ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆ

|
Google Oneindia Kannada News

'ವಿಕ್ರಂ ಲ್ಯಾಂಡರ್ ಉದ್ದೇಶಿಸಿದ್ದಂತೆಯೇ 2.1 ಕಿಮೀ ವರೆಗೂ ಸಹಜವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಭೂಮಿಯ ಕೇಂದ್ರದೊಂದಿಗಿನ ಲ್ಯಾಂಡರ್‌ ಸಂವಹನ ಕಡಿತಗೊಂಡಿದೆ. ಡೇಟಾವನ್ನು ವಿಶ್ಲೇಷಿಸಲಾಗುತ್ತಿದೆ' ಎಂದು ಸೆ. 7ರ ರಾತ್ರಿ 2.30ರ ವೇಳೆಗೆ ಘೋಷಣೆ ಮಾಡುವಾಗ ಇಸ್ರೋ ಅಧ್ಯಕ್ಷ ಕೆ. ಶಿವನ್ ಅಕ್ಷರಶಃ ಗದ್ಗದಿತರಾಗಿದ್ದರು. ನಿಜ. ಅಂದು ಆ ಕಣ್ಣುಗಳಲ್ಲಿ ಸುರಿಯಬೇಕಾಗಿದ್ದು, ಆನಂದಬಾಷ್ಪವೇ ಹೊರತು ಕಣ್ಣೀರಲ್ಲ. ಇಡೀ ದೇಶವೇ ಆ ನೋವಿನ ಪಾಲುದಾರನಾಗಿತ್ತು. ಇಸ್ರೋದ ಜತೆಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ಹೆಚ್ಚಿಸುವ ಮಾತುಗಳನ್ನಾಡಿತು.

ಬಳಿಕ ಕೆ. ಶಿವನ್ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡು ಸಂತೈಸುವ ವಿಡಿಯೋ ವೈರಲ್ ಆಗಿತ್ತು. ಚಂದ್ರಯಾನ-2 ಯೋಜನೆಯ ಯಶಸ್ಸಿಗಾಗಿ ಹಗಲು ರಾತ್ರಿ ದುಡಿದ ವಿಜ್ಞಾನಿಗಳ ಪ್ರತಿನಿಧಿಯಾಗಿದ್ದ ಶಿವನ್ ಅವರು ಬಿಕ್ಕಿಬಿಕ್ಕಿ ಅಳುತ್ತಿದ್ದ ರೀತಿ ಆ ಯೋಜನೆಯ ಹಿಂದಿದ್ದ ಪರಿಶ್ರಮ, ಹೋರಾಟ ಮತ್ತು ಹಿನ್ನಡೆಯಿಂದ ಉಂಟಾದ ಕಹಿಯ ನೋವನ್ನು ಪ್ರತಿಫಲಿಸುತ್ತಿತ್ತು.

ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?

ಚಂದ್ರಯಾನ ಮಾತ್ರವಲ್ಲದೆ, ಭಾರತದ ಅನೇಕ ಮಹತ್ವದ ವೈಜ್ಞಾನಿಕ ಸಾಧನೆಗಳು ಹಾಗೂ ಭವಿಷ್ಯದಲ್ಲಿ ನಡೆಯಲಿರುವ ವಿಶಿಷ್ಟ ಯೋಜನೆಗಳ ಶಕ್ತಿಯಾಗಿ ನಿಂತಿರುವ ಕೆ. ಶಿವನ್ ಅವರ ಬದುಕು ಕೂಡ ಅಷ್ಟೇ ಹೋರಾಟಮಯ. ಇಸ್ರೋ ಅಧ್ಯಕ್ಷರಾಗಿರುವ ಅವರ ಹೆಮ್ಮೆಯ ಕ್ಷಣಗಳ ಬದುಕಿನ ಹಿಂದಿನ ದಾರಿ ತೆರೆದರೆ, ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬಲ್ಲ ಛಾತಿಯುಳ್ಳ ವ್ಯಕ್ತಿ ಯಾವ ಮಟ್ಟಕ್ಕೆ ಬೆಳೆಯಬಲ್ಲರು ಎಂಬ ಸ್ಪೂರ್ತಿದಾಯಕ ಯಶೋಗಾಥೆ ಎದುರಾಗುತ್ತದೆ.

