ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದರ್ಶನ: ಸತ್ತು ಕಾದಂಬರಿ ಕರ್ತೃ ಕರಣಂ ಪವನ್ ಪ್ರಸಾದ್

|
Google Oneindia Kannada News

ಸಾಹಿತ್ಯಾಸಕ್ತರಿಗೆ ಸಮಕಾಲೀನ ಮತ್ತು ವಿಭಿನ್ನ ವಸ್ತು ವಿಷಯಗಳನ್ನು ತಲುಪಿಸಲು ಹಪಾಹಪಿವುಳ್ಳ ಜನ ಮೆಚ್ಚುಗೆಗೆ ಪಾತ್ರರಾದ ಕಲಾವಿದ, ಕನ್ನಡ ನಾಟಕಕಾರ, ಖ್ಯಾತ ಲೇಖಕ 'ಕರಣಂ ಪವನ್ ಪ್ರಸಾದ್‌' ಓದುಗರಿಗೆ ಇಷ್ಟದ ಸುದ್ದಿ ನೀಡಿದ್ದಾರೆ. ಕುತೂಹಲದಿಂದ ಕಾಯುತ್ತಿರುವ ಎಲ್ಲ ವರ್ಗದ ಓದುಗರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಇವರ ಬರವಣಿಗೆಗಳ ಅಪಡೇಟ್ ಕುರಿತು ತಡಕಾಡುವವರಿಗೆ ತಮ್ಮ 5ನೇ ನೂತನ ಕೃತಿ 'ಸತ್ತು' ಕಾದಂಬರಿಯ ಮೂಲಕ ಹೊಸ ವಿಷಯವೊಂದನ್ನು ಉಣಬಡಿಸಲು ಲೇಖಕರು ಸಜ್ಜಾಗಿದ್ದಾರೆ.

'ಸಮಯದ ಅಸ್ತಿತ್ವ ಮತ್ತು ಮನುಷ್ಯರ ಧೋರಣೆ' ವಿಷಯ ಹೊತ್ತ ಈ 'ಸತ್ತು' ಕೃತಿಗೆ ಈಗಾಗಲೇ ಆನ್‌ಲೈನ್‌ನಲ್ಲಿ ಪ್ರೀ ಆರ್ಡರ್‌ ಬುಕ್ಕಿಂಗ್ ಆರಂಭವಾಗಿದೆ. ಜೂ. 16ರಂದು ಅಧಿಕೃತವಾಗಿ ಓದುಗರ ಕೈಸೇರಲಿದೆ. "ಒನ್ಇಂಡಿಯಾ ಕನ್ನಡ"ದ ಜತೆಗೆ ಕೃತಿ ಸೇರಿದಂತೆ ಒಂದಷ್ಟು ವಿಚಾರಗಳ ಕುರಿತು ಸಂದರ್ಶನ ನೀಡಿದ್ದು, ಅದು ನಿಮ್ಮ ಮುಂದಿದೆ.

ಕೃತಿಯ ವಿಷಯ ಆಯ್ಕೆ ಬಗ್ಗೆ

ಕೃತಿಯ ವಿಷಯ ಆಯ್ಕೆ ಬಗ್ಗೆ

ಒನ್ಇಂಡಿಯಾ:'ಸತ್ತು' ನೂತನ ಕೃತಿಯ ವಿಷಯ ಆಯ್ಕೆ ಮಾಡಿಕೊಂಡದ್ದು ಹೇಗೆ?

