• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಂಗೋಂಗ್ ತ್ಸೋ ಮೇಲೆ ಚೀನಾ ಸೇತುವೆ ನಿರ್ಮಿಸುತ್ತಿರುವುದು ಭಾರತಕ್ಕೆ ಎಷ್ಟು ಅಪಾಯಕಾರಿ?

|
Google Oneindia Kannada News

ಭಾರತ ಮತ್ತು ಚೀನಾ ಗಡಿಭಾಗದಲ್ಲಿ ಮತ್ತೆ ಬಿಸಿ ಏರುತ್ತಿದೆ. ಇದಕ್ಕೆ ಕಾರಣವಾಗಿರುವುದು ಲಡಾಖ್‌ನ ಪಾಂಗೋಂಗ್ ತ್ಸೋ ಸರೋವರದ ಮೇಲೆ ನಿರ್ಮಾಣ ಮಾಡಲಾಗಿರುವ ಮತ್ತು ಮಾಡಲಾಗುತ್ತಿರುವ ಅವಳಿ ಸೇತುವೆಗಳು. ಈ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳನ್ನು ಜೋಡಿಸುವ ಎರಡು ಸೇತುವೆಗಳನ್ನು ಚೀನಾ ಕಟ್ಟುತ್ತಿದೆ. ಭಾರತ ಸರಕಾರ ಕೂಡ ಈ ಸೇತುವೆ ನಿರ್ಮಾಣವಾಗುತ್ತಿರುವ ವಿಚಾರವನ್ನು ದೃಢಪಡಿಸಿದೆ.

ಕೇಂದ್ರ ಸರಕಾರ ಮತ್ತು ವಿಪಕ್ಷಗಳ ಮಧ್ಯೆ ಇದು ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿದೆ. ಚೀನಾಗೆ ಹೆದರಿ ಪಲಾಯನ ಮಾಡುತ್ತಿದೆ ಎಂದು ಸರಕಾರವನ್ನು ಛೇಡಿಸಿದೆ. ಇದನ್ನು ಒಪ್ಪದ ಕೇಂದ್ರ ಸರಕಾರ, ಚೀನಾ ನಿರ್ಮಿಸುತ್ತಿರುವ ಸೇತುವೆಗಳು ಅರವತ್ತರ ದಶಕದಲ್ಲೇ ಚೀನಾ ಅತಿಕ್ರಮಣ ಮಾಡಿರುವ ಪ್ರದೇಶದಲ್ಲಿ ಇದೆ ಎಂದು ತಿರುಗೇಟು ನೀಡಿದೆ.

 India China border- ಅತಿಕ್ರಮಿತ ಪ್ರದೇಶದಲ್ಲಿ ಚೀನೀ ನಿರ್ಮಿತ ಸೇತುವೆಗಳು: ಭಾರತ ಸ್ಪಷ್ಟನೆ India China border- ಅತಿಕ್ರಮಿತ ಪ್ರದೇಶದಲ್ಲಿ ಚೀನೀ ನಿರ್ಮಿತ ಸೇತುವೆಗಳು: ಭಾರತ ಸ್ಪಷ್ಟನೆ

ಇದೇ ವೇಳೆ, ಚೀನಾವನ್ನು ಎದುರಿಸಲು ಭಾರತಕ್ಕೆ ಯಾವ ಆಯ್ಕೆ ಉತ್ತಮ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಉಕ್ರೇನ್ ರಷ್ಯಾ ಯುದ್ಧದಿಂದ ಜಗತ್ತಿಗೆ ಮತ್ತೆ ಯುದ್ಧಭೀತಿ ಹೆಚ್ಚುತ್ತಿದೆ. ಅಮೆರಿಕ ದೇಶ ಸಾಧ್ಯವಾದಷ್ಟೂ ದೇಶಗಳನ್ನು ತನ್ನ ಮೈತ್ರಿಕೂಟಕ್ಕೆ ಸೆಳೆದುಕೊಳ್ಳುತ್ತಿದೆ. ಅಮೆರಿಕಕ್ಕೆ ಚೀನಾವನ್ನು ಹಣಿಯಲು ಭಾರತ ಬಹಳ ಮುಖ್ಯ. ಹೀಗಾಗಿ, ಭಾರತವನ್ನು ಎಳೆದುಕೊಳ್ಳಲು ಅಮೆರಿಕ ಅವಿರತ ಪ್ರಯತ್ನ ಮಾಡುತ್ತಿದೆ.

