ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗೇಶ್, ಲೀಲಾಬಾಯಿ, ವೆಂಕಣ್ಣ, ಸುಬ್ಬಯ್ಯ- ಉ.ಕ. ಸ್ವಾತಂತ್ರ್ಯ ಹೋರಾಟಗಾರರ ರೋಚಕ ಕಥೆಗಳು

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ: ಸ್ವಾತಂತ್ರ್ಯ ಸಿಕ್ಕಿ 75 ವಸಂತಗಳು ಸಂದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇಂತಹ ಗಳಿಗೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಇದೇ ವೇಳೆ ಸ್ಮರಣೆ ಮಾಡಲಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಅಸಂಖ್ಯಾತ. ಸದ್ಯ ನಮ್ಮ‌ ಕಣ್ಣ ಮುಂದಿರುವ ಮೂರು ಹಿರಿಯ ಜೀವಗಳು ಅಂದು ನಡೆದ ಹೋರಾಟದ ದಿನಗಳನ್ನು ಬಿಚ್ಚಿಟ್ಟಿದ್ದಾರೆ.

ಹಳಿಯಾಳ ತಾಲೂಕಿನ ಮಂಗೇಶ್ ಪಾಟೀಲ್, ಮುಂಡಗೋಡ ತಾಲೂಕಿನ ಲೀಲಾಬಾಯಿ ಇಂಗಳಕಿ, ಅಂಕೋಲ ತಾಲೂಕಿನ ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಾಯಕ, ಇದೇ ಅಂಕೋಲದ ಸ್ವಾತಂತ್ರ್ಯ ವೀರ ದಿವಂಗತ ಸುಬ್ಬಯ್ಯ ನಾಯ್ಕ ಅವರ ಪತ್ನಿ ರಾಕಮ್ಮ ಈ ನಾಲ್ವರು ಅಂದಿನ ಸ್ವಾತಂತ್ರ್ಯ ಹೋರಾಟಗಳ ಘಟನೆಗಳನ್ನು ಮೆಲಕು ಹಾಕಿದ್ದಾರೆ.

ಬ್ರಿಟಿಷರು ಕೊಳ್ಳೆಹೊಡೆದ ಹಣವೆಷ್ಟು? ಯಾವ್ಯಾವ ರೀತಿಯಲ್ಲಿ ಮಾಡಿದ್ದರು ಲೂಟಿ?ಬ್ರಿಟಿಷರು ಕೊಳ್ಳೆಹೊಡೆದ ಹಣವೆಷ್ಟು? ಯಾವ್ಯಾವ ರೀತಿಯಲ್ಲಿ ಮಾಡಿದ್ದರು ಲೂಟಿ?

ಒನ್‌ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಈ ನಾಲ್ವರು ಹಂಚಿಕೊಂಡ ಅನುಭವಗಳು ಇಲ್ಲಿ ಮುಂದಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಪ್ರತ್ಯಕ್ಷ ಅನುಭವ ಇರುವವರು ಬಹಳ ಕಡಿಮೆ. ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಈ ಹಿನ್ನೆಲೆಯಲ್ಲಿ ಮಂಗೇಶ್, ಲೀಲಾಬಾಯಿ, ವೆಂಕಣ್ಣ ಅವರ ಸ್ವಾತಂತ್ರ್ಯ ಹೋರಾಟಗಳ ಕಥೆ ಸ್ಮರಣೀಯ.

