ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಸರ್ಕಾರಗಳಿಗೆ ಏಕೆ ಭಯ?

|
Google Oneindia Kannada News

ಜೆಎನ್‌ಯುದಲ್ಲಿ ನಡೆಯುತ್ತಿರುವ ಶುಲ್ಕ ಹೆಚ್ಚಳದ ವಿರುದ್ಧದ ಪ್ರತಿಭಟನೆ ಕುರಿತು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ರೀತಿಯ ಪ್ರತಿಭಟನೆಗಳು ಹೊಸದಲ್ಲ. ಅನೇಕ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅನೇಕ ಹೋರಾಟಗಳು ನಡೆದಿವೆ. ವಿದ್ಯಾರ್ಥಿಗಳ ಶಕ್ತಿಗೆ ಸರ್ಕಾರಗಳು, ವಿಶ್ವವಿದ್ಯಾಲಯಗಳು ಮಣಿದಿವೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಅದೆಷ್ಟೋ ವಿದ್ಯಾರ್ಥಿಗಳು ಶಾಲೆ, ಕಾಲೇಜು ತೊರೆದು ಬೀದಿಗೆ ಇಳಿದು ಬ್ರಿಟಿಷರ ವಿರುದ್ಧದ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಶಿಕ್ಷಣ ಸಂಸ್ಥೆಗಳೇ ಈ ಚಳವಳಿ ಉಗಮದ ಕೇಂದ್ರಗಳಾಗಿದ್ದವು.

ಸ್ವಾತಂತ್ರ್ಯಾನಂತರದ ಈ ಏಳು ದಶಕಗಳಲ್ಲಿ ಕೂಡ ವಿದ್ಯಾರ್ಥಿ ಚಳವಳಿ ಸಕ್ರಿಯವಾಗಿದೆ. ಈಗಿನ ಜೆಎನ್‌ಯು ಹೋರಾಟವನ್ನು ಎನ್‌ಡಿಎ ಸರ್ಕಾರದ ವಿರುದ್ಧದ ಪ್ರತಿಭಟನೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜೆಎನ್‌ಯುದ ವಿದ್ಯಾರ್ಥಿ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಕಾರಣ ಈ ಭಾವನೆ ವ್ಯಕ್ತವಾಗಿದೆ.

ಸದಾ ಸುದ್ದಿಯಲ್ಲೇ ಇರುವ JNU ಹಿಂದಿದೆ ವೈಭವದ ಇತಿಹಾಸಸದಾ ಸುದ್ದಿಯಲ್ಲೇ ಇರುವ JNU ಹಿಂದಿದೆ ವೈಭವದ ಇತಿಹಾಸ

ಆದರೆ ಜೆಎನ್‌ಯು ಮಾತ್ರವಲ್ಲದೆ, ಇಡೀ ದೇಶದ ವಿದ್ಯಾರ್ಥಿ ಚಳವಳಿಗಳನ್ನು ಗಮನಿಸಿದರೆ ಅವು ಎಂದಿಗೂ ಆಡಳಿತದಲ್ಲಿರುವ ಸರ್ಕಾರದ ವಿರುದ್ಧವೇ ಆಗಿರುತ್ತದೆ. ಅದು ಬಿಜೆಪಿಯದ್ದೇ ಆಗಿರಲಿ, ಕಾಂಗ್ರೆಸ್ ಸರ್ಕಾರವೇ ಆಗಿರಲಿ. ಪ್ರತಿ ಸರ್ಕಾರವೂ ಈ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತವೆ. ಆಗ ಅಲ್ಲಿ ರಾಜಕೀಯ ಸಂಘರ್ಷ ಮೊಳಕೆಯೊಡೆಯುತ್ತದೆ. ಇಂತಹ ಹೋರಾಟಗಳು ದೇಶದ ರಾಜಕೀಯ ಚಿತ್ರಣವನ್ನು ಬದಲಿಸಿವೆ. ಹೊಸ ಹೊಸ ನಾಯಕರನ್ನು ಸೃಷ್ಟಿಸಿವೆ. ಬಲಾಢ್ಯರು ಎಂಬ ಪರಿಗಣಿಸಿದ ರಾಜಕಾರಣಿಗಳನ್ನ ಮಣ್ಣಮುಕ್ಕಿಸಿದ ನಿದರ್ಶನಗಳು ಚರಿತ್ರೆಯಲ್ಲಿವೆ. ವಿದ್ಯಾರ್ಥಿ ಚಳವಳಿ ಎಂದಿಗೂ ಸರ್ಕಾರಗಳಿಗೆ ಬಿಸಿತುಪ್ಪ. ಸರ್ಕಾರಗಳ ಭಾಗವಾಗಿರುವವರಲ್ಲಿ ಅನೇಕರು ವಿದ್ಯಾರ್ಥಿದೆಸೆಯಲ್ಲಿನ ಇಂತಹ ಚಳವಳಿಗಳಿಂದಲೇ ಹುಟ್ಟಿಕೊಂಡಿರುತ್ತಾರೆ ಎನ್ನುವುದು ವಾಸ್ತವ ಸಂಗತಿ.