ಪಾಕಿಸ್ತಾನ, ಚೀನಾ ಗಡಿಯಲ್ಲಿ ಭಾರತದ S-400 ಕ್ಷಿಪಣಿ ನಿಯೋಜನೆ ಪಾಕಿಸ್ತಾನ, ಚೀನಾ ಗಡಿಯಲ್ಲಿ ಭಾರತದ S-400 ಕ್ಷಿಪಣಿ ನಿಯೋಜನೆ

ಚೀನಾ ಸೇತುವೆ ಎಲ್ಲಿದೆ?

ಚೀನಾ ಸೇತುವೆ ಎಲ್ಲಿದೆ?

1961ರ ಯುದ್ಧದಲ್ಲಿ ಭಾರತವನ್ನು ಸೋಲಿಸಿದ ಚೀನಿಯರು ಲಡಾಖ್‌ನ ಅನೇಕ ಪ್ರದೇಶಗಳನ್ನು ಅತಿಕ್ರಮಣ ಮಾಡಿದ್ದಾರೆ. ಅದರಲ್ಲಿ ಖುರ್ನಕ್ ಫೋರ್ಟ್ ಪ್ರದೇಶವೂ ಒಂದು. 1961ರ ಯುದ್ಧಕ್ಕೆ ಎರಡು ವರ್ಷ ಮುನ್ನವೇ ಈ ಜಾಗವನ್ನು ಚೀನಾ ಸೇನೆ ವಶಕ್ಕೆ ತೆಗೆದುಕೊಂಡಿತ್ತು. ಇದೇ ಸ್ಥಳದಲ್ಲಿ ಚೀನಾ ಸೇನೆ ಅವಳಿ ಸೇತುವೆ ಕಟ್ಟುತ್ತಿದೆ. ಎರಡು ವರ್ಷಗಳ ಹಿಂದೆ ಕೋವಿಡ್ ಉದ್ಭವವಾದ ಸಂದರ್ಭದಲ್ಲಿ ಗಡಿಯಲ್ಲಿ ಅತಿಕ್ರಮಣಕ್ಕೆ ಮುಂದಾದ ಚೀನಾಗೆ ಭಾರತ ಪ್ರತಿರೋಧ ಒಡ್ಡಿತು. ಇದರಿಂದ ಎರಡೂ ಕಡೆಯ ಸೈನಿಕರ ಮಧ್ಯೆ ಹಲವು ಬಾರಿ ಸಂಘರ್ಷಗಳಾದವು. ಅದಾದ ಬಳಿಕ ಸಂಧಾನಗಳಾಗಿ ಕಳೆದ ವರ್ಷದ ಜನವರಿ ಫೆಬ್ರವರಿಯಲ್ಲಿ ನಿರ್ದಿಷ್ಟ ಸ್ಥಳಗಳಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಯಿತು. ಇದೇ ಸಂದರ್ಭವೆಂದು ಚೀನಾ ಕಳೆದ ವರ್ಷ ಮೊದಲ ಸೇತುವೆ ನಿರ್ಮಿಸಿದೆ. ಈಗ ಅಲ್ಲಿಯೇ ಎರಡನೇ ಸೇತುವೆ ನಿರ್ಮಿಸುತ್ತಿರುವುದು ಬೆಳಕಿಗೆ ಬಂದಿದೆ.

