ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರು ಪರಂಪರೆಯನ್ನು ಸ್ಮರಿಸಿರುವ ವ್ಯಾಸಪೂರ್ಣಿಮೆಯ ಮಹತ್ವ

By ಗುರುರಾಜ್ ಪೋಶೆಟ್ಟಿಹಳ್ಳಿ
|
Google Oneindia Kannada News

ಅಷಾಢ ಶುಕ್ಲಪೂರ್ಣಿಮೆಯನ್ನು ವ್ಯಾಸಪೂರ್ಣಿಮೆಯೆಂದೂ ಗುರುಪೂರ್ಣಿಮೆಯೆಂದೂ ಕರೆಯುತ್ತಾರೆ. ನಮಗೆ ವಿದ್ಯೆಯನ್ನು ನೀಡಿ ಬಾಳಿಗೆ ಬೆಳಕನ್ನು ನೀಡಿದ ಎಲ್ಲ ಗುರುಪರಂಪರೆಯನ್ನು ಸ್ಮರಿಸಿ ಗೌರವಿಸುವ ದಿನವೇ ಗುರುಪೂರ್ಣಿಮೆ. ಗು ಎಂದರೆ ಕತ್ತಲೆ, ಅವಿದ್ಯೆ ; ಅದನ್ನು ಹೋಗಲಾಡಿಸುವವನೇ ಗುರು.

ಜೀವನಕ್ಕೆ ವಿದ್ಯೆಯ ನೆರವು ಇಲ್ಲದಿದ್ದರೆ ಬಾಳಿನ ಹಾದಿ ಸುಗಮವಾಗದು. ನಮ್ಮ ಗುರಿಯನ್ನು ತಲುಪಲು ಅರಿವಿನ ಬೀಜವನ್ನು ನಮ್ಮಲ್ಲಿ ಬಿತ್ತುವವನೇ ಗುರು. ಅಂಥ ಗುರುವನ್ನು ಸ್ಮರಿಸಿ ಆರಾಧಿಸಬೇಕಾದ್ದು ನಮ್ಮ ಕರ್ತವ್ಯ. ದಕ್ಷಿಣಮೂರ್ತಿಯನ್ನು ಆದಿಗುರು ಎಂದು ನಮ್ಮ ಪರಂಪರೆಯಲ್ಲಿ ಸ್ವೀಕರಿಸಲಾಗಿದೆ. ವ್ಯಾಸಪೂರ್ಣಿಮೆಯ ದಿನ ಸಂನ್ಯಾಸಿಗಳು ಚಾತುರ್ಮಾಸ್ಯ ವ್ರತವನ್ನು ಆರಂಭಿಸುತ್ತಾರೆ. ಇದೂ ಕೂಡ ವಿದ್ಯೆಯ ಅನುಸಂಧಾನಕ್ಕೆ ಪೂರಕವಾಗಿದೆ.

ಲೌಕಿಕ ವಿದ್ಯೆಯನ್ನು ನೀಡಿದ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಹೀಗಾಗಿ ಎಲ್ಲ ಗುರುಗಳನ್ನೂ ಆರಾಧಿಸುವ ಪರ್ವದಿನವೇ ಗುರುಪೂರ್ಣಿಮೆ.

ಗುರುಪೂರ್ಣಿಮೆ ಕೇವಲ ವೈದಿಕ ಸಂಪ್ರದಾಯಕ್ಕಷ್ಟೇ ಮೀಸಲಾದ ಪರ್ವದಿನವಲ್ಲ ; ಜೈನ, ಬೌದ್ಧ ಮುಂತಾದ ಎಲ್ಲ ಪಂಥದವರೂ ಗುರು ಪೂರ್ಣಿಮೆಯನ್ನು ಆಚರಿಸುವುದುಂಟು. ಸಿದ್ಧಾರ್ಥನಾಗಿದ್ದವನು ಬುದ್ಧನಾಗಿ ಮೊದಲ ಧರ್ಮ ಪ್ರವಚನವನ್ನೂ ನೀಡಿದ ದಿನವೇ ಆಷಾಢಹುಣ್ಣಿಮೆ.

