ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೀನಾಯವಾಗಿ ಸೋತಿದ್ಯಾಕೆ?

|
Google Oneindia Kannada News

ಹಾವೇರಿ, ನ. 02: ನಿರೀಕ್ಷೆಯಂತೆ ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಅಭೂತಪೂರ್ವ ಗೆಲವು ಸಾಧಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಅದರಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾನಗಲ್ ಉಪಚುನಾವಣೆಯ ಸೋಲು ಅತ್ಯಂತ ದೊಡ್ಡ ಹಿನ್ನಡೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಉಪಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ವಿಜಯಪುರದ ಸಿಂದಗಿಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿ, ಹಾನಗಲ್‌ನಲ್ಲಿ ಸೋಲು ಕಾಣಲು ಹಲವು ಕಾರಣಗಳಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸತತ ಪ್ರಚಾರದ ಬಳಿಕವೂ ಹಾನಗಲ್‌ನಲ್ಲಿ ಬಿಜೆಪಿ ಸೋತಿದೆ. ಇಡೀ ಸರ್ಕಾರವೇ ಹಾನಗಲ್‌ನಲ್ಲಿ ಬೀಡು ಬಿಟ್ಟಿತ್ತು. ಅದರಲ್ಲಿಯೂ ಬಿಜೆಪಿಗೆ ವಲಸೆ ಬಂದು ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾದವರು ಹಾನಗಲ್‌ನಲ್ಲಿಯೇ ಉಳಿದುಕೊಂಡು ಪ್ರಚಾರ ನಡೆಸಿದ್ದರು. ಇಷ್ಟೆಲ್ಲ ಶಕ್ತಿ ಇದ್ದಾಗಲೂ ಹಾನಗಲ್‌ನಲ್ಲಿ ಬಿಜೆಪಿ ಸೋತಿದೆ. ಆ ಮೂಲಕ ಹಾನಗಲ್ ಕ್ಷೇತ್ರದ ಮತದಾರರು ಪ್ರಜ್ಞಾವಂತರು ಎಂಬುದನ್ನು ನಾಡಿಗೆ ತೋರಿಸಿ ಕೊಟ್ಟಿದ್ದಾರೆ ಎನ್ನಲು ಕಾರಣಗಳೇನು? ಜೊತೆಗೆ ಬಿಜೆಪಿ ಸೋಲಿಗೆ ಕಾರಣಗಳೇನು? ಮುಂದಿದೆ ಸಂಪೂರ್ಣ ವಿವರ.

ಕೊನೆಯ ಕ್ಷಣದಲ್ಲಿ ಪ್ರಯತ್ನ ನಡೆಸಿದ್ದ ಯಡಿಯೂರಪ್ಪ?

ಕೊನೆಯ ಕ್ಷಣದಲ್ಲಿ ಪ್ರಯತ್ನ ನಡೆಸಿದ್ದ ಯಡಿಯೂರಪ್ಪ?

ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಅವರ ನಿಧನದಿಂದ ತೆರವಾಗಿದ್ದ ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಚುನಾವಣೆ ಎದುರಿಸುವಲ್ಲಿ ಪ್ರತಿ ಹಂತದಲ್ಲಿಯೂ ಸೋಲಿನ ಮುನ್ಸೂಚನೆ ಕಂಡು ಬಂದಿತ್ತು. ಹೀಗಾಗಿಯೇ ಬಹಿರಂಗ ಪ್ರಚಾರದ ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒತ್ತಾಯ ಮಾಡಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಶಿಕಾರಿಪುರದಿಂದ ಕರೆಯಿಸಿಕೊಂಡು ಹಾನಗಲ್‌ನಲ್ಲಿ ರೋಡ್‌ ಶೋ ಮಾಡಿಸಿದ್ದರು. ಆ ಮೂಲಕ ಮತದಾರರ ಮನ ಸೆಳೆಯಲು ಅಂತಿಮ ಪ್ರಯತ್ನ ನಡೆಸಿದ್ದರು. ಬಹುಶಃ ಆಗಲೇ ಸಿಎಂ ಬೊಮ್ಮಾಯಿ ಅವರಿಗೆ ಸೋಲಿನ ಮುನ್ಸೂಚನೆ ಸಿಕ್ಕಿತ್ತು.

ಹೀಗಾಗಿ ಪಕ್ಕದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವುದು ಬಸವರಾಜ ಬೊಮ್ಮಾಯಿ ಅವರಿಗೆ ಆಗುವ ಹಿನ್ನಡೆಯೆಂದೆ ಭಾವಿಸಿ ಯಡಿಯೂರಪ್ಪ ಅವರೂ ಹಾನಗಲ್‌ಗೆ ಬಂದು ರೋಡ್‌ ಶೋ ನಡೆಸಿದ್ದರು. ಆದರೆ ಮತದಾರರು ಯಡಿಯೂರಪ್ಪ ಅವರ ಮನವಿಗೂ ಮಣೆ ಹಾಕಿಲ್ಲ. ಅದಕ್ಕೆ ಕಾರಣಗಳು ಹಲವಿವೆ.

ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದ ಬಿಜೆಪಿ ಹೈಕಮಾಂಡ್!

ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದ ಬಿಜೆಪಿ ಹೈಕಮಾಂಡ್!

ಹಾನಗಲ್ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿಯೇ ಬಿಜೆಪಿ ಎಡವಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀನಿವಾಸ ಮಾನೆ ಅವರೂ ಹೊರಗಿನವರೇ. ಆದರೆ ಕ್ಷೇತ್ರದ ಮತದಾರರಿಗೆ ಮಾನೆ ಹೊರಗಿನವರು ಎಂಬ ಭಾವನೆ ಬರದಂತೆ ಕಳೆದ ನಾಲ್ಕೈದು ವರ್ಷಗಳಿಂದ ಅಲ್ಲಿಯೇ ಉಳಿದುಕೊಂಡ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಅವರು ಚುನಾವಣೆಯಲ್ಲಿ ಗೆದ್ದು ಶಾಸಕರಾಗಲು ಬಂದವರು ಎಂಬ ಭಾವನೆ ಕ್ಷೇತ್ರದ ಮತದಾರರಲ್ಲಿ ಬಂದಿತ್ತು. ಅದು ಕೂಡ ಬಿಜೆಪಿ ಸೋಲಿಗೆ ಪ್ರಮುಖ ಕಾರಣ. ಜೊತೆಗೆ ಶಿವರಾಜ ಸಜ್ಜನರ್ ಮೇಲಿದ್ದ ಹಾವೇರಿ ಜಿಲ್ಲೆ ಅದರಲ್ಲಿಯೂ ಹಾನಗಲ್ ತಾಲೂಕಿನ ಕಬ್ಬು ಬೆಳೆಗಾರರ ಸಿಟ್ಟು ಬಿಜೆಪಿ ಮೇಲೆ ತಿರುಗಿತ್ತು. ಅದಕ್ಕೆ ಕಾರಣವಾಗಿದ್ದು ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತರು.

ಶಿವರಾಜ ಸಜ್ಜನರ್‌ಗೆ ತಟ್ಟಿತಾ ಕಬ್ಬು ಬೆಳೆಗಾರರ ಶಾಪ?

ಶಿವರಾಜ ಸಜ್ಜನರ್‌ಗೆ ತಟ್ಟಿತಾ ಕಬ್ಬು ಬೆಳೆಗಾರರ ಶಾಪ?

ಕಳೆದ ಎರಡು ದಶಕಗಳ ಹಿಂದೆ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿ ಆಗಲು ಹಾಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಕಾರಣ ಎಂಬ ಅಸಮಾಧಾನ ತಾಲೂಕಿನ ರೈತರಲ್ಲಿತ್ತು. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದೆ ಶಿವರಾಜ ಸಜ್ಜನರ್ ಅವರನ್ನು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ಕಣಕ್ಕಿಳಿಸಿದ್ದು ಮತ್ತೊಂದು ಕಾರಣ. ಸಂಗೂರು ಸಕ್ಕರೆ ಕಾರ್ಖಾನೆ ದಿವಾಳಿಯಾದಾಗ ನಿಜಕ್ಕೂ ಸಂಕಷ್ಟಕ್ಕೆ ಒಳಗಾಗಿದ್ದು ಹಾಗನಲ್ ತಾಲೂಕಿನ ದೊಡ್ಡ, ಸಣ್ಣ ಹಾಗೂ ಅತಿಚಿಕ್ಕ ರೈತರು. ಆಗ ಕಬ್ಬು ಹಾಗೂ ಭತ ಹಾನಗಲ್ ತಾಲೂಕಿನ ಪ್ರಮುಖ ಬೆಳೆಗಳಾಗಿದ್ದವು. ರೈತರು ಕಬ್ಬು ಬೆಳೆಯುವದರೊಂದಿಗೆ ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದರು. ಆದರೆ ಅದಕ್ಕೆ ಕಲ್ಲಿ ಹಾಕಿದ್ದು ಸಜ್ಜನರ್ ಎಂಬ ಆರೋಪವನ್ನು ಈಗಲೂ ರೈತರು ಮಾಡುತ್ತಾರೆ. ಇದು ಕೂಡ ಬಿಜೆಪಿ ಸೋಲಿಗೆ ಮತ್ತೊಂದು ಪ್ರಮುಖ ಕಾರಣ.

ಕೊರೊನಾ ವೈರಸ್‌ ಸಂಕಷ್ಟದಲ್ಲಿ ಜನರೊಂದಿಗಿದ್ದ ಮಾನೆ!

ಕೊರೊನಾ ವೈರಸ್‌ ಸಂಕಷ್ಟದಲ್ಲಿ ಜನರೊಂದಿಗಿದ್ದ ಮಾನೆ!