ಕರಣಂ ಪವನ್ ಪ್ರಸಾದ್: ಸಮಕಾಲೀನ ವಸ್ತು ವಿಷಯಗಳು, ಹುಟ್ಟಿಬೆಳೆದ ಪರಿಸರ, ಸುತ್ತಮುತ್ತಲಿನ ವಾತಾವರಣ ಹೊಸ ಬರವಣಿಗೆಯ ಸಲಕರಣೆಗಳಾಗುತ್ತವೆ. ಭೂತ, ವರ್ತಮಾನ ಹಾಗೂ ಭವಿಷ್ಯ ಕುರಿತ ಮನುಷ್ಯನ ಧೋರಣೆಗಳು. ಅಂದರೆ ಸಮಯ ಅಸ್ತಿತ್ವದಲ್ಲಿದೆ ಎಂದು ನಂಬುವ ವ್ಯಕ್ತಿ ತಾನು ಕಟ್ಟಿಕೊಂಡ ಸಮಾಜ, ಹುಟ್ಟು, ಮೇಲು-ಕೀಳು, ಸತ್ಯ-ಸುಳ್ಳು, ನಂಬಿಕೆ, ಬದುಕುವ ರೀತಿ ಸೇರಿದಂತೆ ಆತನ ಎಲ್ಲ ಧೋರಣೆಗಳ ಗ್ರಹಿಸಿ ವಿಷಯ ಆಯ್ದುಕೊಳ್ಳಲಾಗಿದೆ.

ಕೃತಿ ರಚನೆಗೂ ಮೊದಲು ವಿಷಯ ಕುರಿತು ನನ್ನಲ್ಲಿದ್ದ ಕೆಲವು ಅನುಮಾನಗಳನ್ನು ಬಗೆಹರಿಸಿದ ಇಟಲಿಯ ವಿಜ್ಞಾನಿಯೊಬ್ಬರ ಭಾಷಣ, ಬರವಣಿಗೆ ಅವರ ಪುಸ್ತಕಗಳು ಸಹ ಈ ಹೊಸ ಕಾದಂಬರಿ ರಚನೆಗೆ ಪ್ರೇರೆಪಿಸಿದವು. ನಿರಂತರ ಒಂದು ವಾರ ಅವರೊಂದಿಗೆ ಮಿಂಚಂಚೆ (ಇಮೇಲ್) ಮೂಲಕ ನಿರಂತರ ಸಂಪರ್ಕದಲ್ಲಿದ್ದೆ. ಅವರು ಸಮಯ ಎಂಬುದು ಇಲ್ಲ ಎಂದು ಪ್ರತಿಪಾದಿಸುತ್ತಾರೆ. ಅವರು ಮೂಲತಃ ಬೌದ್ಧ ತತ್ವಜ್ಞಾನಿ ನಾಗಾರ್ಜುನ ಅವರಿಂದ ಪ್ರಭಾವಿತರಾದವರು. ಮನುಷ್ಯನ ಧೋರಣೆಗಳು ಸತ್ಯಕ್ಕೆ ದೂರವಾದವು ಎಂಬುದನ್ನು ಹೇಳುವ ಪ್ರಯತ್ನವೇ ಈ 'ಸತ್ತು'.

ವಿಷಯದ ಮೇಲೆ ಆಸಕ್ತಿ ಕೇಂದ್ರೀಕರಿಸುವುದರಿಂದ ಐದು ಕಾದಂಬರಿಗಳು ವಿಶೇಷವಾದವುಗಳೇ. ಹಿರಿಯ ಕಾದಂಬರಿಕಾರರ ಬರವಣಿಗೆಯಿಂದ ಪ್ರೆರೇಪಿತನಾದರು, ಐದು ಕಾದಂಬರಿಗಳಲ್ಲಿ ಯಾವ ಛಾಯೆ ನಿಮಗೆ ಕಾಣಸಿಗುವುದಿಲ್ಲ.

ಪರಿಸರವನ್ನು ಬಿಟ್ಟು ಬರವಣಿಗೆಗೆ ಇಳಿಯಬಾರದು

ಪರಿಸರವನ್ನು ಬಿಟ್ಟು ಬರವಣಿಗೆಗೆ ಇಳಿಯಬಾರದು

ಒನ್ಇಂಡಿಯಾ: ಒಂದು ಕಾದಂಬರಿಯಿಂದ ಮತ್ತೊಂದು ಕಾದಂಬರಿಯ ನಡುವೆ ಭಿನ್ನತೆ ಸಾಧಿಸಲು ಹೇಗೆ ಸಾಧ್ಯವಾಗುತ್ತದೆ?

