• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಲಭೂಷಣ್ ಜಾಧವ್ ತೀರ್ಪು ಏನೇನೋ ಅಂದುಕೊಳ್ಳುವ ಮುನ್ನ ಇಲ್ಲೊಮ್ಮೆ ನೋಡಿ

By ಕಿಶೋರ್ ನಾರಾಯಣ್
|

17 ಜುಲೈ 2019ರಂದು ಅಂತರರಾಷ್ಟ್ರೀಯ ನ್ಯಾಯಾಲಯ (ICJ ) ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ತನ್ನ ಅಂತಿಮ ತೀರ್ಪನ್ನು ನೀಡಿತು. 15- 1ರ ಅಂತರದ ಬಹುಮತದಲ್ಲಿ ಭಾರತದ ಪರ ನೀಡಿದ ತೀರ್ಪಿನಲ್ಲಿ, ಪಾಕಿಸ್ತಾನ 1963ರ ವಿಯೆನ್ನಾ ದೂತಾವಾಸ ಸಂಬಂಧಗಳ ಸಮಾವೇಶದನ್ವಯ ಅನೇಕ ನಿಬಂಧನೆಗಳನ್ನು ಮುರಿದಿದೆ ಎನ್ನುವ ತೀರ್ಮಾನಕ್ಕೆ ICJ ನ್ಯಾಯಾಲಯ ಬಂದಿತು.

ಮೇಲ್ನೋಟಕ್ಕೆ ಈ ತೀರ್ಪು ಜಾಧವ್ ಗೆ ಹಾಗೂ ಭಾರತಕ್ಕೆ ಸಿಕ್ಕ ಪ್ರಚಂಡ ಜಯ ಎಂದೆನಿಸಿದರೂ ICJ ನ್ಯಾಯಾಲಯದ ಸೀಮಿತ ವ್ಯಾಪ್ತಿ, ಇತ್ಯರ್ಥವಾಗದೇ ಉಳಿದ ಜಾಧವ್ ಮರಣದಂಡನೆ ಶಿಕ್ಷೆ ಮುಂತಾದ ಅಂಶಗಳಿಂದ ಈ ICJ ತೀರ್ಪನ್ನು ಒಂದು ಸಂಪೂರ್ಣ ಜಯ ಎಂದು ಈಗಲೇ ಬಣ್ಣಿಸುವುದು ಸೂಕ್ತವಲ್ಲ.

ಐಸಿಜೆಯಲ್ಲಿ ಪಾಕ್ ಪರ ನಿಲ್ಲದ ನೆರೆಯ ಚೀನಾ ನ್ಯಾಯಮೂರ್ತಿ

ಪ್ರಕರಣದ ಮಾಹಿತಿ

ಜಾಧವ್ ನನ್ನು ಪಾಕಿಸ್ತಾನದವರು ಗೂಢಚಾರಿ ಎನ್ನುವ ಬಲವಾದ ಶಂಕೆಯ ಮೇರೆಗೆ 3 ಮಾರ್ಚ್ 2016ರಂದು ಬಂಧಿಸಿದರು. ಅವರ ಪ್ರಕಾರ: ಜಾಧವ್ ಪಾಕಿಸ್ತಾನದ ಬಲೂಚಿಸ್ತಾನಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹೊಂಚು ಹಾಕುತ್ತಿದ್ದ. ಆದರೆ ಭಾರತದ ಸರ್ಕಾರ ಈ ದಾವೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿತು.

ಅಲ್ಲದೆ, ಜಾಧವ್ ಗೂಢಚಾರಿಯಾಗಿದ್ದಿದು ನಿಜವಾಗಿದ್ದರೂ ಆತನು ಆಗಲೇ ನಿವೃತ್ತಿ ಹೊಂದಿ, ಇರಾನ್ ದೇಶದಲ್ಲಿ ವ್ಯಾಪಾರ ಮಾಡುತ್ತಿರುವಾಗ, ಪಾಕಿಸ್ತಾನದವರು ಅವನನ್ನು ಅಪಹರಿಸಿದರು ಎನ್ನುವ ಗಂಭೀರ ಆರೋಪ ಮಾಡಿದೆ.

