ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈರನ್ನು ರಾಜಕೀಯವಾಗಿ ಫಿನಿಷ್ ಮಾಡಲು ಎಚ್ಡಿಕೆ ರಣಾಂಗಣಕ್ಕೆ

|
Google Oneindia Kannada News

ಕೆಲವೇ ದಿನಗಳ ಹಿಂದೆ ಕ್ಷಿಪ್ರ ಕ್ರಾಂತಿ ನಡೆಸಿ ತಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಫಿನಿಷ್ ಮಾಡಲು ಸಿಎಂ ಕುಮಾರಸ್ವಾಮಿ ಉಪಚುನಾವಣೆಯ ರಣಾಂಗಣಕ್ಕೆ ಇಳಿದಿದ್ದಾರೆ.

ಹಾಗೆ ನೋಡಿದರೆ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಿಂದಲೂ ಅದನ್ನು ಉರುಳಿಸಬೇಕು ಎನ್ನುವ ತವಕದಲ್ಲೇ ಇರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಿಕೊಂಡೇ ಬಂದಿದ್ದಾರೆ.

ಯಡಿಯೂರಪ್ಪ ಕೇಸರಿ ನೆಲದಲ್ಲಿ ಸಿದ್ದರಾಮಯ್ಯ 'ಜಾತ್ಯತೀತ' ಸವಾರಿ
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಂಘರ್ಷ ಅತಿಯಾಯಿತು ಅನ್ನಿಸಿದಾಗಲೆಲ್ಲ ಮೊದಲು ಆಸೆಗಣ್ಣುಗಳಿಂದ ಪರಿಸ್ಥಿತಿಯನ್ನು ನೋಡುವುದು, ಸನ್ನಿವೇಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವೇ? ಎಂದು ಟ್ರೈ ಕೊಡುವುದು ಯಡಿಯೂರಪ್ಪ ಅವರ ಕೆಲಸ.

ಆದರೆ ಶತಾಯ ಗತಾಯ ಈ ಸರ್ಕಾರ ಬೀಳಬಾರದು ಎಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯದಲ್ಲಿರುವ ಕೈಪಾಳೆಯದ ನಾಯಕರು ಏನೇ ಕೊಸರಾಡಿದರೂ ಅವರನ್ನು ಮೌನವಾಗಿಸುತ್ತಲೇ ಬಂದಿದೆ.

ಅಪಾಯ ತಂದೊಡ್ಡುವ ಶಕ್ತಿ ಇರುವುದು ಸಿದ್ದುವಿಗೆ ಮಾತ್ರ

ಅಪಾಯ ತಂದೊಡ್ಡುವ ಶಕ್ತಿ ಇರುವುದು ಸಿದ್ದುವಿಗೆ ಮಾತ್ರ

ವಾಸ್ತವವಾಗಿ ಈ ಸರ್ಕಾರಕ್ಕೆ ದೊಡ್ಡ ಮಟ್ಟದ ಅಪಾಯ ತಂದೊಡ್ಡುವ ಶಕ್ತಿ ಇರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ. ಉಳಿದಂತೆ ಕೈ ಪಾಳೆಯದ ಬಹುತೇಕರು 'ಹಮಾರಾ ಗಲ್ಲಿ ಮೇ ಹಮೇಚ್ ಶೇರ್' ಅನ್ನುವ ಕೆಟಗರಿನವರು. ಹೀಗಾಗಿ ಅವರು ಗುಟುರು ಹಾಕಿದರೂ ಈ ಶೇರುಗಳ ಹಿಂದೆ ನಾಲ್ಕು ಶಾಸಕರೂ ಬರುವುದಿಲ್ಲ.

ಹೀಗಾಗಿಯೇ ಶುರುವಿನಲ್ಲಿ, ನಮ್ಮನ್ನು ಮಂತ್ರಿ ಮಾಡಿಲ್ಲ, ನೋಡುತ್ತಿರಿ, ಸರ್ಕಾರ ಲಗಾಟಿ ಹೊಡೆಯುವಂತೆ ಮಾಡಿಬಿಡುತ್ತೇವೆ ಎನ್ನುತ್ತಿದ್ದವರೆಲ್ಲ ಈಗ, ಅಯ್ಯೋ, ನಾಲ್ಕು ದಿನ ರೆಸ್ಟು ತೆಗೆದುಕೊಂಡರಾಯಿತು, ಮಂತ್ರಿಗಿರಿಯೇನು ನಾವು ಹುಟ್ಟಿನಿಂದಲೇ ಪಡೆದುಕೊಂಡು ಬಂದಿದ್ದಾ? ಅನ್ನುವ ಲೆವೆಲ್ಲಿಗೆ ಪೋಜು ಕೊಡುತ್ತಿದ್ದಾರೆ.

