ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಆಡಳಿತಯಂತ್ರವನ್ನೇ ಗಡಗಡ ನಡುಗಿಸಿದ #GotaGoHome, ಮುಂದೇನೀಗ?

|
Google Oneindia Kannada News

ನಮ್ಮ ನೆರೆಯ ಶ್ರೀಲಂಕಾದಲ್ಲಿ ಕಳೆದ ಕೆಲ ತಿಂಗಳಿಂದ ಭಾರೀ ಜನಹೋರಾಟಗಳು ನಡೆಯುತ್ತಾ ಬಂದಿರುವುದನ್ನು ಕಂಡಿದ್ದೇವೆ. ಆಡಳಿತಯಂತ್ರದ ಭ್ರಷ್ಟಾಚಾರ, ಅಸಮರ್ಪಕ ನೀತಿಗಳಿಂದಾಗಿ ಲಂಕಾದ ಆರ್ಥಿಕತೆ ಸಂಪೂರ್ಣ ಹಾಳಾಗಿ ಕೂತು ಜನರು ಬೀದಿಗಿಳಿಯಬೇಕಾದ ಪರಿಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ಜನರು ಸಿಡಿದೆದ್ದ ರೀತಿ ನಿಜಕ್ಕೂ ರೋಚಕ, ಪ್ರೇರಣಾದಾಯಕ.

ಜನರ ನಿರಂತರ ಪ್ರತಿಭಟನೆಗಳಿಗೆ ಇಡೀ ಸರಕಾರವೇ ಬೆಚ್ಚಿಬಿದ್ದಿದೆ. ಪರಿಣಾಮವಾಗಿ ಅಧ್ಯಕ್ಷ ಗೊತಬಯ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಇಬ್ಬರೂ ರಾಜೀನಾಮೆ ಕೊಡಬೇಕಾಯಿತು. ಸರಕಾರವೇ ಬದಲಾಗಿ ಹೋಯಿತು. ಇದೀಗ ರಾಜಪಕ್ಸೆ ಕುಟುಂಬದವರ ಕೈಗೆ ಆಡಳಿತ ತಪ್ಪಿದೆ. ರಾನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗಿದ್ದಾರೆ.

ಶ್ರೀಲಂಕಾಗೆ ರಾನಿಲ್‌ ವಿಕ್ರಮಸಿಂಘೆ ನೂತನ ಅಧ್ಯಕ್ಷಶ್ರೀಲಂಕಾಗೆ ರಾನಿಲ್‌ ವಿಕ್ರಮಸಿಂಘೆ ನೂತನ ಅಧ್ಯಕ್ಷ

ಕೆಲ ತಿಂಗಳ ಹಿಂದಿನವರೆಗೂ ರಾಜಪಕ್ಸೆ ಕುಟುಂಬ ಸದಸ್ಯರನ್ನು ಅಧಿಕಾರದಿಂದ ದೂರ ಇಡಬಹುದು ಎಂಬುದನ್ನು ಕಲ್ಪಿಸಲೂ ಸಾಧ್ಯವಿರಲಿಲ್ಲ. ಮಹಿಂದಾ ರಾಜಪಕ್ಸೆ ಮತ್ತು ಗೋಟಬಯ ರಾಜಪಕ್ಸೆ ಅವರ ಜನಪ್ರಿಯತೆ ಅಷ್ಟರಮಟ್ಟಿಗೆ ಇತ್ತು. ಸರಕಾರದಲ್ಲಿ ಅವರ ಹಿಡಿತ ಆ ರೀತಿ ಇತ್ತು.

ಜನಶಕ್ತಿ ಮುಂದೆ ಯಾವ ಶಕ್ತಿಯೂ ಇಲ್ಲ ಎಂಬುದನ್ನು ಶ್ರೀಲಂಕಾ ನಿರೂಪಿಸಿದೆ. ಜನರು ಸಂಘಟಿತರಾಗಿ ಬೀದಿಗಿಳಿದರೆ ಏನು ಬೇಕಾದರೂ ಆಗುತ್ತದೆ ಎಂಬುದಕ್ಕೆ ಲಂಕಾ ಸಾಕ್ಷಿಯಾಗಿದೆ. ಅಷ್ಟಕ್ಕೂ ಜನರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದು #GotaGoHome ಎಂಬೊಂದು ಸ್ಲೋಗನ್.