ಗಾಂಧಿ ಕರೆಗೆ ಕಿಚ್ಚು ಹೊತ್ತಿಸಿದ ಮಂಗೇಶ ಪಾಟೀಲ್

ಗಾಂಧಿ ಕರೆಗೆ ಕಿಚ್ಚು ಹೊತ್ತಿಸಿದ ಮಂಗೇಶ ಪಾಟೀಲ್

ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ತಾಲ್ಲೂಕಿನ ಮಂಗಳವಾಡ ಗ್ರಾಮದ 96 ವರ್ಷದ ಮಂಗೇಶ ಪಾಟೀಲ್ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ವೀರ ಹೋರಾಟಗಾರ. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿದಾಗ ಮಹಾತ್ಮಾ ಗಾಂಧೀಜಿ ಕರೆ ಕೊಟ್ಟ ಸಂದೇಶ ತಿಳಿದು ಹೋರಾಟಕ್ಕೆ ದುಮ್ಮುಕ್ಕಿದವರು. ಅವರೇ ಹೇಳುವಂತೆ ದೇಶ ಪ್ರೇಮದ ಹುಮ್ಮಸ್ಸಿನಲ್ಲಿ 18 ನೇ ವಯಸ್ಸಿನಲ್ಲಿಯೇ ಗೆಳೆಯರ ಜೊತೆಗೂಡಿ ಹಳಿಯಾಳ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದೇವು. ಅಲ್ಲದೆ ತಾಲ್ಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಬ್ರೀಟಿಷ್ ಕಚೇರಿಗೆ ನುಗ್ಗಿ ಪ್ರತಿಭಟಿಸಿ, ಯಡೋಲಾಗದಲ್ಲಿ ಕರಾ ನೀರಾಕರಣೆ ಹೋರಾಟದಲ್ಲಿ ಭಾಗವಹಿಸಿದ್ದೇವು. ಆದರೆ 1943ರಲ್ಲಿ ಬಂಧಿಸಿದ್ದ ಬ್ರೀಟಿಷರು ಯಲ್ಲಾಪುರ, ಅಂಕೋಲಾ, ಕಾರವಾರದ ಜೈಲಿನಲ್ಲಿರಿಸಿದ್ದರು ಎಂದು ಹೋರಾಟದ ಕಿಚ್ಚು, ದೇಶ ಪ್ರೇಮದ ಹೋರಾಟವನ್ನು ಬಿಚ್ಚಿಟ್ಟಿದ್ದಾರೆ.

ಸಣ್ಣ ವಯಸ್ಸಿನಲ್ಲಿಯೇ ಹೋರಾಟಕ್ಕಿಳಿದಿದ್ದ ಲೀಲಾಬಾಯಿ

ಸಣ್ಣ ವಯಸ್ಸಿನಲ್ಲಿಯೇ ಹೋರಾಟಕ್ಕಿಳಿದಿದ್ದ ಲೀಲಾಬಾಯಿ

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಬಾಚಣಕಿಯ ಲೀಲಾಬಾಯಿ ಇಂಗಳಕಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ. ಸಣ್ಣ ವಯಸ್ಸಿನಲ್ಲಿಯೇ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ದುಮ್ಮುಕಿ ಜೈಲುವಾಸ ಅನುಭವಿಸಿದ್ದ ದಿಟ್ಟ ಮಹಿಳೆ. ಎಲ್ಲೆಡೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಜೋರಾಗಿತ್ತು.

"ನಾನು 17ನೇ ವಯಸ್ಸಿನಲ್ಲಿರುವಾಗ ನಮಗೂ ಕಿಚ್ಚು ಹೊತ್ತಿ ಹುಬ್ಬಳ್ಳಿ ಗಾಂಧಿ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 15 ಯುವತಿಯರು ಸೇರಿ ಒಂದೇ ಮಾತರಂ ಘೋಷಣೆ ಕೂಗುತ್ತಾ ತಹಶಿಲ್ದಾರ್ ಕಚೇರಿಗೆ ತೆರಳಿದ್ದೇವು. ಅಲ್ಲಿ ಪೊಲೀಸರು ತಡೆದು ನೀವಿನ್ನು ಚಿಕ್ಕವರು ವಾಪಸ್ಸ್ ತೆರಳಿ, ಇದೆಲ್ಲ ನಿಮಗೆ ಬೇಡ ಎಂದು ಹೆದರಿಸಿದ್ದರು. ಆದರೂ ಸ್ವರಾಜ್ಯ ಬೇಕು ಎಂದು ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದ್ದೇವು. ಬ್ರೀಟಿಷರ ವಿರುದ್ಧದ ಚಲೆ ಜಾವ್, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇತರರಂತೆ ನಾವು ಪಾಲ್ಗೊಂಡಿದ್ದೇವು. ಈ ಸಂಬಂಧ ನಮ್ಮನ್ನು ಬಂಧಿಸಿ ಬೆಳಗಾವಿ ಜೈಲಿಗೆ ಹಾಕಿ 6 ತಿಂಗಳ ಶಿಕ್ಷೆ ವಿಧಿಸಿದ್ದರು. ಆದರೆ ಕಲಿಯುವ ವಯಸ್ಸಿನವರೂ ಎಂದು ಜೈಲರ್ 3 ತಿಂಗಳಿಗೆ ಬಿಟ್ಟಿದ್ದರು" ಎಂದು ತಮ್ಮ ಸ್ವಾತಂತ್ರ‍್ಯ ಚಳುವಳಿಯ ನೆನಪುಗಳನ್ನು 90 ವರ್ಷದ ಲೀಲಾಬಾಯಿ ಬಿಚ್ಚಿಟ್ಟಿದ್ದಾರೆ.

