ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರಾಜ ಅರಸು ಶೋಷಿತ ವರ್ಗಗಳ ಚಾಂಪಿಯನ್ ಆಗಿದ್ದು ಹೇಗೆ?

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದೇ ಕರೆಯಲಾಗುತ್ತಿದ್ದ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರು ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ಕರ್ನಾಟಕದಲ್ಲಿ ತಂದವರು. ಆದರೆ, ಅವರು ಶೋಷಿತ ವರ್ಗಗಳ ಚಾಂಪಿಯನ್ ಆಗಿದ್ದು ಹೇಗೆ? ರಾಜಕೀಯ ಸನ್ನಿವೇಶಗಳು ಹೇಗೆ ಅವರಿಗೆ ಸಹಾಯಕವಾದವು ಎಂಬುದನ್ನು, ಅವರ ಹಟ್ಟುಹಬ್ಬದಂದು ಆರ್ ಟಿ ವಿಠ್ಠಲಮೂರ್ತಿ ಅವರು ಮೆಲುಕುಹಾಕಿದ್ದಾರೆ.

***
ಕಳೆದ ಐವತ್ತು ವರ್ಷಗಳಿಂದ ಕರ್ನಾಟಕದ ರಾಜಕಾರಣದಲ್ಲಿ ಸಕ್ರಿಯರಾಗಿರುವ ಹಿರಿಯ ನಾಯಕರೊಬ್ಬರ ಜತೆ ಮೊನ್ನೆ, ಆಫ್ ದಿ ರೆಕಾರ್ಡ್ ಅಂತ ಮಾತನಾಡುತ್ತಿದ್ದೆ. ಹೀಗೆ ಆಫ್ ದಿ ರೆಕಾರ್ಡ್ ಅಂತ ನಾಯಕರ ಜತೆ ಮಾತನಾಡಿದಾಗ ಗೊತ್ತಿಲ್ಲದ ಅನೇಕ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಹೀಗಾಗಿ ಬಹುತೇಕ ಪತ್ರಕರ್ತರಿಗೆ ರೊಟೀನ್ ಸುದ್ದಿಗಳಿಗಿಂತ ಆಫ್ ದಿ ರೆಕಾರ್ಡ್ ಸ್ಟೋರಿಗಳೆಂದರೆ ಪ್ರೀತಿ.

ಅಖಂಡತೆಯ ಯೋಗ, ರಾಜ್ಯ ವಿಭಜನೆಯನ್ನು ಬಗ್ಗುಬಡಿದ ಅರಸು ಪ್ರಯೋಗಅಖಂಡತೆಯ ಯೋಗ, ರಾಜ್ಯ ವಿಭಜನೆಯನ್ನು ಬಗ್ಗುಬಡಿದ ಅರಸು ಪ್ರಯೋಗ

ಅವತ್ತು ಆ ನಾಯಕರು, ದೇವರಾಜ ಅರಸರ ಕುರಿತು ಮಾತನಾಡಿದರು. 1972ರ ಮಾರ್ಚ್ 20ರಿಂದ 1980ರವರೆಗೆ (77ರಲ್ಲಿ ಸ್ವಲ್ಪ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯಿತ್ತು) ಕರ್ನಾಟಕದ ಮುಖ್ಯಮಂತ್ರಿಯಾಗಿ, ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ, ಇತಿಹಾಸದ ಪುಟಗಳಲ್ಲಿ ಗುರುತಿಸಲ್ಪಟ್ಟವರು ಅರಸು.

How Devaraj Urs became champion of downtrodden people?

ಉಳುವವನೇ ಹೊಲದೊಡೆಯ ಎಂಬ ಮಂತ್ರದೊಂದಿಗೆ ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ, ರಾಜ್ಯದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ (ಅಹಿಂದ) ಸಮುದಾಯಗಳಿಗೆ ಸೇರಿದ ಅನೇಕರಿಗೆ ಭೂಮಿ ದಕ್ಕುವಂತೆ ಮಾಡಿದ್ದಲ್ಲದೇ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲು ನೆರವು ನೀಡಿತು.

