ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ಡದಮಲ್ಲಾಪುರ ಮೂಕಪ್ಪ ಮಹಾ ಸ್ವಾಮಿಗಳ ಪವಾಡವನ್ನು ಬಲ್ಲಿರಾ?

|
Google Oneindia Kannada News

ಹಾವೇರಿ, ಜೂನ್.21: ಮಣ್ಣೆತ್ತು ಅಮಾವಾಸ್ಯೆ. ಮುಂಗಾರು ಆರಂಭಿಕ ಹಂತದಲ್ಲೇ ಕಾರಹುಣ್ಣಿಮೆ ನಂತರದಲ್ಲಿ ಬರುವ ಈ ಅಮಾವಾಸ್ಯೆ ರೈತಾಪಿ ವರ್ಗದ ಪಾಲಿಗೆ ಹಬ್ಬ. ಕೃಷಿಗೆ ಆಸರೆಯಾಗಿ ರೈತರ ಬದುಕಿಗೆ ಬೆಳಕಾಗಿ ದುಡಿಯುವ ಎತ್ತುಗಳನ್ನು ದೈವೀಸ್ವರೂಪ ಎಂದು ಭಾವಿಸಲಾಗುತ್ತದೆ. ಈ ಹಿನ್ನೆಲೆಯಲ್ಲೇ ಮಣ್ಣಿನಲ್ಲಿ ರಚಿಸಿದ ಜೋಡಿ ಎತ್ತುಗಳನ್ನು ತಂದು ಮನೆಯಲ್ಲಿಟ್ಟು ಪೂಜಿಸುವ ಆಚಾರವು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

Recommended Video

ಭಾರತೀಯ ಸೇನೆ ಸೇರಿಕೊಳ್ಳಲು ಮುಂದಾದ ನಾಗಸಾಧುಗಳು | NagaSadhus | Oneindia Kannada

ಮಣ್ಣೆತ್ತಿನ ಅಮಾವಾಸ್ಯೆ ವಿಶೇಷ ದಿನವಾಗಿರುವ ಇಂದು ಲೋಕಕಲ್ಯಾಣಕ್ಕಾಗಿ ಲೋಕಸಂಚಾರ ಮಾಡುತ್ತಾ ಭಕ್ತಸಂಕುಲವನ್ನು ಹರಸಿ ಆಶೀರ್ವದಿಸುತ್ತಿರುವ. ಜಾತಿ-ಧರ್ಮಗಳ ಚೌಕಟ್ಟನ್ನು ಮೀರಿ ನಿಂತಿರುವ. ಭಕ್ತರ ಆಶೋತ್ತರಗಳನ್ನು ಈಡೇರಿಸುತ್ತಾ. ಕಷ್ಟಕಾರ್ಪಣ್ಯಗಳನ್ನು ನೀಗಿಸುತ್ತಿರುವ. ನೂರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುತ್ತಿರುವ. ಹಚ್ಚಹಸಿರಿನ ತೆಪ್ಪಲಿನಲ್ಲಿ ಭಕ್ತರ ಬದುಕಿಗೆ ಆಶಾಕಿರಣವಾಗಿರುವ ಪುಣ್ಯಕ್ಷೇತ್ರದ ಕುರಿತು ಒಂದು ವಿಶೇಷ ವರದಿ.

ಹಾವೇರಿಯಲ್ಲಿ ಶತಮಾನದ ಜಾತ್ರೆ ಭಾಗ-1: ಉ-ಕ ಹೆಬ್ಬಾಗಿಲಿನಲ್ಲಿ ರೊಟ್ಟಿ ಮಾಡಲ್ಲ ಮಂದಿ!ಹಾವೇರಿಯಲ್ಲಿ ಶತಮಾನದ ಜಾತ್ರೆ ಭಾಗ-1: ಉ-ಕ ಹೆಬ್ಬಾಗಿಲಿನಲ್ಲಿ ರೊಟ್ಟಿ ಮಾಡಲ್ಲ ಮಂದಿ!

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸುಕ್ಷೇತ್ರ ಗುಡ್ಡದ ಮಲ್ಲಾಪುರದ ದಾಸೋಹ ಮಠದ ಶ್ರೀ ಶ್ರೀ ಮೂಕಪ್ಪ ಸ್ವಾಮಿಗಳ ಸನ್ನಿಧಿಯು ಭಕ್ತಕೋಟಿಯನ್ನು ಹೊಂದಿದೆ. ಕಂಟಲೆ ಬಸವ(ಎತ್ತು) ಈ ಮಠದ ಉತ್ತರಾಧಿಕಾರಿಯಾಗಿದ್ದು ವಿಶೇಷದಲ್ಲೇ ವಿಶೇಷವಾಗಿದೆ. ಕಂಟಲೆ ಬಸವಣ್ಣ ಬೇಡಿದ ವರಗಳನ್ನು ನೀಡುವ ಭಕ್ತರ ಪಾಲಿನ ಆರಾಧ್ಯ ದೈವ ಎಂತಲೇ ನಂಬಲಾಗಿದೆ. ಶ್ರೀಗುರು ಹುಚ್ಚೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸ್ಥಾಪಿಸಿದ ಮಠದ ಪವಾಡ ಮತ್ತು ಇತಿಹಾಸ ಅಮೋಘವಾಗಿದೆ.

