• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ವರ್ಕೌಟ್ ಮಾಡಿರುವ ಸೂಪರ್ ಡೂಪರ್ ಪ್ಲಾನ್! ಏನದು?

By ಆರ್ ಟಿ ವಿಠ್ಠಲಮೂರ್ತಿ
|
   ಕುಮಾರಸ್ವಾಮಿ ವರ್ಕೌಟ್ ಮಾಡಿರುವ ಸೂಪರ್ ಡೂಪರ್ ಪ್ಲಾನ್! ಏನದು? | Oneindia Kannada

   ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ನಂತರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮುಂದುವರಿಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಿಡುವುದಿಲ್ಲ ಎಂದು ನಂಬಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದೀಗ ಹೊಸ ಪ್ಲಾನು ವರ್ಕ್ ಔಟ್ ಮಾಡಿರುವುದು ಕುತೂಹಲಕಾರಿಯಾಗಿದೆ.

   ಅಂದ ಹಾಗೆ, ಸಿದ್ದರಾಮಯ್ಯ ಅವರು ಸಂಸತ್ ಚುನಾವಣೆಯ ನಂತರ ಈ ಸರ್ಕಾರ ಮುಂದುವರಿಯಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ನಂಬಿಕೆ. ಯಾಕೆಂದರೆ, ಅವರ ಪರ್ಸನಲ್ ಇಂಟಲಿಜೆನ್ಸು ನೀಡಿರುವ ಒಂದು ಮಾಹಿತಿ ಅವರನ್ನು ತಬ್ಬಿಬ್ಬಾಗಿಸಿದೆ.

   ಆಡಿಯೋ ರಾಡಿ : ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರೇ ಸಿದ್ದರಾಮಯ್ಯ?

   ಕುಮಾರಸ್ವಾಮಿ ಆಪ್ತರ ಪ್ರಕಾರ, ಅದು ನೀಡಿರುವ ಒಂದು ಆಡಿಯೋ ಕುಮಾರಸ್ವಾಮಿ ಅವರ ಆ ನಂಬಿಕೆಗೆ ಕಾರಣವಾಗಿದೆ. ಈ ಆಡಿಯೋ ಅಸಲಿಯೋ? ಅಲ್ಲವೋ? ಅದು ಮುಂದಿನ ವಿಚಾರ. ಯಾಕೆಂದರೆ ಮೊದಲನೆಯದಾಗಿ ಅದು ಬಹಿರಂಗವೇ ಆಗಿಲ್ಲ.

   ಒಂದು ವೇಳೆ ಬಹಿರಂಗವಾಗಿದ್ದರೆ ಅದರ ಸತ್ಯಾಸತ್ಯತೆಯ ಮಾತು ಏಳುತ್ತಿತ್ತು. ಆದರೆ ತಮಗೆ ಬಂದ ಆ ಆಡಿಯೋ ವಿವರವನ್ನು ಕುಮಾರಸ್ವಾಮಿ ಕೇಳಿದ್ದಾರೆ. ಕೆಲ ಕಾಲದ ಹಿಂದೆ ಪ್ರಕೃತಿ ಚಿಕಿತ್ಸಾ ಕೇಂದ್ರವೊಂದಕ್ಕೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪರಮಾಪ್ತ ಶಾಸಕರೊಬ್ಬರ ಜತೆ ನಡೆಸಿದ ಮಾತುಕತೆಯ ವಿವರ ಅದರಲ್ಲಿದೆ ಎಂಬುದು ಸದ್ಯದ ಮಾಹಿತಿ.