ಯಾಕೆಂದರೆ ಹೀಗೆ ಕೂಗು ಹಾಕುತ್ತಿರುವ ಬಹುತೇಕರು ವೈಯಕ್ತಿಕ ಹಗರಣಗಳಲ್ಲಿ ಸಿಲುಕಿಕೊಂಡವರೇ ಹೊರತು, ಸಿದ್ದರಾಮಯ್ಯ ಅವರಂತೆ ಪಕ್ಷದ ಹೈಕಮಾಂಡ್ ಬಾಯಿಗೆ ಟೈಮು ಟೈಮಿಗೆ ಫೀಡಿಂಗ್ ಬಾಟಲ್ ಇಟ್ಟವರಲ್ಲ. ಹೀಗಾಗಿ ಇಂತವರನ್ನು ನಿಯಂತ್ರಿಸುವ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗುತ್ತಲೇ ಬಂದಿದೆ. ಅದು ಯಶಸ್ವಿಯಾದಾಗಲೆಲ್ಲ ಕುಮಾರಸ್ವಾಮಿ ಅವರ ಸರ್ಕಾರವನ್ನು ಉರುಳಿಸಿ ಸಿಎಂ ಹುದ್ದೆಗೆ ಬರಬೇಕು ಎಂಬ ಯಡಿಯೂರಪ್ಪ ಅವರ ಪ್ಲಾನು ನೆಲ ಕಚ್ಚುತ್ತಿದೆ.

ರಾಜಕೀಯದಲ್ಲಿ ಗೌಡರಿಗಿಂತ ಪಂಟರು ಯಾರಿದ್ದಾರೆ?

ರಾಜಕೀಯದಲ್ಲಿ ಗೌಡರಿಗಿಂತ ಪಂಟರು ಯಾರಿದ್ದಾರೆ?

ಇತ್ತೀಚೆಗೆ ಕೆಲ ಲಾಬಿಗಳ ಪ್ರಮುಖರನ್ನು ಹಿಡಿದುಕೊಂಡ ಯಡಿಯೂರಪ್ಪ, ಹದಿನೈದಕ್ಕೂ ಹೆಚ್ಚು ಮಂದಿ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಗಾಳ ಹಾಕಿದರು. ಆದರೆ ಯಡಿಯೂರಪ್ಪ ಗಾಳ ಹಾಕಿದ ಸುದ್ದಿ ಕುಮಾರಸ್ವಾಮಿ ಅವರಿಗಿಂತ ಮುಂಚಿತವಾಗಿ ದೇವೇಗೌಡರ ಕಿವಿ ತಲುಪಿತು. ಎಷ್ಟೇ ಆದರೂ ರಾಜಕೀಯದಲ್ಲಿ ದೇವೇಗೌಡ ಪಂಟರು. ಮೊದಲ ಬಾರಿ ಕುಮಾರಸ್ವಾಮಿ ಸಿಎಂ ಆಗಿದ್ದರಲ್ಲ? ಆ ಸಂದರ್ಭದಲ್ಲಿ ಕೋಮುಗಲಭೆಯೊಂದು ಎದ್ದಾಗ ಇನ್ನೇನು ಸರ್ಕಾರಕ್ಕೆ ಆಪತ್ತು ಗ್ಯಾರಂಟಿ ಎನ್ನುವ ಮಾತು ಕೇಳಿ ಬಂದಿತ್ತು.

