ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗಮಗಿಸುವ ವಿದ್ಯುದ್ದೀಪದ ಬೆಳಕಿನಲ್ಲಿ ಗಜಪಡೆ ತಾಲೀಮು!

|
Google Oneindia Kannada News

ನಾಡಹಬ್ಬ ದಸರಾಕ್ಕೆ ಮೈಸೂರು ನಗರ ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದೆ. ಈಗಾಗಲೇ ನಗರದಾದ್ಯಂತ ಮಾಡಿರುವ ವಿದ್ಯುದ್ದೀಪದ ಅಲಂಕಾರ ಜಗಮಗಿಸುತ್ತಿದ್ದರೆ, ಮತ್ತೊಂದೆಡೆ ಜಂಬೂಸವಾರಿಗೆ ಗಜಪಡೆಯನ್ನು ಸನ್ನದ್ಧಗೊಳಿಸುವ ಕಾರ್ಯ ಅರ್ಥಾತ್ ತಾಲೀಮು ಅಂತಿಮ ಹಂತವನ್ನು ತಲುಪಿದೆ.

ಇದುವರೆಗೆ ಒಣ ತಾಲೀಮಿನಿಂದ ಆರಂಭವಾಗಿ ಮರದ ಅಂಬಾರಿಯ ತನಕ ಸುಮಾರು ಎರಡು ತಿಂಗಳ ಕಾಲ ಗಜಪಡೆಗೆ ತಾಲೀಮು ನಡೆಸಲಾಗಿದೆ. ಈ ಬಾರಿ ಅಂಬಾರಿಗೆ ಪುಷ್ಪಾರ್ಚನೆಗೆ ನಿಗದಿಯಾಗಿರುವ ಮುಹೂರ್ತ ಸಂಜೆಯ ಸಮಯವಾಗಿರುವುದರಿಂದ ಅಂಬಾರಿ ಹೊತ್ತ ಅಭಿಮನ್ಯು ಅರಮನೆಯಿಂದ ಹೊರಟು ಬನ್ನಿಮಂಟಪ ತಲುಪುವ ವೇಳೆಗೆ ರಾತ್ರಿಯಾಗಲಿದೆ. ಹೀಗಾಗಿ ಇಡೀ ನಗರದಲ್ಲಿ ವಿದ್ಯುದ್ದೀಪಗಳ ಅಲಂಕಾರ ಜಗಮಗಿಸಲಿರುವುದರಿಂದ ಗಜಪಡೆ ವಿದ್ಯುದ್ದೀಪದ ಬೆಳಕಿನಲ್ಲಿ ನಡೆಯುವುದು ಅನಿವಾರ್ಯವಾಗಿದೆ.

ದಸರಾ ಹಿನ್ನೆಲೆ ಟ್ರಾಫಿಕ್ ಜಾಮ್‌ ತಪ್ಪಿಸಲು ಸಂಚಾರ ಮಾರ್ಗ ಬದಲಾವಣೆದಸರಾ ಹಿನ್ನೆಲೆ ಟ್ರಾಫಿಕ್ ಜಾಮ್‌ ತಪ್ಪಿಸಲು ಸಂಚಾರ ಮಾರ್ಗ ಬದಲಾವಣೆ

ಇದು ದಸರಾ ಇತಿಹಾಸದಲ್ಲಿ ಗಜಪಡೆಗಳಿಗೆ ಹೊಸ ಅನುಭವವಾಗಲಿದೆ. ಹೀಗಾಗಿ ವಿದ್ಯುದ್ದೀಪದ ಬೆಳಕಿನಲ್ಲಿ ಗಜಪಡೆ ವಿಚಲಿತಗೊಳ್ಳದೆ ಹೆಜ್ಜೆಹಾಕುವುದನ್ನು ಅಭ್ಯಸಿಸಲು ಇದೀಗ ಕತ್ತಲಾದ ಬಳಿಕ ವಿದ್ಯುದ್ದೀಪದ ಅಲಂಕಾರದಲ್ಲಿ ಗಜಪಡೆಗೆ ತಾಲೀಮು ನಡೆಸಲಾಗುತ್ತಿದೆ. ಈಗಾಗಲೇ ಗಜಪಡೆ ಹಾಗೂ ಅಶ್ವದಳಕ್ಕೆ 3ನೇ ಹಾಗೂ ಅಂತಿಮ ಸುತ್ತಿನ ಫಿರಂಗಿ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮೂರನೇ ಶಬ್ದದ ತಾಲೀಮಿನಲ್ಲಿ ಯಾವುದೇ ಗಜಪಡೆ ಮತ್ತು ಅಶ್ವಪಡೆ ಶಬ್ದಕ್ಕೆ ಸ್ವಲ್ಪವೂ ಬೆದರದೆ ನಿಲ್ಲುವ ಮೂಲಕ ನಾವು ಜಂಬೂಸವಾರಿಯಂದು 21 ಸುತ್ತು ಕುಶಾಲತೋಪು ಸಿಡಿಸಿದರೂ ಹೆದರಲ್ಲ ಸಜ್ಜಾಗಿದ್ದೇವೆ. ಶಬ್ದಕ್ಕೆ ಒಗ್ಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿವೆ.

