ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಅಧಿಕಾರಿಗಳ ರಾಜೀನಾಮೆ; ಸಂವಿಧಾನಕ್ಕೆ ಅಪ್ಪಳಿಸಿದ ಧೂಮಕೇತು?

By ಅನಿಲ್ ಆಚಾರ್
|
Google Oneindia Kannada News

ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಆಗುವುದು ಅದೆಂಥ ತಪಸ್ಸನ್ನು ನಿರೀಕ್ಷೆ ಮಾಡುತ್ತದೆ ಎಂಬುದು ಆ ಪ್ರಯತ್ನದಲ್ಲಿ ಇರುವವರು, ಈಗಾಗಲೇ ಆ ಸಾಧನೆ ಮಾಡಿದವರನ್ನು ಮಾತನಾಡಿಸಿದರೆ ಅಲ್ಪ ಪ್ರಮಾಣದಲ್ಲಿ ಗೊತ್ತಾಗಬಹುದು. ಏಕೆಂದರೆ ನೂರಾ ಮೂವತ್ತು ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಒಂದು ವರ್ಷಕ್ಕೆ 180 ಅಭ್ಯರ್ಥಿಗಳು ಐಎಎಸ್ ಆಗಬಹುದು.

ಭಾರತೀಯ ನಾಗರಿಕ ಸೇವೆಗಳಿಗೆ ಲಕ್ಷಾಂತರ ಮಂದಿ ಪ್ರಯತ್ನ ಪಡುತ್ತಾರೆ. ಅದರಲ್ಲಿ ಯಶಸ್ಸನ್ನು ಪಡೆಯುವವರ ಪ್ರಮಾಣ ಶೇಕಡಾ ಒಂದು ಅಥವಾ ಅದಕ್ಕಿಂತ ಕಡಿಮೆ. ಇಂಥದ್ದೊಂದು ಪರೀಕ್ಷೆಯನ್ನು ದಾಟಿ ಬಂದ ಸಸಿಕಾಂತ್ ಸೆಂಥಿಲ್ ರಂಥವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

"ಪ್ರಜಾಪ್ರಭುತ್ವದ ಅಡಿಗಲ್ಲೇ ಕುಸಿಯುತ್ತಿದೆ; ಇಲ್ಲಿರಲಾರೆ" ಎಂದ ಸಸಿಕಾಂತ್ ಸೆಂಥಿಲ್

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣ ಏನೆಂದರೆ, ಈಚೆಗೆ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು. ಇದು ಇಲ್ಲಿಗೇ ನಿಲ್ಲುವುದಿಲ್ಲ. ಈ ಅಪಾಯ ಮತ್ತೂ ಮುಂದಕ್ಕೆ ವಿಸ್ತರಿಸಬಹುದು ಎಂಬುದು ಕೂಡ ಅವರೇ ಹೇಳಿಕೊಂಡಿರುವ ಆತಂಕ.

IAS Officers Resignation and Comet To Indian Constitution

ಇದೇನು, ಕರ್ನಾಟಕದಲ್ಲಿ ಜಿಲ್ಲಾಧಿಕಾರಿಯೊಬ್ಬರು ಹೀಗೆ ಮಾತನಾಡಲು ಆರಂಭಿಸಿದರಲ್ಲಾ? ಬೇರೆ ಯಾವ ಐಎಎಸ್ ಅಧಿಕಾರಿಗೂ ಹೀಗೆ ಅನ್ನಿಸಿಲ್ಲವೆ ಅಂದುಕೊಳ್ಳುವಂತೆಯೂ ಇಲ್ಲ. ಏಕೆಂದರೆ ಕೇರಳದಲ್ಲಿ ಐಎಎಸ್ ಅಧಿಕಾರಿ ಕಣ್ಣನ್ ಸಹ ಇದೇ ಕಾರಣ ನೀಡಿ, ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಗೂ ಮುನ್ನ ಕಾಶ್ಮೀರದ ಶಾ ಫೈಸಲ್- ಐಎಎಸ್ ಟಾಪರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮೋದಿ ಸರ್ಕಾರದ ನಿರ್ಬಂಧ ವಿರೋಧಿಸಿ ರಾಜೀನಾಮೆ ಇತ್ತ ಐಎಎಸ್ ಅಧಿಕಾರಿಮೋದಿ ಸರ್ಕಾರದ ನಿರ್ಬಂಧ ವಿರೋಧಿಸಿ ರಾಜೀನಾಮೆ ಇತ್ತ ಐಎಎಸ್ ಅಧಿಕಾರಿ

