• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವ ಬಾಯಿಗೆ ಬಂದಂಥ ಹಿಮಾಚಲ ಪ್ರದೇಶದ ಹಮ್ತಾ ಪಾಸ್ ಟ್ರೆಕಿಂಗ್ ಅನುಭವ

By ಮಧುಸೂದನ್ ಎಸ್. ಕುಂಭಾಶಿ
|

ಹದಿನೈದನೇ ವರ್ಷದಲ್ಲಿ ಶುರುವಾದ ಕುತೂಹಲದ ಲೆಕ್ಕ ಮೂವತ್ತಕ್ಕೆ ಬಂದು ನಿಂತಿದೆ. ಈಗ ಹೇಳುತ್ತಿರುವುದು ನನ್ನ ಟ್ರೆಕಿಂಗ್ ಆಸಕ್ತಿ ಬಗ್ಗೆ. ನನಗೆ ನೆನಪಿದ್ದು, ಹತ್ತಬೇಕು ಎಂಬ ಆಸಕ್ತಿಯಿಂದ ಮೊದಲ ಬಾರಿಗೆ ಪರ್ವತವೊಂದರ ಮುಂದೆ ನಿಂತಿದ್ದು ಹದಿನೈದನೇ ವಯಸ್ಸಿನಲ್ಲಿ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತವನ್ನು ನೋಡಿ, "ಅಮ್ಮ ಅಲ್ಲಿಗೆ ಹೋಗೋಣ" ಅಂದಿದ್ದೆ.

"ನಾವು ನಾಳೆ ಬೆಳಗ್ಗೆಯೇ ಊರಿಗೆ ಹೋಗಬೇಕು" ಎಂದು ವಾಪಸ್ ಹೊಸದುರ್ಗಕ್ಕೆ ಕರೆದುಕೊಂಡು ಹೋಗಿಬಿಟ್ಟರು. ಅದಾಗಿ ಎರಡು ವರ್ಷಗಳ ನಂತರ ಬೆಟ್ಟಗಳನ್ನು ಏರುವ ನನ್ನ ಆಸಕ್ತಿ ಈಡೇರುತ್ತಾ ಕುಮಾರಪರ್ವತವನ್ನೂ ಏರುವಂತೆ ಮಾಡಿ, ಈಚೆಗೆ ಹಿಮಾಚಲ ಪ್ರದೇಶದ ಹಮ್ತಾ ಪಾಸ್ ಮುಗಿಸಿ ಬಂದು, ಮೂವತ್ತು ಟ್ರೆಕ್ಕಿಂಗ್ ಮುಗಿಸಿದ್ದೀಯಾ ಎಂಬ ಲೆಕ್ಕ ಕೊಡುತ್ತಿದೆ ನನ್ನ ನೆನಪಿನ ಬುತ್ತಿ.

ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ

ಈ ಬಾರಿ ಮುಗಿಸಿಬಂದ ಟ್ರೆಕ್ಕಿಂಗ್ ಹಿಮಾಚಲಪ್ರದೇಶದ್ದು. ಒಂದು ವಾರ ಅಲ್ಲಿಗೆ ಹೋಗಿಬಂದೆ. ಆದರೆ ಈ ಬಾರಿಯ ಪ್ರಯಾಣವೇ ಭೀಕರ, ರೋಚಕ, ರಮಣೀಯ. ಹೀಗೆಲ್ಲ ವಿವರಿಸುವುದನ್ನು ಏಕ್ದಂ ಸಿಂಪಲ್ ಆಗಿ ಹೇಳಬೇಕು ಅಂದರೆ, ಜೀವ ಬಾಯಿಗೆ ಬಂದಿತ್ತು. ಹಿಮಾಚಲಪ್ರದೇಶದ ಮಳೆ, ಭೂ ಕುಸಿತ, ಸೇತುವೆ ಕುಸಿತ... ಅಬ್ಬಬ್ಬಾ!