ತಪಸ್ವಿಯನ್ನು ಹುಚ್ಚ ಎಂದು ಸಂಬೋಧಿಸಿದ ಸಮಾಜ

ತಪಸ್ವಿಯನ್ನು ಹುಚ್ಚ ಎಂದು ಸಂಬೋಧಿಸಿದ ಸಮಾಜ

ಸುಮಾರು 400 ವರ್ಷಗಳ ಹಿಂದೆ ಆಂಧ್ರಪ್ರದೇಶ ಕಡಪಾ ಜಿಲ್ಲೆಯ ರಾಯಚೋಟಿ ಗ್ರಾಮದಲ್ಲಿ ಮಲ್ಲಯ್ಯ ಮತ್ತು ಪಾರ್ವತಮ್ಮ ದಂಪತಿಗೆ ಜನಿಸಿದ ಪುತ್ರನೇ ಈ ಅಜ್ಜಯ್ಯಸ್ವಾಮಿ. ಆಧ್ಯಾತ್ಮದ ಮೇಲಿನ ಒಲುವು ಅವರನ್ನು ಸಾಂಸಾರಿಕ ಬದುಕಿನಿಂದ ದೂರ ಮಾಡಿತು. ಲೋಕಕಲ್ಯಾಣಕ್ಕಾಗಿ ಸಂಚರಿಸಿದ ಅಜ್ಜಯ್ಯಸ್ವಾಮಿಗಳು 16ನೇ ಶತಮಾನದಲ್ಲಿ ಕರ್ನಾಟಕಕ್ಕೆ ಆಗಮಿಸಿದರು. ಭ್ರಮರಾಂಭಾ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ಆರಾಧಕರಾಗಿದ್ದ ಅಜ್ಜಯ್ಯಸ್ವಾಮಿ ಧ್ಯಾನಾಸಕ್ತರಾಗಿದ್ದರು. ಬಾಹ್ಯ ಪ್ರಪಂಚದಿಂದ ದೂರ ಉಳಿದು ಮರುಳಶಂಕರನ ಧ್ಯಾನದಲ್ಲಿ ತಲ್ಲೀನರಾಗಿದ್ದ ಅಜ್ಜಯ್ಯಸ್ವಾಮಿಗಳನ್ನು ಅನೇಕರು ಹುಚ್ಚಪ್ಪ ಎಂದೇ ಕರೆಯುತ್ತಿದ್ದರು. ಇದರಿಂದ ಅಜ್ಜಯ್ಯಸ್ವಾಮಿಗಳು ಶ್ರೀಗುರು ಹುಚ್ಚೇಶ್ವರ ಸ್ವಾಮಿಗಳು ಎಂದು ಪ್ರಸಿದ್ಧರಾದರು.

ಗುಡ್ಡದ ಮೇಲೆ ಮಲ್ಲಿಕಾರ್ಜುನ ಸ್ವಾಮಿ ಮಹಾಲಿಂಗ ಪ್ರತಿಷ್ಠಾನ

ಗುಡ್ಡದ ಮೇಲೆ ಮಲ್ಲಿಕಾರ್ಜುನ ಸ್ವಾಮಿ ಮಹಾಲಿಂಗ ಪ್ರತಿಷ್ಠಾನ

ಲೋಕಸಂಚಾರ ನಡೆಸುತ್ತಿದ್ದ ಹುಚ್ಚೇಶ್ವರ ಸ್ವಾಮಿ ಪ್ರತಿ ಶಿವರಾತ್ರಿಗೆ ಶ್ರೀಶೈಲ ಗಿರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಕಂಟಲೆ ಬಸವನನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ಶ್ರೀಶೈಲ ಗಿರಿಯಲ್ಲಿನ ಆಜ್ಞಾಪನೆಯಂತೆ ಹುಚ್ಚೇಶ್ವರ ಸ್ವಾಮಿ ನೆಲೆನಿಂತ ಗುಡ್ಡದ ಮಲ್ಲಾಪುರದ ಶಿಖರದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮಹಾಲಿಂಗ ಪ್ರತಿಷ್ಠಾಪಿಸಲಾಯಿತು. ಪುಣ್ಯಕಾರ್ಯಗಳ ಆರಂಭಕ್ಕೂ ಮೊದಲು ಈ ಮಹಾಲಿಂಗದ ಅಪ್ಪಣೆಯನ್ನು ಪಡೆಯಲಾಗುತ್ತಿತ್ತು. ಇಂದಿಗೂ ಮೂಕಪ್ಪ ಸ್ವಾಮಿಗಳು ಭಿಕ್ಷಾಟನೆಗೆ ತೆರಳುವ ಮುನ್ನ ಯಾವ ದಿಕ್ಕಿನಲ್ಲಿ ಸಂಚರಿಸಬೇಕು ಎನ್ನುವುದರ ಬಗ್ಗೆ ಇದೇ ಮಲ್ಲಿಕಾರ್ಜುನ ಸ್ವಾಮಿಯ ಅಪ್ಪಣೆ ಪಡೆದು ಮುಂದೆ ಸಾಗುವ ಸಂಪ್ರದಾಯವು ರೂಢಿಯಲ್ಲಿದೆ.

