• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈರುಳ್ಳಿ ಬೆಳೆದವರಿಗೆ ನಿಜಕ್ಕೂ ಲಾಭ ಸಿಗುತ್ತಿದೆಯೇ? ರೈತರ ಅಳಲು ಕೇಳಿ

|

ಬೆಂಗಳೂರು, ಡಿಸೆಂಬರ್ 9: ದ್ವಿಶತಕದ ಗಡಿ ದಾಟಿರುವ ಈರುಳ್ಳಿ ಗ್ರಾಹಕರಿಗೆ ಮಾತ್ರ ಕಣ್ಣೀರು ಬರುವಂತೆ ಮಾಡುತ್ತಿದೆಯೇ? ಅದಕ್ಕಿಂತಲೂ ಹೆಚ್ಚು ಕಣ್ಣೀರು ಸುರಿಸುತ್ತಿರುವವನು ಈರುಳ್ಳಿ ಬೆಳೆದ ರೈತ. ಬೆಲೆ ಏರಿದಂತೆ ರೈತನ ಜೇಬಿಗೂ ಹಣ ಹೆಚ್ಚು ಹೋಗುತ್ತಿದೆ ಎಂದು ಭಾವಿಸಿದರೆ ಅದು ತಪ್ಪು. ವಾಸ್ತವವಾಗಿ ಬೆಲೆ ಹೆಚ್ಚಳದಿಂದ ರೈತರಿಗೆ ಈ ಹಿಂದೆ ಸಿಗುತ್ತಿದ್ದ ದರಕ್ಕಿಂತ ಅಧಿಕ ಬೆಲೆ ಸಿಕ್ಕಿರಬಹುದು. ಆದರೆ ಅವರಿಗಾದ ನಷ್ಟಕ್ಕೆ ಅದು ತೀರಾ ಸಣ್ಣ. ಮಿಗಿಲಾಗಿ ಗ್ರಾಹಕ ತೆರುತ್ತಿರುವ ಹಣದಲ್ಲಿ ಹೆಚ್ಚಿನ ಪಾಲು ದಲ್ಲಾಳಿಗಳಿಗೇ ಸಿಗುತ್ತಿದೆ ಹೊರತು ರೈತರಿಗಲ್ಲ.

ಈರುಳ್ಳಿಗೆ ಭರ್ಜರಿ ಬೆಲೆ ಸಿಗುತ್ತಿದೆ. ಇದರಿಂದ ಇಷ್ಟು ದಿನ ಅನುಭವಿಸಿದ ನಷ್ಟ, ಸಂಕಟಗಳಿಂದ ಕೊಂಚವಾದರೂ ನೆಮ್ಮದಿ ಸಿಗಲಿದೆ ಎಂದು ಈರುಳ್ಳಿ ತುಂಬಿದ ಮೂಟೆಗಳೊಂದಿಗೆ ಬೆಂಗಳೂರಿನ ಯಶವಂತಪುರದಲ್ಲಿರುವ ಎಪಿಎಂಸಿಗೆ 300-400 ಕಿ.ಮೀ. ದೂರ ಊರುಗಳಿಂದ ಲೋಡ್‌ಗಟ್ಟಲೆ ಈರುಳ್ಳಿ ಮಾರಾಟಕ್ಕೆ ತಂದಿದ್ದ ರೈತರಿಗೆ ದೊಡ್ಡ ಆಘಾತ ಎದುರಾಗಿದೆ. ಶನಿವಾರದ ವೇಳೆಗೆ ಕ್ವಿಂಟಲ್‌ಗೆ 14,500 ರೂ.ದಷ್ಟಿದ್ದ ಈರುಳ್ಳಿ, ಸೋಮವಾರ ಮಾರುಕಟ್ಟೆ ತೆರೆದಾಗ ಏಕಾಏಕಿ 7,000 ರೂ.ಗೆ ಕುಸಿದಿದೆ. ಆದರೆ ಹೊರ ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿ ಬೆಲೆ ಮಾತ್ರ 200 ರೂ. ಗಡಿ ದಾಟಿದೆ.

