ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಕೊಯ್ಲುಗಾಗಿ ಕೇರಳದತ್ತ ಮುಖ ಮಾಡಿದ ಕರ್ನಾಟಕದ ಕಾರ್ಮಿಕರು!

|
Google Oneindia Kannada News

ಚಾಮರಾಜನಗರ, ಡಿಸೆಂಬರ್ 29: ಜನವರಿ ತಿಂಗಳು ಬರುತ್ತಿದ್ದಂತೆಯೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಹಳ್ಳಿಗಳ ಕೂಲಿ ಕಾರ್ಮಿಕರು ಕೇರಳದತ್ತ ಮುಖ ಮಾಡುವುದು ಮಾಮೂಲಿಯಾಗಿದ್ದು, ಅದರಂತೆ ಕೊರೊನಾ ಭೀತಿ ನಡುವೆಯೂ ಈ ಬಾರಿಯೂ ಕಾರ್ಮಿಕರು ಕೇರಳದ ಕಡೆಗೆ ತೆರಳುತ್ತಿರುವುದು ಕಂಡು ಬರುತ್ತಿದೆ.

ಪ್ರತಿವರ್ಷವೂ ಜನವರಿ ವೇಳೆಗೆ ಕಾಫಿ ಫಸಲು ಕೊಯ್ಲುಗೆ ಬರುತ್ತದೆ. ಈ ವೇಳೆ ಕೆಲಸ ಹುಡುಕಿಕೊಂಡು ಇಲ್ಲಿನ ಕಾರ್ಮಿಕರು ಕೇರಳಕ್ಕೆ ಕುಟುಂಬ ಸಮೇತ ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮೊದಲೆಲ್ಲ ಕೊಡಗಿನತ್ತ ತೆರಳುತ್ತಿದ್ದರಾದರೂ, ಇತ್ತೀಚೆಗಿನ ವರ್ಷಗಳಲ್ಲಿ ಅತ್ತ ತೆರಳದೆ ಕೇರಳಕ್ಕೆ ಹೋಗುತ್ತಿದ್ದಾರೆ.

 ಹೆಚ್ಚಿನ ಹಣ ಸಂಪಾದಿಸಲು ಅವಕಾಶ

ಹೆಚ್ಚಿನ ಹಣ ಸಂಪಾದಿಸಲು ಅವಕಾಶ

ಸಾಮಾನ್ಯವಾಗಿ ಕಾಫಿ ತೋಟಗಳಲ್ಲಿ ಡಿಸೆಂಬರ್‌ನಿಂದ ಕೆಲಸ ಆರಂಭವಾದರೆ ಫೆಬ್ರವರಿಯಲ್ಲಿ ಮುಗಿಯುತ್ತದೆ. ಕಾಫಿ ಕೊಯ್ಲು ಒಮ್ಮೆಲೇ ಮಾಡುವುದರಿಂದ ಮತ್ತು ಕೊಯ್ಲು ಮಾಡಿದ ಕಾಫಿಯ ಪ್ರಮಾಣಕ್ಕೆ ತಕ್ಕಂತೆ ಕೂಲಿ ಹಣ ನೀಡುವುದರಿಂದ ಕುಟುಂಬದವರೆಲ್ಲರೂ ಕೇರಳದ ಕಲ್ಪೆಟ್ಟಾ, ವಯನಾಡು, ಬತ್ತೇರಿ, ಕೋಯಿಕ್ಕೋಡ್, ನೀಲಂಬೂರು ಮೊದಲಾದ ಊರುಗಳಲ್ಲಿರುವ ಕಾಫಿ ಎಸ್ಟೇಟ್‌ಗಳಿಗೆ ತೆರಳಿ ಕಾಫಿ ಕೊಯ್ಲು ಮಾಡುತ್ತಿದ್ದು, ದಿನವೊಂದಕ್ಕೆ ಸಾವಿರಕ್ಕೂ ಹೆಚ್ಚು ಸಂಪಾದಿಸುವ ಅವಕಾಶ ಇರುವುದರಿಂದ ಕಷ್ಟಪಟ್ಟು ದುಡಿದು ಕೈತುಂಬಾ ಹಣ ಸಂಪಾದಿಸಿಕೊಂಡು ಬರುತ್ತಾರೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಬಂದಿರುವ ಕಾರಣ ಕೇರಳಕ್ಕೆ ಹೋಗಲು ಜನ ಹಿಂದೇಟು ಹಾಕುತ್ತಿದ್ದರು. ಆದರೆ ಹಣದ ಅವಶ್ಯಕತೆ ಇರುವುದರಿಂದ ಈ ಬಾರಿ ಬಹುತೇಕ ಕೂಲಿ ಕಾರ್ಮಿಕರು ಕೇರಳಕ್ಕೆ ವಾಹನಗಳಲ್ಲಿ ತೆರಳುತ್ತಿರುವ ಮತ್ತು ಕೇರಳ ರಾಜ್ಯದ ಬಸ್‌ಗಾಗಿ ಗುಂಡ್ಲುಪೇಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿರುವ ದೃಶ್ಯಗಳು ಕಾಣಸಿಗುತ್ತಿವೆ. ಗೇಟ್‌ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಕಾರ್ಮಿಕರು ತಾವು ಪಡೆದಿರುವ ವ್ಯಾಕ್ಸಿನ್ ಪ್ರಮಾಣಪತ್ರವನ್ನು ತೋರಿಸಿಕೊಂಡು ಹೋಗುತ್ತಿದ್ದಾರೆ.

