ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ಭಾರತದ ಆಶಯ ಈಡೇರುವುದು ಯಾವಾಗ?

By ಬಿ.ಎಂ.ಲವಕುಮಾರ್
|
Google Oneindia Kannada News

ನಾವೀಗ 72 ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಆದರೆ ಈ ಬಾರಿ ದೇಶದ ಹಲವು ರಾಜ್ಯಗಳು ವರುಣನ ರೌದ್ರತೆಗೆ ಕೊಚ್ಚಿ ಹೋಗಿವೆ. ಇಲ್ಲಿ ಜನ ತಮ್ಮ ಜೀವವನ್ನು ಉಳಿಸಿಕೊಳ್ಳಲು ಹೋರಾಡುವಂತಾಗಿದೆ.

ಪ್ರಕೃತಿಯ ವಿಕೋಪಕ್ಕೆ ಸಿಲುಕಿ ನಲುಗುತ್ತಿರುವ ಜನಕ್ಕೆ ಈಗ ಬೇಕಾಗಿರುವುದು ಆಶ್ರಯ ಮತ್ತು ಸಹಕಾರ. ಸದ್ಯದ ಸ್ಥಿತಿಯಲ್ಲಿ ಮನೆಮಠ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡ ಜನ ಅಕ್ಷಶಃ ಬೀದಿಗೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಂತು ಧೈರ್ಯ ತುಂಬಬೇಕಾದ ರಾಜಕೀಯ ನಾಯಕರು ರಾಜಕೀಯ ಮಾಡುತ್ತಾ ಅವರನ್ನು ಇವರು, ಇವರನ್ನು ಅವರು ತೆಗಳುತ್ತಾ ಸಮಾವೇಶ ನಡೆಸಿಕೊಂಡು ಆರೋಪಗಳ ಸುರಿಮಳೆಗೈಯ್ಯುತ್ತಾ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಳಿಗೆ ಈಗಾಗಲೇ ಸಜ್ಜುಗೊಳ್ಳುತ್ತಿರುವುದನ್ನು ನೋಡಿದರೆ ನಾಯಕರ ಅಧಿಕಾರ ದಾಹ ಅರಿವಾಗುತ್ತಿದೆ.

ಪಕ್ಷಭೇದ ಮರೆತು ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿ ಅಗತ್ಯ ಪರಿಹಾರಗಳನ್ನು ಕಲ್ಪಿಸಿ ಅವರಿಗೊಂದು ಬದುಕು ಕಟ್ಟಿಕೊಡುವ ಮಾತುಗಳು ನಮ್ಮ ನಾಯಕರ ಬಾಯಲ್ಲಿ ಬರುತ್ತಿಲ್ಲ. ಕೇವಲ ರಾಜಕೀಯ ಮಾಡುತ್ತಾ ಅಧಿಕಾರ ಇಲ್ಲದವರು ಅಧಿಕಾರ ಹಿಡಿಯಲು, ಈಗಾಗಲೇ ಅಧಿಕಾರದಲ್ಲಿರುವವರು ಅದನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಸರ್ಕಸ್ ಗಳನ್ನು ನೋಡಿದರೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವಷ್ಟು ಸಂತಸ ನಮ್ಮಲ್ಲಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ.

ಸ್ವಾತಂತ್ರ್ಯ ದಿನ ಸಂಭ್ರಮದಲ್ಲಿ ಗಾಂಧೀಜಿ ಗೈರಾಗಿದ್ದರು, ಯಾಕೆ ಗೊತ್ತಾ?ಸ್ವಾತಂತ್ರ್ಯ ದಿನ ಸಂಭ್ರಮದಲ್ಲಿ ಗಾಂಧೀಜಿ ಗೈರಾಗಿದ್ದರು, ಯಾಕೆ ಗೊತ್ತಾ?

