• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೀಟಿ ಹೊಡೆದು ಸ್ವಚ್ಛ ನಿರ್ಮಲ ಗ್ರಾಮವಾದ ಸಂಶಿ

By ಚಿತ್ರಾ ಬಡಿಗೇರ, ಧಾರವಾಡ
|

ನಮ್ಮ ಉತ್ತರ ಕರ್ನಾಟಕದಲ್ಲಿ ಹಳ್ಳಿಗಳಲ್ಲಿ ಬಯಲಿಗೆ ಹೋಗುವುದು, ಚೆರಿಗೆ ತೆಗೆದುಕೊಂಡು ಮಾರ್ನಿಂಗ್ ವಾಕ್ ಮಾಡುವುದು ಅಂದ್ರೆ ಏನೋ ಖುಷಿ. ಅವರಿಗೆ ಪಾಯಖಾನೆ, ಸಂಡಾಸು, ಕಕ್ಕಸನ್ನು ಬಳಸುವುದೆಂದರೆ ಏನೋ ಅಸಹ್ಯ, ಅಸಡ್ಡೆ. ಇದಕ್ಕೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮವೂ ಹೊರತಾಗಿರಲಿಲ್ಲ. ಆದರೆ, ಈಗ ಏನಾಗಿದೆ?

ಸಂಶಿ ಊರಿನ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಸ್ವಚ್ಛತೆಯ ಸಾಫಲ್ಯತೆಯಿಂದಾಗಿ ಈ ಊರಿನ ಹೆಸರನ್ನ ಕೇಳದವರು ಕಿವಿ ನಿಗರಿನಿಗರಿ ಕೇಳುವಂತೆ, ನೋಡದವರು ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ. ಇದನ್ನು ಸಾಧಿಸಲು ವಿನೂತನ ತಂತ್ರವನ್ನೂ ಪ್ರಯೋಗಿಸಿದ್ದರು. ಇದರ ಸ್ವಾರಸ್ಯಕರ ಕಥೆ ಇಲ್ಲಿದೆ.

ಸಂಶಿ, ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ 16,000 ಜನಸಂಖ್ಯೆಯನ್ನು ಹೊಂದಿದ ಗ್ರಾಮ, ಜಿಲ್ಲೆಯಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್ ಇರುವ ಹಳ್ಳಿ. 2012ರ ಬೇಸ್ ಲೈನ್ ವರದಿಯಂತೆ, 2166ರಷ್ಟು ಶೌಚಾಲಯ ಇಲ್ಲದ ಕುಟುಂಬಗಳಿಗೆ 2017ರೊಳಗಾಗಿ ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದ ಗ್ರಾಮಗಳಿಗೆ ಅಕ್ಟೋಬರ್ 2, 2017ರಂದು ಅಭಿನಂದಿಸಲಾಯಿತು.

ಇಡೀ ಕರ್ನಾಟಕದಲ್ಲಿ 6500 ಗ್ರಾಮ ಪಂಚಾಯತ್ ಪೈಕಿ 1900 ಗ್ರಾಮ ಪಂಚಾಯತ್ ಈ ಯೋಜನೆಯಲ್ಲಿ ಯಶಸ್ವಿ ಆಗಿವೆ, ಅದರಲ್ಲಿ ಸಂಶಿ ಗ್ರಾಮವೂ ಒಂದು. ಈ ಸಾಧನೆಯನ್ನು ಗ್ರಾಮ ಪಂಚಾಯತ್ ನವರು ಮತ್ತು ಗ್ರಾಮಸ್ಥರು ಸೇರಿ ಹೇಗೆ ಸಾಕಾರಗೊಳಿಸಿದರು ಎಂಬುದರ ಸಮಗ್ರ ಚಿತ್ರಣ ಇಲ್ಲಿದೆ.

ಸಂಶಿ ಗ್ರಾಮ ವ್ಯಾಪಾರ ವಾಣಿಜ್ಯದಲ್ಲಿ ಮುಂದಿದ್ದರೂ, ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಬಯಲು ಮುಕ್ತ ಶೌಚ(ಬಯಲು ಬಹಿರ್ದೆಶೆ)ದಿಂದ ಮುಕ್ತವಾಗಲು ಆಗಿರಲಿಲ್ಲ. ಇದನ್ನು ಮನಗಂಡ ಇಲ್ಲಿನ ಪಂಚಾಯತ್ ಸದಸ್ಯರು, ಗ್ರಾಮಸ್ಥರ ಮನಸ್ಥಿತಿ ಪರಿವರ್ತನೆಗೆ ಮುಂದಾದರು.

