ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಲೈಮ್ಯಾಕ್ಸ್ ಹಂತದಲ್ಲಿ ಚುನಾವಣೆ : ಕ್ಷಣಕ್ಷಣಕ್ಕೂ ಕುತೂಹಲ

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿರುವ ಕರ್ನಾಟಕದ ವಿಧಾನಸಭೆ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ಸರ್ಕಾರ ರಚಿಸುವವರ್ಯಾರು? ಎಂಬ ಕುತೂಹಲ ಮಾತ್ರ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇದೆ.

ಗಮನಾರ್ಹ ಸಂಗತಿ ಎಂದರೆ ಈ ಬಾರಿಯ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಗೆದ್ದು ಸರ್ಕಾರ ರಚಿಸುವ ವಿಶ್ವಾಸ ಬಿಜೆಪಿಯಲ್ಲೂ ಇದೆ. ಹಾಗೆಯೇ ಕಾಂಗ್ರೆಸ್ ನಲ್ಲೂ ಇದೆ. ಅದೇ ರೀತಿ ತಾವೇ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುವ, ಅಧಿಕಾರದಲ್ಲಿ ಪಾಲುದಾರರಾಗುವ ವಿಶ್ವಾಸ ಜೆಡಿಎಸ್ ನಾಯಕರಲ್ಲೂ ಇದೆ.

ಕರ್ನಾಟಕದ ಜನತೆಯ ತಲೆಗೆ ಇನ್ನಷ್ಟು ಹುಳಬಿಟ್ಟ ಎಕ್ಸಿಟ್ ಪೋಲ್ಕರ್ನಾಟಕದ ಜನತೆಯ ತಲೆಗೆ ಇನ್ನಷ್ಟು ಹುಳಬಿಟ್ಟ ಎಕ್ಸಿಟ್ ಪೋಲ್

ಹೀಗೆ ಮೂರೂ ಪಕ್ಷಗಳಲ್ಲಿ ವ್ಯಕ್ತವಾಗುತ್ತಿರುವ ಆತ್ಮವಿಶ್ವಾಸ ಸಹಜವಾಗಿಯೇ ಫಲಿತಾಂಶ ಹೇಗಿರಲಿದೆ ಅನ್ನುವ ಕುತೂಹಲ ಕೆರಳಿಸಿದೆ. ಅಂದ ಹಾಗೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದೇ ಬಹುತೇಕ ಸರ್ವೇಗಳು ಹೇಳಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ಪಾಳೆಯದಲ್ಲಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತವಾಗುತ್ತಿದೆ.

Exit Poll ಬಗ್ಗೆ ಹೆಚ್ಚು‌ ತಲೆಕೆಡಿಸಿಕೊಳ್ಳಬೇಡಿ : ಸಿದ್ದರಾಮಯ್ಯ ಟ್ವೀಟ್Exit Poll ಬಗ್ಗೆ ಹೆಚ್ಚು‌ ತಲೆಕೆಡಿಸಿಕೊಳ್ಳಬೇಡಿ : ಸಿದ್ದರಾಮಯ್ಯ ಟ್ವೀಟ್

ಶೇಕಡಾ ಎಪ್ಪತ್ತಕ್ಕೂ ಹೆಚ್ಚು ಮತದಾನವಾಗಿರುವುದರಿಂದ ಮತ್ತು ಈ ಬಾರಿಯ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಕ್ರಿಯಗೊಳಿಸಲು ಸಾಧ್ಯವಾಗಿರುವುದರಿಂದ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದು ಕಮಲ ಪಾಳೆಯದ ವಿಶ್ವಾಸ.