ಕರಣಂ ಪವನ್ ಪ್ರಸಾದ್: ಬರಹಗಾರ ತಾನು ಹುಟ್ಟಿ ಬೆಳೆದ ಪರಿಸರವನ್ನು ಬಿಟ್ಟು ಬರವಣಿಗೆಗೆ ಇಳಿಯಬಾರದು. ಸುತ್ತಮುತ್ತಲಿನ ವಾತಾವರಣವೇ ಸಾಹಿತ್ಯಕ್ಕೆ ಆಕರ, ಸಲಕರಣೆ ಎಲ್ಲವು ಆಗುತ್ತದೆ. ಕಾದಂಬರಿಕಾರ ಎಸ್‌.ಎಲ್.ಬೈರಪ್ಪ, ರಾಷ್ಟ್ರಕವಿ ಕುವೆಂಪು ಅವರು ಸೇರಿದಂತೆ ಅನೇಕರು ತಾವು ಹುಟ್ಟಿಬೆಳೆದ ಪರಿಸರದ ಸಾಕಷ್ಟು ವಿಷಯಗಳಿಂದಲೇ ಓದುಗರಿಗೆ ಹತ್ತಿರವಾದವರು.

ನನ್ನ ಐದು ಕೃತಿಗಳು ಓದುಗರಿಗೆ ಒಂದೆ ಶೈಲಿಯವವು ಎಂದೆನಿಸಿಬಹುದು ಆದರೆ ಅದರಲ್ಲಿನ ವಿಷಯ ವಸ್ತು ವಿಭಿನ್ನವಾಗಿರುವುದರಿಂದ ಎಲ್ಲ ಕೃತಿಗಳನ್ನು ಇಷ್ಟಪಡುತ್ತಾರೆ. ಬೃಹತ್‌ ಕಾದಂಬರಿ ಬರೆಯಿರಿ ಎಂದು ಸಲಹೆ ನೀಡುತ್ತಾರೆ. 2015ರಲ್ಲಿ ಬರೆದ "ನನ್ನಿ' ಕಾದಂಬರಿಯ ವಿಷಯ ಆ ಕಾಲಘಟ್ಟದಲ್ಲಿ ನನ್ನನ್ನು ಅತೀವವಾಗಿ ಸೆಳೆದಿತ್ತು. ಅದನ್ನು ಇಂದು ಬರೆಯಲು ನನ್ನಿಂದ ಸಾಧ್ಯವಿಲ್ಲ ಅನ್ನಿಸುತ್ತದೆ. ಕಾರಣವಿಷ್ಟೇ ಸಮಕಾಲೀನ ವಿಚಾರಗಳನ್ನು ಆಯಾ ಕಾಲಘಟ್ಟದಲ್ಲಿ ಹುಟ್ಟಿದೂರು ಮತ್ತು ಸುತ್ತಮುತ್ತಲಿನ ವಾತಾವರಣದ ಪ್ರಜ್ಞೆ ಸಹಿತ ಉಲ್ಲೇಖಿಸಿದರೆ ಅದು ಪರಿಣಾಮಕಾರಿಗೆ ಓದುಗನನ್ನು ತಲುಪುತ್ತದೆ ಎಂಬ ನಂಬಿಕೆ ನನ್ನದು. ಹೀಗಾಗಿ ಕಾಣುವ, ಅನುಭವಕ್ಕೆ ಬರುವ, ಆಸಕ್ತಿದಾಯಕ ವಿಷಯಗಳ ಮೇಲೆ ಗಮನ ಕೇಂದ್ರಿಕರಿಸುವುದರಿಂದ ನನ್ನ ಕಾದಂಬರಿಗಳಲ್ಲಿ ಭಿನ್ನತೆ ಕಾಣಿಸುತ್ತದೆ. ಇದು ಸುಂದರ ಆಲೋಚನೆಗಳು ಎಲ್ಲ ಕಡೆ ತಲುಪಲು ಸಹಕಾರಿಯಾಗುತ್ತದೆ.