ಕೆಲವರು ಹಣಕಾಸಿನ ತೊಂದರೆಯಿಂದ ಶೌಚ ವಂಚಿತರಾದರೆ, ಇನ್ನು ಕೆಲವರು ಧಾರ್ಮಿಕ ಮಡಿ ಮತ್ತು ಆಲಸ್ಯತನದಿಂದ ಶೌಚವನ್ನು ಕಟ್ಟಿಸಿರಲಿಲ್ಲ. ಇನ್ನು ಕೆಲವರಿಗೆ ಜಾಗದ ಕೊರತೆ, ಕೆಲವರಿಗೆ ನೀರಿನ ಸಮಸ್ಯೆ. ಇದಕ್ಕೆಲ್ಲಾ ಪಂಚಾಯತ್ ಸದಸ್ಯರು ಹಾಕಿದ ಅವಿರತ ಶ್ರಮ ಮತ್ತು ಓದಲೇಬೇಕಾದ 14 ಉಪಾಯಗಳು ಇಲ್ಲಿವೆ.

ಪಂಚಾಯತ್ ಸದಸ್ಯರ ಮೂಲಕ ಗ್ರಾಮಸ್ಥರ ಮನವೊಲಿಕೆ

ಪಂಚಾಯತ್ ಸದಸ್ಯರ ಮೂಲಕ ಗ್ರಾಮಸ್ಥರ ಮನವೊಲಿಕೆ

ಮೊದಲು ಗ್ರಾಮ ಪಂಚಾಯತಿ ಸದಸ್ಯರಿಗೆ ಯೋಜನೆ ಬಗ್ಗೆ ತಿಳಿವಳಿಕೆ. ಗ್ರಾಮ ಪಂಚಾಯತ್ ಸದಸ್ಯರ ಮೂಲಕ ಜನರ ಮನವೊಲಿಕೆಗೆ ವಿವಿಧ ತಂತ್ರಗಳನ್ನು ರೂಪಿಸುವುದು. ಯಥಾ ರಾಜಾ ತಥಾ ಪ್ರಜಾ ಎನ್ನುವ ಹಾಗೆ, ಗ್ರಾಮವನ್ನು ಆಳುವ ಸದಸ್ಯರಲ್ಲಿಯೇ ಸ್ವಚ್ಛ ಭಾರತದ ಬೀಜವನ್ನು ಬಿತ್ತದಿದ್ದರೆ ಹೇಗೆ?

ಶೀಟಿ ಹೊಡಿ ಬಯಲಿಗೆ ಹೋಗುವವರನ್ನು ತಡಿ

ಶೀಟಿ ಹೊಡಿ ಬಯಲಿಗೆ ಹೋಗುವವರನ್ನು ತಡಿ

ಸಂಶಿ ಗ್ರಾಮ ಈ ಸಫಲತೆ ಕಾಣಲು ಮುಖ್ಯವಾದ ತಂತ್ರ "ಶೀಟಿ ಹೊಡೆಯುವ ಕಾರ್ಯಕ್ರಮ". ಗ್ರಾಮದ ಅಧ್ಯಕ್ಷ, ಉಪಾಧ್ಯಕ್ಷರು ಊರಿನ ಬೀದಿ ಅಗಸಿಗಳಲ್ಲಿ ಸರಿಯಾದ ಸಮಯದಲ್ಲಿ ತಂಡಗಳ ರಚನೆ ಮಾಡಿಕೊಂಡು ಯಾರೇ ಚಂಬು ಹಿಡಿದು ಹೋಗುವವರಿಗೆ ವಿಷಲ್ ಹೊಡೆಯುತ್ತಿದ್ದರು. ಆಗ ಬೀದಿಬದಿ, ಹೊಲಗಳಲ್ಲಿ ಚೆರಿಗಿ ಹಿಡಿದುಕೊಂಡು ಮಲ ವಿಸರ್ಜನೆಗೆಂದು ಹೋಗುವ ಜನರು ಶೌಚದತ್ತ ವಾಲಿದರು.

