ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವೇಳೆ ಸಮ್ಮಿಶ್ರ ಸರಕಾರ ಬಿದ್ದರೆ ಶ್ರೇಯಸ್ಸು ಯಾರಿಗೆ ಸಲ್ಲಬೇಕು?

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಸಂಘರ್ಷದ ಫಲವಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಏನಾದರೂ ಅಧಿಕಾರಕ್ಕೆ ಬಂದು ಕುಳಿತರೆ ಅದರ ಶ್ರೇಯಸ್ಸು ಕಮಲ ಪಾಳೆಯದ ಯಾವೊಬ್ಬ ನಾಯಕರಿಗೂ ಸೇರುವುದಿಲ್ಲ. ಬದಲಿಗೆ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.

ಅಂದ ಹಾಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಶುರುವಾಗಿರುವ ತಲ್ಲಣ ಫೈನಲಿ, ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸುತ್ತದೋ? ಇಲ್ಲವೋ? ಅದು ಬೇರೆ ವಿಷಯ. ಆದರೆ ತಮ್ಮ ಟಾರ್ಗೆಟ್ ಈಡೇರುವ ಲಕ್ಷಣ ಕಂಡರೆ ಸಿದ್ದರಾಮಯ್ಯ ಈ ಸರ್ಕಾರವನ್ನು ಉಳಿಸಲೂ ಬಹುದು. ಈಡೇರುವ ಲಕ್ಷಣ ಕಾಣದಿದ್ದರೆ ಉರುಳಿಸಲೂ ಬಹುದು.

ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ತಂತ್ರವೇನು?ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ತಂತ್ರವೇನು?

ಇದಕ್ಕೊಂದು ಕಾರಣವಿದೆ. ಅದೆಂದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಎಂ.ಪಿ. ಸೀಟುಗಳನ್ನು ಗೆಲ್ಲಿಸಿಕೊಂಡು ದಿಲ್ಲಿಗೆ ಹೋಗಬೇಕು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. 1996ರ ಲೋಕಸಭಾ ಚುನಾವಣೆಯಲ್ಲಿ ಹದಿನಾರು ಸೀಟುಗಳನ್ನು ಗೆಲ್ಲಿಸಿಕೊಂಡು ದಿಲ್ಲಿಗೆ ಹೋದ ದೇವೇಗೌಡ ಪ್ರಧಾನಿ ಹುದ್ದೆಗೇರಿದರು. ಈ ಬಾರಿ ಕಾಂಗ್ರೆಸ್ ಪಕ್ಷ ಹತ್ತತ್ತಿರ ಹದಿನೈದು ಸೀಟುಗಳನ್ನಾದರೂ ಗಳಿಸಿದರೆ ರಾಷ್ಟ್ರ ರಾಜಕಾರಣದಲ್ಲಿ ತಮಗೆ ಉಜ್ವಲ ಭವಿಷ್ಯವಿದೆ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.

ಆದರೆ ಅವರ ಲೆಕ್ಕಾಚಾರಕ್ಕೆ ಮಗ್ಗುಲ ಮುಳ್ಳಾಗಿರುವುದು ಜೆಡಿಎಸ್. ಮೊದಲನೆಯದಾಗಿ ಅದರೊಂದಿಗೆ ಸೇರಿ ಸರ್ಕಾರ ರಚಿಸಿರುವುದು ಎಂದರೆ ಬಿಜೆಪಿ ವಿರೋಧಿ ಮತಗಳನ್ನು ಅದರೊಂದಿಗೆ ಸೇರಿ ಹಂಚಿಕೊಳ್ಳುವುದು ಎಂದರ್ಥ.

ಸಿದ್ದರಾಮಯ್ಯ ದಾಳಕ್ಕೆ ದೇವೇಗೌಡರ ಪ್ರತಿದಾಳ, ರಾಹುಲ್ ಗಾಂಧಿ ತಳಮಳ!ಸಿದ್ದರಾಮಯ್ಯ ದಾಳಕ್ಕೆ ದೇವೇಗೌಡರ ಪ್ರತಿದಾಳ, ರಾಹುಲ್ ಗಾಂಧಿ ತಳಮಳ!