ಶ್ರೀಲಂಕಾ ಬಿಕ್ಕಟ್ಟಿನಿಂದ ಭಾರತಕ್ಕೆ 3 ಪಾಠ: ಸಚಿವ ಎಸ್. ಜೈಶಂಕರ್ಶ್ರೀಲಂಕಾ ಬಿಕ್ಕಟ್ಟಿನಿಂದ ಭಾರತಕ್ಕೆ 3 ಪಾಠ: ಸಚಿವ ಎಸ್. ಜೈಶಂಕರ್

ಲಂಕಾದಲ್ಲಿ ಹೋರಾಟ ಆರಂಭವಾಗಿದ್ದು

ಲಂಕಾದಲ್ಲಿ ಹೋರಾಟ ಆರಂಭವಾಗಿದ್ದು

ಶ್ರೀಲಂಕಾ ಈ ವರ್ಷದ ಆರಂಭದಿಂದಲೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಪೆಟ್ರೋಲ್ ಜೊತೆಗೆ ಆಹಾರ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗತೊಡಗಿದಾಗ ಜನರು ಹೆಚ್ಚೆಚ್ಚು ಬೀದಿಗಿಳಿದು ಪ್ರತಿಭಟನೆ ಮಾಡತೊಡಗಿದರು. ಈ ಸಂದರ್ಭದಲ್ಲಿ ಜನರಿಗೆ ಅಸ್ತ್ರವಾಗಿ ಸಿಕ್ಕಿದ್ದೇ #GotaGoHome.

ಸೋಷಿಯಲ್ ಮೀಡಿಯಾದಲ್ಲಿ ಗಾಟಗೋಹೋಮ್ ಹ್ಯಾಷ್ ಟ್ಯಾಗ್ ವೈರಲ್ ಆಗಿ ಹೋಯಿತು. ದೇಶಾದ್ಯಂತ ಮೂಲೆಮೂಲೆಗಳಿಂದಲೂ ಜನರು ಸಂಘಟಿತರಾಗಿ ಬೀದಿಗಿಳಿದು ಪ್ರತಿಭಟನೆಗೆ ತೊಡಗಿದರು. ಅದರಲ್ಲೂ ಯುವಜನತೆ ಆಕ್ರೋಶ ಈ ಪ್ರತಿಭಟನೆಗೆ ಹೊಸ ಹೊಸ ಆಯಾಮ ನೀಡಿತು.

ಗಾಟಗೋಹೋಮ್ ಎಂದರೆ Gota Go Home (ಗೊಟಬಯ ಮನೆಗೆ ಹೋಗಿ) ಎಂಬುದು ಗೊಟಬಯ ರಾಜಪಕ್ಸೆಯವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಸುವ ಗುರಿಯ ಒಂದು ಅಭಿಯಾನ. ರಾಜಪಕ್ಸೆ ಕುಟುಂಬದವರಿಂದ ದೇಶದ ಆರ್ಥಿಕ ಪರಿಸ್ಥಿತಿ ಇಷ್ಟು ದುರವಸ್ಥೆಗೆ ಇಳಿದಿದೆ ಎಂಬುದು ಜನರ ಆಕ್ರೋಶ. ರಾಜಪಕ್ಸೆಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಜನರ ಹೋರಾಟಕ್ಕೆ ಜೀವ ತುಂಬಿದ್ದು ಇದೇ #GotaGoHome ಅಭಿಯಾನ.

