• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ಲೇಷಣೆ: ಅವರವರ ಭಾವಕ್ಕೆ, ಲಿಂಗಾಯತ ಪ್ರತ್ಯೇಕ ಧರ್ಮ

By ರವಿ ಹಂಜ್, ಶಿಕಾಗೋ
|

ವೀರಶೈವ/ಲಿಂಗಾಯತ ಬೇರೆಯೇ ಒಂದೇ ಎಂಬುದನ್ನ ಈ ಹೋರಾಟದಲ್ಲಿ ಭಾಗಿಯಾಗಿರುವವ ಯಾರೊಬ್ಬರೂ ಒಂದು ವೈಜ್ಞಾನಿಕ, ಸಾಮಾಜಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಸಿದ್ಧಾಂತ, ತತ್ವಗಳ ಮೂಗಿನ ನೇರಕ್ಕೆ ವಾದ ಮಂಡಿಸುತ್ತಿದ್ದಾರೆ.

ಇದನ್ನು ಯಾವುದೋ ಒಂದು ಘಟ್ಟದಿಂದ ಅಥವಾ ಪವಾಡಪುರುಷನ ಆದಿಯಿಂದ ವಿಶ್ಲೇಷಿಸದೇ ಭಾರತದ ಧಾರ್ಮಿಕ, ಸಾಮಾಜಿಕ, ರಾಜಕೀಯ, ಮಾನವವಿಕಾಸ, ಇತಿಹಾಸಗಳನ್ನೆಲ್ಲ ಸಮಗ್ರವಾಗಿ ಪರಿಗಣಿಸಿ ತುಲನಾತ್ಮಕವಾಗಿ ಬಿಂಬಿಸುವ ಒಂದು ಪ್ರಯತ್ನವನ್ನು ಮಾಡಿದ್ದೇನೆ. ಇದೆಲ್ಲವೂ ಅನಿವಾಸಿ ಶ್ರೀಸಾಮಾನ್ಯನಾದ ನನ್ನ ಕುತೂಹಲಕ್ಕೆ, ಗ್ರಾಸಕ್ಕೆ, ಓದಿಗೆ ದಕ್ಕಿದ್ದು!

ಅಂದ ಹಾಗೆ ಈ ದಿನ ಸರ್ಕಾರ ರಚಿಸಿದ ಸಮಿತಿ ತನ್ನ ವರದಿಯನ್ನು ಸಲ್ಲಿಸಿ, ಲಿಂಗಾಯತ ಧರ್ಮಕ್ಕೆ ಪ್ರಾತಿನಿಧ್ಯ ನೀಡುವಂತೆ ಕೋರಿದೆ. ಈ ಸಮಿತಿಯಲ್ಲಿರುವ ಮಹಾಶಯರು ಈ ಕೆಳಕಂಡ ಐತಿಹಾಸಿಕ ಸಂಗತಿಗಳನ್ನು ಎಷ್ಟರ ಮಟ್ಟಿಗೆ ಗಮನಿಸಿದ್ದಾರೋ ತಿಳಿಯದು.

ವಿಶ್ಲೇಷಣೆ: ಲಿಂಗಾಯತ 'ಧರ್ಮ', ಏನಿದರ ನಿಜವಾದ 'ಮರ್ಮ'

ಮಂಗನಿಂದ ಮಾನವನಾಗಿ ವಿಕಾಸಗೊಂಡ ಹಿನ್ನೆಲೆಯಲ್ಲಿ ಧರ್ಮಗಳ ವಿಕಾಸವನ್ನು (ಇದು ಹಿಂದೂಧರ್ಮ, ಮತ್ತದರ ರೆಂಬೆಗಳಿಗೆ ಅನ್ವಯ) ಅವಲೋಕಿಸಬೇಕು. ಹಿಂದೂ ಧರ್ಮದ ಉದಯದಂತೆಯೇ ವೀರಶೈವ ಧರ್ಮ ಯಾ ಪಂಥದ ಉಗಮದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಆಧಾರಗಳಿಲ್ಲ.

ಏಕೆಂದರೆ ಹಿಂದೂ ಧರ್ಮದಂತೆಯೇ ಶೈವಪಂಥ ಕೂಡ ಮಾನವಸಮಾಜ ವಿಕಾಸಗೊಂಡಂತೆ ಅದಕ್ಕನುಗುಣವಾಗಿ ವಿಕಾಸಗೊಂಡಿರುವ ಧರ್ಮವೇ ಹೊರತು ಕೇವಲ ಒಬ್ಬ ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟ ಧರ್ಮವಲ್ಲ.

