ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿವು ಮುಕ್ತವಾಗಿಸುವಲ್ಲಿ ಅನ್ನದಾತರೇ ಪ್ರಮುಖರು!

By ಪೂರ್ಣಿಮಾ ಜಿ ಆರ್
|
Google Oneindia Kannada News

ಅನ್ನದಾತೋ ಸುಖೀ ಭವ! ಎಂಬ ಮಾತು ಕೇಳುತ್ತಲೇ ಇರುತ್ತೇವೆ. ದೇಶಕ್ಕೆ ಅನ್ನ ನೀಡುವ ರೈತರ ಕೂಗನ್ನು ಕೇಳುವವರಾರು, ಇವರ ಕೂಗಿನ ದ್ವನಿಯನ್ನು ಇತ್ತೀಚಿನ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಣಬಹುದು. ಹಸಿವು ಮತ್ತು ಅನ್ನದಾತನಿಗೆ ಪೂರಕ ಸಂಬಂಧವಿದ್ದು, ಹಸಿವನ್ನು ತಣಿಸಲು ಅನ್ನದಾತ ಬೇಕು ಎಂಬುದನ್ನು ಸಾರಿ ಹೇಳುತ್ತದೆ.

ಹಸಿದವರ ಕೂಗು ಜಗತ್ತಿಗೆ ಕೇಳುವುದಿಲ್ಲ, ಏಕೆಂದರೆ ಹಸಿದವಳಿಗೆ ಜೋರಾಗಿ ಕೂಗಲು ಶಕ್ತಿಯೇ ಇರುವುದಿಲ್ಲ. ಜಗತ್ತಿನ ಪ್ರತಿಯೊಂದು ಜೀವರಾಶಿಗೂ ಆಹಾರ ಅತ್ಯಗತ್ಯ. ಅದರಲ್ಲೂ ಮನುಷ್ಯನ ಮಾನಸಿಕ, ಬೌದ್ಧಿಕ, ದೈಹಿಕ ಬೆಳವಣಿಗೆಗೆ ಪೌಷ್ಠಿಕ ಆಹಾರ ಅತ್ಯಗತ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಪೌಷ್ಠಿಕ ಆಹಾರಕ್ಕಿಂತ ಹೊಟ್ಟೆ ತುಂಬುವಷ್ಟು ಆಹಾರ ಸಿಕ್ಕರೆ ಸಾಕು ಎಂದು ಎಷ್ಟೋ ಜನ ಪರದಾಡುತ್ತಿರುವುದು ಶೋಚನೀಯ.

ವಿಶ್ವಸಂಸ್ಥೆಯ ಜೊತೆಗೂಡಿ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವವನ್ನು ಹಸಿವು ಮುಕ್ತಗೊಳಿಸಲು ಶ್ರಮಿಸುತ್ತಿದೆ. ವಿಶ್ವದ ಬಹುತೇಕ ಎಲ್ಲಾ ದೇಶಗಳು ಹಸಿವು, ಬಡತನವನ್ನು ಹೋಗಲಾಡಿಸಿ, ಎಲ್ಲರೂ ಆರೋಗ್ಯವಂತ ಜೀವನ ನಡೆಸುವತ್ತಾ ಕಾರ್ಯನಿರ್ವಹಿಸುತ್ತಿವೆ. ಸುಸ್ಥಿರ ಅಭಿವೃದ್ಧಿಯ 2ನೇ ಮುಖ್ಯ ಗುರಿಯೇ 'ಹಸಿವು ಮುಕ್ತವಾಗಿಸುವುದು (ZERO HUNGER )'. ಅಂದರೆ 'ಹಸಿವು ಮುಕ್ತ, ಆಹಾರ ಭದ್ರತೆಯನ್ನು ಸಾಧಿಸುವುದು, ಪೌಷ್ಠಿಕತೆಯನ್ನು ಹೆಚ್ಚಿಸುವುದು ಹಾಗೂ ಕೃಷಿಯಲ್ಲಿ ಸುಸ್ಥಿರತೆಯನ್ನು ಪ್ರೋತ್ಸಾಹಿಸುವುದು, ಒಟ್ಟಿನಲ್ಲಿ 2030ರ ಹೊತ್ತಿಗೆ ಹಸಿವು ಮುಕ್ತವನ್ನಾಗಿಸುವ ಗುರಿಯ ಸವಾಲನ್ನು ಹಲವು ದೇಶಗಳು ತೆಗೆದುಕೊಂಡಿವೆ.