ಅತ್ಯಾಪ್ತರಿಗಷ್ಟೆ ನಿಮ್ಮ ಬರವಣಿಗೆ ಸೀಮಿತವೇ

ಅತ್ಯಾಪ್ತರಿಗಷ್ಟೆ ನಿಮ್ಮ ಬರವಣಿಗೆ ಸೀಮಿತವೇ

ಒನ್ಇಂಡಿಯಾ: ಕೇವಲ ಬೆಂಗಳೂರು ಇಲ್ಲವೇ ದಕ್ಷಿಣ ಕರ್ನಾಟಕ ಭಾಗಕ್ಕೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಪ್ತರಿಗಷ್ಟೆ ನಿಮ್ಮ ಬರವಣಿಗೆ ಸೀಮಿತವಾಗಿದೆ ಎಂದು ಹೇಳಬಹುದೇ?.

ಕರಣಂ ಪವನ್ ಪ್ರಸಾದ್: ಒಂದು ವರ್ಗ, ಪ್ರದೇಶಕ್ಕೆ ಸಿಮೀತವಾಗದೇ ಎಲ್ಲ ವರ್ಗದವರಿಗು ಹೊಸ ಅಂಶಗಳು ತಲುಪುತ್ತಿವೆ. ನನಗೆ ಹಿತ- ಅಹಿತ ಅನ್ನಿಸಿದ್ದನ್ನು ಗ್ರಹಿಸಿ ಸ್ಪಷ್ಟವಾಗಿ ತಿಳಿಸಲು ಬಯಸುತ್ತೇನೆ. ಬದುಕಿನಲ್ಲಿ ಗತಿಸಿಹೋದ ಅನೇಕ ಘಟನೆಗಳು, ಸಂಗತಿಗಳು ಮನುಷ್ಯನನ್ನು ಬೇಗ ತನ್ನತ್ತ ಸೆಳೆಯುತ್ತವೆ. ಓದುಗರಿಗೆ ಇಷ್ಟವಾಗಲಿ ಎಂದು ಬರೆಯುವುದಕ್ಕಿಂತ, ಬರೆದ ಬರವಣಿಗೆಗಳನ್ನು ಇದ್ದುದನ್ನು ಇದ್ದಂತೆಯೇ ಓದುಗ ಶ್ವೇತಭಾವದಿಂದ ಅಪ್ಪಿಕೊಂಡಾಗ ಓದುಗನ ಮನಸ್ಸಿನಲ್ಲಿ ಲೇಖಕರಿಗೆ ಉನ್ನತ ಸ್ಥಾನ ದಕ್ಕುತ್ತದೆ.

ಕಾದಂಬರಿ ಓದುವಾಗಲೂ ಸಹ ವ್ಯಕ್ತಿಗೆ ಅದರಲ್ಲಿನ ಅಂಶಗಳು ಕಣ್ಣಮುಂದೆ ನಡೆದು ಹೋದ ಘಟನೆಗಳು ಇಲ್ಲವೇ ವಿಷಯಗಳೇ ಅಕ್ಷರ ರೂಪ ಪಡೆದು ತಮ್ಮ ಮುಂದೆ ಬಂದಂತೆ ಭಾಸವಾಗುತ್ತದೆ. ಆಗ ಕಾದಂಬರಿಯನ್ನು ಒಪ್ಪಿ ಅಪ್ಪುತ್ತಾನೆ. ಇದರ ನಂತರವೇ ಒಬ್ಬರಿಂದ ಮತ್ತೊಬ್ಬರಿಗೆ ಕೃತಿಯ ವಿವರಣೆ ರವಾನೆಯಾಗುತ್ತಿದೆ. ಇದೀಗ ಇಂತಹ ಪ್ರಕ್ರಿಯೆ ಆರಂಭವಾಗಿ ತುಂಬ ದಿನಗಳಾಗಿವೆ. ಹೀಗಾಗಿ ಬರವಣಿಗೆ ಒಂದು ಪ್ರದೇಶ, ವರ್ಗಕ್ಕೆ ಸೀಮಿತ ಎನ್ನಲಾಗದು.

