ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ 'ಅಕ್ರಮ ವಲಸಿಗರ' ಪತ್ತೆ ಕಾರ್ಯ

|
Google Oneindia Kannada News

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಪೌರತ್ವ ಕಾಯ್ದೆಯ (ಸಿಎಎ) ಕುರಿತು ಅನೇಕ ರಾಜ್ಯಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿರುವುದರ ನಡುವೆಯೇ ಕರ್ನಾಟಕದಲ್ಲಿ ಎನ್‌ಆರ್‌ಸಿಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭವಾಗಿದೆ.

ಅಸ್ಸಾಂನಲ್ಲಿ ನಡೆಸಿರುವಂತೆಯೇ ಎನ್‌ಆರ್‌ಸಿಯಡಿ ವಲಸಿಗರನ್ನು ಗುರುತಿಸುವ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಕರ್ನಾಟಕ ಘೋಷಿಸಿದೆ.

ರಾಜ್ಯದಲ್ಲಿ ಎನ್‌ಆರ್‌ಸಿ ಮತ್ತು ಸಿಎಎ ಎರಡನ್ನೂ ಶೀಘ್ರದಲ್ಲಿಯೇ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಲವು ಬಾರಿ ಪುನರುಚ್ಚರಿಸಿದ್ದಾರೆ.

ದೇಶದಾದ್ಯಂತ ಸಿಎಎ ವಿರುದ್ಧದ ಪ್ರತಿಭಟನೆ ತೀವ್ರಗೊಳ್ಳುತ್ತಲೇ ಇದೆ. ಅದರಲ್ಲಿಯೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿಭಟನೆಯ ಕಾವು ಮತ್ತಷ್ಟು ಜೋರಾಗಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸೆಕ್ಷನ್ 144, ಲಾಠಿ ಚಾರ್ಜ್, ಅಂತರ್ಜಾಲ ಸ್ಥಗಿತದಂತಹ ಬಲಪ್ರಯೋಗದ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇಷ್ಟೆಲ್ಲ ಗದ್ದಲಗಳ ನಡುವೆಯೇ ರಾಜ್ಯದಲ್ಲಿ ಕಾಯ್ದೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆಂಗ್ಲ ದೈನಿಕ 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.

ಎನ್‌ಆರ್‌ಸಿ ಮತ್ತು ಸಿಎಎ ಎರಡನ್ನೂ ಜಾರಿಗೊಳಿಸುತ್ತಿರುವ ದೇಶದ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಕೂಡ ಸೇರುವ ಸಾಧ್ಯತೆ ಇದೆ. 2020ರ ಜನವರಿ ಆರಂಭದಲ್ಲಿಯೇ ಇದರ ಜಾರಿಗೆ ಸಂಬಂಧಿಸಿರುವ ಪ್ರಕ್ರಿಯೆಗಳು ಆರಂಭವಾಗಲಿದೆ ಎಂದು ಎಂದು ಹೇಳಲಾಗಿದೆ.

NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿNRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ

ಭಾರತದ ನೆರೆಯ ದೇಶಗಳಿಂದ ಬಂದ ಅಕ್ರಮ ವಲಸಿಗರು ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಎನ್ನುವುದು ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಇದರ ಬಗ್ಗೆ ವಿಧಾನಸಭೆಯಲ್ಲಿ ಬಿಜೆಪಿಯ ಅನೇಕ ಶಾಸಕರು ಹಲವು ಬಾರಿ ಪ್ರಸ್ತಾಪಿಸಿದ್ದರು.