ಈ ಸೇತುವೆ ಮಹತ್ವ

ಈ ಸೇತುವೆ ಮಹತ್ವ

ಭಾರತ ಮತ್ತು ಚೀನಾ ದೇಶಗಳ ಮಧ್ಯೆ ಮೂರು ಸಾವಿರ ಕಿಮೀಗಿಂತಲೂ ಹೆಚ್ಚು ಉದ್ದದ ಗಡಿ ಇದೆ. ತನ್ನ ಭೂಭಾಗವನ್ನು ಸಂರಕ್ಷಿಸಿಕೊಳ್ಳುವುದರ ಜೊತೆಗೆ ಭಾರತವನ್ನು ನಿರಂತರವಾಗಿ ಕೆಣಕಲು ಈ ಗಡಿಭಾಗ ಚೀನಾಗೆ ಬಹಳ ಮುಖ್ಯ. ಭಾರತಕ್ಕೆ ಮುನ್ನಡೆಯಲು ಅವಕಾಶ ಕೊಡದ ಹಲವು ಪ್ರದೇಶಗಳನ್ನು ಚೀನಾ ಗುರುತಿಸಿಕೊಂಡು ಅಲ್ಲಿ ತನ್ನ ಸೇನಾ ಬಲ ಹೆಚ್ಚಿಸುವ ಪ್ರಯತ್ನದಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಅಂತಹ ಆಯಕಟ್ಟಿನ ಪ್ರದೇಶದಲ್ಲಿ ಪಾಂಗೋಂಗ್ ತ್ಸೋ ಸರೋವರವೂ ಒಂದು. ಸೇತುವೆ ಇರುವ ಖುರ್ನಕ್ ಕೋಟೆ ಪ್ರದೇಶವು ಚೀನಾದಿಂದ ಅತಿಕ್ರಮಿತವಾಗಿರುವ ಜಾಗವಾದರೂ ಸದ್ಯ ಇದು ಭಾರತ ಭಾವಿಸಿರುವ ಎಲ್‌ಎಸಿಯ ರೇಖೆಯಿಂದ ಆಚೆಯೇ ಇದೆ. ಆದರೆ, ಚೀನಾ ಇಲ್ಲಿ ಸೇತುವೆ ನಿರ್ಮಿಸುತ್ತಿರುವುದು ಭಾರತಕ್ಕೆ ಚಿಂತೆಯ ವಿಷಯ ಹೌದು.

ಪಾಂಗೋಂಗ್ ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳನ್ನು ಜೋಡಿಸುವ ಈ ಎರಡು ಸೇತುವೆಗಳು ಚೀನಾದ ಪಿಎಲ್‌ಎ ಸೇನೆಯ ನಿಯೋಜನೆಗೆ ಅನುಕೂಲ ಮಾಡಿಕೊಡಲಿವೆ. ಎರಡೂ ದಂಡೆಗಳಲ್ಲಿ ಚೀನೀ ಸೇನಾ ಪಡೆಗಳನ್ನು ಹೆಚ್ಚಿನ ಸಂಖ್ಕೆಯಲ್ಲಿ ನಿಯೋಜಿಸಲು ಸಾಧ್ಯವಾಗುತ್ತದೆ. ಬಹಳ ದುರ್ಗಮ ಹಾದಿಗಳಿರುವ ಈ ಪ್ರದೇಶದಲ್ಲಿ ಚೀನಾ ಬಹಳ ವೇಗವಾಗಿ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿರುವುದು ಗಮನಿಸಿದರೆ ಮುಂದಿನ ದಿನಗಳಲ್ಲಿ ಚೀನಾ ದೊಡ್ಡ ಕಿತಾಪತಿ ಮಾಡುವ ಸಂಭವನೀಯತೆ ಕಾಣುತ್ತಿದೆ. 1961ರ ಸ್ಥಿತಿಯೇ ನೆನಪಿಗೆ ತರುವಂತಿದೆ ಗಡಿಭಾಗದ ಚಟುವಟಿಕೆ.

ಚೀನಾ ವೇಗಕ್ಕೆ ಸಾಟಿಯಾಗದ ಭಾರತ

ಚೀನಾ ವೇಗಕ್ಕೆ ಸಾಟಿಯಾಗದ ಭಾರತ

ಒಂದೆಡೆ ಚೀನಾ ತನ್ನ ಗಡಿಭಾಗದಲ್ಲಿ ಬಹಳ ವೇಗವಾಗಿ ಮೂಲಸೌಕರ್ಯ ವ್ಯವಸ್ಥೆ ಮಾಡುತ್ತಿದೆ. ಇನ್ನೊಂದೆಡೆ ಭಾರತದ ಗಡಿಭಾಗದಲ್ಲಿ ಹೆಚ್ಚು ಚಟುವಟಿಕೆ ಕಾಣುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳು ಹಿಂದಿನ ದಶಕಗಳಿಗೆ ಹೋಲಿಸಿದರೆ ಚುರುಕಾಗಿ ನಡೆಯುತ್ತಿದೆಯಾದರೂ ಚೀನಾಗೆ ಹೋಲಿಸಿದರೆ ಮಂದಗತಿಯಲ್ಲಿ ಸಾಗುತ್ತಿರುವಂತಿದೆ. ಭಾರತದ ಮಿಲಿಟರಿ ಮತ್ತು ನಾಗರಿಕ ಇಲಾಖೆಗಳಲ್ಲಿನ ಔದಾಸೀನ್ಯತೆ ಇದಕ್ಕೆ ಕಾರಣವೆಂದು ಬಗೆಯಲಾಗಿದೆ. ಇದಕ್ಕೆ ಪಕ್ಕಾ ಉದಾಹರಣೆ ಶಿಂಕು ಲಾ (Shinku La) ಬಳಿಯ ಸುರಂಗದ ನಿರ್ಮಾಣ ಕಾರ್ಯ.

