• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕ್ಷಣ ಇಲಾಖೆ ಯಡವಟ್ಟು ನಿರ್ಣಯಗಳು, ಮಕ್ಕಳ ಶೈಕ್ಷಣಿಕ ಭವಿಷ್ಯದ ಸವಾಲು

By ಎಸ್. ಮುರಳಿ ಮೋಹನ್
|

ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ವಿಚಾರವಾಗಿ ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ತೆಗೆದುಕೊಳ್ಳುತ್ತಿರುವ ಅವೈಜ್ಞಾನಿಕ ಕ್ರಮಗಳ ಬಗ್ಗೆ ಎಸ್. ಮುರಳಿ ಮೋಹನ್ ಅವರು ಗಮನ ಸೆಳೆದಿದ್ದಾರೆ. ಟೀಚರ್ಸ್ ಇನ್ಷಿಯೇಟಿವ್ ಫಾರ್ ಎಜುಕೇಷನಲ್ ಚೇಂಜ್ (ಶೈಕ್ಷಣಿಕ ಪರಿವರ್ತನೆಯತ್ತ ಶಿಕ್ಷಕರು) ಫೋರಂ ಸಂಯೋಜಕರೂ ಆಗಿರುವ ಲೇಖಕರು ಕೆಲವು ಗಂಭೀರ ಪ್ರಶ್ನೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು, ಈ ಲೇಖನದಲ್ಲಿ ಶಿಕ್ಷಣ ಇಲಾಖೆಯ ನಿರ್ಧಾರಗಳಲ್ಲಿ ಇರುವ ಲೋಪಗಳನ್ನು ಗುರುತಿಸಿ, ಪರಿಹಾರವನ್ನೂ ಸೂಚಿಸಿದ್ದಾರೆ.

   ಶಿವಮೊಗ್ಗದ ಸೊರಬದಲ್ಲಿ ಮದುವೆಯಲ್ಲಿ ಭಾಗಿಯಾಗಿದ್ದ ಕೊರೊನ ಸೋಂಕಿತೆ | Kumar bangarappa | Shimoga

   ****

   ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿ ಗೊಂದಲದ ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದು ಸಹಜವಾಗಿ ಆಶ್ಚರ್ಯಕ್ಕೆ ಕಾರಣವಾಗಿದ್ದು, ಹಾಸ್ಯಾಸ್ಪದ ಅಂತಲೂ ಎನಿಸಿದೆ. ಈಗ ಚರ್ಚೆಯಾಗುತ್ತಿರುವ ವಿಷಯ, ಗೊಂದಲಗಳು, ಅವುಗಳಿಗೆ ಕಾರಣ ಮತ್ತು ಪರಿಹಾರಗಳ ಬಗ್ಗೆ ವಿಶ್ಲೇಷಿಸೋಣ.

   ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

   ಮೊದಲನೆಯದಾಗಿ ವಿದ್ಯಾರ್ಥಿಯೊಬ್ಬ ಶಿಕ್ಷಣವನ್ನು ಪಡೆದ ಮೇಲೆ ಶಿಕ್ಷಣ ನೀಡಿದ ಶಿಕ್ಷಕ/ಸಂಸ್ಥೆಯು ವಿದ್ಯಾರ್ಥಿಯು ಕಲಿಕೆಯಿಂದ ಪಡೆದ ಪ್ರಗತಿಯ ಬಗ್ಗೆ ಪರಾಮರ್ಶೆ ಮಾಡುವುದು ಶಿಕ್ಷಕ/ ಶಿಕ್ಷಣ ಸಂಸ್ಥೆಯ ಕರ್ತವ್ಯ. ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷಾರಂಭದಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುವುದಾಗಿ ಘೋಷಿಸಿತು. ಆ ನಂತರ ಪರೀಕ್ಷೆಯಲ್ಲಿ ಯಾರನ್ನೂ ಅನುತ್ತೀರ್ಣಗೊಳಿಸುವುದಿಲ್ಲ ಎಂದು ಪ್ರಕಟಿಸಿತು. ಈ ದ್ವಂದ್ವ ನೀತಿ ಎಷ್ಟರ ಮಟ್ಟಿಗೆ ಸರಿ?