ರಾಜ್ಯದಲ್ಲಿ ತ್ವರಿತ ದಾಖಲೆ ಸಂಗ್ರಹ

ರಾಜ್ಯದಲ್ಲಿ ತ್ವರಿತ ದಾಖಲೆ ಸಂಗ್ರಹ

ಕೇಂದ್ರ ಗೃಹ ಸಚಿವಾಲಯ, ರಾಜ್ಯ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳು ಸೇರಿದಂತೆ ಜಾರಿ ಸಂಸ್ಥೆಗಳು ಬೆಂಗಳೂರು ಮತ್ತು ರಾಜ್ಯದ ಇತರೆ ಭಾಗಗಳಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು, ಮುಖ್ಯವಾಗಿ ಬಾಂಗ್ಲಾದೇಶಿಗರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಅಕ್ರಮ ವಲಸಿಗರು ಭಾರತದ ಅನೇಕ ಕಡೆ ಅಕ್ರಮ ವಲಸಿಗರು ಹಂಚಿ ಹೋಗಿದ್ದರೂ, ವಲಸಿಗರ ಸಮಸ್ಯೆಯ ಹೆಚ್ಚಳವಾಗುತ್ತಿರುವುದು ಮತ್ತು ಅದನ್ನು ಗುರುತಿಸುವ ಕಾರ್ಯವು ಕರ್ನಾಟಕದಲ್ಲಿ ತ್ವರಿತವಾಗಿ ನಡೆಯುತ್ತಿದೆ.

ಒಂದು ಸುತ್ತಿನ ಗುರುತಿಸುವಿಕೆ ಪೂರ್ಣ

ಒಂದು ಸುತ್ತಿನ ಗುರುತಿಸುವಿಕೆ ಪೂರ್ಣ

ಸಂಸತ್‌ನಲ್ಲಿ ಮಸೂದೆಗೆ ಅಂಗೀಕಾರ ಪಡೆಯುವುದರಲ್ಲಿ ಸಫಲವಾದ ಕೇಂದ್ರ ಸರ್ಕಾರ ಕಾಯ್ದೆಯ ಜಾರಿಗೆ ಇನ್ನೂ ಸೂಕ್ತ ಮಾರ್ಗ ನಕಾಶೆ ಸಿದ್ಧಪಡಿಸುವ ಕಾರ್ಯ ಮುಗಿಸಿಲ್ಲ. ಅದರ ನಡುವೆಯೇ ಕರ್ನಾಟಕವು ತನ್ನ ದಕ್ಷಿಣ ಭಾಗದಲ್ಲಿನ ಜಿಲ್ಲೆಗಳಲ್ಲಿ ಹಂಚಿಹೋಗಿರುವ ಅಕ್ರಮ ವಲಸಿಗರನ್ನು ಗುರುತಿಸುವ ಒಂದು ಸುತ್ತಿನ ಕೆಲಸವನ್ನು ಪೂರ್ಣಗೊಳಿಸಿದೆ ಎನ್ನಲಾಗಿದೆ.

ಈ ನಿಯಮಗಳು ಎಲ್ಲರಿಗೂ ತೊಂದರೆ ಕೊಡುವುದಿಲ್ಲ. ಕೆಲವೇ ಸಾವಿರ ಮಂದಿಗೆ ಇದರಿಂದ ಕಷ್ಟ ಉಂಟಾಗಬಹುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆಸಿ ಮಾಧುಸ್ವಾಮಿ ಶನಿವಾರ ಹೇಳಿದ್ದರು. 'ಗುಪ್ತಚರ ವರದಿ ಪ್ರಕಾರ ಇಡೀ ಪ್ರಕ್ರಿಯೆಯು ಹೆಚ್ಚೆಂದರೆ 30,000 ಮಂದಿ ಮೇಲೆ ಪರಿಣಾಮ ಬೀರಬಹುದು' ಎಂದು ತಿಳಿಸಿದ್ದರು.

ಪೌರತ್ವಕಾಯ್ದೆ; ಅಮಿತ್ ಶಾ ರಾಜ್ಯಕ್ಕೆ ಕೊಟ್ಟ ಸೂಚನೆ ಏನು?ಪೌರತ್ವಕಾಯ್ದೆ; ಅಮಿತ್ ಶಾ ರಾಜ್ಯಕ್ಕೆ ಕೊಟ್ಟ ಸೂಚನೆ ಏನು?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ದಂಡು

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ದಂಡು

ಕೇಂದ್ರ ಗೃಹ ಸಚಿವಾಲಯ ಮತ್ತು ಕರ್ನಾಟಕ ಪೊಲೀಸರು ಜಂಟಿಯಾಗಿ ನಡೆಸಿರುವ ಅಧ್ಯಯನ ಪ್ರಕಾರ ಮುಖ್ಯವಾಗಿ ಬಾಂಗ್ಲಾದೇಶ ಮೂಲದವರನ್ನು ಒಳಗೊಂಡಂತೆ ಬೆಂಗಳೂರು ಒಂದರಲ್ಲಿಯೇ 13,000 ಬಾಂಗ್ಲಾದೇಶಿ ಅಕ್ರಮ ವಲಸಿಗರಿದ್ದಾರೆ.

