ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವ ಭಾರತದಲ್ಲಿ ಯಾಕಿಷ್ಟು ಏಕತೆ ಕೊರತೆ?

|
Google Oneindia Kannada News

ನವದೆಹಲಿ, ಜೂ.30: ಭಾರತವು ವಿವಿಧತೆಯಲ್ಲಿ ಏಕತೆ ಇರುವ ದೇಶ. ಹೆಚ್ಚಿನ ಭಾರತೀಯರು, ಧರ್ಮಗಳನ್ನು ಮೀರಿ, ಧಾರ್ಮಿಕ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ. ಧಾರ್ಮಿಕ ಸಹಿಷ್ಣುತೆಯನ್ನು ಗೌರವಿಸುತ್ತಾರೆ. ಈ ಎಲ್ಲಾ ಧರ್ಮಗಳ ಮೇಲಿನ ಗೌರವವು ಭಾರತವು ಒಂದು ವೈವಿಧ್ಯಮಯ ರಾಷ್ಟ್ರವಾಗಿರುವುದಕ್ಕೆ ಕಾರಣ ಎಂದು ಹೇಳಬಹುದು.

ಆದರೆ ಈ ಸಂದರ್ಭದಲ್ಲೇ ಈ ಧಾರ್ಮಿಕ ಏಕತೆಗೆ ವಿರೋಧಾಭಾಸವಾಗಿ, ಧಾರ್ಮಿಕ ಗುಂಪುಗಳಲ್ಲಿನ ಬಹುಸಂಖ್ಯಾತರು ಪ್ರತ್ಯೇಕತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ ಎಂದುದು ಕೂಡಾ ಗಮನಾರ್ಹ ವಿಚಾರ. ಹೆಚ್ಚಿನ ಭಾರತೀಯರು ''ಪ್ರತ್ಯೇಕವಾಗಿ ಬದುಕಲು ಬಯಸುತ್ತಾರೆ'' ಎಂಬುದನ್ನು ಧಾರ್ಮಿಕ ವರ್ತನೆಗಳು, ನಡವಳಿಕೆಗಳು ಹಾಗೂ ನಂಬಿಕೆಗಳು ಕುರಿತು ವಾಷಿಂಗ್ಟನ್ ಡಿಸಿ ಮೂಲದ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆ: ಹೈಕೋರ್ಟ್ ಮಹತ್ವದ ಸೂಚನೆಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆ: ಹೈಕೋರ್ಟ್ ಮಹತ್ವದ ಸೂಚನೆ

ಭಾರತದಲ್ಲಿ ''ಧಾರ್ಮಿಕ ವಿಚಾರದಲ್ಲಿ ಪ್ರತ್ಯೇಕವಾಗಿ ಬದುಕಲು ಬಯಸುವ'' ಗುಂಪು ಇದೆ ಎಂಬುದು ಕೆಲವರಿಗೆ ತೀರಾ ಸಾಮಾನ್ಯವಾಗಿ ಕಂಡರೂ ಇದು ಬಹಳ ಗಂಭೀರವಾದ ವಿಚಾರವಾಗಿದೆ. ಹಲವಾರು ಶತಮಾನಗಳಿಂದ ಧಾರ್ಮಿಕವಾಗಿ ಸೌರ್ಹಾದತೆಯ ತವರೂರಾಗಿರುವ ಈ ಭಾರತದಲ್ಲಿ, ರಾಜಕೀಯ ಶಕ್ತಿಗಳ ಹುನ್ನಾರ ಧಾರ್ಮಿಕ ಅಸಹಿಷ್ಣುತೆಯನ್ನು ಬಲಿಷ್ಠಗೊಳಿಸುತ್ತಿರುವಾಗ, ಯುವ ಪೀಳಿಗೆಗಳ ನೈಜ್ಯ ಸಮಸ್ಯೆಗಳು ಯಾರ ಗಮನಕ್ಕೂ ಬಾರದೆ ಮೂಲೆಗುಂಪಾಗುತ್ತಿರುವುದು ಶೋಚನೀಯ. ಈ ಅಡಿಪಾಯದಲ್ಲಿ ಮಾಡಲಾಗಿರುವ ಈ ಸಮೀಕ್ಷೆಯು ಭಾರತೀಯರು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಯನ್ನು ಗೌರವಿಸುತ್ತಾರೆ, ಆದರೆ ಐಕ್ಯತೆಯ ವಿಚಾರದಲ್ಲಿ ಎಡವುತ್ತಾರೆ ಎಂಬುವುದನ್ನು ಕಂಡುಕೊಂಡಿದೆ.

 ನಿಜವಾದ ಭಾರತೀಯರಾಗುವುದು ಹೇಗೆ?

ನಿಜವಾದ ಭಾರತೀಯರಾಗುವುದು ಹೇಗೆ?