ಆಗ ಪದ್ಮನಾಭನಗರದ ಮನೆಯಲ್ಲಿದ್ದ ದೇವೇಗೌಡ ಸರಿಯಾದ ಜಾಗದಲ್ಲಿ ತಂತಿ ಮೀಟಿದರು. ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ಮುಖ್ಯಸ್ಥರಿಗೆ ಫೋನು ಮಾಡಿ, ಗಲಭೆ ಮಾಡುತ್ತಿರುವವರನ್ನು ಹಿಡಿದರೆ ಸಾಲದು. ಇದರ ಹಿಂದಿರುವವರು ಇಂತಹ ವ್ಯಕ್ತಿ. ಮೊದಲು ಅವನನ್ನು ಒದ್ದು ಒಳಗೆ ಹಾಕಿ. ಗಲಾಟೆ ನಿಲ್ಲುತ್ತದೆ ಎಂದರು.

ಪೊಲೀಸರು ಆ ಕೆಲಸ ಮಾಡಿದರು. ತಕ್ಷಣವೇ ಕೋಮುಗಲಭೆ ಬಂದ್. ಇದು ದೇವೇಗೌಡರ ಬುದ್ದಿಮತ್ತೆಗೆ ಒಂದು ನಿದರ್ಶನ ಮಾತ್ರ. ಈ ಬಾರಿಯೂ ಅಷ್ಟೇ. ಮಗನ ನೇತೃತ್ವದ ಸರ್ಕಾರಕ್ಕೆ ಯಡಿಯೂರಪ್ಪ ಆಪತ್ತು ತರುತ್ತಿರುವುದಕ್ಕಿಂತ, ಇದಕ್ಕೆ ನೆರವು ನೀಡುತ್ತಿರುವ ಮೂಲಗಳ ಮೇಲೆ ಕಣ್ಣಿಟ್ಟ ದೇವೇಗೌಡ, ಮೊದಲು ಇಂತಿಂಥವರನ್ನು ಹಿಡಕೊಂಡು ಒದೆಯಿರಿ. ಪಾಪ, ಯಡಿಯೂರಪ್ಪ ಏನು ಮಾಡುತ್ತಾರೆ? ಅವಕಾಶ ಸಿಕ್ಕರೆ ಸಿಎಂ ಆಗಬೇಕು ಎಂದು ಬಯಸುತ್ತಾರೆ ಅಷ್ಟೇ ಎಂದರು.

ಯಾವಾಗ ದೇವೇಗೌಡರ ಈ ಫರ್ಮಾನು ಹೊರಟಿತೋ? ಇದಾದ ಕೆಲವೇ ಗಂಟೆಗಳಲ್ಲಿ ಯಡಿಯೂರಪ್ಪ ಅವರ ಬೆನ್ನ ಹಿಂದೆ ನಿಂತು ಗವರ್ಮೆಂಟನ್ನು ಉದುರಿಸಿಬಿಡುತ್ತೇವೆ ಎಂದವರ ಪೈಕಿ ಹಲವರು ದೇಶಾಂತರ ಓಡಿ ಹೋದರು. ಆದರೆ ಈ ಬೆಳವಣಿಗೆ ಕುಮಾರಸ್ವಾಮಿ ಅವರಲ್ಲಿ ದೊಡ್ಡ ಮಟ್ಟದ ರೊಚ್ಚು ಮೂಡಿಸಿದೆ.

ದೇವೇಗೌಡರು ಮತ್ತೆ ಮೋಸ ಮಾಡ್ತಾರೆ: ಸಿದ್ದರಾಮಯ್ಯಗೆ ಬಿಎಸ್‌ವೈ ಎಚ್ಚರಿಕೆದೇವೇಗೌಡರು ಮತ್ತೆ ಮೋಸ ಮಾಡ್ತಾರೆ: ಸಿದ್ದರಾಮಯ್ಯಗೆ ಬಿಎಸ್‌ವೈ ಎಚ್ಚರಿಕೆ

ಬಿಜೆಪಿಗೆ ಹಲ್ವಾ ತಿನ್ನಿಸಲು ಎಚ್ಡಿಕೆ ಸಿದ್ಧ

ಬಿಜೆಪಿಗೆ ಹಲ್ವಾ ತಿನ್ನಿಸಲು ಎಚ್ಡಿಕೆ ಸಿದ್ಧ

ಹಾಗಂತಲೇ ಲೋಕಸಭೆ ಹಾಗೂ ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆಗೆಳ ಪೈಕಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮೇಲೆ ತಮ್ಮ ಸಂಪೂರ್ಣ ಗಮನ ನೆಟ್ಟಿರುವ ಕುಮಾರಸ್ವಾಮಿ, ಖುದ್ದು ಯಡಿಯೂರಪ್ಪ ಅವರ ಜಿಲ್ಲೆಯಲ್ಲೇ ಬಿಜೆಪಿಗೆ ಹಲ್ವಾ ತಿನ್ನಿಸಲು ಹೊರಟಿದ್ದಾರೆ.

