ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚತುರ ದೇವೇಗೌಡರು ಲೆಕ್ಕ ತಪ್ಪಿದಾಗೆಲ್ಲ ಕುಮಾರಣ್ಣನ ಭವಿಷ್ಯಕ್ಕೆ ಹೊಡೆತ

By ಅನಿಲ್ ಆಚಾರ್
|
Google Oneindia Kannada News

ರಾಜಕಾರಣದಲ್ಲಿ ಯಾವುದೂ ಅಂತಿಮ ಸೂತ್ರವಲ್ಲ. ಯಾವ ವ್ಯಕ್ತಿಯೂ ಸದಾ ಗೆಲ್ಲುವ ನಿರ್ಧಾರವನ್ನೇ ತೆಗೆದುಕೊಳ್ಳುತ್ತಲೇ ಇರುವುದಕ್ಕೆ ಆಗಲ್ಲ. ಆದರೂ ಕರ್ನಾಟಕ ರಾಜಕಾರಣದಲ್ಲಿ ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಗ್ಗೆ ಚಾಣಾಕ್ಷ ನಡೆಗಳನ್ನು ತೆಗೆದುಕೊಳ್ಳುವವರು ಎಂಬ ಮಾತು ಜಾಹೀರಾಗಿದೆ. ಅದು ಸಂಪೂರ್ಣವಾಗಿ ನಿಜವಾ ಎಂಬುದರ ವಿಶ್ಲೇಷಣೆ ಇಲ್ಲಿದೆ.

ಏಕೆಂದರೆ, ದೇವೇಗೌಡರ ಕೆಲ ನಿರ್ಧಾರಗಳಿಂದ ಕುಮಾರಸ್ವಾಮಿ ಅವರ ಹಾಗೂ ಜೆಡಿಎಸ್ ರಾಜಕೀಯ ಭವಿಷ್ಯಕ್ಕೆ ಸ್ಪೀಡ್ ಬ್ರೇಕರ್ ಆಯಿತು ಎಂಬುದು ಈಗ ರಹಸ್ಯವೇನಲ್ಲ. ಈಗಲೂ ಅಷ್ಟೇ, ಕುಮಾರಸ್ವಾಮಿ ಹಾಗೂ ದೇವೇಗೌಡರ ಮಧ್ಯೆ ರಾಜಕಾರಣದ ವಿಚಾರಕ್ಕೆ ಬಂದರೆ ಜನರೇಷನ್ ಗ್ಯಾಪ್ ಇದೆ. ಅದರ ಫಲಿತವೇ ಈಗಿನ ಪರಿಸ್ಥಿತಿ.

ಮಧ್ಯಂತರ ಚುನಾವಣೆ ಮಾತೇ ಇಲ್ಲ: ಯೂ ಟರ್ನ್ ಹೊಡೆದ ದೇವೇಗೌಡಮಧ್ಯಂತರ ಚುನಾವಣೆ ಮಾತೇ ಇಲ್ಲ: ಯೂ ಟರ್ನ್ ಹೊಡೆದ ದೇವೇಗೌಡ

ದೇವೇಗೌಡರು ಹೇಳಿದಂತೆ ಮಧ್ಯಂತರ ಚುನಾವಣೆ ಬಹಳ ಹತ್ತಿರದಲ್ಲಿ ಬರಬಹುದಾ? ಅದಕ್ಕೆ ಕಾಂಗ್ರೆಸ್ ಪಕ್ಷವಾದರೂ ಒಂದು ವೇಳೆ ಸಿದ್ಧವಾಗಬಹುದೇನೋ ಆದರೆ ಕುಮಾರಸ್ವಾಮಿಯೂ ಸೇರಿದ ಹಾಗೆ ಜೆಡಿಎಸ್ ನ ಶಾಸಕರು ಒಪ್ಪಿಬಿಡ್ತಾರಾ? ಒಂದು ವೇಳೆ ಕಾಂಗ್ರೆಸ್ ಜತೆಗೆ ಮೈತ್ರಿ ಮುರಿದುಕೊಂಡು ಜೆಡಿಎಸ್ ತಾನಾಗಿಯೇ ಆಚೆ ಬಂದುಬಿಟ್ಟರೆ ಏನಾಗಬಹುದು?