ದಕ್ಷಿಣಾಮೂರ್ತಿ ಎಲ್ಲ ಅರಿವಿನ ಮೂಲಪುರುಷ; ಜ್ಞಾನ ಎನ್ನುವುದು ಎಲ್ಲ ಕಾಲಕ್ಕೂ ಶಕ್ತಿಶಾಲಿಯಾದದ್ದು ಎನ್ನುವುದನ್ನು ಸಂಕೇತಿಸುವಂತೆ ಅವನು ತಾರುಣ್ಯದಲ್ಲಿ ಬೆಳಗುತ್ತಿರುವವನು. ಭಗವಾನ್ ವ್ಯಾಸರು ವೇದವನ್ನು ವಿಂಗಡಿಸಿ ಜ್ಞಾನದ ಅನುಸಂಧಾನಕ್ಕೆ ನೆರವಾದವರು. ಮಾತ್ರವಲ್ಲ ಮಹಾಭಾರತ ಮತ್ತು ಪುರಾಣಗಳನ್ನು ರಚಿಸಿ ಜ್ಞಾನಪ್ರಸಾರವನ್ನು ನಿರಂತರವಾಗಿ ಮಾಡುತ್ತಿರುವವರು. ಬುದ್ಧ ಜಗತ್ತಿನ ದುಃಖದ ಮೂಲವನ್ನು ಕಂಡುಹಿಡಿದು ಅದನು ಹೋಗಲಾಡಿಸುವ ದಾರಿಯನ್ನೂ ಸೂಚಿಸಿದವನು.

ಗುರು ಶಿಷ್ಯ ಪರಂಪರೆಗೆ ಗೌರವ ಮನ್ನಣೆಗಳು

ಗುರು ಶಿಷ್ಯ ಪರಂಪರೆಗೆ ಗೌರವ ಮನ್ನಣೆಗಳು

ಗುರು ಶಿಷ್ಯ ಪರಂಪರೆಗೆ ಗೌರವ ಮನ್ನಣೆಗಳು ಈಗಲೂ ಇವೆಯೇ ಎಂದರೆ ಸಂಪೂರ್ಣ ಇಲ್ಲವೆನ್ನಲಾಗದು. ಅಪರೂಪಕ್ಕೆಂಬಂತೆ ಅಂತಹ ಗುರುಗಳೂ ಇದ್ದಾರೆ, ಅಂತಹ ಶಿಷ್ಯರೂ ಇದ್ದಾರೆ. ಆದರೆ ಅವರು ಅತಿ ಅಲ್ಪಸಂಖ್ಯಾತರೆಂಬುದೇ ಇಂದಿನ ದುರಂತ. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ರೂ ತಾವು ಕಲಿತ ಪ್ರೈಮರಿ ಶಾಲೆಯ ಮಾಸ್ತರ ಬಗೆಗೆ ಭಕ್ತಿ ಗೌರವಗಳನ್ನು ತೋರುವವರು ಈಗಲೂ ಸಿಗುತ್ತಾರೆ.ಅದಕ್ಕೆ ಕಾರಣ ಆ ಗುರುಗಳು ನೀಡಿದ ವಿದ್ಯೆ; ಜೇಡಿಮಣ್ಣಿನಂತಿದ್ದ ತನ್ನನ್ನು ತಿದ್ದಿ ತೀಡಿ ಸುಂದರ ಮೂರ್ತಿಯನ್ನಾಗಿ ರೂಪಿಸಿದ ಅವರ ಕೃಪಾಕಟಾಕ್ಷ.

ಪ್ರಾಚೀನ ಕಾಲದಲ್ಲಿ ವಿದ್ಯಾರ್ಜನೆಗಾಗಿ ಶಿಷ್ಯ ಗುರುವಿನ ಬಳಿಗೇ ಹೋಗುತ್ತಿದ್ದ, ಅವನ ಪದತಲದಲ್ಲಿ ಕುಳಿತು ವಿದ್ಯಾರ್ಜನೆಯನ್ನು ಒಂದು ತಪಸ್ಸೆಂದು ಭಾವಿಸಿ ಕಲಿಯುತ್ತಿದ್ದ. ಆ ವಿದ್ಯೆಯೋ ಲೌಕಿಕ ಪ್ರಯೋಜನಕ್ಕಿಂತ ಮುಕ್ತಿಯ ಮಾರ್ಗ ತೋರುವಂತಹದಾಗಿತ್ತು. ಸಾ ವಿದ್ಯಾ ಯಾ ವಿಮುಕ್ತಯೇ ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ಎಂಬ ಮಾತುಗಳು ಇದಕ್ಕೆ ಸಾಕ್ಷಿಯಾಗಿವೆ.

ವಿದ್ಯೆಯನ್ನು ಸತ್ಪಾತ್ರರಿಗೆ ದಾನ ಮಾಡುತ್ತಿದ್ದನೇ ಹೊರತು ....