ತ್ರಿವರ್ಣ ಧ್ವಜ ಹಾರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಜೈಲು ಶಿಕ್ಷೆ ಇದೆತ್ರಿವರ್ಣ ಧ್ವಜ ಹಾರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಜೈಲು ಶಿಕ್ಷೆ ಇದೆ

ತಮ್ಮ 60ರ ದಶಕದಲ್ಲಿಯೇ ಬಾಚಣಿಕೆಯಲ್ಲಿ ಬಂದು ನೆಲೆಸಿದ್ದ ಅವರು ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಫಕೀರಪ್ಪ ಅವರನ್ನು ವಿವಾಹವಾಗಿದ್ದರು. ಸದ್ಯ ಮಗನೊಂದಿಗೆ ಮುಂಡಗೋಡದಲ್ಲಿ ವಾಸವಾಗಿದ್ದಾರೆ.

ಶತಾಯುಷಿ ವೆಂಕಣ್ಣ ನಾಯಕ ಬೇಸರ

ಶತಾಯುಷಿ ವೆಂಕಣ್ಣ ನಾಯಕ ಬೇಸರ

ಎಳೆವೆಯಿಂದಲೇ ಸ್ವಾತಂತ್ರ್ಯದ ಹೋರಾಟದತ್ತ ಆಕರ್ಷಿತರಾಗಿದ್ದ ಅಂಕೋಲಾ ತಾಲ್ಲೂಕಿನ ಸೂರ್ವೆಯ ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಾಯಕ ಅಂದು ಗಾಂಧೀಜಿಯವರ ಹೋರಾಟದ ಕರೆಗೆ ಓಗೊಟ್ಟಿದ್ದರು. ಸೂರ್ವೆಯ ಕಳಸ ದೇವಸ್ಥಾನದಲ್ಲಿ ನಡೆದ ಪ್ರಥಮ ಸಭೆಯಲ್ಲಿ ಕರನಿರಾಕರಣೆಯ ಪ್ರತಿಜ್ಞೆ ಸಾಲಿನಲ್ಲಿ ವೆಂಕಣ್ಣ ನಾಯಕ ಕೂಡಾ ಮುಂಚೂಣಿಯಲ್ಲಿದ್ದರು. ಸೂರ್ವೆಯ 39 ಖಾತೆದಾರರಲ್ಲಿ 33 ಖಾತೆದಾರರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಕರನಿರಾಕರಣೆ, ಜಂಗಲ್ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಅಂದೋಲನ ಸೇರಿದಂತೆ ಬ್ರೀಟೀಷರ ವಿರುದ್ಧ ಕೈಗೊಂಡ ಹೋರಾಟದ ದಿನಗಳು ಇಂದಿಗೂ ಇವರ ಕಣ್ಣ ಮುಂದಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷದ ತುಂಬಿರುವ ಸಂತಸ ನನಗಿದೆಯಾದರೂ, ನಾವೆಣಿಸಿದ ಅಭಿವೃದ್ಧಿ ಸಾಧಿಸಿಲ್ಲ ಎಂಬ ನೋವು ನನಗಿದೆ. ಮುಂದಿನ ದಿನಗಳಲ್ಲಿ ದೇಶ ರಾಮರಾಜ್ಯವಾಗಬೇಕು. ಈ ದಿಸೆಯಲ್ಲಿ ಯುವ ಜನಾಂಗ ದಶ ಭಕ್ತಿಯನ್ನು ಬೆಳೆಸಿಕೊಳ್ಳುವುದರೊಂದಿಗೆ ಪ್ರಗತಿಗೆ ಶ್ರಮಿಸಬೇಕು ಎನ್ನುತ್ತಾರೆ ವೆಂಕಣ್ಣನಾಯಕರು. ಸದ್ಯ ಸೂರ್ವೆಯಲ್ಲಿ ವಾಸವಾಗಿರುವ 101 ವರ್ಷದ ವೆಂಕಣ್ಣ ನಾಯಕ ಅವರಿಗೆ ಸರ್ಕಾರದಿಂದ ಗೌರವ ಧನ ಲಭಿಸುತ್ತಿದೆ.

