ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಹುತ್ತರಿ ಆಚರಣೆಗೆ ಮುಹೂರ್ತ ನಿಗದಿ

|
Google Oneindia Kannada News

ಮಡಿಕೇರಿ, ನವೆಂಬರ್ 6: ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ವಿಕೋಪದ ಜತೆಗೆ ಮಾರಕ ಕೊರೊನಾ ಸೋಂಕು ಅಪ್ಪಳಿಸಿದ್ದರಿಂದ ಕಳೆದ ಮೂರು ವರ್ಷಗಳಿಂದ ಬರೀ ಸಮಸ್ಯೆಯಲ್ಲಿಯೇ ಕಾಲ ಕಳೆದ ಕೊಡಗಿನ ಜನ ಈ ಬಾರಿಯಾದರೂ ಕುಟುಂಬದ ಜತೆಗೆ ಸುಗ್ಗಿ ಹಬ್ಬ ಹುತ್ತರಿಯನ್ನು ಸಂಭ್ರಮದಿಂದ ಆಚರಿಸುವತ್ತ ಚಿಂತನೆ ಮಾಡುತ್ತಿದ್ದಾರೆ.

ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ವೇಳೆ ನಾಟಿ ಮಾಡಿದ ಭತ್ತದ ಬೆಳೆ ಹೊಂಬಣ್ಣಕ್ಕೆ ತಿರುಗುವ ಮೂಲಕ ಹುತ್ತರಿ ಹಬ್ಬದ ಆಗಮನಕ್ಕೆ ಕಾಯುತ್ತಿರುವಂತೆ ಭಾಸವಾಗುತ್ತಿದೆ. ಸಾಮಾನ್ಯವಾಗಿ ಹುತ್ತರಿ ಹಬ್ಬವನ್ನು ಪ್ರತಿ ವರ್ಷವೂ ರೋಹಿಣಿ ನಕ್ಷತ್ರದಲ್ಲಿ ಬರುವ ಹುಣ್ಣಿಮೆಂದು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 20ರಂದು ಆಚರಿಸಲಾಗುತ್ತದೆ.

 ಕೊಡಗಿನವರಿಗೆ ಹುತ್ತರಿ ವಿಶೇಷವಾದ ಹಬ್ಬ

ಕೊಡಗಿನವರಿಗೆ ಹುತ್ತರಿ ವಿಶೇಷವಾದ ಹಬ್ಬ

ಕೊಡಗಿನವರಿಗೆ ಇದು ವಿಶೇಷವಾದ ಹಬ್ಬವಾಗಿದೆ. ಧಾನ್ಯಲಕ್ಷ್ಮಿಯಾದ ಭತ್ತವನ್ನು ಗದ್ದೆಯಿಂದ ತಂದು ಮನೆಗೆ ತುಂಬಿಸಿಕೊಳ್ಳುವುದೇ ಪ್ರಮುಖ ಆಚರಣೆಯಾಗಿದೆ. ಹಾಗೆಂದು ಹಬ್ಬದ ದಿನ ಯಾವಾಗ ಬೇಕಾದರೂ ಗದ್ದೆಗೆ ಹೋಗಿ ಕದಿರು ತಂದು ಮನೆಗೆ ತುಂಬಿಸಿಕೊಳ್ಳುವಂತಿಲ್ಲ. ಇದಕ್ಕೂ ನಿಗದಿತ ಸಮಯ ಮತ್ತು ಸಂಪ್ರದಾಯವಿದೆ. ಯಾವಾಗ ಕದಿರು ಕೊಯ್ಯಬೇಕು ಎಂಬುದನ್ನು ಕೊಡಗಿನ ಮಳೆ ದೇವ ಎಂದೇ ಕರೆಯುವ ಕಕ್ಕಬೆಯ ಪಾಡಿ ಶ್ರೀಇಗ್ಗುತಪ್ಪ ಸನ್ನಿಧಾನದಲ್ಲಿ ಅಮ್ಮಂಗೇರಿಯ ಜ್ಯೋತಿಷ್ಯರು ದೇವತಕ್ಕರು, ನಾಡಿನ 13 ತಕ್ಕ ಮುಖ್ಯಸ್ಥರು, ಭಕ್ತ ಜನಸಂಘದ ಪದಾಧಿಕಾರಿಗಳು, ಸೇರಿ, ಹುತ್ತರಿ ಮುಹೂರ್ತವನ್ನು ನಿಶ್ಚಯಿಸುತ್ತಾರೆ.