ಅನ್ನದಾನದ ಶ್ರೇಷ್ಠತೆ ತೋರಿದ ಹುಚ್ಚೇಶ್ವರ ಸ್ವಾಮಿ

ಅನ್ನದಾನದ ಶ್ರೇಷ್ಠತೆ ತೋರಿದ ಹುಚ್ಚೇಶ್ವರ ಸ್ವಾಮಿ

ಪ್ರತಿನಿತ್ಯ ಭಿಕ್ಷಾಟನೆ ನಡೆಸುತ್ತಿದ್ದ ಹುಚ್ಚೇಶ್ವರ ಸ್ವಾಮಿಗಳು ತಾವು ತಂದ ಅಕ್ಕಿಯಿಂದ ಅನ್ನವನ್ನು ಬೇಯಿಸಿ ಭಕ್ತಾದಿಗಳಿಗೆ ದಾಸೋಹವನ್ನು ನೆರವೇರಿಸುತ್ತಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿನಿತ್ಯ ಶ್ರೀಕ್ಷೇತ್ರದಲ್ಲಿ ದಾಸೋಹವನ್ನು ನಿರಂತರವಾಗಿ ನೆಡೆಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ಗುಡ್ಡದ ಮಲ್ಲಾಪುರದಲ್ಲಿರುವು ಮೂಕಪ್ಪ ಮಹಾ ಸ್ವಾಮಿಗಳ ಸನ್ನಿಧಿಯನ್ನು ದಾಸೋಹ ಮಠ ಎಂದು ಕರೆಯಲಾಗುತ್ತಿದೆ.

ದಾಸೋಹ ಮಠದ ಉತ್ತರಾಧಿಕಾರಿಯೇ ಕಂಟಲೆ ಬಸವ

ದಾಸೋಹ ಮಠದ ಉತ್ತರಾಧಿಕಾರಿಯೇ ಕಂಟಲೆ ಬಸವ

ಹುಚ್ಚೇಶ್ವರ ಸ್ವಾಮಿಗಳ ಅಂತಿಮ ಕಾಲ ಸನ್ನಿಹಿತವಾದದ್ದನ್ನು ಗ್ರಹಿಸಿದ ಶ್ರೀಗಳು ತಮ್ಮ ಜೊತೆಗೆ ಅನುಗಾಲ ಸೇವೆಗೈದ ಕಂಟಲೆ ಬಸವನಿಗೇ ಮಠದ ಉತ್ತರಾಧಿಕಾರತ್ವವನ್ನು ನೀಡಿದರು. ವೃಷಭಕ್ಕೆ ತಮ್ಮ ತಪಸ್ ಶಕ್ತಿಯನ್ನು ಧಾರೆ ಎರೆದರು. ಬಸವನ ಅಂತರಂಗದಲ್ಲಿ ಆತ್ಮರೂಪದಲ್ಲಿ ಸ್ವತಃ ತಾವೇ ನೆಲೆಸುತ್ತೇವೆ ಎಂದು ಭಕ್ತರಿಗೆ ಶ್ರೀಗಳು ತಿಳಿ ಹೇಳಿದರು. ತಮ್ಮ ಸಹೋದರನ ಜೇಷ್ಠಪುತ್ರ ಚನ್ನಯ್ಯಸ್ವಾಮಿ ಎಂಬುವವರಿಗೆ ವೃಷಭದ ಗುರುವಿನ ಸಹವರ್ತಿಯಾಗಿ ನಡೆಸುತ್ತಾ ಬರಬೇಕೆಂದು ಆಶೀರ್ವದಿಸಿದರು. ತದನಂತರದಲ್ಲಿ ಶ್ರೀಮಠದ ಕಾರುಬಾರಿನ ಅಧಿಕಾರವು ತಲೆಮಾರಿನ ಜೇಷ್ಠ ಪುತ್ರನೇ ವಹಿಸಿಕೊಂಡು ಬರುವಂತೆ ಆಜ್ಞಾಪನೆ ಮಾಡಿದರು.

ಮಡ್ಲೂರು ಗ್ರಾಮದಲ್ಲಿ ನಡೆಯಿತೊಂದು ಪವಾಡ

ಮಡ್ಲೂರು ಗ್ರಾಮದಲ್ಲಿ ನಡೆಯಿತೊಂದು ಪವಾಡ

ಶ್ರೀಹುಚ್ಚೇಶ್ವರ ಸ್ವಾಮಿಗಳು ಭಕ್ತರಿಗೆ ಕೊಟ್ಟ ಮಾತುಗಳು ಮೂಕಪ್ಪ ಸ್ವಾಮಿ ಪವಾಡಗಳಿಂದ ಸಾಬೀತುಗೊಂಡಿತು. ಇದರ ನಡುವೆ ಗುಡ್ಡದ ಮಲ್ಲಾಪುರದ ಪಕ್ಕದ ಮಡ್ಲೂರು ಗ್ರಾಮದ ಮುಸಲ್ಮಾನ್ ವ್ಯಕ್ತಿಯ ಮನೆಯಲ್ಲಿ ಹೋರಿಕರು ಜನಿಸಿತು. ಗೋಮಾತೆಯ ಗರ್ಭದಿಂದ ಹೊರಬಂದ ಈ ಕರುವಿನ ವರ್ತನೆ ವಿಚಿತ್ರವಾಗಿದ್ದು, ಜನಿಸಿದ ನಾಲ್ಕಾರು ದಿನಗಳಾದರೂ ಕರು ತನ್ನ ತಾಯಿಹಾಲನ್ನು ಸೇವಿಸಲಿಲ್ಲ. ಅದಾಗಿಯೂ ಆರೋಗ್ಯವಾಗಿದ್ದ ಕರುವಿನ ಬಗ್ಗೆ ಕೆಲವು ಭಕ್ತರು ಮೂಕಪ್ಪ ಸ್ವಾಮಿಗಳಲ್ಲಿ ತಿಳಿಸಿದರು. ಮಠಕ್ಕೆ ಕರೆತಂದ ವೇಳೆ ಪುಟ್ಟ ಕರುವು ಮೂಕಪ್ಪ ಸ್ವಾಮಿಗಳ ಪಾದದ ಬಳಿ ನಿಂತು ಮೂಸಿತು. ಕರುವನ್ನು ಮೂಸಿದ ಮೂಕಪ್ಪ ಸ್ವಾಮಿಗಳು ಈ ಕರುವಿಗೆ ಆಚಾರ್ಯ ಪಟ್ಟವನ್ನು ಕಟ್ಟುವುದಕ್ಕೆ ಸಂಜ್ಞೆಯನ್ನು ಮಾಡಿತು. ಅಂದಿನಿಂದ ಶ್ರೀಮಠದಲ್ಲಿ ಗುರುದ್ವಯರಾಗಿ ಮೂಕಪ್ಪ ಸ್ವಾಮಿಗಳು ಭಕ್ತರಿಗೆ ಆಶೀರ್ವದಿಸುತ್ತಿವೆ.