ಬ್ರಿಟಿಷರ ದಿಕ್ಕು ತಪ್ಪಿಸುತ್ತಿದ್ದ ರಾಕಮ್ಮ

ಬ್ರಿಟಿಷರ ದಿಕ್ಕು ತಪ್ಪಿಸುತ್ತಿದ್ದ ರಾಕಮ್ಮ

ಅಂಕೋಲಾದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರತಿ ಮನೆಯಿಂದಲೂ ಹೋರಾಟಕ್ಕೆ ಮುಂದಾಗಿದ್ದರು. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೊಸ್ಕೇರಿಯ ದಿ. ಸುಬ್ಬಯ್ಯ ನಾಯಕ ಕೂಡ ಒಬ್ಬರು. ಬ್ರೀಟಿಷರ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ನಿತ್ಯವೂ ಊರಿಗೆ ಬಂದು ಹುಡುಕುತ್ತಿದ್ದರು. ಒಂದು ದಿನ‌ ಬ್ರೀಟಿಷರ ಕೈಗೆ ಸಿಕ್ಕಿದ್ದ ದಿ.ಸುಬ್ಬಯ್ಯ ಅವರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಅವರು ಜೈಲಿನಿಂದ ಬಂದ ಬಳಿಕ ನಮ್ಮ ಮದುವೆಯಾಗಿದೆ ಎಂದು 90 ವರ್ಷದ ಅವರ ಪತ್ನಿ ರಾಕಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟದ ವೇಳೆಗೆ ಪೊಲೀಸರು ನಮ್ಮೂರಿಗೆ ಇಲ್ಲಿನ ಹೋರಾಟಗಾರರನ್ನು ಹುಡುಕಿಕೊಂಡು ಬರುತ್ತಿದ್ದರು. ಆಗ ನಾವು ಎಲ್ಲರಿಗೂ ಅಡಗಿಕೊಳ್ಳಲು ತಿಳಿಸುತ್ತಿದ್ದೇವು. ಸೂರ್ವೆಯ ಅನೇಕ ಕುಟುಂಬದ ಯುವಕರು ಅಂದು ಅಸಹಕಾರ, ಕರಬಂಧಿ ಚಳುವಳಿಯಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು. ಅಗಸೂರು, ಅವರ್ಸಾ, ಬಾಸ್ಗೋಡು, ಬೇಲಿಕೇರಿ, ಭಾವಿಕೇರಿ ಇನ್ನೂ ಮುಂತಾದ ಗ್ರಾಮಗಳ ಗ್ರಾಮಸ್ಥರು ಈ ಕರ ನಿರಾಕರಣೆ ಅಭಿಯಾನದಲ್ಲಿ ಮನಃಪೂರ್ವಕವಾಗಿ ಪಾಲ್ಗೊಂಡರು. ಜಮೀನ್ದಾರರು, ನಾಡವರು ಮತ್ತು ಅನೇಕ ಹಾಲಕ್ಕಿ ಒಕ್ಕಲು ಹಿಡುವಳಿದಾರರು ಜಮೀನುದಾರರಿಗೆ ತಮ್ಮ ಪಾಲನ್ನು ನೀಡಲು ನಿರಾಕರಿಸಿದ್ದರು ಹೋರಾಟ ತೀವ್ರಗೊಳಿಸಿದ್ದರು. ಗಾಂಧೀಜಿಯವರನ್ನು ನೋಡಬೇಕು ಎಂಬ ಆಸೆ ಇತ್ತಾದರೂ ನನಗೆ ಸಾಧ್ಯವಾಗಿಲ್ಲ ಎಂದು ರಾಕಮ್ಮ ನಾಯಕ ಸ್ವಾತಂತ್ರ್ಯ ಹೋರಾಟದ ದಿನಗಳನ್ನು ವಿವರಿಸಿದರು.

English summary
Uttara Kannada district has seen many freedom fighters. Very few are alive today. Three freedom figters have shared their experience. Wife of another freedom fighter too has shared her experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X