• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

INTERVIEW: ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ನಮ್ಮ ಗುರಿ: ಸಿ.ಟಿ. ರವಿ

|
Google Oneindia Kannada News

ಬೆಂಗಳೂರು, ಫೆ. 26: ಒಂದು ಕೇಂದ್ರಾಡಳಿತ ಪ್ರದೇಶ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಘೊಷಣೆಯಾಗಿದೆ. ಆ ಹಿನ್ನೆಲೆಯಲ್ಲಿ ದೇಶದಲ್ಲಿ ಮತ್ತೆ ಚುನಾವಣಾ ಬಿಸಿ ಏರುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದ ಬಿಜೆಪಿ ತನ್ನ ನಡೆಯಲ್ಲಿ ಬದಲಾವಣೆ ಮಾಡಿಕೊಂಡಿದೆ. ಈಗ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಆ ಮೂಲಕ ನೆಲೆಯೆ ಇಲ್ಲದ ರಾಜ್ಯಗಳಲ್ಲಿ ಜಯಭೇರಿ ಭಾರಿಸಲು ಬಿಜೆಪಿ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಪಕ್ಕದ ತಮಿಳುನಾಡು ರಾಜ್ಯದಲ್ಲಿಯೂ ಕೂಡ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ನಮ್ಮ ರಾಜ್ಯದವರೇ ಆಗಿರುವ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಸಿ.ಟಿ. ರವಿ ಅವರು ತಮಿಳುನಾಡು ಉಸ್ತುವಾರಿ ವಹಿಸಿಕೊಂಡ ಬಳಿಕ ಅಲ್ಲಿ ಬಿಜೆಪಿ ಚಿತ್ರಣವೇ ಬೇರೆಯಾಗಿದೆ ಎಂಬ ವರದಿಗಳಿವೆ.

ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಸಿ.ಟಿ. ರವಿ ಅವರು ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿನ ಚುನಾವಣಾ ರಾಜಕೀಯಕ್ಕೆ ಶಶಿಕಲಾ ಅವರೂ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಎಐಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಚುನಾವಣಾ ತಯಾರಿ ಹೇಗಿದೆ? ಒಬ್ಬೇ ಒಬ್ಬ ಶಾಸಕ ಅಥವಾ ಸಂಸದರನ್ನು ಹೊಂದಿರದ ಅಷ್ಟೊಂದು ದೊಡ್ಡ ರಾಜ್ಯದಲ್ಲಿ ಬಿಜೆಪಿಯ ಮುಂದಿನ ಭವಿಷ್ಯವೇನು?

ಈ ಎಲ್ಲ ವಿಚಾರಗಳ ಕುರಿತು ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ. ರವಿ ಅವರು 'ಒನ್‌ಇಂಡಿಯಾ ಕನ್ನಡ'ದೊಂದಿಗಿನ EXCLUSIVE ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಮುಂದಿದೆ ವಿವರ!

ನಮ್ಮದು ಕೆಡರ್ ಬೇಸ್ ಪಕ್ಷ

ನಮ್ಮದು ಕೆಡರ್ ಬೇಸ್ ಪಕ್ಷ

ಒನ್‌ಇಂಡಿಯಾ ಕನ್ನಡ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಬಳಿಕ ನಿಮ್ಮ ಹಸರೇ ಕೇಳಿ ಬರುತ್ತಿದೆ. ನೀವು ತಮಿಳುನಾಡು ಬಿಜೆಪಿ ಉಸ್ತುವಾರಿ ವಹಿಸಿಕೊಂಡಾಗ ಪರಿಸ್ಥಿತಿ ಹೀಗಿರಲಿಲ್ಲ. ಅಲ್ಲಿ ನೀವು ಏನು ಮಾಡಿದ್ರಿ? ಅಲ್ಲಿನ ಜನರ ಮೇಲೆ ಅಷ್ಟೊಂದು ಪರಿಣಾಮ ಬೀರಿದ್ದು ಏನು? ಬಿಜೆಪಿಗೆ ಈಗ ಬೆಂಬಲ ಸಿಗುತ್ತಿರುವುದು ಹೇಗೆ? ಜೊತೆಗೆ ನೀವು ಎದುರಿಸಿದ ಸವಾಲುಗಳೇನು?

ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ. ರವಿ: ತಮಿಳುನಾಡಿನಲ್ಲಿ ನಾವು ಈವರೆಗೆ ಪಡೆಯಬಹುದಾಗಿದ್ದ ರಾಜಕೀಯ ಅವಕಾಶ ಹಾಗೂ ಲಾಭ ಎರಡನ್ನೂ ಪಡೆಯೋದಕ್ಕೆ ಆಗಿರಲಿಲ್ಲ. ಅತಿ ಹೆಚ್ಚು ಎಂದರೆ ನಾಲ್ಕು ಶಾಸಕರು ಹಾಗೂ ನಾಲ್ಕು ಸಂಸದರನ್ನು ಗೆಲ್ಲಿಸಿಕೊಂಡಿದ್ದು ಇಲ್ಲಿಯವರೆಗಿನ ನಮ್ಮ ಅತಿದೊಡ್ಡ ಸಾಧನೆ. ನಮ್ಮದು ಕೆಡರ್ ಬೇಸ್ ಪಾರ್ಟಿ. ಕೆಡರ್‌ಗಳು ಎಲ್ಲ ಕಡೆಗೆ ಇದ್ದಾರೆ. ಆದರೆ ಕೆಡರ್‌ನ್ನು ಜನಬೆಂಬಲದ ಪಕ್ಷವನ್ನಾಗಿ ಮಾಡಬೇಕಾದ ಸವಾಲಿದೆ.

ಯಾಕೆಂದರೆ ಜನಬೆಂಬಲವನ್ನು ಪಡೆದಾಗ ಮಾತ್ರ ನಾವು ಅಧಿಕಾರಕ್ಕೆ ಬರುವುದು ಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ಕೆಡರ್ ಬೇಸ್ ಪಾರ್ಟಿಯನ್ನು ಮಾಸ್ ಪಾರ್ಟಿಯನ್ನಾಗಿ ಮಾಡುತ್ತಿದ್ದೇವೆ. ಅದು ಒಂದು ದಿನದಲ್ಲಿ ಅಥವಾ ಒಂದು ತಿಂಗಳಿನಲ್ಲಿ ಆಗುವಂತಹ ಕೆಲಸವಲ್ಲ. ಅದು ದೀರ್ಘಕಾಲದ ಪ್ರಯತ್ನದಿಂದ ಮಾತ್ರ ಸಾಧ್ಯ, ಅದರಲ್ಲಿ ನಾವು ಯಶಸ್ಸು ಪಡೆಯುತ್ತೇವೆ ಎಂಬ ವಿಶ್ವಾಸವಿದೆ.

ತಮಿಳುನಾಡಿನಲ್ಲಿ ಸುಮಾರು 70 ಸಾವಿರ ಬೂತ್‌ಗಳಿಗೆ. ಅದ್ರಲ್ಲಿ ಬೂತ್ ಕಮಿಟಿಗಳನ್ನು ರಚನೆ ಮಾಡುವುದು ನಮ್ಮ ಮೊದಲ ಆದ್ಯತೆ. ಅದ್ರಲ್ಲಿ ಈಗ 48 ಸಾವಿರ ಬೂತ್ ಕಮಿಟಿಗಳನ್ನು ರಚನೆ ಮಾಡಿದ್ದೇವೆ. ಉಳಿದ ಬೂತ್‌ಗಳಿಗೂ ಶೀಘ್ರದಲ್ಲಿಯೇ ಸಮಿತಿಗಳನ್ನು ರಚನೆ ಮಾಡುತ್ತೇವೆ. ಆ ಮೂಲಕ ನಮ್ಮ ಕೆಡರ್ ಅಸ್ತಿತ್ವಕ್ಕೆ ಬರುತ್ತದೆ. ಅದಾದ್ಮೇಲೆ ನಮ್ಮ ಕೆಡರ್ ಮುಂದಾಳತ್ವ ವಹಿಸಿಕೊಳ್ಳು ನಾಯಕರನ್ನು ಗುರುತಿಸಬೇಕು. ಅದನ್ನು ನಾವು ಮಾಡುತ್ತೇವೆ.

ಸಮುದಾಯದ ನಾಯಕತ್ವ

ಸಮುದಾಯದ ನಾಯಕತ್ವ

ಒನ್‌ಇಂಡಿಯಾ ಕನ್ನಡ: ಕರ್ನಾಟಕ ಸೇರಿದಂತೆ ಎಲ್ಲ ಕಡೆಯೂ ಇದೇ ರೀತಿ ಬೂತ್ ಮಟ್ಟದ ಸಮಿತಿಗಳನ್ನು ರಚಿಸಲು ಬಿಜೆಪಿ ಮೊದಲ ಆದ್ಯತೆ ಕೊಟ್ಟಿತ್ತು. ಆದ್ರೆ ಬೂತ್ ಕಮಿಟಿಗಳನ್ನು ರಚನೆ ಮಾಡಿದ ನಂತರ ಏನು ಮಾಡುತ್ತೀರಿ? ಮುಖ್ಯವಾಗಿ ನಾಯಕರು ಬೇಕಲ್ಲವಾ?

