• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಡುಗೀರಿಗೆ ನಗರೀಕರಣದ ವ್ಯಾಮೋಹವೋ? ಅಗತ್ಯತೆಯೋ?

By ಸುಷ್ಮಾ ಚಾತ್ರ
|
Google Oneindia Kannada News

ಮದುವೆಯಾಗಬೇಕಿರುವವರಿಗೆ ಕನ್ಯೆ ಹುಡುಕುವ ಸಮಯ ಕೇಳಿಬರುವ ಸಾಮಾನ್ಯದ ಮಾತು ಇದು. ಹಳ್ಳಿ ಕಡೆ ಬೇಡ ಹೇಳ್ತಾರೆ. ಬೆಂಗಳೂರಾದ್ರೆ ಓಕೆ ಹೇಳ್ತಾರೆ ಅನ್ನೋದು. ಇದರ ಬಗ್ಗೆ ಹೆಚ್ಚಿನವರು ಬೊಟ್ಟು ಮಾಡೋದು ಹೆಣ್ ಮಕ್ಕಳನ್ನೇ! ಹೆಣ್ಣಿಗೆ ನಗರದ ವ್ಯಾಮೋಹ, ಹೆಣ್ಣಿಗೆ ಪೇಟೆಯ ಶೋಕಿ ಜೀವನದ ಆಸೆ, ಹೆಣ್ಣಿಗೆ ಹಳ್ಳಿ ಕೆಲಸ ಮಾಡೋದಂದ್ರೆ ಇಷ್ಟ ಇಲ್ಲ, ಹೆಣ್ ಮಕ್ಕಳು ಕಲ್ತಿದ್ದು ಹೆಚ್ಚಾಯ್ತು ಅನ್ನೋವರೆಗಿಂದ ಬೆಂಗಳೂರು ಸೇರಿ ಮಾನ ಬಿಟ್ಟೋರು ಅನ್ನೋವರೆಗೂ ಮಾತಾಡಿ ಇತ್ಯಾದಿ ಬ್ಲಬ್ಲಬ್ಲಗಳು ಹೆಣ್ಣಿನ ಬಗ್ಗೆಯೇ ಪ್ರಸ್ತಾಪವಾಗುತ್ತೆ. ಗಂಡು ಮಕ್ಕಳು ಸೇಫ್ ಝೋನ್‌ನಲ್ಲಿ ಸರ್ವಗುಣ ಸಂಪನ್ನ ಶೋಭಿತರೆಂಬಂತೆ ಈ ಸಮಾಜದಲ್ಲಿ ಬಿಂಬಿತವಾಗುತ್ತಿರುವುದೇ ನಮ್ಮ ಸಮಾಜದ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ಎಂದೇ ನಾನು ಭಾವಿಸುತ್ತೇನೆ.

ಈಗ ಮದುವೆ ವಯಸ್ಸಿಗೆ ಬಂದವರು ಎಂದರೆ 1985 ರಿಂದ ಪ್ರಾರಂಭವಾಗಿ 90ರ ದಶಕದಲ್ಲಿ ಹುಟ್ಟಿದವರು ಅಲ್ಲವೇ? ಈ ದಶಕದಲ್ಲಾಗಲೇ ಎರಡು ಮಕ್ಕಳ ಕಾನ್ಸೆಪ್ಟ್ ನಮ್ಮ ಸಮಾಜವನ್ನು ಪ್ರವೇಶಿಸಿತ್ತು. ಕೆಲವು ಎಕ್ಸೆಪ್ಶನಲ್ ಕೇಸ್ ಗಳನ್ನು ಹೊರತುಪಡಿಸಿದರೆ ಹೆಚ್ಚಿನವರಿಗೆ ಎರಡು ಮಕ್ಕಳು. ಒಂದು ಗಂಡು, ಒಂದು ಹೆಣ್ಣು ಇಲ್ಲವೇ ಇಬ್ಬರೂ ಹೆಣ್ಣು ಮಕ್ಕಳು ಅಥವಾ ಇಬ್ಬರೂ ಗಂಡು ಮಕ್ಕಳು! ಅದೇನೇ ಇದ್ದರೂ ಅಮ್ಮ ಹೆತ್ತಾಗ ಮೊದಲ ಮಗಳೂ ಹೆತ್ತಳು ಅಥವಾ ಅಪ್ಪನಿಗೆ ಕೊನೆಯ ಮಗು ಹುಟ್ಟಿದಾಗ ಮಗನಿಗೂ ಮೊದಲ ಮಗುವಾಗಿದೆ ಅನ್ನೋದು ಈ ದಶಕಗಳಲ್ಲಿ ನಡೆದದ್ದು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲ. ಒಪ್ಪಿಕೊಳ್ಳುತ್ತೀರಿ ಅಲ್ಲವೇ? ಮುಂದೆ ಓದಿ...