ಇದು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮಗೆ ಹನ್ನೆರಡು ಸೀಟು ಕೊಡಬೇಕು ಎಂಬ ಜೆಡಿಎಸ್ ಧೋರಣೆ. ಅಂತಿಮವಾಗಿ ಅದಕ್ಕೆ ಎಂಟರಿಂದ ಒಂಭತ್ತು ಸ್ಥಾನಗಳನ್ನು ಬಿಟ್ಟು ಕೊಡುವ ಅನಿವಾರ್ಯತೆಗೆ ತಳ್ಳುತ್ತದೆ.

ಹೀಗೆ ಜೆಡಿಎಸ್ ಗೆ ಈ ಪ್ರಮಾಣದ ಸೀಟುಗಳನ್ನು ಬಿಟ್ಟುಕೊಟ್ಟರೆ ಅಲ್ಲೆಲ್ಲ ಪಕ್ಷದ ಸಂಘಟನೆಯ ಗತಿ ಏನಾಗಬೇಕು? ಅದೇ ರೀತಿ ಅವರಿಗೆ ಅಷ್ಟು ಸೀಟುಗಳನ್ನು ಬಿಟ್ಟು ಕೊಟ್ಟ ಮೇಲೆ ಕೈ ಪಾಳೆಯದ ಗಳಿಕೆ ಹತ್ತರ ಗಡಿ ಮೀರುವುದು ಕಷ್ಟ.

ಬಿಜೆಪಿ ವಿರುದ್ಧದ ಮತ ಕ್ರೋಢೀಕರಿಸುವ ಲೆಕ್ಕಾಚಾರ

ಬಿಜೆಪಿ ವಿರುದ್ಧದ ಮತ ಕ್ರೋಢೀಕರಿಸುವ ಲೆಕ್ಕಾಚಾರ

ಯಾರೇನೇ ಹೇಳಿದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ಧೋರಣೆಗಳ ವಿರುದ್ಧ ಬಡ, ಮಧ್ಯಮ ವರ್ಗ ಅಸಮಾಧಾನಗೊಂಡಿರುವುದು ನಿಜ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಅದಕ್ಕೆ ಸದ್ಯದ ಉದಾಹರಣೆ. ಉತ್ತರ ಭಾರತದ ರಾಜ್ಯಗಳಲ್ಲೇ ಈ ಪರಿಯ ಹೊಡೆತ ಬಿಜೆಪಿಗೆ ಬಿದ್ದಿದೆ ಎಂದರೆ ದಕ್ಷಿಣದ ರಾಜ್ಯಗಳಲ್ಲಿ ಬೀಳದೆ ಇರುತ್ತದೆಯೇ?

ನಿಶ್ಚಿತವಾಗಿ ಬೀಳುತ್ತದೆ. ಹೀಗಾಗಿ ಬಿಜೆಪಿ ವಿರುದ್ಧ ಇರುವ ಮತಗಳನ್ನು ಕ್ರೋಢೀಕರಿಸಿಕೊಳ್ಳದೆ ಕಾಂಗ್ರೆಸ್ ಗೆ ಭವಿಷ್ಯವಿಲ್ಲ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. ಬಿಜೆಪಿ ವಿರುದ್ಧದ ಮತಗಳನ್ನು ಜೆಡಿಎಸ್ ಕೂಡಾ ಹಂಚಿಕೊಂಡರೆ ಕಾಂಗ್ರೆಸ್ ಪಕ್ಷ ಹೊಟ್ಟೆ ತುಂಬಿಸಿಕೊಳ್ಳುವ ಬದಲು ಬೆರಳು ನೆಕ್ಕಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಜೆಡಿಎಸ್ ಗೆ ಹೆಚ್ಚಿನ ಸೀಟುಗಳನ್ನು ಬಿಟ್ಟುಕೊಡಲು ಇರುವ ವಿರೋಧಕ್ಕೆ ಇದೂ ಕಾರಣ.

