ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಿಜೆಪಿಯನ್ನು ದುಃಸ್ವಪ್ನವಾಗಿ ಕಾಡಿದ ಎಚ್. ಆರ್ ಭಾರದ್ವಾಜ್

|
Google Oneindia Kannada News

ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೇರ ನಡೆ ನುಡಿಗೆ ಹೆಸರಾಗಿದ್ದರು. ಕೇಂದ್ರ ಮಾಜಿ ಕಾನೂನು ಸಚಿವ, ಕರ್ನಾಟಕ, ಕೇರಳ ರಾಜ್ಯಪಾಲರಾಗಿ ಸಾಕಷ್ಟು ಸದ್ದು ಮಾಡಿದವರು. ಮಾರ್ಚ್ 08ರಂದು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರು ವಿಧಿವಶರಾಗಿದ್ದಾರೆ.

ಕರ್ನಾಟಕ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸಂಪುಟ ಸದಸ್ಯರಿಗೆ ದುಃಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ಯಡಿಯೂರಪ್ಪ ಹಾಗೂ ಭಾರದ್ವಾಜ್ ನಡುವಿನ ಜಟಾಪಟಿ ಇದೀಗ ಇತಿಹಾಸವಾದರೂ ರಾಜ್ಯಪಾಲ ಹುದ್ದೆಯ ಖದರ್, ಆಡಳಿತ ಪಕ್ಷದ ಅಸಹಾಯಕತೆ, ಸಾಂವಿಧಾನಿಕ ಹುದ್ದೆ, ವಿಪಕ್ಷಗಳ ನಡೆ ಬಗ್ಗೆ ಅಧ್ಯಯನ ಮಾಡಲು ಯೋಗ್ಯವಾಗಿದೆ.

ಆದರೆ, ದೇಶ ಕಂಡ ಕಾನೂನು ತಜ್ಞರ ಪೈಕಿ ಹಂಸರಾಜ್ ಭಾರದ್ವಾಜ್ ಅಗ್ರಗಣ್ಯರಾಗಿ ಗುರುತಿಸಲ್ಪಡುತ್ತಾರೆ. ಯುಪಿಎ 1 ಅವಧಿಯಲ್ಲಿ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಒತ್ತು ನೀಡುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟಕ್ಕೆ ಕರೆದೊಯ್ಯಲು ಯತ್ನಿಸಿದವರು. ಅಪ್ಪಟ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿದ್ದ ಎಚ್. ಅರ್ ಭಾರದ್ವಾಜ್ ಹೆಸರು ಬೋಫೋರ್ಸ್ ಹಗರಣದ ಆರೋಪಿಗೆ ನೆರವಾದ ಆರೋಪ ಕೇಳಿ ಬಂದಿತ್ತು.

ಇನ್ನು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಪ್ರತಿ ಹೆಜ್ಜೆಯನ್ನು ಅಳೆದು ತೂಗಿ ವಿವಾದಿತ ಮಸೂದೆಗಳಿಗೆ ಕೊಕ್ ನೀಡಿ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರಿಗೆ ಛೀಮಾರಿ ಹಾಕಿ, ಮುಖ್ಯಮಂತ್ರಿಯನ್ನು ಬಹಿರಂಗವಾಗಿ ''ಚೋರ್'' ಎನ್ನುವ ಮೂಲಕ ಭಾರದ್ವಾಜ್ ಮಾಧ್ಯಮದವರಿಗೆ ಪ್ರತಿನಿತ್ಯ, ಪ್ರತಿ ಕಾರ್ಯಕ್ರಮದಲ್ಲೂ ಸುದ್ದಿ ಮಾಡಲು ಒಂದಿಲ್ಲೊಂದು ಪ್ರಖರ ಡೈಲಾಗ್ ಒದಗಿಸುತ್ತಿದ್ದರು...