ಕೃಷಿ ಕುಟುಂಬದ ಬದುಕು

ಕೃಷಿ ಕುಟುಂಬದ ಬದುಕು

ಕೈಲಾಸವಡಿವೂ ಶಿವನ್ (62), ಇಡೀ ಜಗತ್ತು ದಿಟ್ಟಿಸಿ ಬೆರಗುಗಣ್ಣಿನಿಂದ ನೋಡುತ್ತಿರುವ ಇಸ್ರೋ ಎಂಬ ಸಾಧಕ ಸಂಸ್ಥೆಯ ಮುಖ್ಯಸ್ಥರಾಗಿದ್ದರೂ ಆ ಗರ್ವವಾಗಲೀ, ಅಹಂಕಾರವಾಗಲೀ ಅವರಲ್ಲಿ ಕಾಣಿಸುವುದಿಲ್ಲ. ಅವರಲ್ಲಿನ ವಿನಯವಂತಿಕೆ, ಸರಳತೆ ರೂಪುಗೊಂಡಿದ್ದು, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮೇಳ ಸರಕ್ಕಳ್ವಿಲೈ ಎಂಬ ಗ್ರಾಮದಲ್ಲಿನ ಕೃಷಿ ಬದುಕಿನಲ್ಲಿ.

ಶಿವನ್ ಅವರ ತಂದೆ ಮಾವು ಕೃಷಿಕ. ಶಾಲೆಯಲ್ಲಿ ತರಗತಿ ಮುಗಿಯುತ್ತಿದ್ದಂತೆಯೇ ಶಿವನ್ ಅವರು ತಂದೆಯ ಮಾವಿನ ತೋಪಿಗೆ ತೆರಳಿ ಕೆಲಸದಲ್ಲಿ ತೊಡಗಬೇಕಿತ್ತು. ಅದರಲ್ಲಿಯೂ ಮಾವಿನ ಹಣ್ಣಿನ ಕಾಲ ಬಂದರಂತೂ ಬಿಡುವಿಲ್ಲದ ಕೆಲಸ. ರಜೆ ಇದ್ದಾಗ ಶಿವನ್ ಹೆಚ್ಚಿನ ಸಮಯ ಕಳೆಯುತ್ತಿದ್ದದ್ದೇ ಮಾವಿನ ತೋಟದಲ್ಲಿ. ರಜೆ ಇದೆ ಎಂದಾದರೆ ಅಂದು ತೋಟದ ಕೆಲಸಕ್ಕೆ ಬೇರೆ ಯಾವ ಕಾರ್ಮಿಕರೂ ಬೇಡ ಎಂದು ಶಿವನ್ ತಂದೆ ನಿರ್ಧರಿಸುತ್ತಿದ್ದರು.

ಕಾಲೇಜು ಮುಗಿಸಿ ತೋಟದ ಕೆಲಸ

ಕಾಲೇಜು ಮುಗಿಸಿ ತೋಟದ ಕೆಲಸ

ತಮ್ಮ ಹಳ್ಳಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿವನ್ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು. ನೆರೆಯ ವಾಲಂಗುಮಾರವಿಳೈ ಗ್ರಾಮದಲ್ಲಿ ತಮಿಳು ಮಾಧ್ಯಮದಲ್ಲಿಯೇ ಮಾಧ್ಯಮಿಕ ಶಿಕ್ಷಣ ಪೂರೈಸಿದರು. ಬಳಿಕ ನಾಗರಿಕೋಯಿಲ್‌ನ ಎಸ್‌ಟಿ ಹಿಂದೂ ಕಾಲೇಜಿನಲ್ಲಿ ಪದವಿ ಪಡೆದರು.