ಈರುಳ್ಳಿ ಬೆಲೆ ಹೆಚ್ಚಳದಿಂದ ರೈತರಿಗೆ ಸಿಕ್ಕುತ್ತಿರುವುದು ಅಲ್ಪ ಪ್ರಮಾಣದ ಹಣವಷ್ಟೇ. ದೊಡ್ಡ ಮೊತ್ತದ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ. ಪ್ರತಿಬಾರಿಯೂ ನಮಗೆ ಸಿಗುವುದು ಮೂರನೇ ಒಂದರಷ್ಟು ಲಾಭ ಮಾತ್ರ ಎನ್ನುತ್ತಾರೆ ಕೊಪ್ಪಳದ ರೈತ ಶಂಕರ ಕಾಟ್ರಳ್ಳಿ.

ಬೆಂಗಳೂರು ನಗರದ ಮಾರುಕಟ್ಟೆಯಲ್ಲಿ ದಾಖಲೆ ಬರೆದ ಉಳ್ಳಾಗಡ್ಡಿ

'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ಅವರು, 'ರೈತರೂ ಲಾಭ ಸಿಗುತ್ತದೆ ಎಂಬ ಆಸೆಗೆ ಕಳಪೆ ಮಾಲುಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದೇಶಿ ಈರುಳ್ಳಿಯಲ್ಲಿ ರುಚಿಯಿಲ್ಲ

ವಿದೇಶಿ ಈರುಳ್ಳಿಯಲ್ಲಿ ರುಚಿಯಿಲ್ಲ

ಟರ್ಕಿ, ಈಜಿಪ್ಟ್‌ಗಳಿಂದ ಭಾರತಕ್ಕೆ ಈರುಳ್ಳಿ ಆಮದಾಗಿದೆ. ಭಾರತದ ಈರುಳ್ಳಿಗೆ ಹೋಲಿಸಿದರೆ ಇದು ಉತ್ತಮ ರುಚಿ ಹೊಂದಿದ್ದ. ಭಾರತೀಯರಿಗೆ ಈ ವಿದೇಶಿ ಈರುಳ್ಳಿ ರುಚಿಸುವುದಿಲ್ಲ. ಮತ್ತೊಂದು ಅಂಶವೆಂದರೆ ನಮ್ಮಲ್ಲಿ ಬೆಳೆದ ಈರುಳ್ಳಿ ಒಂದು ಗಡ್ಡೆ 50-100 ಗ್ರಾಂ ತೂಗುತ್ತವೆ. ಇಬ್ಬರ ಕುಟುಂಬಕ್ಕೆ ಒಂದು ಹೊತ್ತಿಗೆ ಒಂದು ಈರುಳ್ಳಿ ಸಾಕಾಗಬಹುದು. ಆದರೆ ಟರ್ಕಿ ಈರುಳ್ಳಿ ಗಾತ್ರವೂ ದೊಡ್ಡದು. ಒಂದೊಂದು ಈರುಳ್ಳಿಯೇ 250 ಗ್ರಾಂಕ್ಕಿಂತ ಹೆಚ್ಚು ತೂಕ ಹೊಂದಿರುತ್ತವೆ.