ನನ್ನ ಕೈಗೆ ಪೊರಕೆ ಕೊಡಿ, ಕ್ವೀನ್ ಮಾಡ್ತೀನಿ ಎಂದಿದ್ರು

ನನ್ನ ಕೈಗೆ ಪೊರಕೆ ಕೊಡಿ, ಕ್ವೀನ್ ಮಾಡ್ತೀನಿ ಎಂದಿದ್ರು

ಹೀಗೆ ಒಮ್ಮೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಂದೇ ಡೈಲಾಗ್ ಮೂಲಕ ಬಿಬಿಎಂಪಿ ಬೆಚ್ಚುವಂತೆ ಮಾಡಿದ್ದರು.

"ಇವ್ರು(ಬಿಜೆಪಿ ಸರ್ಕಾರ) ಏನು ಮಾಡುತ್ತಿದ್ದಾರೋ ಯಾರಿಗೂ ಗೊತ್ತಿಲ್ಲ, ಬೆಂಗಳೂರು ಗಾರ್ಬೇಜ್ ಸಿಟಿಯಾಗಿದೆ. ಇನ್ನಷ್ಟು ಗುತ್ತಿಗೆದಾರರನ್ನು ಕರೆ ತಂದು ತ್ಯಾಜ್ಯ ವಿಲೇವಾರಿ ಮಾಡುವುದನ್ನು ಬೆಂಗಳೂರು ಉಸ್ತುವಾರಿ ಸಚಿವರು ಮರೆತ್ತಿದ್ದಾರೆ ಎಂದು ಅಂದಿನ ಗೃಹ ಸಚಿವ, ಉಸ್ತುವಾರಿ ಸಚಿವ ಆರ್ ಅಶೋಕ ಅವರಿಗೆ ತಿವಿದಿದ್ದರು" ಎಂದಿದ್ದರು. ಇದಲ್ಲದೆ, ಸರ್ಕಾರದ ಜೊತೆ ಕಸದ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ. ತ್ವರಿತವಾಗಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದೇನೆ ಇನ್ನೇನು ಮಾಡಲು ಸಾಧ್ಯ, ಅವರ ಕೈಲಿ ಆಗಲ್ಲ ಅಂದ್ರೆ, ನನ್ನ ಜೊತೆ 20 ಕೆಲಸಗಾರರನ್ನು ಕೊಡಿ, ಕೈಗೆ ಪೊರಕೆ ಕೊಡಿ ನಾನೇ ರಸ್ತೆಗಿಳಿದು ಕಸ ಗುಡಿಸಿ, ಸ್ವಚ್ಛಗೊಳಿಸುತ್ತೇನೆ" ಎಂದಾಗ ಅಲ್ಲಿದ್ದ ಕೆಲವೇ ಪತ್ರಕರ್ತರು ಮುಖ ಮುಖ ನೋಡಿಕೊಳ್ಳುವಂತಾಗಿತ್ತು.

ರಾಜಕೀಯ -ಕಾಂಗ್ರೆಸ್ ಪಕ್ಷದ ನಿಷ್ಠೆ

ರಾಜಕೀಯ -ಕಾಂಗ್ರೆಸ್ ಪಕ್ಷದ ನಿಷ್ಠೆ

ಹರಿಯಾಣದ ರೋಹ್ಟಕ್ ಜಿಲ್ಲೆಯ ಗಡಿ ಸಾಂಪ್ಲಾ ಗ್ರಾಮದಲ್ಲಿ 1937 ಮೇ 17ರಲ್ಲಿ ಜನಿಸಿದರು. ಭಾರದ್ವಾಜ್ ಮೂಲತಃ ಕಾಂಗ್ರೆಸ್ ಪಕ್ಷದವರು. ಸುದೀರ್ಘ ಕಾಲ ಅಧಿಕಾರ ಚಲಾಯಿಸುವ ಅವಕಾಶ ಪಡೆದುಕೊಂಡವರು. ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವರಾಗಿ 9 ವರ್ಷ ಸಂಪುಟ ದರ್ಜೆ ಸಚಿವರಾಗಿ 5 ವರ್ಷ ಅಧಿಕಾರದಲ್ಲಿದ್ದರು. ಅಶೋಕ್ ಕುಮಾರ್ ಸೇನ್ ನಂತರ ದೀರ್ಘ ಕಾಲ ಕೇಂದ್ರ ಸಚಿವರಾಗಿದ್ದವರು ಭಾರದ್ವಾಜ್ ಅವರು ಎನ್ನಬಹುದು.
* ಕರ್ನಾಟಕದ ರಾಜ್ಯಪಾಲರಾಗಿ 25 ಜೂನ್ 2009ರಿಂದ 28 ಜೂನ್ 2014ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
* ಮೇ 2004ರಿಂದ ಮೇ 2008ರವರೆಗೆ ಭಾರತದ ಕಾನೂನು ಮಂತ್ರಿಯಾಗಿದ್ದರು.