'ಸಾಮಾನ್ಯವಾಗಿ ಮಕ್ಕಳ ಕಾಲೇಜು ವಿದ್ಯಾಭ್ಯಾಸ ಎಂದಾಗ ಪೋಷಕರು ಬೇರೆ ಬೇರೆ ಲೆಕ್ಕಾಚಾರಗಳನ್ನು ಹಾಕುತ್ತಾರೆ. ಆದರೆ ನನ್ನ ತಂದೆ ಅವರ ಉದ್ದೇಶ ಇದ್ದಿದ್ದು ನನ್ನ ಕಾಲೇಜು ಮನೆಗೆ ಸಮೀಪ ಇರಬೇಕು ಎಂದು. ಏಕೆಂದರೆ ಕಾಲೇಜು ಮುಗಿದ ಬಳಿಕ ನಾನು ತೋಟದಲ್ಲಿ ಅವರಿಗೆ ಸಹಾಯ ಮಾಡಬೇಕಿತ್ತು. ದುಡಿಮೆಗಾಗಿ ಅಷ್ಟು ಕಷ್ಟಪಡಬೇಕಾದ ಸ್ಥಿತಿ ಇತ್ತು' ಎಂದು ಶಿವನ್ ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದರು.

ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ

ಚಪ್ಪಲಿ ಧರಿಸಿಯೇ ಇರಲಿಲ್ಲ

ಚಪ್ಪಲಿ ಧರಿಸಿಯೇ ಇರಲಿಲ್ಲ

ಆರ್ಥಿಕವಾಗಿ ಸಂಕಷ್ಟವಿದ್ದರೂ ಮನೆಯಲ್ಲಿ ಮೂರು ಹೊತ್ತಿನ ಊಟಕ್ಕೆ ಕೊರತೆಯಿರಲಿಲ್ಲ. ಹೊಟ್ಟೆ ತುಂಬಾ ಊಟ ಸಿಗುತ್ತಿತ್ತು. ಇದಕ್ಕಾಗಿ ಪೋಷಕರಿಗೆ ಋಣಿಯಾಗಿದ್ದೇನೆ ಎಂದು ಶಿವನ್ ಹೇಳಿಕೊಂಡಿದ್ದರು.

ಕಾಲೇಜು ಪದವಿ ಪೂರೈಸಿ ಮದ್ರಾಸ್ ತಾಂತ್ರಿಕ ಸಂಸ್ಥೆಗೆ ಸೇರಿಕೊಳ್ಳುವವರೆಗೂ ಶಿವನ್ ಅವರು ಚಪ್ಪಲಿಯನ್ನೇ ಧರಿಸುತ್ತಿರಲಿಲ್ಲ. ಬರಿಗಾಲಿನಲ್ಲಿಯೇ ಕಾಲೇಜಿಗೆ ಹೋಗಿ ಬರುತ್ತಿದ್ದರು. ಮಾತ್ರವಲ್ಲ, ಪ್ಯಾಂಟುಗಳನ್ನು ಮೊದಲು ತೊಟ್ಟಿದ್ದೇ ಅದೇ ಸಂದರ್ಭದಲ್ಲಿ. ಅದುವರೆಗೂ ಸಾಮಾನ್ಯ ಅಂಗಿ-ಪಂಚೆಯೇ ಅವರ ದಿರಿಸಾಗಿತ್ತು.