ಅತಂತ್ರವಾದರೆ ಯಡಿಯೂರಪ್ಪ ಭವಿಷ್ಯವೂ ಅತಂತ್ರ

ಅತಂತ್ರವಾದರೆ ಯಡಿಯೂರಪ್ಪ ಭವಿಷ್ಯವೂ ಅತಂತ್ರ

ಇಂತಹ ವಿಶ್ವಾಸ ವ್ಯಕ್ತಪಡಿಸುವುದರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಮುಖರು. ಒಂದು ವಿಷಯ ಅವರಿಗೆ ಗೊತ್ತಿದೆ. ಅದೆಂದರೆ, ಅತಂತ್ರ ವಿಧಾನಸಭೆ ಎಂಬುದು ರಚನೆಯಾದರೆ ತಮ್ಮ ರಾಜಕೀಯ ಭವಿಷ್ಯ ಮುಗಿಯುತ್ತದೆ ಅಂತ. ಯಾಕೆಂದರೆ ಬಿಜೆಪಿ-ಜೆಡಿಎಸ್ ಕೈಗೂಡಿಸಿ ಸರ್ಕಾರ ರಚಿಸುವ ಸ್ಥಿತಿ ಬಂದರೆ ಯಡಿಯೂರಪ್ಪ ಅಂಡ್ ಗ್ಯಾಂಗ್ ದೂರವಿರಬೇಕು ಎಂದು ಜೆಡಿಎಸ್ ನಿಶ್ಚಿತವಾಗಿ ಷರತ್ತು ಹಾಕುತ್ತದೆ. ಹಾಗೇನಾದರೂ ಆದರೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ಮುಗಿದಂತೆಯೇ ಎಂದರ್ಥ.

ಯಡಿಯೂರಪ್ಪ ಅವರ ಅತಿಯಾದ ವಿಶ್ವಾಸ

ಯಡಿಯೂರಪ್ಪ ಅವರ ಅತಿಯಾದ ವಿಶ್ವಾಸ

ಹೀಗಾಗಿ ಅವರು ಸಾಧ್ಯವಿರುವಷ್ಟೂ ಮಟ್ಟಿಗೆ ತಮ್ಮ ಬೆಂಬಲಿಗರನ್ನೇ ಕಣಕ್ಕಿಳಿಸಿದ್ದಾರೆ. ಹೀಗೆ ತಮ್ಮ ಬೆಂಬಲಿಗರೇ ಹೆಚ್ಚು ಸ್ಪರ್ಧಿಸಿರುವುದರಿಂದ ಬಿಜೆಪಿ ಸ್ವಯಂಬಲದ ಮೇಲೆ ಗೆಲ್ಲಲಿದೆ ಎಂಬುದು ಯಡಿಯೂರಪ್ಪ ಅವರ ಅತಿಯಾದ ವಿಶ್ವಾಸ. ಆದರೆ ಅವರಿಗಿರುವ ವಿಶ್ವಾಸ ಪಕ್ಷದ ಬಹುತೇಕ ನಾಯಕರಿಗಿಲ್ಲ. ಯಾಕೆಂದರೆ ಪಕ್ಷ ಸ್ವಯಂಬಲದ ಮೇಲೆ ಗೆದ್ದು ಬರುವ ವಾತಾವರಣ ಇರಲಿಲ್ಲ ಮತ್ತು ಯಡಿಯೂರಪ್ಪ ಸ್ವಯಂಬಲದ ಮೇಲೆ ಪಕ್ಷವನ್ನು ಗೆಲ್ಲಿಸಿಕೊಂಡು ಬರುವಂತಾದರೆ ತಮಗ್ಯಾರಿಗೂ ಭವಿಷ್ಯವಿಲ್ಲ ಎಂದು ರಾಜ್ಯ ಬಿಜೆಪಿಯ ಫ್ರಂಟ್ ಲೈನ್ ನಾಯಕರಿಗೆ ಗೊತ್ತು.

ಹೀಗಾಗಿ ಅವರಲ್ಲಿ ಬಹುತೇಕ ಜನ ಪಕ್ಷದ ಗಳಿಕೆ ಎಂಭತ್ತು ಸೀಟುಗಳ ಗಡಿಯೊಳಗಿರಲಿ ಎಂದು ಬಯಸುತ್ತಿದ್ದಾರೆ ಮತ್ತು ಅದೇ ಲೆಕ್ಕಾಚಾರದಲ್ಲಿದ್ದಾರೆ. ಹೀಗೆ ಒಂದು ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದರೆ ರಾಜಕೀಯ ವಲಯದಲ್ಲಿ ಗೊಂದಲ ಮೂಡುವುದು ಸಹಜ.

ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ

ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ

ಇದು ಬಿಜೆಪಿ ಪಾಳೆಯದ ಧ್ವನಿಗಳಾದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕೂಡಾ ಇಂತಹದೇ ಭಿನ್ನ ಭಿನ್ನ ಧ್ವನಿಗಳು ಕೇಳಿ ಬರುತ್ತಿವೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳು ಬಡ ಹಾಗೂ ಕೆಳ ಮಧ್ಯಮ ವರ್ಗದ ಬದುಕನ್ನು ದುಸ್ತರಗೊಳಿಸಿರುವುದರಿಂದ ಈ ಅಂಶ ಕೈ ಪಾಳೆಯಕ್ಕೆ ಪ್ಲಸ್ ಆಗಲಿದೆ ಎಂಬುದು ಸಿಎಂ ಸಿದ್ದರಾಮಯ್ಯ ಅವರ ನಂಬಿಕೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ದೊಡ್ಡ ಮಟ್ಟದಲ್ಲಿ ಒಡೆದು ಹೋಗಿದ್ದವು. ಆದರೆ ಈ ಬಾರಿ ಶೇಕಡಾ ಎಂಭತ್ತರಷ್ಟು ಮತಗಳು ಕಾಂಗ್ರೆಸ್ ಪಕ್ಷದ ಜತೆ ನಿಂತಿವೆ. ಅದೇ ರೀತಿ ಹಿಂದುಳಿದ, ದಲಿತ ಮತಗಳು ಮಾತ್ರವಲ್ಲದೆ, ಗಣನೀಯ ಪ್ರಮಾಣದಲ್ಲಿ ಲಿಂಗಾಯತ ಮತಗಳೂ ತಮಗೆ ದಕ್ಕಿವೆ ಎಂಬುದು ಸಿದ್ದರಾಮಯ್ಯ ಅವರ ನಂಬಿಕೆ. ಹೀಗಾಗಿ ಸ್ವಯಂಬಲದ ಮೇಲೆ, ತೀರಾ ಕಡಿಮೆ ಎಂದರೂ ನೂರಾ ಐದಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದು ನಿಶ್ಚಿತ ಎಂಬುದು ಸಿದ್ದರಾಮಯ್ಯ ಅವರ ನಂಬಿಕೆ. ಕುತೂಹಲದ ಸಂಗತಿ ಎಂದರೆ ಪಕ್ಷದಲ್ಲಿರುವ ಸಿದ್ದರಾಮಯ್ಯ ವಿರೋಧಿಗಳು ಸೇರಿದಂತೆ ಎಲ್ಲರಿಗೂ ಈ ನಂಬಿಕೆ ಇದೆ.

ಸಿದ್ದರಾಮಯ್ಯ ಸೋಲುವ ಸಾಧ್ಯತೆ?

ಸಿದ್ದರಾಮಯ್ಯ ಸೋಲುವ ಸಾಧ್ಯತೆ?

ಆದರೆ ಬಹುತೇಕರ ಲೆಕ್ಕಾಚಾರ ಬೇರೆ ಇದೆ. ಅದೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಸೋಲುವ ಸಾಧ್ಯತೆ ಜಾಸ್ತಿ. ಹಾಗೇನಾದರೂ ಆದರೆ ಖರ್ಗೆ, ಪರಮೇಶ್ವರ್, ಡಿಕೆಶಿ ಸೇರಿದಂತೆ ಹಲವರು ಮುಖ್ಯಮಂತ್ರಿ ಹುದ್ದೆಯ ರೇಸಿಗೆ ಬರಬಹುದು ಎಂಬುದು.

ಅಂದ ಹಾಗೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದಲ್ಲಿ ಕೈ ಪಾಳೆಯ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರೂ ತಮಗೆ ಬಾಹ್ಯ ಬೆಂಬಲ ದಕ್ಕುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಂತರಿಕ ಬೆಂಬಲ ನೀಡಿರುವವರು ಸ್ವತ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಂಬ ಭಾವನೆ ಬಹುತೇಕ ಎಲ್ಲರಲ್ಲೂ ಇದೆ.

ಮೋದಿ ತಮ್ಮ ಆರ್ಥಿಕ ನೀತಿಗಳಿಂದ ಬಡ, ಕೆಳ ಮಧ್ಯಮ ವರ್ಗದ ಮತದಾರರು ಕೈ ಪಾಳೆಯದ ಕಡೆ ವಾಲುವಂತೆ ಮಾಡಿದ್ದರೆ, ಮೇಲ್ನೋಟಕ್ಕೆ ಏನೇ ಹೇಳಿದರೂ ಆಳದಲ್ಲಿ ಯಡಿಯೂರಪ್ಪ ಎರಡು ಬಗೆಯ ತಂತ್ರಗಾರಿಕೆ ಅನುಸರಿಸಿದ್ದಾರೆ. ಅದು ಕಾಂಗ್ರೆಸ್ ಗೆ ಲಾಭವಾಗಲಿದೆ ಎಂಬುದು ಅವರ ವಿಶ್ವಾಸದ ಮಾತು.