ಅದಕ್ಕಾಗಿಯೇ ಸತ್ಯವನ್ನು ಮುಚ್ಚಿಹಾಕುವ ಸಲುವಾಗಿ ಪಾಕಿಸ್ತಾನದವರು ಜಾಧವ್ ನ ಬಂಧನದ ಬಗ್ಗೆ ಭಾರತಕ್ಕೆ ತಿಳಿಸಿದ್ದೇ 25 ಮಾರ್ಚ್ 2016ರಂದು. ಅಂದರೆ 22 ದಿನಗಳ ನಂತರ. ಬಂಧನದ ವಿಚಾರ ತಿಳಿದಾಗಿನಿಂದಲೂ ಭಾರತವು ಜಾಧವ್ ನನ್ನು ಭೇಟಿ ಮಾಡಬೇಕೆನ್ನುವ ವಿನಂತಿಯನ್ನು ಮಾಡುತ್ತಲೇ ಬಂದಿದ್ದರೂ ಪಾಕಿಸ್ತಾನ ಆ ವಿನಂತಿಯನ್ನು ತಿರಸ್ಕರಿಸುತ್ತಲೇ ಇದೆ.

ಜಾಧವ್ ಪ್ರಕರಣ: ವಿಯೆನ್ನಾ ರಾಜತಾಂತ್ರಿಕ ಒಪ್ಪಂದ ಎಂದರೇನು?

ಸಾಲದ್ದಕ್ಕೆ, ಜಾಧವ್ ಒಬ್ಬ ಗೂಢಚಾರಿ ಎನ್ನುವ ಕಾರಣಕ್ಕೆ ಅವನ ವಿಚಾರಣೆ ಒಂದು ಸೇನಾ ನ್ಯಾಯಾಲಯದಲ್ಲಿ ಗೋಪ್ಯವಾಗಿ ನಡೆಸಲಾಯಿತು. ಹೀಗೆ ನಡೆಸಿದ ವಿಚಾರಣೆಯ ಫಲವಾಗಿ ಆತನಿಗೆ ಮರಣದಂಡನೆಯನ್ನು 10 ಏಪ್ರಿಲ್ 2017ರಂದು ವಿಧಿಸಲಾಯಿತು.

ಅಂದುಕೊಂಡಂತೆಯೇ, ಭಾರತ ಈ ಬೂಟಾಟಿಕೆಯ ವಿಚಾರಣೆಯನ್ನು ತಿರಸ್ಕರಿಸಿದ್ದಲ್ಲದೆ, ಅಂತರರಾಷ್ಟ್ರೀಯ ನ್ಯಾಯಾಲಯ (ICJ) ದಲ್ಲಿ 8 ಮೇ 2017ರಂದು ಒಂದು ಪ್ರಕರಣವನ್ನು ಸಲ್ಲಿಸಿತು. ಪಾಕಿಸ್ತಾನ ಜಾಧವ್ ನ ವಿಚಾರಣೆಯಲ್ಲಿ ದೂತಾವಾಸ ಸಂಬಂಧಗಳ ವಿಚಾರದಲ್ಲಿ ನಡೆದ ವಿಯೆನ್ನಾ ಸಮಾವೇಶದ ಅಡಿಯಲ್ಲಿ ಅನೇಕ ಉಲ್ಲಂಘನೆಗಳನ್ನು ಮಾಡಿತ್ತು ಎನ್ನುವುದು ಭಾರತದ ಆರೋಪ.

ಕೇವಲ ಹತ್ತೇ ದಿನಗಳಲ್ಲಿ ಅಂದರೆ 18 ಮೇ 2017ರಂದು ICJ ಒಂದು ಮಧ್ಯಂತರ ತೀರ್ಪನ್ನು ಹೊರಡಿಸಿ, ಜಾಧವ್ ನ ಶಿಕ್ಷೆಯನ್ನು ಅಂತಿಮ ತೀರ್ಪು ಬರುವವರೆಗೂ ಬದಿಗಿಡಬೇಕೆಂದು ಹೇಳಿತ್ತು.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ

ತೀರ್ಪಿನಲ್ಲಿ ಹೇಳಿದ್ದೇನು?