ಇದಕ್ಕಾಗಿ ವಿಶ್ವಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಹಲವಾರು ಗುರಿಗಳನ್ನು ನೀಡಿವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ; 2030ರ ಹೊತ್ತಿಗೆ ಹಸಿವನ್ನು ಕೊನೆಗಾಣಿಸುವುದು, ಅದರಲ್ಲೂ ಬಡವರು, ಹೆಚ್ಚಿನ ಅಪಾಯದಲ್ಲಿರುವ ಜನರು ಮತ್ತು ಶಿಶುಗಳನ್ನು ಒಳಗೊಂಡಂತೆ ಎಲ್ಲರಿಗೂ ಸುರಕ್ಷಿತ, ಪೌಷ್ಠಿಕಾಂಶಯುತ ಮತ್ತು ಸಾಕಷ್ಟು ಆಹಾರವನ್ನು ನೀಡುವುದು. ಎಲ್ಲಾ ವಿಧವಾದ ಅಪೌಷ್ಠಿಕತೆಯನ್ನು ಕೊನೆಗಾಣಿಸುವುದು ಹಾಗೆಯೇ ಮಹಿಳೆಯರ ಮತ್ತು ಮಕ್ಕಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಗುರಿಗಳನ್ನು ಸಾಧಿಸುವುದು. ಸುಸ್ಥಿರ ಆಹಾರ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ಸಣ್ಣ ಹಿಡುವಳಿದಾರರ ಆದಾಯವನ್ನು ಉತ್ತಮಗೊಳಿಸುವ ಹಲವು ಗುರಿಗಳು ಇದರಲ್ಲಿ ಸೇರಿವೆ.

ಈ ಗುರಿಗಳತ್ತ ವಿಶ್ವದ ದೇಶಗಳು ಕಾರ್ಯನಿರ್ವಹಿಸುತ್ತಾ ಬಂದಿದ್ದರೂ ಸಹ 'ಹಸಿವು ಮುಕ್ತ' ಗುರಿಯನ್ನು ಸಾಧಿಸುವಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯಬೇಕಾಗಿದೆ. ಇತ್ತೀಚಿನ 'The State of Food Security and Nutrition in the World 2018 ' ವರದಿಯಲ್ಲಿ ಕಂಡುಬಂದಂತೆ, ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವ ಸಂಖ್ಯೆಯು ಹೆಚ್ಚುತ್ತಿದ್ದು, ಇದು 2017ರಲ್ಲಿ ಸುಮಾರು 821 ಮಿಲಿಯನ್ ಜನರು ಅಥವಾ ಒಂಬತ್ತು ಜನರಲ್ಲಿ ಒಬ್ಬರು ಹಸಿವಿನಿಂದ ಬಳಲುತ್ತಿರುವುದು, ದೇಶಗಳನ್ನು ಎಚ್ಚರಿಸುವ ಗಂಟೆಯಾಗಿದೆ.

ಮೋದಿಯನ್ನು ನಂಬಿ ಸಾಲಮನ್ನಾ ಮಾಡುತ್ತಿಲ್ಲ: ಕುಮಾರಸ್ವಾಮಿಮೋದಿಯನ್ನು ನಂಬಿ ಸಾಲಮನ್ನಾ ಮಾಡುತ್ತಿಲ್ಲ: ಕುಮಾರಸ್ವಾಮಿ

