ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜರ ಕಾಲದ ದಸರಾ ಜಂಬೂ ಸವಾರಿ ಹೇಗೆ ನಡೆಯುತ್ತಿತ್ತು?

|
Google Oneindia Kannada News

ಮೈಸೂರು, ಅಕ್ಟೋಬರ್ 26: ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ಜಂಬೂಸವಾರಿ. ಈ ಜಂಬೂಸವಾರಿ ಎಂಬ ಸುಂದರ ಮೆರವಣಿಗೆಯನ್ನು ನೋಡಲೆಂದೇ ಜನ ಲಕ್ಷಾಂತರ ಸಂಖ್ಯೆಯಲ್ಲಿ ನೆರೆಯುತ್ತಾರೆ. ಇತಿಹಾಸದುದ್ದಕ್ಕೂ ನೋಡಿದರೆ, ಆಚರಣೆಯಲ್ಲಿ ಒಂದಷ್ಟು ಸರಳತೆಯನ್ನು ಮಾಡಿಕೊಂಡು ಬಂದಿದ್ದರೂ ಜನರಿಲ್ಲದ ದಸರಾ ಮಾತ್ರ ಇದುವರೆಗೆ ನಡೆದಿಲ್ಲ.

ಆದರೆ ಈ ಬಾರಿ ದಸರಾದ ಜಂಬೂಸವಾರಿ ಜನರಿಲ್ಲದೆ ನಡೆಯುತ್ತಿದೆ. ಇದು ದಸರಾ ಇತಿಹಾಸದಲ್ಲಿಯೇ ಮರೆಯಲಾಗದ ಘಟನೆಯಾಗಿ ಉಳಿಯಲಿದೆ. ದಸರಾ ಆಚರಣೆ ಮತ್ತು ಜಂಬೂಸವಾರಿ ಮೆರವಣಿಗೆ ಹಿಂದಿನಂತೆ ಇವತ್ತಿಗೂ ಇದೆ ಎನ್ನಲಾಗುವುದಿಲ್ಲ. ರಾಜರ ಕಾಲದಿಂದ ಆರಂಭವಾಗಿ ಇಲ್ಲಿವರೆಗೆ ಹೊಸತನವನ್ನು ಪಡೆಯುತ್ತಲೇ ಬಂದಿದೆ. ಕೆಲವೊಂದು ಕಾರ್ಯಕ್ರಮ ಧಾರ್ಮಿಕ ಸಂಪ್ರದಾಯ ನಡೆಯುತ್ತಿದ್ದರೂ ಒಂದಷ್ಟು ಬದಲಾವಣೆ ಆಗಿದ್ದಂತೂ ನಿಜ...

ಜಂಬೂಸವಾರಿಗೆ ಕ್ಷಣಗಣನೆ... ಜನರಿಲ್ಲದ ಮೈಸೂರು ದಸರಾಜಂಬೂಸವಾರಿಗೆ ಕ್ಷಣಗಣನೆ... ಜನರಿಲ್ಲದ ಮೈಸೂರು ದಸರಾ

 ಜಯಚಾಮರಾಜ ಒಡೆಯರ್ ಅವರದ್ದು ಕೊನೆ ಜಂಬೂಸವಾರಿ

ಜಯಚಾಮರಾಜ ಒಡೆಯರ್ ಅವರದ್ದು ಕೊನೆ ಜಂಬೂಸವಾರಿ

ಮೈಸೂರು ಮಹಾರಾಜರ ಕಾಲದಲ್ಲಿ ದಸರಾ ಆಚರಣೆ ಮತ್ತು ಜಂಬೂಸವಾರಿ ಹೇಗಿತ್ತು ಎಂಬುದರ ಬಗ್ಗೆ ಇತಿಹಾಸದ ಪುಟಗಳನ್ನು ನೋಡಿದರೆ, ಅವತ್ತಿನ ಆಚರಣೆ ಕುರಿತಂತೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಕಾಲಮಾನಕ್ಕೆ ತಕ್ಕಂತೆ ಆಚರಣೆ ನಡೆಯುತ್ತಿತ್ತು ಎಂಬುದು ಗೊತ್ತಾಗುತ್ತದೆ.

ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್ ಸ್ವಾತಂತ್ರ್ಯಪೂರ್ವದಲ್ಲಿ ನಡೆಸುತ್ತಿದ್ದ ದಸರಾ ಆಚರಣೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ದಸರಾಕ್ಕೆಂದೇ ಮಹಾರಾಜರು ಚಿನ್ನದ ಜರಿಯ ಫಳಫಳನೆ ಹೊಳೆಯುವ ಪೋಷಾಕನ್ನು ಧರಿಸಿ ಸಿದ್ಧರಾಗುತ್ತಿದ್ದರು. ಆ ನಂತರ ಆನೆ ಮೇಲಿನ ಅಂಬಾರಿಯಲ್ಲಿ ಆಸೀನರಾಗುತ್ತಿದ್ದರು.
 ತುತ್ತೂರಿ ಕಹಳೆ ಮೇಳೈಸುತ್ತಿತ್ತು

ತುತ್ತೂರಿ ಕಹಳೆ ಮೇಳೈಸುತ್ತಿತ್ತು

ಜಂಬೂಸವಾರಿಯು ಅರಮನೆ ಆವರಣದಿಂದ ಮಧ್ಯಾಹ್ನದ ನಂತರ ನಿಗದಿತ ಶುಭ ಮುಹೂರ್ತದಲ್ಲಿ ಆರಂಭವಾಗುತ್ತಿತ್ತು. ಈ ವೇಳೆ ಇಪ್ಪತ್ತೊಂದು ಕುಶಾಲತೋಪು ಹಾರಿಸಲಾಗುತ್ತಿತ್ತು. ತುತ್ತೂರಿ ಮತ್ತು ಕಹಳೆಯ ಶಬ್ದದೊಂದಿಗೆ ಮೆರವಣಿಗೆ ಆರಂಭವಾಗುತ್ತಿತ್ತು. ಇದೇ ವೇಳೆ ದೇಶ ಗೀತೆಯನ್ನು ಹಾಡಲಾಗುತ್ತಿತ್ತು. ಜಂಬೂ ಸವಾರಿ ಹೇಗಿರುತ್ತಿತ್ತೆಂದರೆ, ಮಹಾರಾಜರ ಸುತ್ತಲೂ ಅಂಗರಕ್ಷಕರು, ಅಶ್ವದಳ, ಅಧಿಕಾರಿಗಳು ನೆರೆಯುತ್ತಿದ್ದರು.

 ಸುಂದರವಾಗಿ ಕಂಗೊಳಿಸುತ್ತಿದ್ದ ಗಜಪಡೆ

ಸುಂದರವಾಗಿ ಕಂಗೊಳಿಸುತ್ತಿದ್ದ ಗಜಪಡೆ

ಮಹಾರಾಜರ ಸಹಿತ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತಿದ್ದ ಗಜಪಡೆಯೂ ಸುಂದರವಾಗಿ ಕಂಗೊಳಿಸುತ್ತಿದ್ದು, ಅದಕ್ಕೆ ಚಿನ್ನದಿಂದ ನಕ್ಕಿ ಮಾಡಿದ ಪೋಷಾಕು, ಚಿನ್ನದ ಕಾಲುಕಡಗ, ಬೆಳ್ಳಿಯ ಗಂಟೆ, ಗೊಂಡೆಗಳ ಸಹಿತ ಪೋಣಿಸಿದ ಹಗ್ಗದ ಸಾಲು, ಅಂಗಾಂಗಗಳಲ್ಲಿ ಆಕರ್ಷಕವಾಗಿ ಬರೆಯಲಾದ ಚಿತ್ರಗಳಿಂದ ಶೋಭಿಸುತ್ತಿತ್ತಲ್ಲದೆ, ರಾಜಗಂಭೀರದ ನಡಿಗೆ ಜಂಬೂಸವಾರಿಗೆ ಕಳೆಕಟ್ಟುತ್ತಿತ್ತು.
ಜಂಬೂಸವಾರಿಯು ಅರಮನೆ ಆವರಣದಿಂದ ಹೊರಟು ಉತ್ತರ ದ್ವಾರದ ಮೂಲಕ ಚಾಮರಾಜ ವೃತ್ತಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ಕಡೆಗೆ ಸಾಗಿ ಅಲ್ಲಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಬನ್ನಿಮಂಟಪವನ್ನು ತಲುಪುತ್ತಿತ್ತು.