ಯಾವುದೇ ಪಕ್ಷದ ಕಾರ್ಯಕರ್ತರಲ್ಲ
"ಹೇ, ಇವರೆಲ್ಲ ವಿರೋಧ ಪಕ್ಷದ ಬೆಂಬಲಿಗರು" ಎಂದು ಉಡಾಫೆ ಹೊಡೆಯುವುದಕ್ಕೆ ಇವರು ಯಾವುದೇ ಪಕ್ಷದ ಕಾರ್ಯಕರ್ತರಲ್ಲ. ನೂರು ಕೋಟಿಗೂ ಹೆಚ್ಚು ಮಂದಿ ಇರುವ ದೇಶದಲ್ಲಿ ಉತ್ಕೃಷ್ಟ ಗುಣಮಟ್ಟದ ಪರೀಕ್ಷೆ ಪ್ರಕ್ರಿಯೆಗಳನ್ನು ಮುಗಿಸಿ, ವ್ಯಕ್ತಿತ್ವದಿಂದಲೂ ತಾವೆಷ್ಟು ಗಟ್ಟಿ ಎಂದು ಸಾಬೀತು ಮಾಡಿ, ಜನರ ಸೇವೆಗೆ ಬಂದಂಥವರು.

ನಮಗೆ ಒಬ್ಬ ಐಎಎಸ್ ಅಧಿಕಾರಿ ಸಿಗಬೇಕು ಅಂದರೆ, ಅದಕ್ಕೂ ಮುನ್ನ ಅವರ ತರಬೇತಿಗಾಗಿಯೇ ಅಂದಾಜು ಇಪ್ಪತ್ತೈದು ಲಕ್ಷ ರುಪಾಯಿ ಖರ್ಚು ಮಾಡಲಾಗುತ್ತದೆ ಎಂಬ ಒಂದು ಅಂದಾಜಿದೆ. ಎಂಥ ಸನ್ನಿವೇಶದಲ್ಲೂ ಹೇಗೆ ನಿಭಾಯಿಸಬೇಕು ಎಂಬುದನ್ನು ಬಹಳ ಅಂದರೆ ಬಹಳ ಪರಿಣಾಮಕಾರಿಯಾದ ತರಬೇತಿ ಅವರಿಗೆ ಸಿಕ್ಕಿರುತ್ತದೆ.

ಕೇಂದ್ರದ ವಿರುದ್ಧ ಪ್ರತಿಭಟನಾರ್ಥವಾಗಿ ಐಎಎಸ್ ಹುದ್ದೆ ತ್ಯಜಿಸಿದ ಕಾಶ್ಮೀರಿ ಷಾ ಫಸಲ್ಕೇಂದ್ರದ ವಿರುದ್ಧ ಪ್ರತಿಭಟನಾರ್ಥವಾಗಿ ಐಎಎಸ್ ಹುದ್ದೆ ತ್ಯಜಿಸಿದ ಕಾಶ್ಮೀರಿ ಷಾ ಫಸಲ್

ಇನ್ನು ಕೇಂದ್ರ ಲೋಕಸೇವಾ ಆಯೋಗದಿಂದ ಐಎಎಸ್, ಐಪಿಎಸ್ ಗೆ ನಡೆಸುವ ಪರೀಕ್ಷೆಗಳಲ್ಲಿ ಮೊದಲ ಸ್ಥಾನ ಗಳಿಸಿದ ವ್ಯಕ್ತಿ ಕೂಡ ಶೇಕಡಾ ಐವತ್ತರಷ್ಟು ಅಂಕ ಕೂಡ ಪಡೆದಿರುವುದಿಲ್ಲ. ಅಷ್ಟು ಅಂಕ ಪಡೆಯುವುದು ಅಸಾಧ್ಯದ ಮಾತು ಎಂಬುದೇ ಸತ್ಯ. ನಿಜವಾದ ಅರ್ಥದಲ್ಲೂ 'ಪರೀಕ್ಷೆ' ಅದು.