   ರಾಹುಲ್ ಗೆ ಸಿದ್ದರಾಮಯ್ಯ ಅಭಯಹಸ್ತ

   ರಾಹುಲ್ ಗೆ ಸಿದ್ದರಾಮಯ್ಯ ಅಭಯಹಸ್ತ

   ಈ ಆಡಿಯೋದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಶಾಸಕನ ಜತೆ ಮಾತನಾಡುತ್ತಾ, "ನೋಡ್ರಯ್ಯ, ಪಾರ್ಲಿಮೆಂಟ್ ಎಲೆಕ್ಷನ್ ತನಕ ಯಾರೂ ಪಕ್ಷ ಬಿಟ್ಟು ಹೋಗಬೇಡಿ. ಯಾಕೆಂದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನನ್ನ ಜತೆ ಮಾತನಾಡಿದ್ದಾರೆ. 'ಕರ್ನಾಟಕದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್-ಜೆಡಿಎಸ್ ನಡುವೆ ಯಾವ ಕಾರಣಕ್ಕೂ ಬಿಕ್ಕಟ್ಟು ಬರದಂತೆ ನೋಡಿಕೊಳ್ಳಿ. ನೀವು ಐದು ವರ್ಷ ನಿರಾತಂಕವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿರಲು ನಾನು ನೆರವು ನೀಡಿದ್ದೇನೆ. ಈಗ ನಡೆಯುವ ಲೋಕಸಭಾ ಚುನಾವಣೆ ನನ್ನ ರಾಜಕೀಯ ಬದುಕನ್ನು ನಿರ್ಧರಿಸುವ ಚುನಾವಣೆ. ಅದಕ್ಕೆ ಕರ್ನಾಟಕ ಹೊಡೆತ ಕೊಡದಂತೆ ನೋಡಿಕೊಳ್ಳಿ' ಎಂದಿದ್ದಾರೆ. ನಾನೂ ಒಪ್ಪಿದ್ದೇನೆ" ಎನ್ನುತ್ತಾರೆ.

   ಕುಮಾರಸ್ವಾಮಿ ಹುದ್ದೆಯಲ್ಲಿ ಮುಂದುವರಿಬಾರ್ದು

   ಕುಮಾರಸ್ವಾಮಿ ಹುದ್ದೆಯಲ್ಲಿ ಮುಂದುವರಿಬಾರ್ದು

   ಆ ಶಾಸಕ ಹೂಂಗುಟ್ಟುತ್ತಾ ಹೋದಂತೆ ಸಿದ್ದರಾಮಯ್ಯ ಮುಂದುವರಿಸುತ್ತಾ, "ಸಂಸತ್ ಚುನಾವಣೆಯ ನಂತರ ಯಾರು ಎಲ್ಲಿ ಬೇಕಾದರೂ ಹೋಗಿ, ಬೇಕಿದ್ದರೆ ಟೆಂಪರರಿಯಾಗಿ ಆ ಯಡಿಯೂರಪ್ಪ ಅವರಿಗೆ ಬೆಂಬಲ ಕೊಟ್ಟಂತೆ ಮಾಡಿ. ಆದರೆ ಯಾವ ಕಾರಣಕ್ಕೂ ದೇವೇಗೌಡರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬಾರದು" ಎಂದು ಹೇಳುತ್ತಾರೆ.

   ಇದು ಕುಮಾರಸ್ವಾಮಿಯವರಿಗೆ ತಲುಪಿರುವ ಆಡಿಯೋ ಸಿ.ಡಿ.ಯಲ್ಲಿರುವ ವಿವರ. ಇದು ಸಿದ್ದರಾಮಯ್ಯ ಅವರೇ ಮಾತನಾಡಿರುವ ಆಡಿಯೋ ಸಿಡಿಯಾ? ಗೊತ್ತಿಲ್ಲ. ಹಾಗೆ ಹೇಳಬೇಕು ಎಂದರೆ ಅದು ಬಹಿರಂಗವೇ ಆಗಿಲ್ಲ. ಆದರೆ ತಮ್ಮ ಕೈಲಿರುವ ಈ ಸಿ.ಡಿ.ಯನ್ನು ಕುಮಾರಸ್ವಾಮಿ ನಂಬಿದ್ದಾರೆ.

   ಯಡಿಯೂರಪ್ಪ ಪದೇಪದೇ ಎಡವುತ್ತಿರುವುದು ಯಾಕೆ, ಪಕ್ಷದೊಳಗೇ ಇದ್ದಾರಾ ಗೂಢಚಾರಿಗಳು?