ಬಂಗಾಳ ಪ್ರತಿಭಟನೆಯ ತಾಣ

ಬಂಗಾಳ ಪ್ರತಿಭಟನೆಯ ತಾಣ

1905ರಲ್ಲಿ ಬಂಗಾಳ ಪ್ರಾಂತ್ಯವನ್ನು ವಿಭಜಿಸುವ ಬ್ರಿಟಿಷ್ ಸರ್ಕಾರದ ನಿರ್ಧಾರ ಖಂಡಿಸಿ ಈಡನ್ ಹಿಂದೂ ಹಾಸ್ಟೆಲ್‌ ವಿದ್ಯಾರ್ಥಿಗಳು ಲಾರ್ಡ್ ಕರ್ಜನ್ ಪ್ರತಿಕೃತಿ ದಹಿಸಿದ್ದರು. ಬಂಗಾಳದಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯದ ಸ್ವದೇಶಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು. ಸರ್ಕಾರದ ದೇಶದ್ರೋಹ ಸಮಿತಿಯ ವರದಿ ಪ್ರಕಾರ 1907-1917ರ ಅವಧಿಯಲ್ಲಿ ಬಂಗಾಳದಲ್ಲಿ ಬಂಧನಕ್ಕೊಳಗಾದ 186 ಮಂದಿ ಪೈಕಿ 68 ಮಂದಿ ವಿದ್ಯಾರ್ಥಿಗಳಾಗಿದ್ದರು. ಇನ್ನು 16 ಮಂದಿ ಶಾಲೆ ಹಾಗೂ ಕಾಲೇಜುಗಳ ಶಿಕ್ಷಕರಾಗಿದ್ದರು ಎಂದರೆ ವಿದ್ಯಾರ್ಥಿ ಚಳವಳಿಯ ಶಕ್ತಿ ಎಷ್ಟಿರಬಹುದು ಊಹಿಸಿ.