   Karnataka Education Department Fickle Decisions And Impact on Students Future

   ಇದು ಕೊರೊನಾ ಮುಂಚಿನ ಕಥೆಯಾಯಿತು. ಇನ್ನು ಕೊರೊನಾ ಮತ್ತು ಲಾಕ್ ಡೌನ್ ಪ್ರಾರಂಭವಾದಾಗ ಆತುರವಾಗಿ 7, 8, 9ನೇ ತರಗತಿಗಳಿಗೆ ಪರೀಕ್ಷೆಯೇ ಇಲ್ಲದೇ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಘೋಷಿಸಲು ಅಷ್ಟೊಂದು ತರಾತುರಿ ಮಾಡಿದ್ದು ಏಕೆ? ಇಲ್ಲಿ ಆ ತರಗತಿಗಳ ಮಕ್ಕಳ ಕಲಿಕೆಗೆ ಪೋಷಕರು, ಶಿಕ್ಷಕರು, ತೆಗೆದುಕೊಂಡ ಪರಿಶ್ರಮಕ್ಕೆ ಬೆಲೆಯೇ ಇಲ್ಲವೇ?

   10ನೇ ತರಗತಿಯ ಬಹುತೇಕ ಮಕ್ಕಳು ಹೆಸರನ್ನೂ ಬರೆಯಲಾರರು

   1ರಿಂದ 9 ರವರೆಗೆ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಅನುತ್ತೀರ್ಣರನ್ನಾಗಿ ಮಾಡಬಾರದು ಎಂಬ ಇಲಾಖೆಯ ಅದೇಶದ ಫಲವಾಗಿ ಇಂದು 10ನೇ ತರಗತಿಯ ಬಹುತೇಕ ಮಕ್ಕಳು ತಮ್ಮದೇ ಹೆಸರು, ತಮ್ಮ ಗ್ರಾಮ ಹಾಗೂ ಶಾಲೆಯ ಹೆಸರನ್ನೂ ಬರೆಯುವಲ್ಲಿ ವಿಫಲರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇನ್ನು ಪರೀಕ್ಷೇಯನ್ನೇ ಮಾಡದೆ ಹೋದರೆ ಮಕ್ಕಳ ಮೌಲ್ಯಮಾಪನ ಆಗುವುದಾದರೂ ಹೇಗೆ?

   ಮೈಕ್ರೋಸಾಫ್ಟ್ ಜೊತೆ ಒಪ್ಪಂದ, ಡಿಪ್ಲೊಮಾಗೆ ಹೊಸ ರೂಪ: ಡಿಸಿಎಂ

   ಇನ್ನು 9ನೇ ತರಗತಿಯ ಮಕ್ಕಳನ್ನು ಪರೀಕ್ಷೆ ಇಲ್ಲದೆಯೇ ಪಾಸು ಮಾಡಿದ ನಿರ್ಧಾರದಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸೂಕ್ತ ಸಿದ್ಧತೆ ಇಲ್ಲದ 10ನೇ ತರಗತಿ ಮಕ್ಕಳು ಪಡಬಹುದಾದ ಬವಣೆಯನ್ನೂ, ಇನ್ನು ಶಿಕ್ಷಕರು ಅವರಿಂದ ಫಲಿತಾಂಶವನ್ನು ತರಲು ಪಡಬಹುದಾದ ಕಷ್ಟವನ್ನೂ ಊಹಿಸುವುದಕ್ಕೆ ಕೂಡ ಅಸಾಧ್ಯ.

   ಈ ಗೊಂದಲ ಆಗದಂತೆ ಕೊರೊನಾ ಸಂಧರ್ಭದಲ್ಲಿ ಯಾವ ಕ್ರಮವನ್ನು ಕೈಗೊಳ್ಳಬಹುದಿತ್ತು ಎಂಬುದು ಸಹಜ ಪ್ರಶ್ನೆ.

   7, 8 ಮತ್ತು 9ನೇ ತರಗತಿ ಪರೀಕ್ಷೆ ಮುಂದೂಡಬಹುದಿತ್ತು

   7, 8 ಮತ್ತು 9ನೇ ತರಗತಿಯ ಮಕ್ಕಳಿಗೆ ಮತ್ತು ಪೋಷಕರಿಗೆ ಶಿಕ್ಷಣ ಇಲಾಖೆ ಸಂದೇಶ ಕಳುಹಿಸಬಹುದಿತ್ತು. "ಈ ಸಾಂಕ್ರಾಮಿಕ ಕಾಯಿಲೆ ಪರಿಸ್ಥಿತಿಯಲ್ಲಿ ಪರೀಕ್ಷೆಗಳನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷಾರಂಭದಲ್ಲಿ ಮುಂದಿನ ತರಗತಿಗೆ ಪ್ರವೇಶವನ್ನು ನೀಡುವಾಗ ಶಾಲೆಯಲ್ಲಿ ಪರೀಕ್ಷೆ ಮಾಡಿ, ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು" ಎಂದು ತಿಳಿಸಬಹುದಿತ್ತು.

