿ ನೋಡಲು ಬಂದವರು ದೊಡ್ಡ ಗಣೇಶನನ್ನು ನೋಡದೇ ಇರುತ್ತಾರೆಯೇ. ಬಸವನಗುಡಿಯ ಪಕ್ಕದಲ್ಲೇ ಕೆಂಪೇಗೌಡರು ದೊಡ್ಡಗಣಪತಿಯ ದೇವಸ್ಥಾವನ್ನು ಕಟ್ಟಿದ್ದಾರೆ. ಒಂದು ಬೃಹತ್ ಬಂಡೆಯಲ್ಲಿ ಗಣೇಶನ ವಿಗ್ರಹ ಕೆತ್ತಲಾಗಿದೆ. ದೇಶದ ಅತಿದೊಡ್ಡ ಗಣೇಶನ ವಿಗ್ರಹಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ಗಣೇಶನಿಗೆ ಮಾಡುವ ಬೆಣ್ಣೆ ಅಲಂಕಾರ ಬಹಳ ಖ್ಯಾತ. ಭಕ್ತರು ಮಾಡಿಕೊಳ್ಳುವ ಹರಕೆಯನ್ನು ಗಣೇಶ ತಪ್ಪದೇ ಈಡೇರಿಸುತ್ತಾನೆ ಎಂಬ ನಂಬಿಕೆ ಜನರಲ್ಲಿದೆ.

 ಗವಿಗಂಗಾಧರೇಶ್ವರ ದೇವಸ್ಥಾನ

ಗವಿಗಂಗಾಧರೇಶ್ವರ ದೇವಸ್ಥಾನ

ಕೆಂಪೇಗೌಡರು ಜೀರ್ಣೋದ್ಧಾರ ಮಾಡಿದ ದೇವಸ್ಥಾನಗಳಲ್ಲಿ ಇದೂ ಒಂದು. ಬಸವನಗುಡಿಯ ಸಮೀಪವೇ ಇದು ಇರುವುದು. ಆರನೇ ಶತಮಾನದಲ್ಲಿ ಒಂದು ಸಣ್ಣ ಗುಡಿಯಾಗಿದ್ದ ಇದನ್ನು ಕೆಂಪೇಗೌಡರು ಜೀರ್ಣೋದ್ಧಾರ ಮಾಡಿದರೆನ್ನಲಾಗಿದೆ.

ಮಕರ ಸಂಕ್ರಾಂತಿಯಂದು ಸೂರ್ಯನ ಕಿರಣ ಈ ದೇವಸ್ಥಾನದೊಳಗಿರುವ ನಂದಿಯ ಕೊಂಬುಗಳ ಮೂಲಕ ಹಾದು ಶಿವನ ಲಿಂಗದ ಮೇಲೆ ಬೀಳುತ್ತದೆ. ಈ ಅಚ್ಚರಿ ನೋಡಲು ಸಂಕ್ರಾಂತಿಯಂದು ಸಾವಿರಾರು ಜನರು ಈ ದೇವಸ್ಥಾನಕ್ಕೆ ಬರುವುದುಂಟು. ಈ ಕಟ್ಟಡ ವಿನ್ಯಾಸಕ್ಕೆ ಅಚ್ಚರಿ ಅನಿಸುವುದುಂಟು. ಇದು ಬಂಡೆಯೊಳಗೆ ಗುಹೆಯಲ್ಲಿ ನಿರ್ಮಿತವಾಗಿದೆ. ಈ ದೇವಸ್ಥಾನಕ್ಕೆ ಹೋದರೆ ಗುಹೆಗೆ ಹೋದ ಅನುಭವವಾಗುತ್ತದೆ.