ನನಸಾಗದ ಎಂಜಿನಿಯರಿಂಗ್ ಕನಸು

ನನಸಾಗದ ಎಂಜಿನಿಯರಿಂಗ್ ಕನಸು

1980ರಲ್ಲಿ ಅವರು ಮದ್ರಾಸ್ ತಂತ್ರಜ್ಞಾನ ಸಂಸ್ಥೆಯಿಂದ ಏರೋನಾಟಿಕ್ ಎಂಜಿನಿಯರಿಂಗ್ ಪದವಿ ಮುಗಿಸಿದರು. ಇದಕ್ಕೂ ಮುನ್ನವೇ ಅವರು ಎಂಜಿನಿಯರಿಂಗ್ ಪದವಿ ಪಡೆಯಲು ಬಯಸಿದ್ದರು. ಆದರೆ, ಅದು ತೀರಾ ದುಬಾರಿಯಾಗಿದೆ. ನೀನು ಬಿಎಸ್‌ಸಿ ಓದು ಎಂದು ತಂದೆ ಹೇಳಿದರು. ಹಠ ಹಿಡಿದ ಶಿವನ್, ತಂದೆಯ ಮನಸ್ಸನ್ನು ಬದಲಿಸಲು ಒಂದು ವಾರ ಊಟ ಬಿಟ್ಟರು. ಕೊನೆಗೆ ತಮ್ಮ ಮನಸ್ಸನ್ನೇ ಬದಲಿಸಿದರು.

ಬಿಎಸ್‌ಸಿಯಲ್ಲಿ ಗಣಿತ ವಿಷಯದಲ್ಲಿ ಪದವಿ ಪಡೆದ ನಂತರ ಶಿವನ್ ಅವರ ತಂದೆಯ ಮನಸ್ಸೂ ಬದಲಾಗಿತ್ತು. 'ನೀನು ಬಯಸಿದ್ದನ್ನು ಪಡೆಯಲು ಒಮ್ಮೆ ನಾನು ನಿನ್ನನ್ನು ತಡೆದಿದ್ದೆ. ಆದರೆ ಈ ಬಾರಿ ನಿನ್ನನ್ನು ತಡೆಯುವುದಿಲ್ಲ. ನಿನ್ನ ಎಂಜಿನಿಯರಿಂಗ್ ಕೋರ್ಸ್‌ಗಾಗಿ ನನ್ನ ಭೂಮಿ ಮಾರುತ್ತಿದ್ದೇನೆ' ಎಂದರು.

ಪ್ರಧಾನಿ ಮೋದಿಯನ್ನು ತಬ್ಬಿ ಕಣ್ಣೀರಿಟ್ಟ ಇಸ್ರೋ ಮುಖ್ಯಸ್ಥ ಕೆ.ಶಿವನ್ಪ್ರಧಾನಿ ಮೋದಿಯನ್ನು ತಬ್ಬಿ ಕಣ್ಣೀರಿಟ್ಟ ಇಸ್ರೋ ಮುಖ್ಯಸ್ಥ ಕೆ.ಶಿವನ್

ಬಯಸಿದ್ದೆಂದೂ ಸಿಗಲಿಲ್ಲ, ಆದರೆ ಸಿಕ್ಕಿದ್ದನ್ನು ಬಿಡಲಿಲ್ಲ

ಬಯಸಿದ್ದೆಂದೂ ಸಿಗಲಿಲ್ಲ, ಆದರೆ ಸಿಕ್ಕಿದ್ದನ್ನು ಬಿಡಲಿಲ್ಲ

ಬಿಟೆಕ್ ಮುಗಿಸಿದ ಬಳಿಕವೂ ಶಿವನ್ ಅವರಿಗೆ ಬದುಕು ಸುಲಭವಾಗಿ ಕೈಹಿಡಿಯಲಿಲ್ಲ. ಏರೋನಾಟಿಕ್ ಎಂಜಿನಿಯರಿಂಗ್‌ನಲ್ಲಿ ಇದ್ದದ್ದೇ ಸೀಮಿತವಾದ ಉದ್ಯೋಗಗಳು. ಹೀಗಾಗಿ ಕೆಲಸಕ್ಕಾಗಿ ಹೆಣಗಾಡಬೇಕಾಯಿತು. ಆಗ ಕೆಲಸ ಎಂದರೆ ಸಿಗುತ್ತಿದ್ದದ್ದು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತು ನ್ಯಾಷನಲ್ ಏರೋನಾಟಿಕ್ಸ್ ಲಿಮಿಟೆಡ್‌ (ಎನ್‌ಎಎಲ್‌) ಮಾತ್ರ. ಕೆಲಸದ ಆಸೆ ಬಿಟ್ಟ ಶಿವನ್, ಐಐಎಸ್‌ಸಿಯಲ್ಲಿ ಶಿಕ್ಷಣ ಪಡೆಯಲು ಮುಂದಾದರು.