 ಹಸಿರು ಮಂಟಪದಿಂದ ಗೌರವ ಅರ್ಪಣೆ

ಹಸಿರು ಮಂಟಪದಿಂದ ಗೌರವ ಅರ್ಪಣೆ

ಇದಕ್ಕೂ ಮುನ್ನ ಅರಮನೆಯ ಉತ್ತರ ಬಾಗಿಲು ದಾಟಿ ಬರುತ್ತಿದ್ದಂತೆಯೇ ಕಟ್ಟಲಾಗಿದ್ದ ಹಸಿರು ಮಂಟಪದಲ್ಲಿ ನಿಂತು ಮಹಾರಾಜರಿಗೆ ಹಾರ ತುರಾಯಿ ಹಾಕಿ ಗೌರವ ಸಲ್ಲಿಸಲಾಗುತ್ತಿತ್ತು. ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ಕುಳಿತು ಸಾಗುವ ಮಹಾರಾಜರನ್ನು ನೋಡಲು ಎರಡೂ ಕಡೆಗಳಲ್ಲಿ ಜನ ಕಿಕ್ಕಿರಿದು ನೆರೆಯುತ್ತಿದ್ದರು.

ಜಂಬೂಸವಾರಿ ಬನ್ನಿಮಂಟಪವನ್ನು ಸೇರಿದ ಬಳಿಕ ಅಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು. ಆ ನಂತರ ಮಹಾರಾಜರು ಕುದುರೆ ಮೇಲೆ ಕುಳಿತು ಟಾರ್ಚ್ ಲೈಟ್ ಪೆರೇಡ್ ನಲ್ಲಿ ಭಾಗವಹಿಸುತ್ತಿದ್ದ ಅಶ್ವದಳ, ಪದಾತಿದಳ, ಸೇರಿದಂತೆ ಹಲವು ದಳಗಳಿಂದ ಗೌರವ ವಂದನೆ ಸ್ವೀಕರಿಸುತ್ತಿದ್ದರು. ಈ ವೇಳೆಗೆ ಇಡೀ ಮೈಸೂರು ವಿದ್ಯುದ್ದೀಪದಿಂದ ಬೆಳಗುತ್ತಿತ್ತು. ರಾತ್ರಿ ಒಂಬತ್ತೂವರೆ ಗಂಟೆಗೆಲ್ಲ ಕಾರ್ಯಕ್ರಮಗಳು ಮುಗಿದು ಮಹಾರಾಜರು ಅರಮನೆ ಸೇರುತ್ತಿದ್ದರು.
 ಹತ್ತು ದಿನವೂ ಮೈಸೂರಲ್ಲಿ ಸಂಭ್ರಮ

ಹತ್ತು ದಿನವೂ ಮೈಸೂರಲ್ಲಿ ಸಂಭ್ರಮ

ಅವತ್ತಿನ ಕಾಲದಲ್ಲಿ ದಸರಾ ಆರಂಭದ ಹತ್ತು ದಿನಗಳ ಕಾಲವೂ ಮೈಸೂರು ಸಂಭ್ರಮದ ಅಲೆಯಲ್ಲಿ ತೇಲುತ್ತಿತ್ತು. ದೇಶ ವಿದೇಶಗಳಿಂದ ಜನ ಬರುತ್ತಿದ್ದರು. ನರ್ತಕರು, ಗಾಯಕರು, ಬಯಲಾಟದವರು, ದೊಂಬೀದಾಸರು, ತೊಗಲು ಬೊಂಬೆಯವರು, ಹಗಲು ವೇಷದವರು, ದೊಂಬರು, ಗೊರವಯ್ಯರು, ಕಣಿ ಹೇಳುವವರು, ಜ್ಯೋತಿಷಿಗಳು, ಸಾಮುದ್ರಿಕ ಶಾಸ್ತ್ರದವರು, ಕೊಂಬು ಕಹಳೆ ವಾಲಗ ಊದುವವರು, ಕೋಲೆ ಬಸವ ಆಡಿಸುವವರು, ಹಾವಾಡಿಗರು, ದೊಂಬರಾಟದವರು ಹೀಗೆ ಎಲ್ಲರೂ ಮೈಸೂರಿಗೆ ಆಗಮಿಸುತ್ತಿದ್ದರು. ಒಟ್ಟಾರೆ ಮೈಸೂರಿಗೆ ದಸರಾ ಕಳೆ ಕಟ್ಟುತ್ತಿತ್ತು.

English summary
Jamboo savari is a main attraction of mysuru dasara. Here is a history of jamboo savari in mysuru kings period...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X