• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂಗಾರು ಮಳೆಗೆ ಹಿಗ್ಗಿ ಹರಿವ 'ಕಲ್ಯಾಳ’ ಜಲಧಾರೆ

|

ಇಷ್ಟರಲ್ಲೇ ಮಳೆ ದೂರವಾಗಿ ಬಿರುಬಿಸಿಲಿನೊಂದಿಗೆ ತಣ್ಣಗಿನ ಚಳಿ ಆರಂಭವಾಗಬೇಕಾಗಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ. ಇನ್ನೂ ಮಳೆ ಸುರಿಯುತ್ತಲೇ ಇದೆ. ಇದರಿಂದ ಪಕೃತಿ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಅದರ ನಡುವೆ ಮಿಂಚು ಸರಿದಂತೆ ಭಾಸವಾಗುವ ಜಲಧಾರೆಗಳು ಮೈತುಂಬಿಕೊಂಡು ಭೋರ್ಗರೆಯುತ್ತಿವೆ.

ನಿಸರ್ಗ ಪ್ರೇಮಿಗಳಿಗೆ, ಜಲಧಾರೆಯ ಚೆಲುವನ್ನು ಆರಾಧಿಸುವವರಿಗೆ ಇದು ಸೂಕ್ತಕಾಲ. ಆಗೊಮ್ಮೆ ಈಗೊಮ್ಮೆ ಬರುವ ಮಳೆಯಲ್ಲಿ ದಟ್ಟ ಕಾನನದ ನಡುವೆ ಇರುವ ಜಲಧಾರೆ ನೋಡುವುದೇ ಸೊಗಸು. ಕೊಡಗಿನಲ್ಲಿ ಅಂಥ ಹಲವಾರು ಜಲಧಾರೆಗಳಿವೆ. ಅವುಗಳೆಲ್ಲವೂ ಮಳೆಗಾಲ ಸರಿಯುತ್ತಿದ್ದಂತೆಯೇ ಚೆಲುವು ಕಳೆದುಕೊಂಡು ಹೆಬ್ಬಂಡೆಗಳ ನಡುವೆ ಸಣಕಲಾಗಿ ಬಿಡುತ್ತವೆ. ಆದರೆ ಮುಂಗಾರು ಮಳೆಗೆ ಚೆಲುವ ಸೂಸುವ ಜಲಧಾರೆಗಳು ಈ ಬಾರಿ ಹಿಂಗಾರು ಮಳೆಯಲ್ಲಿಯೂ ಭೋರ್ಗರೆಯುತ್ತಿವೆ.

ಕೊಡಗಿನ ಚೇಲಾವರದ ಜಲಧಾರೆಯನ್ನರಸುತ್ತಾ...ಕೊಡಗಿನ ಚೇಲಾವರದ ಜಲಧಾರೆಯನ್ನರಸುತ್ತಾ...

ಕೊಡಗಿನಲ್ಲಿರುವ ಹಲವು ಜಲಪಾತಗಳ ನಡುವೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಕಲ್ಯಾಳ ಜಲಪಾತ ವಿಭಿನ್ನವಾಗಿದೆ. ಇದನ್ನು ತಲುಪಲು ಒಂದಷ್ಟು ಸಾಹಸ ಮಾಡುವುದು ಅನಿವಾರ್ಯ. ಆದರೆ ಸಾಹಸ ಮಾಡುತ್ತಾ ಜಲಧಾರೆಯತ್ತ ತೆರಳಿದವರಿಗೆ ಅದರ ಸೌಂದರ್ಯ ಮುದನೀಡುತ್ತದೆ.