ಪ್ರತ್ಯೇಕಗೊಂಡ ಮುಸ್ಲಿಂ ಸಂಘಟನೆ

ಪ್ರತ್ಯೇಕಗೊಂಡ ಮುಸ್ಲಿಂ ಸಂಘಟನೆ

1906ರಲ್ಲಿ ಮಹಾರಾಷ್ಟ್ರದಲ್ಲಿ ಉಪೇಂದ್ರ ನಾಥ್ ಮತ್ತು ವಿ.ಡಿ. ಸಾವರ್ಕರ್ ಯಂಗ್ ಇಂಡಿಯನ್ ಲೀಗ್ ಆರಂಭಿಸಿದರೆ, ಪಂಜಾಬ್‌ನಲ್ಲಿ 'ನಯಿ ಹವಾ' ಗುಂಪು ಕ್ರಾಂತಿಕಾರಿ ಚಳವಳಿಗಳಿಗೆ ವಿದ್ಯಾರ್ಥಿಗಳನ್ನು ಸಂಘಟಿಸಲು ಹುಟ್ಟಿಕೊಂಡಿತು. 1936ರಲ್ಲಿ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿ ಎರಡು ವರ್ಷದಲ್ಲಿಯೇ 50 ಸಾವಿರ ವಿದ್ಯಾರ್ಥಿಗಳು ಸದಸ್ಯರಾಗಿದ್ದರು. ಹೀಗೆ ಸ್ವಾತಂತ್ರ್ಯಪೂರ್ವದಲ್ಲಿ ನೂರಾರು ವಿದ್ಯಾರ್ಥಿ ಸಂಘಟನೆಗಳು ಹುಟ್ಟಿಕೊಂಡವು. ದೇಶ ವಿಭಜನೆಯ ಹೋರಾಟ ಆರಂಭವಾದಾಗ ಮುಸ್ಲಿಂ ವಿದ್ಯಾರ್ಥಿಗಳ ಗುಂಪು ಮುಸ್ಲಿಂ ಲೀಗ್ ಪಾರ್ಟಿಯನ್ನು ಬೆಂಬಲಿಸಲು ಆಲ್ ಇಂಡಿಯಾ ಮುಸ್ಲಿಂ ಸ್ಟುಡೆಂಟ್ ಅಸೋಸಿಯೇಷನ್ ರಚಿಸಿದ್ದವು.

JNU ಶುಲ್ಕ ಹೆಚ್ಚಳ: ಪ್ರತಿಭಟನೆ ಏಕೆ? ಕೇಂದ್ರ ವಿವಿಗಳ ಶುಲ್ಕ ಎಷ್ಟು?JNU ಶುಲ್ಕ ಹೆಚ್ಚಳ: ಪ್ರತಿಭಟನೆ ಏಕೆ? ಕೇಂದ್ರ ವಿವಿಗಳ ಶುಲ್ಕ ಎಷ್ಟು?

ಕಾಂಗ್ರೆಸ್ ಸರ್ಕಾರದ ವಿರೋಧ

ಕಾಂಗ್ರೆಸ್ ಸರ್ಕಾರದ ವಿರೋಧ

ವಿದ್ಯಾರ್ಥಿ ಸಮೂಹದ ಒಗ್ಗೂಡುವಿಕೆ ಎಷ್ಟು ಅಪಾಯಕಾರಿ ಎಂದು ಬ್ರಿಟಿಷರು ಭಾವಿಸಿದ್ದರೋ, ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೂಡ ಅದೇ ಮನಸ್ಥಿತಿ ಹೊಂದಿತ್ತು. ವಿದ್ಯಾರ್ಥಿ ಸಂಘಟನೆಗಳು ಎಂದಿಗೂ ಆಳುವ ಸರ್ಕಾರದ ವಿರುದ್ಧ ಸಿಡಿದೇಳುತ್ತವೆ ಎಂಬುದನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಕೂಡ ಮನಗಂಡಿದ್ದರು.

