ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ವಿಶೇಷ; ರಾಜ್ಯ ಬಜೆಟ್‌ನಲ್ಲಿ ಕೊಡಗಿಗೇನು ಕೊಡುಗೆ?

|
Google Oneindia Kannada News

ಮಡಿಕೇರಿ, ಫೆಬ್ರವರಿ 25: ಪ್ರತಿ ಬಾರಿಯೂ ಬಜೆಟ್ ಮಂಡನೆಯ ದಿನಗಳು ಹತ್ತಿರ ಬರುತ್ತಿದ್ದಂತೆಯೇ ತಮ್ಮ ಜಿಲ್ಲೆಗೇನು ಕೊಡುಗೆ ಸಿಗಬಹುದೆಂದು ಕಾಯುವುದು ಕೊಡಗಿನ ಜನರಿಗೆ ಅಭ್ಯಾಸವಾಗಿ ಹೋಗಿದೆ. ಆದರೆ ಯಾವುದೇ ಸರ್ಕಾರಗಳು ಬಂದರೂ ಜಿಲ್ಲೆಗೆ ಆಶಾದಾಯಕವಾದಂತಹ ಯೋಜನೆ ನೀಡದಿರುವುದು ಬೇಸರದ ಸಂಗತಿಯಾಗಿದೆ.

ಮಾರ್ಚ್ 4ರಂದು ಚೊಚ್ಚಲ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯದ ಪ್ರತಿ ಜಿಲ್ಲೆ, ವಿವಿಧ ಸಮುದಾಯ ಮತ್ತು ಇಲಾಖೆಗಳಿಗೆ ಯಾವ ರೀತಿಯ ಪ್ರಾಶಸ್ತ್ಯ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ರಾಜ್ಯ ಬಜೆಟ್ ವಿಶೇಷ; ಮೈಸೂರಿನ ಪ್ರವಾಸೋದ್ಯಮ ಚೇತರಿಕೆಗೆ ಸಿಗುತ್ತಾ ಬೂಸ್ಟರ್ ಡೋಸ್!ರಾಜ್ಯ ಬಜೆಟ್ ವಿಶೇಷ; ಮೈಸೂರಿನ ಪ್ರವಾಸೋದ್ಯಮ ಚೇತರಿಕೆಗೆ ಸಿಗುತ್ತಾ ಬೂಸ್ಟರ್ ಡೋಸ್!

ಹಾಗೆ ನೋಡಿದರೆ ಕೊಡಗಿನವರು ಹಿಂದಿನಿಂದಲೂ ಕಾಫಿ, ಏಲಕ್ಕಿ, ಕರಿಮೆಣಸು ಹೀಗೆ ವಾಣಿಜ್ಯ ಬೆಳೆಗಳನ್ನು ಬೆಳೆಸಿ ಅದರಿಂದ ಜೀವನ ಸಾಗಿಸಿಕೊಂಡು ಬಂದವರು. ತೋಟಗಾರಿಕೆ ಬೆಳೆಗಳೇ ಇಲ್ಲಿನ ಆದಾಯದ ಮೂಲವಾಗಿದೆ. ಹಿಂದಿನ ಕಾಲದಲ್ಲಿ ಭತ್ತ ಬೆಳೆಯುತ್ತಿದ್ದರಾದರೂ ನಂತರದ ಕಾಲ ಘಟ್ಟದಲ್ಲಿ ಏಲಕ್ಕಿ, ಕಾಫಿ, ಕರಿಮೆಣಸು, ಶುಂಠಿ, ಕಿತ್ತಳೆ ಹೀಗೆ ಹಲವಾರು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾ ಬದುಕು ಕಟ್ಟಿಕೊಂಡಿದ್ದಾರೆ.