 ಜೆಫ್ ಬೆಜೋಸ್ ತಂಡದಲ್ಲಿ ಮುಂಬೈ ಯುವತಿ; ಬಾಹ್ಯಾಕಾಶ ಕ್ಷೇತ್ರದ ಹೆಮ್ಮೆ ಜೆಫ್ ಬೆಜೋಸ್ ತಂಡದಲ್ಲಿ ಮುಂಬೈ ಯುವತಿ; ಬಾಹ್ಯಾಕಾಶ ಕ್ಷೇತ್ರದ ಹೆಮ್ಮೆ

 ಜವಾಬ್ದಾರಿಗೆ ಹೆಗಲು ಕೊಟ್ಟ ಹೆಣ್ಣು ಮಕ್ಕಳು

ಜವಾಬ್ದಾರಿಗೆ ಹೆಗಲು ಕೊಟ್ಟ ಹೆಣ್ಣು ಮಕ್ಕಳು

ಹಾಗಾಗಿ ಅಪ್ಪ ಅಮ್ಮನ ಜವಾಬ್ದಾರಿ ಅನ್ನೋದು ಒಂದು ಗಂಡು ಮತ್ತು ಒಂದು ಹೆಣ್ಣು ಇಬ್ಬರ ಮೇಲೂ ಸರಿಸಮಾನಾಗಿ ಬಿದ್ದಿದೆ. ಹೆಣ್ಣಿಗೂ ತನ್ನ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಜವಾಬ್ದಾರಿ ಕೇವಲ ಮದುವೆ ಆಗುವವರೆಗೆ ಮಾತ್ರವಲ್ಲ ಬದಲಾಗಿ ಜೀವನಪರ್ಯಂತ ಇದೆ. ಅದರಲ್ಲೂ ಎರಡು ಹೆಣ್ಣು ಮಕ್ಕಳಿರುವವರಲ್ಲಿ ಅಧಿಕವೇ ಇದೆ. ಒಂದು ವೇಳೆ ಹೆಣ್ಣು ಮಕ್ಕಳು ನೋಡಿಕೊಳ್ಳದೆ ಹಿಂದೂ ಸಮಾಜದಲ್ಲಿರುವ ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಪಾಲಿಸಿಯಲ್ಲೇ ಬದುಕುವುದಾದರೆ ಹೆಣ್ಣು ಹೆತ್ತ ಪೋಷಕರು ಅನಾಥಾಶ್ರಮವೋ, ವೃದ್ಧಾಶ್ರಮವೋ ಸೇರಬೇಕಾಗುತ್ತದೆ. ಹಾಗಾಗಿ ಇಂದಿನ ಎಲ್ಲಾ ಹೆಣ್ಣು ಮಕ್ಕಳು ತಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕು ಎಂದು ಬಯಸುತ್ತಾರೆ. ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಒಬ್ಬ ಗಂಡಿನಂತೆ ನನಗೂ ಇದೆ ಎಂದು ಭಾವಿಸುತ್ತಾರೆ. ಹೀಗೆ ಪೋಷಕರ ಜವಾಬ್ದಾರಿ ಹೊರಲು ಇಂದಿನ ಹೆಣ್ಣು ಮಕ್ಕಳು ಪಣ ತೊಟ್ಟು ಬದುಕುತ್ತಿರುವುದು ಯಾವ ಹೆಣ್ಣಿನ ತಪ್ಪು? ಹಳ್ಳಿಗೆ ಮದುವೆ ಆದರೆ ಅಪ್ಪ ಅಮ್ಮನ್ನ ನೋಡ್ಕೊಳೋಕೆ ಆಗಲ್ವಾ? ನಗರಕ್ಕೆ ಹೋದ್ರೆ ಮಾತ್ರ ಸಾಧ್ಯನಾ? ಖಂಡಿತ ಇದಕ್ಕೆ ಉತ್ತರ ಹೌದು ಎಂದೇ ಹೇಳಲು ನಾನು ಬಯಸುತ್ತೇನೆ.