ರಾಹುಲ್ ಗಾಂಧಿ ಆತಂಕವೇ ಬೇರೆ

ರಾಹುಲ್ ಗಾಂಧಿ ಆತಂಕವೇ ಬೇರೆ

ಆದರೆ ಜೆಡಿಎಸ್ ಜತೆಗಿನ ಸಂಬಂಧವನ್ನು ಹರಿದುಕೊಂಡರೆ ರಾಷ್ಟ್ರ ಮಟ್ಟದಲ್ಲಿ ತೃತೀಯ ಶಕ್ತಿ ತಮ್ಮೊಂದಿಗೆ ಬರಲು ಹಿಂದೆ ಮುಂದೆ ನೋಡುತ್ತದೆ. ಹಿಂದಿನಿಂದಲೂ ತೃತೀಯ ಶಕ್ತಿಯ ಜತೆಗಿನ ಕಾಂಗ್ರೆಸ್ ಟ್ರ್ಯಾಕ್ ರೆಕಾರ್ಡ್ ಸರಿಯಿಲ್ಲ. ಹೀಗಾಗಿ ಕರ್ನಾಟಕದಲ್ಲೂ ಜೆಡಿಎಸ್ ಜತೆಗಿನ ಬಾಂಧವ್ಯ ಕಳಚಿಕೊಂಡರೆ ರಾಷ್ಟ್ರ ಮಟ್ಟದಲ್ಲಿ ಕೈ ಪಾಳೆಯ ಹಾನಿ ಅನುಭವಿಸಬೇಕಾಗುತ್ತದೆ ಎಂಬುದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆತಂಕ.

ಅವರ ಈ ಆತಂಕವನ್ನು ಸಿದ್ದರಾಮಯ್ಯ ಬಹುಕಾಲ ಗಮನಿಸುತ್ತಲೇ ಬಂದರು. ಲೋಕಸಭಾ ಚುನಾವಣೆಯ ತನಕವಾದರೂ ಸುಮ್ಮನಿರಿ ಎಂಬ ವರಿಷ್ಠರ ಮಾತಿಗೆ ಕಟ್ಟುಬಿದ್ದು ಮೌನಿಯಾದರು. ಆದರೆ ಕನಿಷ್ಠ ಪಕ್ಷ ಪಕ್ಷದ ಮೇಲೆ ಕಂಟ್ರೋಲು ಇರಲಿ, ಕಳೆದ ಚುನಾವಣೆಯಲ್ಲಿ ಕೈ ಕೊಟ್ಟ ಸೇನಾನಿಗಳನ್ನೆಲ್ಲ ಹೊರಹಾಕಿ, ನಂಬಿಕಸ್ಥ ಸೇನಾನಿಗಳನ್ನು ನೇಮಿಸಿಕೊಂಡು ಚಕ್ರವ್ಯೂಹ ನಿರ್ಮಿಸಲು ಸಜ್ಜಾದರು ಸಿದ್ದರಾಮಯ್ಯ.

ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ!ಕೈ ಗ್ಯಾಂಗಿಗೆ ಸಿದ್ದುವೇ ಚಕ್ರವರ್ತಿ, ಮಿಡ್ಲ್ ಮನ್ನುಗಳಿಗೆ ಫುಲ್ಲು ನಿಶ್ಯಕ್ತಿ!

ಸರಕಾರದ ತಳಕ್ಕೆ ಜಾಕು ಹಾಕಿ ಎತ್ತೇಬಿಟ್ಟರು ಸಿದ್ದು

ಸರಕಾರದ ತಳಕ್ಕೆ ಜಾಕು ಹಾಕಿ ಎತ್ತೇಬಿಟ್ಟರು ಸಿದ್ದು

ಇತ್ತೀಚಿನ ಸಂಪುಟ ಪುನರ್ರಚನೆಗೆ ಇದೇ ಮುಖ್ಯ ಕಾರಣ. ವಾಸ್ತವವಾಗಿ ಉಪಮುಖ್ಯಮಂತ್ರಿ ಪರಮೇಶ್ವರ ಅವರಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತನಕ ಹಲವರು, ಯಾವ ಕಾರಣಕ್ಕೂ ಸಚಿವ ಸಂಪುಟ ಪುನರ್ರಚನೆ ಬೇಡ. ಲೋಕಸಭಾ ಚುನಾವಣೆಯ ತನಕ ಸುಮ್ಮನಿದ್ದು ಬಿಡೋಣ ಎಂದಿದ್ದರು.