ವಾಷಿಂಗ್ಟನ್ ಡಿಸಿ ಮೂಲದ ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಈ ಸಮೀಕ್ಷೆಯ ಪ್ರಕಾರ ಶೇ. 91 ರಷ್ಟು ಹಿಂದೂಗಳು ತಮಗೆ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ನಂಬಿದ್ದರೆ, ಶೇ.85 ರಷ್ಟು ಜನರು ಎಲ್ಲಾ ಧರ್ಮಗಳನ್ನು ಗೌರವಿಸುವುದು 'ನಿಜವಾದ ಭಾರತೀಯರಾಗಲು' ಬಹಳ ಮುಖ್ಯ ಎಂದು ನಂಬಿದ್ದಾರೆ. ಅಲ್ಲದೆ, ಹೆಚ್ಚಿನ ಹಿಂದೂಗಳಿಗೆ, ಧಾರ್ಮಿಕ ಸಹಿಷ್ಣುತೆ ಕೇವಲ ಒಂದು ನಾಗರಿಕ ಸದ್ಗುಣ ಮಾತ್ರವಲ್ಲ ಧಾರ್ಮಿಕ ಮೌಲ್ಯವೂ ಆಗಿದೆ. ಶೇ.80 ಜನರು ಇತರ ಧರ್ಮಗಳನ್ನು ಗೌರವಿಸುವುದು 'ಹಿಂದೂ' ಆಗಿರುವ ವ್ಯಕ್ತಿಯ ಗುಣವಾಗಿದೆ ಎಂದು ನಂಬಿದ್ದಾರೆ.

ಇತರ ಧರ್ಮಗಳಲ್ಲೂ ಈ ಧರ್ಮದ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಹಿಷ್ಣುತೆ ವಿಚಾರದಲ್ಲಿ ಒಂದೇ ರೀತಿಯ ಶೇಕಡವಾರು ಅಂಕಿ ಅಂಶ ಸಮೀಕ್ಷೆಯಲ್ಲಿ ತೋರಿಸಿದೆ. ಶೇ.89 ರಷ್ಟು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಾವು ಧಾರ್ಮಿಕ ಸ್ವಾತಂತ್ರ್ಯ ಹೊಂದಿದ್ದೇವೆ ಎಂಬುದನ್ನು ನಂಬಿದ್ದಾರೆ. ಹಾಗೆಯೇ ಸಿಖ್ಖರು, ಬೌದ್ಧರು ಮತ್ತು ಜೈನರು ಕ್ರಮವಾಗಿ ಶೇ.82, ಶೇ.93 ಹಾಗೂ ಶೇ.85 ರಷ್ಟು ಜನರು ಧಾರ್ಮಿಕ ಸ್ವಾತಂತ್ರ್ಯ ಹೊಂದಿರುವುದಾಗಿ ನಂಬಿದ್ದಾರೆ. ಧಾರ್ಮಿಕ ಸಹಿಷ್ಣುತೆಯ ವಿಚಾರದಲ್ಲಿ, ಶೇ. 78 ಮುಸ್ಲಿಮರು ಭಾರತೀಯರಾಗಿರುವುದು ಅತ್ಯಗತ್ಯ ಅಂಶವೆಂದು ಭಾವಿಸಿದರೆ, ಶೇ.79 ಮುಸ್ಲಿಮರು ಇದನ್ನು ಧಾರ್ಮಿಕ ಗುರುತಿನ ಒಂದು ಭಾಗವೆಂದು ಭಾವಿಸಿದ್ದಾರೆ. ಇತರ ಧಾರ್ಮಿಕ ಪಂಗಡಗಳು ಧಾರ್ಮಿಕ ಸಹಿಷ್ಣುತೆಯ ಮೇಲೆ ಇದೇ ರೀತಿಯ ನಂಬಿಕೆಯನ್ನು ಇರಿಸಿದೆ.

ಧಾರ್ಮಿಕ ಅಡೆತಡೆಗಳನ್ನು ಮೀರಿದ ಹಲವಾರು ನಂಬಿಕೆಗಳನ್ನು ಸಮೀಕ್ಷೆಯು ಬಹಿರಂಗಪಡಿಸಿದೆ. ಉದಾಹರಣೆಗೆ, ಶೇ.77 ರಷ್ಟು ಹಿಂದೂಗಳು ತಾವು ಕರ್ಮವನ್ನು ನಂಬಿದ್ದೇವೆಂದು ಹೇಳಿದರೆ, ಅಷ್ಟೇ ಶೇಕಡವಾರು ಮುಸ್ಲಿಮರು ಹಾಗೆ ಹೇಳಿದ್ದಾರೆ. ಅಲ್ಲದೆ, ಶೇ.32 ಕ್ರಿಶ್ಚಿಯನ್ನರು (81% ಹಿಂದೂಗಳ ಜೊತೆಗೆ) ಗಂಗಾ ನದಿಯನ್ನು ಪವಿತ್ರವಾದುದು ಎಂದು ನಂಬಿದ್ದಾರೆ. ಆದರೆ ಎಲ್ಲಾ ಪ್ರಮುಖ ನಂಬಿಕೆಗಳಲ್ಲಿ ಬಹುಪಾಲು ಜನರು ''ಹಿರಿಯರನ್ನು ಗೌರವಿಸುವುದು ಧರ್ಮಕ್ಕೆ ಬಹಳ ಮುಖ್ಯ'' ಎಂದು ಹೇಳಿದ್ದಾರೆ.