 ಕೂಲಿ ಕಾರ್ಮಿಕರಿಲ್ಲದೆ ಹಳ್ಳಿಗಳು ಖಾಲಿ ಖಾಲಿ

ಕೂಲಿ ಕಾರ್ಮಿಕರಿಲ್ಲದೆ ಹಳ್ಳಿಗಳು ಖಾಲಿ ಖಾಲಿ

ಕೇರಳದಲ್ಲಿ ಕಾಫಿ ಕೊಯ್ಲು ಆರಂಭವಾಗುತ್ತಿದ್ದಂತೆಯೇ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕೂತನೂರು, ಭೀಮನಬೀಡು, ಬೇರಂಬಾಡಿ, ಕಗ್ಗಳ, ಹಂಗಳ, ಬೊಮ್ಮಲಾಪುರ, ಕೊಡಹಳ್ಳಿ, ಅಣ್ಣೂರು, ಮಂಗಲ ಸೇರಿದಂತೆ ವಿವಿಧ ಗ್ರಾಮಗಳ ಆದಿವಾಸಿಗಳು ತಮ್ಮ ಕುಟುಂಬ ಸಮೇತ ಕೇರಳಕ್ಕೆ ಹೋಗುವುದರಿಂದ ಬಹುತೇಕ ಗ್ರಾಮಗಳಲ್ಲಿ ವಯಸ್ಸಾದವರು ಮತ್ತು ಮಕ್ಕಳನ್ನು ಹೊರತು ಪಡಿಸಿದರೆ ಹೆಚ್ಚಿನ ಜನರು ಕಾಣಿಸದೆ ಬಿಕೋ ಎನ್ನುತ್ತಿರುತ್ತದೆ.

ಇನ್ನೊಂದೆಡೆ ಕೆಲವು ಪೋಷಕರು ತಮ್ಮೊಂದಿಗೆ ಮಕ್ಕಳನ್ನು ಕೂಡ ಕರೆದೊಯ್ಯುವುದರಿಂದ ಮಕ್ಕಳು ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ದೂರುಗಳು ಇವೆ. ಜತೆಗೆ ಕೂಲಿ ಕಾರ್ಮಿಕರು ಕೇರಳಕ್ಕೆ ತೆರಳುವುದರಿಂದ ಇಲ್ಲಿ ಜಮೀನು ಹೊಂದಿರುವ ರೈತರು ಕೆಲಸ ಮಾಡಿಸಲು ಕಾರ್ಮಿಕರು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಸ್ಥಳೀಯವಾಗಿ ಕೆಲಸವಿದ್ದರೂ ಕೇರಳದ ಕಾಫಿ ತೋಟದಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಹಣ ಸಂಪಾದಿಸಬಹುದು. ಅದರಿಂದ ತಾವು ಮಾಡಿರುವ ಸಾಲಗಳನ್ನು ತೀರಿಸಬಹುದು ಉದ್ದೇಶದಿಂದಲೇ ಕಾರ್ಮಿಕರು ಅತ್ತ ಪ್ರಯಾಣ ಬೆಳೆಸುತ್ತಾರೆ.