   ಕರ್ನಾಟಕ ಸಿಇಟಿ 2020 ದಿನಾಂಕ, ವೇಳಾಪಟ್ಟಿ ಪ್ರಕಟ

   ಆಗ ವರ್ಷದ ಕಲಿಕೆಗೆ ಮೌಲ್ಯಮಾಪನ ಆಗುತ್ತದೆ ಎಂಬ ಸಮಾಧಾನವಾದರೂ ಪರಿಶ್ರಮ ಪಟ್ಟಂಥ ಪೋಷಕರಿಗೆ ಮತ್ತು ಶಿಕ್ಷಕ ವೃಂದಕ್ಕೆ ದೊರಕುತ್ತಿತ್ತು. ಇನ್ನು 10ನೇ ತರಗತಿಯ ಪರೀಕ್ಷೆಯನ್ನು ಅನಿವಾರ್ಯವಾಗಿ ಮುಂದೂಡಲೇ ಬೇಕಾಯಿತು. ಆದರೆ ಮುಂದೂಡಿದ ಕಾರಣ ಮತ್ತು ಅದರ ಅವಶ್ಯಕತೆ ಎಲ್ಲರೂ ಅರಿತಿರುವುದರಲ್ಲಿ ಸಂದೇಹವೇ ಇಲ್ಲ.

   ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ

   ಕಲಿಕೆಯಲ್ಲಿ ಅಸಕ್ತಿ ಹೊಂದಿದ ಮಕ್ಕಳ ಮನಸ್ಸು ಸೂಕ್ಷ್ಮಾತಿಸೂಕ್ಷ್ಮವಾಗಿ ಇರುತ್ತದೆ. ಅನೇಕ ಮಕ್ಕಳು ಶಿಕ್ಷಕರು, ಮಾರ್ಗದರ್ಶಕರ ಸಲಹೆಗಳನ್ನು ವೇದವಾಕ್ಯದಂತೆ ಪರಿಪಾಲಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಮಕ್ಕಳು ಎಲ್ಲಾ ಮಾರ್ಗದರ್ಶನವನ್ನೂ ಶಿಕ್ಷಕರಿಂದಲೇ ಪಡೆದು ಚಾಚೂ ತಪ್ಪದೇ ಪರಿಪಾಲಿಸುವವರಾಗಿರುತ್ತಾರೆ.

   ಎಷ್ಟೋ ಮಕ್ಕಳು ಪರೀಕ್ಷೆಯ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನಕ್ಕಾಗಿ ಸಂಪೂರ್ಣವಾಗಿ ಶಿಕ್ಷಕರನ್ನೇ ಅವಲಂಬಿಸಿರುತ್ತಾರೆ. ಪ್ರತ್ಯಕ್ಷ ಮಾರ್ಗದರ್ಶನಕ್ಕೆ ಹೊಂದಿಕೊಂಡವರಾಗಿರುತ್ತಾರೆ. ಪರೀಕ್ಷೆಯ ಸಮಯವನ್ನು ನಿಗದಿ ಮಾಡುವುದು, ಮತ್ತೆ ಮುಂದೂಡುವುದು ನಿರಂತರವಾದಾಗ ಮಕ್ಕಳು ಮಾನಸಿಕವಾಗಿ ವಿಚಲಿತರಾಗುವುದು ಸಹಜ.

   ಈ ಪರಿಸ್ಥಿತಿ ನಿರ್ಮಾಣ ಆಗದಂತೆ ಎಚ್ಚರ ವಹಿಸುವುದು ಶಿಕ್ಷಣ ಇಲಾಖೆ, ಸಂಸ್ಥೆಗಳು, ಶಿಕ್ಷಕರ, ಪೋಷಕರ ಮತ್ತು ಸಮಾಜದ ಕರ್ತವ್ಯ ಎನ್ನುವುದನ್ನು ಮರೆಯಬಾರದು. ಇನ್ನು ಆನ್ ಲೈನ್ ತರಗತಿಗಳು ಎಂಬ ಪ್ರಕ್ರಿಯೆ ನಮಗೆ, ಅದರಲ್ಲೂ ನಮ್ಮ 10ನೇ ತರಗತಿಯ ಮಕ್ಕಳಿಗೆ ಹೊಂದುವ ವಿಚಾರವೇ ಅಲ್ಲ. ಅದು ಸಾಧುವೂ ಅಲ್ಲ.

