ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಎಲೆಕ್ಷನ್ ಎಂಬ 18 ರೀಲಿನ ಸಿನಿಮಾ, ಏನೆಲ್ಲ ತೋರಿಸ್ಬಿಟ್ರು!

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಜೂನ್ 9: ಒಂದು ರಾಜ್ಯದ ವಿಧಾನಸಭೆ ಚುನಾವಣೆ ಅಂದರೆ ಏನೆಲ್ಲ ಆಗಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಇರುತ್ತದೆ. ಇನ್ನು ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತು ಇದೆ. ಕರ್ನಾಟಕದ ರಾಜಕೀಯವನ್ನು ಗಮನಿಸಿದರೆ ಎಲ್ಲವೂ ಆಗಿ ಹೋಗಿರುವುದನ್ನು ನಾವು ಕಾಣಬಹುದಾಗಿದೆ.

ಚುನಾವಣೆ ಮುನ್ನ ಮತ್ತು ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಇಲ್ಲಿನ ರಾಜಕೀಯ ಎಂತಹ ಅಸಹ್ಯವನ್ನು ಸೃಷ್ಟಿಸಿ, ಮತ ಹಾಕಿದ ಮತದಾರರಿಗೆ ವಾಕರಿಕೆ ಬರುವಂತೆ ಮಾಡಿರುವುದು ವಿಷಾದದ ಸಂಗತಿಯಾಗಿದೆ. ಚುನಾವಣೆಗೆ ಮುನ್ನ ಟಿಕೆಟ್ ಗೆ ಹೋರಾಟ, ಆ ಬಳಿಕ ಗೆಲುವಿಗಾಗಿ ಹೋರಾಟ. ಇದೀಗ ಸಚಿವ ಸ್ಥಾನಕ್ಕಾಗಿ ಹೋರಾಟ.

ಅದು ಸಿಕ್ಕ ಬಳಿಕ ತಾನು ಕೇಳಿದ್ದು ಕೊಟ್ಟಿಲ್ಲ ಎಂಬ ಕಿತ್ತಾಟ- ಕರ್ನಾಟಕವು ಹೈಡ್ರಾಮಾ ಕಾಣುತ್ತಿದ್ದು, ಎಲ್ಲವನ್ನೂ ನೋಡುವ ದೌರ್ಭಾಗ್ಯ ಇಲ್ಲಿನ ಮತದಾರರದ್ದಾಗಿದೆ. ಬಿಜೆಪಿಯನ್ನು ಹೊರಗಿಟ್ಟು ಜಾತ್ಯತೀತ ನಿಲುವಿನ ಸರಕಾರವನ್ನು ರಾಜ್ಯದಲ್ಲಿ ತರಲು ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಯಿತು.

ಹೈಕಮಾಂಡ್‌ ವಿರುದ್ಧವೇ ತೊಡೆತಟ್ಟಿರುವ ಅತೃಪ್ತ ಕಾಂಗ್ರೆಸ್‌ ಶಾಸಕರುಹೈಕಮಾಂಡ್‌ ವಿರುದ್ಧವೇ ತೊಡೆತಟ್ಟಿರುವ ಅತೃಪ್ತ ಕಾಂಗ್ರೆಸ್‌ ಶಾಸಕರು

ಆದರೆ, ಅದರಿಂದ ಸೃಷ್ಟಿಯಾದ ಮೈತ್ರಿ ಸರಕಾರಕ್ಕೆ ಸದ್ಯದ ಸ್ಥಿತಿಯಲ್ಲಿ ನಿಖರವಾದ ಆಡಳಿತ ನಡೆಸಲು ಸಾಧ್ಯವಾಗದೆ ಪರದಾಡುತ್ತಿದೆ.