ಕುತೂಹಲದ ಸಂಗತಿ ಎಂದರೆ, ಇದೇ ರೀತಿ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಹೊರಟಿದ್ದರು. ಆ ಟೈಮಿನಲ್ಲಿ ಸಿದ್ದರಾಮಯ್ಯ ಸ್ವಲ್ಪ ಎಡವಿದ್ದರೂ ಸೋತುಬಿಡುತ್ತಿದ್ದರು.

ಗೆದ್ದರೂ ಅವತ್ತು ಸಿದ್ದರಾಮಯ್ಯ, ಯಪ್ಪಾ, ಇನ್ನು ಈ ಚುನಾವಣಾ ರಾಜಕೀಯ ನನಗೆ ಸಾಕಪ್ಪಾ ಅನ್ನುವ ಮಟ್ಟಕ್ಕೆ ಹೋಗಿದ್ದರು. ಎದುರಾಳಿಗಳನ್ನು ಈ ರೀತಿ ದೊಡ್ಡ ಮಟ್ಟದಲ್ಲಿ ಸುಸ್ತು ಮಾಡುವ ಕಲೆ ಗೊತ್ತಿರುವುದು ದೇವೇಗೌಡರ ಕುಟುಂಬಕ್ಕೆ ಎಂಬುದು ನಿಸ್ಸಂಶಯ.

ಯಡಿಯೂರಪ್ಪ ಗೆದ್ದರೆ ಸಿದ್ದುವಿಗೆ ಸಂಕಷ್ಟ

ಯಡಿಯೂರಪ್ಪ ಗೆದ್ದರೆ ಸಿದ್ದುವಿಗೆ ಸಂಕಷ್ಟ

ಆದರೆ ಅವತ್ತು ಶತ್ರುವಾಗಿದ್ದ ಸಿದ್ದರಾಮಯ್ಯ ಇವತ್ತು ಕುಮಾರಸ್ವಾಮಿ ಜತೆ ಸೇರಿ ಯಡಿಯೂರಪ್ಪ ಅವರನ್ನು ಮುಗಿಸಲು ಹೊರಟಿದ್ದಾರೆ. ಯಾಕೆಂದರೆ, ಇವತ್ತಲ್ಲ ನಾಳೆ ಹೆಚ್ಚು ಕಡಿಮೆಯಾಗಿ ಯಡಿಯೂರಪ್ಪ ಸಿಎಂ ಆಗಿಬಿಟ್ಟರೆ ತಮಗೇ ಕಷ್ಟ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು.

ಹೀಗಾಗಿ ಅವರು ಈಗ ಕುಮಾರಸ್ವಾಮಿ ಜತೆ ಕೈಗೂಡಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಣದಲ್ಲಿ ಬಿಜೆಪಿಯನ್ನು ಅಡ್ಡ ಮಲಗಿಸಲು ಹೊರಟಿದ್ದಾರೆ. ಸುಮಾರು ಹದಿನೇಳು ಲಕ್ಷದಷ್ಟಿರುವ ಜಿಲ್ಲೆಯ ಮತದಾರರ ಪೈಕಿ ಲಿಂಗಾಯತ ಹಾಗೂ ಈಡಿಗರು ತಲಾ ಮೂರು ಲಕ್ಷದಷ್ಟಿದ್ದಾರೆ. ಪರಿಶಿಷ್ಟರು ನಾಲ್ಕು ಲಕ್ಷದಷ್ಟಿದ್ದರು. ಬ್ರಾಹ್ಮಣ ಹಾಗೂ ಮುಸ್ಲಿಂ ಮತದಾರರು ತಲಾ ಎರಡು ಲಕ್ಷದಷ್ಟಿದ್ದಾರೆ.