 ಶಬ್ದಕ್ಕೆ ಬೆದರದ ಗಜ-ಅಶ್ವಪಡೆ

ಶಬ್ದಕ್ಕೆ ಬೆದರದ ಗಜ-ಅಶ್ವಪಡೆ

ಗಜಪಡೆ ಹಾಗೂ ಅಶ್ವದಳ ಬೆದರದಂತೆ ಅಭ್ಯಾಸ ಮಾಡಿಸುವ ಸಲುವಾಗಿ ವಸ್ತುಪ್ರದರ್ಶನದ ಪಾರ್ಕಿಂಗ್ ಜಾಗದಲ್ಲಿ 3ನೇ ಹಂತದ ಫಿರಂಗಿ ತಾಲೀಮು ನಡೆದಿದೆ. ಈ ವೇಳೆ ಫಿರಂಗಿ ದಳದ ಸಿಎಆರ್ ಪೊಲೀಸರು 7 ಫಿರಂಗಿಗಳ ಮೂಲಕ ಮೂರು ಸುತ್ತಿನಲ್ಲಿ ಒಟ್ಟು 21ಸಿಡಿಮದ್ದನ್ನು ಸಿಡಿಸಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಭಾರಿ ಶಬ್ಧದ ತಾಲೀಮು ನಡೆಸಿದೆ.

ಈ ಸಂದರ್ಭ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ, ವಿಜಯ, ಗೋಪಾಲಸ್ವಾಮಿ, ಧನಂಜಯ, ಅರ್ಜುನ, ಮಹೇಂದ್ರ, ಭೀಮ, ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ, ಗೋಪಿ ಸೇರಿದಂತೆ ಅಶ್ವಾರೋಹಿ ದಳದ 34 ಕುದುರೆಗಳು ಭಾಗವಹಿಸಿ ಶಬ್ದಕ್ಕೆ ಹೆದರದೆ ಧೈರ್ಯ ಮೆರೆದಿವೆ. ಪ್ರತಿವರ್ಷವೂ ಭಾರಿ ಶಬ್ದದ ತಾಲೀಮನ್ನು ಮೂರು ಸುತ್ತಿನಲ್ಲಿ ನಡೆಸಲಾಗುತ್ತದೆ. ಮೊದಲ ಹಾಗೂ 2ನೇ ತಾಲೀಮಿನಲ್ಲಿ ಬೆದರಿದ್ದ ಗಜಪಡೆಯ ಕೆಲ ಆನೆಗಳು 3ನೇ ತಾಲೀಮಿನಲ್ಲಿ ಬೆದರದೆ ಭಾರಿ ಶಬ್ದಕ್ಕೆ ಒಗ್ಗಿಕೊಂಡಿವೆ.

 ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯಕ್ಕೆ ಪ್ರಾಶಸ್ತ್ಯ; ಬೊಂಬು ಬಿರಿಯಾನಿ, ಸೊಪ್ಪಿನ ಪಲ್ಯ ಸ್ಪೆಷಲ್ ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯಕ್ಕೆ ಪ್ರಾಶಸ್ತ್ಯ; ಬೊಂಬು ಬಿರಿಯಾನಿ, ಸೊಪ್ಪಿನ ಪಲ್ಯ ಸ್ಪೆಷಲ್