ಹೊಸ ಕಾದಂಬರಿಯ ನಿರೀಕ್ಷೆಗಳು

ಹೊಸ ಕಾದಂಬರಿಯ ನಿರೀಕ್ಷೆಗಳು

ಒನ್ಇಂಡಿಯಾ: 'ಸತ್ತು' ಕಾದಂಬರಿಯಿಂದ ಓದುಗ ಏನನ್ನು ನಿರೀಕ್ಷಿಸಬಹುದು?

ಕರಣಂ ಪವನ್ ಪ್ರಸಾದ್: ಹಿಂದಿನ ನಾಲ್ಕು ಕಾದಂಬರಿಗಳಲ್ಲೂ ಅಷ್ಟಾಗಿ ಮೇಲ್ವರ್ಗ ಮತ್ತು ಕೆಳವರ್ಗ ಎಂಬ ವ್ಯತ್ಯಾಸ ಕಂಡು ಬಂದಿಲ್ಲ. ಅಲ್ಲಿ ಬಡವರು, ಮಧ್ಯಮ ವರ್ಗದ ಪಾತ್ರಗಳನ್ನು ಜನ ನೋಡಿದ್ದರು. ಆದರೆ ವೈಚಾರಿಕತೆಯಿಂದ ಕೂಡಿರುವ ಈ 'ಸತ್ತು' ಕಾದಂಬರಿಯಲ್ಲಿ ಮೇಲ್ವರ್ಗದ ಪಾತ್ರಗಳು ಅನೇಕ ಅಂಶಗಳನ್ನು ತೆರೆದಿಡುತ್ತವೆ. ಸಮಾಜ ವ್ಯಕ್ತಿಯನ್ನು, ವ್ಯಕ್ತಿ ಸಮಾಜವನ್ನು ನೋಡುವ ರೀತಿ ಕುರಿತು ತಿಳಿಸಲಾಗಿದೆ. ಇಲ್ಲಿ ಬರುವ ಎಲ್ಲ ಪಾತ್ರಗಳು ಬೆಂಗಾಲಿ ಪಾತ್ರಗಳು. ಆ ಎಲ್ಲ ಪಾತ್ರಧಾರಿಗಳು ಬೆಂಗಳೂರಿನಲ್ಲಿ ನೆಲೆಸಿರುವವರು. ಇವೆಲ್ಲವನ್ನು ಒಟ್ಟುಗೂಡಿಸಿಕೊಂಡು 'ಮನುಷ್ಯನ ಧೋರಣೆಗಳು ಮತ್ತು ಸಮಯದ ಅಸ್ತಿತ್ವ' ಕುರಿತು ವಿವರಿಸಲು ಹೊರಟಿದ್ದೇನೆ.

ಯುದ್ಧ ಸಂಘರ್ಷ ಬಗ್ಗೆ ಅಭಿಪ್ರಾಯ

ಯುದ್ಧ ಸಂಘರ್ಷ ಬಗ್ಗೆ ಅಭಿಪ್ರಾಯ

ಒನ್ಇಂಡಿಯಾ: ಉಕ್ರೇನ್‌- ರಷ್ಯಾ ನಡುವಿನ ಸಂಘರ್ಷ, ನಂತರ ಆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯ, ಬೆಳವಣಿಗೆ ಕುರಿತು ನಿಮ್ಮ ಪ್ರತಿಕ್ರಿಯೆ ಏನು?