ಸಂಪುಟ ಪುನರ್ರಚನೆಯ ಮೂಲಕ ಗೊಂದಲವೆದ್ದರೆ ಸಮಸ್ಯೆಯಾಗುತ್ತದೆ ಎಂಬುದು ಅವರ ಯೋಚನೆ. ಇದೇ ಅಭಿಪ್ರಾಯವನ್ನು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ರಾಹುಲ್ ಗಾಂಧಿ ಅವರ ಎದುರು ವ್ಯಕ್ತಪಡಿಸಿದ್ದರು.

ಆದರೆ ಸರ್ಕಾರದ ತಳಕ್ಕೆ ಜಾಕು ಹಾಕದಿದ್ದರೆ ಮೇಲ್ಮಟ್ಟದಲ್ಲಿ ಯಾವ ಪರಿಣಾಮಗಳೂ ಕಾಣುವುದಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿತ್ತು. ಹೀಗಾಗಿ ಹೈಕಮಾಂಡ್ ಸಂಪುಟ ಪುನರ್ರಚನೆ ವಿಷಯದಲ್ಲಿ ಅನುಮಾನ ವ್ಯಕ್ತಪಡಿಸಿದರೂ, ಏನೂ ಆಗುವುದಿಲ್ಲ. ಎಲ್ಲ ನಮ್ಮವರೇ ಅಲ್ಲವಾ? ಎಂದು ಅದನ್ನು ಸಿದ್ದರಾಮಯ್ಯ ಸುಮ್ಮನಾಗಿಸಿದರು.

ದಿನದಿಂದ ಬಲಿಷ್ಠವಾಗುತ್ತಿರುವ ಸಿದ್ದರಾಮಯ್ಯ

ದಿನದಿಂದ ಬಲಿಷ್ಠವಾಗುತ್ತಿರುವ ಸಿದ್ದರಾಮಯ್ಯ

ಅಷ್ಟೇ ಅಲ್ಲ, ಸಂಪುಟ ಪುನರ್ರಚನೆಯ ನಂತರ ಖಾತೆಗಳ ಹಂಚಿಕೆಯಿಂದ ಹಿಡಿದು, ನಿಗಮ ಮಂಡಳಿಗಳ ನೇಮಕಾತಿ ವಿಷಯದವರೆಗೆ ಎಲ್ಲೆಡೆ ತಮ್ಮ ಕೈ ಹಾಕಿ ಟೋಟಲ್ ಪಿಕ್ಚರ್ ಅನ್ನೇ ಚೇಂಜ್ ಮಾಡಿದರು. ಅಲ್ಲಿಗೆ ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ಅಗತ್ಯವಾದ ಚಕ್ರವ್ಯೂಹವನ್ನು ನಿರ್ಮಿಸಲು ಅವರೇನು ಯೋಚಿಸಿದ್ದರೋ? ಆ ಯೋಚನೆ ಸಾಕಾರವಾಗತೊಡಗಿತು.

ಸಂಪುಟ ಪುನಾರಚನೆಯಲ್ಲಿ ಸಿದ್ದರಾಮಯ್ಯ ಹೇಳಿದಂತೆಯೇ ಎಲ್ಲ ನಡೆದಿದೆ. ಯಾರ್ಯಾರನ್ನು ಎಲ್ಲೆಲ್ಲಿ ಇಡಬೇಕೋ ಅಲ್ಲೇ ಸಿದ್ದು ಇಟ್ಟಿದ್ದಾರೆ. ಸಂಪುಟ ಪುನಾರಚನೆಯಲ್ಲಿ ತಮ್ಮ ತಾಕತ್ತು ಏನೆಂಬುದನ್ನು ಸಿದ್ದು ತಮ್ಮ ವಿರೋಧಿಗಳಿಗೆ ತೋರಿಸಿದ್ದರು. ದಿನದಿಂದ ದಿನಕ್ಕೆ ಸಿದ್ದರಾಮಯ್ಯ ಬಲಿಷ್ಠವಾಗುತ್ತ ಸಾಗಿದರು.

ಬಿಜೆಪಿ ಪಂಥಾಹ್ವಾನ ಸ್ವೀಕರಿಸಿ, ಸಿದ್ದರಾಮಯ್ಯರಿಂದ ಟ್ವೀಟ್!ಬಿಜೆಪಿ ಪಂಥಾಹ್ವಾನ ಸ್ವೀಕರಿಸಿ, ಸಿದ್ದರಾಮಯ್ಯರಿಂದ ಟ್ವೀಟ್!