 ದೀಪಾಲಂಕಾರದ ಬೆಳಕಿನ ಅಭ್ಯಾಸ

ದೀಪಾಲಂಕಾರದ ಬೆಳಕಿನ ಅಭ್ಯಾಸ

ಇನ್ನು ಏನಿದ್ದರೂ ಜಂಬೂ ಸವಾರಿಗೆ ಬೇಕಾದ ತಯಾರಿಗಳು ನಡೆಯಬೇಕಾಗಿದೆ. ಈ ಬಾರಿ ಜಂಬೂಸವಾರಿ ತಡವಾಗಿ ನಡೆಯುವುದರಿಂದ ಅಂಬಾರಿ ಹೊತ್ತ ಆನೆ ಬನ್ನಿ ಮಂಟಪ ತಲುಪಲು ಕತ್ತಲಾಗುವುದರಿಂದ ಎಲ್ಲಾ ಆನೆಗಳಿಗೂ ದೀಪಾಲಂಕಾರದ ಬೆಳಕಿನ ಅಭ್ಯಾಸ ಮಾಡಿಸುವ ಸಲುವಾಗಿ ಶುಕ್ರವಾರದಿಂದ ಹೊಸ ತಾಲೀಮು ಆರಂಭವಾಗಿದೆ. ಒಟ್ಟು ಮೂರು ದಿನ ಈ ತಾಲೀಮು ನಡೆಯಲಿದೆ. ಇದುವರೆಗೆ ಹಗಲಿನಲ್ಲಿಯೇ ಗಜಪಡೆಗಳು ಹೆಜ್ಜೆ ಹಾಕುತ್ತಾ ಸಾಗುತ್ತಿದ್ದವು. ಆದರೆ ಈ ಬಾರಿ ಜಂಬೂಸವಾರಿ ಬನ್ನಿಮಂಟಪ ತಲುಪುವ ವೇಳೆಗೆ ಕತ್ತಲಾಗಲಿದೆ. ಎಲ್ಲೆಡೆ ವಿದ್ಯುದ್ದೀಪಗಳು ಮಿನುಗಲಿವೆ.

 ಗೋಪಾಲಸ್ವಾಮಿಗೆ ಮರದ ಅಂಬಾರಿ ಹೊರಿಸಿ ತಾಲೀಮು

ಗೋಪಾಲಸ್ವಾಮಿಗೆ ಮರದ ಅಂಬಾರಿ ಹೊರಿಸಿ ತಾಲೀಮು

ಅರಮನೆಯಿಂದ ಆರಂಭವಾಗಿ ಸಯ್ಯಾಜಿರಾವ್ ರಸ್ತೆಯಲ್ಲಿ ಬನ್ನಿಮಂಟಪಕ್ಕೆ ಜಂಬೂಸವಾರಿ ಸಾಗಲಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿ ಅಂಬಾರಿಯನ್ನು ವೀಕ್ಷಿಸಲು ಕಾಯುತ್ತಾರೆ. ಹೀಗೆ ಕಾಯುವವರಿಗೆ ಈ ಬಾರಿ ರಾತ್ರಿವೇಳೆಯಲ್ಲಿ ಅಂಬಾರಿಯನ್ನು ನೋಡುವ ಭಾಗ್ಯ ಲಭಿಸಲಿದೆ. ಇದೊಂದು ವಿಭಿನ್ನ ಅನುಭವವಾಗಲಿದೆ. ರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡಲಾಗಿದ್ದು, ಅಂಬಾರಿ ಹೊತ್ತು ಸಾಗುವಾಗ ಜಂಬೂ ಸವಾರಿ ಮಾರ್ಗದಲ್ಲಿ ದೀಪಾಲಂಕಾರದ ತೋರಣ ಅಂಬಾರಿಗೆ ತಾಗುತ್ತಾ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಅಭಿಮನ್ಯು ಬದಲಿಗೆ ಅತಿ ಎತ್ತರದ ಮತ್ತು ಬಲಿಷ್ಠನಾಗಿರುವ ಗೋಪಾಲಸ್ವಾಮಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗಿದೆ. ಅಂಬಾರಿಗೆ ದೀಪಾಲಂಕಾರ ತಾಗುವ ಸ್ಥಳದಲ್ಲಿ ಇನ್ನಷ್ಟು ಎತ್ತರಕ್ಕೇರಿಸುವ ಕೆಲಸವನ್ನು ಸೆಸ್ಕ್ ಸಿಬ್ಬಂದಿ ಮಾಡಿದ್ದಾರೆ.