 ಅಲಸೂರು ಸೋಮೇಶ್ವರ ದೇವಸ್ಥಾನ

ಅಲಸೂರು ಸೋಮೇಶ್ವರ ದೇವಸ್ಥಾನ

ಏಳೆಂಟನೇ ಶತಮಾನಕ್ಕೆ ಸೇರಿದ ಸೋಮೇಶ್ವರ ಸ್ವಾಮಿ ದೇವಸ್ಥಾನವನ್ನು ಕೆಂಪೇಗೌಡರು ಜೀರ್ಣೋದ್ಧಾರ ಮಾಡಿದರು. ಹಲಸೂರಿನಲ್ಲಿರುವ ಈ ದೇವಸ್ಥಾನದ ಶೈಲಿ, ಕಲೆ, ಕೆತ್ತನೆ ಎಲ್ಲವೂ ಅದ್ಭುತ ಎನಿಸುತ್ತವೆ.

 ಲಕ್ಷ್ಮಮ್ಮ ಸ್ಮಾರಕ

ಲಕ್ಷ್ಮಮ್ಮ ಸ್ಮಾರಕ

ಈಗಿನ ಕೋರಮಂಗಲದ ಆರನೇ ಬ್ಲಾಕ್‌ನಲ್ಲಿ ಲಕ್ಷ್ಮಮ್ಮ ಸ್ವಾರಕ ಇದೆ. ಲಕ್ಷ್ಮಮ್ಮ (ಲಕ್ಷ್ಮೀದೇವಿ) ಕೆಂಪೇಗೌಡರ ಸೊಸೆ. ಕೆಂಪೇಗೌಡರ ಮಗ ಸೋಮಣ್ಣಗೌಡರ ಪತ್ನಿ. ಕೆಂಪೇಗೌಡರು ಕೋಟೆ ಕಟ್ಟುವಾಗ ದಕ್ಷಿಣದ ಹೆಬ್ಬಾಗಿಲಿನ ಕಂಬ ಪದೇ ಪದೇ ಕುಸಿದುಬಿಳುತ್ತಿತ್ತು. ಏನು ಮಾಡಬೇಕೆಂದು ತೋಚದೆ ಆಸ್ಥಾನದ ಪುರೋಹಿತರ ಸಲಹೆ ಕೇಳಿದರು. ತುಂಬು ಗರ್ಣಿಣಿಯೊಬ್ಬರನ್ನು ಬಲಿಕೊಟ್ಟರೆ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಪುರೋಹಿತರು ಹೇಳಿದರಂತೆ.

ಕೆಂಪೇಗೌಡರಿಗೆ ನರಬಲಿ ಕೊಡಲು ಮನಸ್ಸಾಗಲಿಲ್ಲ. ಅದರಲ್ಲೂ ಗರ್ಭಿಣಿಯನ್ನು ಹೇಗೆ ಬಲಿಕೊಡುವುದು ಎಂದು ಒಪ್ಪದೇ ಸುಮ್ಮನಿದ್ದರು. ಆಗ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ತುಂಬುಗರ್ಭಿಣಿಯಾಗಿದ್ದರು. ತಮ್ಮ ಮಾವನ ಸಂಕಟವನ್ನು ನೋಡಲಾದ ಲಕ್ಷ್ಮೀದೇವಿ ಅಂದು ರಾತ್ರಿ ಕುಡುಗೋಲಿನಿಂದ ಕತ್ತು ಸೀಳಿಕೊಂಡು ಬಲಿಯಾದರು. ಆ ಮಹಾತಾಯಿಯ ಬಲಿದಾನಕ್ಕೆ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಗಿದೆ.