ಇದರ ಸೌಂದರ್ಯವನ್ನು ಹತ್ತಿರದಿಂದ ಸವಿಯಲಾಗದಿದ್ದರೂ ಬಹಳಷ್ಟು ಜನ ದೂರದಿಂದಲೇ ಕಂಡಿರುತ್ತಾರೆ. ಮಡಿಕೇರಿಯಿಂದ ಸುಳ್ಯದ ಕಡೆ ಪ್ರಯಾಣಿಸುವವರಿಗೆ ಕೊಯನಾಡು ಬಳಿ ಸಾಗುತ್ತಿದ್ದಂತೆಯೇ ದೂರದ ಗುಡ್ಡದಲ್ಲಿ ಇದು ಗೋಚರಿಸಿರುತ್ತದೆ. ಕಲ್ಯಾಳ ಜಲಪಾತವನ್ನು ನೋಡಲು ಹೋಗುವವರು ಮಡಿಕೇರಿಯಿಂದ ಮಂಗಳೂರು ರಸ್ತೆಯಲ್ಲಿ ಸುಮಾರು 23 ಕಿ.ಮೀ. ದೂರ ಸಾಗಿದಾಗ ಸಿಗುವ ಕೊಯನಾಡು ಎಂಬಲ್ಲಿಂದ ಎಡಬದಿಯಲ್ಲಿರುವ ರಸ್ತೆಯಲ್ಲಿ 5 ಕಿ.ಮೀ. ಸಾಗಬೇಕು.

ವಾಹನದಲ್ಲಿ ತೆರಳುವುದಾದರೆ ಅಷ್ಟೊಂದು ಕಷ್ಟವಾಗಲಾರದು. ಆದರೆ ನಡೆದು ಹೋಗುವುದಾದರೆ ಸುಮಾರು ಒಂದು ಗಂಟೆ ಬೇಕಾಗುತ್ತದೆ. ಸುತ್ತಮುತ್ತಲಿನ ಪ್ರಕೃತಿ ಉಲ್ಲಾಸ ತುಂಬುತ್ತಿರುತ್ತದೆ. ಹಾದಿ ಕ್ರಮಿಸುತ್ತಾ ಸಾಗಿದಾಗ ಮೂರು ರಸ್ತೆಗಳು ನಮಗೆ ಸಿಗುತ್ತವೆ. ಅವುಗಳಲ್ಲಿ ಎರಡು ರಸ್ತೆಗಳನ್ನು ಬಿಟ್ಟು ಕಚ್ಚಾ ರಸ್ತೆಯಲ್ಲಿ ಸಾಗಿದರೆ ಜಲಪಾತದತ್ತ ಕೊಂಡೊಯ್ಯುತ್ತದೆ.

ವೀಕೆಂಡ್ ಗೆ ಶಿವನಸಮುದ್ರದ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಸಾಹಸ ಕ್ರೀಡೆವೀಕೆಂಡ್ ಗೆ ಶಿವನಸಮುದ್ರದ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಸಾಹಸ ಕ್ರೀಡೆ

ದಟ್ಟ ಅರಣ್ಯದ ನಡುವೆ ಈ ಜಲಧಾರೆ ನಿರ್ಮಿತವಾದುದರಿಂದ ಜಲಪಾತದೆಡೆಗಿನ ಜಾಡಾಗಲೀ, ಸೂಚನೆಗಳಾಗಲೀ ಸಿಗಲಾರವು. ಹರಿದು ಬರುವ ನದಿಯಲ್ಲಿಯೇ ಜಲಪಾತದ ಭೋರ್ಗರೆತವನ್ನು ಆಲಿಸುತ್ತಾ ಸಾಗಬೇಕು. ಇದು ಅಷ್ಟು ಸುಲಭವಲ್ಲ. ಮರಗಳ ಕೊಂಬೆ, ರೆಂಬೆ, ಕಲ್ಲು ಮುಳ್ಳು ಎಲ್ಲವೂ ಅಡ್ಡಿಪಡಿಸುತ್ತವೆ. ಅವೆಲ್ಲವನ್ನು ಸಾವಧಾನದಿಂದ ತಪ್ಪಿಸಿಕೊಂಡು ನಡೆದರೆ ಜಲಪಾತ ಎದುರಾಗುತ್ತದೆ. ಹೆಬ್ಬಂಡೆಯ ಮೇಲೆ ಸುಮಾರು ನೂರೈವತ್ತು ಅಡಿಯಷ್ಟು ಎತ್ತರದಿಂದ ಆವೇಶಭರಿತವಾಗಿ ಧುಮುಕಿ ಅಲ್ಲಿಂದ ಪದರ ಪದರವಾಗಿ ಹರಿದು ತಳಸೇರಿ ಮುನ್ನಡೆಯುವ ದೃಶ್ಯ ಖುಷಿ ಕೊಡುತ್ತದೆ.