ಜೆಡಿಎಸ್ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ

ಜೆಡಿಎಸ್ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ

ಯಾವಾಗ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಸಾಕಾರವಾಗತೊಡಗಿತೋ? ಆಗ ಜೆಡಿಎಸ್ ಪಾಳೆಯದ ವರಿಷ್ಠರಿಗೆ ಅಸಮಾಧಾನ ಶುರುವಾಯಿತು. ಮುಂದಿನ ಚುನಾವಣೆಯಲ್ಲಿ ಕೈ ಪಾಳೆಯದ ಬಲ ತಮಗೆ ದಕ್ಕಿದರೆ, ಇರುವ ಶಕ್ತಿಯ ಜತೆ ಸೇರಿ ಐದರಿಂದ ಆರು ಎಂ.ಪಿ.ಸೀಟುಗಳನ್ನು ಗೆಲ್ಲುವ ಲೆಕ್ಕಾಚಾರ ಅದಕ್ಕಿದೆ.

ಆದರೆ ಸರ್ಕಾರದ ಮಟ್ಟದಲ್ಲಿ ಸಿದ್ದರಾಮಯ್ಯ ಪವರ್ ಫುಲ್ಲಾದರೆ, ತಾವಂದುಕೊಂಡ ರೀತಿಯಲ್ಲಿ ಏನೂ ನಡೆಯುವುದಿಲ್ಲ ಎಂಬ ಲೆಕ್ಕಾಚಾರ ಹಾಕಿದ್ದೇ ದೇವೇಗೌಡ ಹಾಗೂ ಕುಮಾರಸ್ವಾಮಿ ತಮ್ಮದೇ ಲೆಕ್ಕಾಚಾರಕ್ಕೆ ಬಂದರು. ಗಮನಿಸಬೇಕಾದ ವಿಷಯವೆಂದರೆ, ದಿಲ್ಲಿಯ ಬಿಜೆಪಿ ಬಾಗಿಲು ಜೆಡಿಎಸ್ ಪಾಲಿಗೆ ಸದಾ ಕಾಲ ತೆರೆದಿರುವ ವೈಕುಂಠದ್ವಾರ. ಹೀಗಾಗಿ ರಹಸ್ಯವಾಗಿ ಅದು ಈ ದ್ವಾರವನ್ನು ದಾಟಿ ಬರತೊಡಗಿತು.
ಸಿದ್ದರಾಮಯ್ಯ ಅವರಿಗೆ ಬೇಕಾಗಿರುವುದೇ ಅದು. ಸದ್ಯಕ್ಕೆ ನಡೆಯುತ್ತಿರುವ ಆಟದ ಹಿಂದಿರುವ ಪ್ರಮುಖ ಉದ್ದೇಶವೂ ಇದೇ. ಸರ್ಕಾರ ಬೀಳುತ್ತದೆ ಎಂದು ಪದೇ ಪದೇ ಅನ್ನಿಸುವಂತೆ ಮಾಡಿದರೆ, ಜೆಡಿಎಸ್ ನ ಒಂದು ಗುಂಪು ಸೀದಾ ಹೋಗಿ ಬಿಜೆಪಿಯ ಕೈ ಹಿಡಿಯಬಹುದು. ಸರ್ಕಾರ ರಚಿಸಬಹುದು ಎಂಬುದು ಸಿದ್ದರಾಮಯ್ಯ ಅವರ ಯೋಚನೆ.

ಸಿದ್ದರಾಮಯ್ಯಗೆ ಬೇಕಾಗಿರುವುದೇ ಅದು

ಸಿದ್ದರಾಮಯ್ಯಗೆ ಬೇಕಾಗಿರುವುದೇ ಅದು

ಈ ಲೆಕ್ಕಾಚಾರ ಬೇರೆ ಬೇರೆ ಮಾರ್ಗಗಳ ಮೂಲಕ ಈಡೇರಬಹುದು. ಮೊದಲನೆಯದಾಗಿ ಸರ್ಕಾರ ಬೀಳುತ್ತದೆ ಎಂಬ ಭಾವನೆ ದಟ್ಟವಾದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುತ್ತೇವೆ ಎಂದು ಕುಮಾರಸ್ವಾಮಿ ಹೇಳಬಹುದು.