ವಿದ್ಯೆಯನ್ನು ಸತ್ಪಾತ್ರರಿಗೆ ದಾನ ಮಾಡುತ್ತಿದ್ದನೇ ಹೊರತು ....

ಆಗ ಗುರುವಾದವನು ವಿದ್ಯೆಯನ್ನು ಸತ್ಪಾತ್ರರಿಗೆ ದಾನ ಮಾಡುತ್ತಿದ್ದನೇ ಹೊರತು ಈಗಿನಂತೆ ಸತ್ಪಾತ್ರನೋ ಅಪಾತ್ರನೋ ಎಂಬುದನ್ನು ಲೆಕ್ಕಿಸದೆ ವಿದ್ಯೆಯ ವಿಕ್ರಮ ಮಾಡುತ್ತಿರಲಿಲ್ಲ. ಆಗ ಶಿಷ್ಯನಲ್ಲಿ ಶಿಕ್ಷಣದ ನಂತರ ಡಾಕ್ಟರೋ ಎಂಜಿನಿಯರೋ ಆಗಿ ಅಪಾರ ಹಣ ಸಂಪಾದನೆ ಮಾಡಬೇಕೆಂಬ ಧನದಾಸೆ ಇರಲಿಲ್ಲ. ವಿದ್ಯಾರ್ಥಿ ಎಂಬುದಕ್ಕೆ ಅರ್ತ ವಿದ್ಯೆಯ ಯಾಚಕ ಎಂದಾಗುತ್ತದೆ. ಆದರೆ ಈಗ ವಿದ್ಯಾರ್ಥಿ ನಿಜವಾದ ಅರ್ಥದಲ್ಲಿ ನೌಕರಿಯ ಅರ್ಥಿ, ಧನಾರ್ಥಿಯೇ ಆಗಿದ್ದಾನೆ.

ಹೀಗೆ ಶಿಷ್ಯನ ಮೂಲ ಉದ್ದೇಶವೇ ಹಳ್ಳ ಹಿಡಿದಿರುವುದು ಒಂದು ಕಡೆಯಾದರೆ ಮಹಾಪಾಪ ಎಂದು ಭಾವಿಸುವ ಗುರು ಈಗ ಇಲ್ಲ. ನನ್ನಲ್ಲಿ ವಿದ್ಯೆ ಎಂಬ ಸರಕಿದೆ, ನಿನ್ನಲ್ಲಿ ಹಣವಿದ್ದರೆ ಕೊಂಡುಕೋ ಎನ್ನುವ ಗುರುಗಳು ನನ್ನಲ್ಲಿ ಹಣವಿದೆ ನೀನು ಕಲಿಸುವ ವಿದ್ಯೆಯ ರೇಟೆಷ್ಟು ಹೇಳು ಎಂಬ ಶಿಷ್ಯರು-ಇವರ ಸಂಖ್ಯಾಬಾಹುಳ್ಯದಿಂದ ಶಿಕ್ಷಣ ರಂಗ ಕುಲಗೆಟ್ಟು ಹೋಗಿದೆ. ಒಳ್ಳೆಯ ಉದ್ಯೋಗ ಸಿಗದ ಕಾರಣಕ್ಕೆ ಶಿಕ್ಷಕರಾಗಿ ಕೆಲಸಕ್ಕೆ ಸೇರಿಕೊಂಡು ಅದನ್ನು ಹೊಟ್ಟೆಪಾಡಿನ ಉದ್ಯೋಗವೆಂದು ತಿಳಿದವರೇ ಈಗ ಹೆಚ್ಚು! ಈ ವಿದ್ಯಮಾನಗಳೇ ಎಲ್ಲ ಪಲ್ಲಟಗಳಿಗೂ ಕಾರಣವಾಗಿವೆ.