'ಕಳೆದ ಕೆಲವು ತಿಂಗಳುಗಳಲ್ಲಿ ನಗರದಲ್ಲಿ ಅಕ್ರಮ ವಲಸಿಗರ ಪ್ರಮಾಣ ಒಂದರಿಂದ ಎರಡು ಸಾವಿರದಷ್ಟು ಹೆಚ್ಚಾಗಿರಬಹುದು. ಅವರಲ್ಲಿ ಬಹುಪಾಲು ಜನರು ತ್ಯಾಜ್ಯ ಸಂಗ್ರಹ ಮತ್ತು ಮನೆಗೆಲಸ, ಹೊರವಲಯದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಭದ್ರತಾ ಸಿಬ್ಬಂದಿ ಮುಂತಾದ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಮಹಿಳೆಯರು ಮನೆಗೆಲಸಗಳಿಗೆ ಹೆಚ್ಚಾಗಿ ಹೋಗುತ್ತಿದ್ದಾರೆ' ಎಂದು ಜಾರಿ ಸಂಸ್ಥೆಯೊಂದರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪತ್ರಿಕೆ ವಿವರಿಸಿದೆ.

ನಕಲಿ ಗುರುತಿನ ಚೀಟಿ ಹೊಂದಿರುವ ಅಕ್ರಮ ವಲಸಿಗರು

ನಕಲಿ ಗುರುತಿನ ಚೀಟಿ ಹೊಂದಿರುವ ಅಕ್ರಮ ವಲಸಿಗರು

ಅಕ್ರಮ ವಲಸಿಗರು ಬೆಂಗಳೂರು ನಗರದ 28 ಪ್ರದೇಶಗಳಲ್ಲಿ ಹಂಚಿಹೋಗಿದ್ದು, ಎಲ್ಲರ ವ್ಯವಹಾರಗಳನ್ನು ಅವರ 'ನಾಯಕ'ರು ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಪೂರ್ವ ಭಾಗದ ಐದಾರು ಪ್ರದೇಶಗಳಲ್ಲಿಯೇ 1,000-8000ರಷ್ಟು ಬೃಹತ್ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆ. ಅವರೆಲ್ಲರ ಬಳಿಯೂ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳಿವೆ. ಈ ಕಾರ್ಡ್‌ಗಳಲ್ಲಿ ಅವರ ಕಾಯಂ ವಿಳಾಸವು ಅಸ್ಸಾಂನ ವಿವಿಧ ರಾಜ್ಯಗಳ ಕೆಲವೇ ತಾಲ್ಲೂಕುಗಳನ್ನು ತೋರಿಸುತ್ತವೆ. ಇವೆಲ್ಲವೂ ನಕಲಿ ಕಾರ್ಡ್‌ಗಳಾಗಿವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಬೆಂಗಳೂರು ಮಾತ್ರವಲ್ಲ, ಅಕ್ರಮ ವಲಸಿಗರು ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ ಹಾಗೂ ಟೀ ಎಸ್ಟೇಟ್‌ಗಳಲ್ಲಿಯೂ ಹಂಚಿ ಹೋಗಿದ್ದಾರೆ. ನಿಯಮಗಳು ಮತ್ತು ಕಾಯ್ದೆಗಳ ಜಾರಿಯಿಂದ ಕೇಂದ್ರ ಸರ್ಕಾರವು ಪೌರತ್ವ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ' ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಅನಗತ್ಯವಾದ ಭಯ ಏಕೆ?

ಅನಗತ್ಯವಾದ ಭಯ ಏಕೆ?

ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ವಲಸೆ ಬಂದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದನ್ನು ಸಿಎಎ ಪ್ರತಿಪಾದಿಸುತ್ತದೆ. ಆದರೆ ಪೌರತ್ವ ಪರೀಕ್ಷೆಯಲ್ಲಿ ವಿಫಲರಾದ ಜನರನ್ನು ಯಾವ ರೀತಿ ನಡೆಸಿಕೊಳ್ಳುವುದು ಎಂಬ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ.

'ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಜಾರಿಯ ಕುರಿತು ಇನ್ನೂ ಕಾರ್ಯ ನಡೆಯುತ್ತಿದೆ. ಅದಿನ್ನೂ ಅಂತಿಮಗೊಳ್ಳದೆ ಇರುವಾಗ ಮುಸ್ಲಿಮರನ್ನು ಮಾತ್ರ ಗುರಿಯನ್ನಾಗಿರಿಸಿಕೊಂಡು ದಾಖಲೆ ಕೇಳಲಾಗುತ್ತದೆ ಎಂಬ ಅನಗತ್ಯ ಭಯವೇಕೆ?' ಎಂದು ಬೆಂಗಳೂರು ದಕ್ಷಿಣ ವಿಭಾಗದ ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.

'ತಮ್ಮ ಪೌರತ್ವ ಸಾಬೀತುಪಡಿಸುವಲ್ಲಿ ವಿಫಲರಾದ ಯಾರನ್ನೂ ಹೊರಹಾಕುವ ಬಗ್ಗೆ ನಾವಿನ್ನೂ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಆದರೆ ಕೆಲವರು ಈಗಲೇ ತಮ್ಮ ದಾಖಲೆಗಳನ್ನು, ಪೂರ್ವಪರಗಳನ್ನು ಕೇಳಬಾರದು ಎಂದು ಒತ್ತಾಯಿಸಿ ರಸ್ತೆಗಿಳಿದಿದ್ದಾರೆ' ಎಂದು ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ: ಮೋದಿಗೆ 'ಜೈ' ಎಂದ ಸಮೀಕ್ಷಾ ಫಲಿತಾಂಶಪೌರತ್ವ ತಿದ್ದುಪಡಿ ಮಸೂದೆ: ಮೋದಿಗೆ 'ಜೈ' ಎಂದ ಸಮೀಕ್ಷಾ ಫಲಿತಾಂಶ

ಎಲ್ಲ ಜಿಲ್ಲೆಗಳಿಂದ ವರದಿ ಸಂಗ್ರಹ

ಎಲ್ಲ ಜಿಲ್ಲೆಗಳಿಂದ ವರದಿ ಸಂಗ್ರಹ

ನೆರೆಯ ದೇಶಗಳಿಂದ ವಲಸಿಗರು ಬಂದು ನೆಲೆಸಿರುವ ರಾಜ್ಯಗಳಲ್ಲಿ ನಮ್ಮದೂ ಒಂದು. ಅವರ ಅಪರಾಧ ಚಟುವಟಿಕೆಗಳು ಸೇರಿದಂತೆ ಅವರ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇವೆ. ಎಲ್ಲ ಜಿಲ್ಲೆಗಳಿಂದಲೂ ವರದಿ ಪಡೆದುಕೊಂಡ ಬಳಿಕ ನಾವು ವರದಿ ಸಿದ್ಧಪಡಿಸಿ ಅದರ ಬಗ್ಗೆ ಯಾವ ರೀತಿ ನಡೆ ಅನುಸರಿಸುವುದು ಎಂಬುದರ ಕುರಿತು ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸಲಾಗುವುದು ಎಂದು ಕಳೆದ ತಿಂಗಳು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದರು.

ಸೆರೆ ಶಿಬಿರಗಳ ಸ್ಥಾಪನೆಯ ಸುದ್ದಿ

ಸೆರೆ ಶಿಬಿರಗಳ ಸ್ಥಾಪನೆಯ ಸುದ್ದಿ

ಅಕ್ರಮ ವಲಸಿಗರನ್ನು ಬಂಧಿಸಲು ಈಗಾಗಲೇ ಸೆರೆ ಶಿಬಿರಗಳನ್ನು ಸ್ಥಾಪಿಸುವ ಕಾರ್ಯ ನಡೆಯುತ್ತಿದೆ ಎಂದೂ ಹೇಳಲಾಗಿದೆ. ಎಲ್ಲ ನಾಗರಿಕರನ್ನೂ ಪೌರತ್ವ ಪರೀಕ್ಷೆಗೆ ಒಳಪಡಿಸುವ ಇಡೀ ಪ್ರಕ್ರಿಯೆ ಅರ್ಥಹೀನ. ಇದು ಭಾರತದಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡೆಗಣಿಸುತ್ತದೆ. ಕಾಯ್ದೆಯ ದೋಷಗಳನ್ನು ಪರಿಹರಿಸುವುದರ ಬದಲು ಸರ್ಕಾರಗಳು ನೆಲಮಂಗಲದ ಸಮೀಪ ನಿರ್ಮಿಸುತ್ತಿರುವ ಸೆರೆಮನೆಗಳಂತಹ ಕಾರ್ಯಕ್ಕೆ ಹಲವು ಕೋಟಿಗಳನ್ನು ವಿನಿಯೋಗಿಸಲು ಪ್ರಾರಂಭಿಸಿವೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದ್ದರು.