ಕರಣಂ ಪವನ್ ಪ್ರಸಾದ್: ಹೌದು, ಉಕ್ರೇನ್‌ ರಷ್ಯಾ ಸಂಘರ್ಷಕ್ಕೂ ಮುನ್ನ ಸಾಕಷ್ಟು ಬಾರಿ ರಷ್ಯಾ ಸೇರಿದಂತೆ ಹಲವೆಡೆ ಸಂಚರಿಸಿದ್ದೇನೆ. ಆಸಕ್ತಿದಾಯಕ ವಿಷಯಗಳ ಗ್ರಹಿಕೆ, ವೈಯಕ್ತಿಕ ಕೆಲಸಗಳಿಗಾಗಿ ಆಗಾಗ ಪ್ರವಾಸ ಮಾಡುವುದು ನನ್ನ ರೂಢಿ. ಯುದ್ಧ ಆರಂಭದ ನಂತರ ಕೆಲವರು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವಸ್ತುಸ್ಥಿತಿ ಗೊತ್ತಿಲ್ಲದೇ ಮಾತನಾಡಿದ್ದು ಇದೆ. ಒಂದು ಪ್ರದೇಶ, ಸಂಸ್ಕೃತಿ, ವ್ಯಕ್ತಿ ಇಲ್ಲವೇ ವಿಷಯದ ಬಗ್ಗೆ ಗೊತ್ತಿಲ್ಲದೇ ಮಾತನಾಡುವುದು, ಬರೆಯುವುದು ಉತ್ತಮ ಬೆಳವಣಿಗೆಯಲ್ಲ. ಖುದ್ದು ನೋಡಿ ಸತ್ಯ ಅರಿತದ್ದನ್ನು ಸ್ಪಷ್ಟವಾಗಿ ಬರೆದರೆ ತಪ್ಪಿಲ್ಲ.

'ಕರ್ಮ' ಸಿನಿಮಾವಾಗುತ್ತಿರುವುದರ ಬಗ್ಗೆ

'ಕರ್ಮ' ಸಿನಿಮಾವಾಗುತ್ತಿರುವುದರ ಬಗ್ಗೆ

ಒನ್ಇಂಡಿಯಾ: ನಿಮ್ಮ ಮೊದಲ ಕಾದಂಬರಿ 'ಕರ್ಮ' ಸಿನಿಮಾವಾಗುತ್ತಿರುವುದು ಹಾಗೂ ಮುಂದಿನ ಕೃತಿ, ವಿಷಯಗಳ ಕುರಿತು ಚಿಂತನೆ ಏನಿದೆ?.

ಕರಣಂ ಪವನ್ ಪ್ರಸಾದ್: "ಕರ್ಮ' ಕಾದಂಬರಿ ಸಿನಿಮಾ ಮಾಡುವುದಾಗಿ ನಿರ್ದೇಶಕ ನಟೇಶ್ ಹೆಗಡೆ ಹೇಳಿದ್ದರು. ಆ ಬಗ್ಗೆ ಮಾತುಕತೆಯೂ ಮುಗಿದಿದ್ದು, ಸಿನಿಮಾ ಎಂದು ತೆರೆಗೆ ಬರಲಿದೆ ಎಂಬುದನ್ನು ಅವರ ಬಳಿಯೇ ಕೇಳಬೇಕು. ಕಾದಂಬರಿ ಆಧಾರಿತ ಸಿನಿಮಾ ಮಾಡಲು ಯಾರೇ ಆಸಕ್ತಿ ತೋರಿದರು ಅದಕ್ಕೆ ನನ್ನ ಒಪ್ಪಿಗೆ ಇದ್ದೆ ಇರುತ್ತದೆ. 'ಗ್ರಸ್ತ' ಸಿನಿಮಾ ಮಾಡುವುದಾಗಿಯು ಕೆಲವರು ಕೇಳಿದ್ದಾರೆ. ಸಿನಿಮಾ ಬೇರೆ, ಸಾಹಿತ್ಯ ಬೇರೆ. ಹೀಗಾಗಿ ನಾನು ಯಾರಿಗೂ ಕೃತಿಯಲ್ಲಿನ ಅಂಶಗಳನ್ನೆ ಚಿತ್ರೀಕರಸಿ ಎಂದು ಷರತ್ತು ವಿಧಿಸಲಾರೆ. ಇಂದು ಪ್ರಯೋಗಾತ್ಮಕ ಸಿನಿಮಾಗಳಿಗೆ ಹಣ ಹೂಡುವವರೆ ಇಲ್ಲದಾಗಿದೆ.