   ಆನ್ ಲೈನ್ ತರಗತಿಗಳು ಸರಿಹೊಂದಲ್ಲ

   ಹೀಗೆ ಅದು ಸರಿಹೋಗಲ್ಲ ಎನ್ನುವುದಕ್ಕೆ ಏನು ಸಮಸ್ಯೆ ಎಂದು ಪ್ರಶ್ನೆ ಬರುವುದು ಸಹಜ. ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

   * ಇಂಟರ್ ನೆಟ್ ಸೇವೆಯ ಲಭ್ಯತೆಯ ನಿಖರತೆಯೇ ಇಲ್ಲ.

   * ಗ್ರಾಮೀಣ ಪ್ರದೇಶದ ಕಡು ಬಡತನದಿಂದ ಬಂದ ಮಕ್ಕಳಿಗೆ ಇಂಟರ್ನೆಟ್ ಸೌಲಭ್ಯ, ಮತ್ತು ಅದಕ್ಕೆ ಆಗುವ ವೆಚ್ಚವನ್ನು ಭರಿಸುವ ಸಾಧ್ಯಾ-ಸಾಧ್ಯತೆಗಳ ಬಗ್ಗೆ, ಸ್ಮಾರ್ಟ್ ಫೋನ್/ ಲ್ಯಾಪ್ ಟಾಪ್ ಲಭ್ಯತೆಗಳ ಬಗ್ಗೆ ಶಿಕ್ಷಣ ಇಲಾಖೆಯ ಅರಿವಿಗೆ ಬಾರದೇ ಇರುವುದು ನಿಜವಾಗಲೂ ಶೋಚನೀಯ ಸ್ಥಿತಿ.

   * ಮಧ್ಯಮ ಮತ್ತು ಶ್ರೀಮಂತ ವರ್ಗದ ಮಕ್ಕಳಿರುವ ಶಾಲೆಗಳಲ್ಲಿ ಆ ಮಕ್ಕಳಿಗೆ ಮೊಬೈಲ್ ಬಳಸಬಾರದು ಎಂಬ ನಿಯಮವನ್ನು ಕಡ್ಡಾಯ ಮಾಡಲಾಗಿರುತ್ತದೆ. ಶಾಲೆಗೆ ಮೊಬೈಲ್ ತಂದರೆ ಅಪರಾಧ ಎಂಬಂತೆ ಬಿಂಬಿಸಿ, ಮಕ್ಕಳಿಂದ ಮೊಬೈಲ್ ದೂರವಿಡಲು ಮಾಡಿದ ಪ್ರಯತ್ನಗಳನ್ನು ಶಿಕ್ಷಣ ಇಲಾಖೆ ಏಕಾಏಕಿ ಗಾಳಿಗೆ ತೂರಿದಂತಾಗಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಕೈಗೊಂಡ ಕ್ರಮಗಳಿಗೆ ಧಕ್ಕೆಯುಂಟಾಗಿದೆ.

   * 10ನೇ ತರಗತಿಯ ಮಕ್ಕಳಿಗೆ ಬೋಧಿಸುವ ಶಿಕ್ಷಕರಿಗೆ ಮಕ್ಕಳ ಪ್ರತಿಕ್ರಿಯೆ ಗಮನಿಸಿ ಬೋಧಿಸುವ ಮಾರ್ಗ ಸೂಕ್ತ. ಆದರೆ ಆನ್ ಲೈನ್ ತರಗತಿಗಳಲ್ಲಿ ಇದು ಅಸಾಧ್ಯ. ಈ ಯೋಜನೆಯನ್ನು ರೂಪಿಸುವ ಮೊದಲೇ ಚಿಂತನೆಯ ಅವಶ್ಯಕತೆ ಇತ್ತು.

   * ಇನ್ನು ದೂರದರ್ಶನದಲ್ಲಿ ಮಾಡಿದ ತರಗತಿಗಳು ಗ್ರಾಮೀಣ ಮಕ್ಕಳ ಹಂತಕ್ಕೆ ತಲುಪದೆ ಬೋಧನೆಯ ಗುಣಮಟ್ಟ ಆಶಾದಾಯಕವಾಗಿ ಇಲ್ಲದಿರುವುದು ವಿಪರ್ಯಾಸ.