 ಅವಳ ಸಾಸಿವೆಡಬ್ಬಿ ಲೆಕ್ಕ ಅವಳ ಬಳಿಯೇ ಇರುತ್ತೆ

ಅವಳ ಸಾಸಿವೆಡಬ್ಬಿ ಲೆಕ್ಕ ಅವಳ ಬಳಿಯೇ ಇರುತ್ತೆ

ತವರು ಮನೆಯಿಂದ ಅತ್ತಿಗೆ, ಅಮ್ಮ, ಇನ್ನೊಂದಿಷ್ಟು ಸಂಬಂಧಿಕರು ತನ್ನ ಮನೆಗೆ ಬಂದಾಗ ಎಷ್ಟು ರೂಪಾಯಿ ಕುಂಕುಮಕ್ಕೆ ಇಡಲಿ? ಕುಂಕುಮಕ್ಕೆ ಕೊಡೋಕೆ ದುಡ್ಡು ಕೊಡ್ತೀರಾ? ಹೀಗೆ ಗಂಡನ ಮನೆಯವರ ಬಳಿ ಕೇಳಿ ಆತ ಕೊಟ್ಟಷ್ಟು ಮಾತ್ರ ತವರಿನವರ ಕುಂಕುಮದ ಬಾಗೀನದಲ್ಲಿ ಇಡಬೇಕು ಅನ್ನೋ ಪರಿಸ್ಥಿತಿಯನ್ನು ಈಗಿನ ಹೆಣ್ಣು ಮಕ್ಕಳು ಊಹಿಸಿಕೊಳ್ಳೋಕೂ ಇಷ್ಟ ಪಡೋದಿಲ್ಲ ಅನ್ನೋದನ್ನು ಒಂದಷ್ಟು ಮಂದಿ ಅರ್ಥ ಮಾಡಿಕೊಳ್ಳಬೇಕಿದೆ. ನಿಜ ಹೇಳ್ತೇನೆ ಕೇಳಿ, ಪೇಟೆ‌ ಸೇರಿದ ಹೆಣ್ಣು ಮಕ್ಕಳಿಗೆ ಈ ಪರಿಸ್ಥಿತಿ ನಿರ್ಮಾಣವಾಗೋದಿಲ್ಲ. ಪೇಟೆ ಸೇರಿದ ಯಾವ ಹೆಣ್ಣುಮಕ್ಕಳು ಸುಮ್ಮನೆ‌ ಕೂರೋದೇ ಇಲ್ಲ. ಏನಾದರೊಂದು ಕಸುಬು ಮಾಡುತ್ತಾ ಬ್ಯುಸಿಯಾಗಿ ತನಗೆ ಬೇಕಾಗುವಷ್ಟು ಸಂಪಾದನೆ ಮಾಡಿಕೊಳ್ಳುತ್ತಾಳೆ. ಅದರಂತೆ ಖರ್ಚೂ ಮಾಡುತ್ತಾಳೆ. ಉಳಿತಾಯವೂ ಮಾಡುತ್ತಾಳೆ. ಅವಳ ಸಾಸಿವೆಡಬ್ಬಿ ಲೆಕ್ಕ ಅವಳ ಬಳಿಯೇ ನಿರ್ಭೀತಿಯಿಂದ ಇರುತ್ತೆ. ಅವಳ ಸಂಪಾದನೆ ಅವಳು ಇಟ್ಕೊಳೋದೆ ತಪ್ಪು, ಅದನ್ನು ಗಂಡಂಗೆ ಕೊಟ್ಟು ಸಂಸಾರ ನಡೆಸೋಕೆ ಕೊಡ್ಬೇಕು ಅಂತ ಹೇಳೋರು ಯಾರಾದರೂ ಇದ್ದರೆ ಸಂಸಾರ ನಡೆಸ್ತಾ ಇರೋನು ಗಂಡ ಮಾತ್ರ ಅಲ್ಲ, ಹೆಂಡತಿನೂ ಮಾಡ್ತಾ ಇರೋದು ಸಂಸಾರನೆ ಅಂತ ಮುಲಾಜಿಲ್ಲದೆ ಪ್ರತಿಕ್ರಿಯೆ ಕೊಡ್ತೀನಿ...