ಸಿದ್ದರಾಮಯ್ಯ ಮಾತು ಕೇಳುವ ಸ್ಥಿತಿಯಲ್ಲಿ ನಾಯಕರಿಲ್ಲ

ಸಿದ್ದರಾಮಯ್ಯ ಮಾತು ಕೇಳುವ ಸ್ಥಿತಿಯಲ್ಲಿ ನಾಯಕರಿಲ್ಲ

ಎರಡು ಪಕ್ಷಗಳ ನಡುವೆ ಬಾಂಧವ್ಯ ವೃದ್ಧಿಸಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಉಂಟಾಗದಂತೆ ಆಡಳಿತ ನಡೆಸಲು ಸಾಧ್ಯವಾಗುವಂತೆ ರಚಿಸಿದ ಸಮನ್ವಯ ಸಮಿತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅವರು ಮೌನಕ್ಕೆ ಶರಣಾಗಿದ್ದಾರೆ ಎನ್ನುವುದಕ್ಕಿಂತಲೂ ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ನಾಯಕರು ಇಲ್ಲದಿರುವುದು ಪರಿಸ್ಥಿತಿ ಈ ರೀತಿ ವಿಷಮವಾಗಲು ಕಾರಣವಾಗಿದೆ. ಕಾಂಗ್ರೆಸ್ ಸಾಮೂಹಿಕ ನಾಯಕತ್ವ ಹೊಂದಿದ ಪಕ್ಷ ಎಂದು ಹೇಳುತ್ತಾ ಬಂದಿತ್ತಾದರೂ ಅದನ್ನು ಮುರಿದು ತಾನೇ ನಾಯಕ, ತನ್ನ ನೇತೃತ್ವದಲ್ಲೇ ಚುನಾವಣೆ ನಡೆಯುತ್ತಿದ್ದು, ಮುಂದೆ ಚುನಾವಣೆ ಬಳಿಕ ಕಾಂಗ್ರೆಸ್ ಗೆಲುವುದು ಖಚಿತವಾಗಿದ್ದು, ನಾನೇ ಮುಂದೆಯೂ ಮುಖ್ಯಮಂತ್ರಿ ಎಂಬ ಆತ್ಮವಿಶ್ವಾಸದಲ್ಲಿ ಬೀಗಿದ್ದ ಸಿದ್ದರಾಮಯ್ಯ ರಾಜ್ಯದ ನಾಯಕರನ್ನು ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ.ಪರಮೇಶ್ವರ್ ಅವರನ್ನೇ ಬದಿಗೆ ತಳ್ಳಿದ್ದರು. ಆದರೆ ಚುನಾವಣೆ ನಂತರ ಆಗಿದ್ದೇ ಬೇರೆ. ಕಾಂಗ್ರೆಸ್ ನ ಐಕಾನ್ ನಂತೆ ಮಿಂಚಿದ ಸಿದ್ದರಾಮಯ್ಯ ಮೂಲೆ ಸೇರಿದ್ದರು.

ಕುಮಾರಸ್ವಾಮಿ ಹುಡುಕಿಕೊಂಡು ಬರುವಂತೆ ಮಾಡಿದ ಪಾಟೀಲ್

ಕುಮಾರಸ್ವಾಮಿ ಹುಡುಕಿಕೊಂಡು ಬರುವಂತೆ ಮಾಡಿದ ಪಾಟೀಲ್

ಚುನಾವಣೆ ಬಳಿಕ ಡಾ.ಜಿ.ಪರಮೇಶ್ವರ್ ಚಿಗಿತು ನಿಂತುಬಿಟ್ಟರು. ಕುಮಾರಸ್ವಾಮಿ ಅವರೊಂದಿಗೆ ಸರಕಾರ ರಚಿಸಲು ತಮ್ಮ ತಂತ್ರವನ್ನು ಬಳಸಿದ್ದರು. ಆ ಮೂಲಕ ಮುಖ್ಯವಾಹಿನಿಗೆ ಬಂದಿದ್ದರು. ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಹಿಡಿಯುವ ಆತುರದಲ್ಲಿದ್ದ ಪರಮೇಶ್ವರ್ ಗೆ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವ ಇರಾದೆಯೂ ಇತ್ತು. ಸದ್ಯದ ಸ್ಥಿತಿಯಲ್ಲಿ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಅತೃಪ್ತರಾಗಿದ್ದಾರೆ. ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದ ಎಂ.ಬಿ.ಪಾಟೀಲ್ ಆಕ್ರೋಶದ ಬಾಂಬ್ ಸಿಡಿಸಿದ್ದು, ತಮ್ಮೊಂದಿಗೆ 20 ಶಾಸಕರಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಸಿಎಂ ಕುಮಾರಸ್ವಾಮಿಯೇ ತಮ್ಮನ್ನು ಹುಡುಕಿಕೊಂಡು ಬರುವಂತೆ ಮಾಡಿದ್ದಾರೆ.