 ಹತ್ತು ವರ್ಷ ಅಧಿಕಾರದಿಂದ ದೂರು

ಹತ್ತು ವರ್ಷ ಅಧಿಕಾರದಿಂದ ದೂರು

ದೇವೇಗೌಡರು ಜೆಡಿಎಸ್- ಬಿಜೆಪಿ ಟ್ವೆಂಟಿ-ಟ್ವೆಂಟಿ ಸರಕಾರಕ್ಕೆ ಸಮ್ಮತಿ ಸೂಚಿಸಿ, ಬಿಜೆಪಿಗೆ ಅಧಿಕಾರ ಬಿಟ್ಟುಕೊಟ್ಟಿದ್ದರೆ ಹತ್ತು ವರ್ಷ ಅಧಿಕಾರ ಕೇಂದ್ರದಿಂದ ದೂರ ಇರುವ ಸ್ಥಿತಿ ಬರುತ್ತಿತ್ತಾ? ಅಪ್ಪ-ಮಕ್ಕಳು 'ವಚನಭ್ರಷ್ಟರು' ಎಂದು ಇಡೀ ರಾಜ್ಯ ತಿರುಗಿ, ಯಡಿಯೂರಪ್ಪ ಪ್ರಚಾರ ಮಾಡಿಬಂದರು. ಅಧಿಕಾರ ಹಿಡಿದರು. ಆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ರಾಷ್ಟ್ರ ಮಟ್ಟದಲ್ಲಿ ಜಾತ್ಯತೀತ ಇಮೇಜನ್ನು ಕಾಯ್ದುಕೊಂಡು ಹೋಗುವ ದೇವೇಗೌಡರ ಹಂಬಲದಲ್ಲಿ, ರಾಷ್ಟ್ರ ರಾಜಕಾರಣದ ಲೆಕ್ಕಾಚಾರದಲ್ಲಿ ಹತ್ತು ವರ್ಷದ ಕಾಲ ಜೆಡಿಎಸ್ ಅಧಿಕಾರ ಕೇಂದ್ರದಿಂದ ದೂರವೇ ಉಳಿಯಿತು. ಬಿಜೆಪಿ ಜತೆಗೆ ಅಧಿಕಾರ ನಡೆಸುವಾಗ ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ ಭವಿಷ್ಯವೇ ಬದಲಾಗಿರುತ್ತಿತ್ತು. ದೇವೇಗೌಡರ ಲೆಕ್ಕಾಚಾರ ಕೈ ಕೊಟ್ಟಿದ್ದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಾ?