 ಧರ್ಮಾಂಬುಧಿ, ಕೆಂಪಾಂಬುಧಿ ಕೆರೆಗಳು

ಧರ್ಮಾಂಬುಧಿ, ಕೆಂಪಾಂಬುಧಿ ಕೆರೆಗಳು

ಬೆಂಗಳೂರಿನಲ್ಲಿ ಈಗಲೂ ಅಂತರ್ಜಲ ಉಳಿದುಕೊಂಡಿರುವುದಕ್ಕೆ ಕೆಂಪೇಗೌಡರು ಆಗ ಕಟ್ಟಿಸಿದ ಕೆರೆಗಳೇ ಕಾರಣ ಎನ್ನಲಡ್ಡಿ ಇಲ್ಲ. ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಸಂಪಂಗಿ ಕೆರೆ, ಸಿದ್ದಿಕಟ್ಟೆ, ಕಾರಂಜಿ ಕಟ್ಟೆ ಇತ್ಯಾದಿ ಕೆರೆ ಕಟ್ಟೆಗಳನ್ನು ಕೆಂಪೇಗೌಡರು ನಗರದ ಹಲವೆಡೆ ಕಟ್ಟಿಸಿದರು. ಈ ಕೆರೆಗಳನ್ನು ಉಳಿಸಿಕೊಳ್ಳುವ ಅರ್ಹತೆ ಈಗಿನ ಬೆಂಗಳೂರಿಗರಿಗೆ ಇಲ್ಲವೇನೋ ಎಂಬಂತಾಗಿದೆ.

ಈಗಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಇರುವ ಪ್ರದೇಶದಲ್ಲೇ ಹಿಂದೆ ಧರ್ಮಾಂಬುಧಿ ಕೆರೆ ಇತ್ತು ಎಂದು ನೆನಪಿಸಿಕೊಂಡರೆ ಯಾರಿಗಾದರೂ ದುಃಖ ಒತ್ತರಿಸಿ ಬರುವುದು ಸಹಜ. ಕೆಂಪಾಬುಧಿ ಕೆರೆ ಈಗಿನ ಶ್ರೀನಗರ, ಚಾಮರಾಜಪೇಟೆ ಮಧ್ಯದಲ್ಲಿ ಬರುತ್ತದೆ. ಸ್ವಲ್ಪ ಮಟ್ಟಿಗೆ ಈ ಕೆರೆಗೆ ಜೀವ ಕೊಡಲಾಗಿದೆ.

ಚೆನ್ನಮ್ಮನಕೆರೆ ಸೇರಿದಂತೆ ಹಲವು ಕೆರೆಗಳು ಈಗ ಮರೆಯಾಗಿವೆ.

 ಕೆಂಪೇಗೌಡ ನಾಲ್ಕು ಮಹಾದ್ವಾರ

ಕೆಂಪೇಗೌಡ ನಾಲ್ಕು ಮಹಾದ್ವಾರ

ಬೆಂಗಳೂರು ನಗರದ ಗಡಿಭಾಗವನ್ನು ಗುರುತಿಸಲು ವಿವಿಧ ದಿಕ್ಕುಗಳ ಅಂಚಿನಲ್ಲಿ ಕೆಂಪೇಗೌಡರು ನಾಲ್ಕು ಮಹಾದ್ವಾರಗಳನ್ನು ಕಟ್ಟಿದ್ದಾರೆ. ಉತ್ತರ ದಿಕ್ಕಿಗೆ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿರುವ ಮೇಖ್ರಿ ಸರ್ಕಲ್ ಬಳಿ ಒಂದು ದ್ವಾರ ಇದೆ. ಕೆಂಪಾಬುಧಿ ಕೆರೆ ಬಳಿ ಎರಡನೇ ದ್ವಾರ ಇದೆ. ಲಾಲ್‌ಬಾಗ್ ಹಾಗು ಅಲಸೂರು ಕೆರೆ ಬಳಿ ಮೂರನೇ ಮತ್ತು ನಾಲ್ಕನೇ ಮಹಾದ್ವಾರಗಳಿವೆ. ಹಲಸೂರು ಕೆರೆ ಬಳಿ ಇರುವುದು ಪೂರ್ವ ದಿಕ್ಕಿಗೆ ಗುರುತಾಗಿ.

ಇವಲ್ಲದೇ ಕೆಂಪೇಗೌಡರು ಇನ್ನೂ ಐದು ಸಣ್ಣ ದ್ವಾರಗಳನ್ನೂ ಕಟ್ಟಿದ್ದರು. ವರ್ತೂರು, ಸರ್ಜಾಪುರ, ಕೆಂಗೇರಿ, ಯಶವಂತಪುರ ಮತ್ತು ಕನಕಪುರದಲ್ಲಿ ಈ ಐದು ಬಾಗಿಲುಗಳಿವೆ.