ರಾಜಪಕ್ಸೆ ಪರ ನಿಂತ ಮಾಧ್ಯಮ

ರಾಜಪಕ್ಸೆ ಪರ ನಿಂತ ಮಾಧ್ಯಮ

ಗೊಟಬಯ ರಾಜಪಕ್ಸೆ ಮತ್ತು ಮಹಿಂದಾ ರಾಜಪಕ್ಸೆ ಇಬ್ಬರೂ ಕೂಡ ಸರಕಾರದಲ್ಲಿ ಪ್ರಬಲ ಹಿಡಿತ ಹೊಂದಿದ್ದವರು. ಲಂಕಾದ ಮೈನ್‌ಸ್ಟ್ರೀಮ್ ಮೀಡಿಯಾ ಸಂಪೂರ್ಣ ರಾಜಪಕ್ಸೆ ಕುಟುಂಬದವರ ಅಂಕೆಯಲ್ಲೇ ಇತ್ತು. ಲಂಕಾದ ಆರ್ಥಿಕ ಪರಿಸ್ಥಿತಿ ಬಗ್ಗೆ ಯಾವ ಪತ್ರಿಕೆಯಲ್ಲೂ, ಟಿವಿ ವಾಹಿನಿಯಲ್ಲೂ ವಾಸ್ತವ ಚಿತ್ರಣ ಬರಲಿಲ್ಲ. ಸರಕಾರ ಸುಲಭವಾಗಿ ಸಮಸ್ಯೆ ಬಗೆಹರಿಸುತ್ತದೆ ಎಂದೇ ವರದಿಗಳು ರಂಜಕವಾಗಿ ಬಿತ್ತರಗೊಳ್ಳುತ್ತಿದ್ದವು.

ಎಲ್‌ಟಿಟಿಇ ಉಗ್ರರನ್ನು ಸಂಪೂರ್ಣ ಹೊಸಕಿಹಾಕಿದ ಕಾರ್ಯದ ಶ್ರೇಯಸ್ಸು ಪಡೆದಿರುವ ರಾಜಪಕ್ಸೆ ಎಂದರೆ ಯಾವ ಸಮಸ್ಯೆಯನ್ನೂ ನಿವಾರಿಸಬಲ್ಲ ಶಕ್ತಿಮಾನ್ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು. ಜನರು ಆಗಾಗ್ಗೆ ನಡೆಸುತ್ತಿದ್ದ ಹೋರಾಟಗಳು ವಿದೇಶಿ ಶಕ್ತಿಗಳ ಪ್ರೇರಿತವೆಂದು ನಿರೂಪಿಸುವ ಪ್ರಯತ್ನಗಳಾಗಿತ್ತು. ಹೋರಾಟಗಳ ಹಿಂದೆ ಇಸ್ಲಾಮಿಕ್ ಉಗ್ರರು, ಕ್ರೈಸ್ತ ಸಂಘಟನೆಗಳ ಪಿತೂರಿ ಇದೆ. ರಾಜಪಕ್ಸೆ ಜೋಡಿ ಈ ಎಲ್ಲರನ್ನೂ ಹೊಸಕಿಹಾಕುತ್ತಾರೆ ಎಂದು ಮಾಧ್ಯಮಗಳಲ್ಲಿ ಬಣ್ಣಬಣ್ಣವಾಗಿ ಬರೆಯಲಾಗಿತ್ತು.

ಸೋಷಿಯಲ್ ಮೀಡಿಯಾ ಶಕ್ತಿ

ಸೋಷಿಯಲ್ ಮೀಡಿಯಾ ಶಕ್ತಿ

ಮುಖ್ಯವಾಹಿನಿಯ ಮಾಧ್ಯಮಗಳು ಬಹುತೇಕ ಸರಕಾರದ ಪರವಾಗಿ ನಿಂತರೂ ಜನರ ಹೋರಾಟದ ಉತ್ಸಾಹ ಕುಂದಿಸಲು ಆಗಲಿಲ್ಲ. ಹೋರಾಟಕ್ಕೆ ರೆಕ್ಕೆ ಪುಕ್ಕ ಸಿಕ್ಕಿದ್ದು ಸೋಷಿಯಲ್ ಮೀಡಿಯಾದಲ್ಲಿ. ಮಾಧ್ಯಮಕ್ಕೆ ಪರ್ಯಾಯವಾಗಿ ಸಾಮಾಜಿಕ ಮಾಧ್ಯಮಗಳು ರೊಚ್ಚಿಗೆದ್ದು ನಿಂತಿದ್ದವು.

