ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೂ ಉಂಟೆ..! ಐದು ಕೋಟಿ ಗೆದ್ದು ಬರ್ಬಾದ್ ಆದ ವ್ಯಕ್ತಿಯ ಕಥೆ

|
Google Oneindia Kannada News

ನಿಮಗೆ ಹಾಗೆ ಸುಮ್ಮನೆ ಒಂದು ಕೋಟಿ ಕೊಟ್ಟರೆ ಏನ್ ಮಾಡ್ತೀರಿ..! ಸಾಲ ಇದ್ದರೆ ತೀರಿಸ್ತೇವೆ. ಒಂದು ಸೈಟ್ ತಗೋತೀವಿ... ಕಾರು ಆಸೆ ಇದ್ರೆ ಅದನ್ನೂ ತಗೋತೀವಿ. ದುಡ್ಡು ಮಿಕ್ಕರೆ ಮನೆ ಕಟ್ತೀವಿ. ದುಡ್ಡು ಮಿಗದಿದ್ದರೆ ಸಾಲ ಮಾಡಿಯಾದರೂ ಮನೆ ಕಟ್ತೀವಿ. ಅದೇ ಐದು ಕೋಟಿ ರೂ ಸಿಕ್ಕರೆ ಏನು ಮಾಡ್ತೀರಿ...?

ಐದಾರು ಸೈಟು, ದೊಡ್ಡ ಕಾರು ಅಥವಾ ಇನ್ನೂ ಏನಾದರೂ ಖರೀದಿಸಿ ತೃಪ್ತರಾಗುತ್ತೇವೆ. ವಾಸ್ತವದಲ್ಲಿ ಐದು ಕೋಟಿ ಸಿಕ್ಕರೆ ನಮ್ಮ ಎಲ್ಲಾ ಆಸೆಗಳು ತೀರಿ ಹೋಗುತ್ತದೆಯೇ? ಜೀವನ ಸುಖಸಮೃದ್ಧಗೊಳ್ಳುತ್ತದೆಯೇ? ಹೌದು ಎನ್ನುವ ಮುನ್ನ ಸುಶೀಲ್ ಕುಮಾರ್ ಕಥೆ ನೀವು ಕೇಳಲೇಬೇಕು.

ಸುಶೀಲ್ ಕುಮಾರ್ ಯಾರೆಂದು ಕೆಲವರಿಗೆ ನೆನಪಿರಬಹುದು. ಇವರು ಅಮಿತಾಭ್ ಬಚ್ಚನ್ ನಡೆಸಿಕೊಡುವ ಹಿಂದಿಯ ಕೌನ್ ಬನೇಗಾ ಕರೋಡ್‌ಪತಿ ರಿಯಾಲಿಟಿ ಕ್ವಿಜ್ ಶೋನಲ್ಲಿ ಗರಿಷ್ಠ 5 ಕೋಟಿ ಬಹುಮಾನ ಗೆದ್ದವರು. ಐದನೇ ಸೀಸನ್‌ನಲ್ಲಿ ಅವರು ಐದು ಕೋಟಿ ಗೆದ್ದಾಗ ಅಬ್ಬಾ ಎಂಥ ಅದೃಷ್ಟವಂತ ಅಂತ ಹಾರೈಸಿದವರು, ಹೊಟ್ಟೆ ಕಿಚ್ಚುಪಟ್ಟವರೇ ಎಲ್ಲರೂ.