 ಕೆಂಪೇಗೌಡರ ಕೋಟೆ:

ಕೆಂಪೇಗೌಡರ ಕೋಟೆ:

ಈಗಿನ ಕೆಆರ್ ಮಾರುಕಟ್ಟೆ ಬಳಿ ಕೆಂಪೇಗೌಡರು ಮಣ್ಣಿನ ಇಟ್ಟಿಗೆಗಳಿಂದ ಕೋಟೆ ಕಟ್ಟಿಸಿದ್ದರು. ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಈಗಲೂ ಈ ಕೋಟೆಯ ಅವಶೇಷಗಳನ್ನು ಕಾಣಬಹುದು. ಕುತೂಹಲವೆಂದರೆ ಚಿಕ್ಕಪೇಟೆ ಸೇರಿ ಹತ್ತಾರು ಪೇಟೆಗಳು ಈ ಕೋಟೆಯ ಸುತ್ತಮುತ್ತಲೇ ಇವೆ. ಕೆಂಪೇಗೌಡರ ದಕ್ಷ ಆಡಳಿತಕ್ಕೆ ಮತ್ತು ಭದ್ರತಾ ವ್ಯವಸ್ಥೆಗೆ ಇದಕ್ಕಿಂತ ಉತ್ತಮ ನಿದರ್ಶನ ಇನ್ನೊಂದಿರಲಾರದು.

 ಪೇಟೆಗಳು:

ಪೇಟೆಗಳು:

ಈ ಲೇಖನದ ಆರಂಭದಲ್ಲೇ ತಿಳಿಸಲಾದ ವಿವಿಧ ಪೇಟೆಗಳು ಕೆಂಪೇಗೌಡರೇ ಆರಂಭಿಸಿದ್ದು ಎಂಬುದು ವಿಶೇಷ. ರೈತರ ಅಕ್ಕಿ, ರಾಗಿ, ಹತ್ತಿ, ವಿವಿಧ ದವಸ ಧಾನ್ಯಗಳ ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ರಚಿಸಿದರು. ವಿವಿಧ ಸಮುದಾಯಗಳ ಕಸುಬುಗಳಾದ ಮಡಿಕೆ ತಯಾರಿಕೆ, ಕೈಮಗ್ಗ, ಕೈಕುಸುರಿ ಇತ್ಯಾದಿಗಳಿಗೂ ಪ್ರತ್ಯೇಕ ಪೇಟೆಗಳನ್ನು ಕಟ್ಟಿದರು. ದೇಶದ ವಿವಿಧೆಡೆಯಿಂದ ಕರಕುಶಲರನ್ನು ಮತ್ತು ಕಸುಬುದಾರರನ್ನು ಬೆಂಗಳೂರಿಗೆ ಕರೆತಂದು ಇಲ್ಲಿನ ಮಾರುಕಟ್ಟೆ ವಿಸ್ತರಿಸಿದರು.

ಅಂತೆಯೇ, ಬಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ, ನಗರ್ಥಪೇಟೆ, ಕಾಟನ್‌ಪೇಟೆ (ಅರಳೆಪೇಟೆ), ಗಾಣಿಗರ ಪೇಟೆ, ಕುಂಚಿಟಗರ ಪೇಟೆ, ಕುರುಬರ ಪೇಟೆ, ಅಂಚೆಪೇಟೆ, ಹೂವಾಡಿಗರ ಪೇಟೆ, ಮಡಿವಾಳ ಪೇಟೆ, ರಾಗಿಪೇಟೆ ಇತ್ಯಾದಿಯನ್ನು ಈಗಲೂ ಕಾಣಬಹುದು.

(ಒನ್ಇಂಡಿಯಾ ಸುದ್ದಿ)

Recommended Video

ಮೊದಲ ಮಗುವಿನ ನಿರೀಕ್ಷೆಯಲ್ಲಿ Aliya Bhat: ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್ | *Entertainment | OneIndia

English summary
Kempe Gowda who live in 16th century was a chieftain under Vijayanagara empire. He is the one who built Bengaluru with many fortress, marketplaces, temples, lakes tanks bunds etc. Here is a photofeatre special on Nadaprabhu Kempe Gowda's contribution to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X