ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉರುಳು ಸೇವೆಗೆ ಮತ್ತೊಂದು ಹೆಸರು ಗೋಪಾಲಕೃಷ್ಣಾಚಾರ್; ಹೀಗೂ ಇರ್ತಾರೆ!

|
Google Oneindia Kannada News

Recommended Video

ಉರುಳುಸೇವೆ ಗೋಪಾಲ ಕೃಷ್ಣ ಆಚಾರ್ ಸಂದರ್ಶನ | Oneindia Kannada

ಗೋಪಾಲಕೃಷ್ಣಾಚಾರ್ ಅಂತ ಇವರ ಹೆಸರು. ಹಾಗೆ ಇವರನ್ನು ಕರೆದರೆ ತಮ್ಮನ್ನಲ್ಲವೇನೋ ಬೇರೆ ಯಾರನ್ನೋ ಕರೆದಿರಬಹುದು ಅಂತ ಅಂದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಇವರು 'ಉರುಳುಸೇವೆ' ಗೋಪಾಲಕೃಷ್ಣಾ ಚಾರ್. ಹಾಗೆ ಕರೆದರಷ್ಟೇ ಈ ಜೀವಕ್ಕೆ ಒಂದು ಗೌರವ ಹಾಗೂ ಗುರುತು. ಈ ವರೆಗೆ ಹದಿಮೂರು ಸಾವಿರ ಉರುಳು ಸೇವೆ ಮಾಡಿರುವ ಇವರು ಒನ್ ಇಂಡಿಯಾ ಜತೆಗೆ ಮಾತನಾಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಂತ್ರಾಲಯ, ತಿರುಪತಿಯಲ್ಲಿ ಗೋಪಾಲಕೃಷ್ಣಾಚಾರ್ ಮಾಡಿದ ಉರುಳು ಸೇವೆ ಬಗ್ಗೆಯಷ್ಟೇ ಬರೆದರೆ ಅದೇ ಒಂದು ಪುಸ್ತಕ ಆದೀತು. ಆದರೆ ಈ ವ್ಯಕ್ತಿಯ ಬಗ್ಗೆಯೇ ಪರಿಚಯ ಮಾಡಿಸುವುದು ನಮ್ಮ ಉದ್ದೇಶ ಆದ್ದರಿಂದ ಸಂಕ್ಷಿಪ್ತವಾಗಿ ನಿಮ್ಮ ಮುಂದೆ ಅವರ ಪರಿಚಯವನ್ನು ತಂದಿದ್ದೇವೆ.

ಉರುಳು ಸೇವೆ ಅನ್ನೋದು ಹರಕೆ. ಭಗವಂತನ ಸನ್ನಿಧಾನಕ್ಕೆ ಭಕ್ತರು ಸಲ್ಲಿಸುವ ಭಕ್ತಿ ಸಮರ್ಪಣೆ. ಇಲ್ಲಿ ಸಂಖ್ಯೆಯುಂಟು. ಆದರೆ ಇವರಿಗೆ ಆ ಭಗವಂತನ ಬಗ್ಗೆ ಯಾವುದೇ ಶಂಕೆ ಇಲ್ಲ. ಎಲ್ಲವನ್ನೂ ಪೀಠಿಕೆಯಲ್ಲೇ ಹೇಳಿ ಮುಗಿಸಿಬಿಟ್ಟರೆ ಗೋಪಾಲಕೃಷ್ಣಾಚಾರ್ ಮಾತಿನಲ್ಲಿ ಕುತೂಹಲ ಉಳಿದೀತೆ! ಅವರ ಅಭಿಪ್ರಾಯ ತಿಳಿಯಲು ಮುಂದೆ ಓದಿ.