ಆದ್ದರಿಂದಲೇ ವೀರಶೈವ/ಲಿಂಗಾಯತ ಸಿದ್ಧಾಂತ ಶಿಖಾಮಣಿಯಿಂದಲೋ ಯಾ ವಚನಗಳಿಂದಲೋ, ರೇಣುಕರಿಂದಲೋ ಯಾ ಬಸವನಿಂದಲೋ ಎನ್ನಲು ಕೂಡ ಯಾವುದೇ ನಿರ್ದಿಷ್ಟ ಆಧಾರಗಳಿಲ್ಲ. ಸದ್ಯಕ್ಕೆ ಇದೆಲ್ಲ ಅವರವರ ಭಾವಕ್ಕೆ!

ಆದರೆ ಇವೆರಡಕ್ಕೂ ಮೂಲ, ಆರ್ಯರಿಗಿಂತ ಮೊದಲು ಭಾರತಕ್ಕೆ ವಲಸೆ ಬಂದ ಪೂರ್ವ ಆಫ್ರಿಕಾ ಜನರಿಂದ ಹರಿದು ಬಂದ ಲಿಂಗಾರಾಧನೆಯೇ ಎಂದು ಖಚಿತವಾಗಿ ಹೇಳಬಹುದು.

ಮೂಲನಿವಾಸಿಗಳ ಲಿಂಗಾರಾಧನೆ

ಮೂಲನಿವಾಸಿಗಳ ಲಿಂಗಾರಾಧನೆ

ಈ ಪ್ರಾಚೀನ ಧರ್ಮಗಳನ್ನು ನೋಡುವ ದೃಷ್ಟಿಕೋನ, ಮಾನವಸಮಾಜ ವಿಕಾಸವನ್ನು ಅವಲೋಕಿಸುವ ರೀತಿಯಲ್ಲಿ ಪ್ರಾಗೈತಿಹಾಸಿಕ ದೃಷ್ಟಿಯಿಂದ ಅವಲೋಕಿಸಬೇಕು. ಈ ಮೂಲನಿವಾಸಿಗಳ ಲಿಂಗಾರಾಧನೆ, ಆರ್ಯರ ವೇದಗಳಲ್ಲಿ ರುದ್ರಾರಾಧನೆಯಾಗಿದೆ.

ಅಂದಿನ ಮಾನವ ಸದಾ ಸಂಚಾರಿ, ಅಂದರೆ ಜಂಗಮ! ಶೈವರು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಹಿಂದೂ ಧರ್ಮದ ರುದ್ರನೊಂದಿಗೆ ಲಿಂಗಾರಾಧನೆಯನ್ನು ಸಮತೋಲನ ಮಾಡಿಕೊಂಡು ಶೈವಪಂಥ ವಿಕಾಸಗೊಂಡಿತೆಂಬುದು ನನ್ನ ಅನಿಸಿಕೆ.

ನಂತರ ಶೈವರು ಕಾಲನುಕ್ರಮವಾಗಿ ಅತಿಮಾರ್ಗಿಗಳು, ಮತ್ತು ಮಂತ್ರಮಾರ್ಗಿಗಳು ಎಂದು ವಿಭಜನೆಗೊಂಡರು. ಮಂತ್ರಮಾರ್ಗಿಗಳು ನಿಗೂಢವಾಗಿರುತ್ತಿದ್ದರು. ತಮ್ಮ ಸ್ವಂತ ಸುಖ, ಲೋಲುಪತೆ ಅವರ ಗುರಿಯಾಗಿತ್ತು. ಮಂತ್ರಮಾರ್ಗಿಗಳಲ್ಲಿನ ಪಂಗಡಗಳು ಕಾಪಾಲಿಕ, ಮತ್ತು ಅಘೋರಿ. ಈ ಪಂಥಗಳ ನಿಗೂಢತೆ , ಸಮಾಜ ವಿಕ್ಷಿಪ್ತತೆಯನ್ನು ಈಗಲೂ ಕಾಣಬಹುದು.

ಅತಿಮಾರ್ಗಿಗಳು ಇದಕ್ಕೆ ವ್ಯತಿರಿಕ್ತವಾಗಿ ಜನಾನುರಾಗಿಗಳು

ಅತಿಮಾರ್ಗಿಗಳು ಇದಕ್ಕೆ ವ್ಯತಿರಿಕ್ತವಾಗಿ ಜನಾನುರಾಗಿಗಳು

ಆದರೆ, ಅತಿಮಾರ್ಗಿಗಳು ಇದಕ್ಕೆ ವ್ಯತಿರಿಕ್ತವಾಗಿ ಜನಾನುರಾಗಿಗಳು, ಸಮಾಜಮುಖಿಗಳು ಮತ್ತು ಸದಾ ಸಂಚಾರಿಗಳು. ಶೈವಧರ್ಮ ಪ್ರಸಾರ ಇವರ ಗುರಿ. ಒಂದು ನಿಶ್ಚಿತ ಸಮಾಜ ವ್ಯವಸ್ಥೆಯನ್ನು ಸಂಘಟಿಸಿ, ಅದನ್ನು ವಿಕಸಿತಗೊಳಿಸುತ್ತ ನಡೆದರು. ತಾವು ಎಲ್ಲೆಲ್ಲಿ ಸಂಚರಿಸುತ್ತಾ ಹೋದರೋ ಅಲ್ಲೆಲ್ಲ ಅತಿಮಾರ್ಗಿಗಳು ಮಠಗಳನ್ನು ಕಟ್ಟುತ್ತಾ ನಡೆದರು.

