• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಳೆ ಹೋಗಿದ್ದ ಲಿಂಗಾಯತ ಮತಗಳು ಮತ್ತೆ ಕೈ ಪಾಳಯಕ್ಕೆ!

By ಆರ್ ಟಿ ವಿಠ್ಠಲಮೂರ್ತಿ
|

ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಬಿಜೆಪಿಯ ಕಡೆ ಗುಳೆ ಎದ್ದು ಹೋಗಿದ್ದ ಲಿಂಗಾಯತ ಮತಗಳು ಮರಳಿ ಕೈ ಪಾಳೆಯಕ್ಕೆ ಮರಳಲಿವೆಯೇ?

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ, ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದ ಬೆಳವಣಿಗೆ ಸಹಜವಾಗಿಯೇ ಈ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಈ ಪ್ರಶ್ನೆಗೆ ಈಗಲೇ ಸ್ಪಷ್ಟ ಉತ್ತರ ನೀಡಲು ಸಾಧ್ಯವಿಲ್ಲವಾದರೂ ಒಂದು ಮಾತಂತೂ ನಿಜ. ಕಳೆದ ಒಂದೂವರೆ ದಶಕದಷ್ಟು ಕಾಲದಿಂದ ಕಾಂಗ್ರೆಸ್‌ನಿಂದ ದೂರವಿದ್ದ ಲಿಂಗಾಯತ ಮತ ಬ್ಯಾಂಕ್ ಒಂದು ಮಟ್ಟದಲ್ಲಾದರೂ ಕಾಂಗ್ರೆಸ್‌ಗೆ ಷೇರು ಬಂಡವಾಳವನ್ನು ಒದಗಿಸಲಿದೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ

ಹಾಗೆ ನೋಡಿದರೆ ಲಿಂಗಾಯತ ಮತ ಬ್ಯಾಂಕ್ ಕಾಂಗ್ರೆಸ್‌ನಿಂದ ಮೊದಲು ದೂರವಾಗಿದ್ದು ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದಾಗ. ಆ ಸಂದರ್ಭದಲ್ಲಿ ದೇವರಾಜ ಅರಸರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆಯ ಪರಿಣಾಮವಾಗಿ ಭೂಮಿ ಕಳೆದುಕೊಂಡವರಲ್ಲಿ ಲಿಂಗಾಯತರೂ ಸೇರಿದ್ದರು.

ಉಳುವವನೇ ಭೂ ಒಡೆಯ ಎಂಬ ಕ್ರಾಂತಿಕಾರಿ ಅಂಶವನ್ನು ಸಾರವಾಗಿಸಿಕೊಂಡ ಭೂ ಸುಧಾರಣಾ ಕಾಯ್ದೆಯನ್ನು ದೇವರಾಜ ಅರಸರು ಜಾರಿಗೆ ತಂದ ನಂತರ ಕರ್ನಾಟಕದಲ್ಲಿ ಗಣನೀಯ ಪ್ರಮಾಣದ ಭೂಮಿ ಕಳೆದುಕೊಂಡಿದ್ದು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳು. ಹೀಗಾಗಿ ಅವು ದೇವರಾಜ ಅರಸರ ನೇತೃತ್ವದ ಕಾಂಗ್ರೆಸ್ ವಿರುದ್ಧ ಪರ್ಯಾಯ ಶಕ್ತಿಯೊಂದನ್ನು ಸೃಷ್ಟಿಸಲು ಒಗ್ಗೂಡಿದವು. ಇದರ ಪರಿಣಾಮವಾಗಿ 1978ರಲ್ಲಿ ಜನತಾ ಪಕ್ಷ ದೊಡ್ಡ ಮಟ್ಟದಲ್ಲಿ ತಲೆ ಎತ್ತಿ ನಿಂತುಕೊಂಡಿತು.

ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?