ಆದರೆ, ವಿಪರ್ಯಾಸ ನೋಡಿ...! ಐದು ಕೋಟಿ ರೂ ಗೆದ್ದ ಸುಶೀಲ್ ಕುಮಾರ್ ಜೀವನವೇ ಬರ್ಬಾದ್ ಆಗಿ ಹೋಗಿದೆಯಂತೆ. ಏನೇನೋ ಕನಸು ಕಂಡಿದ್ದ ಅವರು ಎಲ್ಲವನ್ನೂ ಕಳೆದುಕೊಂಡು ಖಿನ್ನತೆಯನ್ನು ಅನುಭವಿಸಿದರಂತೆ. ಆಕಾಶದಲ್ಲಿ ಅಮಲಿನಲ್ಲಿ ತೇಲುತ್ತಿದ್ದ ಅವರು ಇತ್ತೀಚೆಗಷ್ಟೇ ವಾಸ್ತವಕ್ಕೆ ಮರಳಿದ್ದಾರೆ, ಸಹಜ ಜೀವನ ನಡೆಸುತ್ತಿದ್ದಾರೆ.

ಇವರ ಕಥೆ ಕೇಳಿದರೆ ಎಂಥವರಿಗೂ ಆಶ್ಚರ್ಯ ಆಗುತ್ತದೆ. ಹೆಣ್ಣು, ಹೊನ್ನು, ಮಣ್ಣು ಅದಾಗೇ ಬಂದರೆ ಸಿರಿ, ನಾವಾಗೇ ಅರಸಿ ಹೋದರೆ ಮಾರಿ ಎಂದು ಹೇಳುತ್ತಾರೆ. ಪಾಪ ಸುಶೀಲ್ ಕುಮಾರ್‌ಗೆ ಹೊನ್ನು ಅದಾಗೇ ಅರಸಿ ಬಂದರೂ ಅವರು ಪಟ್ಟ ಪಾಡು ಅಂತಿಂಥದ್ದಲ್ಲ.

ಅತ್ಯಂತ ಕಷ್ಟಕರ ದಿನಗಳು

ಅತ್ಯಂತ ಕಷ್ಟಕರ ದಿನಗಳು

ಬಿಹಾರದ ಸುಶೀಲ್ ಕುಮಾರ್ 2011ರಲ್ಲಿ ನಡೆದ ಕೌನ್ ಬನೇಗಾ ಕರೋಡ್‌ಪತಿಯ ಐದನೇ ಸೀಸನ್‌ನಲ್ಲಿ 5 ಕೋಟಿ ರೂ ಗೆದ್ದಿದ್ದರು. ಅತ್ಯುನ್ನತ ಬಹುಮಾನ ಗೆದ್ದ ಮೊದಲ ಸ್ಪರ್ಧಿ ಅವರು. ನರೇಗಾ ಯೋಜನೆಯಲ್ಲಿ ಕಂಪ್ಯೂಟರ್ ಇನ್ಸ್‌ಟ್ರಕ್ಟರ್ ಆಗಿದ್ದ ಅವರು ಆಗ ತಿಂಗಳಿಗೆ ಕೇವಲ 6 ಸಾವಿರ ರೂ ಆದಾಯ ಗಳಿಸುತ್ತಿದ್ದರು.

ಐದು ಕೋಟಿ ರೂ ಗೆದ್ದ ಬಳಿಕ ಅವರ ಜೀವನದ ದೆಸೆಯೇ ಬದಲಾಗಿ ಹೋಗುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಕೆಲ ವರ್ಷ ಸುಶೀಲ್ ಕುಮಾರ್‌ಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಎರಡು ವರ್ಷಗಳ ಬಳಿಕ ಅವರ ಜೀವನದಲ್ಲಿ ತಿರುವುಗಳ ಮೇಲೆ ತಿರುವುಗಳು, ರೋಚಕತೆ ಮೇಲೆ ರೋಚಕತೆ ಎಲ್ಲವೂ ಬರತೊಡಗಿದವು.