ಶೌಚಾಲಯ ಅನಿವಾರ್ಯತೆ ಬಗ್ಗೆ ಜಾಗೃತಿ ಜಾಥಾ

ಶೌಚಾಲಯ ಅನಿವಾರ್ಯತೆ ಬಗ್ಗೆ ಜಾಗೃತಿ ಜಾಥಾ

ಜಾಗ್ರತಿ ಜಾಥಾ: ಗ್ರಾಮದಲ್ಲಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಬ್ಯಾನರ್ ಮತ್ತು ಭಿತ್ತಿ ಪತ್ರಗಳ ಮೂಲಕ ಸರಕಾರದ ಶೌಚಾಲಯದ ಯೋಜನೆಯ ಸವಲತ್ತು ಅಗತ್ಯತೆ ಅನಿವಾರ್ಯತೆ ತಿಳಿವಳಿಕೆ ನೀಡಿದರು.

ಶೌಚಾಲಯ ಮೈಲಿಗೆಯೂ ಅಲ್ಲ ಮಾರಕವೂ ಅಲ್ಲ

ಶೌಚಾಲಯ ಮೈಲಿಗೆಯೂ ಅಲ್ಲ ಮಾರಕವೂ ಅಲ್ಲ

ಗ್ರಾಮದಲ್ಲಿರುವ ಅನೇಕರು ಸಂಸ್ಕಾರ, ಸಂಪ್ರದಾಯ, ವಾಸ್ತು ಇತ್ಯಾದಿ ಹೆಸರಲ್ಲಿ ಮನೆಯಲ್ಲಿ ಶೌಚಾಲಯ ಇದ್ದರೆ ಮನೆಗೆ, ಆರೋಗ್ಯಕ್ಕೆ ಮಾರಕ, ಮೈಲಿಗೆ ಎನ್ನುವವರಿಗೆ, ವಿವಿಧ ಧಾರ್ಮಿಕ ಮುಖಂಡರಿಂದ ಶೌಚಾಲಯದ ಮಹತ್ವದ ಬಗ್ಗೆ ಮನವರಿಕೆ ಮಾಡಿಸಿ ಅವರ ಮನಸ್ಥಿತಿಯನ್ನು ಬದಲಾಯಿಸಿದರು.

 ಶಾಲೆಗಳಲ್ಲಿ ಶೌಚದ ಬಗ್ಗೆ ಪ್ರಬಂಧ ಸ್ಪರ್ಧೆ

ಶಾಲೆಗಳಲ್ಲಿ ಶೌಚದ ಬಗ್ಗೆ ಪ್ರಬಂಧ ಸ್ಪರ್ಧೆ

ಬೀದಿ ನಾಟಕಗಳನ್ನು ಮಾಡಿಸಿ, ಬಯಲು ಶೌಚದಿಂದ ಹರಡುವ ರೋಗ ರುಜಿನಗಳ ದುಷ್ಪರಿಣಾಮ ವಿವರಿಸಿದರು. ಶಾಲಾ ಮಕ್ಕಳಿಗೆ ನೈರ್ಮಲ್ಯದ ಮತ್ತು ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಹುಟ್ಟಿಸಲು ಶಾಲೆಗಳಲ್ಲಿ ಈ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದರು. ಪ್ರತೀ ಪ್ರೌಢ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ಅವರ ಮನೆಗಳ ಶೌಚಾಲಯದ ಬಗ್ಗೆ ವಿಚಾರಣೆ ನಡೆಸಿ ಮತ್ತು ಅವರ ಮನೆಯವರಿಗೆ ಶೌಚಾಲಯದ ಮಹತ್ವ ತಿಳಿಸಯಿತು.