ಮಂತ್ರಾಲಯದಲ್ಲಿ 13 ಸಾವಿರ ಉರುಳು ಸೇವೆ

ಮಂತ್ರಾಲಯದಲ್ಲಿ 13 ಸಾವಿರ ಉರುಳು ಸೇವೆ

ಉರುಳು ಸೇವೆ ಬಹಳ ವಿಶೇಷ. ಉರುಳು ಸೇವೆ ಮಾಡಿದವರಿಗೆ ನರಳಾಟ ಇಲ್ಲ ಎಂಬ ಮಾತಿದೆ. ತಿರುಪತಿಯ ಮಹಾ ಪ್ರಾಕಾರ 1.3 ಕಿಲೋಮೀಟರ್ ಬರುತ್ತದೆ. ಮಂತ್ರಾಲಯದ ಒಂದು ಪ್ರಾಕಾರ ಕಾಲು ಕಿಲೋಮೀಟರ್ ಬರುತ್ತದೆ. ಹೀಗೆ 13 ಸಾವಿರ ಉರುಳು ಸೇವೆಯನ್ನು ಮಂತ್ರಾಲಯದ ರಾಘವೇಂದ್ರ ಸ್ವಾಮಿಗೆ ಎರಡು ವರ್ಷ ಮಾಡಿದ್ದೇನೆ. 2 ಹೊತ್ತಿಗೆ ಸೇರಿ 108 ಉರುಳು ಸೇವೆ. ಬೆಳಗ್ಗೆ 54 ಹಾಗೂ ಸಂಜೆ 54 ಉರುಳು ಸೇವೆ ಮಾಡಿದ್ದೇನೆ. ಹೀಗೆ 108 ವಾರಗಳ ಕಾಲ ಹೋಗಿ 13 ಸಾವಿರ ಉರುಳು ಸೇವೆ ಮಾಡಿದ್ದೇನೆ. ಹೀಗೆ 3 ಸಪ್ತಾಹ ಮಾಡಿದ್ದೇನೆ. ಮೊದಲ ಸಪ್ತಾಹ 425, ಎರಡನೆಯದರಲ್ಲಿ 475, ಮೂರನೆಯದರಲ್ಲಿ 525 ಉರುಳು ಸೇವೆಯನ್ನು 2 ವರ್ಷದಲ್ಲಿ ಮಾಡಿದ್ದೇನೆ.

ಉರುಳು ಸೇವೆಯೇ ಆರೋಗ್ಯ ರಕ್ಷಣೆಯ ಸೂತ್ರ

ಉರುಳು ಸೇವೆಯೇ ಆರೋಗ್ಯ ರಕ್ಷಣೆಯ ಸೂತ್ರ

585 ವಾರ ತಿರುಪತಿ ಯಾತ್ರೆ ಮಾಡಿದ್ದೇನೆ. ಅಲ್ಲಿ ಮಹಾ ಪ್ರಾಕಾರ 3, ಮಧ್ಯಮ ಪ್ರಾಕಾರ 1, ಒಳ ಪ್ರಾಕಾರ 1ರಲ್ಲಿ ಉರುಳು ಸೇವೆ ಮಾಡಿಕೊಂಡು ಬಂದಿದ್ದೇನೆ. ನನಗೆ ಈಗ 56 ವರ್ಷ ವಯಸ್ಸು. ಈ ವರೆಗೆ ನನಗೆ ಬಿ.ಪಿ, ಶುಗರ್ ಹೀಗೆ ಯಾವುದೇ ಸಮಸ್ಯೆ ಇಲ್ಲ. ಅದಕ್ಕೆ ಕಾರಣ ಉರುಳು ಸೇವೆ. ತಿರುಪತಿಯಲ್ಲಿ ಒಂದು ದಿನಕ್ಕೆ 750 ಮಂದಿಗೆ ಉರುಳು ಸೇವೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಆರೋಗ್ಯಕ್ಕಾಗಿಯೂ ಉರುಳು ಸೇವೆ ಮಾಡಬಹುದು, ಹರಕೆಗೂ ಈ ಸೇವೆ ಮಾಡಬಹುದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಮಾಡ್ತಿದ್ದೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಮಾಡ್ತಿದ್ದೆ