 ಬಂಡೆಯ ಕೆಳಗೆ ಸಿಕ್ಕು ದೇಹ ಹಪ್ಪಳ ಅಂದುಕೊಂಡೆ

ಬಂಡೆಯ ಕೆಳಗೆ ಸಿಕ್ಕು ದೇಹ ಹಪ್ಪಳ ಅಂದುಕೊಂಡೆ

ಯೂತ್ ಹಾಸ್ಟೆಲ್ ಅಸೋಸಿಯೇಷನ್ ನಿಂದ ಆಯೋಜಿಸಿದ್ದ ಈ ಟ್ರೆಕ್ಕಿಂಗ್ ನಲ್ಲಿ ರೋಹ್ತಂಗ್ ಪಾಸ್ ತನಕ ಹೋಗಬೇಕಿತ್ತು. ಆದರೆ ಮೊದಲೇ ಹೇಳಿದೆನಲ್ಲಾ, ಮಳೆ ಮತ್ತಿತರ ಕಾರಣಗಳಿಗೆ ಹಮ್ತಾ ಪಾಸ್ ತನಕ ಮಾತ್ರ ತೆರಳಲು ಸಾಧ್ಯವಾಯಿತು. ಬೇಸ್ ಕ್ಯಾಂಪ್ ಗೆ ತಲುಪುವ ಹಾದಿಯುದ್ದಕ್ಕೂ ಒಂದಲ್ಲಾ ಒಂದು ಸಮಸ್ಯೆ. ಅದರಲ್ಲೂ ಹಿಮಾಚಲಪ್ರದೇಶದಲ್ಲಿ ಒಂದು ಕಡೆ ರಸ್ತೆಯ ಪಕ್ಕದ ಗುಡ್ಡ ನಡುಗುತ್ತಾ ಸಣ್ಣ ಕಲ್ಲು- ಮರಳು ಉದುರುತ್ತಿದ್ದರೆ ಕಾರಿನೊಳಗೆ ಕೂತು, ರಸ್ತೆಯಲ್ಲಿ ಮುಂದೆ ಹೋಗಲಾಗದೆ, ಮಳೆಯ ಕಾರಣಕ್ಕೆ ವಾಹನ ಬಿಟ್ಟು ಇಳಿಯಲಾಗದೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಇನ್ನೇನು ನಮ್ಮ ದೇಹ ಯಾವುದೋ ಗುಡ್ಡದ ದೊಡ್ಡ ಬಂಡೆಯ ಕೆಳಗೆ ಹಪ್ಪಳವೇ ಅಂದುಕೊಂಡೆ. ಜೈ ಆಂಜನೇಯ ಸ್ವಾಮಿ ಎಂದು ಆ ದೇವರನ್ನು ಕೂಡ ಹಲವು ಸಲ ನೆನೆದು, ಜೀವದ ಆಸೆಯೇ ಬಿಟ್ಟಿದ್ದೆ. ಕೊನೆಗೆ ಹೇಗೋ ಸಾಗಬೇಕಿದ್ದ ರಸ್ತೆಯ ತಡೆ ಸರಿ ಮಾಡಿ, ಮುಂದೆ ಹೋಗಲು ಅನುವು ಮಾಡಿಕೊಡಲಾಯಿತು. ಹೇಗೋ ಕುಲುವಿನಿಂದ ಬೇಸ್ ಕ್ಯಾಂಪ್ ಗೆ ತಲುಪಿಕೊಂಡೆ.