ಇಡೀ ತಮ್ಮ ಬದುಕಿನಲ್ಲಿ ತಾವು ಬಯಸಿದ್ದು ಎಂದಿಗೂ ದಕ್ಕಲಿಲ್ಲ. ಆದರೆ ದಕ್ಕಿದ ಕೆಲಸದಲ್ಲಿಯೇ ತಮ್ಮನ್ನು ಪರಿಣತರನ್ನಾಗಿ ಬೆಳೆಸಿಕೊಂಡಿದ್ದಾಗಿ ಶಿವನ್ ಹೇಳಿದ್ದಾರೆ.

'ಉಪಗ್ರಹ ಕೇಂದ್ರದಲ್ಲಿ ಕೆಲಸ ನಿರ್ವಹಿಸಲು ಬಯಸಿದ್ದೆ. ಆದರೆ ಅವಕಾಶ ಸಿಕ್ಕಿದ್ದು ವಿಕ್ರಂ ಸಾರಾಭಾಯ್ ಕೇಂದ್ರದಲ್ಲಿ. ಅಲ್ಲಿ ಏರೋಡೈನಾಮಿಕ್ಸ್ ತಂಡವನ್ನು ಸೇರುವ ಆಸೆಯಿತ್ತು. ಆದರೆ ಪಿಎಸ್‌ಎಲ್‌ವಿ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕಾಯಿತು. ಎಲ್ಲ ಕಡೆಯೂ ನಾನು ಬಯಸಿದ್ದು ಸಿಗಲೇ ಇಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.

ಇಸ್ರೋದಲ್ಲಿ ಶಿವನ್ ಸಾಧನೆ

ಇಸ್ರೋದಲ್ಲಿ ಶಿವನ್ ಸಾಧನೆ

ಶಿವನ್ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. 1982ರಲ್ಲಿ ಇಸ್ರೋ ಸೇರಿಕೊಂಡ ಅವರು, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಯೋಜನೆಯಲ್ಲಿ ಕೆಲಸ ಮಾಡಿದರು. ಒಂದೇ ಪಿಎಸ್‌ಎಲ್‌ವಿಯಲ್ಲಿ 104 ಸ್ಯಾಟಲೈಟ್ ಉಡಾವಣೆ ಮಾಡಿದ ಯೋಜನೆಯ ಮುಖ್ಯಸ್ಥರಾಗಿದ್ದರು.

2014ರಲ್ಲಿ ಇಸ್ರೋದ ಲಿಕ್ವಿಡ್ ಪ್ರೊಪುಲ್ಷನ್ ಸಿಸ್ಟಮ್ ಸೆಂಟರ್‌ನ ನಿರ್ದೇಶಕರಾಗಿ ಆಯ್ಕೆಯಾದ ಶಿವನ್, 2015ರಲ್ಲಿ ವಿಎಸ್‌ಎಸ್‌ಸಿಯ ನಿರ್ದೇಶಕರಾಗಿ ನೇಮಕವಾದರು. 2018ರ ಜನವರಿಯಿಂದ ಇಸ್ರೋ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

English summary
ISRO chief K Sivan made India proud with Chandrayaan 2 and other many missions. Here is a brief profile and inspiring life journey of him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X