ಯಡಿಯೂರಪ್ಪಗೆ ಸಮ್ಮಿಶ್ರ ಸರಕಾರ ಬೇಕಾಗಿಲ್ಲ

ಯಡಿಯೂರಪ್ಪಗೆ ಸಮ್ಮಿಶ್ರ ಸರಕಾರ ಬೇಕಾಗಿಲ್ಲ

ಮೊದಲನೆಯದಾಗಿ ಯಡಿಯೂರಪ್ಪ ಅವರಿಗೆ ಸಮ್ಮಿಶ್ರ ಸರ್ಕಾರ ಬರುವುದು ಇಷ್ಟವಿಲ್ಲ. ಹಾಗೇನಾದರೂ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೆ ತಮ್ಮ ರಾಜಕೀಯ ಭವಿಷ್ಯ ಮುಗಿಯಲಿದೆ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡುವ ವಿಷಯ ಬಂದಾಗ ಶತಾಯ ಗತಾಯ ವರಿಷ್ಠರ ಮೇಲೆ ಒತ್ತಡ ಹೇರಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಟಿಕೆಟ್ ಗಳ ವಿಷಯ ಬಂದಾಗ ಕಾಂಗ್ರೆಸ್ ಗೆ ಅನುಕೂಲಕರವಾಗುವ ರೀತಿ ವರ್ತಿಸಿದ್ದಾರೆ. ಅಂದರೆ ಕಾಂಗ್ರೆಸ್ ಕ್ಯಾಂಡಿಡೇಟ್ ಗಳನ್ನು ಸೋಲಿಸಲು ಸಾಧ್ಯವಾಗದವರಿಗೆ ಟಿಕೆಟ್ ನೀಡಿದ್ದಾರೆ ಎಂಬುದು ಚಲಾವಣೆಯಲ್ಲಿರುವ ಮಾತು. ಹೀಗಾಗಿ ಇವತ್ತು ತನ್ನ ಗೆಲುವಿನ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಯಾವ ರೀತಿಯ ವಿಶ್ವಾಸ ಇಟ್ಟುಕೊಂಡಿದೆಯೋ ಅದನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ.

ಜೆಡಿಎಸ್ ಗೆ ಮಾಡು ಇಲ್ಲವೆ ಮಡಿ

ಜೆಡಿಎಸ್ ಗೆ ಮಾಡು ಇಲ್ಲವೆ ಮಡಿ

ಈ ಮಧ್ಯೆ ಜೆಡಿಎಸ್ ಪಕ್ಷಕ್ಕೆ ಇದು ಮಾಡು ಇಲ್ಲವೇ ಮಡಿ ಲೆವೆಲ್ಲಿನ ಚುನಾವಣೆ. ಈ ದೃಷ್ಟಿಯಿಂದ ಅದು ಗರಿಷ್ಠ ಶ್ರಮ ಹಾಕಿರುವುದು ನಿಜ. ಯಾಕೆಂದರೆ ಪಕ್ಷದ ವರಿಷ್ಠ ದೇವೇಗೌಡರಿಗೆ ಎಂಭತ್ತಾರು ವರ್ಷ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯ ತನಕ ಅವರು ಸಕ್ರಿಯ ರಾಜಕಾರಣ ಮಾಡುತ್ತಾರೆ ಅನ್ನುವುದು ಕಷ್ಟ. ಇದರ ಕುರುಹಾಗಿಯೇ ಈ ಸಲದ ಚುನಾವಣೆಯಲ್ಲಿ ಕುಮಾರಸ್ವಾಮಿ ಹೆಸರಿನ ಮೇಲೆ ಹಳೆ ಮೈಸೂರು ಭಾಗದ ಗಣನೀಯ ಪ್ರಮಾಣದ ಮತದಾರರು ಜೆಡಿಎಸ್ ಗೆ ಬೆಂಬಲ ನೀಡಿದರು.

ಆದರೆ ಇಂತಹ ಬೆಂಬಲವನ್ನು ಪಡೆದ ಜೆಡಿಎಸ್ ಕನಿಷ್ಠ ನಲವತ್ತರಿಂದ ನಲವತ್ತೈದು ಸೀಟುಗಳನ್ನು ಪಡೆದರೆ ಸಮ್ಮಿಶ್ರ ಸರ್ಕಾರದ ಕನಸು ಕಾಣಲು ಸಾಧ್ಯ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಅಥವಾ ಬಿಜೆಪಿಯ ಗಳಿಕೆ ಅರವತ್ತು-ಅರವತ್ತೈದಕ್ಕೆ ಸೀಮಿತಗೊಂಡರೆ ಸಮ್ಮಿಶ್ರ ಸರ್ಕಾರದ ಬದಲು ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯುತ್ತದೆ.