ಇನ್ನು ಮುಂದೆ ರಾಷ್ಟ್ರೀಯ ವಿದ್ಯಾರ್ಥಿ ರಾಜಕೀಯ ಚಳವಳಿಯ ಅಗತ್ಯ ದೇಶಕ್ಕಿಲ್ಲ ಎಂದಿದ್ದ ಕಾಂಗ್ರೆಸ್ ನಾಯಕರು, ರಾಜಕೀಯದಿಂದ ದೂರವಿರಿ ಎಂದು ಸಲಹೆ ನೀಡಿದ್ದರು. 'ವಿದ್ಯಾರ್ಥಿಗಳು ಸರ್ಕಾರ, ವಿಶ್ವಸಂಸ್ಥೆ ಮತ್ತು ಜಗತ್ತಿನ ಕಡೆಗೆ ಸಲಹೆಗಳನ್ನು ಎಸೆಯುವುದೇ ತಮ್ಮ ಮುಖ್ಯ ಉದ್ದೇಶ ಎಂದು ಭಾವಿಸುತ್ತಿದ್ದಾರೆ. ಇದು ನಿಜವಾದ ವಿದ್ಯಾರ್ಥಿ ಚಳವಳಿಯಲ್ಲ' ಎಂದು ನೆಹರೂ ಹೇಳಿದ್ದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ಗೆ ಪ್ರಾಯೋಜಕತ್ವ ಮತ್ತು ಮಾರ್ಗದರ್ಶನ ನೀಡುವುದನ್ನು ಕಾಂಗ್ರೆಸ್ ಮುಖಂಡರು ಸ್ಥಗಿತಗೊಳಿಸಿದರು. ವಿದ್ಯಾರ್ಥಿಗಳನ್ನು ಬೇರೆಡೆಗೆ ಸೆಳೆಯುವ ಉದ್ದೇಶ ಸರ್ಕಾರದ್ದಾಗಿತ್ತು. ಆದರೆ ವಿದ್ಯಾರ್ಥಿ ಸಂಘಟನೆಗಳನ್ನು ರಾಜಕೀಯ ಚಟುವಟಿಕೆಗಳಿಂದ ದೂರ ಸರಿಸುವ ಪ್ರಯತ್ನ ಸಫಲವಾಗಲಿಲ್ಲ. ಸರ್ಕಾರದ ಧೋರಣೆಗಳು, ರಾಜಕೀಯ ಮುಖಂಡರ ನಡೆಗಳು ಕ್ರಮೇಣ ಕಾಂಗ್ರೆಸ್ ವಿರುದ್ಧದ ವಿದ್ಯಾರ್ಥಿ ನಾಯಕರನ್ನು ಹುಟ್ಟುಹಾಕಿದವು. ದೇಶವೆಂದರೆ ಕಾಂಗ್ರೆಸ್ ಎಂಬ ಭಾವನೆಯಿದ್ದ ಸ್ಥಿತಿಯಲ್ಲಿ ವಿರೋಧಪಕ್ಷದ ಸ್ಥಾನಗಳನ್ನು ಹುಟ್ಟುಹಾಕಲು ಕಾರಣವಾಗಿದ್ದೇ ವಿದ್ಯಾರ್ಥಿಗಳನ್ನು ರಾಜಕಾರಣದಿಂದ ದೂರವಿಡುವ ಕಾಂಗ್ರೆಸ್‌ನ ಪ್ರಯತ್ನ.

ವಿದ್ಯಾರ್ಥಿ ಚಳವಳಿಯ ವಿವಿಧ ಮುಖಗಳು

ವಿದ್ಯಾರ್ಥಿ ಚಳವಳಿಯ ವಿವಿಧ ಮುಖಗಳು

ರಾಜಕೀಯ ಮಾತ್ರವಲ್ಲದೆ, ಸಾಮಾಜಿಕ ಹಾಗೂ ಶೈಕ್ಷಣಿಕ ಬದಲಾವಣೆಗಳಲ್ಲಿಯೂ ವಿದ್ಯಾರ್ಥಿ ಸಂಘಟನೆಗಳ ಚಳವಳಿ ಪ್ರಮುಖ ಪಾತ್ರವಹಿಸಿವೆ. ಈ ಎಲ್ಲ ಹೋರಾಟಗಳೂ ಸರ್ಕಾರದ ವಿರುದ್ಧವೇ ಆಗುವುದರಿಂದ ಇಲ್ಲಿ ರಾಜಕೀಯ ಪ್ರೇರಿತ ಚಟುವಟಿಕೆಗಳು ಸಹ ಎದ್ದುಕಾಣುವುದು ಸಹಜ. ಸ್ಥಳೀಯ ಮಟ್ಟದಲ್ಲಿ ಅನೇಕ ಸಣ್ಣಪುಟ್ಟ ಹೋರಾಟಗಳು ವಿದ್ಯಾರ್ಥಿಗಳಲ್ಲಿ ಚಳವಳಿಯ ಪ್ರಜ್ಞೆ ಮೂಡಿಸುತ್ತವೆ. ಬಸ್ ಸೌಲಭ್ಯದ ಕೊರತೆ, ಶಾಲೆ ಅಥವಾ ಕಾಲೇಜಿನಲ್ಲಿ ಸೌಕರ್ಯಗಳ ಸಮಸ್ಯೆ ಮುಂತಾದವುಗಳ ವಿರುದ್ಧದ ಪ್ರತಿಭಟನೆ, ಹೋರಾಟಗಳು ಸಹ ಚಳವಳಿ ರೂಪುಗೊಳ್ಳುವ ಪ್ರೇರಣ ಶಕ್ತಿಗಳು.