ಆಹಾರ ಮಾನವನ ಹಕ್ಕು. ಬದುಕುವ ಹಕ್ಕು ಹೇಗೆ ಎಲ್ಲರಿಗೂ ಇದೆಯೋ ಅದನ್ನು ಸಾಕಾರಗೊಳಿಸಲು ಆಹಾರ ಅತ್ಯಗತ್ಯ. ಮನುಷ್ಯ ದೈಹಿಕವಾಗಿ ಸದೃಢನಾಗಿಲ್ಲದಿದ್ದರೆ ಅವನಿಗೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಸಿವು ಮತ್ತು ಅಪೌಷ್ಠಿಕತೆ ಹೆಚ್ಚಿದೆ ಎಂದರೆ ದೇಶದ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದಲ್ಲದೆ ಆರೋಗ್ಯದ ಮೇಲೆ ಹೆಚ್ಚಿನ ವೆಚ್ಚವನ್ನು ಮಾಡಬೇಕಾಗುತ್ತದೆ. ಆದ್ದರಿಂದ ಪೌಷ್ಠಿಕ ಆಹಾರವು ಮನುಷ್ಯನಿಗೆ ಅವಶ್ಯಕ, ಹಾಗಾಗಿ ಈ ಪೋಷಣೆಯು ತಾಯಿಯ ಗರ್ಭಾವಸ್ಥೆಯಿಂದಲೇ ಆಗಬೇಕು. ಪೌಷ್ಠಿಕ ಆಹಾರವನ್ನು ಸೇವಿಸುವ ತಾಯಿಯು ಆರೋಗ್ಯವಂತ ಮಗುವಿಗೆ ಜನ್ಮನೀಡುತ್ತಾಳೆ. ಇನ್ನೂ ಭಾರತದ ವಿಷಯಕ್ಕೆ ಬಂದರೆ ಅಪೌಷ್ಠಿಕತೆ ಮತ್ತು ಹಸಿವಿನ ಸಮಸ್ಯೆಗೆ ಭಾರತವೇನೂ ಹೊರತಾಗಿಲ್ಲ.

ಇತ್ತೀಚಿನ 2018ರ ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿಯ ಪ್ರಕಾರ 119 ದೇಶಗಳ ಪೈಕಿ 103ನೇ ಸ್ಥಾನವನ್ನು ಪಡೆದಿರುವುದು ಹೆಚ್ಚಿನ ಗಂಭೀರತೆಯನ್ನು ಸೂಚಿಸುತ್ತದೆ. ಹಸಿವು ಮುಕ್ತ ಗುರಿಗೆ ಸಂಬಂಧಿಸಿದಂತೆ ಯುನೈಟೆಡ್ ನೇಷನ್ ನ ಭಾರತಕ್ಕೆ ಸಂಬಂಧಿಸಿದ ಅಂಕಿಅಂಶಗಳು ಭಾರತವನ್ನು ಎಚ್ಚರಿಸುವಂತಿದೆ, ಅವುಗಳೆಂದರೆ: 'ಕುಂಠಿತ ಬೆಳವಣಿಗೆಯನ್ನು (ವಯಸ್ಸಿಗೆ ಇರಬೇಕಾದ ಎತ್ತರಕ್ಕಿಂತ ಕಡಿಮೆ ಎತ್ತರ) ಹೊಂದಿರುವ ವಿಶ್ವದ 10 ಮಕ್ಕಳಲ್ಲಿ 3 ಮಕ್ಕಳು ಭಾರತ ದೇಶದವು, 15 ರಿಂದ 45 ವಯಸ್ಸಿನ ಶೇ.53ರಷ್ಟು ಮಹಿಳೆಯರು ರಕ್ತಹೀನತೆ ಹೊಂದಿದ್ದು, ಇದು ಕಡಿಮೆ ತೂಕದ ಮಗುವಿನ ಜನನ ಮತ್ತು ಕುಂಠಿತ ಬೆಳವಣಿಗೆಗೆ ಕಾರಣವಾಗುತ್ತದೆ, ಶೇ. 80ಕ್ಕಿಂತ ಹೆಚ್ಚಿನ ನವಜಾತ ಶಿಶುಗಳು ಮತ್ತು ಸಣ್ಣ ಮಕ್ಕಳು ಕನಿಷ್ಠ ಸಮತೋಲನ ಆಹಾರವನ್ನು ಪಡೆಯುತ್ತಿಲ್ಲ' ಎಂಬ ಅಂಶ.

