ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BRTS: ದಶಕದ ಅದ್ವಾನಕ್ಕೆ ಉಪ ರಾಷ್ಟ್ರಪತಿಯಿಂದ ಉದ್ಘಾಟನೆ ಭಾಗ್ಯ!

|
Google Oneindia Kannada News

ಬೆಂಗಳೂರು, ಫೆಬ್ರುವರಿ 1: ಸಾವಿರಾರು ಕೋಟಿ ರುಪಾಯಿ ಸಾರ್ವಜನಿಕ ತೆರಿಗೆ ಹಣವನ್ನು ಬಳಸಿಕೊಂಡು ಅನುಷ್ಠಾನವಾದ ಯೋಜನೆಯೊಂದು ಕಳೆದೊಂದು ದಶಕದಿಂದ ಇನ್ನೂ ಕಾಮಗಾರಿ ಹಂತದಲ್ಲಿಯೇ ಇದೆ. ವಿಶೇಷವೆಂದರೆ ಹತ್ತು ವರ್ಷಗಳಿಂದ ಕಾಮಗಾರಿ ಅಪೂರ್ಣ ಕಂಡಿದ್ದರೂ, ಈ ಯೋಜನೆ ಭಾನುವಾರ ಅದ್ಧೂರಿ ಉದ್ಘಾಟನೆಗೆ ಸಜ್ಜಾಗಿದೆ!

ಇದ್ಯಾವದ್ದಪ್ಪಾ ಅಂತಹ ಮಹಾನ್ ಯೋಜನೆ ಎಂದು ನೀವು ಆಲೋಚನೆ ಮಾಡುತ್ತಿದ್ದರೆ, ಒಮ್ಮೆ ಹುಬ್ಬಳ್ಳಿ ಮಂದಿಯನ್ನು ಈ ಕುರಿತು ವಿಚಾರಿಸಿ ನೋಡಿ. ದೇಶದಲ್ಲೇ ಎರಡನೇ ಯೋಜನೆ ಎಂದೆಲ್ಲಾ ಬಿಲ್ಡಪ್ ತೆಗೆದುಕೊಂಡ ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ ಯೋಜನೆ (BRTS) ಕತೆ- ವ್ಯಥೆ ಇದು.

ನಾಳೆ ಹುಬ್ಬಳ್ಳಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುನಾಳೆ ಹುಬ್ಬಳ್ಳಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

2011 ರಲ್ಲಿ ವಿಶ್ವಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಹುಬ್ಬಳ್ಳಿ ಧಾರವಾಡ ಜನತೆಗೆ ಡಿಸೈನ್ ಡಿಸೈನ್ ಕನಸು ತೋರಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು ಈ ಬಿಆರ್‌ಟಿಎಸ್ ಯೋಜನೆಯನ್ನು. ಹುಬ್ಬಳ್ಳಿ ಧಾರವಾಡ ಜನಪ್ರತಿನಿಧಿಗಳ ದೂರದೃಷ್ಠಿ ಕೊರತೆ ಹಾಗೂ ಬೇಜವಾಬ್ದಾರಿ ನಡವಳಿಕೆಯಿಂದ ಹತ್ತು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

ಹೆಜ್ಜೆ ಹೆಜ್ಜೆಗೂ ಅದ್ವಾನವನ್ನು ಸೃಷ್ಠಿಸಿರುವ ಬಿಆರ್‌ಟಿಎಸ್, ಹುಬ್ಬಳ್ಳಿ ಧಾರವಾಡ ಜನತೆಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ತಳಮಟ್ಟದಲ್ಲಿ ಪರಿಸ್ಥಿತಿ ಹೀಗಿದ್ದರೂ ಈ ಯೋಜನೆಯನ್ನು ಉದ್ಘಾಟಿಸಲು ಇದೇ ಫೆಬ್ರವರಿ 2 ರಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬರುತ್ತಿದ್ದಾರೆ. ಹೀಗಾಗಿ, ಪೂರ್ಣಗೊಳ್ಳದ ಯೋಜನೆಯನ್ನು ಉಪ ರಾಷ್ಟ್ರಪತಿಯವರು ಉದ್ಘಾಟಿಸಬಾರದು ಎಂದು ಹುಬ್ಬಳ್ಳಿ ಧಾರವಾಡದ ಅನೇಕರು ಹಾಗೂ ಸಂಘಟನೆಗಳು ಒತ್ತಾಯಿಸುತ್ತಿವೆ.