108 ಪುಟದ 'ಸತ್ತು' ಕೃತಿ :

108 ಪುಟದ 'ಸತ್ತು' ಕೃತಿ :

ಕಾನ್‌ಕೇವ್ ಪ್ರಕಾಶನ ಹೊರ ತಂದಿರುವ 108 ಪುಟವುಳ್ಳ 'ಸತ್ತು' ಜೂನ್ 16ರಂದು ಎಲ್ಲೆಡೆ ಲಭ್ಯವಾಗಲಿದೆ. ಮುದ್ರಣ ಹಂತದಲ್ಲಿರುವ ಕೃತಿಯ ಪ್ರತಿಗಾಗಿ ವಿಶೇಷವಾಗಿ ಸಾಹಿತ್ಯ ಪ್ರೇಮಿಗಳಿಗೆಂದು ಆನ್‌ಲೈನ್‌ನಲ್ಲಿ ಪ್ರೀ ಆರ್ಡರ್‌ಗೆ ಅವಕಾಶ ನೀಡಲಾಗಿದೆ. 120 ರು. ಬೆಲೆ ನಿಗದಪಡಿಸಲಾಗಿದ್ದು, ಅಸಕ್ತರು ಕನ್ನಡ ಲೋಕ ವೆಬ್ ತಾಣದ ಮೂಲಕ ಕೃತಿ ತಮ್ಮದಾಗಿಸಿಕೊಳ್ಳಬಹುದು.

ಮಹಾಕಾವ್ಯ ನಿರೀಕ್ಷಿಸಿ

ಮಹಾಕಾವ್ಯ ನಿರೀಕ್ಷಿಸಿ

ಐತಿಹಾಸಿಕ ಕಾದಂಬರಿ ಬರೆಯುವ ಇಂಗಿತ ವ್ಯಕ್ತಪಡಿಸಿದ ಲೇಖಕರು ಅಸೆ, ಬೃಹತ್‌ ಕಾವ್ಯ ಬರೆಯುವಂತೆ ದುಂಬಾಲು ಬಿದ್ದ ಓದುಗರಿಗೆ ಖುಷಿ ನೀಡಲಿದೆ. ಆ ಕಾದಂಬರಿಗೆ ನಾನು ಕನ್ನಡ ನಾಡಿಗಷ್ಟೆ ಅಲ್ಲದೇ ಇಡಿ ದೇಶಕ್ಕೆ ಸಂಕ್ರಮಣದ ಕಾಲವಾಗಿದ್ದ ಆರನೇ ಶತಮಾನದಲ್ಲಿದ್ದ ಇಮ್ಮಡಿ ಪುಲಕೇಶಿ ರಾಜನ ಆಳ್ವಿಕೆ, ಆ ವೇಳೆ ನಡೆದ ಅನೇಕ ಘಟನೆಗಳನ್ನು ವಸ್ತು ವಿಷಯವಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

English summary
Interview with Novelist Karanam Pavan Prasad: Karanam Pavan Prasad is an Indian author in Kannada language. He gained notability with his first novel Karma. He talks about new novel Sattu and current affairs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X