ಬಸ್ ದರ ಹೆಚ್ಚಳ ವಿರೋಧಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳು ಉಗ್ರ ರೂಪ ತಾಳಿದ ನಿದರ್ಶನಗಳು ಸಾಕಷ್ಟಿವೆ. ಮೀರತ್‌ನಲ್ಲಿ ಸಿನಿಮಾ ಟಿಕೆಟ್ ಇಳಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಸಿನಿಮಾ ಮಂದಿರದ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ 1970ರಲ್ಲಿ ನಡೆದಿತ್ತು. ಭಾಷಾ ಹೋರಾಟ, ರಾಜ್ಯ ವಿಭಜನೆ, ನೇಮಕಾತಿಗಳು ಮುಂತಾದವುಗಳ ಕುರಿತಾದ ಹೋರಾಟಗಳಲ್ಲಿ ವಿದ್ಯಾರ್ಥಿ ಸಮೂಹ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಈಗಲೂ ತೊಡಗಿಸಿಕೊಳ್ಳುತ್ತಿವೆ.

JNUದಲ್ಲಿ ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳೇನು?JNUದಲ್ಲಿ ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳೇನು?

ಮೈಸೂರು ವಿವಿಯಲ್ಲಿ ಪ್ರತಿಭಟನೆ

ಮೈಸೂರು ವಿವಿಯಲ್ಲಿ ಪ್ರತಿಭಟನೆ

1968ರ ಜನವರಿಯಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ವಿ.ವಿ. ಗಿರಿ ಭಾಷಣದ ವೇಳೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮಗೆ ಉದ್ಯೋಗ ಬೇಕೇ ಹೊರತು ಭಾಷಣವಲ್ಲ ಎಂದು ಬಹಿಷ್ಕಾರ ಹಾಕಿದ್ದು ಸುದ್ದಿಯಾಗಿತ್ತು. 1963ರ ಜುಲೈಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಮೈಸೂರು ವಿಶ್ವವಿದ್ಯಾಲಯವು ಟ್ಯೂಷನ್ ಫೀ ಅನ್ನು 54 ರೂ.ಗೆ ಹೆಚ್ಚಿಸಿತ್ತು. ವಿ.ವಿ.ಯ ಅಧೀನದಲ್ಲಿದ್ದ ಕೊಡಗು, ದಕ್ಷಿಣ ಕನ್ನಡ ಮತ್ತು ಬಳ್ಳಾರಿಯ ಸರ್ಕಾರಿ ಕಾಲೇಜುಗಳು ಕೂಡ ದರ ಏರಿಸಿದ್ದವು. ರಾಜ್ಯದಾದ್ಯಂತ ಒಂದೇ ರೀತಿಯ ಶುಲ್ಕ ಇರಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆ 1964ರ ಜನವರಿವರೆಗೂ ನಡೆದಿತ್ತು. ಕೊನೆಗೆ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಶುಲ್ಕ ಇಳಿಕೆ ಮಾಡಲಾಗಿತ್ತು. ಇದಕ್ಕೂ ಮುನ್ನ ನಡೆದ ಭಾರಿ ಪ್ರತಿಭಟನೆ ಸಂಸತ್‌ನಲ್ಲಿಯೂ ಚರ್ಚೆಗೆ ಒಳಗಾಗಿತ್ತು.