ಅಂತಹ ದೇವರಾಜ ಅರಸರನ್ನು ಹತ್ತಿರದಿಂದ ನೋಡಿದ ರಾಜಕಾರಣಿ ಇವರು. ಹೀಗಾಗಿ ನಾನು ಕೇಳುತ್ತಿದ್ದಂತೆಯೇ ಅವರು ಮಾತನಾಡುತ್ತಾ ಹೋದರು: "ನೋಡಿ ನೀವು ಪತ್ರಕರ್ತರು. ಯಾವುದೇ ವಿಷಯಕ್ಕೆ ಹಲ ಮುಖಗಳು ಇರುತ್ತವೆ ಎಂಬುದನ್ನು ಮೊದಲು ಗಮನಿಸಿ. ಅಂದ ಹಾಗೆ ಅನುಮಾನವೇ ಇಲ್ಲ. ದೇವರಾಜ ಅರಸರು ರಾಜ್ಯದ ಶೋಷಿತ ವರ್ಗಗಳ ಚಾಂಪಿಯನ್ ಎನ್ನಿಸಿಕೊಂಡಿದ್ದು ನಿಜ. ಮತ್ತು ಅದಕ್ಕೆ ಪೂರಕವಾದ ಕೆಲಸಗಳನ್ನು ಮಾಡಿದ್ದೂ ನಿಜ. ಆದರೆ ಅದನ್ನವರು ತಮ್ಮ ರಾಜಕೀಯ ಲಾಭಕ್ಕಾಗಿ ಮಾಡಿದರು.

ಅರಸು ಕಾಲದಲ್ಲಿ ಕಟ್ಟಿದ್ದ ಅಹಿಂದ ಸೈನ್ಯವೆಲ್ಲಿ? ರಾಹುಲ್ ಗಾಂಧಿ ಕೇಳುತ್ತಿದ್ದಾರೆ!ಅರಸು ಕಾಲದಲ್ಲಿ ಕಟ್ಟಿದ್ದ ಅಹಿಂದ ಸೈನ್ಯವೆಲ್ಲಿ? ರಾಹುಲ್ ಗಾಂಧಿ ಕೇಳುತ್ತಿದ್ದಾರೆ!

ಆದರೆ ಇದನ್ನು ನೀವು ಗಮನಿಸುವುದಿಲ್ಲ. ಫೈನಲಿ, ಯಾವುದೇ ವಿಷಯದಲ್ಲಿ ರಿಸಲ್ಟು ಗಮನಿಸುವುದು ಮುಖ್ಯವಾದರೂ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ನೀವು ಮೂಲವನ್ನೂ ಗಮನಿಸಬೇಕು. ಆಗ ನಿಮಗೆ ರಾಜಕೀಯದ ಒಳನೋಟಗಳು ದಕ್ಕುತ್ತವೆ.

How Devaraj Urs became champion of downtrodden people?

ಅಂದ ಹಾಗೆ ದೇವರಾಜ ಅರಸರು ಸಿಎಂ ಆಗುವ ಮುನ್ನಿನ ದಿನಗಳಲ್ಲಿ ನಿಜಲಿಂಗಪ್ಪ ಅವರಿಗೂ ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿ ಅವರಿಗೂ ಆಗುತ್ತಿರಲಿಲ್ಲ. ಅದಾಗಲೇ ರಾಷ್ಟ್ರ ರಾಜಕೀಯದ ಪಡಸಾಲೆ ತಲುಪಿದ್ದ ನಿಜಲಿಂಗಪ್ಪ ಅವರು ಇಂದಿರಾ ವಿರೋಧಿ ಪಾಳೆಯದಲ್ಲಿದ್ದರು. ಹೀಗಾಗಿ ಅವತ್ತು ಕರ್ನಾಟಕದಲ್ಲಿ ಪರ್ಯಾಯ ನಾಯಕನನ್ನು ಇಂದಿರಾ ಗಾಂಧಿ ಹುಡುಕುತ್ತಿದ್ದರು.

ಅದೇ ಸಂದರ್ಭದಲ್ಲಿ ದೇವರಾಜ ಅರಸರಿಗೆ ಇಲ್ಲಿ, ಸರ್ಕಾರಿ ಸಂಸ್ಥೆಯೊಂದು ಫೆವರ್ ಮಾಡಿತ್ತು ಎಂಬ ಕಾರಣಕ್ಕಾಗಿ ನಿಜಲಿಂಗಪ್ಪ ಅವರು ತಿರುಗಿ ಬಿದ್ದಿದ್ದರು. ಹೀಗೆ ಇಲ್ಲಿ, ನಿಜಲಿಂಗಪ್ಪ ಮತ್ತು ಅರಸರಿಗೂ ಆಗುತ್ತಿರಲಿಲ್ಲ. ಈ ಮಧ್ಯೆ ನಿಜಲಿಂಗಪ್ಪ ರಾಷ್ಟ್ರ ರಾಜಕಾರಣದಲ್ಲಿದ್ದುದರಿಂದ ಇಲ್ಲಿ ಅವರ ಶಿಷ್ಯರಾದ ವೀರೇಂದ್ರ ಪಾಟೀಲ ಮುಖ್ಯಮಂತ್ರಿಯಾಗಿದ್ದರು.