"2015-16ರ ವರ್ಷ ನನ್ನ ಜೀವನದ ಅತ್ಯಂತ ಸವಾಲಿನ ದಿನಗಳು. ಏನು ಮಾಡಬೇಕೆಂದು ನನಗೆ ಗೊತ್ತಾಗುತ್ತಿರಲಿಲ್ಲ. ಸ್ಥಳೀಯವಾಗಿ ನಾನು ದೊಡ್ಡ ಸೆಲಬ್ರಿಟಿಯೇ ಆಗಿಹೋಗಿದ್ದೆ. ಬಿಹಾರದಲ್ಲಿ ಎಲ್ಲಾದರೂ ಒಂದು ಕಡೆ ತಿಂಗಳಿಗೆ 10-15 ಕಾರ್ಯಕ್ರಮಗಳಿಗೆ ನನಗೆ ಆಹ್ವಾನ ಇರುತ್ತಿದ್ದವು. ಓದಿನಿಂದ ದೂರವೇ ಆಗಿಹೋಗಿದ್ದೆ. ಮಾಧ್ಯಮಗಳೊಂದಿಗೆ ಹೇಗೆ ಮಾತನಾಡುವುದೆಂದು ಗೊತ್ತಾಗುತ್ತಿರಲಿಲ್ಲ. ಪತ್ರಕರ್ತರೊಂದಿಗೆ ಸಂದರ್ಶನ ನೀಡುವಾಗ ನಾನು ನನ್ನ ವ್ಯವಹಾರಗಳ ಬಗ್ಗೆ ತಿಳಿಸುತ್ತಿದ್ದೆ. ಇದರಿಂದ ನನ್ನ ಮುಂದಿನ ವ್ಯವಹಾರಗಳಿಗೆ ಅನುಕೂಲವಾಗುತ್ತದೆ ಎಂಬ ಭ್ರಮೆ ನನಗಿತ್ತು. ಆದರೆ ನನ್ನ ವ್ಯವಹಾರಗಳು ಬಹಳ ಬೇಗ ನಷ್ಟಗೊಂಡು ಅಂತ್ಯ ಕಂಡಿದ್ದವು" ಎಂದು ಸುಶೀಲ್ ಕುಮಾರ್ ಹಿಂದೊಮ್ಮೆ ಫೇಸ್‌ಬುಕ್‌ನಲ್ಲಿ ತಮ್ಮ ದುಃಖ ತೋಡಿಕೊಂಡಿದ್ದರು.

ವಂಚಕರಿಗೆ ಸುಲಭ ಬೇಟೆ

ವಂಚಕರಿಗೆ ಸುಲಭ ಬೇಟೆ

ಹಣ ಇದ್ದರೆ ಏಮಾರಿಸಲು ನೂರಾರು ಮಂದಿ ಮುಗಿಬೀಳುತ್ತಾರೆ. ಸುಶೀಲ್ ಕುಮಾರ್‌ಗೆ ಆಗಿದ್ದೂ ಅದೇ. ಸುಳ್ಳು ಕಥೆಗಳನ್ನು ಹೇಳಿ ಇವರಿಂದ ದೇಣಿಗೆ ಪಡೆಯುವವರು ಹೆಚ್ಚಾಗಿದ್ದರಂತೆ.

"ಕೆಬಿಸಿ ಬಳಿಕ ನಾನು ದಾನಿಯಾಗಿದ್ದೆ. ರಹಸ್ಯವಾಗಿ ದಾನ ಮಾಡುತ್ತಿದ್ದೆ. ಬಹಳ ಜನರು ವಂಚನೆ ಎಸಗುತ್ತಿದ್ದರು. ದೇಣಿಗೆ ನೀಡಿದ ಬಳಿಕ ನಾನು ಮೋಸ ಹೋಗಿರುವ ವಿಚಾರ ಗೊತ್ತಾಗುತ್ತಿತ್ತು. ಇದರಿಂದಾಗಿ ನನ್ನ ಹೆಂಡತಿಯೂ ನನ್ನೊಂದಿಗೆ ಮುನಿಸಿಕೊಳ್ಳುತ್ತಿದ್ದಳು. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂದು ಗೊತ್ತಾಗುವುದಿಲ್ಲವಾ? ಭವಿಷ್ಯದ ಬಗ್ಗೆ ಚಿಂತೆ ಇಲ್ಲವಾ ಎಂದು ಆಕೆ ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ಜಗಳ ಆಗುತ್ತಿತ್ತು" ಎಂದು ಸುಶೀಲ್ ಕುಮಾರ್ ನೊಂದು ಹೇಳಿಕೊಂಡಿದ್ದರು.