ಆದರೆ ರಾಜ್ಯಪಾಲರು ಅವರ ಶಿಫಾರಸನ್ನು ಒಪ್ಪಬೇಕು ಎಂದೇನಿಲ್ಲ. ಬದಲಿಗೆ ಅವರು ಬಿಜೆಪಿಗೆ ಅಗತ್ಯವಾದ ಸಂಖ್ಯಾಬಲ ಕ್ರೋಢೀಕರಣಗೊಳ್ಳಲಿ ಎಂದು ಕಾಯಬಹುದು. ಇದರ ನಡುವೆ ಜೆಡಿಎಸ್ ನ ಒಂದು ಗುಂಪು ಬಿಜೆಪಿಯ ಜತೆ ಹೋಗಬಹುದು. ಹಾಗೆ ಹೋಗಲಿ ಎಂಬುದು ಸಿದ್ದರಾಮಯ್ಯ ಅವರ ಯೋಚನೆ.

ಹಾಗೇನಾದರೂ ಜೆಡಿಎಸ್ ಹೋಗದಿದ್ದರೆ, ಸಿದ್ದರಾಮಯ್ಯ ಬೆಂಬಲಿಗರ ಗುಂಪೇ ಬಿಜೆಪಿಯ ಕಡೆ ಹೋಗುತ್ತದೆ. ಆ ಮೂಲಕ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕೃತವಾಗಿ ಬಿದ್ದು ಹೋಗುತ್ತದೆ. ಈಗ ಈ ಎರಡರ ಪೈಕಿ ಯಾವುದಾದರೂ ಒಂದು ಕೆಲಸವಾಗಲಿ ಎಂಬುದು ಸಿದ್ದರಾಮಯ್ಯ ಅವರ ಬಯಕೆ.

ಬಿಜೆಪಿ ಬಳಿ ಹೋಗುತ್ತಿರುವವರು ಸಿದ್ದು ಬೆಂಬಲಿಗರು

ಬಿಜೆಪಿ ಬಳಿ ಹೋಗುತ್ತಿರುವವರು ಸಿದ್ದು ಬೆಂಬಲಿಗರು

ಒಂದು ವೇಳೆ ಜೆಡಿಎಸ್ ನ ಒಂದು ಗುಂಪು ಬಿಜೆಪಿ ಜತೆ ಹೋದರೆ, ಜೆಡಿಎಸ್ ಎಷ್ಟೇ ಆದರೂ ಫ್ಯಾಮಿಲಿ ಓರಿಯೆಂಟೆಡ್ ಪಾರ್ಟಿ. ಹೀಗಾಗಿ ಅವರು ಸನ್ನಿವೇಶಕ್ಕೆ ಅನುಗುಣವಾಗಿ ಕೋಮುವಾದಿ ಶಕ್ತಿಯ ಜತೆ ಕೈ ಜೋಡಿಸಬಲ್ಲರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಗಟ್ಟಿಯಾಗಿ ಕೂಗಿ ಹೇಳುವುದು ಸಿದ್ಧುಗೆ ಸುಲಭ.

ಹಾಗಾಗಲಿ ಎಂಬ ಕಾರಣಕ್ಕಾಗಿಯೇ ಅವರೀಗ ಸರ್ಕಾರ ಅತಂತ್ರವಾಗುತ್ತಿದೆ ಎಂಬ ಭಾವನೆ ಬರುವಂತೆ ಮಾಡುತ್ತಿದ್ದಾರೆ. ಈಗ ಬಿಜೆಪಿಯ ಜತೆ ಹೋಗುತ್ತಾರೆ ಎಂದು ಯಾವ ಶಾಸಕರ ಬಗ್ಗೆ ಹೇಳಲಾಗುತ್ತಿದೆಯೋ? ಅವರ ಪೈಕಿ ಬಹುತೇಕರು ಸಿದ್ದರಾಮಯ್ಯ ಅವರ ಬೆಂಬಲಿಗರು ಎಂಬುದನ್ನು ಮರೆಯಬಾರದು.