 ರಾತ್ರಿ 8.35ಕ್ಕೆ ಕದಿರು ತೆಗೆಯಲು ಸೂಕ್ತ

ರಾತ್ರಿ 8.35ಕ್ಕೆ ಕದಿರು ತೆಗೆಯಲು ಸೂಕ್ತ

ಈ ಬಾರಿ ಹುತ್ತರಿ ಹಬ್ಬದ ಆಚರಣೆ ಕುರಿತಂತೆ ಸಮಯವನ್ನು ನಿಗದಿಪಡಿಸಲಾಗಿದ್ದು, ಅದರಂತೆ ನ.20ನೇ ಶನಿವಾರ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅಂದು ರಾತ್ರಿ 7 ಗಂಟೆಗೆ 35 ನಿಮಿಷಕ್ಕೆ ನೆರೆ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ 8 ಗಂಟೆ 35 ನಿಮಿಷಕ್ಕೆ ಗದ್ದೆಯಲ್ಲಿ ಕದಿರು ತೆಗೆಯ 9 ಗಂಟೆ 35 ನಿಮಿಷಕ್ಕೆ ಬೋಜನಕ್ಕೆ ಸಮಯ ನಿಗದಿ ಮಾಡಲಾಗಿದೆ. ಈ ಬಾರಿ ರೋಹಿಣಿ ನಕ್ಷತ್ರ, ಮಿಥುನ ಲಗ್ನದಲ್ಲಿ ಹುತ್ತರಿ ಆಚರಣೆ ನಡೆಯುತ್ತಿದೆ.

 ಧಾನ್ಯ ಲಕ್ಷ್ಮಿಮನೆಗೆ ತುಂಬಿಸಿಕೊಳ್ಳುವ ಸಂಭ್ರಮ

ಧಾನ್ಯ ಲಕ್ಷ್ಮಿಮನೆಗೆ ತುಂಬಿಸಿಕೊಳ್ಳುವ ಸಂಭ್ರಮ

ಮೊದಲಿಗೆ ಹೋಲಿಸಿದರೆ ಹಬ್ಬದ ಆಚರಣೆಯಲ್ಲಿ ಒಂದಷ್ಟು ಬದಲಾವಣೆ ಆಗಿರುವುದಂತು ನಿಜ. ಜತೆಗೆ ಮೊದಲಿನಂತೆ ಗದ್ದೆ ಬಯಲುಗಳಿಲ್ಲ. ಕೃಷಿಕರು ಭತ್ತದ ಕೃಷಿಯಿಂದ ವಿಮುಖರಾಗಿದ್ದಾರೆ. ಆದರೂ ಹಬ್ಬದಾಚರಣೆಗಾಗಿ ಕೆಲವರು ಭತ್ತದ ನಾಟಿ ಮಾಡುವುದು ಕಂಡು ಬರುತ್ತಿದೆ. ಇನ್ನು ಕೆಲವು ಗ್ರಾಮಗಳಲ್ಲಿ ದೇವಾಲಯಕ್ಕೆ ತೆರಳಿ ದೇವರ ಗದ್ದೆಯಿಂದ ಕದಿರನ್ನು ತಂದು ಮನೆಗೆ ಕಟ್ಟಲಾಗುತ್ತದೆ. ಗದ್ದೆ ಹೊಂದಿಲ್ಲದವರು ಗದ್ದೆ ಇರುವವರ ಮನೆಯಿಂದ ಅಥವಾ ದೇವಸ್ಥಾನಗಳಿಂದ ಕದಿರನ್ನು ತಂದು ಮನೆಯ ದೇವರ ಕೋಣೆಯಲ್ಲಿ ಕಟ್ಟುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಮನೆಯಲ್ಲಿರುವ ವಾಹನ, ಆಯುಧಗಳಿಗೆ ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.