ಉಳಿದಂತೆ ಕುರುಬರು ಮತ್ತು ಒಕ್ಕಲಿಗರು ಗಣನೀಯ ಪ್ರಮಾಣದಲ್ಲಿದ್ದು ಈ ಮ್ಯಾಥಮ್ಯಾಟಿಕ್ಸು ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಅನುಕೂಲವಾಗುವಂತೆ ಕಾಣುತ್ತಿದೆ. ಇವತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಣದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸಿರುವವರು ಯಡಿಯೂರಪ್ಪ ಅವರ ಮಗ ಬಿ.ವೈ. ರಾಘವೇಂದ್ರ.

#ಉತ್ತರಕೊಡಿಬಿಎಸ್‌ವೈ : ಸಿದ್ದರಾಮಯ್ಯರಿಂದ ಸಾಲು-ಸಾಲು ಪ್ರಶ್ನೆ!#ಉತ್ತರಕೊಡಿಬಿಎಸ್‌ವೈ : ಸಿದ್ದರಾಮಯ್ಯರಿಂದ ಸಾಲು-ಸಾಲು ಪ್ರಶ್ನೆ!

ಮಧು ಬಂಗಾರಪ್ಪ ಗೆದ್ದರೆ ಅಚ್ಚರಿಯಿಲ್ಲ

ಮಧು ಬಂಗಾರಪ್ಪ ಗೆದ್ದರೆ ಅಚ್ಚರಿಯಿಲ್ಲ

ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಕ್ಯಾಂಡಿಡೇಟ್ ಆಗಿರುವವರು ಮಧು ಬಂಗಾರಪ್ಪ. ವಾಸ್ತವವಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೆ ಬಿಜೆಪಿ ಗೆಲ್ಲುವುದು ನಿರಾಯಾಸವಾಗುತ್ತಿತ್ತು. ಆದರೆ ಈಗ ದ್ವಿಕೋನ ಸ್ಪರ್ಧೆ ಇರುವುದರಿಂದ ಬಿಜೆಪಿ ಗೆಲುವಿನ ದಡ ತಲುಪಲು ಹರಸಾಹಸ ಮಾಡಬೇಕಿದೆ.

ಅಂದ ಹಾಗೆ ಮಧು ಬಂಗಾರಪ್ಪ ಅವರಲ್ಲಿ ಭವಿಷ್ಯದ ಈಡಿಗ ನಾಯಕನನ್ನು ನೋಡುತ್ತಿರುವ ಸಮುದಾಯದ ಮತದಾರರು ಈ ಬಾರಿ ಒಗ್ಗಟ್ಟಾಗುವುದು ಬಹುತೇಕ ನಿಶ್ಚಿತ. ಅದೇ ರೀತಿ ಮುಸ್ಲಿಂ, ಕುರುಬ, ಹಿಂದುಳಿದ ಮತ್ತು ಒಕ್ಕಲಿಗ ಮತದಾರರು ಗಣನೀಯ ಪ್ರಮಾಣದಲ್ಲಿ ಕೈ ಹಿಡಿದರೆ ಮಧು ಬಂಗಾರಪ್ಪ ಗೆಲ್ಲುವುದು ಅಸಹಜವೂ ಅಲ್ಲ.

ಅಲ್ಲದೆ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರಕ್ಕಿಳಿದಿರುವುದು ಮಧು ಬಂಗಾರಪ್ಪ ಅವರಿಗೆ ಪ್ಲಸ್ ಆಗುವ ಎಲ್ಲ ಸಾಧ್ಯತೆಗಳನ್ನೂ ತೋರಿದೆ. ಜೊತೆಗೆ, ಮಧು ಅವರು ಕಣಕ್ಕಿಳಿದಿರುವುದರಿಂದ ಜೆಡಿಎಸ್ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಪ್ರಚಾರ ಮಾಡುತ್ತಿದ್ದಾರೆ.