ನಾನು ಮೂಲತಃ ಬಳ್ಳಾರಿ ಜಿಲ್ಲೆಯ ಬಾದನಹಟ್ಟಿಯವನು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದೆ. ಶನಿವಾರ-ಭಾನುವಾರ ರಜಾ ಇರುತ್ತಿತ್ತು. ಆಗ ತಿರುಪತಿಗೆ ಹೋಗಿ ಎರಡು ದರ್ಶನ- ಐದು ಉರುಳು ಸೇವೆ ಮಾಡಿ, ಅಲ್ಲಿಂದ ಮಂತ್ರಾಲಯಕ್ಕೆ ಹೋಗಿ ನೂರೆಂಟು ಉರುಳು ಸೇವೆ ಮಾಡಿಕೊಂಡು, ಸೋಮವಾರ ಹಿಂತಿರುಗುತ್ತಿದ್ದೆ. ಮೂವತ್ತೆರಡು ವರ್ಷಗಳ ಕಾಲ ಆರ್ ಬಿಐನಲ್ಲಿ ಉದ್ಯೋಗ ಮಾಡಿದ್ದೇನೆ. ಇನ್ನು 2005ರಿಂದ ಅಂದರೆ 13 ವರ್ಷಗಳಿಂದ ಈ ಉರುಳು ಸೇವೆ ಮಾಡಿಕೊಂಡು ಬರ್ತಿದ್ದೇನೆ. ಇದು ನಾನು ಮಾಡಿದ್ದಲ್ಲ, ಆ ಭಗವಂತ ನನ್ನ ಮೂಲಕ ಮಾಡಿಸಿದ್ದಾನೆ.

ಭಗವಂತನೇ ನೀಡಿದ ಪ್ರೇರಣೆಯಿಂದ ಉರುಳು ಸೇವೆ ಆರಂಭಿಸಿದೆ

ಭಗವಂತನೇ ನೀಡಿದ ಪ್ರೇರಣೆಯಿಂದ ಉರುಳು ಸೇವೆ ಆರಂಭಿಸಿದೆ

ನಾನು ಒಂದು ಬಾರಿ ತಿರುಪತಿಗೆ ಹೋಗಿದ್ದಾಗ ಹೊರಗೆ ಒಬ್ಬರು ಉರುಳು ಸೇವೆ ಮಾಡುತ್ತಿದ್ದರು. ಅಂದು ರಾತ್ರಿ ನನಗೆ ಆ ಭಗವಂತನ ಪ್ರೇರಣೆ ಆಯಿತು. ಇದನ್ನು ನಂಬುವುದು- ಬಿಡುವುದು ಅವರವರಿಗೆ ಬಿಟ್ಟಿದ್ದು. ಏಕೆಂದರೆ ಇದು ಕಲಿಗಾಲ. ಆದರೆ ಅಂದಿನಿಂದ ಉರುಳುಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಅಲ್ಲಿ ಉರುಳು ಸೇವೆ ಮಾಡುತ್ತಾ ಮಂತ್ರಾಲಯದ ಗುರುಗಳು ಪ್ರೇರಣೆ ನೀಡಿದರು. ಆ ನಂತರ ಅಲ್ಲಿ ಆರಂಭಿಸಿದೆ. ಈ ವರೆಗೆ ಸಾವಿರಾರು ಮಂದಿಯನ್ನು ಮಂತ್ರಾಲಯ, ತಿರುಪತಿಗೆ ಕರೆದುಕೊಂಡು ಹೋಗಿದ್ದೇನೆ. ಮದುವೆ ಆಗದವರು, ಮಕ್ಕಳು ಆಗದವರು, ಉದ್ಯೋಗ ಇಲ್ಲದವರು ಹೀಗೆ ನಾನಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ.