 ಸಮೀಕ್ಷೆಯ ಪ್ರಕಾರ ಧಾರ್ಮಿಕ ಪ್ರತ್ಯೇಕತೆಯ ಸೂಚ್ಯಂಕ

ಸಮೀಕ್ಷೆಯ ಪ್ರಕಾರ ಧಾರ್ಮಿಕ ಪ್ರತ್ಯೇಕತೆಯ ಸೂಚ್ಯಂಕ

ದೇಶದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಸೇರಿದಂತೆ ಇತರೆ ಧಾರ್ಮಿಕ ನಂಬಿಕೆ ಉಳ್ಳವರು, ಇತರೆ ಧರ್ಮಕ್ಕೆ ಗೌರವ ನೀಡುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ಭಾವಿಸಿದ್ದರೂ ಕೆಲವೊಂದು ಧಾರ್ಮಿಕ ವಿಚಾರಗಳಲ್ಲಿ ವಿರೋಧಾಭಾಸ ಹೊಂದಿದ್ದಾರೆ. ಹೆಚ್ಚಿನ ಜನರು ಧಾರ್ಮಿಕ ಪ್ರತ್ಯೇಕತೆಯ ಮಾಪನಗಳಲ್ಲಿ ಕಳಪೆಯಾಗಿದ್ದಾರೆ. ಅಂತರ್‌ ಧರ್ಮಿಯರ ಜೊತೆ ಸ್ನೇಹ ಬೆಳೆಸದಿರುವುದು, ಅಂತರ್-ಧಾರ್ಮಿಕ ವಿವಾಹವನ್ನು ನಿಲ್ಲಿಸುವ ದೃಷ್ಟಿಕೋನ ಹಾಗೂ ಇತರೆ ಧರ್ಮದ ಜನರನ್ನು ತಮ್ಮ ನೆರೆಹೊರೆಯ ಮನೆಯವರಾಗಿ ಸ್ವೀಕರಿಸುವ ಮನೋಭಾವದಲ್ಲಿ ಭಾರತೀಯರು ಕಳಪೆಯಾಗಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ.

ಮಸೀದಿಗಳಿಗೆ ತಸ್ತಿಕ್ ಭತ್ಯೆ; ವಿಎಚ್‌ಪಿ, ಭಜರಂಗದಳ ತೀವ್ರ ವಿರೋಧಮಸೀದಿಗಳಿಗೆ ತಸ್ತಿಕ್ ಭತ್ಯೆ; ವಿಎಚ್‌ಪಿ, ಭಜರಂಗದಳ ತೀವ್ರ ವಿರೋಧ

"ಭಾರತದಲ್ಲಿ, ವ್ಯಕ್ತಿಯ ಧರ್ಮವು ಸಾಮಾನ್ಯವಾಗಿ ಆ ವ್ಯಕ್ತಿಯ ಆಪ್ತ ಸ್ನೇಹಿತರ ಧರ್ಮವಾಗಿದೆ" ಎಂದು ವರದಿ ತಿಳಿಸಿದೆ. ತುಲನಾತ್ಮಕವಾಗಿ ಕೆಲವೇ ಕೆಲವು ಭಾರತೀಯರು ಅಂದರೆ ಶೇ.13 ರಷ್ಟು ಭಾರತೀಯರು ಎಲ್ಲಾ ಧರ್ಮದ ಸ್ನೇಹಿತರನ್ನು ಹೊಂದಿದ್ದಾರೆ. ಸುಮಾರು ಅರ್ಧದಷ್ಟು ಅಂದರೆ ಶೇ.47 ರಷ್ಟು ಹಿಂದೂಗಳು ತಮ್ಮ ಆಪ್ತ ಸ್ನೇಹಿತರು ಬೇರೆ ಧಾರ್ಮಿಕ ನಂಬಿಕೆ ಉಳ್ಳವರು ಎಂದು ಹೇಳಿದರೆ, ಶೇ.39 ರಷ್ಟು ಜನರು ತಮ್ಮ ಹೆಚ್ಚಿನ ಸ್ನೇಹಿತರು ಸಹ ಹಿಂದೂಗಳೆಂದು ಹೇಳಿದ್ದಾರೆ. ಇನ್ನು 45% ಮುಸ್ಲಿಮರು ಬೇರೆ ಧರ್ಮದ ಸ್ನೇಹಿತರನ್ನು ಹೊಂದಿದ್ದರೆ, 44% ಮುಸ್ಲಿಮರು ತಮ್ಮ ಧರ್ಮದ ಸ್ನೇಹಿತರನ್ನೇ ಹೊಂದಿದ್ದಾರೆ. 22% ಕ್ರಿಶ್ಚಿಯನ್ನರು ಬೇರೆ ಧರ್ಮದ ಸ್ನೇಹಿತರನ್ನು ಹೊಂದಿದ್ದರೆ, 56% ತಮ್ಮ ಧರ್ಮದ ಸ್ನೇಹಿತರನ್ನೇ ಹೊಂದಿದ್ದಾರೆ. 25% ಸಿಖ್ಖರು ಬೇರೆ ಧರ್ಮದ ಸ್ನೇಹಿತರನ್ನು ಹೊಂದಿದ್ದರೆ, 56% ಸಿಖ್ಖರು ತಮ್ಮ ಧರ್ಮದ ಸ್ನೇಹಿತರನ್ನೇ ಹೊಂದಿದ್ದಾರೆ. 22% ಬೌದ್ಧರು ಬೇರೆ ಧರ್ಮದ ಸ್ನೇಹಿತರನ್ನು ಹೊಂದಿದ್ದರೆ, 52% ಬೌದ್ಧರು ತಮ್ಮ ಧರ್ಮದ ಸ್ನೇಹಿತರನ್ನೇ ಹೊಂದಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಣ್ಣ ಧಾರ್ಮಿಕ ಗುಂಪುಗಳಿಗೆ ಸೇರಿದ ಜನರು ಹಿಂದೂಗಳು ಮತ್ತು ಮುಸ್ಲಿಮರಿಗಿಂತ ತಮ್ಮ ಸ್ನೇಹಿತರೆಲ್ಲರೂ ಒಂದೇ ಧರ್ಮದವರು ಎಂದು ಹೇಳುವ ಸಾಧ್ಯತೆ ಕಡಿಮೆಯಾಗಿದೆ.