ಆ ಸಂದರ್ಭದಲ್ಲಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಲು ಅದು ವಿಫಲವಾಯಿತಾದರೂ ಅದಕ್ಕೆ ಪ್ರಮುಖ ಕಾರಣವೆಂದರೆ, ಅಷ್ಟೊತ್ತಿಗಾಗಲೇ ದೇವರಾಜ ಅರಸರು ಅಹಿಂದ ವರ್ಗಗಳ ಸೈನ್ಯವನ್ನು ಬಲಿಷ್ಠಪಡಿಸಿ ಸಜ್ಜಾಗಿದ್ದುದು. ಇದರ ಪರಿಣಾಮವಾಗಿ 1978ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಜನತಾ ಪಕ್ಷ ಸೋಲು ಅನುಭವಿಸಿದರೂ ಪ್ರಬಲ ಪ್ರತಿಪಕ್ಷವಾಗಿ ತಲೆ ಎತ್ತಿ ನಿಂತುಕೊಂಡಿತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮುಂದೆ 1983ರ ಚುನಾವಣೆಯಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಬರಲು ಒಕ್ಕಲಿಗ, ಲಿಂಗಾಯತ ಸಮುದಾಯಗಳು ಮೂಲ ಶಕ್ತಿಗಳಾಗಿದ್ದವು ಎಂಬುದನ್ನು ಮರೆಯಬಾರದು. ಇದಾದ ನಂತರ 1989ರ ವೇಳೆಗೆ ಜನತಾ ಪರಿವಾರ ಒಡೆದು ಹೋಳಾಗಿದ್ದರಿಂದ ಮತ್ತು ಕಾಂಗ್ರೆಸ್ ಮುಂಚೂಣಿಯಲ್ಲಿ ಲಿಂಗಾಯತ ನಾಯಕ ವೀರೇಂದ್ರ ಪಾಟೀಲರೇ ಇದ್ದುದರಿಂದ ಲಿಂಗಾಯತ ಸಮುದಾಯ ಕಾಂಗ್ರೆಸ್‌ಗೆ ಬೆಂಬಲ ನೀಡಿತು.

ವೀರೇಂದ್ರ ಪಾಟೀಲರ ಕೈಹಿಡಿದಿದ್ದ ಲಿಂಗಾಯತ

ವೀರೇಂದ್ರ ಪಾಟೀಲರ ಕೈಹಿಡಿದಿದ್ದ ಲಿಂಗಾಯತ

ಇದೇ ರೀತಿ ದೇವೇಗೌಡರ ನೇತೃತ್ವದಲ್ಲಿ ಟಿಸಿಲೊಡೆದು ನಿಂತ ಮತ್ತೊಂದು ಪಕ್ಷದ ಬಗ್ಗೆ ನಂಬಿಕೆ ಬಾರದೆ ಒಕ್ಕಲಿಗ ಸಮುದಾಯವೂ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿತು. ಆದರೆ ವೀರೇಂದ್ರ ಪಾಟೀಲರ ಪದಚ್ಯುತಿಯ ನಂತರ ಲಿಂಗಾಯತ ಸಮುದಾಯ ಯಾವತ್ತೂ ಕಾಂಗ್ರೆಸ್ ಪಕ್ಷದ ಜತೆ ದೊಡ್ಡ ಮಟ್ಟದಲ್ಲಿ ನಿಲ್ಲಲಿಲ್ಲ.

1994ರಲ್ಲಿ ಅದು ಜನತಾ ಪರಿವಾರದ ಜತೆ ನಿಂತುಕೊಂಡಿತಾದರೆ, 1999ರಲ್ಲಿ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟದ ಜತೆ ನಿಂತುಕೊಂಡಿತು. ಇಷ್ಟಾದರೂ ಆ ಸಮುದಾಯದ ಒಂದಷ್ಟು ಮತಗಳು ಕಾಂಗ್ರೆಸ್‌ಗೆ ದಕ್ಕುತ್ತಿದ್ದವು ಎಂಬುದು ಸುಳ್ಳೇನೂ ಅಲ್ಲ.

ಲಿಂಗಾಯತರನ್ನು ನಿರ್ಲಕ್ಷಿಸಿದ್ದ ಎಸ್ಎಂ ಕೃಷ್ಣ

ಲಿಂಗಾಯತರನ್ನು ನಿರ್ಲಕ್ಷಿಸಿದ್ದ ಎಸ್ಎಂ ಕೃಷ್ಣ

ಆದರೆ 1999ರಲ್ಲಿ ಒಕ್ಕಲಿಗ ಪ್ಲಸ್ ಅಹಿಂದ ಸಮುದಾಯಗಳ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷದ ಮೊದಲ ಸಾಲಿನಲ್ಲಿ ಒಬ್ಬೇ ಒಬ್ಬ ಲಿಂಗಾಯತ ಮಂತ್ರಿ ಇರಲಿಲ್ಲ ಎಂಬುದೇ ಇದಕ್ಕೆ ಸಾಕ್ಷಿ.