ಎಲ್ಲ ವಿಷಯಗಳ ಬಗ್ಗೆಯೂ ಅವಗಾಹನೆ
ಹೀಗೆ ಆರಿಸಿಬಂದ ಅಧಿಕಾರಿಗಳಿಗೆ ಎಲ್ಲ ವಿಷಯಗಳ ಬಗ್ಗೆಯೂ ಅವಗಾಹನೆ ಇರುತ್ತದೆ. ಸಂವಿಧಾನ ಅವರ ಪಾಲಿಗೆ ಬೆಳಗ್ಗೆ ಎದ್ದ ಕೂಡಲೇ ಹೇಳಿಕೊಳ್ಳುವ, 'ಕರಾಗ್ರೇ ವಸತೇ ಲಕ್ಷ್ಮೀ..' ಎಂದಾಗಿರುತ್ತದೆ. ಅಂಥ ಅಧಿಕಾರಿಗಳು ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ? ಕಾಶ್ಮೀರದ ಕಡೆಗೆ ಬೊಟ್ಟು ತೋರುತ್ತಾರೆ ಈ ಬಗ್ಗೆ ಖಾಸಗಿಯಾಗಿ, ತಮ್ಮ ಹೆಸರನ್ನು ಹೇಳಲು ಬಯಸದ ಅಧಿಕಾರಿಗಳು.

ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದು ಬೇಸರದ ವಿಚಾರ ಅಲ್ಲ. ಆದರೆ ಅಲ್ಲಿ ರಾಜ್ಯಪಾಲರ ಆಡಳಿತ ಇರುವಾಗ, ಚುನಾಯಿತ ಸರಕಾರ ಅಮಾನತಿನಲ್ಲಿ ಇರುವಾಗ ಸಂಸತ್ ನಿಂದ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬಾರದಿತ್ತು. ಜಮ್ಮು- ಕಾಶ್ಮೀರದಲ್ಲಿ ಚುನಾವಣೆ ನಡೆದು, ಅಲ್ಲೊಂದು ಚುನಾಯಿತ ಸರಕಾರ ಅಧಿಕಾರಕ್ಕೆ ಬಂದ ನಂತರ ಆ ಬಗ್ಗೆ ಪರಾಮರ್ಶೆ ಮಾಡಬಹುದಿತ್ತು.

ಹಾಗೆ ಪರಾಮರ್ಶೆ ಮಾಡಬೇಕಿದ್ದರೂ ಅದು ಕೂಡ ಅಲ್ಲಿನ ಶಾಸಕಾಂಗ ಸಭೆಯು ವಿಶೇಷ ಸ್ಥಾನಮಾನ ರದ್ದು ಮಾಡುವಂತೆ ಶಿಫಾರಸು ಮಾಡಿದ ಬಳಿಕವಷ್ಟೇ. ಆದರೆ ದೊಡ್ಡ ಮಟ್ಟದ ಸೈನ್ಯ ನಿಯೋಜನೆ ಮಾಡಿ, ಸ್ಥಳೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿ, ಹೊರ ಜಗತ್ತಿನ ಜತೆ ಸಂಪರ್ಕ ನಿರ್ಬಂಧಿಸಿ ವಿಶೇಷ ಸ್ಥಾನಮಾನ ರದ್ದು ಮಾಡಿದ ಕ್ರಮ ಆಕ್ರೋಶಕ್ಕೆ ಕಾರಣವಾಗಿದೆ.

ಸಸಿಕಾಂತ್ ಸೆಂಥಿಲ್, ಕಣ್ಣನ್, ಶಾ ಫೈಸಲ್ ಇವರೆಲ್ಲ ನಮ್ಮ ಪಾಲಿಗೆ ಸಂಕೇತಗಳಷ್ಟೇ ಅನಿಸುತ್ತಿದೆ. ಧೂಮಕೇತು ಕಾಣಿಸಿಕೊಂಡರೆ ಕೇಡು ಬಂದಂತೆ ಎಂಬುದು ನಮ್ಮ ಪ್ರಾಚೀನರ ನಂಬಿಕೆಯಾಗಿತ್ತು. ಸಂವಿಧಾನಕ್ಕೆ ಆತಂಕ ಎದುರಾಗುವುದು ಸಹ ಅಂಥದ್ದೇ ಮುನ್ಸೂಚನೆ ಅನಿಸುತ್ತಿದೆ.

English summary
Sasikanth Senthil, Kannan Gopinathan and Sha Faisal -3 IAS officers resignation and Indian constitution threat analysed here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X