‘ಕೊರೊನಾ' ಕೊಂದ ಜರ್ಮನಿಯ ಉಕ್ಕಿನ ಮಹಿಳೆಗೆ ಇದೆಂತಹ ಶಿಕ್ಷೆ?‘ಕೊರೊನಾ' ಕೊಂದ ಜರ್ಮನಿಯ ಉಕ್ಕಿನ ಮಹಿಳೆಗೆ ಇದೆಂತಹ ಶಿಕ್ಷೆ?

 ನಗರದಲ್ಲಿ ಕೊಂಕು ನುಡಿಗಳ ಬಾಧೆ ಕಡಿಮೆ

ನಗರದಲ್ಲಿ ಕೊಂಕು ನುಡಿಗಳ ಬಾಧೆ ಕಡಿಮೆ

ಸೊಸೆ ತವರು ಮನೆಗೆ ಹೋಗಿದಾಳಾ? ಸುಮಾರ್ ದಿನ ಆಯ್ತು ಅನ್ಸುತ್ತೆ? ಮಗಳು ಬಂದು ಸುಮಾರ್ ದಿನ ಆಯ್ತು ಅನ್ಸುತ್ತೆ? ಯಾವಾಗ ವಾಪಸ್ ಗಂಡನ ಮನೆಗೆ ಹೋಗೋದು? ಮಗಳು ಬಂದೇ ಇಲ್ವಾ? ಗಂಡನ ಮನೆಯವರು ಸ್ಟ್ರಿಕ್ಟು ಅನ್ಸುತ್ತೆ?? ಹೀಗೆ ಇರುವ ಕೊಂಕು ನುಡಿಗಳ ಬಾಧೆ ಸಿಟಿಯಲ್ಲಿ ಇಲ್ಲವೇ ಇಲ್ಲ. ಇದ್ದರೂ ವಿರಳಾತಿವಿರಳ. ಹಾಗಾಗಿ ಹೆಣ್ಣೊಬ್ಬಳಿಗೆ ನಗರದಲ್ಲಿ ತನ್ನ ಗಂಡನ ಮನೆ ಮತ್ತು ತವರು ಮನೆ ಜೊತೆಗೆ ಆಕೆಯ ವೃತ್ತಿ ಬದುಕು ಮೂರನ್ನೂ ಬಹಳ ಸುಲಭವಾಗಿ ಮ್ಯಾನೇಜ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಯಾಕಂದ್ರೆ ಹೆಣ್ಣೊಬ್ಬಳು ಜವಾಬ್ದಾರಿ ಹೊರುವುದಕ್ಕೆ ಶಕ್ತಳು. ಅಪವಾದ ಹೊರಲು ಅಶಕ್ತಳು!

ಹೆಣ್ಣು ನಗರ ಬೇಕು ಅನ್ನೋದು ಯಾವ ಶೋಕಿ ಜೀವನಕ್ಕೂ ಅಲ್ಲ, ಬಣ್ಣದ ಬದುಕಿಗೂ ಅಲ್ಲ, ಆರಾಮದಾಯಕ ಜೀವನಕ್ಕೂ ಅಲ್ಲ, ಗಂಡ ತಂದ್ ಹಾಕ್ತಾನೆ ಕುತ್ಕಂಡ್ ತಿನ್ಬಹುದು ಅನ್ನೋ ಕಾರಣಕ್ಕಂತೂ ಖಂಡಿತ ಅಲ್ಲ.
 ಆರ್ಥಿಕವಾಗಿ ಹೆಣ್ಣು ಮಕ್ಕಳು ಈಗ ಸಬಲರಾಗಿರಲೇಬೇಕಿದೆ

ಆರ್ಥಿಕವಾಗಿ ಹೆಣ್ಣು ಮಕ್ಕಳು ಈಗ ಸಬಲರಾಗಿರಲೇಬೇಕಿದೆ

ಬರೀ ಇಷ್ಟೇ ಇಲ್ಲ, ಜೀವನದಲ್ಲಿ ಕಷ್ಟ ಅಂತ ಬಂದ್ರೆ ಎದುರಿಸೋಕೆ ಹೆಣ್ಣಿಗೆ ಗೊತ್ತಿರಬೇಕು. ಹಾಗಾಗಿ ವಿದ್ಯೆ ಕಲಿತುಕೊಂಡ್ ಬಿಡಿ, ಎಲ್ಲಾದ್ರು ಹೇಗಾದ್ರು ಸ್ವಾವಲಂಬಿಯಾಗಿ ಬದುಕಬಹುದು ಇಂತಹದ್ದೊಂದು ಮನಸ್ಥಿತಿ ಪೋಷಕರಲ್ಲಿತ್ತು. ಈ ಮನಸ್ಥಿತಿಯ ಪ್ರಮುಖ ಕಾರಣಗಳಲ್ಲೊಂದು ಹೆಣ್ಣು ಮಕ್ಕಳು ವಿಧವೆಯರಾಗುವ ಭೀತಿ ಮತ್ತು ಅದರಿಂದ ಆಕೆ ಈ ಸಮಾಜದಲ್ಲಿ ಎದುರಿಸಬೇಕಾದ ಎಲ್ಲಾ ನೋವುಗಳು!