ಕಾಲಾನುಕ್ರಮದಲ್ಲಿ ಅತಿಮಾರ್ಗಿಗಳು ಪಾಶುಪತ, ಲಾಕುಳ, ಕಾಳಮುಖರೆಂದು ಕರೆಯಲ್ಪಟ್ಟರು. ಬ್ರಿಟಿಷ್ ವಿದ್ವಾಂಸ ಗ್ಯಾವಿನ್ ಫ್ಲಡ್ ನ ಸಂಶೋಧನೆಯ ಪ್ರಕಾರ ಕ್ರಿ.ಶ. ಒಂದನೇ ಶತಮಾನದಲ್ಲೇ ಅತಿಮಾರ್ಗಿಗಳು ಪಾಶುಪತರೆಂದು ಗುರುತಿಸಲ್ಪಟ್ಟಿದ್ದರು!

ಈ ಸಂಚಾರಿ ಜಂಗಮರು ತಮ್ಮದೇ ಆದ ಒಂದು ವಲಸೆಯ ಪರಿಯನ್ನು ಅಳವಡಿಸಿಕೊಂಡಿದ್ದರು. ತಾವು ಪ್ರತಿಸಾರಿ ಸಂಚರಿಸುವ ಸ್ಥಳಗಳಲ್ಲಿ ಮಠಗಳನ್ನು ನಿರ್ಮಿಸಿಕೊಂಡು ಅಲ್ಲಲ್ಲೇ ನಿರ್ದಿಷ್ಟ ಕಾಲ ಬೀಡು ಬಿಡುತ್ತಿದ್ದರು. ಮಾನವ ಸಮಾಜ ವಿಕಸನಗೊಂಡಂತೆ (ಅಲೆಮಾರಿತನದಿಂದ ನೆಲೆಮಾರಿಗಳಾದಂತೆ) ಜಂಗಮರಾಗಿದ್ದ ಕಾಳಮುಖರಲ್ಲಿ ಕೆಲವರು ಒಂದೆಡೆ ನೆಲೆ ನಿಲ್ಲಬಯಸಿದರು.

ಕಾಯಕಗಳಿಂದ ಗುರುತಿಸಿ ವೀರಶೈವ ಜಾತಿಗಳಾದವು

ಕಾಯಕಗಳಿಂದ ಗುರುತಿಸಿ ವೀರಶೈವ ಜಾತಿಗಳಾದವು

ಈ ರೀತಿ ನೆಲೆ ನಿಂತವರನ್ನೇ ಅವರರರ ಕಾಯಕಗಳಿಂದ ಗುರುತಿಸಿ ಪಂಚಮಸಾಲಿ, ಬಣಜಿಗ, ಗಾಣಿಗ, ಮತ್ತಿತರೆಯಾಗಿ ವಿಭಜನೆಗೊಂಡು, ಅವೇ ಮುಂದೆ ವೀರಶೈವ ಜಾತಿಗಳಾದವು. ಮುಂದೆಂದಾದರೂ ಈ ರೀತಿ ವೃತ್ತಿಗಳಲ್ಲಿ ನೆಲೆ ನಿಂತವರು ವಿರಕ್ತಿಗೊಂಡು ಮತ್ತೆ ಜಂಗಮಕ್ಕೆ ಬಂದರೆ ಅವರನ್ನು ಗುರುತಿಸಲು ವಿರಕ್ತ ಪೀಠ/ಮಠಗಳು ಕಟ್ಟಲ್ಪಟ್ಟವು. ಈ ರೀತಿಯ ಮಠಗಳ ವ್ಯವಸ್ಥೆಯನ್ನು ದೇಶದ ಉದ್ದಗಲಕ್ಕೆ ಕಾಳಮುಖರು ಸ್ಥಾಪಿಸಿದ್ದರು.