ಲಿಂಗೈಕ್ಯರಾಗಿ ಒಂದೇ ತಿಂಗಳಳಲ್ಲಿ ಮತ್ತೆ ಹುಟ್ಟಿ ಬರುವ ಶ್ರೀಗಳು

ಲಿಂಗೈಕ್ಯರಾಗಿ ಒಂದೇ ತಿಂಗಳಳಲ್ಲಿ ಮತ್ತೆ ಹುಟ್ಟಿ ಬರುವ ಶ್ರೀಗಳು

ಸುಕ್ಷೇತ್ರದಲ್ಲಿ ಮೂಕಪ್ಪ ಸ್ವಾಮಿಗಳು ಲಿಂಗೈಕ್ಯರಾದ ಬಳಿಕ ಮತ್ತೊಬ್ಬರಿಗೆ ಪಟ್ಟಾಧಿಕಾರವನ್ನು ನೀಡಲಾಗುತ್ತದೆ. ಆದರೆ ಯಾವುದೋ ಒಂದು ಕರುವನ್ನು ಇಲ್ಲಿ ಪಟ್ಟಕ್ಕೆ ಕೂರಿಸುವುದಿಲ್ಲ. ಬದಲಿಗೆ ಲಿಂಗೈಕ್ಯರಾದ ವಾರದಲ್ಲೇ ಗುಡ್ಡದ ಮಲ್ಲಾಪುರದ ಸುತ್ತಮುತ್ತಲಿನ ಗ್ರಾಮಗಳಲ್ಲೇ ಮೂಕಪ್ಪ ಸ್ವಾಮಿಗಳು ಮತ್ತೆ ಜನಿಸುತ್ತಾರೆ. ಹೀಗೆ ಜನಿಸಿದ ಮೂಕಪ್ಪ ಸ್ವಾಮಿಗಳನ್ನು ಗುರುತಿಸಲು ವಿಶೇಷ ಪದ್ಧತಿಯೇ ಆಚರಣೆಯಲ್ಲಿದೆ.

ಮಿತಿ ಹಾಗೂ ಧರ್ಮಬೇಧವಿಲ್ಲದೇ ಯಾವುದೋ ಊರಿನಲ್ಲಿ ಜನಿಸಿದ ಕರುವು ನಾಲ್ಕಾರು ದಿನಗಳ ಕಾಲ ಗೋಮಾತೆ ಹಾಲನ್ನೇ ಸೇವಿಸುವುದಿಲ್ಲ. ಮೂಕಪ್ಪ ಸ್ವಾಮಿಗಳ ಪವಾಡದ ಬಗ್ಗೆ ಅರಿತವರು ಶ್ರೀಮಠಕ್ಕೆ ಈ ಕುರಿತು ಮಾಹಿತಿ ನೀಡುತ್ತಾರೆ. ನಂತರ ಶ್ರೀಮಠದ ಧರ್ಮಾಧಿಕಾರಿಗಳು ಶ್ರೀಗುರು ಹುಚ್ಚೇಶ್ವರ ಸ್ವಾಮಿಗಳ ಗದ್ದುಗೆಯ ತೀರ್ಥ ಮತ್ತು ಪ್ರಸಾದವನ್ನು ತೆಗೆದುಕೊಂಡು ಅಲ್ಲಿಗೆ ತೆರಳುತ್ತಾರೆ.

ಕರುವಿಗೆ ನಡೆಯುತ್ತೆ ಮೊದಲ ಪರೀಕ್ಷೆ

ಕರುವಿಗೆ ನಡೆಯುತ್ತೆ ಮೊದಲ ಪರೀಕ್ಷೆ

ಶ್ರೀಮಠದ ಧರ್ಮಾಧಿಕಾರಿಗಳು ಗುಡ್ಡದ ಮಲ್ಲಾಪುರದ ಹಿರಿಯರು ಕರು ಜನಿಸಿದ ಗ್ರಾಮದ ಹಿರಿಯರ ಮಧ್ಯದಲ್ಲಿ ಕುಳಿತಿರುತ್ತಾರೆ. ಆಗ ಪುಟ್ಟ ಕರು ಧರ್ಮಾಧಿಕಾರಿಗಳನ್ನು ಗುರುತಿಸಿ ಅವರನ್ನು ಬಂದು ಮೂಸುತ್ತದೆ. ಅವರ ಬಳಿಯಿದ್ದ ತೀರ್ಥ ಪ್ರಸಾದವನ್ನು ತನ್ನ ಬಾಯಿಂದ ಹೊರಗೆಳೆಯುತ್ತದೆ.