ಮುಖ್ಯಮಂತ್ರಿ ರಾಜೀನಾಮೆಯನ್ನೇ ಕೊಡಿಸಿದ ಹೋರಾಟ

ಮುಖ್ಯಮಂತ್ರಿ ರಾಜೀನಾಮೆಯನ್ನೇ ಕೊಡಿಸಿದ ಹೋರಾಟ

1973ರಲ್ಲಿ ಹಾಸ್ಟೆಲ್ ಆಹಾರ ಶುಲ್ಕದಲ್ಲಿ ಶೇ 20ರಷ್ಟು ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದು ಸರ್ಕಾರದ ಭ್ರಷ್ಟಾಚಾರ ವಿರುದ್ಧದ ಪ್ರತಿಭಟನೆಯಾಗಿ ತಿರುವು ಪಡೆಯಿತು. 1974ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಇದೇ ರೀತಿಯ ಪ್ರತಿಭಟನೆ ನಡೆಯಿತು. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆಗಳು ನಡೆದವು.

ಮುಖ್ಯಮಂತ್ರಿ ಚಿಮನ್‌ಬಾಯ್ ಪಟೇಲ್ ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿದ್ದವು. ಇದು ಇಡೀ ರಾಜ್ಯಕ್ಕೆ ವ್ಯಾಪಿಸಿತ್ತು. 44 ಪಟ್ಟಣಗಳಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಅಹ್ಮದಾಬಾದ್‌ನಲ್ಲಿ ಪ್ರತಿಭಟನೆ ಹತ್ತಿಕ್ಕಲು ಸೇನೆಯನ್ನು ಬಳಸಲಾಗಿತ್ತು. ಕೊನೆಗೆ ಪ್ರಧಾನಿ ಇಂದಿರಾಗಾಂಧಿ ಅವರು ಪ್ರತಿಭಟನೆಯಿಂದ ಕಂಗೆಟ್ಟು ಚಿಮನ್‌ಬಾಯ್ ಪಟೇಲ್ ರಾಜೀನಾಮೆಗೆ ಸೂಚಿಸಿದ್ದರು. ವಿದ್ಯಾರ್ಥಿಗಳ ಸಮಾಜೋ-ರಾಜಕೀಯ ಚಳಿವಳಿಯ ಒಂದು ನಿದರ್ಶನವಿದು.

2016ರಲ್ಲಿ ಹೈದರಾಬಾದ್‌ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಸಣ್ಣಹಳ್ಳಿಗಳಲ್ಲಿಯೂ ಇದು ಪ್ರತಿಭಟನೆಗೆ ಕಾರಣವಾಗಿತ್ತು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಮೇಲಿನ ನಿಷೇಧ ವಿರೋಧಿಸಿ 20 ಲಕ್ಷದಷ್ಟು ವಿದ್ಯಾರ್ಥಿಗಳು ತಮಿಳುನಾಡು ಮತ್ತು ಪುದುಚೆರಿಯಲ್ಲಿ ಪ್ರತಿಭಟನೆ ನಡೆಸಿದ್ದು, ದೇಶ ಕಂಡ ಬೃಹತ್ ಪ್ರತಿಭಟನೆಗಳಲ್ಲಿ ಒಂದು.

ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?