   ನಾವೇ ಕೈ ಜೋಡಿಸಿ ಸರ್ಕಾರ ರಚಿಸೋಣ

   ನಾವೇ ಕೈ ಜೋಡಿಸಿ ಸರ್ಕಾರ ರಚಿಸೋಣ

   ಅಂದ ಹಾಗೆ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳ ಜತೆ ಮತ್ತು ಕಮಲ ಪಾಳೆಯದ ಹೈಕಮಾಂಡ್ ವರಿಷ್ಠರ ಜತೆ ಜೆಡಿಎಸ್ ಉತ್ತಮ ಬಾಂಧವ್ಯ ಹೊಂದಿದೆ ಎಂಬುದು ರಹಸ್ಯವೇನಲ್ಲ. ಕಾಂಗ್ರೆಸ್ ಏನಾದರೂ ಕೈ ಕೊಟ್ಟರೆ ನಾವೇ ಕೈ ಜೋಡಿಸಿ ಸರ್ಕಾರ ರಚಿಸೋಣ ಎಂದೂ ಕುಮಾರಸ್ವಾಮಿ ಅವರು ಯಡಿಯೂರಪ್ಪ ವಿರೋಧಿ ಬಿಜೆಪಿ ನಾಯಕರ ಜತೆ ಮಾತನಾಡಿಕೊಂಡಿದ್ದಾರೆ.

   ಆದರೆ ಇತ್ತೀಚೆಗೆ ಯಡಿಯೂರಪ್ಪ ನಡೆಸಿದ ಆಪರೇಷನ್ ಕಮಲ ಕಾರ್ಯಾಚರಣೆ ಮತ್ತು ಈ ಕಾರ್ಯಾಚರಣೆಗೆ ಸಿದ್ದರಾಮಯ್ಯ ಬೆಂಬಲಿಗರೇ ದೊಡ್ಡ ಮಟ್ಟದಲ್ಲಿ ನೀಡಿರುವ ಬೆಂಬಲವನ್ನು ಕಂಡ ಮೇಲೆ ಕುಮಾರಸ್ವಾಮಿಯವರಿಗೆ ಈ ಸಿಡಿ ಮೇಲಿನ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ.

   ಹಾಗಂತಲೇ ಅವರೀಗ ಬಿಜೆಪಿ ನಾಯಕರ ಜತೆ ಸೇರಿ ಹೊಸ ಪ್ಲಾನು ವರ್ಕ್ ಔಟು ಮಾಡಿದ್ದಾರೆ. ಅವರ ಪ್ರಕಾರ, ಸಂಸತ್ ಚುನಾವಣೆಯ ನಂತರ ಈ ಸರ್ಕಾರ ಮುಂದುವರಿಯಲು ಸಿದ್ದರಾಮಯ್ಯ ಬಿಡುವುದಿಲ್ಲ. ಆ ಟೈಮಿನಲ್ಲಿ ಬಿಜೆಪಿಯಲ್ಲಿ ಸಾಲಿಡಾರಿಟಿ ಇಲ್ಲದೇ ಹೋದರೆ ಮಧ್ಯಂತರ ಚುನಾವಣೆಯೇ ಗತಿ. ಹಾಗೆ ಚುನಾವಣೆ ಬಂದರೆ ಲಾಭ ಕಾಂಗ್ರೆಸ್ ಪಕ್ಷಕ್ಕೇ ಹೊರತು, ನಮ-ನಿಮಗಲ್ಲ ಅಂತ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ವಿವರಿಸಿದ್ದಾರೆ.

   ಏನದು ಸೂಪರ್ ಡೂಪರ್ ಪ್ಲಾನು?

   ಏನದು ಸೂಪರ್ ಡೂಪರ್ ಪ್ಲಾನು?