 ಸಂಭ್ರಮಿಸಿದ ಜನರ

ಸಂಭ್ರಮಿಸಿದ ಜನರ

ಈ ತಾಲೀಮಿನಲ್ಲಿ 13 ಆನೆಗಳು ಪಾಲ್ಗೊಂಡು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಐದು ಕಿ.ಮೀ.ದೂರವನ್ನು ಕ್ರಮಿಸಿ ಬರುತ್ತಿವೆ. ಗಜಪಡೆ ವಿದ್ಯುತ್ ಬೆಳಕಿನಲ್ಲಿ ರಾಜ ಮಾರ್ಗದಲ್ಲಿ ಸಾಗುವ ದೃಶ್ಯ ನೋಡುವುದೇ ಒಂದು ಆನಂದವಾಗಿರುವುದರಿಂದ ಜನ ವಿಷಯ ತಿಳಿಯುತ್ತಿದ್ದಂತೆಯೇ ರಾಜಮಾರ್ಗದಲ್ಲಿ ನೆರೆದು ಖುಷಿಯಿಂದ ವೀಕ್ಷಿಸಿ ತಮ್ಮ ಮೊಬೈಲ್ ಗಳಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ.

 ದೀಪಾಲಂಕಾರ ತೋರಣದ ಎತ್ತರ ಪರೀಕ್ಷೆ

ದೀಪಾಲಂಕಾರ ತೋರಣದ ಎತ್ತರ ಪರೀಕ್ಷೆ

ಈ ಕುರಿತಂತೆ ಮಾಹಿತಿ ನೀಡಿರುವ ಡಿಸಿಎಫ್ ಡಾ.ವಿ. ಕರಿಕಾಳನ್ ಅವರು, ಇದೇ ಮೊದಲ ಬಾರಿಗೆ ದೀಪದ ಬೆಳಕಿನಲ್ಲಿ ಗಜಪಡೆಯ ತಾಲೀಮು ನಡೆಸಿದ್ದು, ಅಭಿಮನ್ಯು ನೇತೃತ್ವದ ಗಜಪಡೆಯ ಎಲ್ಲಾ ಆನೆಗಳು ಒಂದಿಷ್ಟೂ ಹೆದರದೆ ನಿರಾತಂಕವಾಗಿ ಬನ್ನಿಮಂಟಪಕ್ಕೆ ತೆರಳಿವೆ. ಗಜಪಡೆಗೆ ದೀಪಾಲಂಕಾರದ ಬೆಳಕಿನಲ್ಲಿ ತಾಲೀಮು ನಡೆಸುವುದರೊಂದಿಗೆ ಬೆಳಕಿನ ತೋರಣದ ಎತ್ತರವನ್ನೂ ಪರೀಕ್ಷೆ ಮಾಡಲಾಗಿದೆ. ಒಂದೆರೆಡು ಸ್ಥಳಗಳಲ್ಲಿ ಮರದ ಅಂಬಾರಿಗೆ ತೋರಣ ತಾಗಿದ್ದು, ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇನ್ನೂ ಎರಡು ದಿನಗಳ ಕಾಲ ಇದೇ ರೀತಿಯ ತಾಲೀಮು ನಡೆಸುವುದಾಗಿ ಹೇಳಿದ್ದಾರೆ.

ಒಟ್ಟಾರೆ ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ದಸರಾ ನಡೆಯುತ್ತಿದ್ದು, ಪ್ರತಿಯೊಂದು ವಿಷಯಗಳು ಜನರಿಗೆ ಹೊಸತನದಿಂದ ಕೂಡಿದ ಅನುಭವವನ್ನು ನೀಡುತ್ತಿದೆ. ಈಗಾಗಲೇ ಮೈಸೂರಿನಲ್ಲಿ ದಸರಾ ಸಂಬಂಧ ಕಾರ್ಯಕ್ರಮಗಳು ಆರಂಭವಾಗಿದ್ದು, ಸೋಮವಾರದಿಂದ ಎಲ್ಲ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ಸಿಗಲಿದೆ. ಆ ನಂತರ ಇಡೀ ಮೈಸೂರು ದಸರಾ ಸಂಭ್ರಮ-ಸಡಗರದಲ್ಲಿ ಮಿಂದೇಳಲಿದೆ.

English summary
Dasara elephants on the Jamboo team are walking under the lightings and the final round of cannon firing was also successful
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X