ತ.ನಾ. ಬಿಜೆಪಿ ಉಸ್ತುವಾರಿ ಸಿ.ಟಿ. ರವಿ: ಅದನ್ನೇ ನಾನೂ ಹೇಳುತ್ತಿರುವುದು. ಸಮಾಜ ಜಾತಿಯನ್ನು ನೋಡುತ್ತದೆ. ಆ ಆಧಾರದ ಮೇಲೆ ನಾವು ನಾಯಕರನ್ನು ಗುರುತಿಸಬೇಕು. ಹಾಗಂತ ನಾವು ಜಾತಿವಾದಿ ಆಗಬಾರದು. ಜಾತಿಯ ನಾಯಕತ್ವ ಇರಬೇಕು. ನಮ್ಮ ಪಕ್ಷಕ್ಕೆ ಜಾತಿಯಿಲ್ಲ, ನಮ್ಮ ಪಕ್ಷಕ್ಕಿರುವುದು ಸಿದ್ಧಾಂತ ಮಾತ್ರ. ಆದರೆ ಸಮಾಜ ಜಾತಿಯನ್ನು ನೋಡುವುದರಿಂದ ಜಾತಿಯ ನಾಯಕತ್ವ ಇರಬೇಕು, ಆದರೆ ಆ ನಾಯಕ ಜಾತಿವಾದಿ ಆಗಬಾರದು. ಆ ರೀತಿ ಎಲ್ಲ ಸಮುದಾಯಗಳ ನಾಯಕತ್ವ ಬೆಳೆಸಲು ನಿರ್ಧಾರ ಮಾಡಿದ್ದಾರೆ.

ಜೊತೆಗೆ ಸ್ಥಳೀಯ ಸಮಸ್ಯೆಗಳನ್ನು ನೋಡಿಕೊಂಡು ದೀರ್ಘಕಾಲದ ಯೋಜನೆ ರೂಪಿಸುತ್ತಿದ್ದೇವೆ. ಈಗ ನಮಗಿರುವುದು ಅತಿ ಕಡಿಮೆ ಸಮಯ. ಜೊತೆಗೆ ಒಂದೇ ಹಂತದಲ್ಲಿ ಇಲ್ಲಿ ಚುನಾವಣೆ ಎಂದು ಈಗಾಗಲೇ ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ ಒಂದೆರಡು ತಿಂಗಳುಗಳಲ್ಲಿ ಚುನಾವಣೆ ಮುಗಿದು ಹೋಗುತ್ತದೆ. 234 ವಿಧಾನಸಭಾ ಕ್ಷೇತ್ರ ಹಾಗೂ 39 ಲೋಕಸಭಾ ಕ್ಷೇತ್ರಗಳಿರುವ ದೊಡ್ಡ ರಾಜ್ಯವಿದು. ಕರ್ನಾಟಕಕ್ಕಿಂದ 10 ವಿಧಾನಸಭಾ ಕ್ಷೇತ್ರಗಳು ಹಾಗೂ 11 ಲೋಕಸಭಾ ಕ್ಷೇತ್ರಗಳು ಇಲ್ಲಿ ಹೆಚ್ಚಿವೆ.

ಇಲ್ಲಿ ಎಐಎಡಿಎಂಕೆ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ತೀರ್ಮಾನವಾಗಿದೆ, ತಮಿಳುನಾಡಿನಲ್ಲಿ ಎನ್‌ಡಿಎ ನಾಯಕತ್ವವನ್ನು ಎಐಡಿಎಂಕೆ ವಹಿಸಿಕೊಂಡಿದೆ. ಎ.ಐ.ಎ.ಡಿ.ಎಂ.ಕೆ., ಪಿ.ಎಂ.ಕೆ., ಡಿ.ಎಂ.ಡಿ.ಕೆ. ಹಾಗೂ ಬಿಜೆಪಿ ಸೇರಿದಂತೆ ನಾಲ್ಕು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಹೊಂದಾಣಿಕೆ ಮಾಡಿಕೊಂಡು ಮುನ್ನಡೆಸಿಕೊಂಡು ಹೋಗುವುದು ನಮ್ಮ ಮುಂದಿನ ಕೆಲಸವಾಗಿದೆ.

ತಮಿಳುನಾಡಿಗೆ ಮೋದಿ ವಿಶೇಷ ಆಸ್ಥೆ

ತಮಿಳುನಾಡಿಗೆ ಮೋದಿ ವಿಶೇಷ ಆಸ್ಥೆ

ಒನ್‌ಇಂಡಿಯಾ ಕನ್ನಡ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಹೇಗೆ ಅವರ ಪ್ರಯತ್ನಕ್ಕೆ ನೀವು ಹೆಗಲಾಗಬಹುದು? ಜೊತೆಗೆ ಈಗಾಗಲೇ ಎಷ್ಟು ರ್ಯಾಲಿಗಳನ್ನು ಮಾಡಿದ್ದೀರಿ? ಯಾವ್ಯಾವ ನಾಯಕರು ಭಾಗವಹಿಸಿದ್ದಾರೆ?