   * ದೂರದರ್ಶನದಲ್ಲಿ ಬೋಧನೆ ನಡೆಯುತ್ತಿದೆ ಎನ್ನುವ ಸಂಗತಿ ರಾಜ್ಯದ ಹಲವಾರು ಮಕ್ಕಳನ್ನು ತಲುಪಲೇ ಇಲ್ಲ. ಏಕೆಂದರೆ ಎಷ್ಟೋ ಕುಟುಂಬಗಳಲ್ಲಿ ಕೇಬಲ್ ಬಿಲ್ ಪಾವತಿಸಲಾಗದೆ ಟಿ.ವಿ. ಚಾಲನೆಯಲ್ಲಿಯೇ ಇಲ್ಲ. ಗ್ರಾಮೀಣ ಪ್ರದೇಶದ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಅಭಾವವೂ ಇದೆ. (ಹಲವು ಜಿಲ್ಲೆಗಳ ಗ್ರಾಮೀಣ ಭಾಗದ ಕೆಲವು ಶಾಲೆಗಳಲ್ಲಿನ ಅಂಕಿ- ಆಂಶಗಳೇ ಇದಕ್ಕೆ ಆಧಾರ)

   * ಬಹುತೇಕ ಮಕ್ಕಳಿಗೆ ಶಿಕ್ಷಣ ಇಲಾಖೆ ನೀಡಲು ಬಯಸಿದ ಯಾವುದೇ ಸೌಲಭ್ಯಗಳನ್ನು ತಲುಪಿಸುವಲ್ಲಿ ಇಲಾಖೆಯು ವಿಫಲವಾಗಿದೆ.

   ಶಿಕ್ಷಣ ಇಲಾಖೆ ಏನು ಮಾಡಬಹುದಿತ್ತು?

   ಇಷ್ಟು ಸಮಸ್ಯೆಗಳನ್ನು ಗಮನಿಸಲಾಯಿತು. ಹಾಗಿದ್ದರೆ ಈ ಸಮಸ್ಯೆಗಳಿಗೆ ಪರಿಹಾರ ಏನು ಗಮನಿಸೋಣ:

   * ಲಾಕ್ ಡೌನ್ ಮಾಡಿದ ನಂತರ ಪ್ರತಿ ವಾರಕ್ಕೆ ಒಂದು ಸೆಟ್ (ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ) ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರತಿ ಸೋಮವಾರ ಮಕ್ಕಳಿಗೆ ತಲುಪಿಸುವುದು. ಮರು ಸೋಮವಾರ ಹೊಸ ಮಾದರಿ ಪ್ರಶ್ನೆ ಪತ್ರಿಕೆ ಪಡೆಯುವಾಗ ಹಿಂದಿನ ವಾರ ಪಡೆದ ಮಾದರಿ ಪ್ರಶ್ನೆ ಪತ್ರಿಕೆಯ ಉತ್ತರಗಳನ್ನು ಶಿಕ್ಷಕರಿಗೆ ನೀಡುವುದು. ಪ್ರತಿ ವಾರವೂ ಮಕ್ಕಳ ಉತ್ತರಗಳನ್ನು ಅವರೇ ತುಲನೆ ಮಾಡಿಕೊಳ್ಳಲು ಮಾದರಿ ಉತ್ತರಗಳನ್ನು ಇಲಾಖೆ ನೀಡುವುದು.

   * ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ಪಶ್ನೆ ಪತ್ರಿಕೆ, ಅವರ ಉತ್ತರಗಳನ್ನು ಮೌಲ್ಯಮಾಪನ ಮಾಡಿದ ಮೇಲೆ ಹಿಂತಿರುಗಿಸಲು, ಜೊತೆಯಲ್ಲಿಯೇ ಮಾದರಿ ಉತ್ತರಗಳನ್ನು ಮಕ್ಕಳಿಗೆ ನೀಡಲು ಆಯಾ ಶಾಲೆಯ ಶಿಕ್ಷಕರೊಂದಿಗೆ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಸಹಕಾರವನ್ನೂ ನೀಡುವಂತೆ ಪ್ರಕ್ರಿಯೆಯನ್ನು ಸರಳವಾಗಿಸಬಹುದಿತ್ತು.