How Devaraj Urs became champion of downtrodden people?

ಯಾವಾಗ ನಿಜಲಿಂಗಪ್ಪ ನೇತೃತ್ವದ ಸಿಂಡಿಕೇಟ್ ದೊಡ್ಡ ಮಟ್ಟದಲ್ಲಿ ಇಂದಿರಾ ವಿರುದ್ದ ತಿರುಗಿ ಬಿತ್ತೋ? ಆಗ ಇಂದಿರಾ ಗಾಂಧಿ ಕರ್ನಾಟಕದಲ್ಲಿ ತನ್ನ ಪರಮಾಪ್ತರನ್ನು ಸಿಎಂ ಮಾಡಲು ಬಯಸಿದರು. ಆ ಕಡೆ ನಿಜಲಿಂಗಪ್ಪ ಮತ್ತು ಇಂದಿರಾ ಗಾಂಧಿಗೆ ಆಗುತ್ತಿರಲಿಲ್ಲ. ಈ ಕಡೆ ದೇವರಾಜ ಅರಸು ಮತ್ತು ನಿಜಲಿಂಗಪ್ಪ ಅವರಿಗೆ ಆಗುತ್ತಿರಲಿಲ್ಲ.

ಪರಿಣಾಮ? ಇಲ್ಲಿ ಮತ್ತು ದಿಲ್ಲಿಯಲ್ಲಿ ನಿಜಲಿಂಗಪ್ಪ, ತಮ್ಮ ವಿರೋಧಿಗಳ ವಿರುದ್ದ ಹೋರಾಡಬೇಕಾಯಿತು. ಈ ಸಂದರ್ಭದಲ್ಲಿ ಇಂದಿರಾಗಾಂಧಿಯವರ ಕಣ್ಣಿಗೆ ಬಿದ್ದವರು ದೇವರಾಜ ಅರಸು ಮತ್ತು ಬಿ.ಡಿ. ಜತ್ತಿ.

ಆ ಸಂದರ್ಭದಲ್ಲಾಗಲೇ ಬಿ.ಡಿ. ಜತ್ತಿ ಅವರು ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದರು. ಹೀಗಾಗಿ ನಿಜಲಿಂಗಪ್ಪ ಬಣದ ವಿರುದ್ಧ ದೇವರಾಜ ಅರಸರನ್ನು ಮೇಲೆತ್ತಿ ನಿಲ್ಲಿಸಲು ಇಂದಿರಾ ಬಯಸಿದರು. ಅದೇ ರೀತಿ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸಲು ಜತ್ತಿಯವರನ್ನು ಮುಂದೆ ಒರಿಸ್ಸಾ ಗವರ್ನರ್ ಅನ್ನಾಗಿ ನೇಮಕ ಮಾಡುವ ಭರವಸೆ ನೀಡಿದರು.

How Devaraj Urs became champion of downtrodden people?

ಸರಿ, ಯುದ್ಧ ಆರಂಭವಾಗಿಯೇ ಹೋಯಿತು. ನಿಜಲಿಂಗಪ್ಪ ಅವರದು ಆಗ ಕಾಂಗ್ರೆಸ್ (ಓ)ಪಕ್ಷ. ಇಂದಿರಾ ಗಾಂಧಿಯವರದು ಕಾಂಗ್ರೆಸ್ (ಆರ್) ಪಕ್ಷ. ನಿಜಲಿಂಗಪ್ಪ ಅವರ ಜತೆ ಆಗ ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ದೇವೇಗೌಡ ಸೇರಿದಂತೆ ಪ್ರಮುಖ ನಾಯಕರು ಹೋದರು.

ಕೆಟ್ಟತನ ಹಾಗೂ ಒಳ್ಳೆಯತನದ ನಡುವೆ ವಿವೇಕ ಎಂಬ ಶ್ರೀಕೃಷ್ಣ!ಕೆಟ್ಟತನ ಹಾಗೂ ಒಳ್ಳೆಯತನದ ನಡುವೆ ವಿವೇಕ ಎಂಬ ಶ್ರೀಕೃಷ್ಣ!