ಜೆಎನ್‌ಯು ವಿದ್ಯಾರ್ಥಿಗಳ ಸಹವಾಸಕ್ಕೆ ಬಿದ್ದು...

ಜೆಎನ್‌ಯು ವಿದ್ಯಾರ್ಥಿಗಳ ಸಹವಾಸಕ್ಕೆ ಬಿದ್ದು...

ಜಾಮಿಯಾ, ಜೆಎನ್‌ಯು ಇತ್ಯಾದಿ ವಿವಿ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿದ್ದ ಸುಶೀಲ್ ಕುಮಾರ್ ಜೀವನಶೈಲಿಯೇ ಮತ್ತು ದೃಷ್ಟಿಕೋನವೇ ಬದಲಾಗಿ ಹೋಗಿತ್ತಂತೆ. ಕುಡಿತ, ಸಿಗರೇಟಿಗೆ ದಾಸರಾಗಿದ್ದಂತೆ.

"ನನ್ನ ವ್ಯವಹಾರದ ಕಾರಣದಿಂದ ಜಾಮಿಯಾ ಮಿಲಿಯಾ, ಐಐಎಂಸಿ, ಜೆಎನ್‌ಯುನಲ್ಲಿ ಮಾಧ್ಯಮ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಜೊತೆ ನನಗೆ ಸಂಪರ್ಕ ಇರುತ್ತಿತ್ತು. ಥಿಯೇಟರ್ ಆರ್ಟಿಸ್ಟ್‌ಗಳ ಪರಿಚಯವೂ ಆಗಿತ್ತು. ಆಗ ಅವರೆಲ್ಲರೂ ಯಾವುದಾದರೂ ಒಂದು ವಿಷಯದ ಬಗ್ಗೆ ಮಾತನಾಡುವುದನ್ನು ನೋಡಿದಾಗ ನನಗೆ ಕೀಳರಿಮೆ ಆಗುತ್ತಿತ್ತು. ಅನೇಕ ವಿಷಯಗಳ ಬಗ್ಗೆ ನನಗೆ ಹೆಚ್ಚು ಜ್ಞಾನ ಇಲ್ಲದಿರುವುದು ಗೊತ್ತಾಗುತ್ತಿತ್ತು. ನಿಧಾನವಾಗಿ ಕುಡಿತ, ಸಿಗರೇಟು ಮತ್ತಿತರ ಚಟಗಳಿಗೆ ಶರಣಾಗಿದ್ದೆ. ದೆಹಲಿಯಲ್ಲಿ ಒಂದು ವಾರ ನಾನು ಇರುತ್ತಿದ್ದೆನೆಂದರೆ ಏಳು ಬೇರೆ ಬೇರೆ ಗುಂಪುಗಳ ಜೊತೆ ಕುಡಿತ, ಸಿಗರೇಟು ಪಾರ್ಟಿ ಇದ್ದೇ ಇರುತ್ತಿತ್ತು. ಈ ಜನರ ಮಾತುಗಳು ಕೇಳಲು ಆಕರ್ಷಕ ಎನಿಸುತ್ತಿದ್ದವು," ಎಂದು ಸುಶೀಲ್ ಕುಮಾರ್ ಹೇಳುತ್ತಾರೆ.

ಬರ್ಬಾದ್ ಆದಾಗ...

ಬರ್ಬಾದ್ ಆದಾಗ...