ಏನಿದು ಬಿಆರ್‌ಟಿಎಸ್ ಯೋಜನೆ?

ಏನಿದು ಬಿಆರ್‌ಟಿಎಸ್ ಯೋಜನೆ?

ಹುಬ್ಬಳ್ಳಿ ಧಾರವಾಡ ಅವಳಿ ನಗರ ರಾಜಧಾನಿ ಬೆಂಗಳೂರು ನಂತರ ತ್ವರಿತವಾಗಿ ಬೆಳೆಯುತ್ತಿದೆ. 22 ಕಿಲೋ ಮೀಟರ್‌ನ ಹುಬ್ಬಳ್ಳಿ ಧಾರವಾಡ ಕಾರಿಡಾರ್‌ನಲ್ಲಿ ಪ್ರತಿದಿನ ಸರಿಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಮಧ್ಯ ಮೆಟ್ರೋದಂತಹ ತ್ವರಿತ ಸಾರಿಗೆಯನ್ನು ತರಬೇಕು, ಸಂಚಾರ ಸಮಸ್ಯೆಯನ್ನು ಕಡಿಮೆ ಮಾಡಬೇಕು ಎಂಬ ಕೂಗು ಹೆಚ್ಚಾಗಿತ್ತು. ಅಂದಿನ ಬಿಜೆಪಿ ಸರ್ಕಾರ, 2011 ರಲ್ಲಿ ವಿಶ್ವಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಬಿಆರ್‌ಟಿಎಸ್ ಯೋಜನೆ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರಿಸಿತ್ತು. ಇದಕ್ಕಾಗಿ brts ಸಾರಿಗೆ ನಿಗಮವನ್ನು ಸ್ಥಾಪಿಸಲಾಗಿತ್ತು.

120 ಚಿಗರಿ ಬಸ್‌ಗಳು

120 ಚಿಗರಿ ಬಸ್‌ಗಳು

ಯೋಜನೆಯ ಭಾಗವಾಗಿ ಹುಬ್ಬಳ್ಳಿ ಧಾರವಾಡ ನಡುವಿನ 22 ಕಿಲೋ ಮೀಟರ್ ರಸ್ತೆಯನ್ನು ಷಟ್ಪಥಗಳ ಮಾರ್ಗವನ್ನಾಗಿ ಮಾಡಲಾಗಿದೆ. ನಡುವೆ 32 ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 120 ಹವಾ ನಿಯಂತ್ರಿತ ಬಸ್‌ಗಳನ್ನು ಖರೀದಿಸಲಾಗಿದೆ. ಇವುಗಳಿಗೆ 'ಚಿಗರಿ ಬಸ್' ಎಂದು ನಾಮಕರಣ ಮಾಡಲಾಗಿದೆ. ರಸ್ತೆಯ ಮಧ್ಯದ ಚತುಷ್ಪತವನ್ನು ಬಿಆರ್‌ಟಿಎಸ್‌ ಬಸ್‌ಗಳಿಗೆ ಮಾತ್ರ ಮೀಸಲಿಡಲಾಗಿದೆ. ಅಕ್ಕ ಪಕ್ಕದ ತಲಾ ಇಪ್ಪತ್ತು ಅಡಿಯ ರಸ್ತೆಯನ್ನು ಮಿಶ್ರ ಸಂಚಾರ ಪಥವನ್ನಾಗಿ ಮಾಡಲಾಗಿದೆ!

ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಸ್‌ ಬಸ್ ಸೇವೆಗೆ 10 ಬಸ್ ಸೇರ್ಪಡೆಹುಬ್ಬಳ್ಳಿ-ಧಾರವಾಡ ಬಿಆರ್‌ಟಿಸ್‌ ಬಸ್ ಸೇವೆಗೆ 10 ಬಸ್ ಸೇರ್ಪಡೆ

1,100 ಕೋಟಿ ರುಪಾಯಿಯ ಯೋಜನೆ

1,100 ಕೋಟಿ ರುಪಾಯಿಯ ಯೋಜನೆ

ಆರಂಭದಲ್ಲಿ ಈ ಯೋಜನೆಗೆ 600 ಕೋಟಿ ರುಪಾಯಿ ಖರ್ಚಾಗುತ್ತದೆ ಎಂದು ಅಂದಾಜಿಸಿ ಆರಂಭಿಸಲಾಯಿತು. ಯೋಜನೆ ಅದ್ಯಾವ ಘಳಿಗೆಯಲ್ಲಿ ಆರಂಭವಾಯಿತೋ, ಶುರುವಾತಿನಲ್ಲಿಯೇ ಹುಬ್ಬಳ್ಳಿ ಧಾರವಾಡ ಕಾರಿಡಾರ್ ನಡುವಿನ ವ್ಯಾಪಾರಸ್ಥರು ಇದಕ್ಕೆ ಕ್ಯಾತೆ ತಗೆದರು. ಭೂಸ್ವಾಧೀನಕ್ಕೆ ಅಡ್ಡಿಪಡಿಸಿದರು. ಕ್ರಮೇಣ ಭೂಸ್ವಾಧೀನಪಡಿಸಿಕೊಂಡ ಬಿಆರ್‌ಟಿಎಸ್, ಕಾಮಗಾರಿಯನ್ನು ಆಮೆಗತಿಯಲ್ಲಿ ಆರಂಭ ಮಾಡಿತು. ಇದರಿಂದ ಪ್ರಯಾಣಿಕರು ದಿನದಿಂದ ದಿನ ಹೈರಾಣಾಗುತ್ತಾ ಹೋದರು. 2011 ರಿಂದ ಆರಂಭವಾಗಿರುವ ಈ ಯೋಜನೆ ಇಲ್ಲಿಯವರೆಗೆ ಬಳಸಿರುವ ಹಣ 1100 ಕೋಟಿ ರುಪಾಯಿಗೂ ಹೆಚ್ಚು. ಆದರೆ, ಇನ್ನೂ ಶೇ 80 ರಷ್ಟು ಯೋಜನೆ ಪೂರ್ಣಗೊಂಡಿಲ್ಲ ಎನ್ನುತ್ತಾರೆ ಬಹುತೇಕ ಹುಬ್ಬಳ್ಳಿ ಧಾರವಾಡ ಮಂದಿ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಣಕಾಸಿನ ಕೊರತೆಯಿಂದ ಯೋಜನೆ ಪೂರ್ಣಗೊಂಡಿಲ್ಲ ಎಂದು ಸಬೂಬು ಹೇಳುತ್ತಾ ಬಂದಿದ್ದಾರೆ.

ಎಲ್ಲೆಲ್ಲಿ ಕಾಮಗಾರಿ ಬಾಕಿ?

ಎಲ್ಲೆಲ್ಲಿ ಕಾಮಗಾರಿ ಬಾಕಿ?

ಯೋಜನೆಯ ಭಾಗವಾಗಿ ನವಲೂರು ಮಯೂರ ರೆಸಾರ್ಟ್‌ ಬಳಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ, ಮೇಲ್ಸೇತುವೆ ಇನ್ನೂ ಪೂರ್ಣವಾಗಿಲ್ಲ. ನವನಗರ ಮೇಲ್ಸೇತುವೆ ಈಗಾಗಲೇ ಕಳಪೆ ಕಾಮಗಾರಿಯಿಂದ ಹಲವು ಬಾರಿ ಕಿತ್ತು ಹೋಗಿದೆ.

ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭ

ಬಸ್‌ನಿಲ್ದಾಣಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಶೇ 50 ರಷ್ಟೂ ಸಿಗ್ನಲ್‌ಗಳ ಅಳವಡಿಕೆ ಆಗಿಲ್ಲ. ಟರ್ಮಿನಲ್‌ಗಳ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ ಬದಿ ಸೂಚನಾ ಫಲಕಗಳು, ಬೀದಿ ದೀಪಗಳ ಅಳವಡಿಕೆಯೂ ಪೂರ್ಣಗೊಂಡಿಲ್ಲ. ಯೋಜನೆಗಾಗಿ ಸಾವಿರಾರು ಮರಗಳನ್ನು ಕಡಿಯಲಾಗಿತ್ತು. ವಾಪಸ್ ಗಿಡ ಬೆಳೆಸುತ್ತೇವೆ ಎಂದಿದ್ದ ಬಿಆರ್‌ಟಿಎಸ್ ಈಗ ಆ ವಿಚಾರವನ್ನು ಸಂಪೂರ್ಣ ಮರೆತಂತಿದೆ. ಒಟ್ಟಾರೆ ಒಂದು ಮಹತ್ವಾಕಾಂಕ್ಷೆಯ ಯೋಜನೆ ಉದ್ಘಾಟನೆಗೆ ಏನು ಬೇಕಿತ್ತೋ ಅದುವೇ ಪೂರ್ಣಗೊಂಡಿಲ್ಲ. ಎಲ್ಲೆಲ್ಲೂ ಅವ್ಯವಸ್ಥೆ ಕಣ್ಣಿಗೆ ರಾಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಆರ್‌ಟಿಎಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಉಪ ರಾಷ್ಟ್ರಪತಿಯನ್ನು ಕರೆಯಿಸಿ ಯೋಜನೆ ಉದ್ಘಾಟಿಸಿ ಕೈ ತೊಳೆದುಕೊಳ್ಳಲು ನೋಡುತ್ತಿದ್ದಾರೆ.

ಹೆಜ್ಜೆ ಹೆಜ್ಜೆಗೂ ಅದ್ವಾನ!

ಹೆಜ್ಜೆ ಹೆಜ್ಜೆಗೂ ಅದ್ವಾನ!

ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿರಬಹುದು. ಆದರೆ, ಈಗ ಪೂರ್ಣಗೊಂಡಿರುವ ಶೇ 80 ರಷ್ಟು ಕಾಮಗಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಅದ್ವಾನಗಳು ಕಂಡು ಬಂದಿವೆ. ಇದರಿಂದ ಜನ ದಿನನಿತ್ಯ ಬಿಆರ್‌ಟಿಎಸ್‌ನ್ನು ಶಪಿಸತೊಡಗಿದ್ದಾರೆ. ದೂರದೃಷ್ಠಿ ಇಲ್ಲದೇ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಅನಾನುಕೂಲತೆಯ ಅನುಭವ ಬಿಆರ್‌ಟಿಎಸ್ ಬಸ್‌ ಹತ್ತಿದ ಪ್ರತಿ ಪ್ರಯಾಣಿಕನಿಗೂ ಆಗುತ್ತದೆ. ಎಸಿ ಬಸ್‌ಗಳು ಎನ್ನುವುದನ್ನು ಬಿಟ್ಟರೇ, ಪ್ರಯಾಣಿಕರಿಗೆ ಯಾವುದೇ ನೆಮ್ಮದಿ ಇಲ್ಲಿ ಸಿಗುತ್ತಿಲ್ಲ ಎನ್ನುವುದು ಹಲವು ಪ್ರಯಾಣಿಕರ ಅನಿಸಿಕೆಯಾಗಿದೆ.

* ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಬೇರೆ ವಾಹನಗಳು ನಿಯಮ ಉಲ್ಲಂಘಿಸಿ ಸಂಚರಿಸುತ್ತಿವೆ

* ಸಿಗ್ನಲ್‌ಗಳಲ್ಲಿ ಅಪಘಾತಗಳು ಸರ್ವೇಸಮಾನ್ಯವಾಗುತ್ತಿವೆ

* ಬಸ್‌ನಿಲ್ದಾಣಗಲ್ಲಿ ಕುಡಿಯುವ ನೀರು, ಶೌಚಾಲಯಗಳಿಲ್ಲ

* ಟಿಕೆಟ್‌ ಸೆನ್ಸಾರ್‌ಗಳು ಸರಿಯಾಗಿ ಕೆಲಸ ಮಾಡದೇ ಕೈ ಕೊಡುವುದು ಸರ್ವೇಸಮಾನ್ಯವಾಗಿದೆ

* ಮಳೆ ಬಂದರೆ ನಿಲ್ದಾಣ ಹಾಗೂ ಬಿಆರ್‌ಟಿಎಸ್‌ ರಸ್ತೆಗಳಲ್ಲಿ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

* ಶೇ 60 ರಷ್ಟು ರಸ್ತೆಯನ್ನು ಕೇವಲ 120 ಬಸ್‌ಗಳಿಗೆ ಬಿಡಲಾಗಿದೆ. ಶೇ 40 ರಷ್ಟು ರಸ್ತೆಯನ್ನು ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಬಿಟ್ಟಿರುವುದು ಎಂತವರಿಗಾದರೂ ವಿಚಿತ್ರ ಎನಿಸುತ್ತದೆ

* ಪ್ರತಿನಿತ್ಯ ಬಿಆರ್‌ಟಿಎಸ್ ಬಸ್ ಚಾಲಕರಿಗೆ ಹಾಗೂ ಡಿವೈಡರ್‌ಗಳಲ್ಲಿ ನುಗ್ಗುವ ಇತರೆ ವಾಹನಗಳ ಚಾಲಕರಿಗೆ ಜಗಳವಾಗುತ್ತಿದೆ.

ಇವೆಲ್ಲ ಸಮಸ್ಯೆಗಳು ಬಿಆರ್‌ಟಿಎಸ್ ಅಧಿಕಾರಿಗಳಿಗೂ ಗೊತ್ತಿದೆ. ಆದರೆ ಹಣಕಾಸಿನ ಕೊರತೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಇಷ್ಟೆಲ್ಲಾ ಅದ್ವಾನಗಳು ಸೃಷ್ಠಿಯಾಗಿವೆ ಎಂಬುದನ್ನು ಅವರೇ ಒಪ್ಪಿಕೊಳ್ಳುತ್ತಾರೆ.

