ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈತನೇ ಹಲವು ಪಕ್ಷಗಳ ಗೆಲುವಿನ ಮೆದುಳು, ಚಾಣಾಕ್ಷ ಪ್ರಶಾಂತ್ ಕಿಶೋರ್

By ಅನಿಲ್
|
Google Oneindia Kannada News

ರಾಜಕಾರಣಿಗಳ ಮಧ್ಯೆ ಆತನಿಗೊಂದು ಬೇಡಿಕೆ ಇದೆ. ಚುನಾವಣೆ ಸಂದರ್ಭದಲ್ಲಿ ಆತ ಹೆಣೆಯುವ ತಂತ್ರಗಳು ಚೆನ್ನಾಗಿ ಕೆಲಸ ಮಾಡುತ್ತವೆ ಎಂಬ ವಿಚಾರ ಈಗಾಗಲೇ ಹಲವು ಬಾರಿ ರುಜುವಾತಾಗಿದೆ. ಇಷ್ಟು ಕಾಲ ರಾಜಕೀಯ ತಂತ್ರಗಾರಿಕೆ ಹೆಣೆಯುವ ನಿಪುಣನಾಗಿ ಕಾಣಿಸಿಕೊಂಡಿದ್ದ ಆತ ಅಧಿಕೃತವಾಗಿ ನಿತೀಶ್ ಕುಮಾರ್ ರ ಜೆಡಿಯುಗೆ ಭಾನುವಾರ ಸೇರ್ಪಡೆಯಾಗಿದ್ದಾರೆ.

ಇಷ್ಟೆಲ್ಲ ಹೇಳಬೇಕಾಗಿರುವುದು ಪ್ರಶಾಂತ್ ಕಿಶೋರ್ ಬಗ್ಗೆ. 1977ರಲ್ಲಿ ಉತ್ತರಪ್ರದೇಶ ಪೂರ್ವ ಭಾಗದ ಬಲಿಯಾ ಜಿಲ್ಲೆಯಲ್ಲಿ ಹುಟ್ಟಿದವರು ಪ್ರಶಾಂತ್ ಕಿಶೋರ್. ತಂದೆ ಬಿಹಾರದಲ್ಲಿ ಸರಕಾರಿ ಆಸ್ಪತ್ರೆ ವೈದ್ಯರಾಗಿದ್ದರು. ತಾಯಿ ಗೃಹಿಣಿ. ಇನ್ನು ಮದುವೆ ಆಗಿರುವುದು ಅಸ್ಸಾಂನ ಗುವಾಹತಿ ಮೂಲದ ವೈದ್ಯೆ ಜಾಹ್ನವಿ ದಾಸ್ ರನ್ನು. ಈ ದಂಪತಿಗೆ ಒಬ್ಬ ಮಗ ಇದ್ದಾನೆ.

ಮೋದಿ ಗೆಲುವಿನ ಹಿಂದಿದ್ದ 'ಆ ವ್ಯಕ್ತಿ' ನಿತೀಶ್ ಕುಮಾರ್ ಜೆಡಿಯು ಸೇರ್ಪಡೆಮೋದಿ ಗೆಲುವಿನ ಹಿಂದಿದ್ದ 'ಆ ವ್ಯಕ್ತಿ' ನಿತೀಶ್ ಕುಮಾರ್ ಜೆಡಿಯು ಸೇರ್ಪಡೆ

ಪ್ರಶಾಂತ್ ಕಿಶೋರ್ ಒಂದು ಪಕ್ಷಕ್ಕೆ ಎಂದು ಸೀಮಿತವಾಗಿದ್ದವರಲ್ಲ. ಏಕೆಂದರೆ ಬಿಜೆಪಿ, ಕಾಂಗ್ರೆಸ್, ಜೆಡಿಯು, ವೈಎಸ್ ಆರ್ ಕಾಂಗ್ರೆಸ್ ಹೀಗೆ ನಾನಾ ಪಕ್ಷಗಳ ಪರವಾಗಿ ಚುನಾವಣೆಗಾಗಿ ರಣ ತಂತ್ರ ಹೆಣೆದ ವ್ಯಕ್ತಿ ಈತ. ಆದರೆ ಸೆಪ್ಟೆಂಬರ್ ಹದಿನಾರನೇ ತಾರೀಕು ಜೆಡಿಯು ಸೇರಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಬಹುಮತ ಬಂದಿತ್ತು. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಗೆಲುವಿನ ಓಟದಲ್ಲಿ ಪ್ರಶಾಂತ್ ಕಿಶೋರ್ ರ ತಂತ್ರಗಾರಿಕೆ ಫಲ ನೀಡಿತ್ತು. ಹಾಗೆ ನೋಡಿದರೆ ಬಿಜೆಪಿ ಜತೆಗೆ ಪ್ರಶಾಂತ್ ಕಿಶೋರ್ ರ ಸಹಯೋಗ ಅದು ಎರಡನೇ ಬಾರಿಗೆ ಆಗಿತ್ತು. ಅದಕ್ಕೂ ಮುನ್ನ 2012ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಪರವಾಗಿ ಮೊದಲ ಸಲ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು. ಮೂರನೇ ಬಾರಿಗೆ ಜಯ ದಾಖಲಿಸಿದ ಮೋದಿ ಮತ್ತೆ ಮುಖ್ಯಮಂತ್ರಿಯಾದರು.