"ನಾನು ಹೇಗೆ ಎಲ್ಲಾ ಹಣ ಕಳೆದುಕೊಂಡೆ? ನನ್ನ ಈ ಕಥೆ ನಿಮಗೆ ಬಹಳ ಸಿನಿಮೀಯ ಎನಿಸಬಹುದು. ಅಂದು ರಾತ್ರಿ 'ಪ್ಯಾಸಾ' ಸಿನಿಮಾ ನೋಡುತ್ತಿದ್ದೆ. ಇನ್ನೇನು ಕ್ಲೈಮ್ಯಾಕ್ಸ್ ಸೀನ್ ಬರಬೇಕು ಆಗ ಹೆಂಡತಿ ಜೋರಾಗಿ ಕಿರುಚುತ್ತಾ ಬಂದಳು. ನೋಡಿದ್ದೇ ಸಿನಿಮಾವನ್ನು ನೋಡಿ ನೋಡಿ ಹುಚ್ಚು ಹಿಡಿಯುತ್ತಿದೆ ನಿಮಗೆ ಅಂತ ಹೇಳಿ ರೂಮಿಂದ ಆಚೆ ಹೋಗುವಂತೆ ಹೇಳಿದಳು. ನಾನು ಲ್ಯಾಪ್‌ಟಾಪ್ ಮುಚ್ಚಿಟ್ಟು ಹೊರಗೆ ಹಾಗೇ ಹೆಜ್ಜೆ ಹಾಕುತ್ತಿದ್ದೆ. ಹೀಗೆ ನಡೆದುಕೊಂಡು ಹೋಗುವಾಗ ಇಂಗ್ಲೀಷ್ ಪತ್ರಿಕೆಯೊಂದರ ಪತ್ರಕರ್ತರೊಬ್ಬರು ಫೋನ್ ಕರೆ ಮಾಡಿ ಮಾತನಾಡತೊಡಗಿದರು.

"ಅವರು ಹೇಳಿದ ಯಾವುದೋ ವಿಷಯ ನನಗೆ ಕಿರಿಕಿರಿ ಎನಿಸಿತು. ಆಗ ನಾನು ನನ್ನ ಬಳಿ ಇದ್ದಬದ್ದ ಹಣವೆಲ್ಲಾ ಖರ್ಚಾಗಿ ಹೋಗಿದೆ. ಈಗ ಎರಡು ಹಸು ಮಾತ್ರ ಇದೆ. ಹಾಲು ಮಾರಿ ಜೀವನ ಮಾಡುತ್ತಿದ್ದೇನೆ ಎಂದೆ. ಅದು ಪತ್ರಿಕೆಯಲ್ಲಿ ಪ್ರಕಟವಾಯಿತು. ಪರಿಣಾಮವಾಗಿ ನನ್ನನ್ನು ಅಲ್ಲಿಯವರೆಗೆ ಸುತ್ತುವರಿಯುತ್ತಿದ್ದ ಜನರು ದೂರವಾಗತೊಡಗಿದರು. ಯಾವ ಕಾರ್ಯಕ್ರಮಗಳಿಗೂ ಆಹ್ವಾನ ಬರುತ್ತಿರಲಿಲ್ಲ. ಮುಂದೇನು ಮಾಡಬೇಕೆಂದು ಯೋಚಿಸಲು ನನಗೆ ಸಮಯ ಸಿಕ್ಕಿತು," ಎಂದು ಸುಶೀಲ್ ಕುಮಾರ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದರು.