ಶ್ರೀಲಂಕಾದಲ್ಲಿ 1.1 ಕೋಟಿ ಜನರು ಸೋಷಿಯಲ್ ಮೀಡಿಯಾ ಬಳಸುತ್ತಾರೆ. ಇದು ಸಾಮಾನ್ಯ ಸಂಖ್ಯೆಯಲ್ಲ. ಲಂಕಾ ಜನಸಂಖ್ಯೆ ಇರುವುದೇ 2.19 ಕೋಟಿ. ಅಂದರೆ ಶೇ. 50 ಜನಸಂಖ್ಯೆ ಸೋಷಿಯಲ್ ಮೀಡಿಯಾ ಬಳಕೆದಾರರು. ಭಾರತದಲ್ಲಿ 125 ಕೋಟಿ ಜನಸಂಖ್ಯೆಯಲ್ಲಿ ಸೋಷಿಯಲ್ ಮೀಡಿಯಾ ಬಳಸುವವರ ಸಂಖ್ಯೆ 50 ಕೋಟಿ ದಾಟಿಲ್ಲ. ಲಂಕಾದ ಅರ್ಧದಷ್ಟು ಜನರು ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿ ಯಾವುದಾದರೂ ಸಾಮಾಜಿಕ ಜಾಲತಾಣ ಅಥವಾ ಆ್ಯಪ್ ಅನ್ನು ಹೊಂದಿದ್ದಾರೆ.

ಪ್ರಬಲ ಸೋಷಿಯಲ್ ಮೀಡಿಯಾದಿಂದಾಗಿ ಗಾಟಗೋಹೋಮ್ ಅಭಿಯಾನ ಜನರನ್ನು ಸಂಚಲನಗೊಳಿಸಿತು. ಒಬ್ಬರಿಂದೊಬ್ಬರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಚಾರ ಪಡೆಯಿತು. ಜನರು ಬೀದಿಗಿಳಿದು ಹೋರಾಟ ಮಾಡಿದ್ದಲ್ಲದೇ ಆ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅದೇ ಹ್ಯಾಷ್ ಟ್ಯಾಗ್ ಬಳಸಿ ಪೋಸ್ ಮಾಡತೊಡಗಿದರು. ಹೋರಾಟಗಳು ಫೇಸ್‌ಬುಕ್‌ನಲ್ಲಿ ಲೈವ್ ಆಗಿ ಬಿತ್ತರಗೊಂಡವು. ಮುಖ್ಯವಾಹಿನಿ ಮಾಧ್ಯಮಗಳು ಮಾಡದ ಕೆಲಸವನ್ನು ಸೋಷಿಯಲ್ ಮೀಡಿಯಾ ಮಾಡಿತು. ದೇಶದ ವಿವಿಧೆಡೆ ನಡೆಯುತ್ತಿದ್ದ ಹೋರಾಟಗಳ ಸ್ವರೂಪ, ತೀವ್ರತೆ ಎಲ್ಲವೂ ಗಾಟಗೋಹೋಮ್ ಹ್ಯಾಷ್‌ಟ್ಯಾಗ್ ಎಂಬ ಒಂದೇ ವೇದಿಕೆಯಲ್ಲಿ ಕಾಣತೊಡಗಿದವು. ಜನರು ಇನ್ನೂ ಹೆಚ್ಚು ಪ್ರೇರಿತಗೊಂಡರು.

ಮೇ 6 ಮತ್ತು 9 ಐತಿಹಾಸಿಕ ದಿನ

ಮೇ 6 ಮತ್ತು 9 ಐತಿಹಾಸಿಕ ದಿನ

ಶ್ರೀಲಂಕಾದಲ್ಲಿ ಏಪ್ರಿಲ್ ತಿಂಗಳಿಂದ ಈಚೆಗೆ ನಡೆದ ಹೋರಾಟ ಅಕ್ಷರಶಃ ಜನಕ್ರಾಂತಿ. ಲಂಕಾದ ಇತಿಹಾಸದಲ್ಲಿ ಈ ಹೋರಾಟಕ್ಕೆ ಪ್ರಾಮುಖ್ಯತೆ ಇರಲಿದೆ. 2022 ಮೇ 6 ಅಥವಾ ಮೇ 9ರ ದಿನ ಲಂಕಾದ ಮುಂದಿನ ತಲೆಮಾರಿನವರಿಗೆ ಪ್ರಮುಖ ದಿನವಾಗಲಿದೆ. ಯಾಕೆಂದರೆ ಈ ಎರಡು ದಿನ ಅಂಥ ಪ್ರಬಲ ಘಟನೆಗಳು ನಡೆದಿದ್ದವು.