ಶೈವ ಪಂಥವಿಸ್ತರಣೆ ಕಾಳಮುಖರ ಪ್ರಮುಖ ಗುರಿಯಾಗಿತ್ತು. ಅಂದಿನ ಸಾಕಷ್ಟು ಶೈವಪ್ರಭುತ್ವಗಳ (ಅದರಲ್ಲೂ ದಕ್ಷಿಣ ಭಾರತದ) ಅಧಿಪತ್ಯ ವಿಸ್ತರಣೆಯಲ್ಲಿ ಕಾಳಮುಖರು ತಮ್ಮದೇ ಆದ ರೀತಿಯಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಯುದ್ಧಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ವೀರೋಚಿತವಾಗಿ ಭಾಗವಹಿಸಿದ್ದಾರೆ. ಕಾಳಮುಖರು ತಮ್ಮ ಪಂಥವಿಸ್ತರಣೆಗೆ ಆಕ್ರಮಣಕಾರೀ ಪದ್ದತಿಯನ್ನು ಅನುಸರಿಸುತ್ತಿದ್ದರು. ಇದರಲ್ಲಿ ಬಹುಮುಖ್ಯವಾಗಿ ಸವಾಲುವಾದ, ಮತ್ತು ದಂಡನೆ.

ವೀರಶೈವ ಎಂಬ ಪದ ಬಳಕೆಗೆ ಬಂದಿದ್ದು

ವೀರಶೈವ ಎಂಬ ಪದ ಬಳಕೆಗೆ ಬಂದಿದ್ದು

ಶೈವರಲ್ಲದವರಿಗೆ ಈ ಕಾಳಮುಖ ಶೈವರು ತಮ್ಮ ದೇವರುಗಳಿಗೆ ತಮ್ಮ ದೇಹದ ಅಂಗಾಂಗಗಳನ್ನು ಅರ್ಪಿಸುವ ಸವಾಲನ್ನು ಹಾಕುತ್ತಿದ್ದರು. ತಮ್ಮ ಕೈ, ಕಾಲು, ತಲೆಗಳನ್ನು ಶಿವನಿಗೆ ಅರ್ಪಿಸುವೆವು. ನೀವು ಕೂಡ ನಿಮ್ಮ ನಿಮ್ಮ ದೇವರುಗಳಿಗೆ ನಿಮ್ಮ ಅಂಗಾಂಗಗಳನ್ನು ಅರ್ಪಿಸಿ ಇಲ್ಲವೇ ಶೈವತ್ವವನ್ನು ಒಪ್ಪಿ ಎಂದು ಶೈವತ್ವವನ್ನು ಬಲವಂತವಾಗಿ ಹೇರುತ್ತಿದ್ದರು.

ಈಗಲೂ ಈ ಸವಾಲುವಾದದ ಕೈ ಕತ್ತರಿಸಿಕೊಳ್ಳುತ್ತಿರುವ, ತಲೆ ಕತ್ತರಿಸಿಕೊಳ್ಳುತ್ತಿರುವ ಮೂರ್ತಸ್ವರೂಪಗಳನ್ನು ಶ್ರೀಶೈಲದ ದೇವಸ್ಥಾನದ ಸುತ್ತಲೂ ನೋಡಬಹುದು. ಇತಿಹಾಸದ ಅನೇಕ ಶೈವ ಪರಂಪರೆಯ ಪ್ರಭುತ್ವಗಳು ಈ ಕಾಳಮುಖ ಶೈವರಿಂದ ಸಾಕಷ್ಟು ಸಹಾಯವನ್ನು ಪಡೆದಿದ್ದಾರೆ. ಶೈವ ರಾಜರುಗಳ ಪರವಾಗಿ ವೀರಾವೇಶದಿಂದ ಹೋರಾಡಿದ್ದಾರೆ ಹಾಗಾಗಿಯೇ ವೀರಶೈವ ಎಂಬ ಪದ ಬಳಕೆಗೆ ಬಂದಿದೆ.

ಜೈನರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದದ್ದು

ಜೈನರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದದ್ದು

ಇನ್ನು ವೀರಶೈವ (ಪೂರ್ವಕಾಲೀನ, ಹಿರಿಯಕಾಲೀನ ವಚನಕಾರರು) ಯಾ ಲಿಂಗಾಯತ (ಬಸವಕಾಲೀನ ವಚನಕಾರರು) ಪ್ರವರ್ಧಮಾನಕ್ಕೆ ಬಂದದ್ದು ಜೈನರ ಕಾಲದಲ್ಲಿ. ಜೈನರ ಪ್ರಾಬಲ್ಯದ ವಿರುದ್ಧ ಹೋರಾಡಿ ಶೈವಪಂಥವನ್ನು ಹೇರಿದ್ದು ಈ ವಚನಕಾರರ ಸಮಾನ ಸಿದ್ದಾಂತ. ವೀರಶೈವರ ರೇಣುಕರು ಉದ್ಭವವಾದ ಕೊಲ್ಲಿಪಾಕಿ (ಇಂದಿನ ಕೊಳನುಪಾಕ) ಜೈನರ ಒಂದು ಪ್ರಮುಖ ಸ್ಥಳ.

