ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಟ್ರೆಂಡಿಂಗ್; ನಡೆದಿದೆ ಬಿಗ್ ಫೈಟಿಂಗ್

|
Google Oneindia Kannada News

ಹಿಂದಿ ಹೇರಿಕೆ, ಕನ್ನಡ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ಕಳೆದ ಕೆಲ ದಿನಗಳಿಂದ ಟ್ವಿಟ್ಟರ್‌ನಲ್ಲಿ ಕನ್ನಡ ಟ್ರೆಂಡಿಂಗ್‌ನಲ್ಲಿದೆ. ಹಿಂದಿ ಹೇರಿಕೆ ಒಪ್ಪುವ ಮಂದಿ ಮತ್ತು ಹಿಂದಿ ಹೇರಿಕೆ ವಿರೋಧಿಸುವ ಜನರ ಮಧ್ಯೆ ಬಿಸಿಬಿಸಿ ಚರ್ಚೆಗಳೇ ನಡೆಯುತ್ತಿವೆ.

ರಾಜ್ಯದ ಕೆಲ ಬ್ಯಾಂಕುಗಳಲ್ಲಿ ಕನ್ನಡ ಭಾಷಾ ಬಳಕೆಯೇ ನಿಂತುಹೋಗಿದೆ. ಹಿಂದಿ ಮತ್ತು ಇಂಗ್ಲೀಷ್‌ನಲ್ಲೇ ವ್ಯವಹಾರ ನಡೆಸಲಾಗುತ್ತಿದೆ. ಕನ್ನಡ ನಾಡಿನಲ್ಲಿ ಕನ್ನಡಿಗನೇ ಅನಾಥನಾದರೆ? ಹೀಗೊಂದು ದೊಡ್ಡ ಚರ್ಚೆಯೇ ನಡೆಯುತ್ತಿದೆ.

5 ಲಕ್ಷದ ಗಡಿ ದಾಟಿದ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ5 ಲಕ್ಷದ ಗಡಿ ದಾಟಿದ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ

ಇನ್ನೊಂದೆಡೆ, ಬೆಂಗಳೂರಿನ ಮೆಟ್ರೋದಲ್ಲಿ ಉತ್ತರ ಭಾರತೀಯ ವ್ಯಕ್ತಿ ಕನ್ನಡ ಬಾರದೆ ಪರದಾಟ ನಡೆಸುತ್ತಿದ್ದ ಘಟನೆಯನ್ನು ಒಬ್ಬ ವ್ಯಕ್ತಿ ಟ್ವೀಟ್ ಮಾಡಿ, ಹಿಂದಿ ವಿರೋಧವನ್ನು ಹೀಗಳೆದಿದ್ದಾನೆ. ಈ ಟ್ವೀಟ್ ಸುತ್ತಲೂ ಬಿಸಿಬಿಸಿ ಚರ್ಚೆಗಳು ನಡೆದಿವೆ. ಕನ್ನಡ ನಾಡಿನಲ್ಲಲ್ಲದೇ ಬೇರೆಲ್ಲಿ ಕನ್ನಡ ಅಪೇಕ್ಷಿಸಲು ಸಾಧ್ಯ ಎಂದು ಪ್ರಶ್ನಿಸುವವರು ಹಲವರು.

ಉತ್ತರ ಭಾರತದವರು, ಅದರಲ್ಲೂ ಹಿಂದಿ ಭಾಷಿಕರು ಕರ್ನಾಟಕದಲ್ಲಿ ಕನ್ನಡ ಮಾತನಾಡಲು ತಾತ್ಸಾರ ತೋರುತ್ತಾರೆ. ಕನ್ನಡ ಕಲಿಯುವ ತೃಣ ಉದ್ದೇಶವನ್ನೂ ಅವರು ಹೊಂದಿಲ್ಲ. ಇಡೀ ಭಾರತವೇ ತಮ್ಮ ವಸಾಹತು ಎಂಬ ರೀತಿಯಲ್ಲಿ ಅವರು ವರ್ತಿಸುತ್ತಾರೆ ಎಂದು ಅನೇಕ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಮೆಟ್ರೋ ಪ್ರಸಂಗ