ಹಸಿವು ಮುಕ್ತಗೊಳಿಸುವಲ್ಲಿ ಭಾರತ ಉಪಕ್ರಮ

ಹಸಿವು ಮುಕ್ತಗೊಳಿಸುವಲ್ಲಿ ಭಾರತ ಉಪಕ್ರಮ

ಭಾರತವು ಸಹ ಹಸಿವು ಮುಕ್ತ ಮಾಡುವತ್ತಾ ಸಾಕಷ್ಟು ಉಪಕ್ರಮಗಳನ್ನು ಅನುಸರಿಸುತ್ತಿದೆ. ಅವುಗಳೆಂದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಕಾರ್ಯಕ್ರಮದಡಿಯಲ್ಲಿ ಸುಮಾರು 800 ಮಿಲಿಯನ್ ಜನರನ್ನು ಒಳಗೊಂಡ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಭದ್ರತೆಯನ್ನು ಒದಗಿಸುವುದು ಒಂದು ದೊಡ್ಡ ಉಪಕ್ರಮವಾಗಿದೆ. ಇದಕ್ಕೆ ಪೂರಕವಾಗಿ ಕುಟುಂಬದ ಹಿರಿಯ ಮಹಿಳೆಯ ಹೆಸರಿನಲ್ಲಿ ಪಡಿತರ ಕಾರ್ಡ್ ನೀಡುವುದು. ಐಸಿಡಿಎಸ್ ( ಅಂಗನವಾಡಿ ಕೇಂದ್ರ) ಕೆಂದ್ರಗಳ ಮೂಲಕ ಪೌಷ್ಠಿಕ ಆಹಾರವನ್ನು ಗರ್ಭಿಣಿ ಸ್ತ್ರೀಯರಿಗೆ, ಮಕ್ಕಳಿಗೆ ಮತ್ತು ಬಾಣಂತಿಯರಿಗೆ ನೀಡುವುದು, ಹಾಗೆಯೇ ಪ್ರಾಥಮಿಕ ಶಾಲೆಗಳಲ್ಲಿ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದಿರುವುದು ಉತ್ತಮ ಉದಾಹರಣೆಯಾಗಿವೆ.

ಇವುಗಳಲ್ಲದೆ ಆಡಳಿತಾತ್ಮಕ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಪಡಿತರ ಚೀಟಿಯನ್ನು ಡಿಜಿಟಲಿಕರಣಗೊಳಿಸಿರುವುದು, ಆಧಾರ್ ಕಾರ್ಡ್ ಮೂಲಕ ನಿರ್ಧಿಷ್ಟ ಫಲಾನುಭವಿಗೆ ಆಹಾರ ಧಾನ್ಯದ ವಿತರಣೆಯನ್ನು ದೃಢಿಕರಣಗೊಳಿಸಿರುವುದು, ಆನ್‍ಲೈನ್ ಕುಂದುಕೊರತೆ ವ್ಯವಸ್ಥೆ ಇತ್ಯಾದಿ ಉಪಕ್ರಮಗಳು ಬಳಕೆದಾರರನ್ನು ನೇರವಾಗಿ ತಲುಪುವ ಪ್ರಯತ್ನವಾಗಿದೆ. ಹಾಗೆಯೇ National Mission on sustainable Agriculture ತನ್ನ ಸಹಭಾಗಿಧಾರರೊಂದಿಗೆ ಒಂದುಗೂಡಿ ಹವಾಮಾನ ಬದಲಾವಣೆಯನ್ನು ಅಳವಡಿಸುವುದು, ಕೃಷಿ ಮಾರುಕಟ್ಟೆಯ ಡಿಜಿಟಲೀಕರಣ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕೃಷಿಯನ್ನು ಉತ್ತೇಜಿಸುವ ಕ್ರಮಗಳು ಪ್ರಮುಖವಾದವು. ಆದರೆ ಇವುಗಳ ಅನುಷ್ಠಾನವು ಎಷ್ಟರ ಮಟ್ಟಿನ ಯಶಸ್ಸನ್ನು ಹೊಂದಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಸುಳ್ಯದಲ್ಲಿ ಚಕ್ರಬಡ್ಡಿ ಸುಳಿಗೆ ಸಿಲುಕಿದ ಕೃಷಿಕನ ಮೇಲೆ ಖಾಕಿ ದರ್ಪಸುಳ್ಯದಲ್ಲಿ ಚಕ್ರಬಡ್ಡಿ ಸುಳಿಗೆ ಸಿಲುಕಿದ ಕೃಷಿಕನ ಮೇಲೆ ಖಾಕಿ ದರ್ಪ