ಪ್ರಫುಲ್ಲ ಮಹಾಂತ ಎಂಬ ನಾಯಕನ ಹುಟ್ಟು

ಪ್ರಫುಲ್ಲ ಮಹಾಂತ ಎಂಬ ನಾಯಕನ ಹುಟ್ಟು

ಅಸ್ಸಾಂಗೆ ಬಾಂಗ್ಲಾದೇಶದಿಂದ ಅಕ್ರಮ ಒಳನುಸುಳುಕೋರರ ಪ್ರವೇಶದ ವಿರುದ್ಧ ಅಸ್ಸಾಂನಲ್ಲಿ ಹೋರಾಟ ನಡೆದಿತ್ತು. ಅದರಲ್ಲಿ ಮುಖ್ಯಪಾತ್ರ ವಹಿಸಿದ್ದು ಆಲ್ ಅಸ್ಸಾಂ ಸ್ಟುಡೆಂಟ್ಸ್ ಯೂನಿಯನ್ (ಎಎಎಸ್‌ಯು). 1967ರಲ್ಲಿ ರಚನೆಯಾದ ಎಎಎಸ್‌ಯು 1979ರಲ್ಲಿ ಅಕ್ರಮ ನುಸುಳುಕೋರರ ವಿರುದ್ಧ ಆರಂಭವಾದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿತ್ತು. ಇದಕ್ಕೆ ವಕೀಲರ ಸಂಘಟನೆ ಹಾಗೂ ಅನೇಕ ಸಂಘ ಸಂಸ್ಥೆಗಳು ಸೇರಿಕೊಂಡವು. ಆರು ವರ್ಷ ಈ ಪ್ರತಿಭಟನೆ ನಡೆಯಿತು. ಲೆಕ್ಕವಿಲ್ಲದಷ್ಟು ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾದರು. 1985ರಲ್ಲಿ ಕೊನೆಗೂ ಕೇಂದ್ರ ಸರ್ಕಾರ ಐತಿಹಾಸಿಕ 'ಅಸ್ಸಾಂ ರೆಕಾರ್ಡ್‌'ಗೆ ಸಹಿಹಾಕುವಂತೆ ಮಾಡುವಲ್ಲಿ ವಿದ್ಯಾರ್ಥಿ ಘಟಕ ಯಶಸ್ವಿಯಾಯಿತು. ಈ ವಿದ್ಯಾರ್ಥಿ ಘಟಕವೇ ಮುಂದೆ ಅಸ್ಸಾಂ ಗಣ ಪರಿಷದ್ ರಾಜಕೀಯಪಕ್ಷವಾಗಿ ಬೆಳೆಯಿತು. ಅದರ ಸಂಸ್ಥಾಪಕ ಪ್ರಫುಲ್ಲ ಕುಮಾರ್ ಮಹಾಂತ ಅದೇ ವರ್ಷ ಅಸ್ಸಾಂ ಮುಖ್ಯಮಂತ್ರಿಯೂ ಆದರು. ಮಹಾಂತ ಮತ್ತು ಅವರ ವಿದ್ಯಾರ್ಥಿ ಬಳಗದ ಶಕ್ತಿಗೆ ಇಂದಿರಾಗಾಂಧಿ ಸರ್ಕಾರ ಅಕ್ಷರಶಃ ನಡುಗಿತ್ತು.

ಭಾರತದ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಇತಿಹಾಸವನ್ನು ಕೆದಕಿದರೆ ಇಂತಹ ಸಾವಿರಾರು ಪರಿಣಾಮಕಾರಿ ಹೋರಾಟಗಳು ಸಿಗುತ್ತವೆ. ಅನೇಕ ಹೋರಾಟಗಳು ದಿಕ್ಕುತಪ್ಪಿವೆ. ಇನ್ನು ಕೆಲವು ರಾಜಕೀಯ ಆಮಿಷಗಳು, ಒತ್ತಡಗಳಿಗೆ ಬಲಿಯಾಗಿದ್ದಿವೆ. ಇಂತಹ ಚಳವಳಿಗಳು ನೂರಾರು ರಾಜಕಾರಣಿಗಳನ್ನು ಸೃಷ್ಟಿಸಿವೆ. ವಿದ್ಯಾರ್ಥಿ ದೆಸೆಯಲ್ಲಿನ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರೆಲ್ಲರೂ ರಾಜಕಾರಣಕ್ಕೆ ಬಂದ ಬಳಿಕ ಅದೇ ಬದ್ಧತೆ ಮತ್ತು ವರ್ಚಸ್ಸನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬುದಕ್ಕೆ ಪ್ರಫುಲ್ಲ ಕುಮಾರ್ ಮಹಾಂತ ಉದಾಹರಣೆ.