 ಕಾರ್ಮಿಕರಿಗೆ ಕೇರಳಕ್ಕೆ ತೆರಳುವುದು ಅನಿವಾರ್ಯ

ಕಾರ್ಮಿಕರಿಗೆ ಕೇರಳಕ್ಕೆ ತೆರಳುವುದು ಅನಿವಾರ್ಯ

ಗುಂಡ್ಲುಪೇಟೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಜಮೀನು ಹೊಂದಿದ್ದರೂ ನೀರಾವರಿ ಸೌಲಭ್ಯವಿಲ್ಲದೆ ಒಣ ಭೂಮಿಯಾಗಿರುವುದರಿಂದ ಕೆಲವೊಮ್ಮೆ ರೈತರು ಕೃಷಿ ಮಾಡಿದರೂ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಕೆಲವು ಸಣ್ಣಪುಟ್ಟ ರೈತರು ಕೂಡ ಹಣ ಸಂಪಾದಿಸಿಕೊಂಡು ಬರುವ ಉದ್ದೇಶದಿಂದ ಕೇರಳಕ್ಕೆ ತೆರಳಿ ಅಲ್ಲಿ ಒಂದೆರಡು ತಿಂಗಳ ಕಾಲ ಕೆಲಸ ಮಾಡಿ ಹಣದೊಂದಿಗೆ ಹಿಂತಿರುಗುತ್ತಾರೆ.

 ಕೇರಳದಲ್ಲಿನ ಕಾಫಿ ಕೊಯ್ಲು ಅಭಯ ನೀಡಿದೆ

ಕೇರಳದಲ್ಲಿನ ಕಾಫಿ ಕೊಯ್ಲು ಅಭಯ ನೀಡಿದೆ

ಈ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಕೂಲಿ ಕಾರ್ಮಿಕರು, ""ಗ್ರಾಮ ಪಂಚಾಯಿತಿ ಉದ್ಯೋಗ ಖಾತರಿ ಯೋಜನೆಯಡಿ ಎಲ್ಲರಿಗೂ ಉದ್ಯೋಗ ನೀಡುತ್ತಿಲ್ಲ. ಒಂದು ವೇಳೆ ಕೂಲಿ ಕೊಟ್ಟರೂ ಅದು ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಹೀಗಾಗಿ ಕೇರಳಕ್ಕೆ ಹೋದರೆ ಹೆಚ್ಚಿನ ಹಣ ಸಂಪಾದಿಸಿಕೊಂಡು ಬಂದರೆ, ಅದರಿಂದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಹೇಳುತ್ತಾರೆ. ಒಟ್ಟಾರೆ ಕೊರೊನಾ ಸಂಕಷ್ಟದಿಂದ ಹಣಕಾಸಿನ ತೊಂದರೆ ಅನುಭವಿಸಿರುವ ಕೂಲಿ ಕಾರ್ಮಿಕರಿಗೆ ಕೇರಳದಲ್ಲಿನ ಕಾಫಿ ಕೊಯ್ಲು ಅಭಯ ನೀಡಿದಂತಾಗಿದೆ.

Recommended Video

South Africa vs India: ಛೇ!!ಸಖತ್ ಬೌಲಿಂಗ್ ಮಾಡ್ತಿದ್ದ ಯಾರ್ಕರ್ ಕಿಂಗ್ ಬುಮ್ರಾ ಕಾಲಿಗೆ ಗಾಯ | Oneindia Kannada

English summary
The Daily wage labourers from the villages of Gundlupet Taluk in Chamarajanagar district are heading to Kerala for coffee harvesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X