ವಿಶ್ವಸಂಸ್ಥೆಯಲ್ಲಿ ಎಂಟು ವರ್ಷ ಕಾರ್ಯ ನಿರ್ವಹಿಸಿದ್ದರು

ವಿಶ್ವಸಂಸ್ಥೆಯಲ್ಲಿ ಎಂಟು ವರ್ಷ ಕಾರ್ಯ ನಿರ್ವಹಿಸಿದ್ದರು

ಪ್ರಶಾಂತ್ ಕಿಶೋರ್ ಸಾರ್ವಜನಿಕ ಆರೋಗ್ಯ ತಜ್ಞ. ರಾಜಕೀಯದಲ್ಲಿ ಕಾಣಿಸಿಕೊಳ್ಳುವ ಮುನ್ನ ಎಂಟು ವರ್ಷಗಳ ಕಾಲ ವಿಶ್ವ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಅವರು ಮೊದಲ ಬಾರಿಗೆ ಚುನಾವಣೆ ರಣತಂತ್ರ ಹೆಣೆಯುವ ಜವಾಬ್ದಾರಿ ವಹಿಸಿಕೊಂಡಿದ್ದೇ 2012ರಲ್ಲಿ. ಅದೂ ಮೋದಿ ಪರವಾಗಿ, ಗುಜರಾತ್ ವಿಧಾನಸಭೆ ಚುನಾವಣೆಗೆ. 2014ರ ಲೋಕಸಭೆ ಚುನಾವಣೆಯು ಮತ್ತೊಂದು ಎತ್ತರಕ್ಕೆ ಕರೆದೊಯ್ದಿತು. ನರೇಂದ್ರ ಮೋದಿ ಪಾಳಯದ ಅತ್ಯಂತ ನಂಬಿಕಸ್ಥ ತಂತ್ರಗಾರಿಕೆ ನಿಪುಣರಾಗಿ ಪ್ರಶಾಂತ್ ಹೆಸರು ಗಳಿಸಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ರೂಪಿಸಿದ ಹಲವು ತಂತ್ರಗಾರಿಕೆ ಚೆನ್ನಾಗಿ ಕೆಲಸ ಮಾಡಿದವು. ಸಿಟಿಜನ್ ಫಾರ್ ಅಕೌಂಟಬಲ್ ಗವರ್ನೆನ್ಸ್ (ಸಿಎಜಿ) ಎಂಬ ಎನ್ ಜಿಒ ಆರಂಭಿಸಿದರು ಪ್ರಶಾಂತ್ ಕಿಶೋರ್. ಅತ್ಯುತ್ತಮ ಕಾಲೇಜುಗಳ ಇನ್ನೂರು ಯುವ ವೃತ್ತಿಪರರನ್ನು ನೇಮಿಸಿಕೊಂಡು, ಬಿಜೆಪಿಯ ಪರವಾಗಿ ಸಾಮಾಜಿಕ ಮಾಧ್ಯಮದ ದೊಡ್ಡ ಹವಾ ಎಬ್ಬಿಸಿದರು. ಅದರಲ್ಲೂ ಚಾಯ್ ಪೇ ಚರ್ಚಾ, ಮಂಥನ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಚಾರದಿಂದ ದೊಡ್ಡ ಮಟ್ಟದ ಸಹಾಯವಾಯಿತು.