ಎಲ್ಲ ದೇಶಗಳಲ್ಲಿಯೂ ವಿದ್ಯಾರ್ಥಿ ಬಲ

ಎಲ್ಲ ದೇಶಗಳಲ್ಲಿಯೂ ವಿದ್ಯಾರ್ಥಿ ಬಲ

ಪ್ರತಿ ರಾಜಕೀಯ ಪಕ್ಷವನ್ನೂ ಪ್ರತಿನಿಧಿಸುವ ವಿದ್ಯಾರ್ಥಿ ಘಟಕಗಳು ಹುಟ್ಟಿಕೊಂಡಿವೆ ಮತ್ತು ಕಾಲೇಜು, ವಿಶ್ವವಿದ್ಯಾಲಯ ಮಟ್ಟದಲ್ಲಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಗುರುತಿಸಿಕೊಂಡಿವೆ. ಆದರೆ ಕೆಲವು ಹೋರಾಟಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹಿನ್ನೆಲೆಗೆ ಸರಿಯುತ್ತದೆ. ಜೆಎನ್‌ಯುದಲ್ಲಿ ನಡೆಯುತ್ತಿರುವ ಶುಲ್ಕ ಹೆಚ್ಚಳದ ವಿರುದ್ಧದ ಪ್ರತಿಭಟನೆಗೆ ಎಬಿವಿಪಿ ಕೂಡ ಕೈಜೋಡಿಸಿರುವುದು ಇದಕ್ಕೊಂದು ನಿದರ್ಶನ.

ವಿದ್ಯಾರ್ಥಿ ಚಳವಳಿ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕೂಡ ಪ್ರಭಾವಶಾಲಿ. ಹಾಂಕಾಂಗ್‌ನಲ್ಲಿ ಚೀನಾ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಗಟ್ಟಿಯಾಗಿ ನೆಲೆ ನಿಲ್ಲಲು ವಿದ್ಯಾರ್ಥಿ ಸಮೂಹವೇ ಕಾರಣ. ಚಿಲಿಯಲ್ಲಿ 2011-2013ರಲ್ಲಿ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆ ದೇಶದ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಬದಲಿಸುವಂತೆ ಮಾಡಿತು. ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ವ್ಯಾಪಕ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಪಾಕಿಸ್ತಾನದಲ್ಲಿ ಕೂಡ ಸೇನಾ ಆಡಳಿತದ ವಿರುದ್ಧ ವಿದ್ಯಾರ್ಥಿ ಚಳವಳಿ ನಡೆದಿತ್ತು.

ಜೆಎನ್‌ಯುದಲ್ಲಿ ನಡೆಯುತ್ತಿರುವ ಶುಲ್ಕ ಹೆಚ್ಚಳದ ವಿರುದ್ಧದ ಪ್ರತಿಭಟನೆ ರಾಜಕೀಯ ತಿರುವುಗಳನ್ನು ಪಡೆದಿದೆ. ವಿದ್ಯಾರ್ಥಿಗಳ ಹೋರಾಟ ರಾಜಕೀಯ ಬಣ್ಣ ಪಡೆದುಕೊಳ್ಳುವುದು ಇದು ಮೊದಲೇನಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗಲೂ ಜೆಎನ್‌ಯುದಲ್ಲಿ ಅನೇಕ ಪ್ರತಿಭಟನೆಗಳು ನಡೆದಿದ್ದವು ಎನ್ನುವುದು ಗಮನಾರ್ಹ. ಭಾರತದ ಇತಿಹಾಸದಲ್ಲಿ ಆಳುವ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ವಿರೋಧಪಕ್ಷಗಳಿಗಿಂತಲೂ ತೀವ್ರವಾಗಿರುತ್ತದೆ ಎನ್ನುವುದು ಹಲವು ಬಾರಿ ಸಾಬೀತಾಗಿದೆ.

English summary
Indian history has seen many successful movements of Student organization before and after independence. Why the governments fears to student unions?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X