 ಸರ್ಕಾರಕ್ಕೆ ತೆರಿಗೆ ಕಟ್ಟುವಲ್ಲಿ ಹಿಂದೆ ಬಿದ್ದಿಲ್ಲ

ಸರ್ಕಾರಕ್ಕೆ ತೆರಿಗೆ ಕಟ್ಟುವಲ್ಲಿ ಹಿಂದೆ ಬಿದ್ದಿಲ್ಲ

ಬೆಟ್ಟಗುಡ್ಡ, ತೋಟಗಳಿಂದ ಆವೃತವಾದ ಕೊಡಗು ಜಿಲ್ಲೆಯು ಕಲೆ, ಸಂಸ್ಕೃತಿ, ವೇಷ ಭೂಷಣ, ಭಾಷೆ, ಆಚರಣೆಯಲ್ಲಿ ಒಂದಷ್ಟು ವಿಭಿನ್ನತೆ ಹೊಂದಿದ್ದು, ಕೃಷಿಯೇ ಇಲ್ಲಿನವರ ಜೀವಾಳ. ಹೀಗಿದ್ದರೂ ಬೆಳೆಗಾರರು ರಾಜ್ಯಸರ್ಕಾರಕ್ಕೆ ತೆರಿಗೆ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಇಲ್ಲಿ ಶ್ರೀಮಂತ, ಮಧ್ಯಮ ಮತ್ತು ಅತಿ ಸಣ್ಣ ಬೆಳೆಗಾರರಿದ್ದು, ಕೃಷಿಗೆ ಅವಲಂಬಿತವಾಗಿರುವ ಸಣ್ಣಪುಟ್ಟ ಉದ್ಯಮಗಳನ್ನು ಹೊರತುಪಡಿಸಿ ಉದ್ಯೋಗ ಸೃಷ್ಟಿಸಬಲ್ಲ ಯಾವುದೇ ಬೃಹತ್ ಪ್ರಮಾಣದ ಉದ್ಯಮಗಳಿಲ್ಲ. ಹೀಗಾಗಿ ಇಲ್ಲಿನ ಯುವಕ-ಯುವತಿಯರು ಏನೇ ವಿದ್ಯಾಭ್ಯಾಸ ಮಾಡಿದರೂ ಕೊನೆಗೆ ಉದ್ಯೋಗದ ವಿಚಾರ ಬಂದಾಗ ಜಿಲ್ಲೆಯನ್ನು ಬಿಟ್ಟು ಹೊರಗೆ ಹೋಗುವುದು ಅನಿವಾರ್ಯವಾಗಿದೆ.

ಇದೊಂದು ಮುಖ್ಯವಾದ ಸಮಸ್ಯೆಯಾಗಿದ್ದು, ಬಹಳಷ್ಟು ಮನೆಗಳಲ್ಲಿ ಮಕ್ಕಳು ಉದ್ಯೋಗ ಅರಸಿ ಹೊರಹೋಗುವುದರಿಂದ ವೃದ್ಧ ಅಪ್ಪ, ಅಮ್ಮಂದಿರು ತಲತಲಾಂತರದಿಂದ ಬಂದ ತೋಟ ಗದ್ದೆಗಳನ್ನು ನೋಡಿಕೊಂಡು ಮನೆಯಲ್ಲಿ ಇರುವಂತಾಗಿದೆ. ಇನ್ನು ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿ ಇನ್ಯಾವುದೇ ಉದ್ಯೋಗಕ್ಕೆ ಇಲ್ಲಿ ಅವಕಾಶವಿಲ್ಲ. ಕೊಡಗಿನ ಮಟ್ಟಿಗೆ ಯಾವುದೇ ಕಾರ್ಖಾನೆಗಳನ್ನು ನಿರೀಕ್ಷೆ ಮಾಡಲಾಗದು. ಇಲ್ಲಿನ ಪರಿಸರವನ್ನು ಉಳಿಸಿಕೊಂಡು ಮತ್ತು ಸ್ಥಳೀಯವಾಗಿ ಉದ್ಯೋಗವನ್ನು ನೀಡಬಹುದಾದ, ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುವಂತಹ ಯೋಜನೆಗಳನ್ನು ಸರ್ಕಾರ ಮಾಡಬೇಕಾಗಿದೆ.