ಲಡಾಖ್ ಹಿಮಾಚಲಪ್ರದೇಶ ಗಡಿಭಾಗದಲ್ಲಿರವ ಶಿಂಕು ಲಾ ಅಡಿಯಲ್ಲಿ ಸುರಂಗ ನಿರ್ಮಿಸುವ ಯೋಜನೆ ನಾಲ್ಕು ವರ್ಷಗಳಿಂದ ಬಾಕಿ ಉಳಿದಿದೆ. ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಧ್ಯೆ ಈ ಸುರಂಗ ಯೋಜನೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತು. ಸುರಂಗದ ಉದ್ದ ಎಷ್ಟಿರಬೇಕು, ರಾಷ್ಟ್ರೀಯ ಹೆದ್ದಾರಿಗೆ ಇದು ಜೋಡಿತವಾಗಬೇಕಾ ಎಂಬುದನ್ನು ಈ ಎರಡು ಇಲಾಖೆಗಳು ನಿರ್ಧರಿಸುವಷ್ಟರಲ್ಲಿ ನಾಲ್ಕು ವರ್ಷ ವಿಳಂಬವಾಗಿಹೋಗಿದೆ. ಸದ್ಯ ಈ ಭಿನ್ನಾಭಿಪ್ರಾಯ ಶಮನಗೊಂಡಿದ್ದು ಶಿಂಕು ಲಾ ಸುರಂಗ ಬಹಳ ಶೀಘ್ರದಲ್ಲಿ ನಿರ್ಮಾಣ ಆಗುವ ಸಾಧ್ಯತೆ ಇದೆ. ಆದರೆ, ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಕಾರಣದಿಂದ ದೇಶದ ಹಲವೆಡೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುವುದು ಸಾಮಾನ್ಯ. ಇದು ಗಡಿಭಾಗದಂತಹ ಆಯಕಟ್ಟಿನ ಜಾಗದಲ್ಲಿ ಆದರೆ ದೇಶದ ಭದ್ರತೆಗೆ ಅಪಾಯ ಎನಿಸುತ್ತದೆ. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು. ಭಾರತ ಒಂದು ಹೆಜ್ಜೆ ಇಡುವಷ್ಟರಲ್ಲಿ ಚೀನಾ ಹತ್ತು ಹೆಜ್ಜೆ ಇಟ್ಟಿರುತ್ತದೆ.

ಭಾರತ ಯಾರನ್ನು ನಂಬಬೇಕು?

ಭಾರತ ಯಾರನ್ನು ನಂಬಬೇಕು?

ಭಾರತಕ್ಕೆ ಕಳೆದ ಹಲವು ದಶಕಗಳಿಂದಲೂ ರಷ್ಯಾ ದೇಶವೇ ನಂಬುಗೆಯ ಮಿತ್ರನೆನಿಸಿದೆ. ಭಾರತದ ಬಹುತೇಕ ಶಸ್ತ್ರಾಸ್ತ್ರಗಳನ್ನು ಪೂರೈಸಿರುವುದು ರಷ್ಯಾವೇ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಬೆಂಬಲ ಕೊಡುತ್ತಾ ಬಂದಿರುವುದು ರಷ್ಯಾವೇ. ಇನ್ನು, ಅಮೆರಿಕ ಹಲವು ಸಂದರ್ಭದಲ್ಲಿ ಪಾಕಿಸ್ತಾನದ ಪರ ನಿಂತ ದೇಶ. ಹೀಗಾಗಿ, ಅಮೆರಿಕಕ್ಕಿಂತ ರಷ್ಯಾವೇ ಭಾರತಕ್ಕೆ ನಿಕಟವಾಗಿದೆ. ಆದರೆ, ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಚೀನಾ ಜೊತೆ ರಷ್ಯಾ ಹೆಚ್ಚು ಆಪ್ತವಾಗಿದೆ. ಚೀನಾ ವಿರುದ್ಧ ರಷ್ಯಾ ನಡೆ ಇಡುವ ಸಾಧ್ಯತೆ ಕಡಿಮೆ. ಅಲ್ಲದೆ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ನಿರೀಕ್ಷಿಸಿದಷ್ಟು ಯಶಸ್ಸು ಕಾಣದೇ ಕುಗ್ಗಿಹೋಗುತ್ತಿದೆ.