ಕೇವಲ ಆರೋಪ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅದು ಕೇವಲ ಮತ ಪಡೆಯಲು ಒಂದು ಮಾರ್ಗವಷ್ಟೆ ಅದನ್ನು ಹೊರತು ಪಡಿಸಿದರೆ ಅದರಾಚೆಗೆ ಮತ್ತೇನು ಕಾಣಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ನಾಯಕರು ಒಟ್ಟಾಗಿ ದೇಶಕ್ಕೆ ಒದಗಿ ಬಂದ ಸಂಕಷ್ಟವನ್ನು ಪರಿಹರಿಸುವಲ್ಲಿ ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನ ಮಾಡಬೇಕಾಗಿದೆ. ರಾಜ್ಯಕ್ಕೆ ರಾಜ್ಯವೇ ನೀರಿನಲ್ಲಿ ಕೊಚ್ಚಿಹೋಗುತ್ತಿದೆ. ಮತ್ತೊಂದು ಕಡೆ ಮಳೆಯಲ್ಲಿ ಎಲ್ಲವನ್ನು ಕಳೆದುಕೊಂಡು ನಿರ್ಗತಿಕವಾಗಿರುವ ಕುಟುಂಬಗಳು ತುತ್ತು ಅನ್ನಬೇಡುತ್ತಿವೆ. ಹೀಗಿರುವಾಗ ನಾಯಕರು ಅವರ ಪರ ನಿಂತು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ವಿಧುರಾಶ್ವತ್ಥ' ಹೋರಾಟದ ನೆನಪು ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ವಿಧುರಾಶ್ವತ್ಥ' ಹೋರಾಟದ ನೆನಪು

ಇವತ್ತಿನ ರಾಜಕೀಯ ಹಗ್ಗ ಜಗ್ಗಾಟದಲ್ಲಿ ಭಾರತದ ಶ್ರೀಸಾಮಾನ್ಯ ಬಡವನಾಗುತ್ತಿದ್ದಾನೆ. ಅಧಿಕಾರಕ್ಕೆ ಬಂದ ಮತ್ತು ಅಧಿಕಾರ ಪಡೆಯಲು ಹವಣಿಸುತ್ತಿರುವ ನಾಯಕರು ದೇಶದ ಬಗ್ಗೆ ಚಿಂತಿಸುತ್ತಿದ್ದಾರಾ? ಚಳವಳಿ, ಸೆರೆವಾಸ, ಪ್ರಾಣ ತ್ಯಾಗ ಮಾಡಿ ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರಾ? ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಅನಿವಾರ್ಯತೆಗಳು ನಮ್ಮ ಮುಂದಿದೆ.

ನೆಹರೂ ಕನಸು ನನಸಾಗಿದೆಯಾ?

ನೆಹರೂ ಕನಸು ನನಸಾಗಿದೆಯಾ?

ಅವತ್ತು ಸ್ವಾತಂತ್ರ್ಯ ದೊರೆತ ದಿನ ಭಾರತದ ಜನತೆಯನ್ನುದ್ದೇಶಿಸಿ ಮಾತನಾಡಿದ ಜವಾಹರಲಾಲ್ ನೆಹರು "ಮಧ್ಯರಾತ್ರಿಯ ಗಂಟೆಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚೆತ್ತುಕೊಳ್ಳುತ್ತಿದೆ. ಇತಿಹಾಸದಲ್ಲಿ ಬರುವ ಇಂತಹ ಅಪರೂಪದ ಈ ಗಳಿಗೆಯಲ್ಲಿ ಹಳತಿನಿಂದ ಹೊಸತನಕ್ಕೆ ಕಾಲಿಡುತ್ತಿದ್ದೇವೆ. ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ. ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸಿಕೊಳ್ಳುತ್ತಿದ್ದೇವೆ. ಮತ್ತು ಭಾರತವು ಮತ್ತೆ ತನ್ನನ್ನು ತಾನು ಕಂಡುಕೊಳ್ಳುತ್ತಿದೆ." ಎಂದಿದ್ದರು. ಅದು ಅವರ ಬರೀ ಮಾತು ಆಗಿರಲಿಲ್ಲ ಮುಂದಿನ ಕನಸಾಗಿತ್ತು. ಆದರೆ ಅದು ನನಸಾಗಿದೆಯಾ ಎಂಬ ಪ್ರಶ್ನೆಯನ್ನು ನಾವೀಗ ಕೇಳಿಕೊಳ್ಳಬೇಕಿದೆ.

ಎಷ್ಟೆಲ್ಲ ಜನ ಪ್ರಾಣತ್ಯಾಗ ಮಾಡಿದ್ದಾರೆ!

ಎಷ್ಟೆಲ್ಲ ಜನ ಪ್ರಾಣತ್ಯಾಗ ಮಾಡಿದ್ದಾರೆ!