ಯಡಿಯೂರಪ್ಪ ವಿರುದ್ಧ ವಿಪ್ರರ ಕ್ಷಿಪ್ರಕ್ರಾಂತಿ

ಯಡಿಯೂರಪ್ಪ ವಿರುದ್ಧ ವಿಪ್ರರ ಕ್ಷಿಪ್ರಕ್ರಾಂತಿ

ಈ ಮಧ್ಯೆ ಬಿಜೆಪಿಯಲ್ಲಿ ಕೆಲವು ಸಮಸ್ಯೆಗಳಿವೆ. ಮೊದಲನೆಯದು ಬ್ರಾಹ್ಮಣರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವುದು. ಯಾಕೆಂದರೆ ಈ ಬಾರಿ ಬ್ರಾಹ್ಮಣರೊಬ್ಬರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಕೇಳಿ ಬರುತ್ತಲೇ ಇತ್ತು. ಆದರೆ ಯಥಾ ಪ್ರಕಾರ ಅದು ಯಡಿಯೂರಪ್ಪ ಅವರ ಮಗನ ಕೈ ಸೇರಿರುವುದರಿಂದ ವಿಪ್ರ ಸಮುದಾಯವೇ ಯಡಿಯೂರಪ್ಪ ವಿರುದ್ಧ ಕ್ಷಿಪ್ರಕ್ರಾಂತಿ ಮಾಡುವ ಲಕ್ಷಣಗಳು ದಟ್ಟವಾಗಿವೆ.

ಎರಡನೆಯದಾಗಿ, ಭವಿಷ್ಯದ ಸಿಎಂ ಕ್ಯಾಂಡಿಡೇಟ್ ಆಗಲು ತವಕಿಸುತ್ತಿರುವ ಬಿಜೆಪಿಯ ಕೆ.ಎಸ್. ಈಶ್ವರಪ್ಪ ಅವರ ಗುರಿ ಈಡೇರಬೇಕೆಂದರೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ಮಂಕಾಗಲೇಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಒಂದು ಲಕ್ಷಕ್ಕಿಂತ ಅಧಿಕ ಮತ ಗಳಿಸಿದ್ದರೂ, ಈ ಬಾರಿ ಅದು ಎಪ್ಪತ್ತೈದರ ಗಡಿ ದಾಟುವುದು ಕಷ್ಟ ಅಂತ ಈಶ್ವರಪ್ಪ ಅವರ ಕಟ್ಟರ್ ಬೆಂಬಲಿಗರೇ ಹೇಳುತ್ತಿದ್ದಾರೆ.

ಹೀಗಾಗಿ ಬಿಜೆಪಿಗೆ ಸಾಲಿಡ್ಡು ಅಂತ ದಕ್ಕುವುದು ಲಿಂಗಾಯತ ಮತ್ತು ದಲಿತ ವರ್ಗದ ಎಡಗೈ ಸಮುದಾಯದ ಮತಗಳು ಮಾತ್ರ. ಉಳಿದಂತೆ ದಕ್ಕುವುದೆಲ್ಲ ಬೋನಸ್ಸು. ಪರಿಣಾಮ? ಮಗನ ಗೆಲುವಿಗಾಗಿ ಯಡಿಯೂರಪ್ಪ ಬೆವರು ಹರಿಸಬೇಕಾದ ಸ್ಥಿತಿ ಇದೆ.

ಸಿದ್ದರಾಮಯ್ಯನವರಿಗೆ ರಾಹು, ಕೇತು, ಶನಿ ಯಾರೆಂಬುದನ್ನು ಸ್ಪಷ್ಟಪಡಿಸಿದ ಈಶ್ವರಪ್ಪಸಿದ್ದರಾಮಯ್ಯನವರಿಗೆ ರಾಹು, ಕೇತು, ಶನಿ ಯಾರೆಂಬುದನ್ನು ಸ್ಪಷ್ಟಪಡಿಸಿದ ಈಶ್ವರಪ್ಪ