ಎಸ್ಸಿ ಮತ್ತು ಎಸ್ಟಿಯವರಿಗೆ ಸಹಾಯ ಧನ

ಎಸ್ಸಿ ಮತ್ತು ಎಸ್ಟಿಯವರಿಗೆ ಸಹಾಯ ಧನ

ಶೌಚಾಲಯ ಹೊಂದಿರದ ಮನೆ ಮನೆಗೆ ತೆರಳಿ ಮನವೊಲಿಸಲಾಯಿತು. ಬಿಪಿಎಲ್ ನವರಿಗೆ 12,000 ರು. ಮತ್ತು ಎಸ್ಸಿ ಎಸ್ಟಿಗಳಿಗೆ 15,000 ರು. ಧನ ಸಹಾಯವನ್ನು ಸರ್ಕಾರ ನೀಡುತ್ತವೆ ಎಂದು ಸಮಗ್ರ ಮಾಹಿತಿ ರವಾನಿಸಲಾಯಿತು. ಕಟ್ಟಲು ಗುತ್ತಿಗೆದಾರರನ್ನು ನೇಮಿಸುವುದು, ಬ್ಯಾಂಕ್ ಗಳಿಂದ ಸಿಗುವ ಸಾಲದ ಬಗ್ಗೆ ಸಹಾಯ ಮಾಡುವುದು, NSS ನಂತಹ ಸಂಘಗಳಿಂದ ಉಚಿತವಾಗಿ ಕ್ಯಾಂಪ್ ವತಿಯಿಂದ ಗುಂಡಿ ತೋಡುವುದು, ಶೀಘ್ರ ನಿರ್ಮಾಣಕ್ಕಾಗಿ ರೆಡಿ ಮೇಡ್ ಫೈಬರ್ ಶೀಟ್ ಛಾವಣಿ ಅಳವಡಿಸುವುದು ಇತ್ಯಾದಿ ಸೌಕರ್ಯಗಳ ಬಗ್ಗೆ ವಿವರ ನೀಡಲಾಯಿತು.

 ಬಹಿರ್ದೆಸೆಗೆಂದು ಹೋದವರ ಮೇಲೆ ಅತ್ಯಾಚಾರ

ಬಹಿರ್ದೆಸೆಗೆಂದು ಹೋದವರ ಮೇಲೆ ಅತ್ಯಾಚಾರ

ಶೌಚಾಲಯವಿರದೇ ಹೊರ ಹೋಗುವವರಿಗೆ ಹಾವು ಚೇಳು ಹುಳ ಹುಪ್ಪಡಿಯಿಂದ ಅನಾಹುತವಾಗಿರುವ, ಕೆಲವು ಕಡೆ ಹೆಂಗಸರ ಮೇಲೆ ಅತ್ಯಾಚಾರವಾಗಿರುವ ಉದಾಹರಣೆ ಕೊಟ್ಟು ಎಚ್ಚರಿಸುವುದು. ಗರ್ಭಿಣಿಯರು ವಯೋವೃದ್ದರು ಅಂಗವಿಕಲರು ಮತ್ತು ಬಾಲಕಿಯರಿಗೆ ಶೌಚಾಲಯ ಅನಿವಾರ್ಯತೆ, ಹೈಜಿನ್ ಮತ್ತು ಅಗತ್ಯತೆಯನ್ನು ಮನದಟ್ಟು ಮಾಡುವುದು.

ನೀರಿನ ಸಮಸ್ಯೆ ಇದ್ದವರಿಗೆ ಬೋರ್ ವೆಲ್

ನೀರಿನ ಸಮಸ್ಯೆ ಇದ್ದವರಿಗೆ ಬೋರ್ ವೆಲ್

ನೀರಿನ ಸಮಸ್ಯೆ ಹೇಳುವವರಿಗೆ ಗ್ರಾಮದಲ್ಲಿ ಪ್ರತ್ಯೇಕ ಶೌಚ ಮತ್ತು ಬಳಕೆಗಾಗಿ ಬೋರ್ ವೇಲ್ ಹೊಡೆಸಿ ಕೊಡಲಾಯಿತು. ಜಾಗದ ಕೊರತೆಯಿಂದ ಶೌಚ ನಿರ್ಮಿಸಿಕೊಳ್ಳದವರಿಗಾಗಿಯೇ ಸಾಮೂಹಿಕ ಶೌಚಾಲಯ ಮಾಡಲಾಯಿತು. ಶುಚಲಾ ಸಮುಚ್ಚಯ ಸಂಕೀರ್ಣದ ವಿಧಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿ ಅದರ ಕೀಲಿ ಕೈಗಳನ್ನು ಅದಕ್ಕೆ ಸಂಬಂಧಿಸಿದ ಕುಟುಂಬಗಳಿಗೆ ಕೊಡಲಾಯಿತು.