ಯಡಿಯೂರಪ್ಪ v/s ಹಂಸರಾಜ್

ಯಡಿಯೂರಪ್ಪ v/s ಹಂಸರಾಜ್

ಭೂ ಹಗರಣ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ 15 ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ ಮೇಲೆ ರಾಜ್ಯದಲ್ಲಿ ಹೊತ್ತಿಕೊಂಡ ಹೊಗೆ ನವದೆಹಲಿ ತಲುಪಿ, ರಾಷ್ಟ್ರಪತಿ ಅಂಗಳವನ್ನೂ ತಲುಪಿತ್ತು.

ರಾಜ್ಯದಲ್ಲಿರಾಜಕೀಯ ಬಿಕ್ಕಟ್ಟು ಎದುರಾಗಿದೆ ಎಂದು ಹೇಳಿ, ರಾಷ್ಟ್ರಪತಿ ಆಳ್ವಿಕೆಗೆ ಎರಡು ಬಾರಿ ಶಿಫಾರಸು ಮಾಡಿದ್ದರು. ಹಂಸರಾಜ್ ಭಾರದ್ವಾಜ್ ರನ್ನು ಪ್ರತಿಷ್ಠಿತ ಸ್ಥಾನದಿಂದ ಕಿತ್ತುಹಾಕಬೇಕೆಂಬ ಚಳವಳಿಯನ್ನೂ ಬಿಜೆಪಿ ಆರಂಭಿಸಿತ್ತು. ಎಲ್ ಕೆ ಅಡ್ವಾಣಿ ಸೇರಿದಂತೆ ಅನೇಕ ಹಿರಿಯ ನಾಯಕರು ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಡೆದಿತ್ತು. ಆದರೆ, ಯಾವುದಕ್ಕೂ ಅಂಜದ ಹಂಸರಾಜ್ ಅವರು ಕರ್ನಾಟಕ ಸರ್ಕಾರದಲ್ಲಿ ಭ್ರಷ್ಟರೇ ತುಂಬಿದ್ದಾರೆ, ಅಕ್ರಮ ಗಣಿಗಾರಿಕೆಯಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ, ಸಿಎಂ ಚೋರ್ ಎಂದಿದ್ದರು.

ಎಂ ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ತಡೆಹಿಡಿದಿದ್ದರು. ಮೈಸೂರು ವಿವಿ ವೈಸ್ ಛಾನ್ಸಲರ್ ವಿಜಿ ತಳವಾರ್ ಅವರ ವಿರುದ್ಧ ವೈಯಕ್ತಿಕ ನಿಂದನೆಯಲ್ಲಿ ತೊಡಗಿದ್ದರು. ಹಲವು ಮಸೂದೆಗಳಿಗೆ ಸಹಿ ಹಾಕದೆ ವಾಪಸ್ ಕಳಿಸಿದ್ದರು.