   * ಸಾಂಕ್ರಾಮಿಕ ರೋಗ ಉಲ್ಬಣ ಆಗುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರಚಲಿತ ವಾರ್ತಾ ವಾಹಿನಿಗಳನ್ನು ಸರ್ಕಾರವು ಶೈಕ್ಷಣಿಕ ಸಹಕಾರಕ್ಕಾಗಿ ಪ್ರತಿದಿನ 45 ನಿಮಿಷಗಳ ಸಮಯವನ್ನು ನೀಡಿ, ಸಹಕರಿಸುವಂತೆ ಕೋರಿದ್ದಲ್ಲಿ ಸಹಜವಾಗಿಯೇ ಒಪ್ಪುವುದರಲ್ಲಿ ಸಂದೇಹವಿರಲಿಲ್ಲ. ಪ್ರತಿ ವಾಹಿನಿಗೂ ಒಂದು ಸಮಯವನ್ನು ನಿಗದಿ ಪಡಿಸಲು ಕೋರಿ, ಪ್ರತಿ ವಾಹಿನಿಯಲ್ಲಿ ಒಂದು ವಿಷಯವನ್ನು ಪರಿಣತ ಶಿಕ್ಷಕರಿಂದ ಬೋಧಿಸಿದ್ದರೆ ಪಠ್ಯಕ್ರಮವನ್ನೇ ಯಶಸ್ವಿಯಾಗಿ ಪೂರ್ಣಗೊಳಿಸಬಹುದಿತ್ತು. ಈ ಕ್ರಮದಿಂದ ವಿದ್ಯತ್ ಅಭಾವದಿಂದ ಒಂದು ಸಮಯiದಲ್ಲಿ ತರಗತಿ ತಪ್ಪಿದರೂ ಮತ್ತೊಂದು ಸಮಯದಲ್ಲಿ ಉಪಯೋಗವಾಗುತ್ತಿತ್ತು. ಈ. ಕನಿಷ್ಠ ಚಿಂತನೆಯನ್ನೂ ಮಾಡುವಲ್ಲಿ ವಿಫಲವಾಯಿತೇಕೆ?

   ಬೇಸಿಗೆ ರಜೆಯಲ್ಲಿ ಮಕ್ಕಳು ಬೇರೆಲ್ಲಿ ಇರಲು ಸಾಧ್ಯ?

   ಮಕ್ಕಳು ಮನೆಯಲ್ಲಿಯೇ ಉಳಿದಿದ್ದಾರೆ. ಅವರ ಶಾಲೆಗಳು ತೆರೆಯದೆ ಪೋಷಕರಲ್ಲಿ ಗೊಂದಲವಾಗಿದೆ ಎಂಬ ಆತಂಕವನ್ನು ಪದೇ ಪದೇ ವ್ಯಕ್ತಪಡಿಸುವ ಮೂಲಕ ಶಿಕ್ಷಣ ಇಲಾಖೆಯೇ ಗೊಂದಲವನ್ನು ಮೂಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಮಕ್ಕಳು ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಇಲ್ಲದೆ ಬೇರೆಲ್ಲಿ ಇರಲು ಸಾಧ್ಯ?

   ಇನ್ನು ಶಾಲೆಗಳನ್ನು ತಕ್ಷಣ ತೆರೆಯಬೇಕು. ತೆರೆಯದೇ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಕುಂದಾಗುತ್ತಿದೆ ಎಂಬ ಧಾವಂತ ಶಿಕ್ಷಣ ಇಲಾಖೆ ಏಕೆ ವ್ಯಕ್ತಪಡಿಸುತ್ತಿದೆ? ಈ ಬಗ್ಗೆ ಸಮಾಧಾನದಿಂದ ಚಿಂತಿಸಿ ಆಲೋಚಿಸಿದರೆ ಪರಿಹಾರ ಬಹಳ ಸರಳ.

   ಸಹಜವಾಗಿ ಜೂನ್ ತಿಂಗಳಿನಲ್ಲಿ ಶಾಲೆಗಳು ಪ್ರಾರಂಭವಾದರೂ ಬ್ರಿಡ್ಜ್ ಕೋರ್ಸ್, ವೇಳಾಪಟ್ಟಿ, ತಯಾರಿ ಇವುಗಳಲ್ಲಿ ಸಹಜವಾಗಿಯೇ ಜೂನ್ ತಿಂಗಳು ಮುಗಿಯುತ್ತದೆ. ನಿಜವಾದ ತರಗತಿಗಳು ಪ್ರಾರಂಭವಾಗುವುದೇ ಜುಲೈ ತಿಂಗಳಲ್ಲಿ ಎನ್ನುವುದನ್ನು ಶಿಕ್ಷಣ ಇಲಾಖೆಯೇ ಏಕೆ ಮರೆತುಬಿಟ್ಟಿತು?

   ಜುಲೈ ತಿಂಗಳಿನಲ್ಲಿ ತರಗತಿಗಳು ಪ್ರಾರಂಭವಾದರೆ ಮಕ್ಕಳಿಗಾಗಲಿ, ಶಿಕ್ಷಕರಿಗಾಗಲಿ, ಪೋಷಕರಿಗಾಗಲಿ, ಶೈಕ್ಷಣಿಕ ಚಟುವಟಿಕೆಗಾಗಲಿ ಯಾವ ತೊಂದರೆಯೂ ಆಗದು.