   "ಅಷ್ಟೇ ಅಲ್ಲ, ಸಂಸತ್ ಚುನಾವಣೆಯಲ್ಲಿ ಫಲಿತಾಂಶ ಏನು ಬರುತ್ತದೋ? ನೋಡೋಣ. ಆನಂತರ ತೃತೀಯರಂಗದ ಒಂದು ಭಾಗ ಬಿಜೆಪಿಯ ಜತೆ ಹೋಗುವಂತೆ ದೊಡ್ಡವರು(ದೇವೇಗೌಡ)ನೋಡಿಕೊಳ್ಳುತ್ತಾರೆ. ಅಲ್ಲಿಗೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿದಂತಾಗುತ್ತದೆ.

   ಅದೇ ಟೈಮಿಗೆ ಸರಿಯಾಗಿ ಇಲ್ಲಿ, ನಾವು ನಿಮ್ಮ ಜತೆ ಕೈ ಜೋಡಿಸುತ್ತೇವೆ. ಬೇಕಿದ್ದರೆ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ. ಇಲ್ಲಿ ಬಿಜೆಪಿ ವತಿಯಿಂದ ಸಂತೋಷ್ ಅವರು ಸಿಎಂ ಆಗಲಿ, ಜೆಡಿಎಸ್ ವತಿಯಿಂದ ನನ್ನ ಸಹೋದರ ಎಚ್.ಡಿ.ರೇವಣ್ಣ ಅಥವಾ ನನ್ನ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಡಿಸಿಎಂ ಆಗಲಿ.

   ಹಾಗಾದಾಗ ಒಂದು ಕಡೆ ನಮ್ಮನ್ನು ಮುಗಿಸಲು ಹೊರಟಿರುವ ಸಿದ್ದರಾಮಯ್ಯ ಅವರಿಗೆ ತಿರುಗೇಟು ಹೊಡೆದಂತಾಗುತ್ತದೆ. ಮತ್ತೊಂದು ಕಡೆಯಿಂದ ಯಡಿಯೂರಪ್ಪ ಅವರನ್ನು ಸೈಡ್ ಲೈನಿಗೆ ತಳ್ಳಿದಂತಾಗುತ್ತದೆ.

   ಹೀಗೆ ನಮ್ಮ ಮತ್ತು ನಿಮ್ಮ ಮುಂದೆ ಸಮಸ್ಯೆಗಳಾಗಿ ನಿಂತಿರುವ ನಾಯಕರನ್ನು ರಾಜಕೀಯವಾಗಿ ಮುಗಿಸಿದರೆ ಮುಂದಿನ ನಾಲ್ಕು ವರ್ಷಗಳ ಕಾಲ ನಾವು ನಿರಾತಂಕವಾಗಿ ರಾಜ್ಯ ಆಳಬಹುದು" ಎಂದು ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ವಿವರಿಸಿದ್ದಾರೆ.

   ಮೈತ್ರಿಯಲ್ಲಿ ಕಾಂಗ್ರೆಸ್ಸನ್ನು ನಂಬುವಂತೆಯೇ ಇಲ್ಲ, ಕಾರಣಗಳು ಇಲ್ಲಿವೆ

   ಬಿಎಸ್ವೈ ಅಂಡ್ ಗ್ಯಾಂಗ್ ಸೈಡ್ ಲೈನ್ ಆಗಬೇಕ್

   ಬಿಎಸ್ವೈ ಅಂಡ್ ಗ್ಯಾಂಗ್ ಸೈಡ್ ಲೈನ್ ಆಗಬೇಕ್

   ಕುಮಾರಸ್ವಾಮಿ ವರ್ಕ್ ಔಟ್ ಮಾಡಿರುವ ಈ ಪ್ಲಾನು ಬೆಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳಿಗೂ ಇಷ್ಟವಾಗಿದೆ. ಅಂದ ಹಾಗೆ, ಅವರಿಗೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸಿಎಂ ಆಗುವುದು ಬೇಕಿಲ್ಲ.