ಐವತ್ತೊಂದು ಮಂದಿ ಇದ್ದೆವು

ಐವತ್ತೊಂದು ಮಂದಿ ಇದ್ದೆವು

ಅಲ್ಲಿ ಈ ಬಾರಿ ಬಹಳ ಮಂದಿ ಆಸಕ್ತರು ಸೇರಿದ್ದರು. ನಾನು- ನನ್ನ ಗೆಳೆಯರಾದ ಉಡುಪ ಸೇರಿದ ಹಾಗೆ ಐವತ್ತೊಂದು ಮಂದಿ. ಇಷ್ಟು ಜನಕ್ಕೆ ಊಟದ ವ್ಯವಸ್ಥೆ ಮಾಡುವ ಸಿಬ್ಬಂದಿ. ಜತೆಗೆ ಟ್ರೆಕ್ಕಿಂಗ್ ಗೆ ಮಾರ್ಗದರ್ಶನ ಮಾಡುವ ಗೈಡ್ ಗಳು. ಹೆಚ್ಚು ಕಡಿಮೆ ಭಾರತದ ನಾನಾ ಭಾಗಗಳಿಂದ ಈ ಟ್ರೆಕ್ಕಿಂಗ್ ಗೆ ಬಂದಿದ್ದರು. ಆ ಪೈಕಿ ಭಾರತದ ಬಹುತೇಕ ಭಾಗದಲ್ಲಿ ಟ್ರೆಕ್ಕಿಂಗ್ ಮುಗಿಸಿದ್ದ ಅರವತ್ತೈದು ವರ್ಷದ ದೀಪಕ್ ಸೆಂಟರ್ ಆಫ್ ಅಟ್ರಾಕ್ಷನ್. ಅವರು ನಮ್ಮ ಗುಂಪಿನ ಮೆಗಾ ಸ್ಟಾರ್. ಅಂಥ ರಣ ಚಳಿಯಲ್ಲೂ ಅಗತ್ಯಕ್ಕಿಂತ ಹೆಚ್ಚು ಬೆಚ್ಚನೆಯ ಬಟ್ಟೆ ಧರಿಸುತ್ತಿರಲಿಲ್ಲ. ಹಾದಿಯುದ್ದಕ್ಕೂ ಇತರರಿಗೆ ಸಹಾಯ ಮಾಡುತ್ತಿದ್ದರು. ನಾವೆಲ್ಲ ಮಳೆ ಬಂದರೆ ಇದು, ವಿಪರೀತ ಚಳಿಯಾದರೆ ಅದು ಎಂದು ಸಾಕಷ್ಟು ಬಟ್ಟೆ ಹೊತ್ತುಕೊಂಡು ಹೋಗಿದ್ದರೆ. ದೀಪಕ್ ಮಾತ್ರ ಅಗತ್ಯವನ್ನು ತುಂಬ ಕನಿಷ್ಠಕ್ಕೆ ಮಿತಿಗೊಳಿಸಿದ್ದರು. ಬಹುಶಃ ಅವರ ಅನುಭವ, ಉತ್ಸಾಹ ನಮಗೆ ಪಾಠ ಎನ್ನುವಂತಿತ್ತು.

ಗೆಳೆಯರೊಬ್ಬರು ಸಲಹೆ ನೀಡಿದ್ದರು

ಗೆಳೆಯರೊಬ್ಬರು ಸಲಹೆ ನೀಡಿದ್ದರು

ಸಿನಿಮಾಗಳಲ್ಲೋ ಯಾರೋ ಹೇಳಿದ್ದನ್ನು ಕೇಳಿ ಸ್ವಿಟ್ಜರ್ ಲೆಂಡ್, ಇಟಲಿ ಮತ್ತೊಂದು ಎಂದು ಪ್ರಕೃತಿ ಸೌಂದರ್ಯದ ಬಗ್ಗೆ ಹೊಗಳುವವರನ್ನು ಕೇಳಿದ್ದೇನೆ. ಹಿಮಾಚಲ ಪ್ರದೇಶದ ಶುದ್ಧ ಗಾಳಿ, ಆ ಹಸಿರು, ನೀರು.... ಇವೆಲ್ಲ ನೋಡುತ್ತಾ ಒಂದು ವಾರ ಅಲ್ಲಿನ ನೆಲದ ಹೆಜ್ಜೆ ಹಾಕಿ ಬಂದ ಮೇಲೆ ನನಗೆ ನಾನೇ ಹೊಸಬನಂತೆ ಅನಿಸುತ್ತಿದ್ದೇನೆ. ಅಲ್ಲೊಂದು ನದಿ ದಾಟುವಾಗ ನೀರಲ್ಲಿ ಕಾಲಿಡಬೇಕಾಗುತ್ತದೆ. ಅಷ್ಟು ತಣ್ಣನೆಯ ನೀರಿಗೆ ಕಾಲು ಮರಗಟ್ಟಿ ಹೋಗುತ್ತದೆ. ಆ ನೀರಿಗೆ ಇಳಿಯುವಾಗ ಬರಿಗಾಲಿನಲ್ಲೇ ಇಳಿಯಬೇಕು ಎಂದು ನನ್ನ ಗೆಳೆಯರೊಬ್ಬರು ಸಲಹೆ ನೀಡಿದ್ದರು. ಏಕೆಂದರೆ ಸಾಕ್ಸ್ ಸಮೇತ ನೀರಿಗೆ ಇಳಿದರೆ ಅದಕ್ಕೆ ನೀರು ಹಿಡಿಯುತ್ತದೆ. ಹಾಗೇ ಶೂ ಹಾಕಿಕೊಂಡರೆ ಅದರಿಂದ ಬೇರೆ ಬೇರೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ತಲೆ ನೋವು. ಸಹಿಸುವುದಕ್ಕೆ ಅಸಾಧ್ಯ ಎನಿಸುವಂಥ ತಲೆ ನೋವು ಕಾಡುತ್ತದೆ.

