ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಡುವೆ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

|
Google Oneindia Kannada News

ಈ ಬಾರಿಯ ಬೇಸಿಗೆಯೂ ಕೂಡ ಭಯಾನಕವಾಗಿದೆ. ಒಂದೆಡೆ ಬಿಸಿಲ ಝಳ ಮತ್ತೊಂದೆಡೆ ಕೊರೊನಾ ಭಯ. ಒಟ್ಟಾರೆ ಜನರು ತಮ್ಮ ಜೀವ ಮತ್ತು ಜೀವನಕ್ಕಾಗಿ ಹೋರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ರೋಗ ರುಜಿನಗಳು ಸೇರಿದಂತೆ ಹಲವು ಸಮಸ್ಯೆಗಳು ಕಾಡುವುದು ಸಹಜ. ಆದರೆ ಕಳೆದ ವರ್ಷದಿಂದ ಕೊರೊನಾ ಕಾಲಿಟ್ಟ ಬಳಿಕವಂತೂ ಜನ ಕೊರೊನಾವಲ್ಲದೆ, ಇತರೆ ರೋಗಗಳು ಕಾಣಿಸಿಕೊಂಡರೂ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಇನ್ನು ಬೇಸಿಗೆಯ ಕಾಲದಲ್ಲಿ ಸುಖಾಸುಮ್ಮನೆ ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡುವುದು ಒಳಿತು. ಆದಷ್ಟು ಮನೆಯಲ್ಲಿಯೇ ಇರುವುದಕ್ಕೆ ಪ್ರಯತ್ನಿಸಬೇಕು. ಕೊರೊನಾ ಹರಡುತ್ತಿರುವ ಈ ಸಮಯದಲ್ಲಿ ಸಾರ್ವಜನಿಕ ಪ್ರದೇಶಗಳಿಂದ ದೂರವಿದ್ದು, ಬದುಕುವುದನ್ನು ಕಲಿಯುವುದು ಅನಿವಾರ್ಯವಾಗಿದೆ.

ಸುಖಾಸುಮ್ಮನೆ ಮನೆಯಿಂದ ಹೊರ ಹೋಗಬೇಡಿ

ಸುಖಾಸುಮ್ಮನೆ ಮನೆಯಿಂದ ಹೊರ ಹೋಗಬೇಡಿ

ಬೇಸಿಗೆಯ ಸಮಯದಲ್ಲಿ ಒಂದಷ್ಟು ಎಚ್ಚರಿಕೆ ಮತ್ತು ಆರೋಗ್ಯವಾಗಿರಲು ಬೇಕಾಗುವಂತಹ ಕ್ರಮಗಳನ್ನು ಅಳವಡಿಸಿಕೊಂಡರೆ ನೆಮ್ಮದಿಯಾಗಿರಲು ಸಾಧ್ಯವಾಗಲಿದೆ. ಪ್ರತಿದಿನ ಕನಿಷ್ಟ ಎರಡು ಲೀಟರ್‍ ನೀರನ್ನು ಕುಡಿಯಬೇಕು. ತಲೆ ಕೂದಲು ಕೂಡ ವಾಸನೆ ಬೀರುತ್ತದೆ. ಆದ್ದರಿಂದ ಯುವಕರಾದರೆ ಚಿಕ್ಕದಾಗಿ ಕ್ಷೌರ ಮಾಡಿ ತಲೆಯಲ್ಲಿನ ಹೊಟ್ಟನ್ನು ನಿಯಂತ್ರಿಸಲು ಮುಂದಾಗಬೇಕು. ಸ್ನಾನ ಮಾಡುವಾಗ ಕಂಕುಳು, ಕಿವಿ, ಸೇರಿದಂತೆ ಇನ್ನಿತರ ಭಾಗಗಳನ್ನು ಚೆನ್ನಾಗಿ ಸೋಪು ಬಳಸಿ ತೊಳೆಯಬೇಕು. ವ್ಯಾಯಾಮ, ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಹತ್ತಿ ಬಟ್ಟೆಗಳಿಗೆ ಹೆಚ್ಚಿನ ಆದ್ಯತೆ ಇರಲಿ