   ಆ ಹಂತಕ್ಕೆ ಪರಿಸ್ಥಿತಿ ಹೋಗಲ್ಲ

   ಒಂದು ವೇಳೆ ಕೊರೊನಾ ಅಬ್ಬರ ಹೆಚ್ಚಾಯಿತು ಅಂತಿಟ್ಟುಕೊಳ್ಳಿ. ಜುಲೈ ತಿಂಗಳಿನಲ್ಲಿ ಪ್ರಾರಂಭ ಮಾಡಲು ಆಗದಿದ್ದಲ್ಲಿ ಆಗಸ್ಟ್ ತಿಂಗಳಿನಿಂದ ಪ್ರಾರಂಭಿಸುವ ಅನಿವಾರ್ಯ ಪರಿಸ್ಥಿತಿ ಒದಗಿ ಬಂದರೆ, ಪರಿಹಾರ ಅತಿ ಸರಳ. ಪ್ರತಿ ದಿನ ಒಂದು ಅವಧಿಯನ್ನು ಹೆಚ್ಚಿಸಿಕೊಂಡಲ್ಲಿ ಶೈಕ್ಷಣಿಕ ವರ್ಷದ ಪೂರ್ವಾರ್ಧಕ್ಕೆ ಸಹಜ ಸ್ಥಿತಿಯನ್ನು ತಲುಪಬಹುದು.

   ಆಗಲೂ ಪರಿಸ್ಥಿತಿ ಸುಧಾರಿಸದೇ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭಿಸುವಂತಾದರೆ ಪ್ರತಿ ಶನಿವಾರ ಪೂರ್ಣ ದಿನ ತರಗತಿಗಳನ್ನು ಮಾಡಿ, ದಿನಕ್ಕೊಂದು ತರಗತಿ ಹೆಚ್ಚಿಸಿದಲ್ಲಿ ಸಹಜವಾಗಿಯೇ ಸದ್ಯದ ಪಠ್ಯಕ್ರಮವನ್ನು ಮುಗಿಸಬಹುದು. ಇನ್ನೂ ಪರಿಸ್ಥಿತಿ ಕೈ ಮೀರಿ ಸೆಪ್ಟಂಬರ್ ತಿಂಗಳಿನಲ್ಲಿ ಪ್ರಾರಂಬಿಸುವಂತಾದರೆ ದಸರಾ, ಕ್ರಿಸ್ಮಸ್, ಮತ್ತು ಹಲವು ರಜೆಗಳನ್ನು ಕಡಿತಗೊಳಿಸಬೇಕಾಗುತ್ತದೆ. ಶನಿವಾರ ಪೂರ್ಣ ದಿನ ತರಗತಿಗಳನ್ನು ಮಾಡಿ ದಿನಕ್ಕೊಂದು ತರಗತಿ ಹೆಚ್ಚಿಸಿದಲ್ಲಿ ಪರಹಾರ ಸರಳ.

   ಪರಿಸ್ಥಿತಿ ಇನ್ನೂ ನಮ್ಮ ಹಿಡಿತಕ್ಕೆ ಸಿಗದೇ ಹೋದಾಗ ಅಕ್ಟೋಬರ್ ನಲ್ಲಿ ಪ್ರಾರಂಭಿಸಬೇಕಾಗುತ್ತದೆ. ಆಗ ಸಮಸ್ಯೆ ಸಹಜ. ಪಠ್ಯ ಪುಸ್ತಕದಲ್ಲಿರುವ ಹಲವು ಅಧ್ಯಾಯಗಳನ್ನು ಕೈ ಬಿಟ್ಟು, ಪರೀಕ್ಷೆಗೆ ಸಿದ್ಧಗೊಳಿಸಬಹುದು. ಆಗ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರ ಮತ್ತು ಆಯಾ ವಿಷಯಗಳ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರ ಮಾರ್ಗದರ್ಶನದ ಮೇಲೆ ನಿರ್ಧಾರಗಳನ್ನು ಕೈಗೊಳ್ಳಬಹುದು. ಬಹುತೇಕ ಈ ಪರಿಸ್ಥಿತಿಯನ್ನು ತಲುಪಲ್ಲ ಎಂಬುದು ಎಲ್ಲರ ಅಭಿಪ್ರಾಯ.