ನಾನಾ ದೇವಾಲಯಗಳಲ್ಲಿ ಉರುಳು ಸೇವೆ

ನಾನಾ ದೇವಾಲಯಗಳಲ್ಲಿ ಉರುಳು ಸೇವೆ

ಕೊಲ್ಹಾಪುರ ಮಹಾಲಕ್ಷ್ಮಿ, ಬದರೀನಾಥ್ ನಲ್ಲಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಬೆಂಗಳೂರಿನ ಎನ್.ಆರ್.ಕಾಲೋನಿ ರಾಯರಮಠ, ಉಡುಪಿ ಕೃಷ್ಣ ಮಠ, ವಿದ್ಯಾಪೀಠದಲ್ಲಿ ಉರುಳು ಸೇವೆ ಮಾಡಿದ್ದೇನೆ. ನಾನು ಮೊದಲಿಗೆ ದೇವರ ದರ್ಶನ ಮಾಡ್ತೀನಿ. ಆ ನಂತರ ಉರುಳು ಸೇವೆಗೆ ಅವಕಾಶ ಇದೆಯಾ ಅಂತ ನೋಡ್ತೇನೆ. ಆ ಕಾರಣಕ್ಕೆ ನನ್ನ ಹೆಸರಿನ ಜತೆಗೆ ಉರುಳು ಸೇವೆ ಸೇರಿಕೊಂಡಿದೆ. ಮಂತ್ರಾಲಯದ ಸ್ವಾಮಿಗಳೇ ಹಾಗೆ ನನ್ನನ್ನು ಕರೆದಿದ್ದಾರೆ. ಜನರು ಕೂಡ ಅದೇ ಹೆಸರಿನಲ್ಲಿ ಗುರುತಿಸುತ್ತಾರೆ.

ಮಂತ್ರಾಲಯದಲ್ಲಿ ಮಹಿಳೆಯರು ಉರುಳು ಸೇವೆ ಮಾಡುವಂತಿಲ್ಲ

ಮಂತ್ರಾಲಯದಲ್ಲಿ ಮಹಿಳೆಯರು ಉರುಳು ಸೇವೆ ಮಾಡುವಂತಿಲ್ಲ

ಉರುಳು ಸೇವೆ ಕೆಲವು ಕ್ಷೇತ್ರಗಳಲ್ಲಿ ಹೆಂಗಸರಿಗೆ ಅವಕಾಶ ಇದೆ. ತಿರುಪತಿಯಲ್ಲಿ ಮಹಿಳೆಯರು- ಪುರುಷರಿಗೆ ಅವಕಾಶ ಇದೆ. ಆದರೆ ಮಂತ್ರಾಲಯದಲ್ಲಿ ಮಹಿಳೆಯರಿಗೆ ಉರುಳು ಸೇವೆಗೆ ಅವಕಾಶ ಇಲ್ಲ. ಅಲ್ಲಿ ಹೆಜ್ಜೆ ನಮಸ್ಕಾರ, ಪ್ರದಕ್ಷಿಣೆಗೆ ಅವಕಾಶ ಇದೆ. ಕೊಲ್ಹಾಪುರದಲ್ಲಿ ಪ್ರಾಕಾರ ದೊಡ್ಡದಿದೆ. ಧರ್ಮಸ್ಥಳದಲ್ಲಿ, ತಿರುಪತಿಯ ಪದ್ಮಾವತಿಗೆ ಉರುಳು ಸೇವೆ ಮಾಡಬಹುದು. ಉಡುಪಿಯಲ್ಲಿ ಸ್ಥಳಾವಕಾಶ ಇಲ್ಲ. ಈ ಉರುಳು ಸೇವೆ ಮಾಡುವುದರಿಂದ ಆರೋಗ್ಯ ವೃದ್ಧಿ ಆಗುತ್ತದೆ.