ತ.ನಾ. ಬಿಜೆಪಿ ಉಸ್ತುವಾರಿ ಸಿ.ಟಿ. ರವಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ (ಫೆ.25) ಎರಡನೇ ಬಾರಿ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಫೆಬ್ರುವರಿ 14ಕ್ಕೆ ಪ್ರಧಾನಿ ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಚೆನ್ನೈಗೆ ಬಂದಿದ್ದರು. ಆಗ ನಾವು ಬೃಹತ್ ಬೈಕ್ ರ್ಯಾಲಿ ಆಯೋಜಿಸುವ ಮೂಲಕ ಎನ್‌ಡಿಎ ಹಾಗೂ ಬಿಜೆಪಿ ಪರವಾಗಿ ವಾತಾವರಣ ನಿರ್ಮಾಣ ಮಾಡುವುದರಲ್ಲಿ ನಾವು ಯಶಸ್ವಿಯಾಗಿದ್ದೇವು.

ಮತ್ತೆ ನಿನ್ನೆ ಪ್ರಧಾನಿ ಮೋದಿ ಅವರು ಕೊಯಿಮುತ್ತೂರಿಗೆ ಬಂದಿದ್ದರು ಒಂದು ಲಕ್ಷಕ್ಕಿಂತ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು. ಜನರನ್ನು ನೋಡಿ ಪ್ರಧಾನಿ ಮೋದಿ ಅವರು ಕೂಡ ಸಂಸತ ವ್ಯಕ್ತಪಡಿಸಿದ್ದರು. ಇದೆಲ್ಲವೂ ಬಿಜೆಪಿ ಪರ ಒಂದು ಅಲೆಯಿದೆ ಎಂಬುದನ್ನು ತೋರಿಸುತ್ತಿವೆ. ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಎಲ್ಲರೂ ಬಂದು ಹೋಗಿದ್ದಾರೆ. ಮತ್ತೆ ಅವರೆಲ್ಲರೂ ಚುನಾವಣಾ ಪ್ರಚಾರ ಮಾಡಿದ್ದಾರೆ.

ಈ ಹಿಂದೆ ನಮ್ಮ ರಾಜಕೀಯ ಎದುರಾಳಿಗಳು ಚುನಾವಣಾ ಅಜೆಂಡಾವನ್ನು ನಿಗದಿ ಮಾಡುತ್ತಿದ್ದರು. ಆದ್ರೆ ಈ ಬಾರಿ ನಾವು ಅಜೆಂಡಾ ನಿಗದಿ ಮಾಡಿದ್ದೇವೆ. ಹಿಂದೆ ಡಿಎಂಕೆಯ ಮೈತ್ರಿ ಪಕ್ಷ ಡಿ.ಕೆ. (ದ್ರಾವಿಡ ಕಜಗಂ) ಪಕ್ಷ ಮುರುಗನ್ ದೇವರಿಗೆ ಅಪಮಾನ ಮಾಡಿದ್ದರು. ನಾವು ಅದನ್ನು ವಿರೋಧಿಸಿ ವೆಲ್ ಕವಡಿ ಪೂಜೆಗೆ ಕರೆ ಕೊಟ್ಟೆವು.

ವೆಲ್ ಕವಡಿ ಅಂದರೆ ಮುರುಗನ್ ದೇವರ ಆಯುಧ. ನಾವು ಕೊಟ್ಟಿದ್ದ ಕರೆಗೆ ಬೆಂಬಲ ಕೊಟ್ಟು ಸುಮಾರು 80 ಲಕ್ಷ ಮನೆಗಳಲ್ಲಿ ಮನೆಯಿಂದ ಹೊರಗೆ ಬಂದು ಹೊಸ್ತಿಲ ಮೇಲೆ ವೆಲ್ ಇಟ್ಟು ಪೂಜೆ ಮಾಡಿದರು. ಜೊತೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್. ಮುರುಗನ್ ಅವರ ನೇತೃತ್ವದಲ್ಲಿ ವೆಟ್ರಿವೆಲ್ ಯಾತ್ರೆ ಆರಂಭಿಸಿದ್ದೇವು. ಅದಕ್ಕೂ ಕೂಡ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ರಾಜ್ಯ ಸರ್ಕಾರ ಆ ಯಾತ್ರೆ ಮಾಡದಂತೆ ನಮ್ಮನ್ನು ಬಂಧಿಸಿತ್ತು. ಆದರೆ ಜನಬೆಂಬಲ ಅಭೂತಪೂರ್ವವಾಗಿತ್ತು.