ಬೆಟ್ಟದ ಮೇಲಿದ್ದು ದಟ್ಟ ಕಾಡಿನಿಂದ ಕೂಡಿರುವ ಈ ಪ್ರದೇಶಕ್ಕೆ ಕಲ್ಯಾಳ ಎಂಬ ಹೆಸರು ಹೇಗೆ ಬಂತು ಎಂದು ನೋಡ ಹೊರಟರೆ ಒಂದಷ್ಟು ಮಾಹಿತಿಗಳು ಲಭಿಸುತ್ತವೆ. ಬಹಳಷ್ಟು ವರ್ಷಗಳ ಹಿಂದೆ ಸಂಪಾಜೆ ಸನಿಹದಲ್ಲಿ ಕಲ್ಯಾಳ ಮಜಲು ಎಂಬಲ್ಲಿ ನೆಲೆಸಿದ ಮನೆತನದವರು ಅಲ್ಲಿ ಕೃಷಿಕಾರ್ಯ ಮಾಡಲಾಗದ ಕಾರಣ ಕೃಷಿಗೆ ಸೂಕ್ತ ಸ್ಥಳವನ್ನು ಹುಡುಕುತ್ತಾ ಪಶ್ಚಿಮ ಘಟ್ಟದ ಕಲ್ಯಾಳ ಪ್ರದೇಶಕ್ಕೆ ಬಂದು ಅಲ್ಲಿಯೇ ನೆಲೆಯೂರಿದರಂತೆ. ಕಲ್ಯಾಳ ಮನೆತನದವರು ನೆಲೆಸಿದ ಜಾಗ ಕಲ್ಯಾಳ ಗ್ರಾಮವಾಯಿತೆಂದು ಹೇಳುತ್ತಾರೆ. ಕಲ್ಯಾಳದಲ್ಲಿ ನಿರ್ಮಾಣವಾಗಿರುವ ಜಲಪಾತವನ್ನು ಕೂಡ ಜಲ ಕಲ್ಯಾಳ ಜಲಪಾತ ಎಂದೇ ಕರೆಯುತ್ತಾರೆ.

ಬೇಸಿಗೆಯಲ್ಲಿ ತೀರಾ ಸೊರಗಿ ಮಳೆಗಾಲದಲ್ಲಿ ಚೇತರಿಸಿಕೊಳ್ಳುವ ಕಲ್ಯಾಳ ಜಲಪಾತ ಈ ಬಾರಿ ಹಿಂಗಾರು ಮಳೆಯ ಅಬ್ಬರಕ್ಕೆ ಇನ್ನೂ ಚೆಲುವನ್ನು ಒಡಲಲ್ಲಿ ತುಂಬಿಕೊಂಡಿರುವುದು ಚಾರಣಪ್ರಿಯರಿಗೆ ಹುರುಪು ತುಂಬುತ್ತದೆ. ಜಲಪಾತ ವೀಕ್ಷಣೆಗೆ ತೆರಳುವವರು ಸ್ಥಳೀಯರ ಸಹಾಯಪಡೆದುಕೊಂಡು ತೆರಳುವುದು ಉತ್ತಮ.

English summary
Kalyala Falls, which is adjacent to Kodagu and Dakshina Kannada district, is different from the many waterfalls in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X