ಹತ್ತಿ ಬಟ್ಟೆಗಳಿಗೆ ಹೆಚ್ಚಿನ ಆದ್ಯತೆ ಇರಲಿ

ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿ ಬಟ್ಟೆಗೆ ಆದ್ಯತೆ ನೀಡಬೇಕು. ಬೇರೆಯವರು ಬಳಸಿದ ಟವೆಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು. ಬೇರೆಯವರಿಗೆ ಅಸಹ್ಯ ಎನಿಸದ ಉತ್ತಮ ಸುವಾಸನೆ ಬೀರುವ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳಬೇಕು. ಅವು ಶರೀರಕ್ಕೆ ಒಗ್ಗುವಂತಿದ್ದರೆ ಮಾತ್ರ ಬಳಸಬೇಕು. ವೈದ್ಯರ ಸಲಹೆಯೂ ಅಗತ್ಯವಾಗಿರುತ್ತದೆ. ಪ್ರತಿ ದಿನ ಉದ್ಯೋಗದ ನಿಮಿತ್ತ ವಿವಿಧ ಕಚೇರಿಗೆ ಹೋಗುವ ಮಹಿಳಾ ಉದ್ಯೋಗಿಗಳು ಕೆಲಸದ ಜತೆಗೆ ತಮ್ಮ ಸೌಂದರ್ಯವನ್ನೂ ಕಾಪಾಡಿಕೊಳ್ಳುವುದು ಅನಿವಾರ್ಯ. ಉರಿ ಬಿಸಿಲಿಗೆ ತಮ್ಮ ಮುಖ ಕಾಂತಿಹೀನವಾಗಿ ಬಿಡುತ್ತದೆ. ಆಗಾಗ್ಗೆ ಬ್ಯೂಟಿಪಾರ್ಲರ್‌ಗಳಿಗೆ ಹೋಗುವಂತೆಯೂ ಇಲ್ಲ. ಹೀಗಾಗಿ ಬಿಸಿಲಿನ ಬೇಗೆಯಿಂದ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ತುಳಸಿ, ಬೇವಿನ ಫೇಸ್ ಪ್ಯಾಕ್ ಬಳಸುವುದು ಸೂಕ್ತ. ನಂತರ ತಣ್ಣೀರಿನಿಂದ ರೋಸ್ ನೀರಿನಿಂದ ಮುಖ ತೊಳೆದುಕೊಂಡರೆ ಚರ್ಮದ ಕಾಂತಿ ಹೊಳೆಯುತ್ತಿರುತ್ತದೆ. ಇದು ಕೇವಲ ಚರ್ಮಕ್ಕೆ ಕಾಂತಿ ನೀಡುವುದಲ್ಲದೇ, ಮುಖದಲ್ಲಿ ರಕ್ತ ಸಂಚಾರಕ್ಕೂ ಸಹಾಯ ಮಾಡಲಿದೆ.

ನೀರು ಜತೆಗಿಟ್ಟುಕೊಳ್ಳುವುದನ್ನು ಮರೆಯದಿರಿ

ನೀರು ಜತೆಗಿಟ್ಟುಕೊಳ್ಳುವುದನ್ನು ಮರೆಯದಿರಿ

ದಿನವಿಡೀ ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ತಮ್ಮ ಹ್ಯಾಂಡ್‌ಬ್ಯಾಗ್‌ಗಳಲ್ಲಿ ಕೆಲ ಸೌಂದರ್ಯ ವರ್ಧಕಗಳನ್ನು ಇಟ್ಟುಕೊಳ್ಳುವುದು ಸೂಕ್ತ. ತಮಗೆ ಸೂಕ್ತವಾದ ಪೌಡರನ್ನು ಆಗಾಗ್ಗೆ ಹಚ್ಚುತ್ತಿರಬೇಕು. ಮಾಸ್ಕ್ ಹಾಕುವುದರಿಂದ ಬೇಗ ಬೆವರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು. ಬೇಸಿಗೆಯಲ್ಲಿ ಸೀರೆ ಉಡುವುದು ಹಿಂಸೆ ಎನಿಸಬಹುದು. ಹೀಗಾಗಿ ದೇಹಕ್ಕೆ ಹಗುರ ಎನಿಸುವ ಉಡುಪುಗಳನ್ನು ಧರಿಸಿಕೊಳ್ಳಿ. ಆದಷ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬೇಡಿ.

ಸೌತೆಕಾಯಿಯನ್ನು ಹೆಚ್ಚು ಸೇವಿಸಿ

ಸೌತೆಕಾಯಿಯನ್ನು ಹೆಚ್ಚು ಸೇವಿಸಿ

ಬಿಸಿಲಿನ ತಾಪಕ್ಕೆ ಸುಸ್ತು, ನೀರಡಿಕೆ, ತಲೆಸುತ್ತು ಮೊದಲಾದವುಗಳು ಬಾಧಿಸುವುದು ಸಾಮಾನ್ಯವಾಗಿದ್ದು, ತಲೆನೋವು ಕಾಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಬಿಸಿಲಿನಿಂದಾಗುವ ಕೆಲವು ತೊಂದರೆಗಳನ್ನು ತಪ್ಪಿಸುವ ಸಲುವಾಗಿ ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸಿದರೆ ಒಳ್ಳೆಯದು ಜತೆಗೆ ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ, ಪಾನಕ ಸೇವಿಸಬೇಕು. ಕಾಫಿ ಟೀ ಸೇವನೆ ಕಡಿಮೆ ಮಾಡಬೇಕು. ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಬೇಕು. ನೀರು, ಮಜ್ಜಿಗೆ, ಎಳನೀರು ಕುಡಿಯಬೇಕು. ಬೆಚ್ಚಗಿನ ಮಸಾಲೆ ರಹಿತ ಶುದ್ಧ ಆಹಾರ ಸೇವಿಸಬೇಕು. ಗಾಳಿಯಾಡುವಂಥ ಪಾದರಕ್ಷೆ ಧರಿಸಬೇಕು. ದೇಹವನ್ನು ತಂಪಾಗಿಡಲು ಹಣ್ಣು, ತರಕಾರಿಗಳು ಸಹಕಾರಿ. ಸೌತೆಕಾಯಿಯನ್ನು ಹೆಚ್ಚು ಸೇವಿಸಿ. ಇದರಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದಾಹವನ್ನು ಕಡಿಮೆ ಮಾಡುತ್ತದೆ.