ಪೊಂಗಲ್ ಹಾಗೂ ಜಲ್ಲಿಕಟ್ಟು ವಿಚಾರದಲ್ಲಿಯೂ ಕೂಡ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳು ತಪ್ಪಾಗಿ ನಡೆದುಕೊಂಡಿದ್ದವು. 2011 ರಲ್ಲಿ ಯುಪಿಎ ಸರ್ಕಾರ ಜಲ್ಲಿಕಟ್ಟು ಪ್ರಾಣಿಗಳ ಮೇಲೆ ಹಿಂಸೆಯನ್ನುಂಟು ಮಾಡುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಆದರೆ ನಮ್ಮ ಸರ್ಕಾರ 2016ರಲ್ಲಿ ಜಲ್ಲಿಕಟ್ಟು ಪ್ರಾಣಿ ಹಿಂಸೆ ಅಲ್ಲ ಅದು ಪ್ರಾಣಿ ಕ್ರೀಡೆ ಎಂದು ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಿತ್ತು. ಹೀಗಾಗಿ ಜಲ್ಲಿಕಟ್ಟು ನಡೆಸಲು ಅವಕಾಶ ಸಿಕ್ಕಿದೆ. ಈ ಎಲ್ಲ ವಿಚಾರಗಳನ್ನು ತಮಿಳುನಾಡಿನ ಜನರಿಗೆ ತಿಳಿಸಿದ್ದೇವೆ.

ಜೊತೆಗೆ ಪ್ರಧಾನಿ ಮೋದಿ ಅವರು ತಮಿಳುನಾಡು ಅಭಿವೃದ್ಧಿಗೆ ಕಳೆದ 6 ವರ್ಷಗಳಲ್ಲಿ 6.1 ಲಕ್ಷ ಕೋಟಿ ರೂ.ಗಳನ್ನು ಕೊಟ್ಟಿದ್ದಾರೆ. ಅದರಲ್ಲಿ 1.6 ಕೋಟಿ ಜನರು ಕೇಂದ್ರ ಸರ್ಕಾರದ ಸಹಾಯ ಪಡೆದಿರುವ ನೇರ ಫಲಾನುಭವಿಗಳಿದ್ದಾರೆ. ಇದೆಲ್ಲವನ್ನೂ ನಾವು ಮತಗಳನ್ನಾಗಿ ಬದಲಾಯಿಸಿದರೆ ನಮಗೆ ಗೆಲವು ಖಂಡಿತ. ಅದನ್ನು ನಾವು ಮಾಡುತ್ತಿದ್ದೇವೆ.

ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವುದು ಬಿಜೆಪಿ ಗುರಿ!

ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವುದು ಬಿಜೆಪಿ ಗುರಿ!

ಒನ್‌ಇಂಡಿಯಾ ಕನ್ನಡ: ಚುನಾವಣೆಯಲ್ಲಿ ನೀವು ಎಷ್ಟು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದೀರಿ? ಎನ್‌ಡಿಎದ ನಾಲ್ಕು ಪಕ್ಷಗಳು ಹೇಗೆ ಸೀಟು ಹಂಚಿಕೊಳ್ಳುತ್ತಿರಿ? ಅದರಲ್ಲಿ ಬಿಜೆಪಿಗೆ ಸಿಗುವ ಕ್ಷೇತ್ರಗಳು ಎಷ್ಟು?

ತ.ನಾ. ಬಿಜೆಪಿ ಉಸ್ತುವಾರಿ ಸಿ.ಟಿ. ರವಿ: ಅದನ್ನು ನಾವು ಇನ್ನೂ ನಿರ್ಧಾರ ಮಾಡಬೇಕಿದೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ. ಸಹಜವಾಗಿ ಎಐಎಡಿಎಂಕೆ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಆ ಪಕ್ಷಕ್ಕೆ ಹೆಚ್ಚು ಕ್ಷೇತ್ರಗಳು ಹೋಗುತ್ತವೆ. ಆದರೆ ಎಲ್ಲ 234 ಕ್ಷೇತ್ರಗಳಲ್ಲಿ ನಾವು ಬಿಜೆಪಿ ಶಕ್ತಿಯನ್ನು ಗಟ್ಟಿಗೊಳಿಸುತ್ತಿದ್ದೇವೆ. ಎಷ್ಟು ಕ್ಷೇತ್ರಗಳು ನಮಗೆ ಸಿಗುತ್ತವೆ ಎಂಬುದಕ್ಕಿಂತ, ನಮಗೆ ಸಿಗುವ ಕ್ಷೇತ್ರಗಳಲ್ಲಿ ನಾವು ಎಷ್ಟು ಗೆಲ್ಲುತ್ತೇವೆ ಎಂಬುದು ಮುಖ್ಯ.