"ಈ ಹುಡುಗ ಮೆಟ್ರೋದಲ್ಲಿ ಪ್ರಯಾಣಿಸಲು ಬಂದಿದ್ದ. ಆತ ಬೆಂಗಳೂರಿನವಲ್ಲ. ಇಂಗ್ಲೀಷ್ ಗೊತ್ತಿಲ್ಲ, ಕನ್ನಡ ಗೊತ್ತಿಲ್ಲ. ಏನು ಮಾಡಬೇಕೆಂದು ಗೊತ್ತಾಗದೇ ಒದ್ದಾಡುತ್ತಿದ್ದುದನ್ನು ನೋಡಿದೆ. ಬಹಳ ಹಿಂದೆ ಮುಂದೆ ನೋಡಿ ನನ್ನನ್ನು ಹಿಂದಿಯಲ್ಲಿ ಕೇಳಿದ. ನಾನು ಅತನಿಗೆ ಸಹಾಯ ಮಾಡಿ... ನಾವು ಎಂಥ ಮೆಟ್ರೋಪೊಲಿಟನ್ ನಗರದಲ್ಲಿದ್ದೇವೆ... ಒಂದು ಇಡೀ ಭಾಷೆಯನ್ನೇ ಹೊರಗಿಡುವುದೇ ನಮ್ಮ ನೀತಿಗಳಾಗಿಬಿಟ್ಟಿವೆ..." ಎಂದು ವರದರಾಜ್ ಆದ್ಯ ಎಂಬ ಟ್ವೀಟಿಗ ಅಲವತ್ತುಕೊಂಡಿದ್ದ. ಜುಲೈ ೯ರಂದು ಇದು ಆತ ಮಾಡಿದ ಪೋಸ್ಟ್.

ಆತನ ಅಂದಿನ ಪೋಸ್ಟ್‌ಗೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕರ್ನಾಟಕ ಬಿಟ್ಟು ಬೇರೆ ಯಾವ ಪ್ರದೇಶಗಳಲ್ಲಿ ಕನ್ನಡ ಬಳಸುತ್ತಾರೆ? ಕರ್ನಾಟಕದಲ್ಲಿ ಕನ್ನಡ ಕೇಳದೇ ಬೇರೆಲ್ಲಿ ಅಪೇಕ್ಷಿಸಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಆದ್ಯ ಅವರ ಪೋಸ್ಟ್‌ಗೆ ಇನ್ನೂರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

ಮೆಟ್ರೋ ಘಟನೆಗೆ ಪ್ರತಿಕ್ರಿಯೆಗಳು

ಮೆಟ್ರೋ ಘಟನೆಗೆ ಪ್ರತಿಕ್ರಿಯೆಗಳು

ವರದರಾಜ್ ಆದ್ಯ ಅವರ ಬೆಂಗಳೂರು ಮೆಟ್ರೋ ಘಟನೆಯ ಪೋಸ್ಟ್‌ಗೆ ಬಾಬು ಅಜಯ್ ಎಂಬುವವರು, "ಡೆಲ್ಲಿ ಮೆಟ್ರೋದಲ್ಲಿ ಕನ್ನಡವೇ ಇಲ್ಲ, ಇಡೀ ಭಾಷೆಯನ್ನೇ ಹೊರಗಿಟ್ಟಿದ್ದಾರೆ ಎಂದು ಯಾವತ್ತಾದರೂ ದೂರು ಕೊಟ್ಟಿದ್ದೀರಾ? ರೋಮ್‌ನಲ್ಲಿದ್ದಾಗ ರೋಮನ್ ಆಗಿರಿ. ಬೆಂಗಳೂರಿನಲ್ಲಿದ್ದಾಗ ಕನ್ನಡಿಗರಾಗಿರಿ. ಇದು ಎಲ್ಲರಿಗೂ ಅನ್ವಯವಾಗುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ಅಭಿಪ್ರಾಯವನ್ನು ಹಲವರು ಪುನರುಚ್ಚರಿಸಿದ್ದಾರೆ. ಯಾವುದೇ ಪ್ರದೇಶಕ್ಕೆ ವಲಸೆ ಹೋಗುವವರು ಅಲ್ಲಿಯ ಭಾಷೆ, ಸಂಸ್ಕೃತಿ ಜೊತೆ ಬೆರೆತುಹೋಗಬೇಕು ಎಂಬ ಅನಿಸಿಕೆಗಳು ಸಾಮಾನ್ಯವಾಗಿ ವ್ಯಕ್ತವಾಗಿವೆ.