ಅಂದಿನ ವೀರಶೈವರು ಜೈನರೊಟ್ಟಿಗೆ ಹೋರಾಡಿ ಕೊಲ್ಲಿಪಾಕಿಯನ್ನು ತಮ್ಮ ಕೈವಶಮಾಡಿಕೊಂಡಿದ್ದರು. ಇನ್ನು ಇಲ್ಲಿ ರೇಣುಕರು ಲಿಂಗದಿಂದ ಉದ್ಭವವಾದರೂ ಎನ್ನುವ ಕಲ್ಪನೆ...ಇಲ್ಲಿ ರೇಣುಕರಷ್ಟೇ ಅಲ್ಲ ನಾವು ನೀವು, ಸಕಲ ಜೀವರಾಶಿಗಳೂ ಲಿಂಗದಿಂದಲೇ ಉದ್ಭವವಾಗಿರುವುದು! ಇದನ್ನು ಬಿಡಿಸಿ ಹೇಳಬೇಕಿಲ್ಲ.

ರೇಣುಕರ ಹಿನ್ನೆಲೆಯನ್ನು ಅಂದು ಮುಚ್ಚಿಟ್ಟಿರಬಹುದು

ರೇಣುಕರ ಹಿನ್ನೆಲೆಯನ್ನು ಅಂದು ಮುಚ್ಚಿಟ್ಟಿರಬಹುದು

ಗುರು, ನದಿ ಮೂಲವನ್ನು ಹುಡುಕಬಾರದೆಂಬ ಅದ್ಯಾವ ಉದ್ದೇಶಕ್ಕೆ ಹೇಳುವರೋ ಅದೇ ಉದ್ದೇಶದಿಂದ ಈ ರೇಣುಕರ ಹಿನ್ನೆಲೆಯನ್ನು ಅಂದು ಮುಚ್ಚಿಟ್ಟಿರಬಹುದು! ಅಲ್ಲಮನ ಬೆಡಗಿನ ವಚನಗಳನ್ನು ಅರಿತ ಲಿಂಗಾಯತವಾದಿಗಳು, ಈ ರೇಣುಕರ ಹುಟ್ಟಿನ ಬೆಡಗನ್ನು ಅರಿಯದೆ ಹೀಗಳೆಯುತ್ತಿರುವುದು ಏಕೆಂದು ನಾನರಿಯೆ. ಇರಲಿ, ಈಗ ಕೊಳನಪಾಕು ಮತ್ತೆ ಜೈನರ ವಶದಲ್ಲಿದೆ. ರೇಣುಕರು ಉದ್ಭವರಾದರೆನ್ನಲಾದ ಸ್ಥಳದ ಸುತ್ತ ಜೈನರ ಬೃಹತ್ ದೇವಾಲಯಗಳು ಇಂದು ಮೈದಾಳಿವೆ. ರೇಣುಕರ ಉದ್ಭವ ಸ್ಥಳ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ.

ರೇಣುಕರ ಸಮಕಾಲೀನರ ಬಗ್ಗೆ

ರೇಣುಕರ ಸಮಕಾಲೀನರ ಬಗ್ಗೆ

ಈ ರೇಣುಕರ ಸಮಕಾಲೀನರೆನ್ನಬಹುದಾದ ಪೂರ್ವಕಾಲೀನ ಶರಣರಾದ ಓಹಿಲ, ಉದ್ಭಟ , ಕೆಂಭಾವಿ ಭೋಗಯ್ಯ, ಕೊಂಡಗುಳಿ ಕೇಶಿರಾಜ, ಡೋಹರಕಕ್ಕಯ್ಯರನ್ನು ಜೇಡರ ದಾಸಿಮಯ್ಯ (ಕ್ರಿ.ಶ 980--ಕ್ರಿ.ಶ. 1040) ತನ್ನ ವಚನಗಳಲ್ಲಿ ಕೊಂಡಾಡಿದ್ದಾನೆ. ಇದರಲ್ಲಿ ಓಹಿಲ ಮತ್ತು ಉದ್ಭಟರಿಬ್ಬರೂ ಸೌರಾಷ್ಟ್ರದವರೆನ್ನಲಾಗಿದೆ. ಈ ಸೌರಾಷ್ಟ್ರ ಮೂಲದ ಕೆಲ ಶೈವರು, ವೀರಶೈವತ್ವದ ಕೆಲ ಸಂಪ್ರದಾಯಗಳನ್ನು ಒಪ್ಪದೇ (ಸಸ್ಯಾಹಾರ)ತಮ್ಮದೇ ಒಂದು ಭಾಗವಾಗಿ ಈಗಲೂ ತಮಿಳುನಾಡಿನ ಹಲವೆಡೆ ಸೌರಾಷ್ಟ್ರ ಪಾಶುಪತರಾಗಿ ಕಾಣಸಿಗುತ್ತಾರೆ.