ಹೀಗಾಗಿ ನಮಗೆ ಸಿಗುವ ಎಲ್ಲ ಕ್ಷೇತ್ರಗಳಲ್ಲಿ ಜಯ ದಾಖಲಿಸುವುದರೊಂದಿಗೆ ಶೇಕಡಾ ನೂರರಷ್ಟು ಫಲಿತಾಂಶ ಬರುವಂತೆ ಮಾಡುವುದು ನಮ್ಮ ಗುರಿಯಾಗಿದೆ. ನಾವು ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬಲಗೊಳಿಸಲು ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಯತ್ನಗಳನ್ನು ನಡೆಸಿದ್ದೇವೆ.

ಒನ್‌ಇಂಡಿಯಾ ಕನ್ನಡ: ತಮಿಳುನಾಡಿನ ರಾಜಕೀಯದಲ್ಲಿ ವ್ಯಕ್ತಿ ಆಧಾರಿತವಾಗಿ ಚುನಾವಣೆ ನಡೆದುಕೊಂಡು ಬಂದಿವೆ. ನೀವು ಅದನ್ನು ಹೇಗೆ ಕೆಡರ್ ಬೇಸ್ ಆಗಿ ಬದಲಾಯಿಸುತ್ತೀರಿ? ಈಗಲೂ ಕೂಡ ಅಲ್ಲಿ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ ಎನ್ನುವಂತಹ ಪರಿಸ್ಥಿತಿ ಇದೆ, ಅಲ್ಲವಾ?

ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ. ರವಿ: ದ್ರಾವಿಡನ್ ಸಂಸ್ಕೃತಿಯ ಹೆಸರಿನಲ್ಲಿ ಡಿಎಂಕೆ ಪ್ರಜಾಪ್ರಭುತ್ವ ವಿರೋಧಿ ಹಾಗೂ ಡ್ರಾವಿಡನ್ ಸಂಸ್ಕೃತಿಯ ವಿರೋಧಿ ವ್ಯವಸ್ಥೆಯನ್ನು ಹುಟ್ಟು ಹಾಕಿದೆ. ಅವರು ಹೇಳುವುದು ದ್ರಾವಿಡನ್ ಸಂಸ್ಕೃತಿ. ದ್ರಾವಿಡನ್ ಸಂಸ್ಕೃತಿ ಎಂದರೆ ಏನು? ಎಂಬುದು ಅವರಿಗೆ ಬೇಕಾಗಿಲ್ಲ.


ಜಗತ್ತಿನಲ್ಲಿರುವ ಒಟ್ಟು ದೇವಸ್ಥಾನಗಳಲ್ಲಿ ಅರ್ಧದಷ್ಟು ದೇವಸ್ಥಾನಗಳು ತಮಿಳುನಾಡಿನಲ್ಲಿವೆ. ಅವು ಕೂಡ ದೊಡ್ಡ ದೊಡ್ಡ ದೇವಸ್ಥಾನಗಳು. ಒಂದೊಂದು ದೇವಸ್ಥಾನ ಕಡಿಮೆ ಎಂದರೂ 10, 20, 30 ಎಕರೆ ಪ್ರದೇಶಗಳಲ್ಲಿ ನಿರ್ಮಾಣವಾಗಿದೆ. ತಮಿಳುನಾಡು ರಾಜ್ಯದ ಲಾಂಚನವೇ ರಾಜಗೋಪುರ. ಆದರೆ ಆ ಲಾಂಚನದ ಕೆಳೆಗೆ ಕುಳಿತುಕೊಂಡು ದೈವವಿರೋಧಿ ಆಡಳಿತ ನಡೆಸಲು ಬರುತ್ತದೆಯಾ? ನಡೆಸಿದ್ದಾರೆ.

ತಮಿಳುನಾಡು ಜನರು ದೈವಭಕ್ತರು. ಆದರೆ ಡಿಎಂಕೆ ಹಾಗೂ ಮೈತ್ರಿ ಪಕ್ಷಗಳು ನಾಸ್ತಿಕರು, ಹೀಗಾಗಿ ದೈವವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ಇದೆಲ್ಲವನ್ನೂ ನಾವು ಜನರ ಎದುರು ತರುತ್ತಿದ್ದೇವೆ. ಡ್ರಾವಿಡನ್ ಸಂಸ್ಕೃತಿ ಹಾಗೂ ಡ್ರಾವಿಡನ್ ಸಂಸ್ಕೃತಿಯ ಹೆಸರಿನಲ್ಲಿ ಅವರು ಮಾಡುತ್ತಿರುವ ಕೆಲಸಗಳನ್ನು ಬಹುರಂಗಗೊಳಿಸುತ್ತಿದ್ದೇವೆ. ಅವರಿಗೆ ತಮಿಳುನಾಡಿನ ಅಭಿವೃದ್ಧಿ ಆಗಬೇಕಿಲ್ಲ, ತಮ್ಮ ಅಭಿವೃದ್ಧಿ ಆದರೆ ಸಾಕು. ನಮಗೆ ಗೊತ್ತಿದೆ, ಇವೆಲ್ಲವನ್ನೂ ಮುಂದಿಟ್ಟುಕೊಂಡು ನಾವು ಸುದೀರ್ಘ ಹೋರಾಟ ಮಾಡಬೇಕಿದೆ. ಅಲ್ಪಾವಧಿಯಲ್ಲಿ ಚುನಾವಣೆ ಇದೆ ಎಂಬುದು ನಮ್ಮ ಗಮನದಲ್ಲಿದೆ. ಆದರೆ ಸುದೀರ್ಘ ಹೋರಾಟದ ಬಳಿಕವೇ ನಮಗೆ ಜಯಸಿಗಲಿದೆ.