   ಯಾಕೆಂದರೆ, ಮೊದಲನೆಯದಾಗಿ ಅವರು ಮುಖ್ಯಮಂತ್ರಿಯಾದರೆ ತಮ್ಮನ್ನೆಲ್ಲ ಸೈಡ್ ಲೈನು ಮಾಡುತ್ತಾರೆ. ಹಾಗೆಯೇ ತಮಗೆ ಬೇಕಾದವರನ್ನುಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುತ್ತಾರೆ.

   ಹಾಗೇನಾದರೂ ಆದರೆ ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ಅವರು ಕರೆ ತಂದವರಿಗೆ ಮೊದಲು ಮಂತ್ರಿ ಸ್ಥಾನ ಸಿಗುತ್ತದೆ.

   ಆನಂತರ ಖುದ್ದು ಯಡಿಯೂರಪ್ಪ ಅವರ ಆಪ್ತರಿಗೆ ಮಂತ್ರಿಗಳಾಗುವ ಲಕ್ಕು ಕುದುರುತ್ತದೆ. ಹಾಗೇನಾದರೂ ಆದರೆ 2008ರಿಂದ 2013ರತನಕ ಬಿಜೆಪಿ ಅಧಿಕಾರಾವಧಿಯಲ್ಲಿದ್ದ ಕಾಲದಲ್ಲಿ ಮಂತ್ರಿಗಳಾದ ಪ್ರಮುಖ ನಾಯಕರ ಪೈಕಿ ಬಹುತೇಕರು ಮಂತ್ರಿಗಳಾಗಲು, ಇನ್ಯಾವುದೇ ರೀತಿಯಲ್ಲಿ ಅಧಿಕಾರ ಪಡೆಯಲು ಸಾಧ್ಯವೇ ಇಲ್ಲ.

   ಹೀಗಾಗಿ ತಮಗೇನಾದರೂ ಅಧಿಕಾರ ಸಿಗಬೇಕು ಎಂದರೆ ಯಡಿಯೂರಪ್ಪ ಮತ್ತವರ ಗ್ಯಾಂಗು ಸಾರಾಸಗಟಾಗಿ ಸೈಡ್ ಲೈನ್ ಆಗಬೇಕು. ಹಾಗೆ ಆಗಬೇಕು ಎಂದರೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವೇ ಬರಬೇಕು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

   ಜೆಡಿಎಸ್ ಪಕ್ಷವನ್ನೇ ಮುಗಿಸಿಬಿಡುತ್ತಾರೆ

   ಜೆಡಿಎಸ್ ಪಕ್ಷವನ್ನೇ ಮುಗಿಸಿಬಿಡುತ್ತಾರೆ

   ಅವರ ಲೆಕ್ಕಾಚಾರ ಹೀಗಿದ್ದರೆ, ಮತ್ತೊಂದು ಕಡೆ ಕುಮಾರಸ್ವಾಮಿಯವರಿಗೂ ಇದು ಅನಿವಾರ್ಯ ನಡೆ ಎಂಬುದು ಗೊತ್ತಿದೆ. ಯಾಕೆಂದರೆ, ತಾವು ಈ ಹೆಜ್ಜೆ ಇಡದಿದ್ದರೆ ಸಿದ್ದರಾಮಯ್ಯ ರಾಜಕೀಯವಾಗಿ ಜೆಡಿಎಸ್ ಪಕ್ಷವನ್ನೇ ಮುಗಿಸಿಬಿಡುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಒಂದೋ, ಯಡಿಯೂರಪ್ಪ ಸಿಎಂ ಆಗಲು ಅವರು ಸಹಕಾರ ನೀಡಬಹುದು, ಇಲ್ಲವೇ ಮಧ್ಯಂತರ ಚುನಾವಣೆ ಅನಿವಾರ್ಯವಾಗುವಂತೆ ಮಾಡಬಹುದು ಅನ್ನುವುದು ಕುಮಾರಸ್ವಾಮಿ ಲೆಕ್ಕಾಚಾರ.

