ನಮ್ಮದು ಬಹು ಸಂಸ್ಕೃತಿಯ ರಾಷ್ಟ್ರ, ಹಿಂದೂ ದೇಶ ಮಾತ್ರವಲ್ಲ: ಡಾ.ಮಹದೇವಪ್ಪ ಸಂದರ್ಶನ
ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನಡುವಿನ ಬಾಂಧವ್ಯದ ಬಗ್ಗೆ, ಮಾಜಿ ಲೋಕೋಪಯೋಗಿ ಇಲಾಖೆಯ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
'ಒನ್ ಇಂಡಿಯಾ'ಕಚೇರಿಗೆ ಆಗಮಿಸಿದ್ದ ಡಾ.ಮಹದೇವಪ್ಪನವರು ಸಂದರ್ಶನದಲ್ಲಿ ಭಾಗವಹಿಸಿ, ರಾಷ್ಟ್ರೀಯ ಶಿಕ್ಷಣ ನೀತಿ, ಕೃಷಿ ಕಾಯಿದೆ, ಮೈಸೂರು ರಾಜಕೀಯ, ಯಡಿಯೂರಪ್ಪನವರ ನೇತೃತ್ವವಿಲ್ಲದ ಬಿಜೆಪಿಯ ಬಗೆಗಿನ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.
ದ್ರೋಹ ಮಾಡಿದಕ್ಕೆ ಸೇಡು: ಈ ಬಿಜೆಪಿ ಸಚಿವ ಕಾಂಗ್ರೆಸ್ಸಿನ 'ಟಾರ್ಗೆಟ್'
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿನ ಕಾಂಗ್ರೆಸ್ ಸಾಧನೆಯ ಬಗ್ಗೆ ತೃಪ್ತಿ ಪಟ್ಟಿರುವ ಡಾ.ಮಹದೇವಪ್ಪ, ಚುನಾವಣೆ ನಡೆದ ಶೈಲಿಯ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಬದಲಾಗಬೇಕು ಎನ್ನುವ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿದ್ದಾರೆ. ಡಾ.ಮಹದೇವಪ್ಪನವರ ಸಂದರ್ಶನದ ಆಯ್ದ ಭಾಗ ಇಂತಿದೆ:
ಪ್ರ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಯ ಬಗ್ಗೆ?
ಎಚ್.ಸಿ.ಎಂ: ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಈ ಚುನಾವಣೆಯನ್ನು ಎದುರಿಸಿದೆ. ಈ ಫಲಿತಾಂಶ ನಮಗೇನೂ ಖುಷಿಯನ್ನು ಕೊಟ್ಟಿದೆ. ಆದರೆ, ಚುನಾವಣೆ ನಡೆದ ರೀತಿ, ಆಯ್ಕೆಯಾದವರು ಪರಿಷತ್ತಿನ ಗೌರವವನ್ನು ಎತ್ತಿ ಹಿಡಿಯಬೇಕು ಎನ್ನುವುದು ನನ್ನ ಅಭಿಲಾಶೆ. ಇದರಿಂದ ಪ್ರಜಾಪ್ರಭುತ್ವ ಬಲ ಪಡಿಸಲು ಸಹಾಯವಾಗುತ್ತದೆ.

ಮಾಂಸ ತಿನ್ನದ ಬ್ರಾಹ್ಮಣರು ಬ್ರಾಹ್ಮಣರೇ ಅಲ್ಲ
ಪ್ರ: ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರದ ಬಗ್ಗೆ?
ಎಚ್.ಸಿ.ಎಂ: ಇದು ಕೆಲವೊಂದು ಹಿತಾಸಕ್ತಿಗಳು ಮಾಡುತ್ತಿರುವಂತಹ ಕುತಂತ್ರ. ಭಾರತದ ಮೂಲ ಚರಿತ್ರೆಯನ್ನು ಅವಲೋಕಿಸಿದಾಗ, ಮೂಲತಃ ಎಲ್ಲರೂ ಮಾಂಸಾಹಾರಿಗಳೇ ಆಗಿದ್ದರು. ಮಾಂಸ ತಿನ್ನದ ಬ್ರಾಹ್ಮಣರು ಬ್ರಾಹ್ಮಣರೇ ಅಲ್ಲ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದರು. ಎಸ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯಲ್ಲಿ ಕೋಣದ ಮಾಂಸವನ್ನು ಹುಡುಕಿಕೊಂಡು ತಿನ್ನಬೇಕು ಎಂದು ಹೇಳಿದ್ದರು. ಹಾಗಾಗಿ, ಮೊಟ್ಟೆ ಕೊಡುವುದಕ್ಕೆ ವಿರೋಧಿಸುವುದು ಆಷಾಡಭೂತಿತನ. ನಾನು ಏನು ತಿನ್ನಬೇಕು ಎನ್ನುವುದು ನನ್ನ ಆಯ್ಕೆ.