ಭಾರತ ಹಸಿವು ಮುಕ್ತವಾಗಿಲ್ಲ!

ಭಾರತ ಹಸಿವು ಮುಕ್ತವಾಗಿಲ್ಲ!

ಇಷ್ಟೇಲ್ಲಾ ಉಪಕ್ರಮಗಳನ್ನು ಸರ್ಕಾರವು ಕೈಗೊಂಡಿದ್ದರೂ ಸಹ ಭಾರತವು ಹಸಿವು ಮುಕ್ತ ದೇಶವಾಗಿಲ್ಲ, ಇದಕ್ಕೆ ಆರ್ಥಿಕ ಅಸಮಾನತೆಯು ಸಹ ಒಂದು ಪ್ರಮುಖ ಕಾರಣ. 2012ವಿಶ್ವ ಬ್ಯಾಂಕ್‍ನ ವರದಿಯ ಪ್ರಕಾರ ಭಾರತದಲ್ಲಿ ಸುಮಾರು 27 ಕೋಟಿ ಬಡವರಿದ್ದಾರೆ, ಪ್ರತಿ 5 ಜನರಲ್ಲಿ ಒಬ್ಬರು ಬಡವರು. ಹಾಗೆಯೇ ಶೇ.80ರಷ್ಟು ಬಡವರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು, ಬಡತನದ ದರವು ಗ್ರಾಮೀಣ ಪ್ರದೇಶದಲ್ಲಿ ಶೇ.25ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ.14ರಷ್ಟಿದೆ. ಹಾಗೆಯೇ ಬಡವರು ತಮ್ಮ ಆದಾಯದ ಶೇ.56ರಷ್ಟನ್ನು ಆಹಾರದ ಮೇಲೆ, ಶೇ.6ರಷ್ಟು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಖರ್ಚು ಮಾಡುತ್ತಾರೆ.

ಇದನ್ನು ಗಮನಿಸಿದರೆ ತಮ್ಮ ದುಡಿಮೆಯ ಅರ್ಧಕ್ಕಿಂತಲೂ ಹೆಚ್ಚು ಆದಾಯವು ಆಹಾರಕ್ಕೆ ಖರ್ಚಾದರೆ ಉಳಿದ ಹಣದಲ್ಲಿ ಇತರೆ ಬೆಳವಣಿಗೆ ಮಾಡಲು ಹೇಗೆ ಸಾಧ್ಯ? ಆಹಾರ -ಆರೋಗ್ಯ-ಶಿಕ್ಷಣ-ಅಭಿವೃದ್ಧಿ ಒಂದಕ್ಕೊಂದು ಪೂರಕ ಸಂಬಂಧವನ್ನು ಹೊಂದಿದ್ದು, ಇವುಗಳು ಪರಸ್ಪರ ಅವಲಂಬಿಗಳಾಗಿದ್ದು, ಒಂದರ ಅಬಿವೃದ್ಧಿಯು ಇನ್ನೊಂದಕ್ಕೆ ಬೆಂಬಲವಾಗಿರುತ್ತದೆ ಆದ್ದರಿಂದ ಪ್ರಮಾಣಾನುಸಾರ ಖರ್ಚು ಮಾಡಬೇಕಾಗುತ್ತದೆ. ಹಾಗೆಯೇ ಇತ್ತೀಚಿನ ಆರ್ಥಿಕ ಸಮೀಕ್ಷೆ 2018ರಲ್ಲಿ ತಿಳಿಸಿರುವಂತೆ ಶೇ50ರಷ್ಟು ಉದ್ಯೋಗಸ್ಥರು ಕೃಷಿಕ್ಷೇತ್ರದಲ್ಲಿ ತೊಡಗಿದ್ದು, ಒಟ್ಟು ದೇಶಿಯ ಉತ್ಪನ್ನಕ್ಕೆ ಶೇ.17ರಿಂದ 18ರಷ್ಟು ಕೊಡುಗೆಯನ್ನು ನೀಡುತ್ತಿದೆ. ಸಂಪ್ರದಾಯಿಕ ಕೃಷಿ ಪದ್ಧತಿ, ಹವಮಾನದ ವೈಪರತ್ಯ, ಸಾಲದ ಭಾದೆ, ಆಧುನಿಕ ಕೃಷಿ ವಿಧಾನವನ್ನು ಬಳಸದೆ ಇರುವುದು, ಕೃಷಿಕರ ನಗರ ವಲಸೆ ಸಹ ಕೃಷಿಯಲ್ಲಿ ಕಡಿಮೆ ಉತ್ಪನ್ನಕ್ಕೆ ಕಾರಣವಾಗಿರಬಹುದು.

