ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇನಿದು ಸೂರ್ಯನ ಸುತ್ತ ವಿಸ್ಮಯಕಾರಿ ಉಂಗುರ?

By ಯಶೋಧರ ಪಟಕೂಟ
|
Google Oneindia Kannada News

ಸೋಮವಾರದಂದು ನೇಸರ ಆಗಸಕ್ಕೇರಿದ ಕ್ಷಣದಿಂದ ಫೇಸ್ ಬುಕ್ ನಲ್ಲಿ, ವಾಟ್ಸಾಪ್ ಗಳಲ್ಲಿ ವಿಶಿಷ್ಟ ಬಗೆಯ ಚಿತ್ರಗಳು ಓಡಾಡುತ್ತಿವೆ. ಅರ್ಧಂಬರ್ಧ ಮೋಡ ಮುಸುಕಿದ ವಾತಾವರಣವನ್ನು ಸೀಳಿಕೊಂಡು ಬರಲೆತ್ನಿಸುತ್ತಿದ್ದ ಸೂರ್ಯನ ಸುತ್ತ ವಿಸ್ಮಯಕಾರಿ ಉಂಗುರ!

ಸೂರ್ಯನ ಸುತ್ತ ಹಲವಾರು ಬಣ್ಣಗಳಿಂದ ತುಂಬಿದ ಆ ಉಂಗುರುವನ್ನು ನೋಡುವುದೇ ಚೆಂದ. ಈ ಚಿತ್ರಣ ನೋಡುತ್ತಿದ್ದಂತೆ, ನೀರಿನಲ್ಲಿ ಅಲೆಯ ಉಂಗುರ... ಭೂಮಿಮೇಲೆ ಹೂವಿನುಂಗುರಾ... ಮನಸೆಳೆದಾ ನಲ್ಲ ಕೊಟ್ಟಾನಲ್ಲಾ... ಕೆನ್ನೆಮೇಲೆ ಪ್ರೇಮದುಂಗುರಾ ಎಂಬ ರೋಮ್ಯಾಂಟಿಕ್ ಹಾಡು ಮನಃಪಟಲದ ಮೇಲೆ ಹಾದು ಹೋಗದೆ ಇರಲು ಸಾಧ್ಯವೇ ಇಲ್ಲ.

ಮಂಗಳ ಗ್ರಹ ಆಯ್ತು, ಈಗ 'ಶುಕ್ರ'ಯಾನಕ್ಕೆ ಇಸ್ರೋ ಸಜ್ಜುಮಂಗಳ ಗ್ರಹ ಆಯ್ತು, ಈಗ 'ಶುಕ್ರ'ಯಾನಕ್ಕೆ ಇಸ್ರೋ ಸಜ್ಜು

ಸೂರ್ಯ ಗ್ರಹಣದ ಸಂದರ್ಭದಲ್ಲಿ ಚಂದ್ರ ಅಡ್ಡ ಬಂದಿದ್ದರಿಂದ ಸೂರ್ಯ ತನ್ನ ಸುತ್ತಲೇ ಸೃಷ್ಟಿಸಿಕೊಳ್ಳುವ 'ಡೈಮಂಡ್ ರಿಂಗ್'ನ ಆಕರ್ಷಣೆ, ಸೌಂದರ್ಯ ಒಂದು ರೀತಿಯದ್ದಾದರೆ, ಹೇಳದೆ ಕೇಳದೆ, ಯಾವುದೇ ಸಂದರ್ಭವೂ ಇಲ್ಲದೆ, ಮೋಡದ ಮರೆಯಲ್ಲಿ ಇಣುಕುವ ಸೂರ್ಯನ ಸುತ್ತಲೂ ಸೃಷ್ಟಿಯಾಗುವ ರಿಂಗ್ ನ ಸೌಂದರ್ಯದ ಅನುಭೂತಿಯೇ ಬೇರೆಯ ರೀತಿಯದ್ದು.