ಮಕ್ಕಳಿಗೆ ಬಕೆಟ್, ಸೋಪ್ ಬಳಸುವ ಪ್ರಾತ್ಯಕ್ಷಿಕೆ

ಮಕ್ಕಳಿಗೆ ಬಕೆಟ್, ಸೋಪ್ ಬಳಸುವ ಪ್ರಾತ್ಯಕ್ಷಿಕೆ

ಅಂಗನವಾಡಿಗಳಲ್ಲಿ ಕೈ ತೊಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಮಕ್ಕಳಿಗೆ ಬಕೆಟ್ ಮತ್ತು ಸೋಪ್ ಕೊಟ್ಟು ಶೌಚದ ನಂತರದ ಶುಚಿತ್ವದ ಅರಿವು ಮೂಡಿಸಲಾಯಿತು, ಪ್ರಾತ್ಯಕ್ಷಿಕೆಯನ್ನೂ ತೋರಿಸಲಾಯಿತು. ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಶೌಚಾಲಯ ಬಳಸುವಂತೆ ಒತ್ತಾಯಿಸಲಾಯಿತು.

 ಸ್ವಚ್ಛತೆ ಮತ್ತು ನೈರ್ಮಲ್ಯದ ಚಿತ್ರ ಪ್ರದರ್ಶನ

ಸ್ವಚ್ಛತೆ ಮತ್ತು ನೈರ್ಮಲ್ಯದ ಚಿತ್ರ ಪ್ರದರ್ಶನ

ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತ್ ಸದಸ್ಯರು ದೂರದರ್ಶನ ಮತ್ತು ಮಾಧ್ಯಮಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಚಿತ್ರ, ಕಿರುಚಿತ್ರಗಳಿದ್ದರೆ ಹಾಗೂ ಆಕಾಶವಾಣಿಯಲ್ಲಿ ವಿಶೇಷ ಸ್ವಚ್ಛತೆ ಸಂಬಂಧಿತ ಕಾರ್ಯಕ್ರಮಗಳಿದ್ದರೆ ಉರಿನಲ್ಲಿ ಡಂಗುರ ಸಾರಿ ಪ್ರತಿಯೊಬ್ಬರೂ ವೀಕ್ಷಿಸುವಂತೆ ಜವಾಬ್ದಾರಿ ವಹಿಸಿದರು. "ಟಾಯ್ಲೆಟ್ ಏಕ ಪ್ರೇಮ್ ಕಥಾ" ದಂತಹ ಚಿತ್ರಗಳನ್ನು ಗ್ರಾಮ ಪಂಚಾಯತ್ ಸದಸ್ಯರಿಗೆ ಮೊದಲು ತೋರಿಸಿ, ಅವರಿಂದ ಊರಿನ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.

ಶೌಚಾಲಯ ಬಳಸುವವರಿಗೆ ಸನ್ಮಾನ

ಶೌಚಾಲಯ ಬಳಸುವವರಿಗೆ ಸನ್ಮಾನ

ಶೌಚಾಲಯ ಬಳಸುವವರು ಮತ್ತು ಅದನ್ನು ಬಳಸಲು ಇತರರಿಗೆ ಉತ್ತೇಜಿಸುವ ಗ್ರಾಮದ ಜನರಿಗೆ ಸಾಮೂಹಿಕ ಸಭೆ ಸಮಾರಂಭಗಳಲ್ಲಿ ಸನ್ಮಾನ ಮಾಡಿ ಪ್ರೋತ್ಸಾಹಿಸಲಾಯಿತು. ಇಂಥ ಪ್ರಯೋಗಗಳು ಸಾಕಷ್ಟು ಪರಿಣಾಮ ಬೀರಿದವು.