ಡಿಸೆಂಬರ್ 10ರಂದು ಬೃಹತ್ ರೈತ ಸಮಾವೇಶ : ಬಿಜೆಪಿ ಡಿಸೆಂಬರ್ 10ರಂದು ಬೃಹತ್ ರೈತ ಸಮಾವೇಶ : ಬಿಜೆಪಿ

ರೈತರ ಸಮಸ್ಯೆಯನ್ನು ಬಗೆಹರಿಸಿ, ಸುಸ್ಥಿರ ಕೃಷಿ ಅಭಿವೃದ್ಧಿಪಡಿಸಿ

ರೈತರ ಸಮಸ್ಯೆಯನ್ನು ಬಗೆಹರಿಸಿ, ಸುಸ್ಥಿರ ಕೃಷಿ ಅಭಿವೃದ್ಧಿಪಡಿಸಿ

ದಿನ ಬೆಳಗಾದರೆ ಕೃಷಿಕರು ಯಾತನೆ ಪಡುತ್ತಿದ್ದಾರೆ, ಭಾರತದಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯನ್ನು ಹೊಂದಿರುವ ರೈತರೇ ಹೆಚ್ಚಿದ್ದಾರೆ, ಇವರುಗಳ ಭೂ ಹಿಡುವಳಿಯ ಪ್ರಮಾಣವನ್ನು ಹೆಚ್ಚಿಸುವ ಜೊತೆಗೆ ಅದಕ್ಕೆ ಅನುಗುಣವಾಗಿ ನೀರಿನ ಸೌಲಭ್ಯವನ್ನು ಹೆಚ್ಚಿಸುವ ಮೂಲಕ ರೈತರನ್ನು ಬಲಪಡಿಸಬೇಕು. ಇನ್ನೂ ಅವರ ಸಮಸ್ಯಗಳಿಗೆ ಬಂದರೆ ಸಾಲಭಾದೆ, ಆತ್ಮಹತ್ಯೆ, ಬೆಳೆನಾಶ, ಸರಿಯಾದ ಬೆಲೆ ಸಿಗದೆ ಇರುವುದು, ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಚರ್ಚೆಯಾಗುತ್ತಿರುವ ಕಬ್ಬಿನ ಹಣದ ಬಾಕಿಗಾಗಿ ನಡೆಯುತ್ತಿರುವ ಪ್ರತಿಭಟನೆ, ಆತ್ಮಹತ್ಯೆ ಇಂತಹ ಯಾವುದೇ ಸಮಸ್ಯೆಗಳು ಕಂಡುಬಂದರೆ ಅದಕ್ಕೆ ರಾಜಕೀಯ ಲೇಪ ಬಳಿದು ಚರ್ಚಿಸುವ ಬದಲು ಆಧುನಿಕ ತಂತ್ರಜ್ಞಾನಧಾರಿತ ಕೃಷಿ ವಿಧಾನ, ಮಾರುಕಟ್ಟೆ, ಬಹುಬೇಗ ಹಾಳಾಗುವ ಹಣ್ಣುತರಕಾರಿಗಳನ್ನು ಶೇಖರಿಸಿಡಲು ಕೊಲ್ಡ್ ಸ್ಟೋರೇಜ್ ಸೆಂಟರ್‍ಗಳ ನಿರ್ಮಾಣ ಮತ್ತು ನಿರ್ವಹಣೆ, ಕೃಷಿಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾನ್ನಾಗಿ ಮಾಡಲು ಕೃಷಿ ಜೊತೆಗೆ ಇತರೆ ಜೀವನೋಪಾಯವನ್ನು ಕಲ್ಪಿಸುವುದು, ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸುಸ್ಥಿರ ಕೃಷಿ ಮತ್ತು ಸಣ್ಣ ಹಿಡುವಳಿದಾರರನ್ನು ಪ್ರೋತ್ಸಾಹಿಸುವುದು ಹಾಗೂ ಆಧುನಿಕ ತಂತ್ರಜ್ಞಾನಾಧಾರಿತ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವ ಕಾರ್ಯವನ್ನು ಹೆಚ್ಚು ಹೆಚ್ಚಾಗಿ ನಡೆಸುವತ್ತಾ ಸರ್ಕಾರ ಯೋಚಿಸಬೇಕಾಗಿದೆ.