ಆದರೆ ಈ ಕಾರಾಗೃಹಗಳು ಅವಧಿ ಮುಗಿದರೂ ಭಾರತದಲ್ಲಿ ನೆಲೆಸಿರುವ ವಿದೇಶಿಗರನ್ನು ಬಂಧಿಸಿಡುವ ಉದ್ದೇಶ ಹೊಂದಿದೆಯೇ ವಿನಾ, ಎನ್‌ಆರ್‌ಸಿ ಅಥವಾ ಸಿಎಎಗೆ ಸಂಬಂಧವಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರು

ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರು

* ಬೆಳ್ಳಂದೂರು- 400 ಶೆಟ್‌/ಗುಡಿಸಲು, 800-900 ವಲಸಿಗರು.

* ಬೆಳ್ಳಂದೂರು ಕೆರೆ ಸಮೀಪದಲ್ಲಿ- 30 ಶೆಟ್/ಗುಡಿಸಲು, 250 ವಲಸಿಗರು.

* ವರ್ತೂರು- 90 ಶೆಡ್/ಗುಡಿಸಲು, 200 ವಲಸಿಗರು.

* ಮಾರತ್ತಹಳ್ಳಿ ಸಮೀಪದ ಮುನ್ನೆಕೊಳಲು- 1,000 ಶೆಡ್/ಗುಡಿಸಲು, 2,000 ವಲಸಿಗರು.

* ಕುಂದಲಹಳ್ಳಿ ಗೇಟ್- 3,000 ಶೆಡ್/ಗುಡಿಸಲು, 8,000 ವಲಸಿಗರು.

ಕೇಂದ್ರ ಸರ್ಕಾರವು ರಾಜ್ಯ ಪೊಲೀಸರೊಂದಿಗೆ ಸೇರಿ 2018ರ ಡಿಸೆಂಬರ್‌ನಲ್ಲಿ ನಡೆಸಿದ ಅಂದಾಜಿನ ಪ್ರಕಾರ ಬೆಂಗಳೂರಿನ 28 ಪ್ರದೇಶಗಳಲ್ಲಿ ಸುಮಾರು 13,500 ಬಾಂಗ್ಲಾದೇಶದ ಅಕ್ರಮ ವಲಸಿಗರಿದ್ದಾರೆ. ರಾಜ್ಯದ ಬೆಂಗಳೂರು ಮತ್ತು ಇತರೆ ಭಾಗಗಳಲ್ಲಿ ಸುಮಾರು 140 ರೊಹಿಂಗ್ಯಾ ನಿರಾಶ್ರಿತರಿದ್ದಾರೆ. ದಾಖಲೀಕರಣ ಪ್ರಕ್ರಿಯೆಗಾಗಿ ಈಗಾಗಲೇ ಸುಮಾರು 100 ರೊಹಿಂಗ್ಯಾ ನಿರಾಶ್ರಿತರ ಬಯೊಮೆಟ್ರಿಕ್ ವಿವರಗಳನ್ನು ಸರ್ಕಾರ ಈಗಾಗಲೇ ಪಡೆದುಕೊಂಡಿದೆ. (ಕೃಪೆ: ಡೆಕ್ಕನ್ ಹೆರಾಲ್ಡ್ ಅಂಕಿ-ಅಂಶ)

ಪೌರತ್ವದ ನೋಂದಣಿಯ ಹಂತಗಳು

ಪೌರತ್ವದ ನೋಂದಣಿಯ ಹಂತಗಳು

* ಸ್ಥಳೀಯ ನೋಂದಣಿಕಾರರು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಡಿಯಲ್ಲಿ ದಾಖಲಿಸಲಾದ ಕುಟುಂಬ ಮತ್ತು ವ್ಯಕ್ತಿಗಳ ವಿವರಗಳನ್ನು ಪರಿಶೀಲಿಸಿ ಮತ್ತು ತಾಳೆ ಮಾಡಿ ಭಾರತೀಯ ನಾಗರಿಕರ ಸ್ಥಳೀಯ ನೋಂದಣಿಯನ್ನು ಸಿದ್ಧಪಡಿಸಲಾಗುತ್ತದೆ.