ಕರುವಿನ ಎರಡನೇ ಪರೀಕ್ಷೆ ಹೇಗಿರುತ್ತೆ?

ಕರುವಿನ ಎರಡನೇ ಪರೀಕ್ಷೆ ಹೇಗಿರುತ್ತೆ?

ಪರೀಕ್ಷೆ - 2: ಸರ್ವ ಹಿರಿಯ ಸಮಕ್ಷಮದಲ್ಲಿ ಕರುವನ್ನು ತಾಯಿ ಹಾಲು ಸೇವಿಸಲು ಬಿಡುತ್ತಾರೆ. ಆಗಲೂ ಕರುವು ಹಾಲು ಸೇವಿಸುವುದಿಲ್ಲ. ಬಳಿಕ ತಾಯಿ ಮತ್ತು ಕರುವಿಗೆ ಸ್ನಾನ ಮಾಡಿಸಿ ದೇವರ ಕೋಣೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಹಾಸಿದ ಗದ್ದುಗೆ ಮೇಲೆ ನಿಲ್ಲಿಸಿ ಎರಡಕ್ಕೂ ಪೂಜೆ ಸಲ್ಲಿಸಲಾಗುತ್ತದೆ. ನಂತರದಲ್ಲಿ ನೀವು ನಿಜವಾಗಿಯೂ ಮೂಕಪ್ಪ ಸ್ವಾಮಿಗಳೇ ಆಗಿದ್ದಲ್ಲಿ ತಾಯು ಸೇವಿಸುವಂತೆ ಧರ್ಮಾಧಿಕಾರಿಗಳು ಹೇಳುತ್ತಾರೆ. ಆಗ ಕರುವು ತಾಯಿ ಹಾಲನ್ನು ಸೇವಿಸುತ್ತದೆ.

ಕರುವಿಗೆ ಶುಭ ಮುಹೂರ್ತದಲ್ಲಿ ಲಿಂಗಧಾರಣೆ

ಕರುವಿಗೆ ಶುಭ ಮುಹೂರ್ತದಲ್ಲಿ ಲಿಂಗಧಾರಣೆ

ಇನ್ನು, ಕರುವನ್ನು ಕನಿಷ್ಠ 9 ರಿಂದ 11 ತಿಂಗಳುಗಳ ಕಾಲ ತಾಯಿಯ ಜೊತೆಗೆ ಬೆಳೆಯುವುದಕ್ಕೆ ಬಿಡಲಾಗುತ್ತದೆ. ಶ್ರೀ ಮೂಕಪ್ಪ ಸ್ವಾಮಿ ಎಂದು ಗುರುತಿಸಿದ ನಂತರ ಒಂದು ಶುಭ ಮುಹೂರ್ತದಲ್ಲಿ ಕರುವಿಗೆ ಲಿಂಗಧಾರಣೆ ಮಾಡಲಾಗುತ್ತದೆ. ಲಿಂಗಧಾರಣೆ ಬಳಿಕ ಪ್ರತಿನಿತ್ಯ ದಿನಕ್ಕೆ ಮೂರು ಹೊತ್ತು ಸ್ನಾನ ಪೂಜಾದಿಗಳನ್ನು ನೆರವೇರಿಸಲಾಗುತ್ತದೆ. ಗ್ರಾಮದಲ್ಲಿ ಮರಣ ಹೊಂದಿದ್ದಲ್ಲಿ, ಶವಸಂಸ್ಕಾರಗಳು ನಡೆದಿದ್ದ ದಿನ ಮೂಕಪ್ಪ ಸ್ವಾಮಿಗಳು ಸ್ನಾನ ಮತ್ತು ಪೂಜಾದಿಗಳು ನೆರವೇರದೇ ಆಹಾರ ಸೇವಿಸುವುದಿಲ್ಲ.

ಅಪಾರ ಪವಾಡ ಸೃಷ್ಟಿಸಿರುವ ಮೂಕಪ್ಪ ಸ್ವಾಮಿಗಳು

ಅಪಾರ ಪವಾಡ ಸೃಷ್ಟಿಸಿರುವ ಮೂಕಪ್ಪ ಸ್ವಾಮಿಗಳು

ಪ್ರತಿ ತಿಂಗಳ ಲೋಕ ಸಂಚಾರ ನಡೆಸುವ ಮೂಕಪ್ಪ ಸ್ವಾಮಿಗಳು ಅಮಾವಾಸ್ಯೆ ಎರಡ್ಮೂರು ದಿನಗಳಲ್ಲಿ ಸುಕ್ಷೇತ್ರದಲ್ಲೇ ಭಕ್ತರಿಗೆ ದರ್ಶನ ನೀಡುತ್ತಾರೆ. ಸಂತಾನಭಾಗ್ಯವಿಲ್ಲದ ಮಹಿಳೆಯರು ತಾಯ್ತನದ ಸೌಭಾಗ್ಯ, ಕನ್ಯೆಯರಿಗ ತಾಳಿಭಾಗ್ಯ, ಮಾಟ-ಮಂತ್ರ ಪಿಶಾಚಿಗಳ ತೊಂದರೆಯಿಂದ ಸಿಲುಕಿ ನರಳುತ್ತಿದ್ದ ಸಾವಿರಾರು ಜನರು ಇಂದು ಮೂಕಪ್ಪ ಸ್ವಾಮಿಗಳ ಆಶೀರ್ವಾದದಿಂದ ಸುಖ-ಸಂತೋಷದ ಜೀವನವನ್ನು ಕಟ್ಟಿಕೊಂಡಿದ್ದಾರೆ. ಪಾದದ ಬಳಿ ಸಾಷ್ಟಾಂಗ ಹಾಕುವ ಭಕ್ತರಿಗೆ ಪಾದ ಮುಟ್ಟುವ ಮೂಲಕ ಮೂಕಪ್ಪ ಸ್ವಾಮಿಗಳು ಆಶೀರ್ವದಿಸುತ್ತಾರೆ. ಶ್ರೀಗಳು ಆಶೀರ್ವದಿಸಿದ ಕಾಯಿಯನ್ನು ಮನೆಗಳಲ್ಲಿ ಕಟ್ಟುವುದರಿಂದ ಗೃಹದೋಷ ನಿವಾಹರಣೆ ಆಗುತ್ತದೆ. ವಿಭೂತಿ, ರುದ್ರಾಕ್ಷಿ ಹಾಗೂ ತಾಯತವನ್ನು ಕಟ್ಟಿಕೊಂಡು ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದೇವೆ ಎಂದು ಸಾವಿರಾರು ಭಕ್ತರು ಹೇಳುತ್ತಾರೆ.