 ದೇವರ ಕಟ್ಟು ಹಾಕುವ ಸಂಪ್ರದಾಯ

ದೇವರ ಕಟ್ಟು ಹಾಕುವ ಸಂಪ್ರದಾಯ

ಹುತ್ತರಿ ಹಬ್ಬದ ಪ್ರಯುಕ್ತ ಪೂರ್ವಭಾವಿಯಾಗಿ ಪಾಡಿ ಇಗ್ಗುತ್ತಪ್ಪದ ಆದಿಸ್ಥಳ ಮಲ್ಮ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರ ಕಟ್ಟು ಹಾಕಲಾಗುತ್ತದೆ. ಕಟ್ಟು ಹಾಕಿದ ಬಳಿಕ ಅದನ್ನು ಹುತ್ತರಿ ಹಬ್ಬದ ವೇಳೆ ಸಡಿಲಿಸಲಾಗುತ್ತದೆ. ಅಲ್ಲಿ ತನಕ ನಾಡಿನ ಜನತೆ ಪ್ರಾಣಿವಧೆ ಮತ್ತಿತರೆ ಹಿಂಸೆಯನ್ನು ಮಾಡುವಂತಿಲ್ಲ ಎಂಬ ನಿರ್ಬಂಧವೂ ಇದೆ. ಹಬ್ಬದ ಆಚರಣೆಯನ್ನು ಗಮನಿಸಿದರೆ ಇಲ್ಲಿ ಕೃಷಿ ಮೇಲಿನ ಪ್ರೀತಿ, ದೇವರ ಮೇಲಿನ ಭಕ್ತಿ, ಜಾನಪದದ ಸೊಗಡು, ಆಚಾರ, ವಿಚಾರಗಳು ಎದ್ದು ಕಾಣುತ್ತದೆ.

 ಕೃಷಿ ಮೇಲಿನ ಪ್ರೀತಿಗೆ ಸಾಕ್ಷಿಯಾದ ಹಬ್ಬ

ಕೃಷಿ ಮೇಲಿನ ಪ್ರೀತಿಗೆ ಸಾಕ್ಷಿಯಾದ ಹಬ್ಬ

ಕೊಡಗು ಜಿಲ್ಲೆಯ ಪ್ರಮುಖ ಮತ್ತು ವರ್ಷದ ಕೊನೆಯ ಹಬ್ಬವಾದ ಹುತ್ತರಿಗೆ ಕೊಡಗಿನ ಮೂಲ ನಿವಾಸಿಗಳು ಉದ್ಯೋಗ ನಿಮಿತ್ತ ಹೊರಗೆ ಎಲ್ಲಿಯೇ ಇರಲಿ ಸಾಮಾನ್ಯವಾಗಿ ತಮ್ಮ ಊರಿಗೆ ಬಂದೇ ಬರುತ್ತಾರೆ. ಹಬ್ಬದ ದಿನದಂದು ಕುಟುಂಬದವರೊಡನೆ ಕಲೆತು ಸಂಭ್ರಮಿಸುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ತಾವು ನೆಲೆಸಿದ ಊರುಗಳಲ್ಲಿಯೂ ಹಬ್ಬವನ್ನು ಎಲ್ಲರೂ ಸೇರಿ ಆಚರಿಸುತ್ತಿರುವುದು ಕಂಡು ಬರುತ್ತಿದೆ. ಅದು ಏನೇ ಇರಲಿ ಬೇರೆಲ್ಲೂ ಕಂಡು ಬಾರದ ಈ ಹಬ್ಬ ಕೊಡಗಿನ ಸಂಸ್ಕೃತಿ ಮತ್ತು ಕೃಷಿ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.

Recommended Video

ಅಪ್ಪು ನೆನೆದು ಕಣ್ಣೀರಿಟ್ಟ ತಮಿಳು ನಟ ಸೂರ್ಯ ಭಾವುಕರಾಗಿ ಹೇಳಿದ್ದೇನು? | Oneindia Kannada

English summary
Huttari festival celebration date and time fixed In Kodagu District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X