ಇವತ್ತು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸುವುದರ ಹಿಂದೆ ಅಷ್ಟೇ ಅಲ್ಲ ನಾವು ನೆಮ್ಮದಿಯಾಗಿ, ಸ್ವತಂತ್ರರಾಗಿ ಬದುಕುತ್ತಿದ್ದೇವೆ ಎನ್ನುವುದಾದರೆ ಈಗಿನ ನಮ್ಮ ಈ ಬದುಕಿಗಾಗಿ ಅಂದು ಹೋರಾಡಿ, ತಮ್ಮ ಜೀವನವನ್ನೇ ತ್ಯಾಗ ಮಾಡಿದ, ತ್ಯಾಗಿಗಳನ್ನು ನಾವು ಸ್ಮರಿಸಲೇ ಬೇಕು. ಜತೆಗೆ ಬ್ರಿಟೀಷರ ಕಪಿ ಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಿ, ಹರಿದು ಹಂಚಿಹೋಗಿದ್ದ ರಾಷ್ಟ್ರವನ್ನು ಅಖಂಡ ಭಾರತವನ್ನಾಗಿ ಮಾಡುವಲ್ಲಿ ಶ್ರಮಿಸಿದ ಅವತ್ತಿನ ಹಿರಿಯ ಎಲ್ಲಾ ನಾಯಕರುಗಳಿಗೆ ಸಲಾಮ್ ಹೊಡೆಯಲೇ ಬೇಕು.

ರೋಚಕ ಹೋರಾಟ

ರೋಚಕ ಹೋರಾಟ

ಭಾರತ ಸ್ವಾತಂತ್ರ್ಯದ ಇತಿಹಾಸವನ್ನು ಮೆಲುಕು ಹಾಕುತ್ತಾ ಹೋದರೆ ಅದು ಒಂದೆರಡು ದಿನದ ಹೋರಾಟವಲ್ಲ. ಸುಮಾರು ಎಂಟೊಂಬತ್ತು ದಶಕಗಳ ಕಾಲ ನಡೆದ ನಿರಂತರ ಹೋರಾಟ, ಈ ಹೋರಾಟದಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷರ ಬೂಟಿನೇಟಿಗೆ, ಬಂದೂಕಿನ ತುಫಾಕಿಗೆ ಬಲಿಯಾಗಿದ್ದಾರೆ. 1857ರಿಂದ 1947ರವರೆಗಿನ ಹೋರಾಟವನ್ನು ಗಮನಿಸಿದರೆ ಸ್ವಾತಂತ್ರ್ಯಕ್ಕಾಗಿ ಭಾರತದಲ್ಲಿ ನಡೆದ ದಂಗೆಗಳು, ಹೋರಾಟಗಳು ನಿಜಕ್ಕೂ ರೋಚಕ. ಅಷ್ಟೇ ಅಲ್ಲ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆದದ್ದು ಮತ್ತೊಂದು ವಿಶೇಷ ಸಾಧನೆ. ಅದು ಏನೇ ಇರಲಿ ಎಲ್ಲವೂ ಇತಿಹಾಸದ ದಾಖಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುವುದು ಯಾವಾಗ?

ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುವುದು ಯಾವಾಗ?

ಇವತ್ತು ಸ್ವಾತಂತ್ರ್ಯ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ ಎಲ್ಲವೂ ಅಭಿವೃದ್ಧಿ ದಿಕ್ಕಿನೆಡೆಗೆ ಸಾಗಿದೆಯಾ? ಸಾಗಿಲ್ಲವಾದರೆ ಅದಕ್ಕೆ ಕಾರಣಗಳೇನು ಎಂಬುದರ ಬಗ್ಗೆಯೂ ಚಿಂತೆ ಮಾಡಬೇಕಾದ ಕಾಲ ಬಂದಿದೆ. ಯುವಕರಿಗೆ ಉದ್ಯೋಗ... ಬೆಳೆಬೆಳೆದ ರೈತನಿಗೆ ಉತ್ತಮ ದರ... ಶ್ರಮಜೀವಿಗಳಿಗೆ ತಕ್ಕಂತೆ ಫಲ... ಹೆಣ್ಣು ಮಕ್ಕಳು ನಿರ್ಭಯವಾಗಿ ಬದುಕಬೇಕಾದ ವಾತಾವರಣ.. ಅಪರಾಧ ಕೃತ್ಯಗಳಿಗೆ ಕಡಿವಾಣ... ಭ್ರಷ್ಟಚಾರ ನಿಗ್ರಹ.. ಹೀಗೆ ಒಂದೇ ಎರಡೇ ಆಗಬೇಕಾಗಿದ್ದು ಬಹಳಷ್ಟಿದೆ. ಇದೆಲ್ಲವೂ ಸರಿಹೋದ ದಿನ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ. ಇಲ್ಲದೆ ಹೋದರೆ ಆಚರಣೆಗಷ್ಟೆ ಸೀಮಿತವಾಗುತ್ತದೆ. ಹಾಗಾಗದಿರಲಿ ಎಂಬುದೇ ನಮ್ಮ ಆಶಯ..

English summary
India is celebrating 72nd Independence day on August 15th. This is the proper time to remember people who were martyred for the sake of their nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X