ವೀರಶೈವರಾದ ಜೈನರೇ ಇಂದಿನ ಬಣಜಿಗರು

ವೀರಶೈವರಾದ ಜೈನರೇ ಇಂದಿನ ಬಣಜಿಗರು

ಅಂದು ದಬ್ಬಾಳಿಕೆಗೊಂಡು ವೀರಶೈವರಾದ ಜೈನರೇ ಇಂದಿನ ಬಣಜಿಗರು, ಶಿವಸಿಂಪಿಗಳು ಎನಿಸುತ್ತದೆ. ನೀವು ಈ ಜನಾಂಗದವರ ಚಹರೆ, ಬಣ್ಣ, ಕಣ್ಣುಗಳನ್ನು ಅವಲೋಕಿಸಿ ನೋಡಿ.

ಈ ವಾದಕ್ಕೆ ಪೂರಕವಾಗಿ ಜೈನರ ಮೇಲಿನ ದಬ್ಬಾಳಿಕೆ, ಮೂದಲಿಕೆ ಅಲ್ಲಮನ ವಚನಗಳಲ್ಲಿ ಸಾಕಷ್ಟು ಕಾಣಸಿಗುತ್ತದೆ.

ಉದಾಹರಣೆಗೆ "ಜಿನನು ದೇವರೆಂಬರು, ಜಿನನು ದೇವರಲ್ಲ. ಅದೆಂತೆಂದೆಡೆ ನಾಭ ಮರುತಾದೇವಿಯರಿಗೆ ಶಾಂತಿನಾಥ ಪುಟ್ಟಿ, ಕಾಳೋದರರೆಂಬವರು ವರ್ತಿಸುವಲ್ಲಿ ಬೇಂಟೆಗೆ ಹೋಗಿ ತೋಹಿನಲ್ಲಿದ್ದ ಗೂಳಿಯನೆಚ್ಚು ಕೊಂದಲ್ಲಿ, ಈ ಗೂಳಿಯ ಕೊಂದ ಪಾತಕಕ್ಕೆ ಹದಿನೆಂಟು ಲಕ್ಷ ಹೊನ್ನಿನಲ್ಲಿ ಗೂಳಿಯ ಮಾಡಿ, ಆ ಗೂಳಿಯ ದಾನವ ಕೊಟ್ಟಲ್ಲಿ ಈ ಪಾಪ ಹೋಹುದೇ.... ಆ ಬಸವನ ಹೆಸರ ಬಸದಿಯ ಕಟ್ಟಿಸಿ ತನ್ನ ಪಾತಕವ ಕಳೆದುಕೊಂಬುವನ ದೇವರೆಂದು ಬೊಗಳುವ ನಾಯ ಬಾಯಿ ಯಮಪಾಕುಳ, ತಪ್ಪುದು, ಗುಹೇಶ್ವರಾ.

ಪ್ರೊ. ಕಲ್ಬುರ್ಗಿ ಅವರ ಸಂಶೋಧನೆ

ಪ್ರೊ. ಕಲ್ಬುರ್ಗಿ ಅವರ ಸಂಶೋಧನೆ

ಅಷ್ಟೇ ಅಲ್ಲದೆ ಕೆಲವು ವರ್ಷಗಳ ಹಿಂದೆ ಅಣ್ಣಿಗೇರಿಯಲ್ಲಿ ದೊರತೆ ತಲೆಬುರುಡೆಗಳು ವೀರಶೈವ ಶರಣರಿಂದ ಹತ್ಯೆಗೊಂಡ ಜೈನರ ತಲೆಬುರುಡೆಗಳಿರಬಹುದೆಂದು ಪ್ರೊ. ಕಲ್ಬುರ್ಗಿಯವರೇ ಸಂಶಯಿಸಿದ್ದರು. ಅದೇ ಪ್ರೊ. ಕಲ್ಬುರ್ಗಿಯವರು ಎಲ್ಲಮ್ಮನಗುಡ್ಡದ ರೇಣುಕೆ ಕೂಡ ಜೈನ ಯಕ್ಷಿಣಿಯೆಂದು ಸಂಶೋಧಿಸಿ ಪ್ರಬಂಧವನ್ನು ಮಂಡಿಸಿದ್ದಾರೆ.