ಮೇ 6ರಂದು ಇಡೀ ದೇಶದಲ್ಲಿ ಜನರು ಬಂದ್ ನಡೆಸಿದ್ದರು. ಮೂಲೆ ಮೂಲೆಗಳಿಂದಲೂ ಜನರು ಅಂದು ಬೀದಿಗೆ ಬಂದು ಪ್ರತಿಭಟನೆ ನಡೆಸಿದ್ದರು. ಅಂದು ನೂರಾರು ಟ್ರೇಡ್ ಯೂನಿಯನ್‌ಗಳು ಹೋರಾಟಕ್ಕೆ ಕೈಜೋಡಿಸಿದವು. ಅಧ್ಯಕ್ಷರ ಮನೆ ಸುತ್ತ ಮುತ್ತಿಗೆ ಹಾಕಿದರು. ಜನರು ಇಷ್ಟು ದೊಡ್ಡ ಮಟ್ಟಕ್ಕೆ ಪ್ರತಿಭಟನೆ ನಡೆಸುತ್ತಾರೆಂದು ಎಣಿಸದ ಅಧ್ಯಕ್ಷ ಗೊತಬಯ ರಾಜಪಕ್ಸೆ ಮರುದಿನ ತುರ್ತುಪರಿಸ್ಥಿತಿ ಹೇರಿದರು. ಒಂದು ದಿನದ ಬಳಿಕ ತುರ್ತುಸ್ಥಿತಿ ವಾಪಸ್ ಪಡೆದರು.

ಇಷ್ಟಾದರೂ ಎದೆಗುಂದದ ಜನರು ತಮ್ಮ ಹೋರಾಟ ಮುಂದುವರಿಸಿದರು. ಸರಕಾರದಿಂದ ಜನರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯಿತು. ಮೇ 9ರಂದು ಗಾಲಿ ನಗರದಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ತಮ್ಮ ಕಡೆಯ ಜನರನ್ನು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲು ಬಿಟ್ಟರು. ಇದು ಪ್ರತಿಭಟನಾಕಾರರ ತಾಳ್ಮೆಯ ಕಟ್ಟೆಯನ್ನು ಒಡೆಯುವಂತೆ ಮಾಡಿತು. ರಾಜಪಕ್ಸೆ ಕಡೆಯವರು ಹಲ್ಲೆ ಮಾಡಿದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯಿತು.

ಪರಿಣಾಮವಾಗಿ ಆಡಳಿತ ಪಕ್ಷದ ಶಾಸಕರು, ಸಂಸದರು ಹಾಗು ನಾಯಕರ ಮನೆಗಳ ಮೇಲೆ ಅಲ್ಲಲ್ಲಿ ದಾಳಿಗಳಾದವು. ಅನೇಕರ ಮನೆಗಳು ಜನರ ಆಕ್ರೋಶಕ್ಕೆ ಸುಟ್ಟುಹೋದವು. ಒಬ್ಬ ಸಂಸದ ತನ್ನ ಮನೆ ಸುಟ್ಟು ಹೋಗಿದ್ದನ್ನು ನೋಡಿ ಹೃದಯಾಘಾತದಿಂದಲೇ ಮೃತಪಟ್ಟಿದ್ದರು. ಪೊಲೀಸರು ಗೋಲಿಬಾರ್ ನಡೆಸಿದರು, ಲಾಠಿ ಪ್ರಹಾರ ಮಾಡಿದರು. ಯಾವುದೂ ಕೂಡ ಜನರ ಕೆಚ್ಚನ್ನು ತಗ್ಗಿಸಲಿಲ್ಲ.

ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆದ ಮೇ 6, ಹಾಗು ಸರಕಾರಿ ಗೂಂಡಾಗಳ ವಿರುದ್ಧ ಜನರು ಸಿಡಿದೆದ್ದ ಮೇ 9, ಈ ಎರಡು ದಿನಗಳಲ್ಲಿ ಯಾವುದಾದರು ಒಂದು ಐತಿಹಾಸಿಕ ದಿನವಾಗಿ ಪರಿಗಣಿತವಾಗಲಿದೆ ಎನ್ನುತ್ತಾರೆ ಹೋರಾಟಗಾರರು.

ಮುಂದೇನು?

ಮುಂದೇನು?