ಹಿಂದಿನ ರಾಜಗುರುಗಳು ಇರುತ್ತಿದ್ದರು

ಹಿಂದಿನ ರಾಜಗುರುಗಳು ಇರುತ್ತಿದ್ದರು

ಇತಿಹಾಸದಲ್ಲಿ ಆಡಳಿತಗಾರರು ಎಂದರೆ ರಾಜ ಮಹಾರಾಜರು ಎಂದೇ ಅರ್ಥ. ಅವರಿಗೆ ಸಲಹೆ ನೀಡಲು ರಾಜಗುರುಗಳು ಇರುತ್ತಿದ್ದರು. ಆ ಗುರುಗಳು ಮಠದ ಸ್ವಾಮಿಗಳೇ ಆಗಿರಬೇಕಾಗಿರಲಿಲ್ಲ. ಆದರೆ, ಅವರು ಧರ್ಮ ಸೂಕ್ಷ್ಮಗಳನ್ನು ಚೆನ್ನಾಗಿ ಬಲ್ಲವರೂ, ವಿವೇಕವಂತರೂ, ಪ್ರಜ್ಞಾವಂತರೂ ಆಗಿರುತ್ತಿದ್ದರು ಎಂಬುದು ಮಾತ್ರ ನಿಶ್ಚಿತ. ರಾಜನಿಗೆ ಅವರು ಕೇವಲ ಬೌದ್ಧಿಕ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿರಲಿಲ್ಲ; ಜೊತೆಗೆ ಆಡಳಿತಾತ್ಮಕ ಸಮಸ್ಯೆಗಳು ಬಂದಾಗ, ಧರ್ಮಸಂಕಟದ ಸ್ಥಿತಿಗಳು ಉದ್ಭವವಾದಾಗ ಸಲಹೆಗಳನ್ನು ನೀಡುತ್ತಿದ್ದರು.

ಈಗ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಹಿಂದಿನ ರಾಜರುಗಳಿಗೆ ಸಲಹೆಗಾರರಾಗಿ ಗುರುಗಳಿದ್ದಂತೆ ಈಗಿನ ರಾಜಕಾರಣಿಗಳಿಗೂ ಗುರುಗಳಿರಬೇಕು ಎಂದು ನಿರೀಕ್ಷಿಸುವುದು ತಪ್ಪು. ಈಗಿನ ರಾಜಕಾರಣಿಗಳಿಗೆ ಅಂತಹ ಬೌದ್ಧಿಕ, ಆಧ್ಯಾತ್ಮಿಕ ಹಸಿವೂ ಇಲ್ಲ; ಇರುವಂತೆ ತೋರಿಸಿ ಕೊಂಡರೂ ಅದು ಅವರು ಅಭಿನಯಿಸಲಿರುವ ದೊಡ್ಡಾಟದ ಒಂದು ಸಣ್ಣ ಅಂಕ ಅಷ್ಟೆ!

ಅವರು ಮಠಗಳಿಗೆ ಹೋಗುತ್ತಾರಾದರೂ ಅದು ಬೌದ್ಧಿಕ ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯಲು ಖಂಡಿತಾ ಅಲ್ಲ. ತಾವು ಹೋಗುವ ಮಠಗಳ ಅನುಯಾಯಿಗಳಿಗೆ ಅದರಿಂದ ಸಂತೋಷವಾಗುತ್ತದೆ, ಅವರು ತನ್ನನ್ನು ಬೆಂಬಲಿಸುತ್ತಾರೆ, ಆ ಬೆಂಬಲ ಮುಂದಿನ ಚುನಾವಣೆಯಲಿ ಓಟುಗಳಾಗಿ ನಗದಾಗುತ್ತದೆ ಎಂಬ ರಾಜಕೀಯ ಲೆಕ್ಕಾಚಾರ ಮಾತ್ರ ಅಲ್ಲಿರುತ್ತದೆ. ಇನ್ನು ಗುರುಗಳ ವಿಷಯಕ್ಕೆ ಬಂದರೆ ಅವರಿಗೆ ತಾವು ಪ್ರತಿನಿಧಿಸುವ ಸಮುದಾಯದ ಹಿತಚಿಂತನೆಯೇ ಮೊದಲ ಆದ್ಯತೆಯಾಗಿರುತ್ತದೆ. ಹೀಗಾಗಿ ಅವರು ತಮ್ಮ ಸಮುದಾಯವೆಂಬ ಆಯಾಮವನ್ನೂ ಮೀರಿ ಇಡೀರಾಜ್ಯ/ರಾಷ್ಟ್ರದ ಹಿತವನ್ನು ಲಕ್ಷ್ಯದಲ್ಲಿಟ್ಟುಕೊಂಡು ಸಲಹೆ ನೀಡುತ್ತಾರೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ.