ಇನ್ನೂ ಸಾರ್ವಜನಿಕ ಪಡಿತರ ವ್ಯವಸ್ಥೆಯ ವಿತರಣೆ, ಗುಣಮಟ್ಟದ ಬಗ್ಗೆ ಅಧ್ಯಯನ ಮತ್ತು ವರದಿಗಳು ಬಿತ್ತರಿಸುತ್ತಿರುವ ಆಘಾತಕಾರಿ ಅಂಶಗಳನ್ನು ನಾವುಗಳು ಗಮನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೇಲ್ವಿಚಾರಣೆಗಾಗಿ ಇರುವ 'ವಿಜಿಲೆನ್ಸ್ ಕಮಿಟಿ' ಸರಿಯಾಗಿ ಕಾರ್ಯನಿರ್ವಹಿಸಬೇಕು. ಇನ್ನೂ ಕರ್ನಾಟಕ ಸರ್ಕಾರದ 'ಇಂದಿರಾ ಕ್ಯಾಂಟಿನ್' ಎಷ್ಟರ ಮಟ್ಟಿಗೆ ಗುರಿ ಸಾಧಿಸುವಲ್ಲಿ ಕಾರ್ಯನಿರ್ವಹಿಸಿದೆ ಎಂಬುದನ್ನು ನೋಡಬೇಕು.

ಆಹಾರ ಪದಾರ್ಥಗಳನ್ನು ವ್ಯರ್ಥವಾಗುತ್ತಿದೆ!

ಆಹಾರ ಪದಾರ್ಥಗಳನ್ನು ವ್ಯರ್ಥವಾಗುತ್ತಿದೆ!