ಕಂಸರಾಜ್, ಧ್ವಂಸರಾಜ್ ಎಂದಿದ್ದ ಬಿಜೆಪಿ ಮಂದಿ

ಕಂಸರಾಜ್, ಧ್ವಂಸರಾಜ್ ಎಂದಿದ್ದ ಬಿಜೆಪಿ ಮಂದಿ

ಗಾಲಿ ರೆಡ್ಡಿ ಹಾಗೂ ಪರಿವಾರದವರನ್ನು ಭ್ರಷ್ಟರೆಂದು ಕರೆದು ಅವರೆಲ್ಲರನ್ನು ಸಚಿವ ಸಂಪುಟದಿಂದ ತೆಗೆದು ಹಾಕುವಂತೆ ರಾಜ್ಯಪಾಲರು ಪಟ್ಟುಹಿಡಿದಿದ್ದರು. ರಾಜ್ಯಪಾಲರ ಪಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಸಿಡಿಮಿಡಿಗೊಂಡಿದ್ದ ಅಂದಿನ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ, ''ಎಚ್.ಆರ್. ಭಾರದ್ವಜ್ ಅವರು ಹಂಸರಾಜ್ ಅಲ್ಲ, ಕಂಸರಾಜ್'' ಎಂದಿದ್ದರು. ಇತಿಹಾಸದಲ್ಲಿ ಕಂಸರಾಜನಿಗೆ ಆದ ಗತಿಯೇ ಹಂಸರಾಜ್ ಅವರಿಗೂ ಆಗಲಿದೆ. ಇದೇ ಫಲಿತಾಂಶ ಕಾಂಗ್ರೆಸ್‌ಗೂ ಸಿಗಲಿದೆ ಎಂದು ಅವರು ವ್ಯಂಗ್ಯವಾಡಿದ್ದರು. ಸಿಟಿ ರವಿ ಅವರು ಹಂಸರಾಜ್ ಅವರಿಗೆ ಅರಳು ಮರಳು ಎಂದಿದ್ದರು. ಕೆ.ಎಸ್ ಈಶ್ವರಪ್ಪ ಅವರು ಹಂಸರಾಜ್ ಅವರನ್ನು ಧ್ವಂಸರಾಜ್ ಎಂದಿದ್ದರು.

ಸರಣಿ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ

ಸರಣಿ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸರಣಿಯಾಗಿ ಸಿಎಂಗಳಿಗೆ ಪ್ರಮಾಣ ವಚನ ಬೋಧಿಸಿದ ದಾಖಲೆ ಹೊಂದಿದ್ದಾರೆ. ಲೋಕಾಯುಕ್ತರು, ಉಪಲೋಕಾಯುಕ್ತರು, ಹೈಕೋರ್ಟ್ ಮುಖ್ಯನ್ಯಾಯಾಧೀಶರುಗಳು ಹೀಗೆ ಸಾಮಾನ್ಯವಾಗಿ ರಾಜ್ಯಪಾಲರಾದವರು ತಮ್ಮ ಅವಧಿಯಲ್ಲಿ ತಲಾ ಒಬ್ಬೊಬ್ಬರಿಗೆ ಪ್ರತಿಜ್ಞಾವಿಧಿ ಬೋಧಿಸಬಹುದು. ಆದರೆ ಭಾರದ್ವಾಜರು ಅನೇಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದರು.ಬಿಎಸ್ ಯಡಿಯೂರಪ್ಪ - 2008ರ ಮೇ 8ರಂದು, ಸದಾನಂದ ಗೌಡ - 2011 ಆಗಸ್ಟ್ 4, ಜಗದೀಶ್ ಶೆಟ್ಟರ್ - 2012ರ ಜುಲೈ 12, ಸಿದ್ದರಾಮಯ್ಯ - 2013 ಮೇ 13.

ಅರುಣ್ ಶೌರಿ v/s ಭಾರದ್ವಾಜ್

ಅರುಣ್ ಶೌರಿ v/s ಭಾರದ್ವಾಜ್

ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಮತ್ತು ಭಾರದ್ವಾಜ್ ನಡುವೆ ಒಮ್ಮೆ ಮಾತಿನ ಚಕಮಕಿ ನಡೆದ ಬಗ್ಗೆ ಹಿರಿಯ ಪತ್ರಕರ್ತ ಶೇಖರ್ ಗುಪ್ತ ಸ್ಮರಿಸಿದ್ದಾರೆ. ರಾಜೀವ್ ಗಾಂಧಿ ಮಾನನಷ್ಟ ಮಸೂದೆ ಬಗ್ಗೆ ಚರ್ಚೆ ಆಗುತ್ತಿದ್ದಾಗ, ಭಾರದ್ವಾಜ್ ಅವರು ಅರುಣ್ ಶೌರಿಗೆ. 'ನಿಮ್ಮ ಅಪ್ಪ ನ್ಯಾಯಾಧೀಶರಾಗಿದ್ದ ರೋಹ್ಟಕ್ ಕೋರ್ಟಿನಲ್ಲಿ ನಾನು ಲಾ ಪ್ರಾಕ್ಟೀಸ್ ಮಾಡಿರುವೆ. ಸ್ವಲ್ಪ ಮರ್ಯಾದೆ ಕೊಟ್ಟು ಮಾತನಾಡಿ' ಎಂದು ಹೇಳಿದರು.