   ಹಾಗೇನಾದರೂ ಮಧ್ಯಂತರ ಚುನಾವಣೆ ಎದುರಾದರೆ ಯಡಿಯೂರಪ್ಪ ಸಿಎಂ ಆಗಲು ಬಿಜೆಪಿಯವರೇ ಬಿಡಲಿಲ್ಲ ಅಂತ ಪ್ರಬಲ ಲಿಂಗಾಯತ ಸಮುದಾಯ ಕಾಂಗ್ರೆಸ್ ಕಡೆ ವಲಸೆ ಹೋಗುತ್ತದೆ.

   ಲಿಂಗಾಯತ ಮತಗಳು ಯಾರ ಪರ ಇವೆ?

   ಲಿಂಗಾಯತ ಮತಗಳು ಯಾರ ಪರ ಇವೆ?

   ಅಂದ ಹಾಗೆ, ಕರ್ನಾಟಕದಲ್ಲಿ ಲಿಂಗಾಯತರು ಕಾಂಗ್ರೆಸ್ ಪಕ್ಷದ ಜತೆ ದೊಡ್ಡ ಮಟ್ಟದಲ್ಲಿ ನಿಂತಿದ್ದು 1989ರ ಚುನಾವಣೆಯಲ್ಲಿ. ಆ ಸಂದರ್ಭದಲ್ಲಿ ಲಿಂಗಾಯತ ನಾಯಕ ವೀರೇಂದ್ರ ಪಾಟೀಲ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಜನತಾ ಪರಿವಾರ ಒಡೆದು ಹೋಳಾಗಿತ್ತು.

   ಇಂತಹ ಟೈಮಿನಲ್ಲಿ ಲಿಂಗಾಯತರಿಗೆ ಆಶಾದಾಯಕವಾಗಿ ಕಂಡಿದ್ದು ಕಾಂಗ್ರೆಸ್. ಹೀಗಾಗಿ ದೊಡ್ಡ ಮಟ್ಟದಲ್ಲಿ ಲಿಂಗಾಯತರು ಕಾಂಗ್ರೆಸ್ ಬೆನ್ನಿಗೆ ನಿಂತರು. ಆದರೆ ಮರು ವರ್ಷ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೈಕಮಾಂಡ್ ಪದಚ್ಯುತಗೊಳಿಸಿದ ರೀತಿ ಸಮುದಾಯಕ್ಕೆ ಇಷ್ಟವಾಗಲಿಲ್ಲ.

   ಹೀಗಾಗಿ 1994ರ ಚುನಾವಣೆಯಲ್ಲಿ ಜನತಾ ಪರಿವಾರದ ಕಡೆ ಆ ಸಮುದಾಯ ವಲಸೆ ಹೋಯಿತು. 1999ರಲ್ಲಿ ಜನತಾ ಪರಿವಾರ ಒಡೆದು ಎರಡು ಹೋಳುಗಳಾದಾಗ ಸಂಯುಕ್ತ ಜನತಾದಳದ ಜತೆ ನಿಂತುಕೊಂಡಿತು. ಆನಂತರದ ದಿನಗಳಲ್ಲಿ ಅದರ ನಡಿಗೆ, ಬಿಜೆಪಿಯ ಕಡೆಗೆ.

   ಇಂದು ಆ ಸ್ಥಾನ ಯಡಿಯೂರಪ್ಪ ತುಂಬಿದ್ದಾರೆ

   ಇಂದು ಆ ಸ್ಥಾನ ಯಡಿಯೂರಪ್ಪ ತುಂಬಿದ್ದಾರೆ

   ವಾಸ್ತವವಾಗಿ ಅವತ್ತು ಬಿಜೆಪಿಯ ಕಡೆ ಹೋದ ಲಿಂಗಾಯತ ಸಮುದಾಯಕ್ಕೆ ರಾಮಕೃಷ್ಣ ಹೆಗಡೆ ನಾಯಕರಾಗಿದ್ದರು. ಆದರೆ ಅವರ ನಿಧನದ ನಂತರ ಕಾಣಿಸಿಕೊಂಡ ಶೂನ್ಯವನ್ನು ಕಮಲ ಪಾಳೆಯದ ಯಡಿಯೂರಪ್ಪ ಭರ್ತಿ ಮಾಡಿದರು. ಆವತ್ತಿನಿಂದ ಇವತ್ತಿನ ತನಕ ಲಿಂಗಾಯತ ಸಾಮ್ರಾಜ್ಯಕ್ಕೆ ಯಡಿಯೂರಪ್ಪ ಅವರೇ ನಾಯಕ.