ಯಾವಾಗ ಈ ಬೆಳವಣಿಗೆ ನಡೆಯಿತೋ? ಇದನ್ನು ಲಿಂಗಾಯತ ಸಮುದಾಯ ತನಗಾದ ಅವಮಾನ ಎಂದು ಭಾವಿಸಿತು. ಮತ್ತು ರಾಮಕೃಷ್ಣ ಹೆಗಡೆಯವರ ಜತೆ ಸೇರಿ ಬಿಜೆಪಿ ಜತೆ ಅದಾಗಲೇ ಕೈ ಜೋಡಿಸಿದ್ದರಿಂದ 2004ರ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಬಿಜೆಪಿ ಜತೆ ಕೈ ಜೋಡಿಸಿತು.

2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಲಿಂಗಾಯತರು ನೀಡಿದ ಬೆಂಬಲವೂ ಮುಖ್ಯ ಕಾರಣ.

"ಲಿಂಗಾಯತ ಧರ್ಮ ಶಿಫಾರಸು ಆರಂಭದ ಮುನ್ನಡೆ ಅಷ್ಟೆ; ಸಂಪೂರ್ಣ ಗೆಲುವಲ್ಲ"

ಯಡಿಯೂರಪ್ಪನವರಲ್ಲಿ ಕಂಡ ನಾಯಕತ್ವ

ಯಡಿಯೂರಪ್ಪನವರಲ್ಲಿ ಕಂಡ ನಾಯಕತ್ವ

ಇದಾದ ನಂತರ ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರಲ್ಲಿ ತಮ್ಮ ನಾಯಕನನ್ನು ಕಂಡುಕೊಂಡಿತು.

ಮೊನ್ನೆ ಮೊನ್ನೆಯವರೆಗೂ ಯಡಿಯೂರಪ್ಪ ಅವರ ಜತೆಗೇ ಗಣನೀಯ ಪ್ರಮಾಣದ ಲಿಂಗಾಯತ ಮತಗಳು ಇದ್ದವು. ಹೀಗೆ ಲಿಂಗಾಯತ ಮತಗಳು ದೊಡ್ಡ ಮಟ್ಟದಲ್ಲಿ ಬಿಜೆಪಿ ಜತೆಗೇ ಉಳಿದುಕೊಂಡರೆ ಕಾಂಗ್ರೆಸ್‌ಗೆ ಮಂಬರುವ ವಿಧಾನಸಭಾ ಚುನಾವಣೆಯೂ ಕಷ್ಟಕರವಾಗುತ್ತಿತ್ತು. ಅಷ್ಟರಲ್ಲೇ ಹಾಕಿದರಲ್ಲ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್.

ವೀರಶೈವ-ಲಿಂಗಾಯತ ಬೇರೆಬೇರೆ ಕೂಗು

ವೀರಶೈವ-ಲಿಂಗಾಯತ ಬೇರೆಬೇರೆ ಕೂಗು

ಆದರೆ ಅಷ್ಟರಲ್ಲೇ ಶುರುವಾಗಿದ್ದು ವೀರಶೈವ-ಲಿಂಗಾಯತರು ಒಂದೇ ಅಲ್ಲ ಎಂಬ ಕೂಗು. ಇದು ಯಡಿಯೂರಪ್ಪನವರಿಗೆ ಸಾಕಷ್ಟು ಇರುಸುಮುರುಸು ತಂದಿತ್ತಿತು. ಇದರ ಹಿಂದೆ ಕಾಂಗ್ರೆಸ್ ಇತ್ತು ಎಂಬುದು ರಹಸ್ಯವೇನೂ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಕಾಣಿಸಿಕೊಳ್ಳಲಿಲ್ಲವಾದರೂ ಅವರ ಸಂಪುಟದಲ್ಲಿರುವ ಜಲ ಸಂಪನ್ಮೂಲ ಸಚಿವ, ಉತ್ತರ ಕರ್ನಾಟಕದ ಪ್ರಬಲ ನಾಯಕ ಎಂ.ಬಿ. ಪಾಟೀಲ್ ಅವರು ನೇರಾ ನೇರವಾಗಿ ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ ಅನ್ನುವ ಕೂಗಿನ ಪರವಾಗಿ ನಿಂತರು.