 ಪ್ರೀತಿಗೆ ಧರ್ಮದ ಅಡ್ಡಬೇಲಿ

ಪ್ರೀತಿಗೆ ಧರ್ಮದ ಅಡ್ಡಬೇಲಿ

ಅಂತರ್‌ಧರ್ಮಿಯ ವಿವಾಹದ ವಿಚಾರದಲ್ಲಿ ಭಾರತದಲ್ಲಿ ತೀವ್ರವಾದ ಅಸಹಿಷ್ಣುತೆ ಇದೆ. ಯಾವುದೇ ಧರ್ಮದವರಾಗಲಿ ತಮ್ಮ ಧರ್ಮದ ಹೆಣ್ಣು ಅಥವಾ ಗಂಡು ಇತರೆ ಧರ್ಮದ ವ್ಯಕ್ತಿಯನ್ನು ವಿವಾಹವಾಗುವುದನ್ನು ಒಪ್ಪುವುದಿಲ್ಲ. ಆದರೆ ಈ ನಡುವೆ ಪ್ರೀತಿಸಿದ ಜೋಡಿಗಳು ಎಲ್ಲಾ ''ಅಡೆತಡೆಗಳನ್ನು ಮೀರಿ ಕಾನೂನು ರಕ್ಷಣೆ ಪಡೆದು ವಿವಾಹವಾಗಿರುವ'' ಅದೇಷ್ಟೋ ಉಹಾಹರಣೆ ನಮ್ಮ ಕಣ್ಣಮುಂದಿದೆ. ಈ ಅಸಹಿಷ್ಣು ಮನೋಭಾವನೆಗೆ ರಾಜಕೀಯ ವಿಷಬೀಜವೂ ಒಂದು ಕಾರಣವಾಗಿದೆ. ಅಂತರ್‌ಧರ್ಮಿಯ ವಿವಾಹದ ವಿಚಾರದಲ್ಲಿ ಹೆಚ್ಚಿನ ಹಿಂದೂಗಳು ಅಂದರೆ ಶೇ.67ರಷ್ಟು ಮಂದಿ, ಶೇ.80 ರಷ್ಟು ಮುಸ್ಲಿಮರು, ಶೇ.59 ರಷ್ಟು ಸಿಖ್ಖರು ಮತ್ತು ಶೇ.66 ರಷ್ಟು ಜೈನರು ತಮ್ಮ ಸಮುದಾಯದ ಮಹಿಳೆಯರು ಬೇರೆ ಧರ್ಮದವರನ್ನು ಮದುವೆಯಾಗುವುದನ್ನು ತಡೆಯುವುದು 'ಬಹಳ ಮುಖ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ. ಬೇರೆ ಧರ್ಮದವರನ್ನು ಮದುವೆಯಾಗುವುದಕ್ಕೆ ಪುರುಷರಿಗೆ ಇದೇ ರೀತಿಯ ವಿರೋಧವಿದೆ. ಆದರೆ ಗಣನೀಯವಾಗಿ ಕ್ರೈಸ್ತರು (37%) ಮತ್ತು ಬೌದ್ಧರು (46%) ಈ ರೀತಿಯ ಮನೋಭಾವ ಹೊಂದಿರುವುದು ಇತರೆ ಧರ್ಮಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.