ಮೂಕಪ್ಪ ಸ್ವಾಮಿ ಆಶೀರ್ವಾದದಿಂದ ಸಂತಾನಭಾಗ್ಯ

ಮೂಕಪ್ಪ ಸ್ವಾಮಿ ಆಶೀರ್ವಾದದಿಂದ ಸಂತಾನಭಾಗ್ಯ

ಬ್ಯಾಡಗಿ ತಾಲೂಕಿನ ಘಾಳಪೂಜಿ ಗ್ರಾಮದ ಚನ್ನಬಸಪ್ಪ ಮುತ್ತೂರ ಎಂಬ ದಂಪತಿಗೆ ಮದುವೆಯಾಗಿ ಹಲವು ವರ್ಷಗಳ ಕಾಲ ಸಂತಾನಫಲವೇ ಇರಲಿಲ್ಲ. ಸುಕ್ಷೇತ್ರದ ಪವಾಡದ ಬಗ್ಗೆ ತಿಳಿದ ದಂಪತಿ ಶ್ರೀಗಳ ದರ್ಶನ ಪಡೆದ 11 ತಿಂಗಳು ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತುಕೊಂಡರು. ಅದರಂತೆ ನಡೆದುಕೊಂಡ ದಂಪತಿಗೆ ಮೂಕಪ್ಪ ಸ್ವಾಮಿಗಳ ಆಶೀರ್ವಾದದಿಂದ ಸಂತಾನ ಭಾಗ್ಯವು ಸಿಕ್ಕಿದ್ದು, ಮೊದಲ ಹೆಣ್ಣು ಮಗುವಿಗೆ ಅಂಬಿಕಾ ಹಾಗೂ ಎರಡನೇ ಹೆಣ್ಣು ಮಗುವಿಗೆ ಆದರ್ಶ ಎಂದು ಹೆಸರಿಟ್ಟಿದ್ದಾರೆ.

ಶ್ರೀಗಳ ಆಶೀರ್ವಾದದಿಂದ ಕೂಡಿ ಬಂತು ಕಂಕಣ

ಶ್ರೀಗಳ ಆಶೀರ್ವಾದದಿಂದ ಕೂಡಿ ಬಂತು ಕಂಕಣ

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ನೆಲ್ಲಿಕೊಪ್ಪ ಎಂಬಲ್ಲಿ ಕಲ್ಲಪ್ಪ ಕಲ್ಲಣ್ಣನವರ ಪುತ್ರಿ ಸರೋಜಾ ಎಂಬುವವರಿಗೆ ಕಂಕಣಭಾಗ್ಯವೇ ಕೂಡಿ ಬಂದಿರಲಿಲ್ಲ. ಕೊನೆಗೆ ಮೂಕಪ್ಪ ಸ್ವಾಮಿಗಳ ಮೊರೆ ಹೋದ ಕನ್ಯೆಗೆ ವರ್ಷ ತುಂಬುವುದರೊಳಗೆ ಮದುವೆಭಾಗ್ಯವು ಒದಗಿ ಬಂದಿತು.