ಬಿಎಸ್ವೈಯನ್ನು ಸೋಲಿಸಲು ಎಚ್ಡಿಕೆ ಪ್ಲಾನು ರೆಡಿ

ಬಿಎಸ್ವೈಯನ್ನು ಸೋಲಿಸಲು ಎಚ್ಡಿಕೆ ಪ್ಲಾನು ರೆಡಿ

ಆದರೆ ಅದೇ ಕಾಲಕ್ಕೆ ಶಿವಮೊಗ್ಗದಲ್ಲಿ ಬಿಜೆಪಿಯನ್ನು ಸೋಲಿಸದಿದ್ದರೆ ತಮ್ಮ ಸರ್ಕಾರಕ್ಕೆ ಆಪತ್ತು ತಪ್ಪಿದ್ದಲ್ಲ, ಯಡಿಯೂರಪ್ಪ ಅವರ ಯತ್ನ ನಿಲ್ಲುವಂತದ್ದಲ್ಲ ಎಂಬುದು ಕುಮಾರಸ್ವಾಮಿಗೆ ಗೊತ್ತು. ಹೀಗಾಗಿ ಅವರು ಆಯಕಟ್ಟಿನ ಜಾಗದಲ್ಲೇ ಏಟು ಹಾಕಲು ಪ್ಲಾನು ರೆಡಿ ಮಾಡಿಕೊಂಡಿದ್ದಾರೆ. ಅದು ಬಹುತೇಕ ಇಂಪ್ಲಿಮೆಂಟೂ ಆಗಿದೆ. ಅದೇ ರೀತಿ ಶಿವಮೊಗ್ಗದ ರಣಾಂಗಣದಲ್ಲಿ ಯಡಿಯೂರಪ್ಪ ಬಲ ಕುಗ್ಗದೆ ತಮ್ಮ ಬಲ ಹಿಗ್ಗಲು ಸಾಧ್ಯವಿಲ್ಲ ಎಂಬುದು ಈಶ್ವರಪ್ಪ ಅವರಿಗೂ ಗೊತ್ತಿದೆ.

ಯೇ, ಅವೆಲ್ಲ ಸುಳ್ಳು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಂದಲೇ ಈಶ್ವರಪ್ಪ ಅವರಿಗೆ ವಾರ್ನಿಂಗು ಕೊಡಿಸಲಾಗಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಹೇಳುತ್ತಾರಾದರೂ, ತುಂಬ ಸಲ ಈಶ್ವರಪ್ಪ ತಮ್ಮ ಮಾತನ್ನು ತಾವೇ ಕೇಳುವುದಿಲ್ಲ. ಹೀಗಿರುವಾಗ ಅಮಿತ್ ಶಾ ಮಾತನ್ನು ಕೇಳುತ್ತಾರಾ? ಅನ್ನುವುದು ಅವರ ಬೆಂಬಲಿಗರ ಮಾತು.

ಹೀಗೆ ಈಡಿಗ ಸಮುದಾಯದ ಕನಸು, ಕುಮಾರಸ್ವಾಮಿ ಅವರ ಟಾರ್ಗೆಟ್ಟು, ಈಶ್ವರಪ್ಪ ಅವರ ಲೆಕ್ಕಾಚಾರ.. ಹೀಗೆ ಎಲ್ಲವೂ ಸೇರಿ ಶಿವಮೊಗ್ಗದ ರಣಾಂಗಣದಲ್ಲಿ ಬಿಜೆಪಿ ಗೆಲುವಿಗಾಗಿ ಹರಸಾಹಸ ನಡೆಸಬೇಕಾದ ಸ್ಥಿತಿ ಇದೆ.

ಒಂದು ವೇಳೆ ಬಿಜೆಪಿ ಗೆದ್ದರೆ ಕುಮಾರಸ್ವಾಮಿ ಸರ್ಕಾರ ತನ್ನ ಸೇಫ್ಟಿಗಾಗಿ ನಿರಂತರವಾಗಿ ಬಡಿದಾಡಬೇಕಾಗುತ್ತದೆ. ಅಕಸ್ಮಾತ್ ಬಿಜೆಪಿ ಸೋತರೆ ಯಡಿಯೂರಪ್ಪ ಅವರಿಗೆ ಸದ್ಯದಲ್ಲೇ ಪಕ್ಷದ ಮಾರ್ಗದರ್ಶಕ್ ಹುದ್ದೆಗೆ ಬಡ್ತಿ ಸಿಗಲಿದೆ. ಅಂತಿಮವಾಗಿ ಈ ಎರಡರ ಪೈಕಿ ಯಾವುದು ಈಡೇರುತ್ತದೋ? ಕಾದು ನೋಡಬೇಕು.

English summary
Shivamogga Lok Sabha by election 2018. H D Kumaraswamy and Siddaramaiah have enough plans to defeat BJP and Yeddyurappa in Shimoga election. B Y Raghavendra is contesting from BJP and Madhu Bangarappa is contesting as JDS-Congress candidate. Political Analysis by R T Vittal Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X