ವಿಶ್ವಸಂಸ್ಥೆಯ 'ಆಹಾರ ಮತ್ತು ಕೃಷಿ ಸಂಸ್ಥೆ (Food and Agriculture Organisation) -FAO ಯ 2011ರ ವರದಿಯ ಪ್ರಕಾರ ಜಾಗತಿಕವಾಗಿ ವ್ಯರ್ಥವಾಗುತ್ತಿರುವ ನಾಲ್ಕನೇ ಒಂದು ಭಾಗ ಆಹಾರವನ್ನು ಉಳಿಸಿದರೆ ಅದು ವಿಶ್ವದ ಸುಮಾರು 870 ದಶಲಕ್ಷ ಜನರ ಹಸಿವನ್ನು ನೀಗಿಸುತ್ತದೆ ಎಂದು ಅಂದಾಜಿಸಿದೆ. ಇದರಲ್ಲಿ ಅತ್ಯಧಿಕ ಪ್ರಮಾಣವು( ಸುಮಾರು 194.6 ದಶಲಕ್ಷ) ಭಾರತದೇಶದ್ದಾಗಿದೆ. ಹೆಚ್ಚಿನ ಆಹಾರದ ನಷ್ಟವು ಅದರ ಕಟಾವು, ಶೇಖರಣೆ ಮತ್ತು ಸಾಗಾಟದ ಸಂದರ್ಭದಲ್ಲಿ ಆಗುತ್ತದೆ. ಇದು ಆಹಾರವನ್ನು ಪೂರೈಕೆ ಮಾಡುವ ರೈತರಿಗೆ ಹೆಚ್ಚಿನ ಹೊರೆಯಾದರೆ ಅದನ್ನು ಪಡೆಯುವ ಗ್ರಾಹಕರು ಸಹ ಹೆಚ್ಚಿಗೆ ಹಣ ನೀಡಿ ಆಹಾರವನ್ನು ಪಡೆಯಬೇಕಾಗುತ್ತದೆ, ಇದರಿಂದ ಅನಾವಶ್ಯಕವಾಗಿ ಆಹಾರದ ಮೇಲೆ ಹೆಚ್ಚಿನ ವೆಚ್ಚವನ್ನು ಮಾಡಬೇಕಾಗುತ್ತದೆ.

ಹಸಿವನ್ನು ಮುಕ್ತವಾಗಿಸುವುದು ಅಷ್ಟೊಂದು ಸುಲಭವಾದ ಕೆಲಸವೇನಲ್ಲ. ಇದರಲ್ಲಿ ಆಹಾರದ ಪೂರೈಕೆ, ಹಂಚಿಕೆ ಮತ್ತು ಬಳಕೆಯು ಪ್ರಮುಖ ಪಾತ್ರವಹಿಸುತ್ತದೆ. ಆಹಾರದ ಪೂರೈಕೆ ಮತ್ತು ಹಂಚಿಕೆಯಲ್ಲಿ ರೈತರು, ಸರ್ಕಾರ ಮತ್ತು ಇತರೆ ಭಾಗಿಧಾರರು ಪಾತ್ರವಹಿಸಿದರೆ, ಅದನ್ನು ಬಳಸುವಲ್ಲಿ ಗ್ರಾಹಕರು ಪ್ರಮುಖ ಪಾತ್ರವಹಿಸುತ್ತಾರೆ. ಮೊದಲನೆಯದಾಗಿ ಆಹಾರವನ್ನು ವ್ಯರ್ಥ ಮಾಡಬಾರದು, ಅಗತ್ಯಕ್ಕೆ ಅನುಗುಣವಾಗಿ ಆಹಾರವನ್ನು ಬಳಸಬೇಕು, ಈ ಅಭ್ಯಾಸವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಬೇಕು. ಹಾಗೆಯೇ ಸಭೆಸಮಾರಂಭಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಅದನ್ನು ಅಗತ್ಯವಿರುವ ಜನರಿಗೆ ತಲುಪಿಸುವ ಕೆಲಸಗಳನ್ನು ಕೆಲವು ಫುಡ್ ಬ್ಯಾಂಕ್‍ಗಳು ನಿರ್ವಹಿಸುತ್ತಿವೆ, ಇವುಗಳಿಗೆ ನೀಡಬಹುದು ಆದರೆ ಸ್ವಚ್ಚತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಟ್ಟಾರೆಯಾಗಿ ಹೇಳುವುದಾದರೆ ಆಹಾರವಿಲ್ಲದಿದ್ದರೆ ಜೀವವಿಲ್ಲ. ಜೀವಕ್ಕೆ ಆಹಾರ ಅತ್ಯಗತ್ಯ, ಆಹಾರವನ್ನು ವ್ಯರ್ಥ ಮಾಡದೆ ಬಳಸಬೇಕು ಹಾಗೆಯೇ ದೇಶದ ಅನ್ನದಾತರನ್ನು ಬೆಳೆಸಬೇಕು.

English summary
Here is a story wich explains importance of Farmers in everyone's life. And some suggestions to government to improve this field.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X