ಗುರು ಶಿಷ್ಯರ ಸಂಬಂಧದ ಬಗೆಗೆ ವ್ಯಾಪಕ ಉಲ್ಲೇಖ

ಗುರು ಶಿಷ್ಯರ ಸಂಬಂಧದ ಬಗೆಗೆ ವ್ಯಾಪಕ ಉಲ್ಲೇಖ

ನಮ್ಮ ದೇಶದ ಪ್ರಾಚೀನ ಸಾಹಿತ್ಯದಲ್ಲಿ ಗುರು ಶಿಷ್ಯರ ಸಂಬಂಧದ ಬಗೆಗೆ ವ್ಯಾಪಕ ಉಲ್ಲೇಖಗಳು ಬರುತ್ತವೆ. ಗುರುವಿನ ಪದತಲದಲ್ಲಿ ಭಕ್ತಿಯಿಂದ ಕುಳಿತು ಕಲಿಯಬೇಕು. ಆದರೆ ಅವರು ಹೇಳಿದ್ದನ್ನೆಲ್ಲಾ ಕುರುಡಾಗಿ ನಂಬಬಾರದು. ಅವರು ಹೇಳಿದ್ದನ್ನು ಪ್ರಶ್ನಿಸಿ ಸಂಶಯಗಳನ್ನು ನಿವಾರಿಸಿಕೊಂಡೇ ನಂಬಬೇಕು .ಗುರುವನ್ನು ಹೊರಗೆ ಅರಸುವುದಕ್ಕಿಂತ ತನ್ನೊಳಗೇ ಕಂಡುಕೊಳ್ಳಬೇಕೆನ್ನುತ್ತಾರೆ ಶರಣರು. ತನ್ನ ತಾನರಿದವಂಗೆ ತನ್ನರಿವೇ ಗುರು ಎಂಬುದು ಅವರ ಮಾತಿನ ಸಾರವಾಗಿದೆ. ಶಿವಪಥ ನರಿವಡೆ ಗುರುಪಥವೇ ಮೊದಲು ಎಂದು ಬಸವಣ್ಣನವರು ಹೇಳಿದ್ದಾರೆ.

ಭವಸಾಗರವನ್ನು ದಾಟಿಸುವ ಗುರುವನ್ನು ಎಲ್ಲ ಭಕ್ತರೂ ಕೊಂಡಾಡಿದ್ದಾರೆ. ಹಾಕಿದ ಜನಿವಾರವಾ ಸದ್ಗುರುರಾಯ ನೂಕಿದ ಭವಭಾರವಾ ಎಂದು ಹಾಡಿದ್ದಾರೆ ಶಿಶುನಾಳ ಶರೀಫರು. ಅಜ್ಞಾನವೆಂಬ ಕತ್ತಲಿಗೆ ಗುರು ಜ್ಞಾನದ ಸೂರ್ಯ; ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಸಾರುವ ಮಂತ್ರವೊಂದಿದೆ. ಗುರುವೆಂದರೆ ನರನಲ್ಲ, ಸಾಕ್ಷಾತ್ ಹರ. ಒಟ್ಟಾರೆ ಗುರುವೆಂದರೆ ನಡೆದಾಡುವ ದೇವರು ಎಂದೇ ನಮ್ಮ ಪ್ರಾಚೀನ ಸಾಹಿತ್ಯ ಸಾರುತ್ತಿದೆ.
ಐಡಿಯಲ್ ಅಂದರೆ ಆದರ್ಶ. ಗುರುವೇ ಆದರ್ಶ. ಐಡಿಯಲ್ ವಿಶೇಷಣದ ಅವಶ್ಯಕತೆ ಇಲ್ಲ. ಇಲ್ಲಿ ಐಡಿಯಲ್, ಆರ್ಡಿನರಿ ಎಂಬ ಭೇದವಿರುವುದಿಲ್ಲ. ಸಮಕಾಲೀನ ಸಂದರ್ಭದಲ್ಲಿ ಬಹುತೇಕ ಗುರುಗಳು ಲಘುವಾಗಿರುವುದರಿಂದ ಅವರನ್ನು ಹೊರಗಿಡಲು ಇದನ್ನು ಬಳಸಿದಂತೆ ತೋರುತ್ತದೆ. ಗುರು ಲಘುವಾಗದೆ ಗುರುವಾಗಿದ್ದರೆ ಸಾಕು. ಲಘುವಾಗಿರುವರು ಭೂಮಿಗೆ ಗುರು-ಅಂದರೆ ಭಾರ ಅಷ್ಟೆ!

English summary
Guru Purnima Special : This festival is observed by Hindus, Jains dedicated to spiritual and academic teachers who are evolved or enlightened humans, ready to shate their wisom, with very little expectation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X