ನೆರೆಮನೆಯವರು ಬೇರೆ ಧರ್ಮದವರಾದರೆ ಒಪ್ಪುತ್ತಾರೆಯೇ ಭಾರತೀಯರು?

ನೆರೆಮನೆಯವರು ಬೇರೆ ಧರ್ಮದವರಾದರೆ ಒಪ್ಪುತ್ತಾರೆಯೇ ಭಾರತೀಯರು?

ಭಾರತೀಯರು ಇತರ ಧಾರ್ಮಿಕ ಗುಂಪುಗಳ ಸದಸ್ಯರನ್ನು ನೆರೆಹೊರೆಯವರಾಗಿ ಸ್ವೀಕರಿಸಲು ಒಪ್ಪುತ್ತಾರೆಯಾದರೂ, ಒಂದು ಪ್ರತ್ಯೇಕತೆ ಭಾವನೆ ಇದೆ ಎಂದು ಸಮೀಕ್ಷೆ ಹೇಳುತ್ತದೆ. ಹೆಚ್ಚಿನ ಹಿಂದೂಗಳು ಬೇರೆ ಧರ್ಮದ ನೆರೆ ಮನೆಯವರನ್ನು ಹೊಂದುವುದನ್ನು ಒಪ್ಪಿದರೆ, ಮುಸ್ಲಿಂ (57%), ಕ್ರಿಶ್ಚಿಯನ್ (59%), ಅಥವಾ ಜೈನ (59%) ಧಾರ್ಮಿಕ ಅಲ್ಪಸಂಖ್ಯಾತರ ಸದಸ್ಯರ ನಿವಾಸದ ಬಳಿ ವಾಸಿಸಲು ಸಿದ್ಧರಿದ್ದಾರೆ. ಆದರೆ ಒಟ್ಟಾರೆಯಾಗಿ ಶೇ. 36 ಹಿಂದೂಗಳು ಮುಸ್ಲಿಮರ ಬಳಿ ವಾಸಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ. 31% ರಷ್ಟು ಹಿಂದೂಗಳು ಕ್ರಿಶ್ಚಿಯನ್ನರ ಬಗ್ಗೆಯೂ ಹೀಗೆ ಹೇಳಿದ್ದಾರೆ. ಈ ವಿಚಾರದಲ್ಲಿ ಜೈನರು ಇಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಧ್ಯತೆ ಅಧಿಕವಾಗಿದೆ. ಶೇ. 54 ರಷ್ಟು ಜೈನರು ಮುಸ್ಲಿಂ ನೆರೆಯವರನ್ನು ಹೊಂದಿರಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಶೇ.47 ರಷ್ಟು ಕ್ರಿಶ್ಚಿಯನ್ನರ ಬಗ್ಗೆ ಅದೇ ರೀತಿ ಹೇಳಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಬೌದ್ಧರು ಇತರ ಧಾರ್ಮಿಕ ಗುಂಪುಗಳನ್ನು ನೆರೆಹೊರೆಯವರು ಎಂದು ಒಪ್ಪಿಕೊಳ್ಳುವಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಸರಿಸುಮಾರು 80% ಜನರು ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಅಥವಾ ಜೈನ ಧರ್ಮದವರನ್ನು ನೆರೆಮನೆಯವರನ್ನಾಗಿ ಸ್ವೀಕರಿಸಲು ಒಪ್ಪುವುದಾಗಿ ಹೇಳಿದ್ದಾರೆ. ಇನ್ನೂ ಹೆಚ್ಚಿನವರು (89%) ಹಿಂದೂ ಧರ್ಮದ ನೆರೆ ಮನೆಯವರನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. ಸುಮಾರು 78% ಮುಸ್ಲಿಮ್‌ ಧರ್ಮದ ಕುಟುಂಬವನ್ನು ನೆರೆಹೊರೆಯವರಾಗಿ ಹೊಂದಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.

ಬ್ರಾಹ್ಮಣ ಮಹಿಳೆಯ ಅಂತಿಮ ಸಂಸ್ಕಾರ ನಡೆಸಿದ ಸಂಸದ ನಾಸೀರ್ ಹುಸೇನ್ಬ್ರಾಹ್ಮಣ ಮಹಿಳೆಯ ಅಂತಿಮ ಸಂಸ್ಕಾರ ನಡೆಸಿದ ಸಂಸದ ನಾಸೀರ್ ಹುಸೇನ್