ನೈಸರ್ಗಿಕ ಪಾನೀಯಗಳನ್ನು ಹೆಚ್ಚು ಕುಡಿಯಿರಿ

ನೈಸರ್ಗಿಕ ಪಾನೀಯಗಳನ್ನು ಹೆಚ್ಚು ಕುಡಿಯಿರಿ

ಬೇಸಿಗೆಯಲ್ಲಿ ಬಾಯಾರಿಕೆಯನ್ನು ಅಡಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಠಿಯಿಂದ ನೈಸರ್ಗಿಕ ಪಾನೀಯ ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಕಲ್ಲಂಗಡಿಯ ರಸವನ್ನು ಸೇವಿಸುವುದರಿಂದಲೂ ಉತ್ತಮ ಪ್ರಯೋಜನವನ್ನು ಕಾಣಬಹುದು. ಈ ಹಣ್ಣಿನಲ್ಲಿ ಪೋಟಾಷಿಯಂ, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ ಹೇರಳವಾಗಿ ಇರುವುದರಿಂದ ಆರೋಗ್ಯವನ್ನು ಕಾಪಾಡುತ್ತದೆ. ಬಿಸಿಲಲ್ಲಿ ಓಡಾಡಿ ಬಂದವರು ನಿಂಬೆ ರಸವನ್ನು ಸೇವಿಸಿದರೆ ವಿಟಮಿನ್ 'ಸಿ' ಅಂಶ ಇರುವುದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುವುದಿಲ್ಲ. ಪ್ರತಿದಿನ ಒಂದು ಬಟ್ಟಲು ಬೀಟ್ರೋಟಿನ ರಸವನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದ ಉಷ್ಣಾಂಶವನ್ನು ತಂಪುಗೊಳಿಸಬೇಕಾದರೆ ಎಳನೀರು ಅತ್ಯಗತ್ಯ. ಎಳನೀರು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೇ ತಿಳಿದು ಬಂದಿದೆ.

ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ

ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ

ಬೇಸಿಗೆಯಲ್ಲಿ ನೀರು ಸೇವನೆಗಿಂತ ಎಳನೀರು ಸೇವನೆಯಿಂದ ಹೆಚ್ಚು ಖುಷಿ ಕೊಡಲಿದೆ. ಕೇವಲ ಖುಷಿಯಲ್ಲದೇ ದೇಹವನ್ನು ಲವಲವಿಕೆಯಿಂದಲೂ ಇಡಲಿದೆ. ಶಕ್ತಿ ನೀಡುವ ಗುಣ ಹೊಂದಿರುವ ಎಳನೀರನ್ನು ವ್ಯಾಯಾಮದ ನಂತರ ಸೇವನೆ ಮಾಡುವುದು ಸೂಕ್ತ, ಅತಿ ಹೆಚ್ಚು ವಿಟಮಿನ್ ಹೊಂದಿರುವ ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ. ಬೇಸಿಗೆಯ ದಿನವಾಗಿರುವುದರಿಂದ ಕೊರೊನಾದ ಜತೆಗೆ ಇತರೆ ಸಾಂಕ್ರಾಮಿಕ ರೋಗಗಳು ನಮ್ಮನ್ನು ಕಾಡಬಹುದು. ಹೀಗಾಗಿ ನಮ್ಮ ದೇಹದ ಆರೋಗ್ಯದ ಜತೆಗೆ ಸ್ವಚ್ಛತೆ, ನಮ್ಮ ಸುತ್ತಮುತ್ತಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡರೆ ಅವರಿವರ ಸಲಹೆ ಪಡೆದು ಸ್ವಯಂ ಚಿಕಿತ್ಸೆಗಳನ್ನು ಮಾಡಿಕೊಳ್ಳುವ ಬದಲು ವೈದ್ಯರ ಸಲಹೆ ಪಡೆದುಕೊಳ್ಳುವುದನ್ನು ಮರೆಯಬಾರದು. ಈಗಿನ ಪರಿಸ್ಥಿತಿಯಲ್ಲಿ ಜೀವ ಮುಖ್ಯವಾಗಿರುವುದರಿಂದ ಅದನ್ನು ಕಾಪಾಡಿಕೊಂಡು ಜೀವನ ಮಾಡಿಕೊಳ್ಳುವುದು ಜಾಣತನವಾಗಿದೆ.

English summary
Here we sharing tips on how to stay healthy during this summer season in times of Coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X