ಮಾರಾಟ ಮಾಡಲು ಹಿಂದೇಟು

ಮಾರಾಟ ಮಾಡಲು ಹಿಂದೇಟು

ರೈತರಿಗೆ ಸಿಗುತ್ತಿದ್ದ ಈರುಳ್ಳಿ ದರ ಏಕಾಏಕಿ ಕಡಿಮೆಯಾಗಲು ಕಾರಣವೇನು? ವಿದೇಶಗಳಿಂದ ಈರುಳ್ಳಿ ಆಮದು, ಕಳಪೆ ಗುಣಮಟ್ಟದ ಈರುಳ್ಳಿಗಳ ದಾಸ್ತಾನು ಮಾರಾಟ, ಲಾಭಕ್ಕಾಗಿ ದಲ್ಲಾಳಿಗಳ ತಂತ್ರ ಇವೆಲ್ಲವೂ ಈ ಬದಲಾವಣೆ ಹಿಂದಿವೆ. 'ಉತ್ತಮ ದರ ಇದೆ ಎಂದು ರಾತ್ರಿಯೇ ಟ್ರಕ್‌ಗಳಲ್ಲಿ ಈರುಳ್ಳಿ ದಾಸ್ತಾನು ತುಂಬಿಕೊಂಡು ಎಪಿಎಂಸಿಗೆ ಮುಂಜಾನೆ ಬಂದೆವು. ಆದರೆ ಮಾರುಕಟ್ಟೆ ಆರಂಭವಾದಾಗ ಬೆಲೆ ಅರ್ಧದಷ್ಟು ಕುಸಿದಿತ್ತು. ಹೀಗಾಗಿ ತಂದ ಈರುಳ್ಳಿಯನ್ನು ಹರಾಜು ಹಾಕಲು ಮನಸಾಗಲೇ ಇಲ್ಲ. ಇನ್ನೂ ಒಂದು ದಿನ ಕಾಯಲು ನಿರ್ಧರಿಸಿದ್ದೇನೆ' ಎಂದರು ಶಂಕರ ಕಾಟ್ರಳ್ಳಿ.

ಉಳ್ಳವರಿಗಷ್ಟೇ ಉಳ್ಳಾಗಡ್ಡಿ, ಮಿಕ್ಕವರಿಗೆ ಕಣ್ಣೀರೇ ಗಟ್ಟಿ!

ಬಲಿಯದ ಈರುಳ್ಳಿ ಮಾರಾಟ

ಬಲಿಯದ ಈರುಳ್ಳಿ ಮಾರಾಟ

'ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಆಸೆಯಿಂದ ರೈತರು ಇನ್ನೂ ಸರಿಯಾಗಿ ಬೆಳೆಯದ ಈರುಳ್ಳಿಯನ್ನು ಕಿತ್ತು ತರುತ್ತಿದ್ದಾರೆ. ಕೆಲವರಂತೂ ಇನ್ನೂ 40-50 ದಿನ ಜಮೀನಿನಲ್ಲಿ ಇರಬೇಕಾದ ಬೆಳೆಯನ್ನು ಕೀಳುತ್ತಿದ್ದಾರೆ. ಅವುಗಳನ್ನು ಸಂಸ್ಕರಿಸುವ ಕಾರ್ಯವೂ ನಡೆಯುತ್ತಿಲ್ಲ. ಹಸುಗಳಿಗೂ ಹಾಕಲು ಲಾಯಕ್ಕಲ್ಲದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿವೆ. ಇದರಿಂದ ಒಟ್ಟಾರೆ ಈರುಳ್ಳಿ ಮಾರುಕಟ್ಟೆ ಗುಣಮಟ್ಟವೇ ಕುಸಿಯುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾವಾರು ಈರುಳ್ಳಿ ಬೆಲೆ; ಬಂಗಾರದಂತೆ ಈರುಳ್ಳಿ ಅಳೆಯುತ್ತಿರುವ ವ್ಯಾಪಾರಿಗಳು