ಇನ್ನು ಕುತೂಹಲಕಾರಿ ಸಂಗತಿಯೆಂದರೆ, 2019 ರ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ ಹಿಂದೂಗಳು ತಮ್ಮ ನೆರೆಹೊರೆಯಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ಕಡಿಮೆ ಒಪ್ಪಿಕೊಳ್ಳುತ್ತಾರೆ ಎಂದು ಸಮೀಕ್ಷೆಯು ಕಂಡುಕೊಂಡಿದೆ. ಬಿಜೆಪಿಗೆ ಮತ ಹಾಕಿದ ಅರ್ಧದಷ್ಟು ಹಿಂದೂಗಳು ಮಾತ್ರ ಮುಸ್ಲಿಂ (51%) ಅಥವಾ ಕ್ರಿಶ್ಚಿಯನ್ (53%) ರನ್ನು ನೆರೆಹೊರೆಯವರಾಗಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ಇತರ ಪಕ್ಷಗಳಿಗೆ ಮತ ಚಲಾಯಿಸಿದವರಲ್ಲಿ ಹೆಚ್ಚಿನವರು ಬೇರೆ ಧರ್ಮದ ನೆರೆ ಮನೆಯವರನ್ನು ಹೊಂದಲು ಇಚ್ಛಿಸುತ್ತಾರೆ. ಮುಸ್ಲಿಂ (64%) ಅಥವಾ ಕ್ರಿಶ್ಚಿಯನ್ (67%) ಧರ್ಮದವರನ್ನು ನೆರೆ ಮನೆಯವರನ್ನಾಗಿ ಹೊಂದಲು ಬಯಸುತ್ತಾರೆ.

ವರ್ತನೆಗಳನ್ನು ನಿರ್ಧರಿಸುವಲ್ಲಿ ಭೌಗೋಳಿಕತೆಯು ಒಂದು ಪ್ರಮುಖ ಅಂಶವಾಗಿದೆ. ಭಾರತದ ದಕ್ಷಿಣ ಭಾಗದ ಜನರು ಹೆಚ್ಚು ಧಾರ್ಮಿಕವಾಗಿ ಸಂಯೋಜಿಸಲ್ಪಟ್ಟಿದ್ದಾರೆ. ಅಂತರ-ಧಾರ್ಮಿಕ ವಿವಾಹಗಳನ್ನು ಕಡಿಮೆ ವಿರೋಧಿಸುತ್ತಾರೆ. ದಕ್ಷಿಣದ ಜನರು ತಮ್ಮ ಎಲ್ಲ ಆಪ್ತರು ತಮ್ಮ ಧರ್ಮದವರು (29%) ಎಂದು ಹೇಳುವುದು ಇತರ ಪ್ರದೇಶಗಳಿಗಿಂತ ಕಡಿಮೆ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ರಾಷ್ಟ್ರೀಯವಾಗಿ 47% ಹಿಂದೂಗಳಿಗೆ ಹೋಲಿಸಿದರೆ ದಕ್ಷಿಣದ ಹಿಂದೂಗಳಲ್ಲಿ, 31% ಜನರು ತಮ್ಮ ಆಪ್ತರು ಎಲ್ಲರೂ ಹಿಂದೂಗಳೆಂದು ಹೇಳಿದ್ದಾರೆ. ದೇಶಾದ್ಯಂತ 45% ಮುಸ್ಲಿಮರು ತಮ್ಮ ಆಪ್ತರರೆಲ್ಲರೂ ಸಹ ಮುಸ್ಲಿಮರು ಎಂದು ಹೇಳಿದ್ದರೆ, ದಕ್ಷಿಣದಲ್ಲಿ ಇನ್ನೂ ಕಡಿಮೆ ಸಂಖ್ಯೆಯ ಮುಸ್ಲಿಮರು (19%) ತಮ್ಮ ಸ್ನೇಹಿತರೆಲ್ಲರೂ ಮುಸ್ಲಿಮರು ಎಂದು ಹೇಳಿದ್ದಾರೆ.