1. ಪ್ರಾರಂಭದಿಂದಲೂ ICJಗೆ ಈ ಪ್ರಕರಣದ ತನಿಖೆ ಮಾಡುವ ವ್ಯಾಪ್ತಿಯಿಲ್ಲ ಎಂದು ವಾದಿಸುತ್ತಿದ್ದ ಪಾಕಿಸ್ತಾನ, ಅಲ್ಲದೆ ಭಾರತವು ಪಾಕಿಸ್ತಾನ ನಡೆಸಿದ ತನಿಖೆಗೆ ಯಾವುದೇ ರೀತಿಯ ಸಹಾಯ ಒದಗಿಸಲಿಲ್ಲವೆನ್ನುವ ದಾವೆ ಮಾಡಿ, ಭಾರತಕ್ಕೂ ICJ ಬಳಿ ಹೋಗುವ ನೈತಿಕತೆ ಇಲ್ಲವೆಂದು ವಾದಿಸಿತ್ತು. ICJ ಈ ಎರಡೂ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಪಾಕಿಸ್ತಾನದ ಈ ದಾವೆಗಳನ್ನು ತಳ್ಳಿಹಾಕಿತು.

2. ಜಾಧವ್ ಗೆ ದೂತಾವಾಸ ಕಚೇರಿಯ ಸಹಾಯ ಪಡೆಯುವ ಹಕ್ಕನ್ನು ಪಾಕಿಸ್ತಾನ ಉದ್ದೇಶಪೂರ್ವಕವಾಗಿ ತಡೆಹಿಡಿದಿತ್ತು. ಹಾಗಾಗಿ, ಪಾಕಿಸ್ತಾನ ತಕ್ಷಣವೇ ಜಾಧವ್ ಗೆ ಈ ಹಕ್ಕಿನ ಸೌಲಭ್ಯ ದೊರೆಕಿಸಿಕೊಡಬೇಕು ಎಂದು ತೀರ್ಪು ನೀಡಿತು. ಗೂಢಚಾರಿಯಾಗಿರುವ ಕಾರಣಕ್ಕೆ ಜಾಧವ್ ಗೆ ಈ ಸೌಲಭ್ಯ ನೀಡಲಿಲ್ಲವೆನ್ನುವ ಪಾಕಿಸ್ತಾನದ ವಾದವನ್ನು ICJ ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿತು.

ಕುಲಭೂಷಣ್ ಜಾಧವ್ ಪ್ರಕರಣ: ಯಾವಾಗ ಏನೇನಾಯ್ತು? Timeline

3. ಪಾಕಿಸ್ತಾನವು ಜಾಧವ್ ನ ಯಾವುದೇ ಹಕ್ಕುಗಳನ್ನು ಕಿತ್ತುಕೊಳ್ಳಲಾಗುವುದಿಲ್ಲವಾದರೂ ಪಾಕಿಸ್ತಾನ ತನಗೆ ಸೂಕ್ತವೆನಿಸಿದ ರೀತಿಯಲ್ಲಿ ಪ್ರಕರಣದ ತನಿಖೆಯನ್ನು ಮುಂದುವರೆಸಬಹುದು. ಇದರರ್ಥ ಈಗ ನೀಡಿರುವ ಮರಣದಂಡನೆಯ ತೀರ್ಪು ಬದಿಗಿಡಬೇಕೆಂದು ಪಾಕಿಸ್ತಾನಕ್ಕೆ ICJ ಪರೋಕ್ಷವಾಗಿ ತಿಳಿಸಿದೆ.

ತೀರ್ಪಿನಿಂದ ಭಾರತ ಖುಷಿಯಾಗಿಬಹುದೇ?