ಜೈನರ ವಿರುದ್ಧ ಹೋರಾಡಲು ಮತ್ತು ಜೈನರನ್ನು ತಮ್ಮ ಪಂಥಕ್ಕೆ ಆಕರ್ಷಿಸಲನುಗುಣವಾಗಿ ಮಾಂಸಾಹಾರಿಗಳಾಗಿದ್ದ ಕಾಳಮುಖರು ಒಂದು ಕಾಲಘಟ್ಟದಲ್ಲಿ (ಬಹುಶಃ ಪೂರ್ವಕಾಲೀನ ವಚನಕಾರರ ಕಾಲದಲ್ಲಿ) ಸಸ್ಯಾಹಾರಿಗಳಾಗಿರಬಹುದು. ತಮಿಳುನಾಡು, ಕೇರಳದ ವೀರಶೈವರು ಈಗಲೂ ಕೂಡ ಮಾಂಸಾಹಾರಿಗಳು.

ನೆನಪಿಡಿ, ಗೋಮಾಂಸ ಭಕ್ಷಕರಾಗಿದ್ದ ಹಿಂದೂಗಳು ಕೂಡ ಜೈನ/ಬೌದ್ದಧರ್ಮಗಳ ಪ್ರಭಾವದಿಂದ ಹಿಂದೂಧರ್ಮ ಆಕರ್ಷಣೀಯವಾಗಿ ಕಾಣಲು ಗೋಮಾಂಸಭಕ್ಷಣೆಯನ್ನು ತ್ಯಜಿಸಿದ್ದನ್ನು ಮಾತು ಸಸ್ಯಾಹಾರವನ್ನು ಪ್ರೋತ್ಸಾಹಿಸಿದ್ದನ್ನು!

ಒಟ್ಟಾರೆ ಜೈನ ಪ್ರಾಬಲ್ಯವನ್ನು ತಗ್ಗಿಸಿ ಶತಾಯಗತಾಯ ತಮ್ಮ ಪಂಥದವಿಸ್ತರಣೆಯೇ ರೇಣುಕರ ಉದ್ಭವ, ಕಲ್ಯಾಣಕ್ರಾಂತಿ, ವಚನಸಾಹಿತ್ಯದ ಮೂಲೋದ್ದೇಶವಾಗಿತ್ತು. ಅದೇ ಉದ್ದೇಶ ಅಂದಿನ/ಇಂದಿನ ಯಾವುದೇ ಧರ್ಮಗಳ, ಪಂಥಗಳ ಉದ್ದೇಶ ಕೂಡ.

ವಚನಗಳು ಆಡುಭಾಷೆಯಲ್ಲಿವೆಯಂತೆ

ವಚನಗಳು ಆಡುಭಾಷೆಯಲ್ಲಿವೆಯಂತೆ

ಇನ್ನು ವಿಜಯನಗರ ಕೃಷ್ಣದೇವರಾಯನ ಕಾಲದಲ್ಲಿದ್ದ ಹರಿಹರ ರಾಘವಾಂಕರು, ರಾಯನನ್ನು ವೀರಶೈವಿಗನನ್ನಾಗಿಸುವ ಪ್ರಯತ್ನವಾಗಿ ರಾತ್ರೋರಾತ್ರಿ ಬಸವ, ಅಲ್ಲಮ, ಅಕ್ಕಮಹಾದೇವಿ ಮುಂತಾದ ಶರಣರ ಹೆಸರಿನಲ್ಲಿ ವಚನಗಳನ್ನು ಬರೆದರೆಂಬ ಅಪವಾದವಿದೆ. ಛಂದಸ್ಸುಬದ್ದ ಕಾವ್ಯರಚನೆಗೆ ಸಮಯಾವಕಾಶವಿಲ್ಲದೇ, ಸರಳಗನ್ನಡದಲ್ಲಿ ರಾತ್ರೋರಾತ್ರಿ ವಚನಗಳನ್ನು ರಚಿಸಿರುವುದರಿಂದ ವಚನಗಳು ಆಡುಭಾಷೆಯಲ್ಲಿವೆಯಂತೆ!

ಹಾಗಂತ ಹಂಪಿಯ ಕನ್ನಡ ಪೀಠ ಒಂದೊಮ್ಮೆ ಪುಸ್ತಕವೊಂದನ್ನು ಪ್ರಕಟಿಸಿತ್ತು. ಯಾವಾಗ ವಿರೋಧ ಕೇಳಿಬಂತೋ ಆಗ ಆ ಪ್ರಕಟಣೆಯನ್ನು ಮುಟ್ಟುಗೋಲು ಹಾಕಿಸಲಾಯಿತು.