ಅರುಣ್ ಜಾವಗಲ್ ಕಿಡಿ

ಸೋಷಿಯಲ್ ಮೀಡಿಯಾದಲ್ಲಿ ಕನ್ನಡಪರ ಹೋರಾಟಗಳನ್ನು ಮಾಡುವ ಅರುಣ್ ಜಾವಗಲ್, ಕನ್ನಡ ನಾಡಿನಿಂದ ಕನ್ನಡವನ್ನೇ ಹೊರಗಿಡುತ್ತದೆ ಭಾರತ ಸರಕಾರದ ನೀತಿ ಎಂದು ಅವರು ಕಿಡಿಕಾರಿದ್ದಾರೆ.

ನೀವು ಉತ್ತರ ಭಾರತಕ್ಕೆ ಹೋದರೆ ಹಿಂದಿ ಕಲಿಯುತ್ತೀರಿ. ಉತ್ತರ ಭಾರತೀಯರು ದಕ್ಷಿಣಕ್ಕೆ ಬಂದಾಗಲೂ ನೀವೇ ಹಿಂದಿ ಕಲಿಯುತ್ತೀರಿ ಎಂದು ಬೇಸರಿಸಿದ್ದಾರೆ.

ದೇಶಾದ್ಯಂತ ಸಾಮಾನ್ಯ ಭಾಷೆಯಾಗಿ ಬಳಸಲು ಹಿಂದಿ ಯಾಕಾಗಬಾರದು ಎಂದು ಒಂದು ಟ್ವೀಟಿಗನ ಪ್ರಶ್ನೆಗೆ ಅರುಣ್ ಜಾವಗಲ್, "ಸಾಮಾನ್ಯ ಬಳಕೆಯ ಭಾಷೆಯನ್ನು ಜನರೇ ಆಯ್ದುಕೊಳ್ಳಬೇಕು. ಸರಕಾರ ತಂತ್ರಜ್ಞಾನದ ನೆರವಿನಿಂದ ಬಹುಭಾಷೆಗಳಲ್ಲಿ ಸೇವೆಗಳನ್ನು ನೀಡಬೇಕು. ಸಾಮಾನ್ಯ ಭಾಷೆ ಯಾವುದೆಂದು ಸರಕಾರ ನಿರ್ಧರಿಸಬಾರದು" ಎಂದು ಅರುಣ್ ಜಾಗವಲ್ ಪ್ರತಿಕ್ರಿಯಿಸಿದ್ದಾರೆ.

ಬ್ಯಾಂಕುಗಳಲ್ಲಿ ಕನ್ನಡ ಮಾಯ

ಕರ್ನಾಟಕದ ಬ್ಯಾಂಕುಗಳು, ಅಂಚೆ ಕಚೇರಿ, ಕೇಂದ್ರ ಸರಕಾರಿ ಕಚೇರಿಗಳಲ್ಲಿ ಕನ್ನಡವನ್ನೇ ಹೊರಗಿಡಲಾಗಿದೆ. ಕನ್ನಡ ಮಾತ್ರ ಗೊತ್ತಿರುವ ಕೋಟ್ಯಂತರ ಕನ್ನಡಿಗರು ಏನು ಮಾಡಬೇಕು ಎಂದು ನೇಸರಬೆಟ್ಟಳಿಯ ಹೆಸರಿನ ಟ್ವೀಟಿಗರೊಬ್ಬರು ಪ್ರಶ್ನಿಸಿದ್ಧಾರೆ. ಹಾಗೆಯೇ, ಬಸವನಗುಡಿಯ ವಿವಿ ಬೇಕರಿಗೆ ಬಂದಿದ್ದ ಗ್ರಾಹಕನೊಬ್ಬ ತನಗೆ ಬ್ಯಾಂಕೊಂದರಲ್ಲಿ ಕನ್ನಡ ಇಲ್ಲದೇ ಹೇಗೆ ಪರದಾಡಿದೆ ಎಂಬುದನ್ನು ವಿವರಿಸಿದ ಘಟನೆಯನ್ನೂ ನೇಸರಬೆಟ್ಟಳಿಯ ಅವರು ಮೆಲುಕುಹಾಕಿದ್ದಾರೆ.