ಒಬ್ಬ ಸಂಸದ ಅಥವಾ ಒಬ್ಬ ಶಾಸಕ ಇಲ್ಲದ ಕಡೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ನೂರಕ್ಕೂ ಹೆಚ್ಚು ನಾಯಕರು ಬಿಜೆಪಿಯತ್ತ ವಾಲಿದ್ದಾರೆ. ಶಿವಾಜಿ ಗಣೇಶನ್ ಅವರ ಪುತ್ರ ರಾಮ್ ಕುಮಾರ್, ನಟಿ ಖುಷ್ಬೂ ಸುಂದರ್, ಚೆನ್ನೈನ ಮಾಜಿ ಮೇಯರ್ ಕರಾಟೆ ತ್ಯಾಗರಾಜನ್ ಬಿಜೆಪಿ ಸೇರಿದ್ದಾರೆ. ನಮ್ಮಲ್ಲಿ ಒಬ್ಬ ಎಂಪಿ, ಒಬ್ಬ ಎಂಎಲ್‌ಎ ಇಲ್ಲ. ಆದರೂ ಅವರೆಲ್ಲರೂ ಬಿಜೆಪಿ ಸೇರುತ್ತಿದ್ದಾರೆ ಎಂದರೆ ಏನೋ ಒಂದು ಹೊಸಾ ಕೆಮಿಸ್ಟ್ರಿ ಆಗ್ತಾಯಿದೆ. ಆ ಕೆಮಿಸ್ಟ್ರಿಯ ಕಾರಣಕ್ಕೆ ಮ್ಯಾಥ್‌ಮೆಟಿಕ್ಸ್‌ನಲ್ಲೂ ಬದಲಾವಣೆ ಆಗುತ್ತದೆ.

ಬಿಜೆಪಿಯಿಂದ ಡಿಸಿಎಂ ಹುದ್ದೆಗೆ ಬೇಡಿಕೆ?

ಬಿಜೆಪಿಯಿಂದ ಡಿಸಿಎಂ ಹುದ್ದೆಗೆ ಬೇಡಿಕೆ?

ಒನ್‌ಇಂಡಿಯಾ ಕನ್ನಡ: ತಮಿಳುನಾಡಿನಲ್ಲಿ ನೀವು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದೀರಿ ಎಂಬ ಮಾತಿದೆ. ಕರ್ನಾಟಕದಂತೆ ಮೊದಲು ಮೈತ್ರಿ ಮಾಡಿಕೊಂಡು ಡಿಸಿಎಂ ಹುದ್ದೆ ಪಡೆಯುವುದು, ಆಮೇಲೆ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದು. ಆ ರೀತಿಯ ಪ್ರಯತ್ನಗಳು ನಡೆದಿವೆಯಾ? ಡಿಸಿಎಂ ಹುದ್ದೆ ಕೊಡಲು ಎಐಡಿಎಂಕೆ ನಾಯಕರು ಒಪ್ಪಿದ್ದಾರಾ?

ತ.ನಾ. ಬಿಜೆಪಿ ಉಸ್ತುವಾರಿ ಸಿ.ಟಿ. ರವಿ: ಅದು ಚರ್ಚೆಯಲ್ಲಿ ಇಲ್ಲ. ನಮ್ಮ ಮುದಿರುವ ಗುರಿ ಎನ್‌ಡಿಎ ಅಧಿಕಾರಕ್ಕೆ ಬರಬೇಕು. ನಮಗೆ ಸಿಗುವ ಕ್ಷೇತ್ರಗಳಲ್ಲಿ ಜಯ ಗಳಿಸಬೇಕು. ಜೊತೆಗೆ ಎಲ್ಲ ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂಬುದು ಸದ್ಯದ ನಮ್ಮ ಗುರಿ.