ಅಸಡ್ಡೆ ತೋರುವವರಿಗೆ ಹಾರ ಹಾಕಿ ಅವಮಾನ

ಅಸಡ್ಡೆ ತೋರುವವರಿಗೆ ಹಾರ ಹಾಕಿ ಅವಮಾನ

ಶೌಚಾಲಯ ಕೇವಲ ಮಹಿಳೆಯರಿಗೆ ಸೀಮಿತವಾದದ್ದು ಎಂದು ಅಸಡ್ಡೆ, ಆಲಸ್ಯ ತೋರಿಸುವವರಿಗೆ ಹೂವಿನ ಮಾಲೆ ಹಾಕಿ ಅತೀ ಮರ್ಯಾದೆ ಕೊಟ್ಟು ಫೋಟೋ ತೆಗೆದು ಅವಮಾನ ಮಾಡಿ, ಶೌಚದತ್ತ ಮುಖಮಾಡಿಸಿ ಅವರ ಮರ್ಯಾದೆ ಉಳಿಸಿದರು. ಇನ್ನೂ ಕೆಲವರು ಈ ಟಾಯ್ಲೆಟ್ ಎಲ್ಲಾ ಹೊಸಬರಿಗೆ ನಮ್ಮಂತ ಹಳಬರಿಗಲ್ಲಾ, ಅದ್ರಲ್ಲಿ ಕೂತರೆ ಕಕ್ಕ ಬರೋದೆ ಇಲ್ಲಾ ಅಂತಾ ಕುಂಟು ನೆಪ ಹೇಳ್ತಿದ್ದವ್ರಿಗೆಲ್ಲಾ ಗ್ರಾಮದ ಜನರು ಶೇಮ್ ಶೇಮ್ ಮಾಡಿ ಸರಿಯಾಗಿ ಶುದ್ದಿ ಬುದ್ದಿ ಕಲ್ಸಿದಾರೆ.

ಕಕ್ಕಸು ಮಾಡಿದರೆ ಶೌಚಾಲಯ ಗಲೀಜು!

ಕಕ್ಕಸು ಮಾಡಿದರೆ ಶೌಚಾಲಯ ಗಲೀಜು!

ಇಷ್ಟೆಲ್ಲಾ ಆದರೂ ಕೆಲವೊಬ್ಬರು ಕಟ್ಟಿಸಿದ ಶೌಚಾಲಯ ಎಲ್ಲಿ ಗಲಿಜಾಗಿ ಬಿಡತ್ತೋ ಎಂದು ಹೊರಗೆ ಹೋಗುವ ಜನರಿಗೆ, ಅದೇ ಊರಿನ ಜನರಿಂದ ಬುದ್ದಿ ಕಲ್ಸಿದ್ದಾರೆ. ಕಟ್ಟಿದ ಶೌಚಾಲಯದಲ್ಲಿ ಕುಳ್ಳು ಕಟ್ಟಿಗೆ ಶೇಖರಿಸುವುವವರಿಗೆ, ಕೋಳಿ ಕುರಿ ಸಾಕಾಣಿಕೆಗೆ ಬಳಸೋರಿಗೆ ಪಂಚಾಯ್ತಿಯವ್ರು ಕ್ರಮ ತೆಗೆದುಕೊಂಡಿದ್ದಾರೆ.

 ಕರ್ನಾಟಕ ಬಯಲು ಬಹಿರ್ದೆಶೆ ಮುಕ್ತ ರಾಜ್ಯ

ಕರ್ನಾಟಕ ಬಯಲು ಬಹಿರ್ದೆಶೆ ಮುಕ್ತ ರಾಜ್ಯ

ಹೀಗೆ ಹಲವು ವಿಶೇಷ ಸೂತ್ರಗಳನ್ನು ಬಳಸಿ, ಸಂಶಿ ಗ್ರಾಮವು, "ಕರ್ನಾಟಕ ಬಯಲು ಬಹಿರ್ದೆಶೆ ಮುಕ್ತ ರಾಜ್ಯ 2017ರೊಳಗೆ" ಆಗಬೇಕೆನ್ನುವ ಕನಸಿಗೆ ಕನ್ನಡಿಯಾಗಿದೆ ಮತ್ತು ಎಲ್ಲಾರೂ ಆ ಗ್ರಾಮಕ್ಕೆ ಹೆಮ್ಮೆಯಿಂದ ಸೀಟಿ ಹೊಡೆಯುವಂತೆ ಮಾಡಿದೆ. ಈ ಲೇಖನ ಇಷ್ಟವಾದರೆ ನೀವೂ ಕುಳಿತಲ್ಲಿಯೇ ಶೀಟಿ ಹೊಡೆಯಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Blow whistle and stop open defacation! This is the unique experiment done by Samshi gram panchayat members to stop open defacation and create awareness among the villagers about use of toilet. Gram panchayat members and villagers tell wonderful story of Samshi in Dharwad district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more