ಒಟ್ಟಾರೆ, ನಿಕಟವಾಗಿ ಅವಲೋಕಿಸಿದಾಗ ಹಿಂದೂಧರ್ಮ ತನ್ನನ್ನು ತಾನು ಉಳಿಸಿಕೊಳ್ಳಲು ಏನು ಮಾಡಿತೋ ಅದನ್ನೇ ಶೈವಪಂಥ ನಕಲು ಮಾಡಿತು. ಗೀತೆಯ ಕರ್ಮ ಸಿದ್ದಾಂತದ ಸರಳೀಕರಣವೇ ಕಾಯಕವೇ ಕೈಲಾಸ. ಆತ್ಮ ಸಿದ್ದಾಂತದ ಸರಳೀಕರಣ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಅಷ್ಟಾಂಗ ಯೋಗ, ಶಿವಯೋಗ! ಹೀಗೆ ಸಮಗ್ರವನ್ನ ಸಂಕ್ಷಿಪ್ತಗೊಳಿಸಿ, ಸರಳೀಕರಣಗೊಳಿಸಿದ್ದು ಹೇಗೆ ಬೇರೆ ಧರ್ಮವಾದೀತು!?

ಲಿಂಗಾಯತ- ಹಿಂದೂ ಧರ್ಮದ ಒಂದು ಪಂಥ

ಲಿಂಗಾಯತ- ಹಿಂದೂ ಧರ್ಮದ ಒಂದು ಪಂಥ

ಈ ಎಲ್ಲಾ ಹಿನ್ನೆಲೆಯಲ್ಲಿ ವೀರಶೈವ/ಲಿಂಗಾಯತ ಹಿಂದೂ ಧರ್ಮದ ಒಂದು ಪಂಥವೇ ಹೊರತು ಧರ್ಮವಲ್ಲ. ಅಂದಿನ ಅರಾಜಕತೆ/ರಾಜಪ್ರಭುತ್ವ/ರಾಜಕೀಯ/ಸಾಮಾಜಿಕ ಪರಿಸ್ಥಿತಿಯಲ್ಲಿ ಸಂಖ್ಯಾಬಲ ಅವಶ್ಯವಾಗಿ ಬೇಕಿತ್ತು, ಹಾಗಾಗಿ ಧರ್ಮ/ಪಂಥ ವಿಕಾಸಗೊಳ್ಳುತ್ತ/ಆಕ್ರಮಿಸುತ್ತಾ/ವಿಸ್ತರಿಸುತ್ತಾ ಸಾಗಿತು.

ಧರ್ಮವೆಂಬುದು ಜೀವನರೀತಿಯ ಸುಧಾರಿಸಲು ಒಂದೊಮ್ಮೆ ಬೇಕಾಗಿದ್ದ ಸಾಧನ. ಆಧುನಿಕ ಜಗತ್ತಿನಲ್ಲಿ ಇದರ ಅಗತ್ಯವಿಲ್ಲದೆಯೂ ರೀತಿನೀತಿಗನುಗುಣವಾಗಿ ಆಯಾ ದೇಶ/ಪ್ರಾಂತ್ಯಗಳ ಸಂವಿಧಾನ, ಕಾನೂನುಗಳಿಗೆ ತಕ್ಕಂತೆ ಬದುಕಿ ಬಾಳಬಹುದು. ಧರ್ಮ, ಆಚರಿಸುವವನ ಮನೆಗೆ ಸೀಮಿತವಾಗಬೇಕಾದದ್ದು ಇಂದು ಸಾರ್ವತ್ರಿಕವಾಗುತ್ತಿರುವುದು ಪ್ರಜಾಪ್ರಭುತ್ವದ ಅಣಕ.

ರಾಜಪ್ರಭುತ್ವದಲ್ಲಿ ಅವಶ್ಯವಾಗಿದ್ದ ಸಂಖ್ಯಾಬಲ, ಇಂದಿನ ಪ್ರಜಾಪ್ರಭುತ್ವದಲ್ಲೂ ಅಷ್ಟೇ ಪ್ರಮುಖ ಅವಶ್ಯಕವಾಗಿ ಈ ಪ್ರತ್ಯೇಕ ಧರ್ಮದ ಕೂಗಿಗೆ ಕಾರಣವಾರುವುದು ಭಾರತದ ಪ್ರಜಾಪ್ರಭುತ್ವದ ವಿಪರ್ಯಾಸ! ಒಟ್ಟಾರೆ, ಅರುಹ ಪೂಜಿಸಲೆಂದು ಕುರುಹು ಕೊಟ್ಟೆಡೆ, ಅರುಹ ಮರೆತು ಕುರುಹ ಪೂಜಿಸುವ ಹೆಡ್ಡರ ನೋಡಾ ಗುಹೇಶ್ವರ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elections 2018 : The committee headed by retired High Court Justice N S Nagamohan Das submitted its report to State Government. In this report committee has recommendation separate religion status to the Lingayat. An analysis by a NRI Kannadiga Ravi Hanj says more scientific method of research is required before declaring Lingayat as a seperate religion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more