ಶೇ.14ರಷ್ಟು ಲಿಂಗಾಯತ ಜನಸಂಖ್ಯೆ

ಶೇ.14ರಷ್ಟು ಲಿಂಗಾಯತ ಜನಸಂಖ್ಯೆ

ಒಂದು ಅಂದಾಜಿನ ಪ್ರಕಾರ, ರಾಜ್ಯದ ಜನಸಂಖ್ಯೆಯ ಪೈಕಿ ವೀರಶೈವ-ಲಿಂಗಾಯತರ ಸಂಖ್ಯೆ ಶೇಕಡಾ ಹದಿನಾರರಷ್ಟಿದೆ. ಅದರಲ್ಲಿ ವೀರಶೈವರ ಪ್ರಮಾಣ ಶೇಕಡಾ ಎರಡರಷ್ಟು, ಲಿಂಗಾಯತರ ಪ್ರಮಾಣ ಶೇಕಡಾ ಹದಿನಾಲ್ಕರಷ್ಟು.

ಈ ಪೈಕಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಬಲರಾಗಿರುವವರು ವೀರಶೈವರು. ಆದರೆ ಬಸವಣ್ಣನವರಿಗಿಂತ ಮುಂಚೆ ವೀರಶೈವ ಧರ್ಮವಿತ್ತು. ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಹೀಗಾಗಿ ವೀರಶೈವರು ಒಂದು ರೀತಿ ಪುರೋಹಿತಷಾಹಿ ಇದ್ದಂತೆ. ಲಿಂಗಾಯತರು ತಳ ಸಮುದಾಯಗಳಿಂದ ಬಂದವರು ಎಂಬ ಕೂಗು ದಿನ ಕಳೆದಂತೆ ದಟ್ಟವಾಗುತ್ತಾ ಹೋಯಿತು.

ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದ ವೀರಶೈವರು

ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದ ವೀರಶೈವರು

ಅದೇ ರೀತಿ ವೀರಶೈವ ಬೇರೆ ಅಲ್ಲ, ಲಿಂಗಾಯತ ಬೇರೆ ಅಲ್ಲ. ಒಂದು ವೇಳೆ ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ, ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹಲ ವೀರಶೈವ ಪ್ರಮುಖರು, ಮಠಾಧಿಪತಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರಾದರೂ ಸಿದ್ದರಾಮಯ್ಯ ಅವರ ಚಿಂತಕರ ಚಾವಡಿ ಇದನ್ನೊಪ್ಪದೆ ತನ್ನದೇ ವರದಿಯೊಂದನ್ನು ಸಿದ್ಧಪಡಿಸಿತು.

ಎರಡೂ ಕಡೆಯಿಂದ ಕಾಂಗ್ರೆಸ್ಸಿಗೆ ಲಾಭ

ಎರಡೂ ಕಡೆಯಿಂದ ಕಾಂಗ್ರೆಸ್ಸಿಗೆ ಲಾಭ

ಮೂಲತಃ ವೀರಶೈವ-ಲಿಂಗಾಯತ ಮತಗಳು ಒಗ್ಗೂಡಿ ಬಿಜೆಪಿ ಜತೆಗಿದ್ದವು. ಆದರೆ ಲಿಂಗಾಯತರ ಪೈಕಿ ಬಹುತೇಕರಿಗೆ ತಾವು ಬೇರೆ, ವೀರಶೈವರು ಬೇರೆ ಎಂಬ ಬಾವನೆ ಬಂದಿದೆ. ಹೀಗಾಗಿ ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮವಲ್ಲ ಎಂದರೆ ಲಿಂಗಾಯತರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.

ಆದರೆ ಅದೇ ಕಾಲಕ್ಕೆ ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ, ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದರೆ ಗಣನೀಯ ಪ್ರಮಾಣದ ಲಿಂಗಾಯತ ಮತಗಳು ಕಾಂಗ್ರೆಸ್ ಕಡೆ ಬರುತ್ತವೆ.