ಇದಕ್ಕೆ ಪ್ರತಿಯಾಗಿ ದೇವರಾಜ ಅರಸು ಮತ್ತು ಬಿ.ಡಿ. ಜತ್ತಿ ಸೇರಿ ಕಾಂಗ್ರೆಸ್ ಶಾಸಕರನ್ನು ಎಳೆದರು. ಸಹಜವಾಗಿಯೇ ಆಗ ಇಂದಿರಾ ಗಾಂಧಿಯವರ ಪವರ್ ಜಾಸ್ತಿ ಇತ್ತು. ಆ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡ ದೇವರಾಜ ಅರಸು, ರಾಜ್ಯದಲ್ಲಿ ಕಾಂಗ್ರೆಸ್ ಎಂದರೆ ಇಂದಿರಾಗಾಂಧಿ ಎಂಬಂತೆ ಬೆಳೆಸಿದರು.

ಪರಿಣಾಮ? ಸಿಎಂ ಹುದ್ದೆಯಿಂದ ವೀರೇಂದ್ರ ಪಾಟೀಲರು ಕೆಳಗಿಳಿದು 1972ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರಸು ನೇತೃತ್ವದ ಕಾಂಗ್ರೆಸ್, ರಾಜ್ಯದ ಅಧಿಕಾರ ಸೂತ್ರ ಹಿಡಿಯಿತು. ಈ ಸಂದರ್ಭದಲ್ಲಿ ಅರಸು ಎದುರು ಹಾಕಿಕೊಂಡಿದ್ದು ಯಾರನ್ನು? ರಾಜ್ಯದ ಪ್ರಬಲ ಲಿಂಗಾಯತ, ಒಕ್ಕಲಿಗ ವರ್ಗಗಳನ್ನು. ಹೀಗಾಗಿ ಅದರ ವಿರುದ್ಧ ಸೆಣಸಲು ಅವರು ಶೋಷಿತ ವರ್ಗಗಳ ಸೈನ್ಯವನ್ನು ಕಟ್ಟಿದರು.

deveraj-urs

ಈ ವರ್ಗಗಳನ್ನು ರಾಜಕೀಯವಾಗಿ ಮುಂಚೂಣಿಗೆ ತರುವ ಕೆಲಸ ಮಾಡಿದರು. ಆ ಮೂಲಕ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದ ಶೋಷಿತರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇವತ್ತು ಶೋಷಿತ ವರ್ಗದ ಹಲ ನಾಯಕರನ್ನು ನಾವೇನು ನೋಡುತ್ತಿದ್ದೇವೆ? ಅವರ ಪೈಕಿ ಬಹುತೇಕರು ದೇವರಾಜ ಅರಸರ ಪ್ರಾಡಕ್ಟುಗಳು. ವಾಸ್ತವವಾಗಿ ಹೇಳಬೇಕೆಂದರೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ಎದುರು ಸೆಣಸಲು ಅರಸರಿಗೆ ಶೋಷಿತ ವರ್ಗಗಳ ಸೈನ್ಯ ಬೇಕಾಗಿತ್ತು. (ಇವತ್ತಿನ ಅಹಿಂದ ಸೈನ್ಯದ ಕಲ್ಪನೆ ಇದೇ) ಹೀಗಾಗಿ ರಾಜ್ಯದುದ್ದಗಲ ಶೋಷಿತ ವರ್ಗಗಳ ನಾಯಕರನ್ನು ಹೆಕ್ಕಿ ಹೆಕ್ಕಿ ಮುಂದೆ ತಂದರು.

ಒಂದು ವೇಳೆ ಅರಸರು ಈ ಕೆಲಸ ಮಾಡದಿದ್ದರೆ ತುಂಬ ಕಾಲ ಸಿಎಂ ಆಗಿ ಉಳಿಯುವುದು ಕಷ್ಟವಾಗುತ್ತಿತ್ತು. ಆದರೆ ಅರಸರು ಬುದ್ಧಿವಂತಿಕೆಯಿಂದ ಸಂದರ್ಭವನ್ನು ಬಳಸಿಕೊಂಡರು. ಪರಿಣಾಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಡವರ ಪಕ್ಷ ಎಂಬ ಸ್ಲೋಗನ್ನು ಸಿಗುವಂತೆ ಮಾಡಿದರು. ತಾವು ಶೋಷಿತ ವರ್ಗಗಳ ಚಾಂಪಿಯನ್ ಅನ್ನಿಸಿಕೊಂಡರು. ಹೀಗವರು ಮೇಲೆದ್ದು ನಿಂತಿದ್ದರಿಂದಲೇ ಕರ್ನಾಟಕದಲ್ಲಿ ಪ್ರಬಲ ವಿರೋಧ ಪಕ್ಷ ತಲೆ ಎತ್ತಿ ನಿಂತಿತು. ಆ ವಿರೋಧ ಪಕ್ಷಕ್ಕೆ ಲಿಂಗಾಯತ, ಒಕ್ಕಲಿಗ ಸಮುದಾಯಗಳೇ ಬೆನ್ನೆಲುಬಾದವು. ಆದರೆ ಅರಸರು ತಮ್ಮ ರಾಜಕೀಯ ಲಾಭಕ್ಕಾಗಿ ಕಟ್ಟಿದ ಶೋಷಿತ ವರ್ಗಗಳ ಸೈನ್ಯ ಎಷ್ಟು ಪ್ರಬಲವಾಗಿತ್ತೆಂದರೆ 1978ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂತು.