 ಮೇಲೆ ಏರಿದಂತೆಲ್ಲ ಆಮ್ಲಜನಕ ಪ್ರಮಾಣ ಕಡಿಮೆ

ಮೇಲೆ ಏರಿದಂತೆಲ್ಲ ಆಮ್ಲಜನಕ ಪ್ರಮಾಣ ಕಡಿಮೆ

ಇನ್ನು ಎತ್ತರ ಎತ್ತರಕ್ಕೆ ಏರಿದ ಹಾಗೆಲ್ಲ ಸಮುದ್ರ ಮಟ್ಟಕ್ಕಿಂತ ಮೇಲೆ ಹೋಗುತ್ತೇವೆ. ಮೊದಲಿಗೆ ಮರಗಳು ಕಾಣುತ್ತವೆ. ಎತ್ತರಕ್ಕೆ ಏರಿದ ಹಾಗೆ ಕುರುಚಲುಗಳು ಕಾಣಿಸಿಕೊಳ್ಳುತ್ತವೆ. ಮತ್ತೂ ಎತ್ತರಕ್ಕೆ ಹೋದ ಮೇಲೆ ಅಲ್ಲಿ ಹಸಿರು ಸುಳಿವೇ ಇರುವುದಿಲ್ಲ. ಆಮ್ಲಜನಕದ ಪ್ರಮಾಣ ಅತ್ಯಂತ ಕಡಿಮೆ ಇರುವುದಕ್ಕೆ ಸಾಕ್ಷಿ ಅದು. ಜತೆಗೆ ಅಲ್ಲಿ ನೀರ್ಗಲ್ಲುಗಳು ಇದ್ದವು. ಸ್ವಲ್ಪ ಯಾಮಾರಿದರೂ ಅದರೊಳಗೆ ಕುಸಿದು ಹೋಗಬಹುದು. ಆದರೆ ಗೈಡ್ ತುಂಬ ಚೆನ್ನಾಗಿ ಇಂಥ ಪರಿಸ್ಥಿತಿ ನಿಭಾಯಿಸುತ್ತಾರೆ. ನಮ್ಮ ಗುಂಪಿನಲ್ಲಿ ಕೋಲ್ಕತ್ತಾದ ವರೊಬ್ಬರು ತಮ್ಮ ಪತ್ನಿಯನ್ನು ಬಲವಂತವಾಗಿ ಕರೆದುಕೊಂಡು ಬಂದುಬಿಟ್ಟಿದ್ದರು. ಒಂದು ಹಂತ ಆದ ಮೇಲೆ ಆ ಮಹಿಳೆಗೆ ತೀರಾ ಏದುಸಿರು ಬರಲು ಶುರುವಾಯಿತು. ಕೊನೆಗೆ ಅವರಿಬ್ಬರನ್ನು ಬಿಟ್ಟು, ನಮ್ಮ ಟ್ರೆಕ್ಕಿಂಗ್ ಮುಂದುವರಿಸಬೇಕಾಯಿತು. ಆದರೆ ಅವರ ಆರೋಗ್ಯದ ಬಗ್ಗೆ ಆರಂಭದಲ್ಲಿ ನಮಗಾದ ಗಾಬರಿ ಭಯಂಕರ ಇತ್ತು. ಆದರೆ ನಂತರ ಆ ಮಹಿಳೆ ಸುಧಾರಿಸಿಕೊಂಡರು.

