"ಇದು ನನ್ನ ಕೊನೆಯ ತಾಣ. ಇಲ್ಲೇ ಸಮಾಧಿ" ಎಂದಿದ್ದರು ರವಿ ಬೆಳಗೆರೆ
ಕಾರವಾರ, ನವೆಂಬರ್ 13: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಫಾರ್ಮ್ ಹೌಸ್ ಖರೀದಿಸಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ, "ಅಲ್ಲೇ ನನ್ನ ಸಮಾಧಿ ಎಂದಿದ್ದರು. ಇದೀಗ ಬೆಳಗೆರೆ ನಿಧನದ ಹಿನ್ನೆಲೆಯಲ್ಲಿ ಈ ಫಾರ್ಮ್ ಹೌಸ್ನಲ್ಲಿ ನೀರವ ಮೌನ ಆವರಿಸಿದೆ.
ಜೊಯಿಡಾ ತಾಲೂಕಿನ ಜಗಲ್ ಬೇಟ್ ನಲ್ಲಿ ರವಿ ಬೆಳಗೆರೆ ಕಳೆದ ಹತ್ತಾರು ವರ್ಷದಿಂದ ಫಾರ್ಮ್ ಹೌಸ್ ಮಾಡಿಕೊಂಡಿದ್ದರು. ರವಿ ಬೆಳಗೆರೆಗೆ ಜೊಯಿಡಾ ಅಚ್ಚು ಮೆಚ್ಚಿನ ತಾಣವಾಗಿದ್ದು, ಸಮಯ ಬಿಡುವು ಮಾಡಿಕೊಂಡು ಇಲ್ಲಿಗೆ ಆಗಮಿಸುತ್ತಿದ್ದರು. ಹೊಸ ಪುಸ್ತಕಗಳನ್ನು ಬರೆಯಲು ಹಾಗೂ ಲೇಖನ ಬರೆಯಲು ಸ್ಫೂರ್ತಿಗಾಗಿ ಜೊಯಿಡಾದ ತಮ್ಮ ಫಾರ್ಮ್ ಹೌಸ್ಗೆ ಬರುತಿದ್ದ ರವಿ ಬೆಳಗರೆ, ಕಾಡುಮೇಡು ಸುತ್ತಾಡುತ್ತಾ ಹಕ್ಕಿಗಳ ವೀಕ್ಷಣೆ ಮಾಡುತ್ತ ತಿಂಗಳುಗಟ್ಟಲೇ ಇಲ್ಲಿಯೇ ತಂಗುತ್ತಿದ್ದರು.
ಒಂದೇ ಸಲಕ್ಕೆ 3 ಲಕ್ಷ ರುಪಾಯಿಯಷ್ಟು ಆಪಲ್ ಪ್ರಾಡಕ್ಟ್ ಖರೀದಿಸಿದ್ದ ಬೆಳಗೆರೆ

ಜೊಯಿಡಾದಲ್ಲಿ ಫಾರ್ಮ್ ಹೌಸ್ ಖರೀದಿಸಿದ್ದ ರವಿ ಬೆಳಗೆರೆ
ಆಂಗ್ಲ ಬರಹಗಾರ ಮನೋಹರ್ ಮಾಲ್ಗಾಂವಕರ್ ಅವರ ಈ ಫಾರ್ಮ್ ಹೌಸ್ ಅನ್ನು ರವಿಯವರು ಖರೀದಿಸಿದ್ದರು. ಮೂರು ವರ್ಷದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ವೇಳೆ ರವಿಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ, "ನನ್ನ ಜೊಯಿಡಾದ ಎಸ್ಟೇಟ್ ನ ಮಾಲೀಕ ಮನೋಹರ್ ಮಲ್ಗಾಂವಕರ್ ಒಬ್ಬ ಮಹಾನ್ ಇಂಗ್ಲಿಷ್ ರೈಟರ್. ಅವರು ಸ್ಟಿಕ್ ಹಿಡಿದು ಓಡಾಡುತ್ತಿದ್ದರು. ನಂತರ ಕುರ್ಚಿಗೆ ಸ್ಥಿರರಾದರು. ಕೊನೆಗೆ ಧರಾಶಾಹಿಯಾದರು" ಎಂದು ಬರೆದುಕೊಂಡಿದ್ದರು.

"ಇದೇ ನನ್ನ ಕೊನೆಯ ತಾಣ, ಅಲ್ಲೇ ಸಮಾಧಿ"
ಮುಂದುವರೆದು, "ಮನೋಹರ್ ಮಲ್ಗಾಂವಕರ್ ಅವರ ಕೊನೆಗಾಲದಲ್ಲಿ ಸೇವೆ ಮಾಡಿದೆ. ದೊಡ್ಡ ಮೊತ್ತ ಕೊಟ್ಟು ಅವರ ಎಸ್ಟೇಟ್ ಖರೀದಿಸಿದೆ. ಅದು ನನ್ನ ಕೊನೆಯ ತಾಣ. ಅಲ್ಲೇ ಸಮಾಧಿ' ಎಂದು ಬರೆದುಕೊಂಡಿದ್ದರು. ರವಿ ಬೆಳೆಗೆರೆಯವರು ನಿಧನರಾದ ಈ ಸಮಯದಲ್ಲಿ ಅವರ ಈ ಮಾತುಗಳು ಅನುರಣಿಸುತ್ತಿವೆ.
ಕೆಟ್ಟ ಸಿಟ್ಟು, ಅಸಾಧ್ಯ ಹಠಕ್ಕೆ ಎಷ್ಟೆಲ್ಲ ಬೆಲೆ ತೆತ್ತರು ಬೆಳಗೆರೆ?

ಸೂರ್ಯನಿಲ್ಲದ ಬಾನಿನಂತಾದ ಫಾರ್ಮ್ ಹೌಸ್
ಆದರೆ, ಕಳೆದ ಲಾಕ್ಡೌನ್ ನಿಂದ ಇತ್ತ ಕಡೆ ರವಿ ಬೆಳಗೆರೆ ಫಾರ್ಮ್ ಹೌಸ್ ನತ್ತ ಸುಳಿದಿರಲಿಲ್ಲ. ಈಗ ಫಾರ್ಮ್ ಹೌಸ್ ಸೂರ್ಯನಿಲ್ಲದ ಬಾನಿನಂತಾಗಿದ್ದು, ಮೌನ ಆವರಿಸಿದೆ. ಬೆಳಗೆರೆಯವರ ಫಾರ್ಮ್ ಹೌಸ್ ನಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಅಲ್ಲಿನ ಜನರು ತಮ್ಮ ದುಃಖ ತೋಡಿಕೊಂಡಿದ್ದಾರೆ.

ಮಾಧ್ಯಮ ರಂಗದಲ್ಲಿ ಅಚ್ಚಳಿಯದ ರವಿ ಬೆಳಗೆರೆ ಹೆಸರು...
ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ನವೆಂಬರ್ 13ರ ಶುಕ್ರವಾರ ನಿಧನರಾದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ರವಿ ಬೆಳಗೆರೆಯವರು ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು.
ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರು, ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.