ಇದು ಬಹು ಸಂಸ್ಕೃತಿಯ ರಾಷ್ಟ್ರ, ಹಿಂದೂ ದೇಶವಲ್ಲ
ಪ್ರ: ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವ ಸರಕಾರದ ಕ್ರಮದ ಬಗ್ಗೆ?
ಎಚ್.ಸಿ.ಎಂ: ಸರಕಾರ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕೆಲಸವನ್ನು ಮಾಡಬೇಕು. ಮತಾಂತರ ಎನ್ನುವುದು ಸಂವಿಧಾನದಲ್ಲಿರುವ ಮುಕ್ತವಾದ ಅವಕಾಶಗಳು. ನಾನು ಯಾವ ಧರ್ಮದಲ್ಲಿ ಇರಬೇಕು ಎನ್ನುವುದು ನನ್ನ ಸ್ವತಂತ್ರ ಆಯ್ಕೆ, ಧಾರ್ಮಿಕ ಕಾರಣಕ್ಕೋಸ್ಕರ ನನ್ನ ಆಯ್ಕೆಯನ್ನು ಮುಕ್ತವಾಗಿರಿಸಬೇಕು. ಅದೇ ರೀತಿ, ಬಲವಂತವಾಗಿ ನನ್ನ ಧರ್ಮಕ್ಕೆ ಬಾ ಎಂದು ಹೇಳುವ ಅವಕಾಶವೂ ಸಂವಿಧಾನದಲ್ಲಿ ಇಲ್ಲ. ಇದು ಬಹು ಸಂಸ್ಕೃತಿಯ ರಾಷ್ಟ್ರ, ಹಿಂದೂ ದೇಶವಲ್ಲ. ಸಮುದಾಯದ ಸಾಮರಸ್ಯೆಯನ್ನು ಕಾಪಾಡಲು ನಮ್ಮದು ಸಹಿಷ್ಣುತೆಯ ರಾಷ್ಟ್ರ.

ಸಮುದಾಯವನ್ನು ಕಟ್ಟುವ ನಿಲುವನ್ನು ಕಾಂಗ್ರೆಸ್ ಯಾವತ್ತೂ ಹೊಂದಿರುತ್ತದೆ
ಪ್ರ: ಯಡಿಯೂರಪ್ಪನವರ ನೇತೃತ್ವವಿಲ್ಲದ ಬಿಜೆಪಿಗೆ ಎಷ್ಟು ರೇಟಿಂಗ್ ಕೊಡುತ್ತೀರಿ?
ಎಚ್.ಸಿ.ಎಂ: ಯಾರಿದ್ದಾರೋ, ಇಲ್ಲವೋ ರೇಟಿಂಗ್ ಕೊಡಲು ಆಗುವುದಿಲ್ಲ. 1969ನಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ, ಕಾಂಗ್ರೆಸ್ಸಿನ ಸೈದ್ದಾಂತಿಕ ನಿಲುವು, ಕಾರ್ಯ ಯೋಜನೆಗಳು, ಧ್ವನಿ ಇಲ್ಲದವರ, ಕೃಷಿಕರ ಪರವಾಗಿದೆ. ಸ್ವಾಸ್ಥ್ಯ ಸಮುದಾಯವನ್ನು ಕಟ್ಟುವ ನಿಲುವನ್ನು ಕಾಂಗ್ರೆಸ್ ಯಾವತ್ತೂ ಹೊಂದಿರುತ್ತದೆ. ಇವರನ್ನೆಲ್ಲಾ ರಕ್ಷಣೆ ಮಾಡುವ ಕೂಟ ನಮ್ಮಲ್ಲಿದೆ, ಅವರೊಬ್ಬರದ್ದೇ ನೋಡಿಕೊಳ್ಳುವ ಕೂಟ ಆ ಕಡೆಯ ಪಕ್ಷದಲ್ಲಿದೆ. ಹಾಗಾಗಿ, ಯಾರು ಲೀಡರ್ ಇದ್ದಾರೆ ಎನ್ನುವುದು ಮುಖ್ಯವಾಗುವುದಿಲ್ಲ, ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ.

ನನ್ನ ಸೈದ್ದಾಂತಿಕ ನಿಲುವುಗಳು ಗಟ್ಟಿಯಾಗಲು ಕಾರಣ, ಹೋರಾಟದ ಬದುಕು
ಪ್ರ: ನಿಮ್ಮ ಮತ್ತು ಸಿದ್ದರಾಮಯ್ಯನವರ ಬಾಂಧವ್ಯ ಹೇಗಿದೆ?
ಎಚ್.ಸಿ.ಎಂ: ನಾವು ಜೊತೆಯಲ್ಲಿ ಅಣ್ಣತಮ್ಮಂದಿರಾಗಿ ಹುಟ್ಟಲಿಲ್ಲ, ಅದಕ್ಕಿಂತ ಹೆಚ್ಚಾಗಿ ನಮ್ಮಿಬ್ಬರ ನಡುವೆ ಸಂಬಂಧವಿದೆ. ಇದು ನಾಲ್ಕು ದಶಕಗಳಿಂದ ಮುಂದುವರಿದುಕೊಂಡು ಬಂದಿದೆ. ಸಿದ್ದರಾಮಯ್ಯನವರು ನಮ್ಮ ಪ್ರಶ್ನಾತೀತ ನಾಯಕ, ಆದರೆ ನನ್ನ ಸೈದ್ದಾಂತಿಕ ನಿಲುವುಗಳು ಗಟ್ಟಿಯಾಗಲು ಕಾರಣ, ಹೋರಾಟದ ಬದುಕಿನಿಂದ ಮತ್ತು ಕರ್ನಾಟಕದ ದಲಿತ ಸಂಘಟನೆಗಳು. ನಾನು ಶಾಸಕನಾಗಿರಬಹುದು, ಸಚಿವನಾಗಿರಬಹುದು ಅದಕ್ಕೆಲ್ಲಾ ಅವರೇ ಕಾರಣ. ಆದರೆ, ಈ ಮಟ್ಟಿಗೆ ಬೆಳೆದಿದ್ದು ದಲಿತ ಸಂಘಟನೆಗಳಿಂದ. ರಾಜಕೀಯ ಮುಖಂಡನಾಗುವುದು ಬೇರೆ, ಲೀಡರ್ ಆಗುವುದು ಬೇರೆ. ಹಾಗಾಗಿ, ನಮ್ಮಿಬ್ಬರ ಸಂಬಂಧದಲ್ಲಿ ಯಾವತ್ತೂ ಬದಲಾವಣೆಯಾಗುವುದಿಲ್ಲ