ನಮ್ಮದು ಸಿದ್ಧಾಂತವನ್ನು ಹೊಂದಿರುವ ಪಕ್ಷ. ನಮಗೆ ದೇಶ ಮುಖ್ಯ. ನಾವು ತಮಿಳುನಾಡಿಗೆ ಬಂದರೆ ತಮಿಳುನಾಡು ಮುಖ್ಯ. ಅಂದರೆ ನಮಗೇ ಜನರೇ ಮುಖ್ಯ ಎಂಬುದು ನಮ್ಮ ಸಿದ್ಧಾಂತ. ದೇಶಕ್ಕೆ ಬಂದರೆ ಭಾರತ ಮೊದಲು, ಪಕ್ಷ ನಂತರ, ಆಮೇಲೆ ವ್ಯಕ್ತಿ. ಇದು ನಮ್ಮ ಸಿದ್ಧಾಂತ. ಆದರೆ ಬೇರೆ ಪಕ್ಷಗಳಿಗೆ ಕುಟುಂಬ ಮೊದಲು, ಪಕ್ಷ ಆಮೇಲೆ ಕೊನೆಯಲ್ಲಿ ಜನರು ಎಂಬ ಸಿದ್ಧಾಂತವಿದೆ.

ಹೀಗಾಗಿ ನಾವು ಎಲ್ಲಿಯವರೆಗೆ ಎಐಎಡಿಎಂಕೆ ಜೊತೆಗೆ ಇರುತ್ತೇವೊ ಅಲ್ಲಿವರೆಗೆ ನಾವು ಯಾವುದೇ ಬೇಡಿಕೆ ಇಡುವುದಿಲ್ಲ. ನಾವೂ ಯಾರಿಗೂ ಅನ್ಯಾಯ ಮಾಡಿಲ್ಲ. ಉದಾಹರಣೆಗೆ ಬೀಹಾರದಲ್ಲಿ ನಿತೀಶ್ ಕುಮಾರ್ ಅವರು ಸಿಎಂ ಎಂದು ಮೊದಲೇ ಘೋಷಣೆ ಮಾಡಿದ್ದೇವು. ಅಲ್ಲಿ ನಾವು ಅವರಿಗಿಂತ ಹೆಚ್ಚು ಸ್ಥಾನಗಳನ್ನೂ ಪಡೆದಿದ್ದರೂ ಅವರನ್ನೇ ಸಿಎಂ ಮಾಡಿದ್ದೇವೆ. ಹೀಗಾಗಿ ನಾವು ತಮಿಳುನಾಡಿನಲ್ಲಿಯೂ ಅದನ್ನೆ ಮಾಡುತ್ತೇವೆ.

ಈವರೆಗೆ ಬಿಜೆಪಿಯನ್ನು ಕೇಂದ್ರಕೃತವಾಗಿಟ್ಟುಕೊಂಡು ಸಮಾವೇಶಗಳನ್ನು ಮಾಡಿದ್ದೇವೆ. ಈಗ ಚುನಾವಣೆ ಘೋಷಣೆಯಾಗಿದೆ, ಇನ್ಮುಂದೆ ನಾವು ಎನ್‌ಡಿಎ ರ್ಯಾಲಿಗಳನ್ನು ಮಾಡುತ್ತೇವೆ. ಮೈತ್ರಿ ಪಕ್ಷಗಳೊಂದಿಗೆ ಸಮಾವೇಶ, ಪ್ರಚಾರ ಶುರು ಮಾಡುತ್ತೇವೆ.

ಶಶಿಕಲಾ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ರಾಜಕೀಯ ಹಿನ್ನೆಲೆ ಇರಬಹುದು ಅಥವಾ ಮುನ್ನೆಲೆ ಇರಬಹುದು ನಿರ್ದೇಶನ ಮಾಡಿರುವುದರಿಂದ ಅವರಿಗೆ ಅವರದ್ದೆ ಆಗ ತಾಕತ್ತು ಇರುತ್ತದೆ. ಆದರೆ ನಾವು ಎಐಡಿಎಂಕೆ ಜೊತೆಗೆ ಇರುತ್ತೇವೆ. ಅದು ಅವರ ಪಕ್ಷದ ವಿಚಾರ ಹೀಗಾಗಿ ನಾವು ಅದಕ್ಕೆ ತಲೆ ಹಾಕುವುದಿಲ್ಲ. ಶಶಿಕಲಾ ಅವರನ್ನು ಎಐಡಿಎಂಕೆ ಸೇರಿಸಿಕೊಂಡರೂ ನಮ್ಮ ವಿರೋಧ ಇಲ್ಲ, ಸೇರಿಸಿಕೊಳ್ಳದಿದ್ದರೂ ನಮ್ಮ ವಿರೋಧವಿಲ್ಲ. ಅದು ಅವರ ಪಕ್ಷದ ನಿರ್ಧಾರ ಎಂದು ಸಿ.ಟಿ. ರವಿ ಅವರು ಹೇಳಿದ್ದಾರೆ.

English summary
Here is the exclusive interview with CT Ravi on BJP Party strategies to win in Upcoming Tamil Nadu Assembly Elections 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X