ಸಿನಿಮಾ ಮತ್ತು ಕನಸು

ಸಿನಿಮಾ ಮತ್ತು ಕನಸು

ಸುಶೀಲ್ ಕುಮಾರ್‌ಗೆ ಸಿನಿಮಾಗಳೆಂದು ಪಂಚಪ್ರಾಣ. ಪ್ರಶಸ್ತಿ ವಿಜೇತ ಚಿತ್ರಗಳನ್ನು ನೋಡದೇ ಬಿಡುತ್ತಿರಲಿಲ್ಲ. ಅಂತೆಯೇ ಸಹಜವಾಗಿ ಇವರಿಗೆ ಸಿನಿಮಾ ನಿರ್ದೇಶಕನಾಗುವ ಕನಸು ಶುರುವಾಗುತ್ತದೆ. ಅದಕ್ಕಾಗಿ ತನಗೆ ಪರಿಚಯವಿದ್ದ ಸಿನಿಮಾ ನಿರ್ಮಾಪಕರೊಬ್ಬರಿಗೆ ಫೋನ್ ಮಾಡುತ್ತಾರೆ. ಅವರು ಕೇಳಿದ ಕೆಲ ತಾಂತ್ರಿಕ ಪ್ರಶ್ನೆಗಳಿಗೆ ಇವರ ಬಳಿ ಉತ್ತರ ಇರುವುದಿಲ್ಲ. ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿ ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳುವಂತೆ ಆ ಸ್ನೇಹಿತ ಸಲಹೆ ನೀಡುತ್ತಾರೆ. ಅದರಂತೆ ಇವರು ಕಿರುತೆರೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕಥೆ, ಚಿತ್ರಕಥೆ, ಸಂವಾದ, ಕಾಸ್ಟ್ಯೂಮ್ ಇತ್ಯಾದಿ ಅನೇಕ ವಿಚಾರಗಳನ್ನು ಇವರು ತಿಳಿದುಕೊಳ್ಳುತ್ತಾರೆ. ಆದರೆ, ಹೋಗಹೋಗುತ್ತಾ ಇವರಿಗೆ ಅಲ್ಲಿಯೂ ಭ್ರಮನಿರಸನವಾಗುತ್ತದೆ.

"ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸಿಟ್ಟುಕೊಂಡು ಮುಂಬೈಗೆ ಬಂದಿದ್ದೆ. ಎಲ್ಲವನ್ನೂ ಬಿಟ್ಟು ಚಿತ್ರಸಾಹಿತಿಯಾಗಿದ್ದ ನನ್ನ ಸ್ನೇಹಿತರೊಬ್ಬರ ಜೊತೆ ಇದ್ದೆ. ರೂಮಲ್ಲಿ ಕೂತು ಸಿನಿಮಾ ನೋಡುವುದೋ ಪುಸ್ತಕಗಳನ್ನು ಓದುವುದೋ ನಡೆದಿತ್ತು. ಹೀಗೆ ಆರು ತಿಂಗಳು ಕಳೆದವು. ಚೈನ್ ಸ್ಮೋಕರ್ ಆಗಿಬಿಟ್ಟಿದ್ದೆ. ಈ ವೇಳೆ ನನ್ನನ್ನು ನಾನು ವಿಮರ್ಶಿಸಿಕೊಳ್ಳಲು ಅವಕಾಶ ಸಿಕ್ಕಿತು.

"ಸಿನಿಮಾ ನಿರ್ದೇಶಕನಾಗಬೇಕೆಂದು ನಾನು ಬಂದದ್ದಲ್ಲ, ಬದಲಾಗಿ ವಾಸ್ತವವನ್ನು ಒಪ್ಪಿಕೊಳ್ಳಲಾಗದೇ ಓಡಿ ಹೋಗುವ ಪಲಾಯನವಾದಿಯಂತೆ ಗೋಚರಿಸಿತು. ನಿಮ್ಮ ಆಯ್ಕೆಯ ಕೆಲಸ ಮಾಡುವುದರಲ್ಲಿ ನಿಜವಾದ ಸಂತೋಷ ಇದೆ. ಸಣ್ಣ ವಿಷಯಗಳಲ್ಲಿ ಸಂತೋಷ ಅಡಗಿರುತ್ತದೆ. ಇತರ ಜನರಿಗೆ ಸಹಾಯ ಮಾಡುವ ಮನಸು ಇರಬೇಕು. ಪ್ರತಿಯೊಬ್ಬರೂ ಕೂಡ ಪರೋಪಕಾರ ಕಾರ್ಯವನ್ನು ತಮ್ಮ ಊರಿಂದಲೇ ಆರಂಭಿಸಬೇಕು," ಎಂದು ಸುಶೀಲ್ ಕುಮಾರ್ ಸಲಹೆ ನೀಡುತ್ತಾರೆ.