ತನ್ನ ಮಗಳ ಗಂಡ ಅಚಾನಕ್ ಆಗಿ ತೀರಿಕೊಂಡ್ರೆ ಏನು ಮಾಡಬೇಕು ಎಂಬ ಬಗ್ಗೆ ಪ್ರತಿ ಪೋಷಕರಿಗೂ ಭಯ ಇದೆ. ಅನುಮಾನ ಇದೆ. ಅದೇ ತನ್ನ ಮಗನ ಹೆಂಡತಿ ಸತ್ರೆ ಮತ್ತೊಂದು ಹುಡುಗೀನ ಹುಡುಕಿ ಮದುವೆ ಮಾಡೋಕೆ ಮಾನಸಿಕವಾಗಿಯೇ ಪೋಷಕರು ಸಿದ್ಧರಿರುವ ಸಮಾಜ ನಮ್ಮದು. ಹಾಗಾಗಿ ಒಂದು ವೇಳೆ ತಮ್ಮ ಮಗಳಿಗೆ ಜೀವನದಲ್ಲಿ ಇಂತಹ ಕಷ್ಟ ಬಂದರೆ ಆಕೆ ಯಾರಿಂದಲೂ ವ್ಯಾವಹಾರಿಕ ಮೋಸಕ್ಕೆ ಒಳಗಾಗದೆ ಬದುಕುವ ಶಕ್ತಿ ಹೊಂದಿರಬೇಕು ಎಂದು ಬಯಸಿ ವಿದ್ಯೆ ಕಲಿಸಲಾಗಿತ್ತು ಮತ್ತು ಕೆಲಸ ಹುಡುಕಿ, ಕೆಲಸ ಮಾಡುತ್ತಾ ಆರ್ಥಿಕ ಸ್ವಾವಲಂಬನೆಯಲ್ಲಿರಿ ಎಂದು ಪ್ರತಿ ಪೋಷಕರೂ ಬಯಸುವುದು. ವಿಧವೆಯ ಹಳ್ಳಿ ಜೀವನಕ್ಕಿಂತ ವಿಧವೆಯ ನಗರ ಜೀವನ ಸ್ವಲ್ಪ ಆಶಾದಾಯಕವಾಗಿರುತ್ತೆ ಎಂಬುದು ನೂರಕ್ಕೆ ನೂರು ಸತ್ಯ.

 ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಅವಕಾಶವಿದೆ?

ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಅವಕಾಶವಿದೆ?

ಶಿಕ್ಷಣ ಅನ್ನೋದು ಇದೀಗ ಎಷ್ಟು ದುಬಾರಿಯಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ನಿಟ್ಟಿನಲ್ಲಿ ಗಂಡೊಬ್ಬ ಹೇಗೆ ಸಾಲ ಮಾಡಿ ಓದುತ್ತಾನೋ ಅದೇ ರೀತಿ ಹೆಣ್ಣು ಕೂಡ ಸಾಲ ಮಾಡಿ ಓದುತ್ತಾಳೆ. ಓದು ಮುಗಿತಿದ್ದ ಹಾಗೆ ಮದುವೆ ಮಾಡ್ಕೊಂಡ್ರೆ ಆ ಸಾಲ ಯಾರ ತಲೆ ಮೇಲೆ? ಯಾವ ಹೆಣ್ಣು ಕೂಡ ತಾನು ಓದಿಗಾಗಿ ಮಾಡಿದ ಸಾಲವನ್ನು ತನ್ನ ಅಪ್ಪ ಅಮ್ಮನ ಹೆಗಲ ಮೇಲೆ ಹಾಕಲು ಇಷ್ಟಪಡುವುದಿಲ್ಲ. ಹೆಣ್ಣು ಯಾವಾಗಲೂ ಇನ್ನೊಬ್ಬರಿಗೆ ಹೊರೆಯಾಗಿದ್ದೇನೆ ಎನಿಸಿಕೊಳ್ಳಲು ರೆಡಿ ಇಲ್ಲ. ಹಾಗಾಗಿ ಮದುವೆಯಾದ ನಂತರವೂ ಕೆಲಸ ಮಾಡಿ ಸಾಲವನ್ನು ತಾನೇ ತೀರಿಸಬೇಕು ಎಂದುಕೊಳ್ಳುತ್ತಾಳೆ. ಆದರೆ ಹಳ್ಳಿಗಳಲ್ಲಿ ಇದರ ಅವಕಾಶವೇ ನೀಡುವುದಿಲ್ಲ. ಹಳ್ಳಿ ಮನಸ್ಥಿತಿ ಹೇಗಿದೆ ಅಂದ್ರೆ ಕೆಲಸಕ್ಕೆಲ್ಲಾ ಹೋಗಿ ಕಷ್ಟ ಪಡಬೇಕು ಅಂತ ಇಲ್ಲ ಮನೆ ನೊಡ್ಕೊಂಡು ಹೋದ್ರು ಸಾಕು ಅಂತ ನಾಜೂಕಿನ ಉತ್ತರ. ಆದರೆ ಕೆಲಸಕ್ಕೆ ಹೋಗದೆ ಆರ್ಥಿಕ ಸ್ವಾವಲಂಬನೆ ಹಳ್ಳಿಯಲ್ಲಿ ಸಿಗದೆ ಇರುವುದೇ ಆಕೆಯ ಕಷ್ಟ ಅನ್ನೋದು ಹೆಚ್ಚಿನ ಹಳ್ಳಿಗರಿಗೆ ಅರ್ಥವಾಗಿಲ್ಲ. ಹಳ್ಳಿ ಮನೆಯ ಎಲ್ಲಾ ಕೆಲಸ ಮಾಡಿ, ತೋಟದ ಕೆಲಸನೂ ಮಾಡ್ತೀನಿ. ತಿಂಗಳಿಗೆ ನನಗೆ ಇಂತಿಷ್ಟು ಸಂಬಳ ಕೊಡಿ ಅಂದ್ರೆ ಕೊಡೋ ಒಬ್ಬರನ್ನು ತೋರಿಸಿ ನನಗೆ! ಅದೇ ಕೆಲಸವನ್ನು ಆಕೆ ನಗರದಲ್ಲಿ ಮಾಡಿದರೆ ಸಾಲವನ್ನೂ ತೀರಿಸಬಹುದು, ಪೋಷಕರಿಗೂ ಸಹಾಯ ಮಾಡಬಹುದು! ಅದಕ್ಕೂ ಮೀರಿ ಆಕೆ ನಗರದಲ್ಲಿ ಕೆಲಸಕ್ಕೆ ಹೋಗಿ ದುಡಿದು ಪೋಷಕರಿಗೆ ನೀಡಿದ್ದು ಅವ್ಳು ದುಡಿತಾಳೆ, ಅಪ್ಪ ಅಮ್ಮಂಗೆ ಕೊಡ್ತಾಳೆ ಅನ್ನೋ ಮನಸ್ಥಿತಿ. ಹಳ್ಳಿಲಿ ಕೊಟ್ರೆ ಏನಂತಾರೆ ಹೇಳಿ 'ತವರು ಮನೆಗೆ ಸಾಗಿಸಿದ್ಲು'!.