ಒಟ್ಟಿನಲ್ಲಿ ಪ್ರಕೃತಿಯ ಒಡಲಲ್ಲಿ ಅನೂಹ್ಯವಾದ ಚಿತ್ರವಿಚಿತ್ರ ಸಂಗತಿಗಳು ತುಂಬಿರುತ್ತವೆ. ನಾವು ನೋಡಿ, ಅನುಭವಿಸಿ ಆನಂದಿಸಬೇಕು, ಸಾಧ್ಯವಾದರೆ ಕಾರಣ ತಿಳಿದುಕೊಳ್ಳಬೇಕು. ಆದರೆ, ಈ ರೀತಿ ಉಂಗುರ ಸೃಷ್ಟಿಯಾಗುವುದಾದರೂ ಹೇಗೆ? ಇದಕ್ಕೆ ಏನೇನು ಕಾರಣಗಳಿರುತ್ತವೆ? ಕೆಲವೇ ಕ್ಷಣಗಳ ಕಾಲ ಸಂಭವಿಸುವ ಈ ವಿದ್ಯಮಾನಕ್ಕೆ ವೈಜ್ಞಾನಿಕ ಕಾರಣಗಳೇನು? ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ಸೂರ್ಯ ಮಾತ್ರವಲ್ಲ ಚಂದಿರನ ಸುತ್ತಲೂ

ಸೂರ್ಯ ಮಾತ್ರವಲ್ಲ ಚಂದಿರನ ಸುತ್ತಲೂ

ಇಂಥ ಉಂಗುರ ಸೂರ್ಯನ ಸುತ್ತ ಮಾತ್ರವಲ್ಲ ಚಂದಿರನ ಸುತ್ತಲೂ ಸಂಭವಿಸುತ್ತದೆ. ಶೃಂಗಾರ ಕಾವ್ಯದ ಸೃಷ್ಟಿಗೆ ಕಾರಣಕರ್ತನಾದ ಚಂದಿರ ಸುತ್ತ ಉಂಟಾಗುವ ಈ ಉಂಗುರವನ್ನು ಮೂನ್ ರಿಂಗ್ ಅಥವಾ ಮೂನ್ ಹ್ಯಾಲೋ ಎಂದು ಕರೆಯುತ್ತಾರೆ. ಹೆಚ್ಚಾಗಿ ಇದು ಮಳೆಗಾಲದಲ್ಲಿ ಮಳೆಹನಿಯ ಕಣಗಳನ್ನು ಮೋಡಗಳು ತುಂಬಿಕೊಂಡಾಗ ಸಂಭವಿಸುವ ವೈಜ್ಞಾನಿಕ ವಿದ್ಯಮಾನ. ಸೂರ್ಯನ ಕಿರಣಗಳು ಆ ಮಳೆ ಹನಿಯ ಕ್ರಿಸ್ಟಲ್ ಕಣಗಳ ಮೇಲೆ ಬಿದ್ದು, ವಕ್ರೀಭವನ ಉಂಟಾಗಿ ಇಂಥ ವಿಸ್ಮಯಕಾರಿ ಉಂಗುರ ಸೃಷ್ಟಿಯಾಗುತ್ತದೆ. ಇದನ್ನು ವಿಜ್ಞಾನಿಗಳು 22 ಡಿಗ್ರಿ ಹ್ಯಾಲೋಸ್ ಎಂದು ಕರೆಯುತ್ತಾರೆ.