 ಜಿಲ್ಲೆಯಲ್ಲಿ ಮಾರುಕಟ್ಟೆಯ ಕೊರತೆ

ಜಿಲ್ಲೆಯಲ್ಲಿ ಮಾರುಕಟ್ಟೆಯ ಕೊರತೆ

ಕೊಡಗಿನವರು ಕಾಫಿ, ಕರಿಮೆಣಸಿಗೆ ಸೀಮಿತರಾಗಿದ್ದಾರೆ. ಜಿಲ್ಲೆಯಲ್ಲಿ ಪುಷ್ಪ ಕೃಷಿ, ಹಣ್ಣಿನ ಬೆಳೆ, ತರಕಾರಿ ಮೊದಲಾದವುಗಳನ್ನು ಬೆಳೆಯಲು ಸೂಕ್ತ ವಾತಾವರಣ ಇದೆಯಾದರೂ ಇಲ್ಲಿ ಮಾರುಕಟ್ಟೆಯ ಕೊರತೆ ಮತ್ತು ಹಣ್ಣುಗಳನ್ನು ರಕ್ಷಿಸಿಡಲು ಬೇಕಾದ ಅಗತ್ಯ ಸೌಲಭ್ಯಗಳು ಇಲ್ಲದರಿರುವುದರಿಂದಾಗಿ ಕಾಫಿ, ಕರಿಮೆಣಸು ಬಿಟ್ಟರೆ ಬೇರೆ ಬೆಳೆಗಳತ್ತ ಆಸಕ್ತಿ ತೋರುತ್ತಿಲ್ಲ. ಈಗಾಗಲೇ ಹಲವು ಪ್ರಯೋಗಳನ್ನು ಮಾಡಿ ಕೈ ಸುಟ್ಟುಕೊಂಡಿರುವ ಬೆಳೆಗಾರರು ತೆಪ್ಪಗಾಗಿದ್ದಾರೆ. ಆದ್ದರಿಂದ ಸರ್ಕಾರ ಕೃಷಿಗೆ ಅನುಕೂಲವಾಗುವಂತೆ ಮಾರುಕಟ್ಟೆಯ ವ್ಯವಸ್ಥೆ ಮಾಡಿದರೆ ಇತರೆ ಬೆಳೆಗಳನ್ನು ಬೆಳೆಯಲು ಕೃಷಿಕರಿಗೆ ಅನುಕೂಲವಾಗಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ.

ಇವತ್ತಿನ ಮಟ್ಟಿಗೆ ಹೇಳುವುದಾದರೆ ಕೃಷಿಯನ್ನೇ ನಂಬಿ ಬದುಕುತ್ತಿರುವ, ಅದರಲ್ಲೂ ಕಾಫಿ ಮತ್ತು ಕರಿಮೆಣಸು ಬೆಳೆಯುವ ಬೆಳೆಗಾರರು ವರ್ಷಕ್ಕೊಮ್ಮೆ ಮಾತ್ರ ಆದಾಯವನ್ನು ನೋಡುವಂತಾಗಿದೆ. ಒಮ್ಮೆ ಬಂದ ಆದಾಯದಲ್ಲಿ ತೋಟದ ನಿರ್ವಹಣೆ ಮತ್ತು ತಮ್ಮ ಬದುಕನ್ನು ಕೂಡ ಅದರಲ್ಲೇ ನಿಭಾಯಿಸಬೇಕಾಗಿದೆ. ಇದರಲ್ಲಿ ಕಾರ್ಮಿಕರ ವೇತನ, ಗೊಬ್ಬರ ಎಲ್ಲವನ್ನು ಲೆಕ್ಕಾಚಾರ ಮಾಡಿದರೆ ಲಾಭವಂತೂ ಇಲ್ಲವೇ ಇಲ್ಲ. ಜತೆಗೆ ಜಿಲ್ಲೆಯಲ್ಲಿ ಓದಿದವರು ಯಾರು ತೋಟದ ಕೆಲಸಕ್ಕೆ ಬರುತ್ತಿಲ್ಲ. ಹೀಗಾಗಿ ಕಾರ್ಮಿಕರ ಸಮಸ್ಯೆಯೂ ಬೆಳೆಗಾರರನ್ನು ಕಾಡುತ್ತಿದೆ.