ಇನ್ನೊಂದೆಡೆ, ಅಮೆರಿಕ ದೇಶ ಪಾಕಿಸ್ತಾನವನ್ನು ದೂರ ಇಟ್ಟು ಭಾರತಕ್ಕೆ ನಿಕಟವಾಗುತ್ತಿದೆ. ಭಾರತ ಮತ್ತು ಅಮೆರಿಕಕ್ಕೆ ಚೀನಾ ಕಾಮನ್ ಶತ್ರುವಾಗಿದೆ. ಹೀಗಾಗಿ, ಚೀನಾವನ್ನು ಕಟ್ಟಿಹಾಕಲು ಕ್ವಾಡ್ (QUAD) ತಂಡವನ್ನು ಅಮೆರಿಕ ಕಟ್ಟಿದೆ. ಈ ಕ್ವಾಡ್ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್ ದೇಶಗಳೂ ಇವೆ. ಮೇ 24ಕ್ಕೆ ಕ್ವಾಡ್ ಸಭೆ ಇದೆ. ಆ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮದ್ಯೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ. ರಷ್ಯಾದಿಂದ ಭಾರತ ಶಸ್ತ್ರಾಸ್ತ್ರ ಖರೀದಿಸುವುದನ್ನು ತಪ್ಪಿಸುವುದು ಅಮೆರಿಕದ ಪ್ರಮುಖ ಉದ್ದೇಶಗಳಲ್ಲಿ ಒಂದು. ಹೀಗಾಗಿ, ಶಸ್ತ್ರಾಸ್ತ್ರ ಪೂರೈಕೆ ವಿಚಾರದಲ್ಲಿ ತನ್ನ ದೇಶದಲ್ಲಿ ಇದ್ದ ಕಠಿಣ ಕಾನೂನನ್ನು ಭಾರತಕ್ಕೋಸ್ಕರ ಅಮೆರಿಕ ಸಡಿಲಗೊಳಿಸಿದೆ. ಅಮೆರಿಕಕ್ಕೆ ಮಿತ್ರರಾಷ್ಟ್ರವಾಗಿರುವ ಫ್ರಾನ್ಸ್ ದೇಶ ಕೂಡ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆಯ ಹಾದಿಯನ್ನು ಸುಗಮಗೊಳಿಸುತ್ತಿದೆ. ಒಂದು ವೇಳೆ ಭಾರತಕ್ಕೆ ರಷ್ಯಾದಿಂದ ಶಸ್ತ್ರಾಸ್ತ್ರ ಪೂರೈಕೆ ಕೊಂಡಿಗೆ ಭಂಗ ಬಂದಲ್ಲಿ ಪಾಶ್ಚಿಮಾತ್ಯ ದೇಶಗಳು ಭಾರತಕ್ಕೆ ಪರ್ಯಾಯ ಆಯ್ಕೆಯಾಗಿವೆ.

ಇದು ಭಾರತಕ್ಕೆ ತುಸು ಸಂದಿಗ್ಧ ಸ್ಥಿತಿ ತಂದಿದೆ. ಅಮೆರಿಕವನ್ನು ಎಷ್ಟರಮಟ್ಟಿಗೆ ನಂಬಬಹುದು, ರಷ್ಯಾದ ಶತ್ರುತ್ವ ಕಟ್ಟಿಕೊಂಡರೆ ಎಷ್ಟು ಅಪಾಯ ಆಗಬಹುದು, ಸಕಲ ಸಂದರ್ಭದಲ್ಲೂ ಭಾರತಕ್ಕೆ ನೆರವಾಗುವ ಇಸ್ರೇಲ್ ದೇಶದ ನಡೆ ಹೇಗೆ ಇರುತ್ತದೆ, ಇವೆಲ್ಲವನ್ನೂ ಭಾರತ ಬಹಳ ಸೂಕ್ಷ್ಮವಾಗಿ ಅವಲೋಕಿಸಿ ತನ್ನ ಮುಂದಿನ ನಡೆಯನ್ನು ಆಯ್ದುಕೊಳ್ಳಲು ಮುಕ್ತ ಮನಸ್ಸು ಹೊಂದಿರುವುದು ಅಗತ್ಯ ಎನ್ನುತ್ತಾರೆ ತಜ್ಞರು.

(ಒನ್ಇಂಡಿಯಾ ಸುದ್ದಿ)

English summary
The construction of a double-span bridge connecting north and south banks of Pangong Tso by Chinese Army in Khurnak Fort area, occupied by PLA in 1959, is part of the frantic military infrastructure upgradation carried out by Beijing across the 3488 km Line of Actual Control (LAC) with India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X