ಮೇಲ್ನೋಟಕ್ಕೆ ಈ ತೀರ್ಪು 15-1 ಅನುಪಾತದಲ್ಲಿ ಸಿಕ್ಕಿರುವುದರಿಂದ ಭಾರತ ಹಿಗ್ಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಮರಣ ದಂಡನೆ ತೀರ್ಪು ತಳ್ಳಿಹಾಕಿರುವುದರಿಂದ ಜಾಧವ್ ಗೆ ಜೀವದಾನ ಸಿಕ್ಕಿದೆ ಎನ್ನುವಂತೆ ಹೇಳಲಾಗುತ್ತಿದೆ. ಇದೇನೇ ಆದರೂ ಜಾಧವ್ ಇನ್ನೂ ಪಾಕಿಸ್ತಾನದ ಹತೋಟಿಯಲ್ಲೇ ಇದ್ದಾನೆ.

ಭಾರತ ಆಗ್ರಹಿಸಿದಂತೆ ಜಾಧವ್ ನ ಮರಣ ದಂಡನೆಯನ್ನು ತಿರಸ್ಕರಿಸಲಾಗಿಲ್ಲ. ಕೇವಲ ಮುಂದಕ್ಕೆ ಹಾಕಿರುವ ಕಾರಣಕ್ಕೆ ಜೀವದಾನ ಸಿಕ್ಕಿರುವ ಹಾಗೆ ಬಿಂಬಿಸುವುದು ತಪ್ಪು. ಅದು ನಮ್ಮ ದೇಶದ ಮಾಧ್ಯಮಗಳು ಜಾಧವ್ ನ ಕುಟುಂಬಕ್ಕೆ ಮಾಡುತ್ತಿರುವ ಅನ್ಯಾಯ. ಇದರಿಂದಾಗಿ ಆ ಕುಟುಂಬ ಸುಳ್ಳು ನಂಬಿಕೆಗಳನ್ನು ಮನದಲ್ಲಿಟ್ಟುಕೊಂಡು ಇಂದಲ್ಲ ನಾಳೆ ಜಾಧವ್ ಬಂದೆ ಬರುತ್ತಾನೆ ಎನ್ನುವ ಭರವಸೆಯಲ್ಲಿ ಬದುಕುವ ಭ್ರಮೆ ಸೃಷ್ಟಿಸಿದಂತೆ ಆಗುತ್ತದೆ.

ಜೈಹೋ ಕುಲಭೂಷಣ್ ಜಾಧವ್ : ತೀರ್ಪಿನ 8 ಪ್ರಮುಖ ಸಂಗತಿಗಳು

ಹಿಂದಿನ ICJ ತೀರ್ಪುಗಳು

ಈ ಹಿಂದೆಯೂ ICJ ಇದೇ ರೀತಿಯ ತೀರ್ಪುಗಳನ್ನು ನೀಡಿದೆ. 2 ಉದಾಹರಣೆಗಳು ನೆನಪಿಗೆ ಬರುತ್ತವೆ - ಅ. ಲ ಗ್ರಾಂಡ್ ಪ್ರಕರಣ (ಜರ್ಮನಿ ವಿರುದ್ಧ ಅಮೆರಿಕ) ಆ. ಅವೇನ ಪ್ರಕರಣ (ಮೆಕ್ಸಿಕೋ ವಿರುದ್ಧ ಅಮೆರಿಕಾ). ಈ ಎರಡೂ ತೀರ್ಪುಗಳಲ್ಲಿ ICJ ಅಮೆರಿಕಕ್ಕೆ ಪಾಕಿಸ್ತಾನಕ್ಕೆ ನಿರ್ದೇಶಿಸಿದ ಹಾಗೆಯೇ ನಿರ್ದೇಶಿಸಿತ್ತು. ಆದರೂ ಅಮೆರಿಕ ಈ ತೀರ್ಪಿನಂತೆ ನಡೆದುಕೊಳ್ಳಲಿಲ್ಲ.