 ಧಾರ್ಮಿಕ ಗುರುತು, ರಾಷ್ಟ್ರೀಯತೆ ಹಾಗೂ ಹಿಂದಿ ಭಾಷೆ

ಧಾರ್ಮಿಕ ಗುರುತು, ರಾಷ್ಟ್ರೀಯತೆ ಹಾಗೂ ಹಿಂದಿ ಭಾಷೆ

ಹಿಂದೂಗಳು ತಮ್ಮ ಧಾರ್ಮಿಕ ಗುರುತು ಮತ್ತು ಭಾರತೀಯ ರಾಷ್ಟ್ರೀಯ ಗುರುತನ್ನು ನಿಕಟವಾಗಿ ಹೆಣೆದುಕೊಂಡಿರುವಂತೆ ನೋಡಿಕೊಳ್ಳುತ್ತಾರೆ ಎಂದು ಸಮೀಕ್ಷೆಯು ಕಂಡುಕೊಂಡಿದೆ. 64% ಜನರು ಹಿಂದೂ ''ನಿಜವಾದ'' ಭಾರತೀಯರಾಗಿರುವುದು ''ಬಹಳ ಮುಖ್ಯ'' ಎಂದು ಹೇಳಿದ್ದಾರೆ. ಹೆಚ್ಚಿನ ಹಿಂದೂಗಳು (59%) ಹಿಂದಿ ಮಾತನಾಡಲು ಸಮರ್ಥರಾಗಿದ್ದಾರೆ. ನಿಜವಾದ ಭಾರತೀಯನಾಗಲು ಹಿಂದೂ ಆಗಿರುವುದು ಬಹಳ ಮುಖ್ಯ ಎಂದು ನಂಬಿರುವ ಹಿಂದೂಗಳಲ್ಲಿ, 80% ರಷ್ಟು ಜನರು ನಿಜವಾದ ಭಾರತೀಯರಾಗಲು ಹಿಂದಿ ಮಾತನಾಡುವುದು ಬಹಳ ಮುಖ್ಯ ಎಂದು ಕೂಡಾ ನಂಬಿದ್ದಾರೆ. ಭಾರತೀಯ ಗುರುತನ್ನು ಹಿಂದೂ ಎಂದು ಕರೆಯುವ ಮತ್ತು ಹಿಂದಿಯಲ್ಲಿ ಮಾತನಾಡುವ ಸುಮಾರು 60% ಹಿಂದೂ ಮತದಾರರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಹಿಂದೂ ಮತದಾರರಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಜನರು ಈ ಗುರುತನ್ನು ರಾಷ್ಟ್ರೀಯ ಗುರುತು ಅಲ್ಲ ಎಂದಿದ್ದಾರೆ ಎಂದು ವರದಿ ತಿಳಿಸಿದೆ. ಒಟ್ಟಾರೆಯಾಗಿ ಈ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭವನ್ನು ಒಂದು ಧರ್ಮದ ನಂಬಿಕೆಯ ಆಧಾರದಲ್ಲಿ ಪಡೆಯುತ್ತಿದೆ ಎಂಬುವುದನ್ನು ಸಮೀಕ್ಷೆ ಸ್ಪಷ್ಟಗೊಳಿಸಿದೆ. ಈ ರಾಜಕೀಯ ಪಕ್ಷದ ಆಟಕ್ಕೆ ಭಾರತದ ಧಾರ್ಮಿಕ ಸೌರ್ಹಾದತೆಯು ಮರೀಚಿಕೆಯಾಗುತ್ತಿದೆ ಎಂಬುವುದು ಗಂಭೀರವಾದ ವಿಚಾರ. ಇನ್ನು ಹಲವಾರು ಭಾಷೆಗಳನ್ನು ಹೊಂದಿರುವ ಈ ದೇಶದಲ್ಲಿ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಕೂಗು ಕೂಡಾ ಕೇಳಿ ಬಂದಿದೆ. ಹಿಂದಿ ಹೊರತಾಗಿ ಇತರ ಭಾಷೆಯನ್ನು ಮಾತನಾಡುವವರನ್ನು ತುಚ್ಛವಾಗಿ ಕಾಣುವ ಮನಸ್ಥಿತಿಯು ರಾಜಕೀಯ ಪ್ರೇರಿತವಾಗಿದೆ.

 ದಕ್ಷಿಣ ಭಾರತದಲ್ಲಿ ರಾಜಕೀಯ ಪ್ರಭಾವ

ದಕ್ಷಿಣ ಭಾರತದಲ್ಲಿ ರಾಜಕೀಯ ಪ್ರಭಾವ

ರಾಷ್ಟ್ರೀಯವಾಗಿ, ಹತ್ತರಲ್ಲಿ ಮೂರರಷ್ಟು ಹಿಂದೂಗಳು ಎರಡು ವಿಚಿತ್ರ ಭಾವನೆಗಳನ್ನು ಹೊಂದಿದ್ದಾರೆ ಸಮೀಕ್ಷೆಯು ಕಂಡುಹಿಡಿದಿದೆ. ಹಿಂದೂಗಳು ಹಾಗೂ ಹಿಂದಿ ಭಾಷೆಯನ್ನು ಮಾತನಾಡುವವರು ಭಾರತೀಯರು ಎಂಬುದು ಹಾಗೂ ಬಿಜೆಪಿಗೆ ಮತ ಚಲಾಯಿಸುವುದು ಭಾರತೀಯತೆ ಎಂಬುದು ಭಾವನಾತ್ಮಕ ಅಂಶವಾಗಿ ಮಾರ್ಪಟ್ಟಿದೆ. ಇವೆರಡು ಅಂಶಗಳು ಹತ್ತರಲ್ಲಿ ಮೂರರಷ್ಟು ಹಿಂದೂಗಳಲ್ಲಿ ರಾಷ್ಟ್ರೀಯ ಭಾವನೆಯಾಗಿ ಪರಿವರ್ತನೆಯಾಗಿದೆ. ಆದರೆ ಇದರಲ್ಲಿ ಸ್ಪಷ್ಟವಾದ ಭೌಗೋಳಿಕ ತಿರುವು ಕಂಡುಬಂದಿದೆ. ಉತ್ತರ ಮತ್ತು ಮಧ್ಯ ಭಾರತದ ಸರಿಸುಮಾರು ಅರ್ಧದಷ್ಟು ಹಿಂದೂ ಮತದಾರರು ಈ ಭಾವನೆಯನ್ನು ಹೊಂದಿರುವ ವರ್ಗಕ್ಕೆ ಸೇರಿದ್ದರೆ, ದಕ್ಷಿಣದ ಹಿಂದೂ ಮತದಾರರಲ್ಲಿ ಕೇವಲ 5% ಮಾತ್ರ ಈ ಭಾವನೆಯನ್ನು ಹೊಂದಿದ್ದಾರೆ.