ಅದಕ್ಕೆ ಶೌರಿ ಪ್ರತ್ಯುತ್ತರ ನೀಡಿ: 'ನಿನ್ನಂಥ ಗ್ರಾಮೀಣ ವಕೀಲನಿಗೆ ಇಷ್ಟು ಮಾತ್ರದ ಕಾನೂನು ತಿಳಿವಳಿಕೆಯಾದರೂ ಇರಬೇಕಿತ್ತು' ಎಂದಿದ್ದರಂತೆ.

ಪಂಡಿತ್ ಜವಾಹರ ಲಾಲ್ ಆಪ್ತರಾಗಿದ್ದವರು

ಪಂಡಿತ್ ಜವಾಹರ ಲಾಲ್ ಆಪ್ತರಾಗಿದ್ದವರು

ಹಂಸರಾಜ್ ಭಾರದ್ವಾಜ್ ಅವರ ತಂದೆ ದಿವಂಗತ ಪಂಡಿತ ಜಗನ್ ನಾಥ್ ಪ್ರಸಾದ್ ಅವರು ಪಂಡಿತ್ ಜವಾಹರ ಲಾಲ್ ನೆಹರೂ ಅವರಿಗೆ ಭದ್ರತಾಧಿಕಾರಿಯಾಗಿದ್ದರು. 1960ರಲ್ಲಿ ಪ್ರಫುಲ್ಲತಾ ಅವರೊಂದಿಗೆ ಹಂಸರಾಜ್ ಭಾರದ್ವಾಜ್ ಅವರ ವಿವಾಹ ನೆರವೇರಿತು. ದಂಪತಿಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಹಂಸರಾಜ್ ಭಾರದ್ವಾಜರ ಪತ್ನಿ, ಪುತ್ರ ಮತ್ತು ಒಬ್ಬ ಪುತ್ರಿ ನ್ಯಾಯವಾದಿಗಳಾಗಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಸ್ಥಾಪಿಸಿದ ವಿಶೇಷ ನ್ಯಾಯಾಲಯಗಳಲ್ಲಿ ಅಂದಿನ ಪ್ರಧಾನಿ, ದಿವಂಗತ ಇಂದಿರಾಗಾಂಧಿ ಅವರ ಪರ ಬಲವಾಗಿ ವಾದ ಮಂಡಿಸಿದ್ದರು.

ಕಾಂಗ್ರೆಸ್ ಪಕ್ಷದ ಪರ ನಿಷ್ಠೆ ತೋರಲು ಅಂದಿನ ಚುನಾವಣಾ ಆಯುಕ್ತ ನವೀನ್ ಚಾವ್ಲಾರನ್ನು ಕೆಳಗಿಳಿಸಲು ಯತ್ನಿಸಿದ್ದರು. ಬೋಫೋರ್ಸ್ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ ಬ್ಯಾಂಕ್ ಖಾತೆ ಡೀ ಫ್ರೀಜ್ ಮಾಡಲು ಯತ್ನಿಸಿದ್ದರು. ಸಿಬಿಐಗೆ ತಿಳಿಸದೆ ಪ್ರಮುಖ ಆರೋಪಿಯ ಖಾತೆಗೆ ಕೈ ಹಾಕಿದ್ದು ಭಾರಿ ವಿವಾದ ಎಬ್ಬಿಸಿತ್ತು.

English summary
Former Governor of Karnataka, Union Minister Hansraj Bhardwaj was nightmare to Karnataka BJP and then CM BS Yediyurappa. Here recall of his tenure in Karnataka as Governor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X