 ಮೈತ್ರಿ ಸರಕಾರ ಸರಿಯಾದ ಹಾದಿಯಲ್ಲಿ ಇಲ್ಲ

ಮೈತ್ರಿ ಸರಕಾರ ಸರಿಯಾದ ಹಾದಿಯಲ್ಲಿ ಇಲ್ಲ

ಸರಿ, ಹತ್ತು ವರ್ಷದ ನಂತರ ಮತ್ತೊಂದು ಅವಕಾಶ ಸಿಕ್ಕಿತು. ಬಿಜೆಪಿಗೆ ನೂರಾ ನಾಲ್ಕು ಸ್ಥಾನ ಬಂದಿತ್ತು. ಆಡಳಿತಾರೂಢ ಕಾಂಗ್ರೆಸ್ ಎಂಬತ್ತು ಸ್ಥಾನ ಮಾತ್ರ ಜಯಿಸಿತ್ತು. ಆಗಷ್ಟೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ವಿರುದ್ಧ ಜನರು ಸಿಟ್ಟನ್ನು ಹೊರಹಾಕಿ, ಆ ಪಕ್ಷವನ್ನು ಸೋಲಿಸಿದ್ದರು. ಮೂವತ್ತೇಳು ಸ್ಥಾನ ಗೆದ್ದಿದ್ದ ಜೆಡಿಎಸ್ ಗೆ ಒಂದೇ ಸಲಕ್ಕೆ ಈ ಹಿಂದಿನ 'ವಚನಭ್ರಷ್ಟ' ಆರೋಪವನ್ನು ಹಾಗೂ ಅಧಿಕಾರ ಇಲ್ಲದೆ ಕಳೆದಿದ್ದ ಸಮಯದಿಂದಲೂ ಹೊರಬರುವುದಕ್ಕೆ ಅವಕಾಶ ಇತ್ತು. ಆಗ ಬುದ್ಧಿವಂತಿಕೆ ಬಳಸಿದ ಕಾಂಗ್ರೆಸ್, ನಿಮ್ಮ ಮಗನೇ ಸಿಎಂ ಆಗಲಿ ಅಂದಿದ್ದಕ್ಕೆ ದೇವೇಗೌಡರು ಪುಸಕ್ಕನೆ ಒಪ್ಪಿಬಿಟ್ಟರು. ಬಿಜೆಪಿ ಜತೆಗೆ ಹೋಗಿದ್ದರೆ ಉಪಮುಖ್ಯಮಂತ್ರಿ ಸ್ಥಾನ ಜೆಡಿಎಸ್ ಗೆ ಸಿಗಬಹುದಿತ್ತು. ಆದರೆ ಮುಖ್ಯಮಂತ್ರಿ ಸ್ಥಾನವೇ ಬಿಟ್ಟುಕೊಟ್ಟರಲ್ಲಾ ಅಂತ ದೇವೇಗೌಡರು ಒಪ್ಪಿಬಿಟ್ಟರು. ಪ್ರಾಯಶಃ ಧರಂ ಸಿಂಗ್ ಸರಕಾರ ಬೀಳಿಸಿದ್ದ ಕುಮಾರಸ್ವಾಮಿ ಅವರಿಂದ ಒಂದು ಪ್ರಾಯಶ್ಚಿತ್ತ ಹೀಗೂ ಆಗಲಿ ಎಂಬ ಲೆಕ್ಕಾಚಾರವೂ ಇದ್ದಿರಬಹುದು. ಆದರೆ ಈ ತನಕ ಮೈತ್ರಿ ಸರಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ. ದೇವೇಗೌಡರ ಲೆಕ್ಕಾಚಾರ ಏನಾಯಿತು?

 ಲೋಕಸಭೆ ಚುನಾವಣೆಗೆ ಏಕಾಂಗಿ ಸ್ಪರ್ಧೆ ಮಾಡಬಹುದಿತ್ತು

ಲೋಕಸಭೆ ಚುನಾವಣೆಗೆ ಏಕಾಂಗಿ ಸ್ಪರ್ಧೆ ಮಾಡಬಹುದಿತ್ತು

ಮೈತ್ರಿಯನ್ನು ಸರಕಾರ ಮಾತ್ರ ಸೀಮಿತ ಮಾಡಿ, ಲೋಕಸಭೆ ಚುನಾವಣೆಗೆ ಪ್ರತ್ಯೇಕವಾಗಿ ಜೆಡಿಎಸ್ ಕಣದಲ್ಲಿ ಇದ್ದಿದ್ದರೆ ಈಗ ಬಂತಲ್ಲ, ಆ ರೀತಿಯ ಫಲಿತಾಂಶ ಕಾಣಬೇಕಿರಲಿಲ್ಲ. ಕನಿಷ್ಠ ಗೌರವಯುತವಾದ ಸೋಲನ್ನಾದರೂ ನೋಡಬಹುದಿತ್ತು. ಮೈತ್ರಿಯಾಗಿ ಚುನಾವಣೆ ಕಣಕ್ಕಿಳಿದ ಕಾಂಗ್ರೆಸ್ ಸ್ಥಿತಿ ಹೀನಾತಿಹೀನ ಆಯಿತು. ಸ್ವತಃ ದೇವೇಗೌಡರು ಸೋತರು, ಜೆಡಿಎಸ್ ಪಾಲಿಗೆ ಭದ್ರಕೋಟೆ ಮಂಡ್ಯದಲ್ಲಿ ಗೌಡರ ಮೊಮ್ಮಗ ನಿಖಿಲ್ ಸೋಲಬೇಕಾಯಿತು. ಒಟ್ಟಾರೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದ ಜೆಡಿಎಸ್ ಗೆ ಭಾರೀ ಮುಖ ಭಂಗ ಆಯಿತು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಲ್ಲಿ ಡಮ್ಮಿ ಮಾಡಿ, ಕುಮಾರಸ್ವಾಮಿ ಅವರನ್ನು ಬಲಿಷ್ಠರನ್ನಾಗಿ ಮಾಡಲು ಹಾಕಿದ ದೇವೇಗೌಡರ ಪಟ್ಟುಗಳಿಗೆಲ್ಲ ಒಳೇಟು ಬಿದ್ದವು. ಇದೀಗ ರೋಷನ್ ಬೇಗ್ ಕಾಂಗ್ರೆಸ್ ನಿಂದ ಅಮಾನತು ಆಗಿದ್ದು ಗೌಡರಿಗೆ ಸಿಕ್ಕ ತಿರುಗೇಟು ಅಂತಲೇ ವಿಶ್ಲೇಷಣೆ ಮಾಡಲಾಗುತ್ತಿದೆ. ಅಂದರೆ ರೋಷನ್ ಬೇಗ್ ಮೂಲಕ ಚೆಕ್ ಇಡಲು ಹೋದ ದೇವೇಗೌಡರಿಗೆ ಚೆಕ್ ಮೇಟ್ ಇಟ್ಟಂತಾಯಿತು.