ಒಂದೇ ವರ್ಷದಲ್ಲಿ 52 ಕೋಟಿ ರುಪಾಯಿ ನಷ್ಟ

ಒಂದೇ ವರ್ಷದಲ್ಲಿ 52 ಕೋಟಿ ರುಪಾಯಿ ನಷ್ಟ

2018 ರ ಅಕ್ಟೋಬರ್ 2 ರಂದು ಹುಬ್ಬಳ್ಳಿ ಧಾರವಾಡ ಸಾರ್ವಜನಿಕರ ತೀವ್ರ ಒತ್ತಾಯದ ಮೇರೆಗೆ ಅಂತೂ ಬಿಆರ್‌ಟಿಎಸ್ ಬಸ್‌ಗಳ ಪ್ರಾಯೋಗಿಕ ಸಂಚಾರ ಆರಂಭವಾಯಿತು. ಇತ್ತೀಚೆಗೆ ತನ್ನ ಒಂದು ವರ್ಷದ ವರದಿಯನ್ನು ಬಿಆರ್‌ಟಿಎಸ್ ನೀಡಿತು. ಬರೀ ಪ್ರಾಯೋಗಿಕ ಸಂಚಾರದಿಂದಲೇ ಬಿಆ್‌ಟಿಎಸ್‌ಗೆ ಒಂದೇ ವರ್ಷದಲ್ಲಿ 52 ಕೋಟಿ ರುಪಾಯಿ ಹಾನಿಯಾಗಿರುವುದು ಬಹಿರಂಗವಾಯಿತು. ಒಂದೇ ವರ್ಷದಲ್ಲಿ ಇಷ್ಟೊಂದು ನಷ್ಟ ಅನುಭವಿಸಿರುವ ಬಿಆರ್‌ಟಿಎಸ್ ಮುಂದಿನ ಪಯಣ ಮಾತ್ರ ಸರಳವಾಗಿಲ್ಲ ಎಂದು ಹಣಕಾಸು ತಜ್ಞರು ಹೇಳುತ್ತಾರೆ.

ಜಗದೀಶ ಶೆಟ್ಟರ್ ಏನೆನ್ನುತ್ತಾರೆ?

ಜಗದೀಶ ಶೆಟ್ಟರ್ ಏನೆನ್ನುತ್ತಾರೆ?

ಬಿಆರ್‌ಟಿಎಸ್ ಯೋಜನೆ ಹುಬ್ಬಳ್ಳಿ ಧಾರವಾಡಕ್ಕೆ ಬರಲು ವಿಶೇಷ ಆಸಕ್ತಿವಹಿಸಿದ್ದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಯೋಜನೆಯಲ್ಲಿ ಆಗಿರುವ ಲೋಪ ದೋಷಗಳ ಬಗ್ಗೆ ಒಪ್ಪಿಕೊಳ್ಳುತ್ತಾರೆ. ಕಾಮಗಾರಿ ಪೂರ್ಣಗೊಳ್ಳದೇ ಉದ್ಘಾಟನೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಿರುವ ಶೆಟ್ಟರ್, ""ನವಲೂರು ಬಳಿ ಮೇಲ್ಸೇತುವೆ ಲೋಕೋಪಯೋಗಿ ಇಲಾಖೆ ನೋಡಿಕೊಳ್ಳುತ್ತಿದೆ. ಅಲ್ಲಲ್ಲಿ ಕೆಲ ಕೆಲಸಗಳು ಬಾಕಿ ಇವೆ. ಆದರೆ, ಉದ್ಘಾಟನೆಯಾದ ಬಳಿಕೆ ಎಲ್ಲವೂ ಸರಿಯಾಗಲಿದೆ'' ಎಂದು ತೇಪೆ ಹಚ್ಚುತ್ತಾರೆ.

ಪೂರ್ಣ ಕಾಮಗಾರಿ ಮುಗಿಸಬೇಕಿತ್ತು; ಕೋನರಡ್ಡಿ

ಪೂರ್ಣ ಕಾಮಗಾರಿ ಮುಗಿಸಬೇಕಿತ್ತು; ಕೋನರಡ್ಡಿ

ಈ ಬಗ್ಗೆ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎನ್ ಎಚ್ ಕೋನರಡ್ಡಿ ಅವರು ಒನ್‌ಇಂಡಿಯಾ ಕನ್ನಡದೊಂದಿದೆ ತಮ್ಮ ಅನಿಸಿಕೆ ಹಂಚಿಕೊಂಡರು. ""ಹುಬ್ಬಳ್ಳಿ ಧಾರವಾಡ ಜನಕ್ಕೆ ಅನುಕೂಲ ಆಗಲಿ ಎಂದು ಬಿಆರ್‌ಟಿಎಸ್ ಯೋಜನೆ ಬಂತು. ಆದರೆ ವಿಳಂಬ ನೀತಿಯಿಂದ ಇಂದು ಜನ ಬೇಸತ್ತಿದ್ದಾರೆ. ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿಲ್ಲ ಎಂಬ ದೂರುಗಳು ನನ್ನ ಗಮನಕ್ಕೂ ಬಂದಿವೆ. ಈ ಬಗ್ಗೆ ಹಲವು ಸಭೆಗಳಲ್ಲಿ ನಾನು ಅಧಿಕಾರಿಗಳ ಗಮನ ಸೆಳೆದಿದ್ದೆ. ಪೂರ್ಣ ಕಾಮಗಾರಿ ಮುಗಿಸಿಯೇ ಉದ್ಘಾಟನೆ ಮಾಡಿದ್ದರೇ ಚೆನ್ನಾಗಿತ್ತು'' ಎಂದು ಹೇಳುತ್ತಾರೆ.