ನಿತೀಶ್ ಕುಮಾರ್ ರ ಜೆಡಿಯು ಪರವಾಗಿ ಕೆಲಸ

ನಿತೀಶ್ ಕುಮಾರ್ ರ ಜೆಡಿಯು ಪರವಾಗಿ ಕೆಲಸ

ಆದರೆ, 2015ರಲ್ಲಿ ಬಿಜೆಪಿಯಿಂದ ಬೇರ್ಪಟ್ಟ ಪ್ರಶಾಂತ್ ಕಿಶೋರ್, ಸಿಎಜಿಗೆ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪ್ಯಾಕ್) ಎಂಬ ಮರುರೂಪ ನೀಡಿದರು. ಆ ಬಾರಿ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ರ ಜೆಡಿಯು ಪರವಾಗಿ ಕೆಲಸ ಮಾಡಿದರು. ಆ ಚುನಾವಣೆಯಲ್ಲಿ ಜೆಡಿಯು-ಆರ್ ಜೆಡಿ-ಕಾಂಗ್ರೆಸ್ ಮೈತ್ರಿ ಕೂಟ ರಚನೆ ಮಾಡಿಕೊಂಡು ದೊಡ್ಡ ಮಟ್ಟದ ಗೆಲುವು ಪಡೆದವು. 2016ರಲ್ಲಿ ಕಾಂಗ್ರೆಸ್ ಪರ ತಂತ್ರಗಾರಿಕೆ ಹೆಣೆಯುವ ಕೆಲಸ ಕೈಗೆತ್ತಿಕೊಂಡ ಪ್ರಶಾಂತ್ ಕಿಶೋರ್, ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪರ ನಿಂತರು. ಪ್ರಶಾಂತ್ ಕಿಶೋರ್ ಮತ್ತು ಅವರ ತಂಡ ಮಾಡಿದ ಕೆಲಸದ ಪರಿಣಾಮವಾಗಿ ಕಾಂಗ್ರೆಸ್ ಕೂಡ ಐತಿಹಾಸಿಕ ಗೆಲುವು ಸಾಧಿಸಿತು.

ಉತ್ತರಪ್ರದೇಶದಲ್ಲಿ ತಂತ್ರಗಾರಿಕೆ ಕೆಲಸ ಮಾಡಲಿಲ್ಲ

ಉತ್ತರಪ್ರದೇಶದಲ್ಲಿ ತಂತ್ರಗಾರಿಕೆ ಕೆಲಸ ಮಾಡಲಿಲ್ಲ

ಅದಾಗಿ ಮರು ವರ್ಷ ಅಂದರೆ 2017ರಲ್ಲಿ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ನಿಂದ ಪ್ರಶಾಂತ್ ಕಿಶೋರ್ ರನ್ನು ನೇಮಿಸಲಾಯಿತು. ಆದರೆ ಆ ಪಕ್ಷವನ್ನು ಗೆಲ್ಲಿಸಲು ಅವರಿಂದ ಆಗಲಿಲ್ಲ. ಆ ರಾಜ್ಯದಲ್ಲಿ ಬಿಜೆಪಿಯು ಪ್ರಚಂಡ ಗೆಲುವನ್ನು ದಾಖಲಿಸಿತು. ಇನ್ನು ಸದ್ಯಕ್ಕೆ ಅಂದರೆ 2018ರಲ್ಲಿ ಆಂಧ್ರಪ್ರದೇಶದ ವೈಎಸ್ ಆರ್ ಕಾಂಗ್ರೆಸ್ ಪರವಾಗಿ ಪ್ರಶಾಂತ್ ಕಿಶೋರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಟಗಾರರ ಬೆನ್ನಿಗೆ ನಿಲ್ಲುತ್ತಿದ್ದ ಚಾಣಾಕ್ಷ ತಂತ್ರಗಾರ ಈಗ ಸ್ವತಃ ಅಖಾಡಕ್ಕೆ ಇಳಿದಿದ್ದಾರೆ. "ನನ್ನ ರಾಜಕೀಯ ಪಯಣವನ್ನು ಬಿಹಾರದಿಂದ ಆರಂಭಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ ಪ್ರಶಾಂತ್ ಕಿಶೋರ್. ಹಾಗಿದ್ದರೆ ಅವರ ಮುಂದಿನ ಹಾದಿ ಹೇಗಿರಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.

English summary
Political strategist Prashant Kishore joined JDU on Sunday. Here is the journey of the Prashant Kishor from United Nations public health expert to JDU party member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X