 ಜೆಡಿಎಸ್ ನಲ್ಲಿ ಶುರು ಆಗಬಹುದಾ ಪಕ್ಷಾಂತರ ಪರ್ವ?

ಜೆಡಿಎಸ್ ನಲ್ಲಿ ಶುರು ಆಗಬಹುದಾ ಪಕ್ಷಾಂತರ ಪರ್ವ?

ಇದೀಗ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ದೇವೇಗೌಡರು ಹೇಳುವ ಮೂಲಕ ಮತ್ತೊಮ್ಮೆ ಬಿಜೆಪಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಜೆಡಿಎಸ್ ನ ಗೆಲ್ಲುವ ಕುದುರೆಗಳನ್ನು ಸೆಳೆಯುವುದಕ್ಕೆ ಬಿಜೆಪಿಗೆ ಸಕತ್ ಆದ ಅವಕಾಶ ಸಿಕ್ಕಂತಾಯಿತು. ಗೆದ್ದ ಒಂದೆರಡು ವರ್ಷದೊಳಗೆ, ಅದೂ ರಾಜ್ಯದಲ್ಲಿ ಬಿಜೆಪಿಗೆ ಈ ಪರಿಯ ಮನ್ನಣೆ ಸಿಕ್ಕಿರುವ ಚುನಾವಣೆಗೆ ಹೋಗುವುದು ಅಂದರೆ ಎಂಥವರೂ ಒಂದಕ್ಕೆ ನಾಲ್ಕು ಸಲ ಯೋಚನೆ ಮಾಡುತ್ತಾರೆ. ದೇವೇಗೌಡರ ಮನಸ್ಸಿನಲ್ಲಿ ಕಾಂಗ್ರೆಸ್ ನವರನ್ನು ಬ್ಲ್ಯಾಕ್ ಮೇಲ್ ಮಾಡಬಹುದು ಎಂಬ ಲೆಕ್ಕಾಚಾರ ಇರಬಹುದು. ಆದರೆ ಇದು ಉಲ್ಟಾ ಹೊಡೆಯುವುದು ಜೆಡಿಎಸ್ ಗೇ. ಸಿದ್ದರಾಮಯ್ಯ ಅವರ ಮೇಲೆ ಹೈಕಮಾಂಡ್ ಒತ್ತಡ ಹಾಕಿಸುವ ತಂತ್ರಕ್ಕೆ ಮುಂದಾಗಿರುವ ದೇವೇಗೌಡರಿಗೆ ದೂರಗಾಮಿ ಪರಿಣಾಮ ಅಂದುಕೊಂಡಂತೆಯೇ ಆಗುತ್ತದೆ ಎಂಬ ಅತಿ ವಿಶ್ವಾಸ. ಗ್ರಾಮ ವಾಸ್ತವ್ಯ ಮಾಡಿ, ಇಮೇಜ್ ಹೆಚ್ಚಿಸಿಕೊಳ್ಳಲು ಕುಮಾರಸ್ವಾಮಿ ತೆರಳಿದ್ದರೆ, ವಿಧಾನಸೌಧದ ಸಿಎಂ ಕುರ್ಚಿಗೆ ಮುಳ್ಳು ಇಟ್ಟುಬಿಟ್ಟಿದ್ದಾರೆ ದೇವೇಗೌಡರು. ಹಾಗಿದ್ದರೆ ಜೆಡಿಎಸ್ ನಲ್ಲಿ ಶುರುವಾಗಲಿದೆಯೇ ಪಕ್ಷಾಂತರ ಪರ್ವ?

English summary
How Intelligent politician HD Deve Gowda's miscalculation affect on HD Kumarawamy political career? Here is an analysis explains different situation including current statement of mid term election in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X