ಆಯಾ ಕ್ಷೇತ್ರದಲ್ಲಿ ಒಂದೊಂದು ನಿಯಮ ಇದೆ

ಆಯಾ ಕ್ಷೇತ್ರದಲ್ಲಿ ಒಂದೊಂದು ನಿಯಮ ಇದೆ

ತಿರುಪತಿಯಲ್ಲಿ ಉರುಳು ಸೇವೆ ಟಿಕೆಟ್ ಮಧ್ಯಾಹ್ನ ಎರಡು ಗಂಟೆಗೆ ಕೊಡ್ತಾರೆ. ಆಧಾರ್ ತೋರಿಸಿದರೆ ಮಾತ್ರ ಟಿಕೆಟ್ ಕೊಡ್ತಾರೆ. ರಾತ್ರಿ ಒಂದು ಗಂಟೆಗೆ ಸ್ವಾಮಿ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ, ಬಿಳಿ ಪಂಚೆ ಉಟ್ಟು, ವೈಕುಂಠಂ ನಂಬರ್ ಒನ್ ನಲ್ಲಿ ಕಾರ್ಡ್ ತೋರಿಸಿದರೆ ಉರುಳು ಸೇವೆಗೆ ಒಳ ಬಿಡ್ತಾರೆ. ಮಂತ್ರಾಲಯದಲ್ಲಿ ತುಂಗಭದ್ರಾದಲ್ಲಿ ಸ್ನಾನ ಮಾಡಿ ಉರುಳು ಸೇವೆ ಮಾಡಬಹುದು. ಇನ್ನೊಂದು ಮಾತು. ಉರುಳುಸೇವೆ ಮರು ದಿನ ಬೆಳಗ್ಗೆ ಮಾಡ್ತೀರಿ ಅಂದರೆ ಲಘುವಾಗಿ ಆಹಾರ ಸೇವಿಸಿ ಅಥವಾ ಉಪವಾಸ ಇದ್ದರೆ ಒಳಿತು. ಇನ್ನು ಮೊದಲ ಬಾರಿಗೆ ಉರುಳು ಸೇವೆ ಮಾಡುವಾಗ ಒಂದಿಷ್ಟು ಮೈ-ಕೈ ನೋವು ಬರುತ್ತದೆ. ಏಕೆಂದರೆ ಎಂದೂ ಬಗ್ಗಿರದ ದೇಹ ಮೊದಲ ಸಲ ಹೀಗೆ ಮಾಡುವಾಗ ನೋವು ಸಹಜ. ಆದರೆ ಅದು ಗಂಭೀರ ಪ್ರಮಾಣದಲ್ಲಿ ಆಗದಂತೆ ಎಚ್ಚರ ವಹಿಸಿದರೆ ಆಯಿತು.

ಉರುಳು ಸೇವೆ ಬಗ್ಗೆ ಮಾಹಿತಿ, ಸಲಹೆ-ಸೂಚನೆಗೆ ಸಂಪರ್ಕಿಸಬಹುದು

ಉರುಳು ಸೇವೆ ಬಗ್ಗೆ ಮಾಹಿತಿ, ಸಲಹೆ-ಸೂಚನೆಗೆ ಸಂಪರ್ಕಿಸಬಹುದು

ನಾನು ಸದ್ಯಕ್ಕೆ ತಿರುಪತಿಯಲ್ಲಿ ಉರುಳು ಸೇವೆ ಮಾಡುತ್ತಿದ್ದೀನಿ. ಧರ್ಮಸ್ಥಳದಲ್ಲಿ ಪ್ರತಿ ವಾರ ಸೇವೆ ಮಾಡಬೇಕು ಎಂಬ ಉದ್ದೇಶ ಇದೆ. ಅದೇ ರೀತಿ ಕೊಲ್ಹಾಪುರದ ಲಕ್ಷ್ಮಿಗೆ ಪ್ರತಿ ಶುಕ್ರವಾರ ಉರುಳು ಸೇವೆ ಮಾಡುವ ಉದ್ದೇಶ ಇದೆ. ಆದರೆ ಸಮಯವೂ ಹೊಂದಾಣಿಕೆ ಆಗಬೇಕು. ಇನ್ನು ಉರುಳು ಸೇವೆ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ಮೊಬೈಲ್ ಸಂಖ್ಯೆ 9844763106 ಸಂಪರ್ಕಿಸಬಹುದು.

English summary
Gopalakrishna Achar is his name. 'Urulu seve' prefix with the name. RBI ex employee Gopalakrishna Achar has been doing unique seva to God. Looks like it's become a record. 13 years of his achievement in Urulu Seve is very interesting journey. Tirupati, Mantralaya, Dhramasthala, Kolhapura Mahalakshmi temple, Badri temple Achar performed Ururu Seve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X