ಸರ್ಪದೋಷ ನಿವಾರಿಸಿದ ಮೂಕಪ್ಪ ಸ್ವಾಮಿಗಳು

ಸರ್ಪದೋಷ ನಿವಾರಿಸಿದ ಮೂಕಪ್ಪ ಸ್ವಾಮಿಗಳು

2015ನೇ ಸಾಲಿನಲ್ಲಿ ವೇಳೆಯಲ್ಲಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕೂಸನೂರು ಗ್ರಾಮಕ್ಕೆ ಮೂಕಪ್ಪ ಸ್ವಾಮಿಗಳು ಭಿಕ್ಷಾಟನೆಗೆ ತೆರಳಿದ್ದರು. ಈ ವೇಳೆ ಗ್ರಾಮದ ಗಣೇಶ ಲಕ್ಷ್ಮಪ್ಪ ಪೂಜಾರ ಎಂಬುವವರ 9 ತಿಂಗಳ ಹೆಣ್ಣು ಮಗುವಿನ ಕೈ-ಕಾಲು, ಮುಖ ಬಾವು ಬಂದಿರುವ ಬಗ್ಗೆ ದಂಪತಿ ತಿಳಿಸಿದರು. ಮಗುವಿನ ತಾಯಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸರ್ಪವನ್ನು ಕೊಂದಿದ್ದು, ಸರ್ಪದೋಷದಿಂದಲೇ ಮಗುವಿಗೆ ಈ ಸ್ಥಿತಿ ಬಂದಿರುವ ಬಗ್ಗೆ ಮೂಕಪ್ಪ ಸ್ವಾಮಿಗಳು ದಂಪತಿಗೆ ತಿಳಿಸಿದರು. 5 ತಿಂಗಳ ಕಾಲ ಪ್ರತಿ ಅಮಾವಾಸ್ಯೆ ಮಠಕ್ಕೆ ಆಗಮಿಸುವಂತೆ ದಂಪತಿಗೆ ಶ್ರೀಗಳು ಆಶೀರ್ವದಿಸಿದರು. 6ನೇ ತಿಂಗಳ ಹೊತ್ತಿಗೆ ಮಗುವಿನಲ್ಲಿ ಕಾಣಿಸಿಕೊಂಡಿದ್ದ ಎಲ್ಲ ತೊಂದರೆಗಳು ದೂರವಾಗಿ ಬಿಟ್ಟಿದ್ದವು. ಸರ್ಪದೋಷವೂ ನಿವಾರಣೆಯಾಗಿ ಬಿಟ್ಟಿತು.

ಶ್ರೀಗಳ ಆಶೀರ್ವಾದದಿಂದ ಕೊಳವೆ ಬಾವಿಯಲ್ಲಿ ನೀರು

ಶ್ರೀಗಳ ಆಶೀರ್ವಾದದಿಂದ ಕೊಳವೆ ಬಾವಿಯಲ್ಲಿ ನೀರು

ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದ ಮೂಕಪ್ಪ ರುದ್ರಪ್ಪ ನರೇಗಲ್ ಎಂಬುವವರು ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಲು ಮುಂದಾಗುತ್ತಾರೆ. 450 ಅಡಿ ಕೊರೆದರೂ ಒಂದಿಷ್ಟು ನೀರಿನ ಸುಳಿವೇ ಕಾಣಲಿಲ್ಲ. ಆದರೆ ಮೂಕಪ್ಪ ಸ್ವಾಮಿಗಳ ಆಶೀರ್ವಾದ ಪಡೆದಿದ್ದ ವ್ಯಕ್ತಿಗೆ ತಮ್ಮ ಜಮೀನಿನಲ್ಲಿ ನೀರು ಸಿಕ್ಕೇ ಸಿಗುತ್ತೆ ಎಂಬ ಅಚಲ ವಿಶ್ವಾಸವಿತ್ತು. 520 ಅಡಿ ಕೊರೆದರೂ ನೀರು ಬಾರದ್ದನ್ನು ಕಂಡ ಡ್ರಿಲ್ ಮೇಸ್ತ್ರಿ ಕೆಲಸವನ್ನು ನಿಲ್ಲಿಸುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ 549 ಅಡಿ ಆಳಕ್ಕೆ ಕೊರೆಯುತ್ತಿದ್ದಂತೆ 5 ಇಂಚು ನೀರು ಚಿಮ್ಮಿದ್ದನ್ನು ಕಂಡು ಸ್ವತಃ ಡ್ರಿಲ್ ಮೇಸ್ತ್ರಿಯವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮೂಕಪ್ಪ ಸ್ವಾಮಿ ಜಾತ್ರಾ ಮಹೋತ್ಸವದ ವಿಶೇಷ

ಮೂಕಪ್ಪ ಸ್ವಾಮಿ ಜಾತ್ರಾ ಮಹೋತ್ಸವದ ವಿಶೇಷ

ಪ್ರತಿವರ್ಷ ಗುಡ್ಡದ ಮಲ್ಲಾಪುರದಲ್ಲಿ ಶ್ರೀ ಮೂಕಪ್ಪ ಮಹಾ ಸ್ವಾಮಿಗಳ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಜಾತ್ರೆಯ ವಿಶೇಷಗಳು ಏನು ಎನ್ನುವುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಶ್ರೀ ಶ್ರೀ ಮೂಕಪ್ಪ ಮಹಾಸ್ವಾಮಿಗಳ ಉತ್ಸವ, ಗುಗ್ಗಳ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

2. ಶಿವರಾತ್ರಿ ಅಮಾವಾಸ್ಯೆಯ ನಂತರ ಬರುವ ಫಾಲ್ಗುಣ ಶುದ್ಧ ಪಂಚಮಿಯಿಂದ ಸಪ್ತಮಿವರೆಗೂ ಜಾತ್ರಾ ಮಹೋತ್ಸವದ ಕಾರ್ಯಕ್ರಮ

3. ಫಾಲ್ಗುಣ ಶುದ್ಧ ಪಂಚಮಿ ದಿನ ಧರ್ಮಾಧಿಕಾರಿಗಳು ಧ್ವಜಾರೋಹಣ ನಡೆಸಲಿದ್ದು, ನಂತರ ಶ್ರೀ ಗುರು ಹುಚ್ಚೇಶ್ವರ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ 101 ಆಕಳಿನ ಕ್ಷೀರದಿಂದ ಅಭಿಷೇಕ ನೆರವೇರಿಸಲಾಗುತ್ತದೆ.