 ನಗರಗಳಲ್ಲಿ ವಿಪುಲ ಅವಕಾಶಗಳಿವೆ

ನಗರಗಳಲ್ಲಿ ವಿಪುಲ ಅವಕಾಶಗಳಿವೆ

ಭರತನಾಟ್ಯ, ಸಂಗೀತ ಕಲಿಸೋ ಹಳ್ಳಿಗರು ಅದನ್ನೇ ಪ್ರೊಫೆಷನ್ ಮಾಡ್ಕೊಳೋಕೆ ಬಿಡೋದಿಲ್ಲ ಅಥವಾ ಅವಕಾಶ ಕಡಿಮೆ. ನಗರದಲ್ಲಿ ಅಂತಹವುಗಳಿಗೆ ವಿಪುಲ ಅವಕಾಶವಿದೆ. ಹಿಂದೆಲ್ಲಾ ಮನೆಮಂದಿಯೆಲ್ಲಾ ಸೇರಿ ದೇವರ ಮುಂದೆ ಕುಳಿತು ಭಜನೆ, ಕೀರ್ತನೆ ಮಾಡುತ್ತಿದ್ದರು. ಆದರೆ ಈಗ ಹಳ್ಳಿಗಳಲ್ಲಿ ಇರೋದೇ ಮೂರು ಮತ್ತೊಬ್ಬರು ಮಂದಿ. ನಗರದ ಉದ್ದಗಲಕ್ಕೂ ಇರುವ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮ ಓದಲು ಹೋಗುವ ಹೆಣ್ ಮಕ್ಕಳಿಗೆ ಮಾನಸಿಕ ನೆಮ್ಮದಿ ಇದೆ.

ತಮ್ಮ ಹವ್ಯಾಸವನ್ನು ವೃತ್ತಿಯಾಗಿ ಮಾಡಿಕೊಂಡು ಬದುಕುವುದಕ್ಕೂ ವೇದಿಕೆ ಇದೆ. ಒಮ್ಮೊಮ್ಮೆ ನನಗೆ ಅನ್ನಿಸುವುದುಂಟು ಪುರುಷರು ಸಂಧ್ಯಾವಂದನೆ, ದೇವರ ಪೂಜೆ ಬಿಟ್ಟಷ್ಟು ಹೆಣ್ ಮಕ್ಕಳು ದೀಪ ಹಚ್ಚೋದು ಬಿಟ್ಟಿದ್ರೆ ಏನಾಗ್ತಿತ್ತು ನಮ್ಮ ಪ್ರಪಂಚ ಅಂತ? ಆದರೂ ಸಮಾಜ ಹೆಣ್ಣನ್ನೇ ಸಂಸ್ಕೃತಿ ಬಿಟ್ಟವಳು, ಆಚಾರ ಬಿಟ್ಟವಳು ಎಂದು ದೂರುತ್ತಲೇ ಇರುತ್ತದೆ. ಈ ದೂರುವಿಕೆ ಹಳ್ಳಿಗರಿಂದಲೇ ಅಧಿಕ!
 ಈಗ ಹೇಳಿ ಹೆಣ್ಣಿಗೆ ನಗರೀಕರಣ ವ್ಯಾಮೋಹವೋ ಅಗತ್ಯತೆಯೋ???

ಈಗ ಹೇಳಿ ಹೆಣ್ಣಿಗೆ ನಗರೀಕರಣ ವ್ಯಾಮೋಹವೋ ಅಗತ್ಯತೆಯೋ???

ನನ್ನ ಜೀವನದಲ್ಲೇ ನಡೆದ ಒಂದು ಘಟನೆ ಹೇಳ್ತೇನೆ ಕೇಳಿ. ಒಮ್ಮೆ ನಮ್ ಹಳ್ಳಿಯ ಸಮೀಪದ ಪೇಟೆಯಲ್ಲಿ ಒಬ್ಬ ಹುಡುಗ ನನ್ನ ಕಣ್ಣೆದುರು ಬಂದ. ಅದೊಂದು ಅಚಾನಕ್ ಭೇಟಿ. ಥಟ್ಟನೆ ಯಾರಂತ ಗೊತ್ತಾಗದೇ ಇದ್ರೂ ಆಮೇಲೆ ಹತ್ತಿರದಿಂದ ನೋಡಿದಾಗ ಗೊತ್ತಾಗಿ ಇಬ್ಬರೂ ಎರಡು ನಿಮಿಷ ಮಾತಾಡ್ತಾ ನಿಂತ್ವಿ. ಉಭಯಕುಶಲೋಪರಿ ಅದು. ಅವನು ನನ್ನ ಶಾಲಾದಿನಗಳ ಸೀನಿಯರ್. ನೋಟ್ಸ್ ಪಡೆಯುತ್ತಿದ್ದದ್ದು, ಶಾಲಾ ನಾಟಕಗಳು ಇತ್ಯಾದಿಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದುಂಟು. ಅಂದು ಜೊತೆಗೆ ನನ್ನ ಅಮ್ಮ ಇದ್ದಳು. ನಾನು ಇವನ ಬಳಿ ಮಾತಾಡುತ್ತಾ ನಿಂತಿದ್ದು ನೋಡಿ ಆಕೆ ಮುಂದೆ ಹೋದಳು. ಅಲ್ಲಿ ಒಂದಷ್ಟು ಮಂದಿ ನಮ್ಮಿಬ್ಬರನ್ನೇ ಕೆಕ್ಕರಿಸಿ ನೋಡುತ್ತಿದ್ದದ್ದು ನನ್ನಮ್ಮನ ಗಮನಕ್ಕೆ ಬಂತು. ಅದರಲ್ಲೊಬ್ಬರು ಬಂದು ಅಮ್ಮನ ಬಳಿ ಬೇರೆ ನೆಪಕ್ಕೆ ಮಾತನಾಡಿಸಿ ನಂತರ ಆ ಹುಡುಗ ಯಾರು? ಸುಷ್ಮಾ ಯಾರ್ ಹತ್ರ ಬೇಕಿದ್ರು ಮಾತಾಡ್ತಾಳೆ ಅಲ್ವಾ ಅಂದ್ರಂತೆ! ಅವನು ನಮ್ ಜಾತಿ ಹುಡುಗ ಅಲ್ಲ ಅನ್ಸುತ್ತೆ ಅಲ್ವಾ ಅನ್ನೋದು ಮುಂದಿನ ಪ್ರಶ್ನೆಯಾಗಿತ್ತು.