ಉಂಗುರ ಸೃಷ್ಟಿಯಾದರೆ ಮಳೆ ಬರುವ ಸೂಚನೆ

ಉಂಗುರ ಸೃಷ್ಟಿಯಾದರೆ ಮಳೆ ಬರುವ ಸೂಚನೆ

ಸೂರ್ಯ ಅಥವಾ ಚಂದ್ರನ ಸುತ್ತ ಇಂಥ ಉಂಗುರ ಸೃಷ್ಟಿಯಾದರೆ ಅದು ಮಳೆ ಬರುವ ಮುನ್ಸೂಚನೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಅಚ್ಚರಿಯ ಸಂಗತಿಯೆಂದರೆ, ಆಗಸದಲ್ಲಿ ಅಂತಹ ದಟ್ಟ ಮೋಡಗಳೂ ಇರುವುದಿಲ್ಲ. ಇರುವುದು ಬರೀ ಚೆದುರಿದ ಮೋಡಗಳು ಅಷ್ಟೆ. ಆದರೆ, ಬಿರುಗಾಳಿಯೆದ್ದು ಮೋಡಗಳ ಚಲನವಲನ ತೀವ್ರಗೊಂಡಾಗ ಇಂಥ ಉಂಗುರ ಸೃಷ್ಟಿಯಾಗುತ್ತವೆ ಎಂಬ ವಿವರಣೆಯನ್ನು ನೀಡಲಾಗುತ್ತದೆ. ಈ ಮೋಡಗಳು ಕೋಟ್ಯಂತರ ಆಲಿಕಲ್ಲುಗಳನ್ನು ತುಂಬಿಕೊಂಡಿರುತ್ತವೆ. ಈ ಆಲಿಕಲ್ಲುಗಳು ಪ್ರಿಸಂ ಅಥವಾ ಕನ್ನಡಿಯ ರೀತಿಯಲ್ಲಿ ವರ್ತಿಸುತ್ತವೆ. ಸೂರ್ಯನ ಕಿರಣ ಇವುಗಳ ಮೇಲೆ ಬಿದ್ದು ಪ್ರತಿಫಲನ, ವಕ್ರೀಭವನ ಉಂಟಾದಾಗ ಅಚ್ಚರಿಯಾಗುವ ರೀತಿಯಲ್ಲಿ ಉಂಗುರ ಮೂಡಿರುತ್ತದೆ.

ಕಾಮನಬಿಲ್ಲಿನಂತೆ ಕಂಡರೂ ಕಾಮನಬಿಲ್ಲಲ್ಲ

ಕಾಮನಬಿಲ್ಲಿನಂತೆ ಕಂಡರೂ ಕಾಮನಬಿಲ್ಲಲ್ಲ

ಅಂದ ಹಾಗೆ, ಕಾಮನಬಿಲ್ಲಿನಂತೆ ಕಾಣುವ ಈ ಉಂಗುರ ಕಾಮನಬಿಲ್ಲೂ ಅಲ್ಲ. ಕಾಮನಬಿಲ್ಲು ಅರ್ಧ ಚಂದ್ರಾಕೃತಿಯಲ್ಲಿ ಮಾತ್ರ ಕಾಣಿಸುತ್ತದೆ. ಈ ಸೂರ್ಯನ ಸುತ್ತಲಿರುವ ಉಂಗುರದ ಒಳಭಾಗದಲ್ಲಿ ಕೆಂಪು ಮತ್ತು ಹೊರಭಾಗದಲ್ಲಿ ನೀಲಿ ಬಣ್ಣ ಕಾಣಿಸುತ್ತದೆ. ಹಾಗೆಯೆ, ಆ ಉಂಗುರದ ಆವರಣದೊಳಗಿನ ಆಗಸ, ಹೊರಗಿನ ಆಗಸಕ್ಕಿಂತ ಕಪ್ಪಾಗಿಯೂ ಕಾಣಿಸುತ್ತದೆ. ವರ್ಷದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಇಂಥ ವಿದ್ಯಮಾನ ನಡೆದಿರುವ ಚಿತ್ರಗಳನ್ನು ಅಂತರ್ಜಾಲದಲ್ಲಿ ಕಾಣಿಸಬಹುದು. ಆದರೆ, ಪ್ರತಿಬಾರಿ ಮೋಡಗಳು ಸೃಷ್ಟಿಯಾದಾಗ ಈ ಉಂಗುರಗಳು ಉಂಟಾಗುವುದಿಲ್ಲ ಎಂಬುದೇ ವಿಶೇಷ.

ಚೀನಾದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು

ಚೀನಾದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು

ಖ್ಯಾತ ಪುರಾತನ ವಿಜ್ಞಾನಿ ಅರಿಸ್ಟಾಟಲ್ ಹ್ಯಾಲೋಸ್ ಬಗ್ಗೆ ಪ್ರಸ್ತಾಪ ಮಾಡಿದ್ದ. ನಂತರ 1630ರಲ್ಲಿ ಯುರೋಪ್ ನ ವಿಜ್ಞಾನಿ ಕ್ರಿಸ್ಟೋಫ್ ಶೀನರ್ ಎಂಬಾತ ಈ ಉಂಗುರಗಳ ಬಗ್ಗೆ ವಿವರಣೆ ನೀಡಿದ್ದ. ಆದರೆ, ಚೀನಾದ ಪುರಾತನ ಖಗೋಳಶಾಸ್ತ್ರಜ್ಞರು ಇದನ್ನು ಶತಮಾನಗಳ ಕಾಲ ಅಧ್ಯಯನ ಮಾಡಿದ್ದರು. ಅಫಿಷಿಯಲ್ ಹಿಸ್ಟರಿ ಆಫ್ ದಿ ಚೈನೀಸ್ ಡೈನಾಸ್ಟಿ ಎಂಬ ಪುಸ್ತಕದಲ್ಲಿ ಇದರ ಬಗ್ಗೆ ಉಲ್ಲೇಖಿಸಲಾಗಿದೆ. ಇದು ಪ್ರತಿಬಾರಿ ಉಂಗುರದ ರೀತಿಯೇ ಕಾಣಿಸುತ್ತದಂತೇನಿಲ್ಲ. ಲೈಟ್ ಕಂಬದ ದೀಪದ ಬಳಿ ಕಾಣಿಸುವಂತೆ, ನೇರವಾಗಿ ಒಂದು ಕಂಬದಂತೆಯೂ ಕಾಣಿಸಬಹುದು. ನೇಪಾಳದಲ್ಲಿ ಇದನ್ನು ಇಂದ್ರಸಭಾ ಎಂದು ಬಣ್ಣಿಸುತ್ತಾರೆ.

ಸೂರ್ಯನ ಸುತ್ತ ಸುಂದರ ಉಂಗುರ

ಸೂರ್ಯನ ಸುತ್ತ ಸುಂದರ ಉಂಗುರ

ಹೀಗೆ ಸಂಭವಿಸಿದ 24 ಗಂಟೆಯೊಳಗೆ ಮಳೆಯಾಗುತ್ತದೆ ಎಂಬ ಪ್ರತೀತಿಯೂ, ವೈಜ್ಞಾನಿಕ ವಿವರಣೆಯೂ ಇದೆ. ಮುಂಗಾರು ಆರಂಭವಾದರೂ ಬೆಂಗಳೂರಿನ ಆಗಸದ ಮೇಲೆ ಮಳೆ ಸುರಿಸುವಂಥ ಮೋಡಗಳು ಆವರಿಸಿಕೊಂಡಿಲ್ಲ. ಇದರ ಬಗ್ಗೆ ಹವಾಮಾನ ಇಲಾಖೆಯ ತಜ್ಞರೂ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ. ಬಿಸಿಲು ಅಂತಹ ಪ್ರಖರವಾಗಿರದಿದ್ದರೂ ಮಳೆಗಾಲದಲ್ಲಿ ಮಳೆಯಾಗದಿದ್ದರೆ ಹೇಗೆ? ಕಾಮನಬಿಲ್ಲು ಕಮಾನ ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ ಎಂಬ ಹಾಡಿನ ಬದಲು, ಸೂರ್ಯನ ಸುತ್ತ ಸುಂದರವಾದ ಉಂಗುರ ಕಳೆಗಟ್ಟಿದೆ ಎಂದು ಕವಿಗಳು ಮಳೆನೀರ ಹನಿಗಳಂತೆ ಅಕ್ಷರಗಳನ್ನು ಪೋಣಿಸಿ ಹಾಡು ಕಟ್ಟಬಹುದು.

English summary
Have you seen a beautiful ring around the sun in Bengaluru? If not, have a look at these wonderful pictures. This is called Halo around the Sun. This happens when rain clouds hover over the earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X