ಪರ್ವತ ಏರುವಾಗಲೂ ಪಾಠ ಕಲಿಯಬಹುದು

ಪರ್ವತ ಏರುವಾಗಲೂ ಪಾಠ ಕಲಿಯಬಹುದು

ಇನ್ನು ನಮ್ಮ ಜತೆಗೆ ಮುಖ್ಯ ಗೈಡ್ ಗಳಾಗಿದ್ದವರು ಪ್ರಗ್ಯಾತ್ ಹಾಗೂ ವರ್ಷ. ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಕೋ ಆರ್ಡಿನೇಟರ್ ಆಗಿದ್ದವರು ಹಿತೇಶ್. ನಮ್ಮ ಟ್ರೆಕ್ಕಿಂಗ್ ಗೆ ತಿವಾರಿ ಅವರು ಹೇಳುತ್ತಿದ್ದ ಶಾಯರಿಗಳು ಮತ್ತಷ್ಟು ಉತ್ಸಾಹ ತುಂಬುತ್ತಿದ್ದವು. ನೋಡುತ್ತಿದ್ದ ಹಾಗೆ ಈತ ಮಿಲಿಟರಿಯವನು ಎಂಬಂಥ ಮೈಕಟ್ಟು. ಜತೆಗೆ ಎಂಥ ಸನ್ನಿವೇಶದಲ್ಲಿ ಎದೆಗುಂದದ ಮನಸ್ಥಿತಿ. ಪರ್ವತ ಏರುವಾಗಲೂ ಪಾಠ ಕಲಿಯಬಹುದು ಎಂಬುದಕ್ಕೆ ಒಂದು ಉದಾಹರಣೆ ಅಷ್ಟೇ. ನಾವು ಉಳಿದುಕೊಂಡಿದ್ದ ಕ್ಯಾಂಪ್ ನಲ್ಲಿ ರಾತ್ರಿ ಏಳೆಂಟು ಗಂಟೆ ಹೊತ್ತಿಗೆ ಊಟ ಮುಗಿಸಿ, ಮಲಗಿ ಬಿಡಬೇಕಿತ್ತು. ಮಾರನೇ ದಿನ ಬೆಳಗ್ಗೆ ಐದು ಗಂಟೆಗೆ ಎದ್ದು ಸಿದ್ಧವಾಗಬೇಕಿತ್ತು. ವಿಪರೀತ ಆಹಾರ, ನೀರು ಸೇವನೆ ಎರಡೂ ಟ್ರೆಕ್ಕಿಂಗ್ ಮಾಡುವಾಗ ಬಹಳ ಅಪಾಯಕಾರಿ. ಹಮ್ತಾ ಪಾಸ್ ನ ಗಮ್ಯವನ್ನು ತಲುಪಿದಾಗ ಅನುಭವಿಸಿದ ಸಾರ್ಥಕ್ಯ, ಓಹ್ ಅದ್ಭುತ. ಈ ಹಿಂದೆ ಉತ್ತರಾಖಂಡ್ ಗೆ ಕೂಡ ಟ್ರೆಕ್ಕಿಂಗ್ ಗೆ ಹೋಗಿದ್ದೆ. ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಇಂಡಿಯಾದ ವೆಬ್ ಸೈಟ್ ನೋಡುತ್ತಿದ್ದರೆ ಇಂಥ ಅವಕಾಶಗಳು ಇದ್ದರೆ ಗೊತ್ತಾಗುತ್ತದೆ. ಇಂಥ ಟ್ರೆಕ್ಕಿಂಗ್ ಗೆ ಹೋಗುವುದು ಹೇಗೆ ಅಂಥ ಯೋಚಿಸುತ್ತಿರುವವರಿಗೆ ಇದರಿಂದ ಸಹಾಯ ಆಗುತ್ತದೆ ಅಂದುಕೊಳ್ತೀನಿ.

English summary
Trekking enthusiast Madhusudan S Kumabashi, who works in Bengaluru IBM, shares his Himachal Pradesh's Hamtha Pass trekking experience with Oneindia Kannada readers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X