ಅಂತೂ ಇಬ್ಭಾಗ ಮಾಡೇಬಿಟ್ಟರು ಸಿದ್ದರಾಮಯ್ಯ

ಅಂತೂ ಇಬ್ಭಾಗ ಮಾಡೇಬಿಟ್ಟರು ಸಿದ್ದರಾಮಯ್ಯ

ವಿರೋಧ ಮಾಡುತ್ತಿರುವವರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ವಿರೋಧ ಮಾಡುತ್ತಲೇ ಬಂದವರು.

ಹೀಗಾಗಿ ವಿರೋಧ ಮಾಡುವವರ ಕೂಗಿಗೆ ಮಣಿಯುವುದಕ್ಕಿಂತ, ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರುತ್ತಿರುವವರ ಪರವಾಗಿ ನಿಲ್ಲುವುದು ಲಾಭಕರ ಎಂದು ಈ ಚಿಂತಕರ ಚಾವಡಿ ಯಾವಾಗ ವರದಿ ನೀಡಿತೋ? ಆಗ ಸಿದ್ದರಾಮಯ್ಯ ಅವರ ಸರ್ಕಾರ ಯಾವ ಹಿಂಜರಿಕೆಯೂ ಇಲ್ಲದೆ ಲಿಂಗಾಯತ ಧರ್ಮ ಎಂಬುದು ಪ್ರತ್ಯೇಕ, ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿತು.

ಬಿಜೆಪಿಗೆ ಭರ್ಜರಿ ಹೊಡೆತ ಕೊಟ್ಟಿರುವ ಸಿದ್ದು

ಬಿಜೆಪಿಗೆ ಭರ್ಜರಿ ಹೊಡೆತ ಕೊಟ್ಟಿರುವ ಸಿದ್ದು

ಈ ಬೆಳವಣಿಗೆಯಿಂದ ವೀರಶೈವ ಪ್ರಮುಖರು ಕ್ರುದ್ಧರಾಗಿದ್ದಾರಾದರೂ ಲಿಂಗಾಯತರ ಪೈಕಿ ಬಹುತೇಕರು ಸಂತೃಪ್ತರಾಗಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದರ ಲಾಭ ಗಣನೀಯ ಮಟ್ಟದಲ್ಲಿ ದಕ್ಕುತ್ತದೆ ಎಂಬುದು ಅಸಹಜವೇನಲ್ಲ.

ಹೀಗೆ ಲಿಂಗಾಯತ ಮತ ಬ್ಯಾಂಕಿನ ಗಣನೀಯ ಷೇರುಗಳನ್ನು ಪಡೆದರೆ ಕಳೆದ ಬಾರಿ ಅಲ್ಪ ಅಂತರದಲ್ಲಿ ಸೋಲು ಅನುಭವಿಸಿದ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಗೆದ್ದ ಕ್ಷೇತ್ರಗಳಲ್ಲಿ ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರ.

ಈ ಲೆಕ್ಕಾಚಾರ ಸಹಜವಾಗಿಯೇ ಬಿಜೆಪಿಯನ್ನು ಕಂಗೆಡಿಸಿದೆ. ಸಿದ್ದರಾಮಯ್ಯ ಸರ್ಕಾರ ತನ್ನ ಮತ ಬ್ಯಾಂಕಿಗೆ ಹಾಕಿದ ಹೊಡೆತವನ್ನು ಯಾವ ರೀತಿ ಸರಿದೂಗಿಸಿಕೊಳ್ಳಲು ಸಾಧ್ಯ ಎಂದು ಯೋಚಿಸುತ್ತಿದೆ. ಅದು ಹಾಗೆ ಯೋಚಿಸುತ್ತಿರುವುದೇ ಸಿದ್ದರಾಮಯ್ಯ ಅವರ ತಕ್ಷಣದ ಗೆಲುವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How Siddaramaiah took away Lingayat votes from BJP by separating Lingayat and Veerashaiva and by giving separate religion status to Lingayat? There is interesting history behind lingayat politics in Karnataka. Vittal Murthy analyses the political situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more