ನನ್ನಮ್ಮನ ಬಳಿ ಯಾವುದಕ್ಕೂ ಉತ್ತರವಿಲ್ಲದ ಕಾರಣ ಅವರೆದುರು ಅಂದು ಮಾತನಾಡಲಿಲ್ಲ. ನಂತರ ನನ್ನ ಬಳಿ ಯಾರೇ ಅವ್ನು ಅಂದ್ಲು. ವಿಷ್ಯ ಹೇಳಿದೆ. ಮನೆಗೆ ಬಂದವಳೆ ಇನ್ ಮೇಲೆ ಪೇಟೆಗೆ ನನ್ ಜೊತೆ ಬಂದಾಗ ಯಾರ್ ಹತ್ರನೂ ಮಾತಾಡೋ ಹಾಗಿಲ್ಲ ಅನ್ನೋ ಕಂಡೀಷನ್ ಬಿತ್ತು. ಅಂದಿನಿಂದ ಇಂದಿನವರೆಗೂ ನನ್ನ ಪರಿಸ್ಥಿತಿ ಹೇಗಿರಬಹುದು ಊಹಿಸಿ. ಇಂತಹ ಪರಿಸ್ಥಿತಿ ಬೆಂಗಳೂರಲ್ಲಿ ನಿರ್ಮಾಣ ಆಗೋಕೆ ಸಾಧ್ಯವಿದ್ಯಾ ಹೇಳಿ? ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ಇರುವಾಗ ಅಸಮಾನತೆಯ ಬೆಂಕಿಯಲ್ಲಿ‌ ಹೆಣ್ಣೊಬ್ಬಳು ಬದುಕೋದು ಹೇಗೆ ಸಾಧ್ಯ?

ಇನ್ನು ಹೇಳುತ್ತಾ ಹೋದರೆ ಮುಗಿಯದ ಅಧ್ಯಾಯದಷ್ಟಿವೆ. ಮಾರ್ಬಲ್ ಹಾಕಿ ಕಟ್ಟಿಸಿದ ಮನೆಗೆ ಸಗಣಿ ಹಾಕಿ ಸಾರಿಸೋದು, ಮುಟ್ಟಿನ ಗೋಳು ಒಂದೇ ಎರಡೇ!!! ಸಾಮಾಜಿಕ, ಆರ್ಥಿಕ, ಕೌಟುಂಬಿಕ ಹೀಗೆ ಎಲ್ಲಾ ಜವಾಬ್ದಾರಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಕ್ಕಾಗಿ ನಗರ ಲೇಸು ಅಂದಳೇ ಹೊರತು ನಗರದ ವ್ಯಾಮೋಹದಿಂದಲ್ಲ!! ಸಿಟಿಯಲ್ಲೂ ಹೆಣ್ಣಿನ ಜೀವನ 24/7 ಬ್ಯುಸಿಯೇ ಇರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಈಗ ಹೇಳಿ ಹೆಣ್ಣಿಗೆ ನಗರೀಕರಣ ವ್ಯಾಮೋಹವೋ ಅಗತ್ಯತೆಯೋ???

English summary
Is city life infatuation or Need for Girls?, Here is one small article on this...,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X