   ಆದರೆ ಈ ಸಲ ಅವರು ಸಿಎಂ ಆಗಲು ಬಿಜೆಪಿಯವರೇ ಬಿಡುತ್ತಿಲ್ಲ ಎಂಬ ಅನುಮಾನ ಅದಾಗಲೇ ಸಮುದಾಯದಲ್ಲಿ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಅನುಮಾನ ಹೆಮ್ಮರವಾಗಿ ಬೆಳೆದು ನಿಂತರೆ ಸಹಜವಾಗಿಯೇ ಆ ಸಮುದಾಯ ಎರಡು ದಶಕಗಳಿಗೂ ಹೆಚ್ಚು ಕಾಲದ ನಂತರ ಮತ್ತೊಂದು ಮಹಾವಲಸೆಗೆ ಸಜ್ಜಾಗುತ್ತದೆ.

   ಯಡಿಯೂರಪ್ಪ ಆಪರೇಷನ್ ಕಮಲ ಹಾಳುಗೆಡವಿದ್ದೇ ಈ ಪಂಚ ಪಾಂಡವರು!

   ಮಧ್ಯಂತರ ಚುನಾವಣೆ ತಪ್ಪಿಸಲು ಸಾಹಸ

   ಮಧ್ಯಂತರ ಚುನಾವಣೆ ತಪ್ಪಿಸಲು ಸಾಹಸ

   ಹಾಗೇನಾದರೂ ಆದರೆ, ಅಂದರೆ ಲಿಂಗಾಯತ ಮತಗಳು ಬಿಜೆಪಿಯಿಂದ ವಲಸೆ ಹೋದರೆ, ಅದರ ಲಾಭ ದಕ್ಕುವುದು ಕಾಂಗ್ರೆಸ್ ಪಕ್ಷಕ್ಕೆ. ಯಾಕೆಂದರೆ ಯಡಿಯೂರಪ್ಪ ರಾಜಕೀಯವಾಗಿ ಬಿದ್ದರೆ ಲಿಂಗಾಯತರ ಕಣ್ಣಿಗೆ ತಕ್ಷಣವೇ ಕಾಣುವ ನಾಯಕ ಎಂದರೆ ಕಾಂಗ್ರೆಸ್ ನ ಎಂ.ಬಿ.ಪಾಟೀಲ.

   ಹೀಗಾಗಿ ಆ ಸಮುದಾಯ ಕಾಂಗ್ರೆಸ್ ಕಡೆ ವಲಸೆ ಹೋಗುತ್ತದೆ. ಹೀಗಾಗಿ ಮಧ್ಯಂತರ ಚುನಾವಣೆಗೆ ಆಸ್ಪದವಾಗದಂತೆ ನೋಡಿಕೊಂಡರೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವೇ ಅಸ್ತಿತ್ವಕ್ಕೆ ಬರುವಂತೆ ಮಾಡಬಹುದು ಎಂಬುದು ಕುಮಾರಸ್ವಾಮಿ ಅವರ ಲೇಟೆಸ್ಟ್ ಪ್ಲಾನು.

   ಮುಂದೇನೋ?

   ಶಿವನೇ! ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ನಲ್ಲಿ ಮತ್ತೆ ಶುರುವಾಯ್ತು ಲಿಂಗಾಯತ ಜಗಳ

   English summary
   HD Kumaraswamy has a super plan to negate Siddaramaiah's plans to topple present JDS-Congress coalition government in Karnataka. HDK is even ready to join hands with BJP to see that Siddaramaiah gets upper hand. Political analysis by RT Vittal Murthy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more