ಸಂಸಾರ ಮತ್ತು ಈಗಿನ ಜೀವನ

ಸಂಸಾರ ಮತ್ತು ಈಗಿನ ಜೀವನ

ಐದು ಕೋಟಿ ರೂ ದೆಸೆಯಿಂದಾಗಿ ಸುಶೀಲ್ ಕುಮಾರ್ ಸಂಸಾರ ಬಹುತೇಕ ಒಡೆದುಹೋಗುವ ಹಂತಕ್ಕೆ ಹೋಗಿತ್ತಂತೆ. ಅವರ ಹೆಂಡತಿ ಡಿವೋರ್ಸ್ ಕೊಡಲು ಸಿದ್ಧವಿದ್ದರು. ಇವರನ್ನು ತೊರೆದು ತವರು ಮನೆಗೂ ಹೋಗಿದ್ದರು. ಆಗಲೇ ಇವರು ಮುಂಬೈಗೆ ಕನಸು ಹೊತ್ತು ಹೋಗಿತ್ತು. ಮುಂಬೈನಲ್ಲಿ ಇವರಿಗೆ ಜ್ಞಾನೋದಯವಾಗಿ ವಾಪಸ್ ಬಿಹಾರಕ್ಕೆ ಬರುತ್ತಾರೆ.

ತಮ್ಮ ಇಚ್ಛೆಯಂತೆ ಶಿಕ್ಷಕರಾಗುತ್ತಾರೆ. ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಆಗಿನಿಂದ ಇವರಿಗೆ ಮಾನಸಿಕ ನೆಮ್ಮದಿ ಸಿಕ್ಕಿದೆ.

"2016 ಮಾರ್ಚ್‌ನಿಂದ ನನ್ನ ಜೀವನ ಸುಧಾರಿಸತೊಡಗಿತು. 2019ರಲ್ಲಿ ಧೂಮಪಾನ ತ್ಯಜಿಸಿದೆ. ಈಗ ನನ್ನ ಜೀವನದಲ್ಲಿ ಉತ್ಸಾಹದ ಬುಗ್ಗೆ ಇದೆ. ಪರಿಸರಪೂರಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಇನ್ನೂ ಹೆಚ್ಚು ಅವಕಾಶ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ಬದುಕಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಗಳಿಸಬೇಕೆಂದಿದ್ದೇನೆ" ಎಂದು ಸುಶೀಲ್ ಕುಮಾರ್ ತಿಳಿಸುತ್ತಾರೆ.

ಎಂಥ ಹಿತನುಡಿ..! ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂದು ಹಿರಿಯರ ಅನುಭವಾಮೃತ ನುಡಿಗಳು ನೆನಪಿಗೆ ಬರುತ್ತದೆ ಅಲ್ಲವಾ? ಈಗ ನೋಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆದು ಸಂಪಾದನೆ ಮಾಡಿದವರು ಹಗಲು ರಾತ್ರಿ ಎನ್ನದೇ ತನಿಖಾ ಸಂಸ್ಥೆಗಳಿಗೆ ಹೆದರಿ ಕಾಲ ಕಳೆಯುವಂತಾಗಿದೆ. ಸುಶೀಲ್ ಕುಮಾರ್ ಜೀವನದ ಕಥೆ ಬಹಳ ಸೋಜಿಗ, ಸಿನಿಮೀಯ, ಕರುಣಾಜನಕ ಎಲ್ಲವೂ ಹೌದು.

(ಒನ್ಇಂಡಿಯಾ ಸುದ್ದಿ)

English summary
KBC Season 5 Winner Sushil Kumar got 5 crore as prize money. One would imagine how good the life will be with 5 crore. But Sushil Kumar had different story to tell.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X