ಉಪ ರಾಷ್ಟ್ರಪತಿಗೆ ಪತ್ರ

ಉಪ ರಾಷ್ಟ್ರಪತಿಗೆ ಪತ್ರ

""2011ರಲ್ಲಿ ಆರಂಭವಾದ ಕಾಮಗಾರಿ ಇಂದಿಗೂ ಸಂಪೂರ್ಣವಾಗಿ ಮುಕ್ತಾಯವಾಗಿಲ್ಲ. ಪ್ರಾಯೋಗಿಕವಾಗಿ ಬಸ್ ಸಂಚಾರ ಆರಂಭಗೊಂಡು ಒಂದು ವರ್ಷವಾದರೂ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಆದರೂ, ಉಪರಾಷ್ಟ್ರಪತಿಗಳನ್ನು ಆಹ್ವಾನಿಸಿ ಇಲ್ಲಿನ ಜನಪ್ರತಿನಿಧಿಗಳು ನಾಟಕವಾಡುತ್ತಿದ್ದಾರೆ. ಆದ್ದರಿಂದ ಉಪ ರಾಷ್ಟ್ರಪತಿ ಈ ಯೋಜನೆ ಉದ್ಘಾಟನೆಗೆ ಬರಬಾರದು ಎಂದು ಅವರಿಗೆ ಪತ್ರದ ಮುಖಾಂತರ ಮನವಿ ಮಾಡಿಕೊಂಡಿದ್ದೇವೆ'' ಎಂದು ಸಮತಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳುತ್ತಾರೆ.

ಕೊನೆಗೂ ನೆಮ್ಮದಿ ಸಿಗಲಿಲ್ಲ

ಕೊನೆಗೂ ನೆಮ್ಮದಿ ಸಿಗಲಿಲ್ಲ

ಒಟ್ಟಾರೆ ಹುಬ್ಬಳ್ಳಿ ಧಾರವಾಡದ ಜನಪ್ರತಿನಿಧಿಗಳ ದೂರದೃಷ್ಠಿ ಕೊರತೆ ಹಾಗೂ ಅಲ್ಲಿನ ಅಧಿಕಾರಿಗಳ ನಿರಾಸಕ್ತಿಯಿಂದ ಇಂದು ಹುಬ್ಬಳ್ಳಿ ಧಾರವಾಡ ಅಭಿವೃದ್ದಿ ಹೊಂದುವ ಬದಲು ಮತ್ತಷ್ಟು ಹಿಂದುಳಿಯುತ್ತಿವೆ ಎಂಬುದಕ್ಕೆ ಅರೆಬರೆಯ ಬಿಆರ್‌ಟಿಎಸ್ ಯೋಜನೆಯೇ ಸಾಕ್ಷಿ. ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿ ಸಾರಿಗೆ ಯೋಜನೆ ತಂದರೂ ಹುಬ್ಬಳ್ಳಿ ಧಾರವಾಡ ಮಂದಿಗೆ ಒಂದು ನೆಮ್ಮದಿ ಸಿಗಲಿಲ್ಲ ಎಂಬುದು ದಿಟವಾಗಿದೆ.

English summary
Hubli Dharwad BRTS Project Not Completed; But BRTS Set To Inauguration. Vice President will inauguration the brts on february. But Many social activists and organizations oppose this. because of Project is Not Completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X