ಅಲ್ಲದೆ, ದಕ್ಷಿಣದಲ್ಲಿ ಹಿಂದೂ ರಾಷ್ಟ್ರೀಯತಾವಾದಿ ಭಾವನೆಗಳು ಕಡಿಮೆ ಪ್ರಚಲಿತದಲ್ಲಿದೆ. ಹಿಂದೂಗಳಲ್ಲಿ, ಮಧ್ಯ ರಾಜ್ಯಗಳಲ್ಲಿ (83%) ಅಥವಾ ಉತ್ತರದಲ್ಲಿ (69%) ಹೋಲಿಸಿದರೆ ದಕ್ಷಿಣದ (42%) ಹಿಂದೂಗಳಲ್ಲಿ ತಾವು ಹಿಂದೂ ಆಗಿರುವುದು ನಿಜವಾದ ಭಾರತೀಯರಾಗಲು ಬಹಳ ಮುಖ್ಯ ಎಂಬ ಭಾವನೆ ಇರುವುದು ಬಹಳ ಕಡಿಮೆಯಾಗಿದೆ. ಅಲ್ಲದೆ, ದಕ್ಷಿಣದ ಜನರು ಇತರ ಪ್ರದೇಶಗಳಿಗಿಂತ ಸ್ವಲ್ಪ ಕಡಿಮೆ ಧಾರ್ಮಿಕರಾಗಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿದೆ. 69% ಜನರು ತಮ್ಮ ಜೀವನಕ್ಕೆ ಧರ್ಮವು ಬಹಳ ಮುಖ್ಯವೆಂದು ಹೇಳಿದರೆ, ಮಧ್ಯ ಭಾರತದಲ್ಲಿ 92% ಜನರು ತಮ್ಮ ಜೀವನಕ್ಕೆ ಧರ್ಮವು ಬಹಳ ಮುಖ್ಯ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಈ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ ಅರ್ಧಕ್ಕಿಂತ ಹೆಚ್ಚು ಭಾರತೀಯರಿಗೆ ಹೋಲಿಸಿದರೆ ದಕ್ಷಿಣದ 37% ಭಾರತೀಯರು ಮಾತ್ರ ಪ್ರತಿದಿನ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಭಾರತದಾದ್ಯಂತ ಪ್ಯೂ ಸೆಂಟರ್‌ನ ಧರ್ಮದ ಸಮೀಕ್ಷೆಯು ನವೆಂಬರ್ 17, 2019 ರಿಂದ 2020 ರ ಮಾರ್ಚ್ 23 ರವರೆಗೆ 17 ಭಾಷೆಗಳಲ್ಲಿ ನಡೆಸಿದ ವಯಸ್ಕರ ಸುಮಾರು 30,000 ಮುಖಾಮುಖಿ ಸಂದರ್ಶನಗಳನ್ನು ಆಧರಿಸಿದೆ. ಇದುವರೆಗಿನ ಭಾರತದಲ್ಲಿ ಇಂತಹ ಅತಿದೊಡ್ಡ ಸಮೀಕ್ಷೆ ಇದಾಗಿದೆ. ಇದು ಬಹಳ ವಿಸ್ತಾರವಾಗಿ ಮಾಡಲಾಗಿದೆ. ಹಿಂದೂಗಳು, ಮುಸ್ಲಿಮರು, ಬೌದ್ಧರು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಜೈನರ ವರ್ತನೆಗಳನ್ನು ಸರಿಯಾಗಿ ಅಧ್ಯಯನ ಮಾಡಲಾಗಿದೆ. ಧಾರ್ಮಿಕ ಗುರುತು, ನಂಬಿಕೆಗಳು ಮತ್ತು ಆಚರಣೆಗಳು, ಭಾರತೀಯ ರಾಷ್ಟ್ರೀಯ ಗುರುತಿನ ದೃಷ್ಟಿಕೋನಗಳು, ಜಾತಿ, ತಾರತಮ್ಯದ ಅನುಭವಗಳು, ಧಾರ್ಮಿಕ ಮತಾಂತರ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ಧಾರ್ಮಿಕ ಆಚರಣೆಯ ನಡುವಿನ ಸಂಪರ್ಕವನ್ನು ಸಮೀಕ್ಷೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Indians value religious freedom and tolerance but not great at integration finds Pew survey. To know more in Kannada Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X