* ಅನುಮಾನಾಸ್ಪದ ನಾಗರಿಕರನ್ನು ಗುರುತಿಸಿ ವ್ಯಕ್ತಿ ಅಥವಾ ಕುಟುಂಬಕ್ಕೆ ಮಾಹಿತಿ ನೀಡಿ ನಿರ್ದಿಷ್ಟ ದಾಖಲೆಗಳನ್ನು ಕೇಳಲಾಗುತ್ತದೆ.

* ಪ್ರತಿ ಶಂಕಾಸ್ಪದ ಕುಟುಂಬ ಮತ್ತು ವ್ಯಕ್ತಿಗಳನ್ನು ಜಿಲ್ಲಾ ಅಥವಾ ತಾಲ್ಲೂಕು ಉಪ ನೋಂದಣಿಕಾರರು ವಿಚಾರಣೆ ನಡೆಸುತ್ತಾರೆ.

* 90 ದಿನಗಳ ಒಳಗೆ ಎನ್‌ಆರ್‌ಸಿಯಲ್ಲಿ ಸೇರಿಸಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

* ಭಾರತೀಯ ಪೌರರ ಸ್ಥಳೀಯ ನೋಂದಣಿಯ ಕರಡನ್ನು ಪ್ರಕಟಿಸಲಾಗುತ್ತದೆ. ಅದಕ್ಕೆ ಆಕ್ಷೇಪಗಳು, ಹೆಸರುಗಳ ಸೇರ್ಪಡೆ, ಹೆಸರು ತಿದ್ದುಪಡಿಯಂತಹ ಕಾರ್ಯಗಳನ್ನು ನಡೆಸಲಾಗುತ್ತದೆ.

* ಬದಲಾವಣೆಗಳನ್ನು ಸಕಾರಣಗಳೊಂದಿಗೆ 30 ದಿನಗಳ ಒಳಗೆ ನಡೆಸಿ ಜಿಲ್ಲಾ ನೋಂದಣಿಕಾರರಿಗೆ ಕಳುಹಿಸಬೇಕು.

* ಭಾರತೀಯ ಪೌರರನ್ನು ದಾಖಲಿಸಿದ ಮಾಹಿತಿಗಳನ್ನು ಸ್ಥಳೀಯ ನೋಂದಣಿಕಾರರು ಜಿಲ್ಲಾ ಪೌರರ ನೋಂದಣಿಗಾಗಿ ರವಾನಿಸುತ್ತಾರೆ.

* ಹೆಸರು ಕೈಬಿಟ್ಟ ಕಾರಣ ಮನವಿ ಸಲ್ಲಿಸಿದ ದಿನದಿಂದ 90 ದಿನಗಳ ಒಳಗೆ ವ್ಯಕ್ತಿಯ ಅಹವಾಲನ್ನು ಆಲಿಸುವ ಅವಕಾಶ ನೀಡಿ, ಅವರನ್ನು ಸೇರ್ಪಡೆ ಮಾಡುವ/ಹೊರಗಿಡುವ ಅಂತಿಮ ನಿರ್ಧಾರವನ್ನು ಜಿಲ್ಲಾ ಪೌರತ್ವ ನೋಂದಣಿಯಲ್ಲಿ ನಡೆಸಲಾಗುತ್ತದೆ.

* ವ್ಯಕ್ತಿಯ ಅಹವಾಲಿಗೆ ಒಪ್ಪಿಗೆ ಸಿಕ್ಕರೆ ಅವರು ಕಾನೂನುಬದ್ಧ ಪೌರರಾಗುತ್ತಾರೆ.

* ಅಹವಾಲಿಗೆ ಒಪ್ಪಿಗೆ ಸಿಗದಿದ್ದರೆ ಅವರನ್ನು ಅಕ್ರಮ ವಲಸಿಗ ಎಂದು ತೀರ್ಮಾನಿಸಲಾಗುತ್ತದೆ.

English summary
Identification of illegal immigrants espacially from Bangladesh has completed in 2018 in Karnataka. State is preparing to implement CAA and NRC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X