4. ಫಾಲ್ಗುಣ ಶುದ್ಧ ಪಂಚಮಿ ದಿನ ರಾತ್ರಿ 8 ಗಂಟೆಗೆ ಹುಚ್ಚೇಶ್ವರ ಮಹಾಸ್ವಾಮಿಗಳ ಪುಣ್ಯತಿಥಿ ನಿಮಿತ್ಯ ಮಹಾಗಣಾರಾಧನೆ ಹಾಗೂ ಪ್ರಸಾದ ಸಂತೃಪ್ತಿ ನಡೆಸಲಾಗುತ್ತದೆ

5. ಸುಕ್ಷೇತ್ರ ಗುಡ್ಡದ ಮಲ್ಲಾಪುರದ ಪ್ರಮುಖ ಬೀದಿಗಳಲ್ಲಿ ಭಜನೆ, ಡೊಳ್ಳು, ವಾಲಗ, ಕರಡಿ ಮಜಲು ಸೇರಿದಂತೆ ಸಕಲವಾದ್ಯ ವೈಭವಗಳಿಂದ ರಥೋತ್ಸವವು ಜರುಗುವುದು

6. ಸಕಲ ವಾದ್ಯಘೋಷಗಳಿಂದ ಹೊರಟ ಮೂಕಪ್ಪ ಸ್ವಾಮಿಗಳ ಮೆರವಣಿಗೆಯು ಗುಡ್ಡದ ಮೇಲಿರುವ ಹುಚ್ಚೇಶ್ವರ ಸ್ವಾಮಿ ಗದ್ದುಗೆಯ ಬಳಿಗೆ ತೆರಳಿ ಅಲ್ಲಿರುವ ಕಾಣಿಕಾ ಕಟ್ಟೆಯ ಮೇಲಿನ ಭಕ್ತರಿಗೆ ದರ್ಶನ ನೀಡಿ ವಾಪಸ್ ಮಠಕ್ಕೆ ಮರಳುತ್ತದೆ

7. ಉತ್ಸವವು ಮಠಕ್ಕೆ ಮರಳಿದ ವೇಳೆ ಅನ್ನದಾಸೋಹ ನಿಲಯಕ್ಕೆ ತೆರಳುವ ಮೂಕಪ್ಪ ಸ್ವಾಮಿಗಳು ಸ್ವತಃ ಪ್ರಸಾದವನ್ನು ಸೇವಿಸುತ್ತದೆ. ನಂತರ ಪಾದದಿಂದ ಪ್ರಸಾದವನ್ನು ಆಶೀರ್ವದಿಸಿ ಭಕ್ತಾದಿಗಳಿಗೆ ದಾಸೋಹ ನಡೆಸುವುದಕ್ಕೆ ಅನುಮತಿ ನೀಡುತ್ತದೆ.

8. ಮೂಕಪ್ಪ ಸ್ವಾಮಿಗಳ ದರ್ಶನವನ್ನು ಪಡೆಯುವ ಸಾವಿರಾರು ಭಕ್ತಾದಿಗಳು ಹುಚ್ಚೇಶ್ವರ ಸ್ವಾಮಿ ಗದ್ದುಗೆಯಲ್ಲಿ ಕಾಯಿ ಒಡೆಸಿ, ಹಣ್ಣ ನೈವೇದ್ಯ ಮಾಡಿಸುತ್ತಾರೆ

ಶ್ರೀಮಠದ ಧರ್ಮಾಧಿಕಾರಿ ಶ್ರೀ ಮೃತ್ಯುಂಜಯ ಸ್ವಾಮೀಜಿ

ಶ್ರೀಮಠದ ಧರ್ಮಾಧಿಕಾರಿ ಶ್ರೀ ಮೃತ್ಯುಂಜಯ ಸ್ವಾಮೀಜಿ

ಗುಡ್ಡದ ಮಲ್ಲಾಪುರ ಶ್ರೀ ಮೂಕಪ್ಪ ಮಹಾ ಸ್ವಾಮಿಗಳ ಸನ್ನಿಧಿಯ ದಾಸೋಹ ಮಠದ ದರ್ಮಾಧಿಕಾರಿಗಳಿಗಾಗಿ ಶ್ರೀಮೃತ್ಯುಂಜಯ ಸ್ವಾಮೀಜಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಭಕ್ತರ ಪಾಲಿನ ದೇಗುಲ, ಹಸಿದವರ ಪಾಲಿಗೆ ಅನ್ನ ದಾಸೋಹ ಕೇಂದ್ರವಾಗಿದ್ದ ಸುಕ್ಷೇತ್ರದಲ್ಲೇ ಜ್ಞಾನ ದೇಗುಲವನ್ನು ಸ್ಥಾಪಿಸಿದ್ದಾರೆ. ಹೊಟ್ಟೆ ಹಸಿವನ್ನು ನೀಗಿಸುವ ಇದೇ ದಾಸೋಹಮಠವು ಇಂದು ಮಕ್ಕಳ ಜ್ಞಾನದ ಹಸಿವನ್ನು ನೀಗಿಸುವ ವಿದ್ಯಾಕೇಂದ್ರವಾಗಿಯೂ ಕೆಲಸ ಮಾಡುತ್ತಿದೆ.

ಸುಕ್ಷೇತ್ರದಲ್ಲಿ ಪೂರ್ವ ಪ್ರಾಥಮಿಕ ಶಾಲೆ, ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳನ್ನು ತೆರೆಯಲಾಗಿದೆ. ಗುಡ್ಡದ ಮಲ್ಲಾಪುರವಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ವಿದ್ಯಾಕೇಂದ್ರಗಳು ಜ್ಞಾನದಾಸೋಹವನ್ನು ನೀಡುತ್ತಿವೆ.

English summary
Special Story: History and Miracles of Guddada Mallapura Mookappa Swamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X