ಜೆಡಿಎಸ್ ನಿಂದ ಸಚಿವರಾದ ದುಃಖ ಮತ್ತೊಂದು ಬಗೆ

ಜೆಡಿಎಸ್ ನಿಂದ ಸಚಿವರಾದ ದುಃಖ ಮತ್ತೊಂದು ಬಗೆ

ಕಾಂಗ್ರೆಸ್ ಶಾಸಕರ ಪೈಕಿ ಹಲವರಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಆಕ್ರೋಶವಿದ್ದರೆ, ಇತ್ತ ಜೆಡಿಎಸ್ ನಲ್ಲಿ ತಮಗೆ ಸರಿಸಮಾನವಾದ ಖಾತೆ ಸಿಕ್ಕಿಲ್ಲ ಎಂಬ ನೋವು ಕಾಡುತ್ತಿದ್ದು, ಅದು ಆಕ್ರೋಶವಾಗಿ ಹೊರಬರುತ್ತಿದೆ. 20 ವರ್ಷಗಳಿಂದ ಜೆಡಿಎಸ್ ನಲ್ಲಿದ್ದು, ಸಂಸದರಾಗಿ ಇದೀಗ ಶಾಸಕರಾಗಿರುವ ಸಿ.ಎಸ್.ಪುಟ್ಟರಾಜು ಮತ್ತು ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ಗಮನಸೆಳೆದ ಜಿ.ಟಿ.ದೇವೇಗೌಡರು ಈಗ ಗರಂ ಆಗಿದ್ದಾರೆ. ತಮಗೆ ಹೊಂದಿಕೆಯಾಗದ ಖಾತೆಗಳನ್ನು ನೀಡಲಾಗಿದೆ ಎಂಬ ಅಸಮಾಧಾನ ಅವರದ್ದಾಗಿದ್ದು, ಆ ಸಚಿವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

ಜೆಡಿಎಸ್ ನಿಂದ ಹೊರಬಂದ ರೆಬೆಲ್ ಸ್ಟಾರ್ ಗಳ ಗತಿ- ಸ್ಥಿತಿ ಏನು?

ಜೆಡಿಎಸ್ ನಿಂದ ಹೊರಬಂದ ರೆಬೆಲ್ ಸ್ಟಾರ್ ಗಳ ಗತಿ- ಸ್ಥಿತಿ ಏನು?

ಇನ್ನು ಈ ಎಲ್ಲದರ ನಡುವೆ ಜೆಡಿಎಸ್ ನಿಂದ ಬಂಡಾಯ ಎದ್ದು ಕಾಂಗ್ರೆಸ್ ಗೆ ಹೋಗಿದ್ದವರ ಕಥೆ ಅಯೋಮಯವಾಗಿದೆ. ಗೆದ್ದ ಜಮೀರ್ ಅಹಮದ್ ಸಚಿವರಾಗಿದ್ದಾರೆ. ಉಳಿದಂತೆ ಸೋತ ಘಟಾನುಘಟಿ ನಾಯಕರು ಮೂಲೆ ಗುಂಪಾಗಿದ್ದಾರೆ. ಯಾರನ್ನು ದ್ವೇಷಿಸಿ, ಸಡ್ಡು ಹೊಡೆದು ಹೊರಹೋದರೋ ಅವರೊಂದಿಗೆ ಸೇರಿ ಕಾಂಗ್ರೆಸ್ ಸರಕಾರ ರಚನೆ ಮಾಡಿದೆ. ಹೀಗಿರುವಾಗ ಬಂಡಾಯ ಶಾಸಕರಾಗಿ ಬಂದು ಕಾಂಗ್ರೆಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡು ಇದೀಗ ಸೋತು ಸುಣ್ಣವಾಗಿರುವ ನಾಯಕರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆಯೇ ಚಿಂತಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯಕ, ರಮೇಶ್ ಬಂಡೆಸಿದ್ದೇಗೌಡ, ಇಕ್ಬಾಲ್ ಅನ್ಸಾರಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಹೇಗಿರುತ್ತವೆ ಎಂಬುದು ಕುತೂಹಲಕಾರಿಯಾಗಿದೆ.

English summary
Karnataka assembly elections 2018 witnessed all the entertainment like cinema. After the result also JDS- Congress coalition government struggling to maintain unity in the party. Here is analysis of current political scenario.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X