   ಶಿಕ್ಷಣ ಸಚಿವರು ಹಾಗೂ ಫೇಸ್ ಬುಕ್

   ಆದರೆ, ಪ್ರಾಥಮಿಕ ಶಿಕ್ಷಣ ಇಲಾಖೆಯ ಸಚಿವರಾದ ಸುರೇಶ್ ಕುಮಾರ್ ಅವರು Face Bookನಲ್ಲಿ ನಾನು ಏನನ್ನಾದರೂ ಹೇಳಬಹುದು ಎಂದು ತಜ್ಞರ ಮತ್ತು ಇಲಾಖೆಯ ಪರಿಣತರ ಸಲಹೆಗಳನ್ನು ಸೂಕ್ತವಾಗಿ ಪಡೆಯದೆ, ಶಿಕ್ಷಣ ಇಲಾಖೆಯನ್ನೇ ಗೊಂದಲದ ಗೂಡಾಗಿಸಿದ್ದಾರೆ.

   ಮಾನ್ಯ ಶಿಕ್ಷಣ ಸಚಿವರು ಇಲಾಖೆಯ ಸಮಸ್ಯೆಗಳನ್ನು ಪರಿಹರಿಸುವ ಬದಲು ಇನ್ನಷ್ಠು ಸಮಸ್ಯೆಗಳನ್ನು ಸೇರಿಸುತ್ತಿದ್ದಾರೆ. ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಮೂಲಕ 1,50,000 ಜನರ ಸಂಪರ್ಕ ಹೊಂದಿರುವುದು ಸಾಧನೆಯೇನೋ ಸರಿ. ಅದರಲ್ಲಿ 10ನೇ ತರಗತಿಯ ಮಕ್ಕಳ ಮತ್ತು ಪೋಷಕರ ಸಂಖ್ಯೆ ಎಷ್ಟೆಂದು ಪರಾಮರ್ಶೆ ಮಾಡಿಕೊಳ್ಳಬೇಕು ಅಲ್ಲವೆ?

   ಆದರೆ, ಅವರು ಸುಮಾರು 8,00,000 ಸಂಖ್ಯೆಯ 10ನೇ ತರಗತಿಯ ಮಕ್ಕಳನ್ನು ಫೇಸ್ ಬುಕ್ ಮೂಲಕ ತಲುಪಲು ಅಸಾಧ್ಯ. ಆದ್ದರಿಂದ ಅವರು ಅದರಿಂದ ಹೊರಬಂದು ಶಿಕ್ಷಣ ಇಲಾಖೆಯ ಬಗ್ಗೆ ಚಿಂತಿಸುವುದು ಮತ್ತು ರಾಜ್ಯದ ಜನತೆಯನ್ನು ಬೇರೆ ಮಾಧ್ಯಮದ ಮೂಲಕ ತಲುಪುವುದು ಸೂಕ್ತ.

   ಇಲ್ಲಿ ಆದ್ಯತೆ ನೀಡಬೇಕಿರುವುದು ಮಕ್ಕಳು ಮತ್ತು ಅವರ ಯೋಗಕ್ಷೇಮಕ್ಕೆ. ಪೋಷಕರಿಗೆ ಮಾರ್ಗದರ್ಶನವನ್ನು ಮತ್ತು ಅರಿವು ಮೂಡಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ವಿವಿಧ ಮೂಲಗಳ ಮೂಲಕ ವ್ಯಾಪಕವಾಗಿ ಕೈಗೊಂಡಾಗ ಮಾತ್ರ ಮಕ್ಕಳ ಮನಸ್ಸನ್ನು ಸಹಜ ಸ್ಥಿತಿಯಲ್ಲಿಡಲು ಸಾಧ್ಯ. ಒಂದು ವೇಳೆ ಈ ದಿಸೆಯಲ್ಲಿ ಶಿಕ್ಷಣ ಇಲಾಖೆ ಎಡವಿದಲ್ಲಿ ಭಾವಿ ಪ್ರಜೆಗಳ ಭವಿಷ್ಯದ ಜತೆಗೆ ತುಂಬ ದುಬಾರಿಯಾಗ ಆಗಬಹುದಾದ ಆಟ ಆಡಿದಂತಾಗುತ್ತದೆ.

   ಅನೇಕ ಶಿಕ್ಷಣ ತಜ್ಞರು, ಅನುಭವಿ ಶಿಕ್ಷಕರು, ಪರಿಣತರ ಸಲಹೆ ಮೇರೆಗೆ ಈ ಲೇಖನದಲ್ಲಿ ಇರುವ ಅಂಶಗಳನ್ನು ಸಾಮಾಜಿಕ ಕಳಕಳಿಯೊಂದಿಗೆ ಉಲ್ಲೇಖಿಸಲಾಗಿದೆ.

   English summary
   Here is the detail analysis of Karnataka education department fickle decisions. And how it will impact on students.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more