ಮುಂದೆ ತಮ್ಮ ಆಪ್ತರ ಚಾಡಿ ಮಾತು ಕೇಳಿ ಇಂದಿರಾ ಗಾಂಧಿ ಅವರು ದೇವರಾಜ ಅರಸರ ವಿರುದ್ದ ತಿರುಗಿ ಬಿದ್ದರು. ಇದಕ್ಕಾಗಿ ಬಂಗಾರಪ್ಪ ಅವರನ್ನು ಬಳಸಿಕೊಂಡರು. ಆದರೆ ಹೀಗೆ ಬಳಸಿಕೊಂಡು ಅರಸರನ್ನು ಕೆಳಗಿಳಿಸಿದ ಮೇಲೆ ತಮ್ಮ ಮಗ ಸಂಜಯ ಗಾಂಧಿಯವರ ಮಾತು ಕೇಳಿ, ಗುಂಡೂರಾಯರನ್ನು ಸಿಎಂ ಮಾಡಿದರು.

ಇತಿಹಾಸದ ಬಗ್ಗೆ ಹೇಳುತ್ತಾ ಹೋದರೆ ದೊಡ್ಡ ಕತೆ. ಆದರೆ ದೇವರಾಜ ಅರಸರು ಹೇಗೆ ಶೋಷಿತ ವರ್ಗಗಳ ಚಾಂಪಿಯನ್ ಆದರು? ಇದಕ್ಕಾಗಿ ಅಹಿಂದ ವರ್ಗಗಳ ಸೈನ್ಯ ಕಟ್ಟುವುದು ಅವರಿಗೆ ಹೇಗೆ ಅನಿವಾರ್ಯವಾಯಿತು? ಎಂಬುದಕ್ಕಾಗಿ ಇದನ್ನೆಲ್ಲ ಹೇಳಿದೆ.

ಹಾಗಂತ ಅರಸರ ಸಾಧನೆಯನ್ನು ನಾವು ತುಂಬ ಗೌರವದಿಂದ ನೋಡಬೇಕು. ಯಾಕೆಂದರೆ ನಾವು ಯಾವುದೇ ಲಾಭಕ್ಕಾಗಿ ಕೆಲಸ ಮಾಡಿದರೂ ರಿಸಲ್ಟು ಏನು ಅನ್ನುವುದು ಮುಖ್ಯ. ಆ ದೃಷ್ಟಿಯಿಂದ ಅರಸು ನಿಶ್ಚಿತವಾಗಿಯೂ ಡಿಸ್ಟಿಂಕ್ಷನ್ ನಲ್ಲೇ ಪಾಸಾದರು.

ಇಷ್ಟಾದರೂ ಇತಿಹಾಸ ನಿಮಗೆ ಗೊತ್ತಿರಲಿ ಎಂಬ ಕಾರಣಕ್ಕಾಗಿ ಇದನ್ನು ನಿಮಗೆ ಹೇಳಿದೆ ಅಂತ ಆ ನಾಯಕರು ವಿವರಿಸಿ ಮಾತು ನಿಲ್ಲಿಸಿದರು. ಒಂದು ಬೆಳವಣಿಗೆಯ ಹಿಂದೆ ನಾನಾ ಮುಖಗಳಿರುತ್ತವೆ ಎಂಬ ಕಾರಣಕ್ಕಾಗಿ ನಾನು ಆ ನಾಯಕರು ವಿವರಿಸಿದ ಕತೆಯನ್ನು ನಿಮ್ಮ ಮುಂದಿಟ್ಟಿದ್ದೇನೆ. (ಆಗಸ್ಟ್ 20 ಅರಸರ ಜನ್ಮ ಜಯಂತಿ. ಅದರ ನೆನಪಿಗಾಗಿ ಈ ಬರಹ)

English summary
How former CM of Karnataka D Devaraj Urs became champion of downtrodden people? RT Vittal Murthy remembers him on his birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X