ಪಾಕಿಸ್ತಾನ ಅರ್ಥೈಸಿಕೊಂಡಿರುವ ಬಗೆಯೇ ಬೇರೆ

ಅಮೆರಿಕದಂತೆಯೇ ಪಾಕಿಸ್ತಾನ ಕೂಡ ICJ ಕೊಟ್ಟ ತೀರ್ಪು ತನ್ನ ವಿರುದ್ಧ ಕೊಟ್ಟ ತೀರ್ಪು ಎಂದೂ ಅದನ್ನು ಜಾರಿಗೆ ತರಲೆಬೇಕೆಂದೂ ಅರ್ಥೈಸಿಕೊಂಡಿಲ್ಲ. ಅಲ್ಲದೆ ಪಾಕಿಸ್ತಾನದ ಮಾಧ್ಯಮದಲ್ಲಂತೂ ಈ ತೀರ್ಪು ಪಾಕಿಸ್ತಾನಕ್ಕೆ ಸಿಕ್ಕ ತೀರ್ಪು ಎನ್ನುವಂತೆಯೇ ವಿಶ್ಲೇಷಿಸಿಕೊಳ್ಳಲಾಗಿದೆ. ಜಾಧವ್ ನನ್ನು ಪಾಕಿಸ್ತಾನ ಬಿಡುಗಡೆ ಮಾಡಿ, ತಾಯ್ನಾಡಿಗೆ ಕಳಿಸಬೇಕೆಂದು ICJಗೆ ಭಾರತ ಒತ್ತಾಯ ಮಾಡಿತ್ತು. ಆದರೆ ICJ ಈ ಬೇಡಿಕೆಗೆ ಸೊಪ್ಪು ಹಾಕಿಲ್ಲ ಎನ್ನುವಂತೆ ಹೇಳಿಕೊಂಡಿದೆ.

ಭಾರತ ಏನು ಮಾಡಬಹುದು?

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತ ಏನು ಮಾಡಬಹುದು? ರಾಯಭಾರಿ ಕಚೇರಿಯವರು ಜಾಧವ್ ನನ್ನು ಭೇಟಿ ಮಾಡಿ, ಅವನಿಂದ ಇಡೀ ಪ್ರಕರಣದ ಬಗ್ಗೆ ಕೂಲಂಕಷವಾಗಿ ತಿಳಿದು, ಆತನಿಗೆ ಪಾಕಿಸ್ತಾನದ ನ್ಯಾಯಾಲಯಗಳಲ್ಲಿ ಹೇಗೆ ತನ್ನ ದೃಷ್ಟಿಕೋನವನ್ನು ಪ್ರಸ್ತುತಪಡಿಸಬೇಕು ಎನ್ನುವುದನ್ನು ಹೇಳಿಕೊಡಬಹುದು.

ಅಲ್ಲದೆ, ಹೊಸದಾಗಿ ಏನಾದರೂ ವಿಷಯಗಳು ಬೆಳಕಿಗೆ ಬಂದರೆ, ಭಾರತ ICJ ಬಳಿಗೆ ಪುನಃ ಹೋಗಬಹುದು. ಆದರೆ ಹಾಗೆ ಆಗುವ ಸಾಧ್ಯತೆಗಳು ಅತಿ ವಿರಳ. ಏಕೆಂದರೆ, ಜಾಧವ್ ನನ್ನು ಏಕಾಂತದಲ್ಲಿ ಭೇಟಿಯಾಗಲು ರಾಯಭಾರಿ ಕಚೇರಿಯವರಿಗೆ ಅನುಮತಿ ಕೊಡಲು ಪಾಕಿಸ್ತಾನ ನಿರಾಕರಿಸುತ್ತದೆ. ಹಾಗಾಗಿ, ಭಾರತಕ್ಕೆ ಈಗಾಗಲೇ ತಿಳಿದಿರುವ ಮಾಹಿತಿಗಿಂತ ಹೆಚ್ಚಿನ ಮಾಹಿತಿ ಸಿಗುವುದು ಗಗನಕುಸುಮವಾಗಬಹುದು.

ಭಾರತ ಏನು ಮಾಡಲಾಗುವುದಿಲ್ಲ?