ಹೀಗಾಗಿ ಜೆಡಿಎಸ್ ಏನಾದರೂ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸದಿದ್ದರೆ ತತ್ಕಾಲದ ಮಟ್ಟಕ್ಕಾದರೂ ತಮ್ಮ ಬೆಂಬಲಿಗರ ಒಂದು ಗುಂಪು ಬಿಜೆಪಿ ಕಡೆ ಹೋಗುವಂತೆ ಅವರು ಮಾಡುತ್ತಾರೆ. ಅದಕ್ಕೂ ಒಂದು ಕಾರಣವಿದೆ. ಅದೆಂದರೆ, ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಸಿದ್ದರಾಮಯ್ಯ ಅವರು ತೆಗೆದುಕೊಂಡ ಹಲವು ನಿರ್ಧಾರಗಳ ಬಗ್ಗೆ ಬಿಜೆಪಿ ಕುದಿಯುತ್ತಿದೆ. ಹೇಗಾದರೂ ಮಾಡಿ ಒಂದು ತನಿಖೆ ನಡೆಯುವಂತೆ ಮಾಡಿದರೆ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವುದು ಸುಲಭ ಎಂದು ಲೆಕ್ಕ ಹಾಕಿದೆ.

ಸಿದ್ದರಾಮಯ್ಯ ಆಸೆ ಕೈಗೂಡುವುದಾ?

ಸಿದ್ದರಾಮಯ್ಯ ಆಸೆ ಕೈಗೂಡುವುದಾ?

ಹೀಗಾಗಿ ಕುಮಾರಸ್ವಾಮಿ ಸರ್ಕಾರವನ್ನು ಅಲುಗಾಡಿಸಿದರೆ ಏಕಕಾಲಕ್ಕೆ ಸಿದ್ದರಾಮಯ್ಯ ಅವರ ಹಲವು ಬಯಕೆಗಳು ಈಡೇರುತ್ತವೆ. ಮೊದಲನೆಯದಾಗಿ ಬಿಜೆಪಿ ವಿರೋಧಿ ಮತಗಳು ಕ್ರೋಢೀಕರಣಗೊಂಡು ಕೈ ಪಾಳೆಯಕ್ಕೆ ಹೆಚ್ಚಿನ ಲಾಭವಾಗುತ್ತದೆ.

ಹಾಗೆಯೇ ಬಿಜೆಪಿಯಿಂದ ಎದುರಾಗಬಹುದಾದ ಸಂಭವನೀಯ ಆಪತ್ತು ನಿವಾರಣೆಯಾಗುತ್ತದೆ. ಹಾಗಾಗಲಿ ಎಂಬುದು ಸಿದ್ದರಾಮಯ್ಯ ಅವರ ಸದ್ಯದ ಯೋಚನೆ. ಹೀಗಾಗಿ ಸರ್ಕಾರ ಬಿದ್ದರೂ, ಉಳಿದರೂ ಅದಕ್ಕೆ ಸಿದ್ದರಾಮಯ್ಯ ಅವರೇ ನೇರ ಕಾರಣ. ಮತ್ತವರು ಉರುಳಿಸುತ್ತಿರುವ ದಾಳವೇ ಕಾರಣ. ಪರಿಣಾಮಗಳೇನೋ ಗೊತ್ತಿಲ್ಲ.

ಆದರೆ ಸರ್ಕಾರ ಉರುಳಿದರೆ, ನಮ್ಮ ಸಿಂಹ ಘರ್ಜನೆಗೆ ಹೆದರಿ ಸಮ್ಮಿಶ್ರ ಸರ್ಕಾರ ಉದುರಿ ಹೋಯಿತು ಎಂದು ಯಾರಾದರೂ ಬಿಜೆಪಿ ನಾಯಕರು ಹೇಳಿಕೊಂಡರೆ ಅದು ಸುಳ್ಳು. ಅಕಸ್ಮಾತ್ ಉದುರದೆ ಹೋದರೆ ನಾವೇ ಉಳಿಸಿದೆವು ಎಂದು ಕೈ ಪಾಳೆಯದ ಯಾರಾದರೂ ನಾಯಕ ರಣಧೀರ ಕಂಠೀರವನ ಪೋಜು ಕೊಟ್ಟರೆ ಅದೂ ಅಪ್ಪಟ ಸುಳ್ಳು.

English summary
If the JDS-Congress govt falls in Karnataka the credit should go to Siddaramaiah, not to Yeddyurappa or any leader. The dramatic developments in Karnataka are happening as per the wish of Siddaramaiah. Political analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X