ಹಾಗಾಗಬಾರದು ಎಂಬ ಕಾರಣಕ್ಕಾಗಿಯೇ ಜೆಡಿಎಸ್ ಈ ಸಲ ನೂರೈವತ್ತು ಸೀಟುಗಳ ಮೇಲೆ ಗಮನವಿಟ್ಟು ಆ ಪೈಕಿ ಕನಿಷ್ಠ ಎಂಭತ್ತು ಸೀಟುಗಳನ್ನು ಗೆಲ್ಲಲು ಯತ್ನಿಸಿದೆ. ಇದರ ಫ್ರತಿಫಲವಾಗಿ ಅದು ನಲವತ್ತು ಸೀಟುಗಳ ಗಡಿ ದಾಟಿದರೆ ಅದೇ ಕಾಲಕ್ಕೆ ಬಿಜೆಪಿ ಎಪ್ಪತ್ತೈದು ಸೀಟುಗಳ ಗಡಿಗೆ ಬಂದರೆ ಸಮ್ಮಿಶ್ರ ಸರ್ಕಾರ ರಚನೆಯಾಗಬಹುದು ಎಂಬ ವಿಶ್ವಾಸ ಜೆಡಿಎಸ್ ನಲ್ಲೂ ಇದೆ.

ಎಚ್ಡಿಕೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರ ರಹಸ್ಯ, ಇದೀಗ ಬಯಲು! ಎಚ್ಡಿಕೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರ ರಹಸ್ಯ, ಇದೀಗ ಬಯಲು!

ಇತರ ಚುನಾವಣೆಗಳ ಮೇಲೆ ಪರಿಣಾಮ ಬೀರುವುದೆ?

ಇತರ ಚುನಾವಣೆಗಳ ಮೇಲೆ ಪರಿಣಾಮ ಬೀರುವುದೆ?

ಒಂದು ವೇಳೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದರೆ ಕೈ ಪಾಳೆಯದ ಆತ್ಮವಿಶ್ವಾಸ ನೆಲ ಕಚ್ಚುವುದು ಗ್ಯಾರಂಟಿ. ಯಾಕೆಂದರೆ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ನಡೆಯಲಿರುವ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಘಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಯನ್ನು ಎದುರಿಸುವ ಮುನ್ನವೇ ಅದು ಕರ್ನಾಟಕ ಎಂಬ ಯುದ್ದ ನೆಲೆಯನ್ನು ಕಳೆದುಕೊಂಡಂತಾಗುತ್ತದೆ.

ಈ ಅರಿವು ಇರುವುದರಿಂದ ಬೇರೆ ಪಕ್ಷಗಳಿಗೆ ಹೋಲಿಸಿದರೆ ಕೈ ಪಾಳೆಯದಲ್ಲಿ ಭಿನ್ನಾಭಿಪ್ರಾಯಗಳ ಪ್ರಮಾಣ ಕಡಿಮೆಯಾದರೂ ನಿರೀಕ್ಷೆ, ಆತಂಕ ಇದ್ದೇ ಇದೆ. ಎಲ್ಲ ಪಕ್ಷಗಳಲ್ಲೂ ಈ ರೀತಿಯ ನಿರೀಕ್ಷೆ, ಆತಂಕಗಳಿರುವುದರಿಂದಲೇ ಫಲಿತಾಂಶದ ಬಗ್ಗೆ ಹೈ ವೋಲ್ಟೇಜ್ ನಿರೀಕ್ಷೆ ಕಾಣುತ್ತಿದೆ. ಹೀಗಾಗಿ ಯಾವ್ಯಾವ ಅಂಶಗಳು ಚುನಾವಣೆಯಲ್ಲಿ ಕೆಲಸ ಮಾಡಿವೆ? ಯಾವ್ಯಾವ ಒಳ ಒಪ್ಪಂದಗಳು ಕೆಲಸ ಮಾಡಿವೆ? ಅನ್ನುವುದನ್ನು ನಿಕ್ಕಿಗೊಳಿಸಿಕೊಳ್ಳಲು ಮಂಗಳವಾರದವರೆಗೆ ಕಾಯಲೇಬೇಕು.

English summary
Karnataka Assembly Elections has reached the climax stage, as no possibility of any party getting clear majority. Already permutations and combinations have started. Ultimately who is going to form the government in Karnataka? The results will be announced on 15th May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X