 ಆ ಸಂಕಷ್ಟದಿಂದ ಚೇತರಿಕೆ ಕಾಣಲೇ ಇಲ್ಲ

ಆ ಸಂಕಷ್ಟದಿಂದ ಚೇತರಿಕೆ ಕಾಣಲೇ ಇಲ್ಲ

2018ರಲ್ಲಿ ಸಂಭವಿಸಿದ ಭೂಕುಸಿತದ ನಂತರ ಒಂದಲ್ಲ ಒಂದು ಪ್ರಾಕೃತಿಕ ವಿಕೋಪಗಳು ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದೆ. ಅದರಲ್ಲೂ ಎಲ್ಲವೂ ಸರಿಹೋಯಿತು, ಹೇಗೋ ಚೇತರಿಸಿ ಬದುಕು ಕಟ್ಟಿಕೊಳ್ಳಬಹುದು ಎನ್ನುವಾಗಲೇ ಕೊರೊನಾ ದಾಳಿ ಮಾಡಿತು. ಮೊದಲೇ ಭೂಕುಸಿತ, ಪ್ರವಾಹ, ಮಹಾಮಳೆಯಿಂದ ತತ್ತರಿಸಿದ ಕೊಡಗಿನ ಜನಕ್ಕೆ ಕೊರೊನಾ ಇನ್ನಷ್ಟು ಹೊಡೆತ ನೀಡಿತು.

ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಏರುಪೇರು ಮಾಮೂಲಿ ಆದುದರಿಂದ ಕೃಷಿ ಜತೆಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡುವುದರೊಂದಿಗೆ ತಮ್ಮ ಬದುಕಿಗೆ ಆರ್ಥಿಕವಾಗಿ ಸಹಕಾರಿಯಾಗುವ ಉದ್ದೇಶದಿಂದ ಮಾಡಿದ ಹೋಂಸ್ಟೇ ಉದ್ಯಮ ಬೆಳೆಗಾರರಿಗೆ ಎಷ್ಟರ ಮಟ್ಟಿಗೆ ಉಪಯೋಗವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ತೊಂದರೆಯೂ ಆಗಿದೆ. ಪ್ರವಾಸೋದ್ಯಮ ಇಲಾಖೆಯ ನೋಂದಾಯಿತ ಹೋಂಸ್ಟೇ ಗಳಲ್ಲದೆ, ನಾಯಿಕೊಡೆಗಳಂತೆ ಅನಧಿಕೃತ ಹೋಂಸ್ಟೇಗಳು ಹುಟ್ಟಿಕೊಳ್ಳುತ್ತಿದ್ದು, ಇವುಗಳಿಗೆ ತಡೆಯೊಡ್ಡುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯೂ ಇಲ್ಲದಿಲ್ಲ.

 ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತಾ?

ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತಾ?

ಕಳೆದ ಒಂದೆರಡು ದಶಕಗಳಲ್ಲಿ ಕೊಡಗು ಪ್ರವಾಸೋದ್ಯಮದಲ್ಲಿ ತನ್ನದೇ ಆದ ಖ್ಯಾತಿ ಗಳಿಸಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗುವಂತಹ ಯೋಜನೆಗಳನ್ನು ಜಾರಿ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ ಅವು ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಪ್ರವಾಸಿಗರನ್ನು ಸೆಳೆಯುವಂತೆ ಮಾಡುವುದು ಅಗತ್ಯವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಬಹುಮುಖ್ಯವಾಗಿದೆ. ಉಳಿದಂತೆ ಹಲವು ನಿರೀಕ್ಷೆಗಳಿದ್ದರೂ ಸರ್ಕಾರ ಕೊಡಗಿಗೆ ಯಾವ ರೀತಿಯ ಆದ್ಯತೆ ನೀಡುತ್ತದೆ ಎಂಬ ಕಾತರವಂತು ಪ್ರತಿಯೊಬ್ಬರಲ್ಲೂ ಇದ್ದೇ ಇದೆ.

English summary
Karnataka Budget 2022: Chief Minister Basavaraj Bommai is preparing to present the state budget on March 4 and is curious as to what plans to the Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X