"ಕೋಟ್ಯಂತರ ಕನ್ನಡಿಗರು ಕನ್ನಡ ನಾಡಿನ ಬ್ಯಾಂಕು, ಭಾರತ ಸರಕಾರದ ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ಸಿಗದೇ ತಮ್ಮ ನಾಡಿನಲ್ಲೇ ತಾವು ಅನಾಥರಂತಾಗಿದ್ದಾರೆ..." ಎಂದು ಅರುಣ್ ಜಾವಗಲ್ ವಿಷಾದಿಸಿದ್ದಾರೆ.

ಮೈಸೂರಿನ ಕೆನರಾ ಬ್ಯಾಂಕಿನವರು ಕನ್ನಡ ಇಲ್ಲದೆ, ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಇಮೇಲ್ ಕಳುಹಿಸಿರುವ ವಿಚಾರವನ್ನು ಒಬ್ಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

ಹಿಂದಿ ವಿರೋಧವಾ?

ಕನ್ನಡಪರ ಹೋರಾಟಗಾರರದ್ದು ಹಿಂದಿ ವಿರೋಧಿ ಧೋರಣೆ, ಅವರದ್ದು ಪೆರಿಯಾರ್ ವಾದ, ಪ್ರತ್ಯೇಕತಾವಾದ. ಕನ್ನಡವನ್ನು ಪ್ರೀತಿಸಿ ಆದರೆ, ಹಿಂದಿಯನ್ನು ಯಾಕೆ ದ್ವೇಷಿಸುತ್ತೀರಿ ಎಂದು ಕೆಲವರು ವಾದಿಸಿದ್ದಾರೆ.

ಇದಕ್ಕೂ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದು ಹಿಂದಿ ಭಾಷಿಕರ ಮೇಲಿನ ದ್ವೇಷವಾಗಲೀ, ಹಿಂದಿ ಭಾಷೆ ಬಗ್ಗೆ ಧ್ವೇಷವಾಗಲೀ ಅಲ್ಲ, ಬದಲಾಗಿ ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರ ಪ್ರತಿಭಟನೆ ಇದು ಎಂದು ಹಲವರು ಹೇಳಿದ್ದಾರೆ.

ದಶಕಗಳಿಂದಲೂ ತಮಿಳುನಾಡು, ಆಂಧ್ರ, ಕೇರಳದಿಂದ ಬೆಂಗಳೂರಿಗೆ ಬರುವ ಜನರಿಗೆ ಯಾವ ಸಮಸ್ಯೆ ಆಗುತ್ತಿರಲಿಲ್ಲ. ಅವರು ಕನ್ನಡದಲ್ಲಿ ಮಾತನಾಡುತ್ತಾ ಇಲ್ಲಿಗೆ ಒಗ್ಗಿಹೋಗಿದ್ದರು. ಹಿಂದಿ ಭಾಷಿಕರಿಗೆ ಮಾತ್ರ ಬೇರೆ ಪ್ರಾದೇಶಿಕ ಭಾಷಿಕರ ಜೊತೆ ಸಮಸ್ಯೆಯಾಗುತ್ತದೆ. ಅವರು ಎಲ್ಲಿ ಹೋದರೂ ಹಿಂದಿಯೇ ಅಪೇಕ್ಷಿಸುತ್ತಾರೆ ಎಂದು ಕಿರಣ್ ಕೊಡ್ಲಾಡಿ ಎಂಬುವವರು ತಿಳಿಸಿದ್ಧಾರೆ.

ಉತ್ತರ ಭಾರತೀಯರೆಲ್ಲರದ್ದೂ ಸಮಸ್ಯೆಯಲ್ಲ. ಬಂಗಾಳಿ, ಮರಾಠಿ, ಉರ್ದು ಇತ್ಯಾದಿ ಬೇರೆ ಹಿಂದಿಯೇತರ ಭಾಷಿಕರು ಬೆಂಗಳೂರಿಗೆ ಬಂದರೆ ಕನ್ನಡ ಕಲಿತು ಮಾತನಾಡುತ್ತಾರೆ. ಹಿಂದಿ ವರ್ಗದವರದ್ದೇ ಸಮಸ್ಯೆ ಎಂದು ಹಲವು ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
#Kannada and #StopHindiImposition have again become trending in Twitter. Two groups are warring over opposition to Hindi in Bengaluru. A look at the controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X