ಪಾಕಿಸ್ತಾನದ ನ್ಯಾಯಾಂಗದ ಮೇಲೆ ಭಾರತ ಯಾವ ರೀತಿಯ ಒತ್ತಡವನ್ನೂ ಹಾಕಲಾಗದು. ಒಂದು ವೇಳೆ ಒತ್ತಡ ಹಾಕಿದರೆ ಜಾಧವ್ ನ ಪ್ರಕರಣ ಬಲಹೀನವಾಗುವ ಸಾಧ್ಯತೆಗಳೂ ಇರುತ್ತದೆ. ಇದುವರೆಗೂ ಪಾಕಿಸ್ತಾನ ತನ್ನ ಸೇನಾ ನ್ಯಾಯಾಲಯದಲ್ಲಿ ಈ ಪ್ರಕರಣದ ತನಿಖೆಯನ್ನು ನಡೆಸಿತ್ತು.

ಈಗ ICJ ತೀರ್ಪಿನ ನಂತರ ಪಾಕಿಸ್ತಾನ ತನ್ನ ಸಾಮಾನ್ಯ ನ್ಯಾಯಾಲಯದಲ್ಲಿ ಈ ತನಿಖೆಯನ್ನು ನಡೆಸಬಹುದು. ಇದನ್ನು ತಡೆಯುವ ಹಕ್ಕು ICJಗೂ ಇಲ್ಲ, ಭಾರತಕ್ಕೂ ಇಲ್ಲ. ಒಂದು ವೇಳೆ ಈ ಸಾಮಾನ್ಯ ನ್ಯಾಯಾಲಯದಲ್ಲಿಯೂ ಮರಣ ದಂಡನೆಯ ತೀರ್ಪನ್ನೇ ನೀಡಿದರೆ ಆಗಲೂ ಭಾರತದ ಮುಂದೆ ಹೆಚ್ಚು ಆಯ್ಕೆಗಳು ಇರುವುದಿಲ್ಲ. ಆದರೆ ನಡೆಸಿದ ಪ್ರಕರಣದಲ್ಲಿ ಏನಾದರೂ ಲೋಪದೋಷಗಳು ಕಂಡುಬಂದರೆ ಆಗ ಭಾರತ ಪುನಃ ICJ ಬಳಿ ಹೋಗಬಹುದು.

ಇಲ್ಲಿನವರೆಗಿನ ಸಾರಾಂಶ

ಮಾಧ್ಯಮಗಳಲ್ಲಿ ಬಿಂಬಿತವಾದಂತೆ ಜನಸಾಮಾನ್ಯರು ಅಂದುಕೊಂಡಂತೆ ಇದು ಭಾರತಕ್ಕೆ ಸಿಕ್ಕ ಪ್ರಚಂಡ ಜಯವೋ ಪಾಕಿಸ್ತಾನಕ್ಕೆ ಆದ ಭಾರಿ ಮುಖಭಂಗವೋ ಅಲ್ಲ. ಭಾರತಕ್ಕೆ ತಾತ್ಕಾಲಿಕವಾಗಿ ಒಂದು ಸಣ್ಣ ಜಯ ಸಿಕ್ಕಿದೆ. ಕ್ರಮಿಸಬೇಕಾದ ಮಾರ್ಗ ಸಾಕಷ್ಟಿದೆ. ಜಾಧವ್ ಈಗಲೂ ಪ್ರಾಣಾಪಾಯದಿಂದ ದೂರವಾಗಿಲ್ಲ. ಭಾರತ ಈ ನಿಟ್ಟಿನಲ್ಲಿ ತನ್ನ ಎಲ್ಲ ಶಕ್ತಿಯನ್ನೂ ತೊಡಗಿಸಬೇಕಾಗುತ್ತದೆ. ಮಾಧ್ಯಮಗಳು ಅಲ್ಲಿಯವರೆಗೆ ಭಾರತ ಸರ್ಕಾರದ ಸಹಾಯ ಮಾಡಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After International Court of Justice judgement came out in Kulbhushan Jadhav case, there are two kind of interpretation. Here is an unbiased version by expert Kishor Narayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more