ಲಂಕಾ ಜನರ ಹೋರಾಟ ರಾಜಪಕ್ಸೆ ಆಡಳಿತವನ್ನು ಕೊನೆಗಾಣಿಸುವ ಗುರಿ ಎಂದು ಮೇಲ್ನೋಟಕ್ಕೆ ಅನಿಸಬಹುದು. ಈ ನಿಟ್ಟಿನಲ್ಲಿ ಗಾಟಗೋಹೋಮ್ ಅಭಿಯಾನ ಯಶಸ್ವಿಯಾಗಿದ್ದು ಹೌದು. ಅದರೆ, ವಾಸ್ತವದಲ್ಲಿ ಜನರು ಹೋರಾಟ ನಡೆಸುತ್ತಿರುವುದು ರಾಜಪಕ್ಸೆ ಆಡಳಿತ ಇಳಿಸಬೇಕೆಂಬುದಕ್ಕಿಂತ ಹೆಚ್ಚಾಗಿ ಲಂಕಾ ರಾಜಕೀಯ ವ್ಯವಸ್ಥೆಯಲ್ಲೇ ಬದಲಾವಣೆ ತರಲು ಎಂದು ಇಲ್ಲಿನ ಕೆಲ ಹೋರಾಟಗಾರರು ಹೇಳುತ್ತಾರೆ. ಲಂಕಾದ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಇಂಥ ಜನಕ್ರಾಂತಿ ಹಿಂದೆ ಆಗಿದ್ದಿದೆ. ಸರಕಾರ ಹಾದಿ ತಪ್ಪಿದಾಗೆಲ್ಲಾ ಜನರು ಕ್ಷಿಪ್ರ ಕ್ರಾಂತಿ ನಡೆಸಿದ್ದಿದೆ. ಸರಕಾರವನ್ನೇ ಬದಲಿಸಿದ್ದಲ್ಲೇ ವ್ಯವಸ್ಥೆಯಲ್ಲಿ ಸುಧಾರಣೆ ಆಗುವಂತೆ ಮಾಡಿದ್ದಾರೆ. ೧೯೫೩ರ ಕ್ರಾಂತಿ ಅಂಥ ಘಟನೆಗಳಲ್ಲಿ ಒಂದು.

ಈಗ ರಾನಿಲ್ ವಿಕ್ರಮಸಿಂಘೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ಧಾರೆ. ರಾಜಪಕ್ಸೆ ಕುಟುಂಬದವರು ಪ್ರಧಾನಿಯಾಗಿ ಆಯ್ಕೆ ಮಾಡಿದ್ದು ಇವರನ್ನೇ. ಹಿಂದೆ ಇವರು ಐದು ಬಾರಿ ಪ್ರಧಾನಿಯಾಗಿ ಕೆಲಸ ಮಾಡಿದ್ಧಾರೆ. ಇವರ ಆಡಳಿತದ ವೇಳೆಯಲ್ಲಿ ಒಂದಷ್ಟು ಸುಧಾರಣೆಗಳು ಆಗಿದ್ದು ಹೌದು. ಆದರೂ ರಾನಿಲ್ ವಿಕ್ರಮಸಿಂಘೆ ಅವರನ್ನು ರಾಜಪಕ್ಷೆ ಕುಟುಂಬದವರು ರಿಮೋಟ್ ಕಂಟ್ರೋಲ್‌ನಂತೆ ಬಳಸುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಹೀಗಾಗಿ, ಜನರ ಪ್ರತಿಭಟನೆ ಇಷ್ಟಕ್ಕೇ ನಿಲ್ಲುತ್ತದೆ ಎಂದು ಹೇಳಲು ಆಗುವುದಿಲ್ಲ. ತಾತ್ಕಾಲಿಕವಾಗಿ ನಿಂತು ಕೆಲ ತಿಂಗಳ ಬಳಿಕ ಸರಕಾರದ ಆಡಳಿತದ ವೈಖರಿ ನೋಡಿಕೊಂಡು ಜನರ ಹೋರಾಟ ಹೊಸ ಸ್ವರೂಪ ಪಡೆದರೂ ಅಚ್ಚರಿ ಇಲ್ಲ.

(ಒನ್ಇಂಡಿಯಾ ಸುದ್ದಿ)

English summary
Here is a look at how Sri Lankans were able to stand against government and fight for many days despite mainstream media supporting the government forces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X