ಶೇ 95ರಷ್ಟು ಬೆಳೆ ನಾಶ

ಶೇ 95ರಷ್ಟು ಬೆಳೆ ನಾಶ

ಕರ್ನಾಟಕದ ರೈತರು ಇಡೀ ರಾಜ್ಯಕ್ಕೆ ಸಾಲುವಷ್ಟು ಈರುಳ್ಳಿ ಬೆಳೆಯುತ್ತಾರೆ. ಆದರೆ ಈಸಲ ಶೇ 95ರಷ್ಟು ಈರುಳ್ಳಿ ಮಳೆಯಿಂದ ಹಾಳಾಗಿದೆ. ಮೂರು ಎಕರೆ ಹೊಲದಲ್ಲಿ 600 ಚೀಲ ಈರುಳ್ಳಿ ಬೆಳೆಯುತ್ತಿದ್ದ ನನಗೆ ಈ ಬಾರಿ ಆಗಿರುವುದು 200 ಚೀಲ ಮಾತ್ರ. ಒಂದು ಕೆ.ಜಿ. ಈರುಳ್ಳಿ 150 ರೂ. ದಾಟಿದ್ದರೂ ನಮಗೆ ಹೆಚ್ಚೆಂದರೆ 70 ರೂ. ಸಿಗುತ್ತದೆ. ಈಗ ಈ ಬೆಲೆಯೂ ಸಿಗದೆ ಹೋದರೆ ಏನೂ ಲಾಭ ಸಿಗುವುದಿಲ್ಲ. ಎಲ್ಲವೂ ದಲ್ಲಾಳಿಗಳ ಪಾಲಾಗುತ್ತಿದೆ. ರೈತರಿಗೆ ಕನಿಷ್ಠ ಬೆಲೆ ದೊರಕುವಂತೆ ಸರ್ಕಾರ ಬೆಲೆ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಶ್ರಮ ನಮ್ಮದು ಲಾಭ ಯಾರಿಗೋ...

ಶ್ರಮ ನಮ್ಮದು ಲಾಭ ಯಾರಿಗೋ...

ಎಪಿಎಂಸಿಯಲ್ಲಿ ಸೋಮವಾರ ಬೆಳಿಗ್ಗೆ ಈರುಳ್ಳಿಯ ಕಥೆ ನೋಡಿ ಉಂಟಾದ ಸಂಕಟವನ್ನು ಹಂಚಿಕೊಂಡರು. 'ಲೋಡ್ ಇಳಿಸುವಾಗ ಮತ್ತು ಹರಾಜು ಹಾಕುವಾಗ ಚೀಲದಿಂದ ಈರುಳ್ಳಿ ಬಿದ್ದು ಹೋಗುತ್ತವೆ. ಕೆಲವರು ಪ್ಲಾಸ್ಟಿಕ್ ಕೈಚೀಲಗಳನ್ನು ತಂದು ಬಿದ್ದ ಈರುಳ್ಳಿಗಳನ್ನು ಹೆಕ್ಕಿಕೊಂಡು ಹೊರಗೆ ಮಾರುಕಟ್ಟೆಯಲ್ಲಿ 150-200 ರೂಪಾಯಿಗೆ ಮಾರಾಟ ಮಾಡುತ್ತಾರೆ. ತಿಂಗಳುಗಟ್ಟಲೆ ಕಷ್ಟಪಟ್ಟು ಶ್ರಮವಹಿಸಿ ಜಮೀನಿಗೆ ನೀರುಕಟ್ಟಿ, ಬೀಜ ಬಿತ್ತಿ, ಬೆಳೆ ತೆಗೆದು, ಅದನ್ನು ವಿಂಗಡಿಸಿ, ಸಂಸ್ಕರಿಸಿ ಮಾರುಕಟ್ಟೆಗೆ ಮಾರಾಟ ಮಾಡಲು ತರುವ ರೈತರಿಗೆ ಸಿಗುವುದು ಅತ್ಯಲ್ಪ ಲಾಭ. ಆದರೆ ಉತ್ತದೆ, ಬಿತ್ತದೆ ಬೆವರು ಸುರಿಸದೆ ನಾವು ಬೆಳೆದ ಈರುಳ್ಳಿ ಹೆಕ್ಕಿ ಯಾವ ಶ್ರಮವೂ ಇಲ್ಲದೆ ಲಾಭ ಮಾಡಿಕೊಳ್ಳುತ್ತಾರೆ' ಎಂದು ನೋವಿನಿಂದ ಹೇಳಿದರು.