ಜೊತೆಗೆ ಕೊರೊನಾ ವೈರಸ್ ಕೂಡ ಬಿಜೆಪಿ ಸೋಲಿಗೆ ಮತ್ತೊಂದು ಕಾರಣ. ಅದರೊಂದಿಗೆ ಲಿಂಗಾಯತ ಮತಗಳು ವಿಭಜನೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೊರೊನಾ ವೈರಸ್ ಸಂಕಷ್ಟ ಕಾಲದಲ್ಲಿ ಸಿಎಂ ಉದಾಸಿ ಅವರೂ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಸಂಸದ ಶಿವಕುಮಾರ್ ಉದಾಸಿ ಅವರು ಸಹಜವಾಗಿಯೇ ತಮ್ಮ ತಂದೆ ಸಿಎಂ ಉದಾಸಿ ಅವರನ್ನು ನೋಡಿಕೊಳ್ಳಲು ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಆಗ ಅಕ್ಷರಶಃ ಅನಾಥರಾಗಿದ್ದು ಹಾನಗಲ್ ತಾಲೂಕಿನ ಜನರು. ಇಡೀ ತಾಲೂಕಿನಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ ಜನರು ತೀವ್ರತರವಾದ ಸಮಸ್ಯೆಗಳನ್ನು ಎದುರಿಸಿದ್ದರು.

ಜನರಿಗೆ ಸಹಾಯ ಹಸ್ತ, ಲಿಂಗಾಯತ ಮತಗಳ ವಿಭಜನೆ!

ಜನರಿಗೆ ಸಹಾಯ ಹಸ್ತ, ಲಿಂಗಾಯತ ಮತಗಳ ವಿಭಜನೆ!

ಆಗ ಜನ-ಸಾಮಾನ್ಯರ ಸಹಾಯಕ್ಕೆ ನಿಂತಿದ್ದು ಶ್ರೀನಿವಾಸ ಮಾನೆ ಅವರು. ಕೊರೊನಾ ಎರಡು ಅಲೆಗಳ ಸಂಕಷ್ಟದ ಕಾಲದಲ್ಲಿ ತಾಲೂಕಿನ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ್ದು, ಮೇಲ್ವರ್ಗದ ಜನರಿಗೆ ಆಸ್ಪತ್ರೆ ಅನುಕೂಲ ಮಾಡಿಕೊಟ್ಟಿದ್ದು, ಜೊತೆಗೆ ಆಹಾರವಿಲ್ಲವದವರಿಗೆ ಆಹಾರ ಕೊಟ್ಟಿದ್ದನ್ನು ಜನರು ಮರೆಯಲಿಲ್ಲ. ತಮ್ಮ ಮತಗಳನ್ನು ಮಾನೆ ಅವರಿಗೆ ಕೊಡುವ ಮೂಲಕ ಹಾನಗಲ್ ಜನರು ಕೃತಜ್ಞತೆ ಮೆರೆದಿದ್ದಾರೆ ಎನ್ನಬಹುದಾಗಿದೆ. ಜೊತೆಗೆ ಮೊದಲ ಬಾರಿ ಕ್ಷೇತ್ರದಲ್ಲಿ ಲಿಂಗಾಯತ ಮನತಗಳು ವಿಭಜನೆ ಆಗಿವೆ. ಪಂಚಮಸಾಲಿ ಲಿಂಗಾಯತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗಿವೆ ಎಂಬ ಮಾಹಿತಿಯಿದೆ. ಈ ಎಲ್ಲ ಕಾರಣಗಳಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದಿದ್ದಾರೆ ಎಂಬ ವಿಶ್ಲೇಷಣೆಗಳಿವೆ.

ಹಾನಗಲ್‌ ಉಪ ಚುನಾವಣೆಯಲ್ಲಿ ತಮ್ಮ ಗೆಲುವಿನ ಕುರಿತು ಪ್ರತಿಕ್ರಿಯೆ ಕೊಟ್ಟಿರುವ ಶ್ರೀನಿವಾಸ ಮಾನೆ ಅವರು, "ಹಾನಗಲ್‌ನಲ್ಲಿ ಜನಬಲ ಗೆದ್ದಿದೆ. ಹಣ ಬಲ ಸೋತಿದೆ. ಹಾನಗಲ್ ಜನರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುವೆ. ನಮ್ಮ ನಾಯಕರ ಪರಿಶ್ರಮ ಹಾಕಿದ್ದಾರೆ. ಸರ್ಕಾರದ ತಂತ್ರ ಮಣಿಸಿದ್ದಾರೆ. ಜನರು ಸರ್ಕಾರದ ಜನವಿರೋಧಿ ನೀತಿ. ದುರಾಡಳಿತ ತಿರಸ್ಕಾರ ಮಾಡಿದ್ದಾರೆ. ಇನ್ನಾದ್ರು ಜನರ ಕಲ್ಯಾಣ ಮಾಡಲಿ. ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ." ಎಂದಿದ್ದಾರೆ.

English summary
Hanagal By Election Result 2021: The reasons behind BJP candidate defeat in hangal constituency. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X