ಮಧ್ಯವರ್ತಿಗಳಿಗೆ ಸರಾಸರಿ ಲಾಭ

ಮಧ್ಯವರ್ತಿಗಳಿಗೆ ಸರಾಸರಿ ಲಾಭ

'ಒಂದೂವರೆ ತಿಂಗಳು ಈರುಳ್ಳಿ ಸಂಸ್ಕರಿಸಿ ಉತ್ತಮ ಗುಣಮಟ್ಟದ ಈರುಳ್ಳಿಯನ್ನು ಸುಮಾರು 400 ಕಿ.ಮೀ. ದೂರದ ಮಾರುಕಟ್ಟೆಗೆ ತಂದಿದ್ದೇನೆ. ಕೆ.ಜಿ. ಈರುಳ್ಳಿಗೆ ಸಿಗುವ ಲಾಭದಲ್ಲಿ 15-16 ರೂ ವಾಹನ ಬಾಡಿಗೆ, ಸೇರಿದಂತೆ ಸಾಗಾಟದ ವೆಚ್ಚಕ್ಕೇ ಖರ್ಚಾಗುತ್ತದೆ. ಈರುಳ್ಳಿ ಉತ್ಪಾದನೆ ಉತ್ತಮವಾಗಿ ಬೆಲೆ ಇಳಿದಾಗಲೂ ಲಾಭಾಂಶ ಕಡಿಮೆಯೇ. ಎಷ್ಟೇ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಮಧ್ಯವರ್ತಿಗಳಿಗೆ ಸಿಗುವ ಸರಾಸರಿ ಲಾಭ ಮಾತ್ರ ಕಡಿಮೆಯಾಗುವುದಿಲ್ಲ. ಈರುಳ್ಳಿಯಿಂದ ಗ್ರಾಹಕರಿಗೂ ಲಾಭವಿಲ್ಲ, ರೈತರಿಗೂ ಲಾಭವಿಲ್ಲ. ಲಾಭ ಇರುವುದು ಮಧ್ಯವರ್ತಿಗಳಿಗೆ ಮಾತ್ರ' ಎಂದರು.

ನ್ಯಾಯಯುತ ಬೆಲೆ ಸಿಗುತ್ತಿಲ್ಲ

ನ್ಯಾಯಯುತ ಬೆಲೆ ಸಿಗುತ್ತಿಲ್ಲ

'ಈಗ ಬೆಳೆದ ಬೆಳೆಯನ್ನೆಲ್ಲ ತಂದು ಹಾಕಿದ್ದೇವೆ. ಹುಡುಕಿದರೆ ಜಮೀನಿನಲ್ಲಿ ಒಂದು ಈರುಳ್ಳಿಯೂ ಸಿಗುವುದಿಲ್ಲ. ಲಾಭ ಇದೆ ಎಂಬ ಧಾವಂತದಲ್ಲಿ ಇನ್ನೂ ಬಲಿಯದ ಈರುಳ್ಳಿಯನ್ನು ಕಿತ್ತು ಮಾರುವುದು ಅಥವಾ ಮಳೆಯಿಂದ ಹಾಳಾದ ಬೆಳೆಯನ್ನೂ ಮಾರುಕಟ್ಟೆಗೆ ತರುತ್ತಿರುವುದು ಕೆಟ್ಟ ಬೆಳವಣಿಗೆ. ಹೊರಗಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ರೈತರಿಗೆ ನ್ಯಾಯಯುತ ಲಾಭ ಸಿಗುತ್ತಿಲ್ಲ' ಎಂದು ಅಳಲು ತೋಡಿಕೊಂಡರು.

English summary
Onion price hiked upto Rs 200 in the market. But the farmers are not getting enough profit from it. Here is a story of a farmer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X